
Sidlaghatta : ಶಿಡ್ಲಘಟ್ಟ ನಗರಕ್ಕೆ ಶುಕ್ರವಾರ ಆಗಮಿಸಿದ ಪೇಜಾವರ ಮಠದ ಶ್ರೀ ವಿಶ್ವಪ್ರಸನ್ನ ತೀರ್ಥ ಸ್ವಾಮಿ ಅವರನ್ನು ಬೆಳಿಗ್ಗೆ ಮಯೂರ ವೃತ್ತದಿಂದ ಅಶೋಕ ರಸ್ತೆ, ಶಂಕರ ಮಠ ರಸ್ತೆ, ಮುತ್ತೂರು ಬೀದಿಯ ರಾಘವೇಂದ್ರ ಸ್ವಾಮಿಗಳ ದೇವಾಲಯದವರೆಗೂ ಶೋಭಾಯಾತ್ರೆ ಮೂಲಕ ಕರೆತರಲಾಯಿತು. ಪುರೋಹಿತರ ಸಂಘದ ವತಿಯಿಂದ ವೇದಘೋಷ , ಪೂರ್ಣ ಕುಂಭ ಸ್ವಾಗತ, ನಾದಸ್ವರ ತಂಡ, ವಿವಿಧ ಭಜನಾ ತಂಡಗಳು , ವಿವಿಧ ಸಂಘಗಳ ಪದಾಧಿಕಾರಿಗಳು, ಭಕ್ತರು ಮೆರವಣಿಗೆಯಲ್ಲಿ ಭಾಗವಹಿಸಿದ್ದರು.
ನಗರದ ಮುತ್ತೂರು ಬೀದಿಯ ಶ್ರೀ ರಾಘವೇಂದ್ರ ಸ್ವಾಮಿಗಳ ಮಠದಲ್ಲಿ ಪೇಜಾವರ ಮಠದ ಶ್ರೀ ವಿಶ್ವಪ್ರಸನ್ನ ತೀರ್ಥ ಸ್ವಾಮಿಯವರು, ಸಂಸ್ಥಾನ ಪೂಜೆಯನ್ನು ನೆರವೇರಿಸಿ ಭಕ್ತವೃಂದಕ್ಕೆ ಅನುಗ್ರಹ ಭಾಷಣ ಮಾಡಿ, “ಆಭರಣ, ಹಣದ ವೈಭೋಗದ ಬದಲು ಶುದ್ಧ ಭಕ್ತಿಯಿಂದಷ್ಟೇ ದೇವರನ್ನು ಒಲಿಸಿಕೊಳ್ಳುವುದು ಸಾಧ್ಯ. ಎಲ್ಲಿ ಭಕ್ತಿ ಇರುತ್ತದೋ ಅಲ್ಲಿ ದೇವರು ನೆಲೆಯಾಗುತ್ತಾನೆ. ದೇವರ ಆರಾಧನೆ ನಿರ್ಮಲ ಮನಸ್ಸು ಮತ್ತು ಪ್ರೀತಿಯಿಂದ ಮಾಡಬೇಕು. ದೇವರಿಗೆ ಭಕ್ತಿಯ ಅಭಿಷೇಕ ನಿರಂತರವಾಗಿ ನಡೆಯಬೇಕು. ಸತ್ಕರ್ಮಗಳ ಆಚರಣೆಯಿಂದ ಸಾತ್ವಿಕ ಸಂಪತ್ತು ಲಭಿಸಲು ಸಾಧ್ಯ. ಭಕ್ತಯುಕ್ತ ಹೃದಯದಲ್ಲಿಯೇ ದೇವರು ಪ್ರತ್ಯಕ್ಷವಾಗುತ್ತಾನೆ” ಎಂದು ಹೇಳಿದರು.
ಶಾಸಕ ಬಿ.ಎನ್.ರವಿಕುಮಾರ್ ಮನೆಯಲ್ಲಿ ಪಾದಪೂಜೆಯಿಂದ ಪ್ರಾರಂಭವಾಗಿ, ಅಪ್ಪೇಗೌಡನಹಳ್ಳಿ ಲಕ್ಮೀನಾರಾಯಣ ರೆಡ್ಡಿ ಅವರ ಗೋವಿನ ಸಾಕಾಣಿಕೆ ಕೇಂದ್ರಕ್ಕೆ ಭೇಟಿ ನೀಡಿದ ಸ್ವಾಮೀಜಿ, ನಗರದ ವಿವಿಧ ಭಕ್ತರ ಮನೆಗಳಿಗೆ ಪಾದಪೂಜೆಗಾಗಿ ಭೇಟಿ ನೀಡಿ ಆಶೀರ್ವದಿಸಿದರು. ಕ್ರೆಸೆಂಟ್ ವಿದ್ಯಾಸಂಸ್ಥೆಯ ಕಾರ್ಯದರ್ಶಿ ತಮೀಮ್ ಅನ್ಸಾರಿ ಸೇರಿದಂತೆ ವಿವಿಧ ಜಾತಿ, ಧರ್ಮಗಳ ಮುಖಂಡರು ಆಗಮಿಸಿ ಸ್ವಾಮಿಗಳ ಆಶೀರ್ವಾದ ಪಡೆದರು. ಸ್ವಾಮೀಜಿ ಭಕ್ತರಿಗೆ ಫಲ ಮಂತ್ರಾಕ್ಷತೆ ನೀಡಿ ಆಶೀರ್ವದಿಸಿದರು.
ನಗರದ ಟಿ.ಬಿ.ರಸ್ತೆಯ ಶ್ರೀಕೃಷ್ಣನ ದೇವಸ್ಥಾನಕ್ಕೆ ಭೇಟಿ ನೀಡಿ ಕೃಷ್ಣನಿಗೆ ಆರತಿ ಮಾಡಿದರು , ನಗರದ ಶ್ರೀ ವಾಸವಿ ಶಾಲೆ , ಚಿಕ್ಕದಾಸರಹಳ್ಳಿ ಶ್ರೀ ಲಕ್ಮೀ ವಿಧ್ಯಾನಿಕೇತನ ಮತ್ತು ನಡಿಪಿನಾಯಕನಹಳ್ಳಿ ನವೋದಯ ಶಾಲೆಗೆ ಭೇಟಿ ನೀಡಿ ಮಕ್ಕಳಿಗೆ ಅಕ್ಷರಾಭ್ಯಾಸ ಮಾಡಿಸಿ ಆಶೀರ್ವದಿಸಿದರು.
ತಾಲ್ಲೂಕು ಬ್ರಾಹ್ಮಣ ಯುವಕ ಸಂಘದ ಅಧ್ಯಕ್ಷ ವೈಶಾಖ, ಕಾರ್ಯದರ್ಶಿ ಕೆ.ಮಂಜುನಾಥ್, ಖಜಾಂಚಿ ಹರೀಶ್, ರಾಘವೇಂದ್ರ ಸ್ಚಾಮಿ ಸೇವಾ ಟ್ರಸ್ಟ್ ಸದಸ್ಯ ವಾಸುದೇವರಾವ್, ಸುದೀಂದ್ರ, ವಿಪ್ರ ಪ್ರತಿಭಾ ಪುರಸ್ಕಾರ ಸೇವಾ ಟ್ರಸ್ಟ್ ನ ಅಧ್ಯಕ್ಷ ಬಿ.ಆರ್.ಅನಂತಕೃಷ್ಣ , ಮಾಜಿ ಶಾಸಕ ಎಂ.ರಾಜಣ್ಣ, ಸಂಘ ಸಂಸ್ಥೆಗಳ ಅಧ್ಯಕ್ಷರುಗಳು, ವಿವಿಧ ದೇವಾಲಯಗಳ ಪ್ರಮುಖರು ಭಾಗವಹಿಸಿದ್ದರು.