Sidlaghatta : ಮುಖ್ಯಮಂತ್ರಿಗಳ ರಾಜಕೀಯ ಕಾರ್ಯದರ್ಶಿ, ಮುಸ್ಲಿಂ ಸಮುದಾಯದ ಹಿರಿಯ ನಾಯಕ ನಜೀರ್ ಅಹ್ಮದ್ ರನ್ನು ಟೆರರಿಸ್ಟ್ ಎಂದು ಕರೆದಿರುವ ಕೋಲಾರದ ಮಾಜಿ ಸಂಸದ ಎಸ್.ಮುನಿಸ್ವಾಮಿ ಕೂಡಲೇ ಬಹಿರಂಗ ಕ್ಷಮೆ ಯಾಚಿಸಬೇಕು ಇಲ್ಲವಾದಲ್ಲಿ ಮುಂದಿನ ದಿನಗಳಲ್ಲಿ ನಿಮ್ಮ ವಿರುದ್ದ ಬೃಹತ್ ಹೋರಾಟ ಹಮ್ಮಿಕೊಳ್ಳಲಾಗುವುದು ಎಂದು ದರ್ವೇಶ್ ವೆಲಫೇರ್ ಅಸೋಸಿಯೇಷನ್ ಅಧ್ಯಕ್ಷ ಮೊಹಮ್ಮದ್ ನಿಜಾಮುದ್ದೀನ್ ತಿಳಿಸಿದರು.
ನಗರದ ಪತ್ರಕರ್ತರ ಭವನದಲ್ಲಿ ಗುರುವಾರ ನಡೆದ ಸುದ್ದಿಘೋಷ್ಠಿಯಲ್ಲಿ ಅವರು ಮಾತನಾಡಿದರು.
ಮುಸ್ಲಿಂ ಸಮಾಜದ ಹಿರಿಯರೂ, ಕಾಂಗ್ರೆಸ್ ಪಕ್ಷದ ಪ್ರಭಾವಿಗಳಲ್ಲೊಬ್ಬರಾದ ನಜೀರ್ ಅಹಮ್ಮದ್ ಅವರ ಬಗ್ಗೆ ಕೀಳಾಗಿ ಮಾತನಾಡುವ ಮೂಲಕ ನಿಮ್ಮ ನೀಚ ಬುದ್ದಿ ಪ್ರದರ್ಶಿಸುತ್ತಿದ್ದೀರಿ. ಕೋಲಾರ ಸಂಸದರಾಗಿ ಐದು ವರ್ಷ ಪೂರೈಸಿದ ನೀವು ಮಾಡಿದ ಕೆಲಸಗಳು ಕೋಲಾರ, ಚಿಕ್ಕಬಳ್ಳಾಪುರ ಜಿಲ್ಲೆಯ ಎಲ್ಲಾ ಜನರಿಗೂ ಗೊತ್ತಿದೆ. ಅಧಿಕಾರ ಇದ್ದಷ್ಟು ದಿನ ಕೇವಲ ಮತೀಯ ಗಲಭೆಗಳಿಗೆ ಉತ್ತೇಜನ ಕೊಡುವುದು ಸೇರಿದಂತೆ ಸಮಾಜದ ಸ್ವಾಸ್ಥ್ಯ ಕದಡುವ ಕೆಲಸ ಮಾಡುತ್ತಾ ಕಾಲ ಕಳೆದ ನೀವು ಇನ್ನೊಬ್ಬರ ಬಗ್ಗೆ ಮಾತನಾಡುವಾಗ ನಾಲಿಗೆ ಹಿಡಿತದಲ್ಲಿಟ್ಟುಕೊಳ್ಳಿ. ನಿಮ್ಮ ಐದು ವರ್ಷಗಳ ಆಡಿಳಿತಾವಧಿಯಲ್ಲಿ ಶಿಡ್ಲಘಟ್ಟ ಕ್ಷೇತ್ರಕ್ಕೆ ಕನಿಷ್ಟ ಒಂದು ಬಸ್ ಶೆಲ್ಟರ್ ಸಹ ಹಾಕಿಸಲಿಲ್ಲ ನೀವು ನಮ್ಮ ನಾಯಕರ ಬಗ್ಗೆ ಮಾತನಾಡಿದರೆ ಸಹಿಸಲ್ಲ. ಕೂಡಲೇ ಬಹಿರಂಗವಾಗಿ ಕ್ಷಮೆ ಯಾಚಿಸಿ ಎಂದರು.
ಈ ಸಂದರ್ಭದಲ್ಲಿ ಮುಸ್ಲಿಂ ಸಮುದಾಯದ ಮುಖಂಡರಾದ ಪ್ಯಾರೇಜಾನ್, ಮುಜಾಹಿದ್, ಅಕ್ಬರ್‌ಖಾನ್ ಹಾಜರಿದ್ದರು.








