ಶಿಡ್ಲಘಟ್ಟ ತಾಲ್ಲೂಕಿನ ಸುಗಟೂರು ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯ ಆವರಣದಲ್ಲಿ ಮಂಗಳವಾರ ನೆಹರು ಯುವ ಕೇಂದ್ರದ ಆಶ್ರಯದಲ್ಲಿ ಯುವಸಪ್ತಾಹದ ಅಂಗವಾಗಿ ಹಮ್ಮಿಕೊಂಡಿದ್ದ ಯುವಜನೋತ್ಸವ, ಸಾಂಸ್ಕೃತಿಕ ಹಬ್ಬ ಕಾರ್ಯಕ್ರಮದಲ್ಲಿ ಪಾಲ್ಗೊಂಡು ನೆಹರು ಯುವ ಕೇಂದ್ರದ ಪ್ರತಿನಿಧಿ ವಿ.ಪ್ರಶಾಂತ್ ಮಾತನಾಡಿದರು.
ಪ್ರತಿ ಮಗುವಿನಲ್ಲಿ ಸುಪ್ತವಾಗಿ ಅಡಗಿರುವ ಪ್ರತಿಭೆ, ಕಲೆ, ಸಂಗೀತ, ಕೌಶಲ ಗಳನ್ನು ಗುರುತಿಸಿ ಪ್ರೋತ್ಸಾಹಿಸುವ ಕಾರ್ಯವಾಗಬೇಕು. ಆ ಜನ್ಮದತ್ತವಾಗಿ ಬಂದಿರುವ ಅರಿವನ್ನು ಜಾಗೃತಗೊಳಿಸಬೇಕು ಎಂದು ಅವರು ತಿಳಿಸಿದರು.
ಯುವಜನರಲ್ಲಿ ನೈತಿಕ, ಅಧ್ಯಾತ್ಮಿಕ, ಮಾನವೀಯ ಮೌಲ್ಯಗಳು ಕುಸಿಯುತ್ತಿದ್ದು, ಕಲೆ, ಯೋಗ, ನೃತ್ಯ, ಸಂಗೀತ ಚಟುವಟಿಕೆಗಳ ಮೂಲಕ ಮರುಹುಟ್ಟು ಕೊಡಬೇಕು. ಪಠ್ಯ ಮತ್ತು ಔಪಚಾರಿಕ ಶಿಕ್ಷಣ ದೊಂದಿಗೆ ಸಂಸ್ಕೃತಿ ಪರಂಪರೆಯನ್ನು ಪರಿಚಯಿಸುವ, ಸಂಸ್ಕಾರ ಕೊಡಿಸುವ ಕೆಲಸ ಮಾಡಬೇಕು ಎಂದರು.
ಶಿಕ್ಷಕ ಎಚ್.ಎಸ್.ರುದ್ರೇಶಮೂರ್ತಿ ಮಾತನಾಡಿ, ದೇಶದಲ್ಲಿ ಪ್ರತಿಭಾ ಪಲಾಯನವಾಗದಂತೆ ಕಾಯ್ದುಕೊಂಡು, ಯುವಪೀಳಿಗೆ ಮನಸ್ಸು, ಭಾವನೆಗಳನ್ನು ಅರಳಿಸುವ ಚಟುವಟಿಕೆಗಳು ಹೆಚ್ಚು ಆಯೋಜನೆಗೊಳ್ಳಬೇಕು. ಗ್ರಾಮೀಣ ಕಲೆ, ಸಂಗೀತ, ಸಂಸ್ಕೃತಿ ಉಳಿಸುವಲ್ಲಿ ಎಲ್ಲರೂ ಪಾತ್ರವಿದೆ. ಸ್ವಾಮಿ ವಿವೇಕಾನಂದರ ಆದರ್ಶ ಗಳನ್ನು ಯುವ ಪೀಳಿಗೆ ಯು ಮಾದರಿಯಾಗಿ ಸ್ವೀಕರಿಸಬೇಕು ಎಂದರು.
ವಿದ್ಯಾರ್ಥಿಗಳಿಗೆ ನೃತ್ಯ, ಗೀತಗಾಯನ, ಭಾಷಣ ಸ್ಪರ್ಧೆಗಳನ್ನು ನಡೆಸಿ ಪ್ರಶಸ್ತಿ ಪತ್ರಗಳು, ಪುಸ್ತಕ ಬಹುಮಾನಗಳನ್ನು ವಿತರಿಸಲಾಯಿತು.
ಎನ್.ಎಸ್.ಎಸ್ ಸ್ವಯಂಸೇವಕ ಜಿ.ಎನ್.ಗಗನ್, ಮುಖ್ಯ ಶಿಕ್ಷಕಿ ಉಮಾದೇವಿ, ಶಿಕ್ಷಕಿ ತಾಜೂನ್, ಶಿಕ್ಷಕ ಎ.ಬಿ.ನಾಗರಾಜ, ಬಿ.ನಾಗರಾಜು, ಲಕ್ಷ್ಮಯ್ಯ, ಅಂಗನವಾಡಿ ಕಾರ್ಯಕರ್ತೆ ಜಯಂತಿ, ಮಂಜುಳಾ, ಗ್ರಾಮಸ್ಥರಾದ ಶ್ರೀನಿವಾಸ್, ಭರತ್ ಹಾಜರಿದ್ದರು.







