
Sidlaghatta : ಪ್ರಧಾನಮಂತ್ರಿ ನರೇಂದ್ರ ಮೋದಿ ಅವರು ಬಡ ಮತ್ತು ಮಧ್ಯಮ ವರ್ಗದ ಜನರನ್ನು ದೃಷ್ಟಿಯಲ್ಲಿಟ್ಟುಕೊಂಡು ಜಿಎಸ್‌ಟಿಯಲ್ಲಿ ಮಹತ್ವದ ಬದಲಾವಣೆಗಳನ್ನು ತಂದಿದ್ದು, ಕೋಟ್ಯಂತರ ಮಂದಿಗೆ ಇದರ ನೇರ ಲಾಭ ಸಿಗಲಿದೆ ಎಂದು ಬಿಜೆಪಿ ಜಿಲ್ಲಾಧ್ಯಕ್ಷ ಸೀಕಲ್ ರಾಮಚಂದ್ರಗೌಡ ಬುಧವಾರ ಹೇಳಿದರು.
ನಗರದ ಬಿಜೆಪಿ ಸೇವಾ ಸೌಧ ಕಚೇರಿಯಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, “ಜನರಿಗೆ ಆಗುತ್ತಿದ್ದ ಆರ್ಥಿಕ ಹೊರೆ ತಗ್ಗಿಸಲು ಎಲ್ಲ ಸ್ಲ್ಯಾಬ್‌ಗಳನ್ನು ರದ್ದು ಮಾಡಿ ಕೇವಲ 5% ಮತ್ತು 18% ಜಿಎಸ್‌ಟಿ ಸ್ಲ್ಯಾಬ್‌ಗಳನ್ನು ಮಾತ್ರ ಉಳಿಸಲಾಗಿದೆ. ಇದರ ಪರಿಣಾಮವಾಗಿ ದಿನನಿತ್ಯದ ಆಹಾರ ಪದಾರ್ಥಗಳು, ಕ್ಯಾನ್ಸರ್ ಸೇರಿದಂತೆ ಅನೇಕ ರೋಗಗಳ ಔಷಧಿಗಳು ಹಾಗೂ ಜೀವ ವಿಮೆ ಮೇಲಿನ ತೆರಿಗೆ ಕಡಿಮೆಯಾಗಲಿದೆ. ಇದು ಬಡ ಮತ್ತು ಮಧ್ಯಮ ವರ್ಗದವರಿಗೆ ದೊಡ್ಡ ಅನುಕೂಲ” ಎಂದು ತಿಳಿಸಿದರು.
ಅವರು ಕಾಂಗ್ರೆಸ್ ಪಕ್ಷದ ನೀತಿಗಳನ್ನೂ ಟೀಕಿಸಿದರು. “ರಾಜ್ಯದಲ್ಲಿ ಜಾತಿ-ಧರ್ಮಗಳ ನಡುವೆ ಸಾಮರಸ್ಯ ಕದಡುವ ಕೆಲಸವನ್ನು ಸಿದ್ದರಾಮಯ್ಯ ನೇತೃತ್ವದ ಕಾಂಗ್ರೆಸ್ ಸರ್ಕಾರ ಮಾಡುತ್ತಿದೆ. ಮುಸ್ಲಿಂ ಸಮುದಾಯವನ್ನು ಓಲೈಸಲು ಹಿಂದೂ ಧರ್ಮ ಮತ್ತು ದೇವಾಲಯಗಳನ್ನು ಟಾರ್ಗೆಟ್ ಮಾಡುತ್ತಿದೆ” ಎಂದು ಆರೋಪಿಸಿದರು.
ಕೇಂದ್ರದ ಡಿಜಿಟಲ್ ಅಭಿಯಾನವನ್ನು ಉಲ್ಲೇಖಿಸಿದ ಅವರು, “ದೇಶ ಡಿಜಿಟಲೀಕರಣದ ದಿಕ್ಕಿನಲ್ಲಿ ವೇಗವಾಗಿ ಸಾಗುತ್ತಿರುವಾಗ, ಕಾಂಗ್ರೆಸ್ ಮಾತ್ರ ಮತ್ತೆ ಬ್ಯಾಲೆಟ್ ಪೇಪರ್ ಮೂಲಕ ಚುನಾವಣೆಗೆ ಒತ್ತಾಯಿಸುತ್ತಿರುವುದು ಹಾಸ್ಯಾಸ್ಪದ. ಇದು ಜನರಿಗಿಂತ ಪಕ್ಷದ ಹೈಕಮಾಂಡ್‌ನ್ನು ಮೆಚ್ಚಿಸುವ ಪ್ರಯತ್ನ ಮಾತ್ರ” ಎಂದು ವ್ಯಂಗ್ಯವಾಡಿದರು.
ಧಾರ್ಮಿಕ ಸೌಹಾರ್ದತೆಯ ವಿಚಾರದಲ್ಲಿಯೂ ಮಾತನಾಡಿದ ಅವರು, “ಗಣೇಶೋತ್ಸವ ಮೆರವಣಿಗೆಗಳ ಮೇಲೆ ಮಾತ್ರ ಕಲ್ಲು ತೂರಾಟ ನಡೆಯುತ್ತಿದೆ. ಇಂತಹ ಘಟನೆಗಳು ನಡೆಯದಂತೆ ನೋಡಿಕೊಳ್ಳಬೇಕು. ನಮ್ಮ ಹೋರಾಟ ಯಾವ ಧರ್ಮದ ವಿರುದ್ಧವೂ ಅಲ್ಲ, ಆದರೆ ಹಿಂದೂ ಧರ್ಮದ ಮೇಲೆ ದಾಳಿ ನಡೆಯಬಾರದು” ಎಂದು ಅಭಿಪ್ರಾಯಪಟ್ಟರು.
ಮುಸ್ಲಿಂ ಸಮುದಾಯಕ್ಕೆ ಸಂದೇಶ ನೀಡಿದ ಅವರು, “ಕಾಂಗ್ರೆಸ್ ನಿಮ್ಮನ್ನು ಕೇವಲ ಓಟ್ ಬ್ಯಾಂಕ್ ಆಗಿ ಬಳಸುತ್ತಿದೆ. ಮೂಲ ಸೌಕರ್ಯಗಳ ಅಭಿವೃದ್ಧಿ ಇಲ್ಲದಿರುವುದು ಅದರ ಸಾಕ್ಷಿ. ಮೋದಿ ಸರ್ಕಾರ ಎಲ್ಲರನ್ನೂ ಒಂದುಗೂಡಿಸಿಕೊಂಡು ದೇಶದ ಅಭಿವೃದ್ಧಿಯನ್ನಷ್ಟೆ ಗುರಿಯಾಗಿಸಿಕೊಂಡಿದೆ. ಬಿಜೆಪಿಗೆ ಒಮ್ಮೆ ಅವಕಾಶ ಕೊಟ್ಟರೆ ನಿಜವಾದ ಅಭಿವೃದ್ಧಿ ಎಂತಹುದೆಂಬುದನ್ನು ತೋರಿಸುತ್ತೇವೆ” ಎಂದರು.
ಈ ಸಂದರ್ಭದಲ್ಲಿ ಬಿಜೆಪಿ ರಾಜ್ಯ ಕಾರ್ಯದರ್ಶಿ ವಿನಯ್‌ಬಿದಿರಿ, ಜಿಲ್ಲಾ ಪ್ರಧಾನ ಕಾರ್ಯದರ್ಶಿ ಮುರಳೀಧರ್, ಮಾಜಿ ಜಿಲ್ಲಾಧ್ಯಕ್ಷ ರಾಮಲಿಂಗಪ್ಪ, ಮುಖಂಡರಾದ ವೇಣುಗೋಪಾಲ್, ಮಧುಚಂದ್ರ, ಲಕ್ಷ್ಮೀನಾರಾಯಣ್ ಗುಪ್ತ, ಸುರೇಂದ್ರಗೌಡ, ಆನಂದಗೌಡ ಸೇರಿದಂತೆ ಹಲವರು ಉಪಸ್ಥಿತರಿದ್ದರು.