Sidlaghatta, Chikkaballapur : ಶಿಡ್ಲಘಟ್ಟ ನಗರದಲ್ಲಿನ ಬಿಜೆಪಿ ಸೇವಾ ಸೌಧದಲ್ಲಿ ಶನಿವಾರ ನಡೆದ ವಿಶೇಷ ತೀವ್ರ ಮತದಾರರ ಪಟ್ಟಿ ಪರಿಷ್ಕರಣೆ ಕಾರ್ಯಕ್ರಮದ ಚುನಾವಣಾ ಸಂಚಾಲಕರ ಸಭೆಯಲ್ಲಿ ಮಾತನಾಡಿದ ಸಂಸದ ಡಾ. ಕೆ. ಸುಧಾಕರ್ ಅವರು, ಕಾಂಗ್ರೆಸ್ ಪಕ್ಷದ ನಿಲುವುಗಳು ರಾಷ್ಟ್ರದ ಏಕತೆಯ ವಿರುದ್ಧವಾಗಿವೆ ಎಂದು ಕಟು ಟೀಕೆ ಮಾಡಿದ್ದಾರೆ.
“ಕಾಂಗ್ರೆಸ್ ಪಕ್ಷವು ರಾಷ್ಟ್ರಗೀತೆಯನ್ನೇ ವಿರೋಧಿಸಿ, ದೇಶ ವಿಭಜನೆಗೆ ಕಾರಣವಾದ ಇತಿಹಾಸ ಹೊಂದಿದೆ. ಇಂದಿಗೂ ಅವರು ಅಧಿಕಾರದ ಆಸೆಯಿಂದ ಜನರ ನಂಬಿಕೆಯನ್ನು ದುರ್ಬಲಗೊಳಿಸಲು ಪ್ರಯತ್ನಿಸುತ್ತಿದ್ದಾರೆ,” ಎಂದು ಅವರು ಆರೋಪಿಸಿದರು.
ಬಿಜೆಪಿ ಪಕ್ಷವು ಮತದಾರರ ಪಟ್ಟಿಗಳನ್ನು ಶುದ್ಧೀಕರಿಸಲು ರಾಜ್ಯದಾದ್ಯಂತ ಕಾರ್ಯತಂತ್ರ ರೂಪಿಸಿದ್ದು, ಪ್ರತಿ ಜಿಲ್ಲೆಗೂ ತಂಡಗಳನ್ನು ರಚಿಸಲಾಗಿದೆ. ಈ ತಂಡಗಳು ಬೂತ್ ಮಟ್ಟದಲ್ಲಿ ಕಾರ್ಯನಿರ್ವಹಿಸುತ್ತಿದ್ದು, ಪಕ್ಷದ ಬಲವರ್ಧನೆಗೆ ಒತ್ತು ನೀಡುತ್ತಿವೆ ಎಂದು ಅವರು ವಿವರಿಸಿದರು. “ಮಹಿಳೆಯರು ಚುನಾವಣಾ ಸಿದ್ಧತೆಯಲ್ಲಿ ಸಕ್ರಿಯವಾಗಿ ಪಾಲ್ಗೊಳ್ಳುತ್ತಿರುವುದು ಪಕ್ಷದ ಬಲವನ್ನು ಹೆಚ್ಚಿಸುತ್ತಿದೆ,” ಎಂದರು.
ಇಲೆಕ್ಟ್ರಾನಿಕ್ ಮತಯಂತ್ರ (EVM) ಕುರಿತು ಮಾತನಾಡಿದ ಅವರು, “ಇ.ವಿ.ಎಂ ಯಂತ್ರಗಳನ್ನು ಕಾಂಗ್ರೆಸ್ ಪಕ್ಷವೇ ತರಿಸಿದರೂ, ಇಂದಿಗೆ ಅದರ ವಿರುದ್ಧ ಮಾತನಾಡುತ್ತಿದ್ದಾರೆ. ಗೆದ್ದರೆ ಸರಿಯೇ, ಸೋತರೆ ತಪ್ಪೇ ಎಂಬ ಅವರ ನಿಲುವು ಜನರ ವಿಶ್ವಾಸಕ್ಕೆ ಧಕ್ಕೆ ತರುತ್ತಿದೆ. ಅಧಿಕಾರಕ್ಕಾಗಿ ಇವರು ದೇಶವನ್ನು ವಿಭಜಿಸುವ ಮಟ್ಟದ ರಾಜಕಾರಣ ಮಾಡುತ್ತಿದ್ದಾರೆ,” ಎಂದು ಹೇಳಿದರು.
ಡಾ. ಸುಧಾಕರ್ ಅವರು ಮುಂದುವರಿದು, “ಇಡೀ ವಿಶ್ವ ಇಂದು ಭಾರತದ ಪ್ರಗತಿ ಮತ್ತು ಪ್ರಧಾನ ಮಂತ್ರಿ ನರೇಂದ್ರ ಮೋದಿ ಅವರ ನಾಯಕತ್ವದತ್ತ ಗೌರವದಿಂದ ನೋಡುತ್ತಿದೆ. ಆದರೆ ರಾಹುಲ್ ಗಾಂಧಿಯವರು ವಿದೇಶಗಳಿಗೆ ತೆರಳಿ ಭಾರತವನ್ನು ಕೆಡವಿ ಮಾತನಾಡುತ್ತಾರೆ. ಸೋಲನ್ನು ಒಪ್ಪಿಕೊಳ್ಳುವ ಧೈರ್ಯವಿಲ್ಲದೆ, ಮತದಾರರ ಮನಸ್ಸಿನಲ್ಲಿ ವಿಷಬೀಜ ಬಿತ್ತುವ ಕೆಲಸ ಕಾಂಗ್ರೆಸ್ ಮಾಡುತ್ತಿದೆ,” ಎಂದು ಆಕ್ರೋಶ ವ್ಯಕ್ತಪಡಿಸಿದರು.
ಸಭೆಯಲ್ಲಿ ಬಿಜೆಪಿ ಜಿಲ್ಲಾಧ್ಯಕ್ಷ ರಾಮಚಂದ್ರಗೌಡ, ರಾಜ್ಯ ಸಂಚಾಲಕ ಜಗದೀಶ್ ಹಿರೇಮನಿ, ಜಿಲ್ಲಾ ಸಂಚಾಲಕಿ ನಿಶ್ಚಿತಾ, ಮಾಜಿ ಶಾಸಕ ಎಂ. ರಾಜಣ್ಣ, ಕಾರ್ಯದರ್ಶಿಗಳು ಮುರುಳಿ ಹಾಗೂ ಮಧು, ತಾಲ್ಲೂಕು ಬಿಜೆಪಿ ಅಧ್ಯಕ್ಷ ಸೀಕಲ್ ಆನಂದ ಗೌಡ ಮತ್ತು ಪಕ್ಷದ ಮುಖಂಡರು ಸುರೇಂದ್ರಗೌಡ, ನರೇಶ್, ರಾಜಣ್ಣ ಹಾಗೂ ಚಿಂತಾಮಣಿ ಬಿಜೆಪಿ ಅಧ್ಯಕ್ಷರು ಉಪಸ್ಥಿತರಿದ್ದರು.
For Daily Updates WhatsApp ‘HI’ to 7406303366









