Sidlaghatta : ಶಿಡ್ಲಘಟ್ಟ ವಿಶೇಷಚೇತನರಲ್ಲಿ ಮಾನಸಿಕ ಹಾಗೂ ದೈಹಿಕ ದೃಢತೆ ಹೆಚ್ಚಿಸುವ ಉದ್ದೇಶದಿಂದ ಕ್ರೀಡಾಕೂಟ ಆಯೋಜಿಸಲಾಗಿದೆ ಎಂದು ಎಸ್.ಸಿ.ಐ ನವಜೀವನ ಸ್ವಯಂ ಸೇವಾ ಸಂಸ್ಥೆಯ ಅಧ್ಯಕ್ಷ ಮುನಿರಾಜು ತಿಳಿಸಿದರು.
ನಗರದ ನೆಹರೂ ಕ್ರೀಡಾಂಗಣದಲ್ಲಿ ಶನಿವಾರ ನವಜೀವನ ಸೇವಾ ಸಂಸ್ಥೆ, ಮಾರ್ಗದರ್ಶಿ ವಿಕಲಚೇತನರ ಸೇವಾ ಸಂಸ್ಥೆ ಹಾಗೂ ಸ್ಟೇಟ್‌ಸ್ಟ್ರೀಟ್ ಕಂಪನಿಯ ಸಹಯೋಗದಲ್ಲಿ ಬೆನ್ನುಹುರಿ ಅಪಘಾತಕ್ಕೆ ಒಳಗಾದ ವಿಶೇಷ ಚೇತನರಿಗೆ ಹಮ್ಮಿಕೊಂಡಿದ್ದ ಕ್ರೀಡಾಕೂಟದ ಉದ್ಘಾಟನೆ ನೆರವೇರಿಸಿ ಅವರು ಮಾತನಾಡಿದರು.
ಬೆನ್ನುಹುರಿ ಅಪಘಾತಕ್ಕೆ ಒಳಗಾದ ಬಹುತೇಕರು ಮನೆಯಲ್ಲಿಯೇ ಉಳಿದುಕೊಳ್ಳುವುದರಿಂದ ಒಂಟಿತನ, ಮಾನಸಿಕ ಒತ್ತಡ ಹೆಚ್ಚಾಗುತ್ತದೆ. ಹಾಗಾಗಿ ಅಂತಹವರನ್ನು ಸಮಾಜದ ಮುಖ್ಯವಾಹಿನಿಗೆ ತರಬೇಕು ಎಂಬ ಉದ್ದೇಶದಿಂದ ಕ್ರೀಡಾಕೂಟ ಆಯೋಜಿಸಿದೆ.
ಕ್ರೀಡಾಕೂಟದಲ್ಲಿ ಸುಮಾರು 30 ಕ್ಕೂ ಹೆಚ್ಚು ವಿಶೇಷಚೇತನರು ಪಾಲ್ಗೊಂಡಿದ್ದರು.
ಈ ಸಂದರ್ಭದಲ್ಲಿ ಎಸ್.ಸಿ.ಐ ನವಜೀವನ ಸೇವಾ ಸಂಸ್ಥೆ ಕಾರ್ಯದರ್ಶಿ ಕೆ.ಪಿ.ರವಿ, ಉಪಾಧ್ಯಕ್ಷ ಮಂಜುನಾಥ್, ಖಜಾಂಚಿ ರಾಮಾಂಜಿ ಮಾರ್ಗದರ್ಶಿ ವಿಕಲಚೇತನರ ಸೇವಾ ಸಂಸ್ಥೆ ಕಾರ್ಯದರ್ಶಿ ಗೀತಾಮೃತ, ಖಜಾಂಚಿ ವೆಂಕಟಾಚಲಂ, ಎಪಿಡಿ ಸಂಸ್ಥೆಯ ಗಿರಿಜಾ, ನಿರ್ದೇಶಕಿ ನೇತ್ರ, ಸ್ಟೇಟ್ ಸ್ಟ್ರೀಟ್ ಕಂಪನಿಯ 20 ಮಂದಿ ಸ್ವಯಂ ಸೇವಕರು ಹಾಜರಿದ್ದರು.








