Sidlaghatta : ಶಿಡ್ಲಘಟ್ಟ ತಾಲ್ಲೂಕಿನಲ್ಲಿ ಮಳೆ ಕೊರತೆ ಮುಂದುವರಿದಿರುವ ನಡುವೆಯೇ ಬಿತ್ತನೆ ಮಾಡಿರುವ ರಾಗಿ ಬೆಳೆಯನ್ನು ಉಳಿಸಿಕೊಳ್ಳಲು ಅಪ್ಪೇಗೌಡನಹಳ್ಳಿ ಗ್ರಾಮದ ರೈತರು ಪರ್ಯಾಯ ನೀರಾವರಿ ವ್ಯವಸ್ಥೆಗಳ ಮೊರೆ ಹೋಗಿದ್ದಾರೆ.
In English: With rain deficient across Sidlaghatta taluk, farmers in Appegowdanahalli village are turning to sprinkler and pipe-based irrigation to save their sown ragi crop, spending an extra ₹25,000-30,000 per acre they hadn’t budgeted for. The continuing dry spell has also raised fears of a fodder shortage for livestock.
ಅಪ್ಪೇಗೌಡನಹಳ್ಳಿಯ ರೈತ ಬಾಲಾಜಿ ಅವರು ರಾಗಿ ಬೆಳೆಗೆ ನೀರುಣಿಸಲು ಸ್ಪ್ರಿಂಕ್ಲರ್ ವ್ಯವಸ್ಥೆ ಅಳವಡಿಸಿಕೊಂಡಿದ್ದಾರೆ. ಮಳೆಯನ್ನೇ ಆಶ್ರಯಿಸಿ ಕೃಷಿ ಮಾಡುತ್ತಿದ್ದ ರೈತರಿಗೆ ಮಳೆ ಕೈಕೊಟ್ಟಿರುವುದರಿಂದ ಬೆಳೆ ಉಳಿಸಿಕೊಳ್ಳಲು ಹೆಚ್ಚುವರಿ ಹಣ ಖರ್ಚು ಮಾಡಬೇಕಾದ ಪರಿಸ್ಥಿತಿ ಎದುರಾಗಿದೆ.
ಒಂದು ಎಕರೆ ಜಮೀನಿನಲ್ಲಿ ಸಂಪೂರ್ಣ ಸ್ಪ್ರಿಂಕ್ಲರ್ ವ್ಯವಸ್ಥೆ ಅಳವಡಿಸಲು ಸುಮಾರು ₹25 ಸಾವಿರದಿಂದ ₹30 ಸಾವಿರದವರೆಗೆ ವೆಚ್ಚವಾಗುತ್ತದೆ. ಆಧಾರ ಕಡ್ಡಿಗೆ ಸುಮಾರು ₹7 ಹಾಗೂ ಸ್ಪ್ರಿಂಕ್ಲರ್ ಮತ್ತು ಪೈಪ್ ಫಿಟ್ಟಿಂಗ್ ಸೇರಿದಂತೆ ಪ್ರತಿ ಸೆಟ್ಗೆ ₹10ರಿಂದ ₹12ರಷ್ಟು ವೆಚ್ಚವಾಗುತ್ತದೆ ಎಂದು ರೈತರು ತಿಳಿಸಿದ್ದಾರೆ.
“ಮಳೆ ಸಕಾಲಕ್ಕೆ ಬಂದಿದ್ದರೆ ಇಷ್ಟೊಂದು ಖರ್ಚು ಮಾಡುವ ಅಗತ್ಯವಿರಲಿಲ್ಲ. ಬೆಳೆ ಉಳಿಸಿಕೊಳ್ಳಬೇಕೆಂಬ ಕಾರಣಕ್ಕೆ ಅನಿವಾರ್ಯವಾಗಿ ನೀರಾವರಿ ವ್ಯವಸ್ಥೆ ಮಾಡಿಕೊಳ್ಳಬೇಕಾಗಿದೆ” ಎಂದು ಬಾಲಾಜಿ ಅವರು ತಿಳಿಸಿದ್ದಾರೆ.
ಕೊಳವೆಬಾವಿ ನೀರಿನಿಂದ ಬೆಳೆ ಉಳಿಸುವ ಪ್ರಯತ್ನ

ಇದೇ ಗ್ರಾಮದ ರೈತ ಭಾರ್ಗವ್ ಅವರು ಕೊಳವೆಬಾವಿಯಿಂದ ಸಂಪ್ಗೆ ನೀರು ತುಂಬಿಸಿ, ಮೋಟರ್ ಅಳವಡಿಸಿಕೊಂಡು ಪೈಪ್ ಮೂಲಕ ಹೊಲಕ್ಕೆ ನೀರು ಹರಿಸುತ್ತಿದ್ದಾರೆ.
ಮಳೆಯನ್ನು ನಂಬಿ ಕಳೆದ ಮೂರು–ನಾಲ್ಕು ದಿನಗಳ ಹಿಂದೆ ಸುಮಾರು 1 ಎಕರೆ 20 ಗುಂಟೆ ಜಮೀನಿನಲ್ಲಿ ರಾಗಿ ಬಿತ್ತನೆ ಮಾಡಿದ್ದಾರೆ. ಆದರೆ ಬಿತ್ತನೆ ಬಳಿಕ ಮಳೆಯಾಗದಿರುವುದು ರೈತರ ಆತಂಕಕ್ಕೆ ಕಾರಣವಾಗಿದೆ.
“ಸದ್ಯ ಮಳೆ ಬರುವ ಲಕ್ಷಣವೂ ಕಾಣುತ್ತಿಲ್ಲ. ನೀರಿನ ಕೊರತೆಯ ನಡುವೆಯೂ ನಾಲ್ಕೈದು ದಿನಕ್ಕೊಮ್ಮೆ ನೀರು ಹಾಯಿಸಿ ಭೂಮಿಯನ್ನು ತೇವವಾಗಿಟ್ಟುಕೊಂಡು ಬೆಳೆ ಉಳಿಸಿಕೊಳ್ಳುವ ಪ್ರಯತ್ನ ಮಾಡುತ್ತಿದ್ದೇವೆ” ಎಂದು ಭಾರ್ಗವ್ ತಿಳಿಸಿದ್ದಾರೆ.
ಜಾನುವಾರುಗಳಿಗೂ ಮೇವು ಕೊರತೆ ಭೀತಿ
ಮಳೆ ಕೊರತೆಯ ಪರಿಣಾಮ ರಾಗಿ ಸೇರಿದಂತೆ ಕೃಷಿ ಚಟುವಟಿಕೆಗಳಷ್ಟೇ ಅಲ್ಲದೆ ಜಾನುವಾರುಗಳ ಮೇವಿನ ಸಮಸ್ಯೆಯೂ ಎದುರಾಗುವ ಆತಂಕ ರೈತರಲ್ಲಿ ಮೂಡಿದೆ. ಹಸಿರು ಮೇವು ದೊರೆಯದೆ ಹೋದರೆ ಮುಂದಿನ ದಿನಗಳಲ್ಲಿ ದನಕರುಗಳನ್ನು ಮಾರಾಟ ಮಾಡುವ ಅನಿವಾರ್ಯತೆ ಎದುರಾಗಬಹುದು ಎಂದು ರೈತರು ಆತಂಕ ವ್ಯಕ್ತಪಡಿಸಿದ್ದಾರೆ.
ಮಳೆ ಇನ್ನಷ್ಟು ವಿಳಂಬವಾದರೆ ರಾಗಿ ಬೆಳೆಯ ಇಳುವರಿ ಕುಸಿಯುವ ಸಾಧ್ಯತೆಯಿದ್ದು, ಇದರಿಂದ ಮಾರುಕಟ್ಟೆಯಲ್ಲಿ ರಾಗಿ ಬೆಲೆ ಮತ್ತು ಬೇಡಿಕೆ ಹೆಚ್ಚಾಗುವ ಪರಿಸ್ಥಿತಿ ನಿರ್ಮಾಣವಾಗಬಹುದು ಎಂಬ ನಿರೀಕ್ಷೆಯೂ ರೈತರಲ್ಲಿದೆ.
ಮಳೆ ಕೊರತೆಯ ನಡುವೆಯೂ ನೀರಿನ ಲಭ್ಯತೆಗೆ ಅನುಗುಣವಾಗಿ ಬೆಳೆಗಳಿಗೆ ನಾಲ್ಕೈದು ದಿನಕ್ಕೊಮ್ಮೆ ನೀರು ಹಾಯಿಸುತ್ತಾ ಕೃಷಿ ಮುಂದುವರಿಸುವುದು ರೈತರ ಮುಂದಿರುವ ಸದ್ಯದ ಮಾರ್ಗವಾಗಿದೆ. ಅನುಕೂಲವಿರುವ ರೈತರು ಮೈಕ್ರೋ ಸ್ಪ್ರಿಂಕ್ಲರ್ ಸೇರಿದಂತೆ ಪರ್ಯಾಯ ನೀರಾವರಿ ವ್ಯವಸ್ಥೆ ಅಳವಡಿಸಿಕೊಂಡರೆ ಮಳೆ ಕೈಕೊಟ್ಟರೂ ಬೆಳೆಯನ್ನು ಉಳಿಸಿಕೊಂಡು ಉತ್ತಮ ಇಳುವರಿ ಪಡೆಯಬಹುದು ಎಂಬುದು ರೈತರ ಅಭಿಪ್ರಾಯ.

