Sugaturu, Sidlaghatta : ಪ್ರಾಚೀನ ಭಾರತೀಯ ಆರೋಗ್ಯ ಮತ್ತು ಮೂಲಜೀವನಪದ್ದತಿಯ ರೂಪದಲ್ಲಿ ಯೋಗವು ಇಂದಿಗೂ ಬಳಕೆಯಾಗುತ್ತಿದ್ದು, ವಿಶ್ಪದಾದ್ಯಂತ ಬಹುತೇಕ ರಾಷ್ಟ್ರಗಳು ಜೀವನ ಶೈಲಿಯ ರೂಪದಲ್ಲಿ ಯೋಗವನ್ನು ಪರಿವರ್ತಿಸಿಕೊಂಡಿರುವುದು ಭಾರತದ ಹೆಮ್ಮೆಯಾಗಿದೆ. ಯೋಗದಿಂದ ಮಾನಸಿಕ ಮತ್ತು ಶಾರೀರಿಕ ಸಾಧನೆಯು ಸಾಧ್ಯವಾಗಿ ಸಕಲಾರೋಗ್ಯವು ಸುಲಭವಾಗಿ ಸಂವರ್ಧಿಸಬಲ್ಲದು ಎಂದು ಮುಖ್ಯಶಿಕ್ಷಕ ಎಚ್.ಎಸ್.ರುದ್ರೇಶಮೂರ್ತಿ ಹೇಳಿದರು.
ತಾಲ್ಲೂಕಿನ ಸುಗಟೂರು ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯ ಆವರಣದಲ್ಲಿ ಶನಿವಾರ ಜಿಗಣಿಯ ಪ್ರಶಾಂತಿ ಕುಟೀರಂನ ಎಸ್-ವ್ಯಾಸ ಡೀಮ್ಡ್ ಯೂನಿವರ್ಸಿಟಿಯ ಆಶ್ರಯದಲ್ಲಿ ಹಮ್ಮಿಕೊಳ್ಳಲಾಗಿದ್ದ ವಿಶ್ವ ಯೋಗದಿನಾಚರಣೆ, ಲೇಖನ ಸಾಮಗ್ರಿಗಳ ವಿತರಣಾ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಅವರು ಮಾತನಾಡಿದರು.
ಯೋಗವು ಭಾವನಾತ್ಮಕ ಚೈತನ್ಯವನ್ನು ಒದಗಿಸಿ ಆಧ್ಯಾತ್ಮಿಕ ಸಾಧನೆಗೆ ಪೂರಕವಾಗಿ ಎಡೆಮಾಡಿಕೊಡುತ್ತದೆ. ಯೋಗವು ಭಾರತೀಯ ಸಂಸ್ಕೃತಿಯ ಪ್ರತೀಕವಾಗಿದ್ದು ರೋಗಗಳನ್ನು ತಡೆಯುವ ಶಕ್ತಿ ಇದೆ. ಶರೀರವನ್ನು ಪ್ರಕೃತಿಗೆ ಸರಿಯಾಗಿ ಹೊಂದಿಸಬಲ್ಲ ಶರೀರದ ರಹಸ್ಯ ತಿಳಿಸಬಲ್ಲ ಸೂಕ್ತ ವಿದ್ಯೆಯಾಗಿದೆ.
ಭಾರತೀಯ ಮೂಲದ ಯೋಗಾಭ್ಯಾಸಕ್ಕೆ ವಿಶ್ವಮನ್ನಣೆ ಸಿಕ್ಕಿದೆ. ಇಡೀ ಜಗತ್ತಿನ ಸುಮಾರು 200 ಕ್ಕೂ ಹೆಚ್ಚು ರಾಷ್ಟ್ರಗಳು ಯೋಗವನ್ನು ಒಪ್ಪಿಕೊಂಡು ಭಾರತಕ್ಕೆ ಯೋಗದ ಮೂಲಕ ನಮಿಸಿವೆ. ಆಧುನೀಕರಣದ ಪರಿಣಾಮಗಳ ಸುಧಾರಣೆಗಾಗಿ ಹಿಂದಿಗಿಂತಲೂ ಯೋಗವು ಇಂದಿಗೆ ಅನುಕರಣೀಯವಾಗಿದೆ. ಪ್ರಾಥಮಿಕ ಶಿಕ್ಷಣ ಹಂತದಿಂದಲೇ ಯೋಗಶಿಕ್ಷಣವನ್ನು ಕಡ್ಡಾಯಗೊಳಿಸಿ, ಮಕ್ಕಳದಿಸೆಯಿಂದಲೇ ಯೋಗಾಭ್ಯಾಸವನ್ನು ರೂಢಿಗೊಳಿಸಬೇಕು. ದೇಹಾರೋಗ್ಯ, ಇಂದ್ರಿಯ ನಿಗ್ರಹ, ಮಾನಸಿಕ ಸಂಯಮ, ಏಕಾಗ್ರತೆ, ಸ್ಮರಣಶಕ್ತಿಯೊಂದಿಗೆ ಬುದ್ಧಿವಿಕಸನ ಮಾಡಿಕೊಳ್ಳಲು ನಿಯಮಿತವಾದ ಯೋಗಾಭ್ಯಾಸ ಅಗತ್ಯ ಎಂದರು.
ಎಸ್-ವ್ಯಾಸ ಡೀಮ್ಡ್ ಯೂನಿವರ್ಸಿಟಿಯ ನ್ಯಾಚುರೋಪತಿ ವಿಭಾಗದ ಎಸ್.ಕೃತ್ತಿಕಾ ಮಾತನಾಡಿ, ಯುವಪೀಳಿಗೆಯು ದೃಶ್ಯಮಾಧ್ಯಮಗಳಿಂದ ಅನುಕೂಲಕರವಾಗಿ ಸ್ವಲ್ಪ ಅಂತರಕಾಯ್ದುಳ್ಳಬೇಕು. ದೇಹಾರೋಗ್ಯದ ದೃಷ್ಟಿಯಿಂದ ಯೋಗಾಭ್ಯಾಸಕ್ಕೆ ಒತ್ತುಕೊಡಬೇಕು. ಯೋಗದಿಂದ ಏಕಾಗ್ರತೆ ಹೆಚ್ಚುವುದರೊಂದಿಗೆ ಆರೋಗ್ಯ ವೃದ್ಧಿಯಾಗುತ್ತದೆ. ದೇಶದ ಯೋಗಕ್ಕೆ ವಿಶ್ವ ಮಟ್ಟದ ಮಾನ್ಯತೆ ದೊರೆತಿದ್ದು ಯೋಗಾಭ್ಯಾಸದ ಅನುಕೂಲಗಳು ವೈಜ್ಞಾನಿಕವಾಗಿ ದೃಢಪಟ್ಟಿವೆ. ಯೋಗ, ಧ್ಯಾನವು ಮನುಷ್ಯನೊಳಗಿನ ಅಂತಃಶಕ್ತಿಯನ್ನು ಜಾಗೃತಗೊಳಿಸುತ್ತದೆ ಎಂದರು.
ವಿದ್ಯಾರ್ಥಿಗಳಿಂದ ಯೋಗಪ್ರದರ್ಶನ ನಡೆಯಿತು. ವಿದ್ಯಾರ್ಥಿಗಳಿಗೆ ವೈಯಕ್ತಿಕ ಸ್ವಚ್ಚತೆಗಾಗಿ ಕಿಟ್, ಜಾಮಿಟ್ರಿ ಬಾಕ್ಸ್, ವಾಟರ್‌ಬಾಟಲ್, ಪುಸ್ತಿಕ, ಪೆನ್ಸಿಲ್ ಮತ್ತಿತರ ಲೇಖಸಾಮಗ್ರಿಗಳನ್ನು ವಿತರಿಸಲಾಯಿತು. ವಿದ್ಯಾರ್ಥಿಗಳಿಗೆ ವಿವಿಧ ಸ್ಪರ್ಧೆಗಳನ್ನು ನಡೆಸಿ ವಿಜೇತರಿಗೆ ಬಹುಮಾನಗಳನ್ನು ವಿತರಿಸಲಾಯಿತು.
ಎಸ್.ಡಿ.ಎಂ.ಸಿ ಅಧ್ಯಕ್ಷ ವೆಂಕಟೇಶ್, ಶಿಕ್ಷಕ ಎ.ಬಿ.ನಾಗರಾಜ, ಬಿ.ನಾಗರಾಜು, ಮಧು, ಶಿಕ್ಷಕಿ ತಾಜೂನ್, ಎಸ್.ಡಿ.ಎಂ.ಸಿ ಮಾಜಿ ಸದಸ್ಯ ಬಚ್ಚೇಗೌಡ, ವೇಣುಗೋಪಾಲ್ ಎಸ್-ವ್ಯಾಸ ಯೂನಿವರ್ಸಿಟಿಯ ಆರ್.ಹಿರಣ್ಯ, ಎಸ್.ಹರಿಪ್ರಿಯಾ ಹಾಜರಿದ್ದರು.
For Daily Updates WhatsApp ‘HI’ to 7406303366
