Home News ಶಾಲಾಪರಿಸರ ಸ್ವಚ್ಚತಾ ಅಭಿಯಾನ

ಶಾಲಾಪರಿಸರ ಸ್ವಚ್ಚತಾ ಅಭಿಯಾನ

0
Sidlaghatta Sugaturu Government School cleanliness Drive

ತಾಲ್ಲೂಕಿನ ಸುಗಟೂರು ಸರ್ಕಾರಿ ಹಿರಿಯ ಪ್ರಾಥಮಿಕ ಶಾಲಾ ಆವರಣದಲ್ಲಿ ಜಿಲ್ಲಾ ನೆಹರು ಯುವಕೇಂದ್ರ, ನವದೆಹಲಿಯ ರಾಷ್ಟ್ರೀಯ ಯುವಯೋಜನೆ, ಸುಂದರಲಾಲ್ ಬಹುಗುಣ ಇಕೋ ಕ್ಲಬ್, ರಾಷ್ಟ್ರೀಯ ಸೇವಾ ಯೋಜನಾ ರಾಜ್ಯಕೋಶಗಳ ವತಿಯಿಂದ ರಾಷ್ಟ್ರೀಯ ಯುವಸಪ್ತಾಹದ ಅಂಗವಾಗಿ ಹಮ್ಮಿಕೊಳ್ಳಲಾಗಿದ್ದ ಶಾಲಾ ಪರಿಸರ ಸ್ವಚ್ಚತೆ ಅಭಿಯಾನ ಕಾರ್ಯಕ್ರಮದಲ್ಲಿ ಶಿಕ್ಷಕ ಎಚ್.ಎಸ್.ರುದ್ರೇಶಮೂರ್ತಿ ಮಾತನಾಡಿದರು.

ಪರಿಸರವನ್ನು ಉಳಿಸಲು ಪ್ರಯತ್ನಗಳು ನಡೆಯುತ್ತಲೇ ಇವೆ. ಸರ್ಕಾರಗಳು ಸ್ವಚ್ಚತಾ ಅಭಿಯಾನ, ಮಾಲಿನ್ಯತಡೆ ಕಾರ್ಯಕ್ರಮಗಳನ್ನು ಆಯೋಜಿಸುತ್ತಿವೆ. ಪ್ಲಾಸ್ಟಿಕ್‌ನಂತಹ ವಿಘಟನೆಗೊಳ್ಳದ ವಸ್ತುಗಳ ಬಳಕೆಯನ್ನು ಕನಿಷ್ಟಗೊಳಿಸಬೇಕು ಎಂದು ಅವರು ತಿಳಿಸಿದರು.

ದೇವಾಲಯ, ಚರ್ಚು, ಮಸೀದಿ, ಶಾಲೆಗಳಂತಹ ಶ್ರದ್ಧಾಕೇಂದ್ರಗಳ ಬಳಿ ಪಾವಿತ್ರತೆ ಕಾಪಾಡುವ ಹೊಣೆಗಾರಿಕೆಯನ್ನು ಎಲ್ಲರೂ ಹೊರಬೇಕು. ಸ್ವಚ್ಚತೆ, ನಿರ್ಮಲತೆಗೆ ಹೆಚ್ಚಿನ ಆದ್ಯತೆ ನೀಡಬೇಕು. ಸ್ವಚ್ಚತೆಯಲ್ಲಿ ವೈಯಕ್ತಿಕ ಜವಾಬ್ದಾರಿ ಹೆಚ್ಚಿದೆ. ದೇಶದ ಪ್ರತಿ ನಾಗರಿಕರಲ್ಲಿಯೂ ಸ್ವಚ್ಚತೆಯ ಕುರಿತು ಸಾಮಾಜಿಕ ಕಳಕಳಿ, ಬದ್ಧತೆಯ ಅಗತ್ಯವಿದೆ. ಧಾರ್ಮಿಕ ಕೇಂದ್ರಗಳಲ್ಲಿ ಭಕ್ತಿಯ ಜೊತೆಗೆ ಪ್ರತಿ ವ್ಯಕ್ತಿಯೂ ಶಕ್ತಿಯಾಗಿ ಸಮಷ್ಟಿಪ್ರಜ್ಞೆ ತೋರುವಂತಾಗಬೇಕು ಎಂದರು.

ರಾಷ್ಟ್ರೀಯ ಯುವಯೋಜನೆಯ ರಾಜ್ಯ ಸಂಯೋಜಕ ವಿ.ಪ್ರಶಾಂತ್ ಮಾತನಾಡಿ, ಪರಿಸರದ ಭಾಗವಾಗಿರುವ ನೀರು, ನೆಲ, ಕಾಡು, ವಾತಾವರಣ ಎಲ್ಲವನ್ನೂ ಸಂಪೂರ್ಣವಾಗಿ ಮಲಿನಗೊಳಿಸಿದ್ದು, ಅದರಿಂದಾಗಿ ಬಹುತೇಕ ಜೀವಸಂತತಿ ವಿನಾಶದ ಅಂಚಿನಲ್ಲಿವೆ. ಜೀವಿಗಳು ಬದುಕುಳಿಯಲು ಪರಿಸರದ ಘಟಕಗಳನ್ನು ಯತಾಸ್ಥಿತಿಯಲ್ಲಿ ಉಳಿಸಿಕೊಳ್ಳಬೇಕಾದ ಅನಿವಾರ್ಯತೆಯಿದೆ ಎಂದರು.

ಶಿಕ್ಷಕ ಎ.ಬಿ.ನಾಗರಾಜ ಮಾತನಾಡಿ, ಅಧಿಕವಾಗುತ್ತಿರುವ ಚಿಕುನ್‌ಗುನ್ಯಾ, ಡೆಂಗೆ, ಕೊರೋನಾದಂತಹ ಕಾಯಿಲೆಗಳ ವಿರುದ್ಧ ಸಮರ ಸಾರಲು ಜೀವಿಸುವ ನೆರೆಹೊರೆಯಲ್ಲಿ ಸ್ವಚ್ಚತೆಯನ್ನು ಕಾಯ್ದುಕೊಳ್ಳಲು ಎಲ್ಲರೂ ಶ್ರಮಿಸಬೇಕು ಎಂದರು.

 ವಿದ್ಯಾರ್ಥಿಗಳು, ಸ್ವಯಂಸೇವಕರಿಂದ ಶಾಲಾ ಆವರಣದ ಸ್ವಚ್ಚತೆ ಕೈಗೊಳ್ಳಲಾಯಿತು.

ಎಸ್‌ಡಿಎಂಸಿ ಅಧ್ಯಕ್ಷ ಎಂ.ಶಂಕರಪ್ಪ, ಉಪಾಧ್ಯಕ್ಷ ಜಗದೀಶ್, ಸದಸ್ಯೆ ನರಸಮ್ಮ, ಗ್ರಾಮಪಂಚಾಯಿತಿ ಮಾಜಿ ಸದಸ್ಯೆ ಭಾಗ್ಯಮ್ಮ ಅರುಣ್‌ಕುಮಾರ್, ಮುಖ್ಯಶಿಕ್ಷಕಿ ಉಮಾದೇವಿ, ಶಿಕ್ಷಕ ಬಿ.ನಾಗರಾಜು, ಎ.ಬಿ.ನಾಗರಾಜ, ಎಂ.ವೈ.ಲಕ್ಷ್ಮಯ್ಯ ಹಾಜರಿದ್ದರು. 

NO COMMENTS

LEAVE A REPLY

Please enter your comment!
Please enter your name here

error: Content is protected !!
Exit mobile version