
Melur, Sidlaghatta : ಮಕ್ಕಳ ಶೈಕ್ಷಣಿಕ ಸರ್ವತೋಮುಖ ಬೆಳವಣಿಗೆಯಲ್ಲಿ ಶಿಕ್ಷಕರಷ್ಟೇ ಪೋಷಕರ ಪಾತ್ರವು ಮಹತ್ತರವಾಗಿದ್ದು, ಪೋಷಕರು ತಮ್ಮ ಜವಾಬ್ದಾರಿಯನ್ನು ಸಮರ್ಥವಾಗಿ ನಿಭಾಯಿಸಬೇಕು ಎಂದು ಗ್ರಾಮ ಪಂಚಾಯಿತಿ ಸದಸ್ಯ ಆರ್.ಎ.ಉಮೇಶ್ ಹೇಳಿದರು.
ತಾಲ್ಲೂಕಿನ ಮೇಲೂರು ಗ್ರಾಮದ ಸರ್ಕಾರಿ ಪ್ರೌಢಶಾಲೆಯಲ್ಲಿ ಆಯೋಜಿಸಿದ್ದ ಪೋಷಕರ, ತಾಯಂದಿರ ಸಭೆಯಲ್ಲಿ ಅವರು ಪೋಷಕರನ್ನು ಉದ್ದೇಶಿಸಿ ಮಾತನಾಡಿದರು.
ಈ ಬಾರಿಯ ಎಸ್.ಎಸ್.ಎಲ್.ಸಿ ಪರೀಕ್ಷೆಯಲ್ಲಿ ಶೇ 100 ರಷ್ಟು ಫಲಿತಾಂಶವನ್ನು ತರಬೇಕು ಎಂದು ಸಾಕಷ್ಟು ಪ್ರಯತ್ನಗಳನ್ನು ಮಾಡಲಾಗುತ್ತಿದೆ. ಶಾಲೆಯಲ್ಲಿ ಶಿಕ್ಷಕರು ಮಾತ್ರ ಶ್ರಮಪಟ್ಟರೇ ಪ್ರಯೋಜನವಾಗುವುದಿಲ್ಲ. ಮನೆಗಳಲ್ಲಿ ಪೋಷಕರೂ ಸಹಾ, ವಿದ್ಯಾರ್ಥಿಗಳು ಏನು ಕಲಿಯುತ್ತಿದ್ದಾರೆ, ಶಾಲೆಯಲ್ಲಿ ಶಿಕ್ಷಕರು ಮಾಡಿದ ಪಾಠಗಳ ಕುರಿತು ಹೇಗೆ ಸ್ಪಂದಿಸುತ್ತಿದ್ದಾರೆ. ಶಾಲೆಗೆ ಕಡ್ಡಾಯವಾಗಿ ಮಕ್ಕಳು ಹಾಜರಾಗುತ್ತಿದ್ದಾರೆಯೇ ಇಲ್ಲವೇ ಎಂಬುದನ್ನು ಪರಿಶೀಲನೆ ಮಾಡಬೇಕು. ಶಿಕ್ಷಕರೊಂದಿಗೆ ನಿರಂತರವಾದ ಸಂಪರ್ಕವನ್ನು ಇಟ್ಟುಕೊಂಡು ಪ್ರಗತಿ ಪರಿಶೀಲನೆ ಮಾಡಿಕೊಳ್ಳುತ್ತಿರಬೇಕು ಎಂದರು.
ಶಾಲೆಯ ಮುಖ್ಯಶಿಕ್ಷಕ ಎಚ್.ಎಂ.ಭಾಸ್ಕರ್ ಮಾತನಾಡಿ, ಗ್ರಾಮೀಣ ಭಾಗದಲ್ಲಿನ ಮಕ್ಕಳು ಶೈಕ್ಷಣಿಕವಾಗಿ ಉತ್ತಮ ಸಾಧನೆ ಮಾಡಬೇಕು ಎನ್ನುವ ನಿಟ್ಟಿನಲ್ಲಿ ಸರ್ಕಾರ ಬಹಳಷ್ಟು ಯೋಜನೆಗಳನ್ನು ಜಾರಿಗೊಳಿಸಿದೆ ಅವೆಲ್ಲಾ ಯೋಜನೆಗಳನ್ನು ಸಮರ್ಪಕವಾಗಿ ಮಕ್ಕಳಿಗೆ ತಲುಪಿಸುವುದರ ಜೊತೆಗೆ, ನಾವೆಲ್ಲರೂ ಮಕ್ಕಳಿಗಾಗಿ ಶ್ರಮಿಸುತ್ತಿದ್ದೇವೆ. ಸ್ಥಳೀಯ ಗ್ರಾಮ ಪಂಚಾಯಿತಿಯಿಂದ ಅಗತ್ಯವಾದ ನೆರವು ದೊರೆಯುತ್ತಿದೆ. ಮನೆಗಳಲ್ಲಿ ಮಕ್ಕಳಿಗೆ ಓದುವಂತಹ ವಾತಾವರಣ ನಿರ್ಮಾಣ ಮಾಡುವುದು ಪೋಷಕರ ಕರ್ತವ್ಯವಾಗಿದೆ. ಮಕ್ಕಳಿಗೆ ಮೊಬೈಲ್ ಕೊಡಬೇಡಿ, ಟಿ.ವಿ.ಗಳ ವೀಕ್ಷಣೆ ಕಡಿಮೆ ಮಾಡುವ ಮೂಲಕ ಓದಿನ ಕಡೆಗೆ ಅವರು ಗಮನಹರಿಸುವಂತೆ ನೋಡಿಕೊಳ್ಳಬೇಕು. ಮಕ್ಕಳಿಗಾಗಿ ನೀವು ಪಡುವ ಶ್ರಮ ವ್ಯರ್ಥವಾಗದಂತೆ ನೋಡಿಕೊಳ್ಳಲು, ಶಿಕ್ಷಕರೊಂದಿಗೆ ಕೈ ಜೋಡಿಸಬೇಕು ಎಂದರು.
ವಿಜಯಪುರ ರೋಟರಿ ಸಂಸ್ಥೆಯ ಮಾಜಿ ಅಧ್ಯಕ್ಷೆ ಮಂಜುಳಾ ಅವರು, ಶಾಲೆಯಲ್ಲಿ ಎಸ್.ಎಸ್.ಎಲ್.ಸಿ. ಪರೀಕ್ಷೆಯಲ್ಲಿ ಉತ್ತಮ ಸಾಧನೆ ಮಾಡಿರುವ ವಿದ್ಯಾರ್ಥಿನಿ ಸುಫ್ರಿಯಾ ಅವರನ್ನು ಅಭಿನಂದಿಸಿ, ನಗದು ಬಹುಮಾನ ವಿತರಣೆ ಮಾಡಿದರು.
ಗ್ರಾಮ ಪಂಚಾಯಿತಿ ಅಧ್ಯಕ್ಷೆ ಶಶಿಕಲಾರಮೇಶ್, ಶಾಲಾಭಿವೃದ್ಧಿ ಸಮಿತಿ ಅಧ್ಯಕ್ಷೆ ನಂದಿನಿ, ಸಹಶಿಕ್ಷಕರಾದ ಸುಜಾತ, ಗಾಯಿತ್ರಿ, ಸವಿತಾ, ತುಳಸಿಮಾಲಾ, ದೇವಮ್ಮ, ಪದ್ಮ, ವೆಂಕಟಶಿವಾರೆಡ್ಡಿ, ನಾಗರಾಜ್, ಅರುಣ, ಸೌಂದರ್ಯ, ರೋಟರಿ ಸಂಸ್ಥೆ ವಿಜಯಪುರದ ರವಿ, ಶೈಲೇಂದ್ರಕುಮಾರ್, ಪೋಷಕರು ಹಾಜರಿದ್ದರು.