28.1 C
Sidlaghatta
Wednesday, February 18, 2026

ತಾಲ್ಲೂಕು ಪಂಚಾಯಿತಿ ಸದಸ್ಯರ ಸಾಮಾನ್ಯ ಸಭೆ

- Advertisement -
- Advertisement -

ತಾಲ್ಲೂಕು ಪಂಚಾಯಿತಿ ಸದಸ್ಯರನ್ನು ವಿಶ್ವಾಸಕ್ಕೆ ತೆಗೆದುಕೊಳ್ಳುವಲ್ಲಿ ಇಓ ನಿರ್ಲಕ್ಷ್ಯವಹಿಸುವ ಜೊತೆಗೆ ಕ್ಷೇತ್ರದಾದ್ಯಂತ ವಿವಿಧ ಕಾಮಗಾರಿಗಳ ಪರಿಶೀಲನೆಗೆ ಹೋದಾಗ ಸ್ಥಳೀಯ ತಾಲ್ಲೂಕು ಪಂಚಾಯಿತಿ ಸದಸ್ಯರ ಗಮನಕ್ಕೆ ತರದೇ ಅವಮಾನ ಮಾಡುತ್ತಿದ್ದಾರೆ ಎಂದು ತಾಲ್ಲೂಕು ಪಂಚಾಯಿತಿ ಸದಸ್ಯರು ಇಒ ಶಿವಕುಮಾರ್ ಅವರ ವಿರುದ್ಧ ಹರಿಹಾಯ್ದರು.

 ನಗರದ ತಾಲ್ಲೂಕು ಪಂಚಾಯಿತಿ ಸಭಾಂಗಣದಲ್ಲಿ ಬುಧವಾರ ಆಯೋಜಿಸಲಾಗಿದ್ದ ತಾಲ್ಲೂಕು ಪಂಚಾಯಿತಿ ಸದಸ್ಯರ ಸಾಮಾನ್ಯ ಸಭೆಯಲ್ಲಿ ತಾಲ್ಲೂಕು ಪಂಚಾಯಿತಿ ಸದಸ್ಯರು ವಿವಿಧ ವಿಚಾರಗಳ ಬಗ್ಗೆ ಮಾತನಾಡಿದರು.

 ಕಳೆದ ಕೆಲ ವರ್ಷಗಳಿಂದ ತಾಲ್ಲೂಕು ಪಂಚಾಯಿತಿಯಲ್ಲಿ ಹೊರಗುತ್ತಿಗೆ ಆಧಾರದ ಮೇಲೆ ಕೆಲಸ ನಿರ್ವಹಿಸುತ್ತಿರುವ ನೌಕರರ ಸಂಬಳದಲ್ಲಿ ಪಿ.ಎಫ್ ಗಾಗಿ ಹಣ ಕಡಿತಗೊಳಿಸುತ್ತಿದ್ದು, ಸಂಬಂದಪಟ್ಟ ಏಜೆನ್ಸಿಯವರು ಫಿಎಫ್ ಪಾವತಿಸಿಲ್ಲ. ಈ ಬಗ್ಗೆ ತಾಲ್ಲೂಕು ಪಂಚಾಯಿತಿ ಇಓ ಏನು ಕ್ರಮ ಕೈಗೊಂಡಿದ್ದೀರಿ ಎಂದು ತಾಲ್ಲೂಕು ಪಂಚಾಯಿತಿ ಸದಸ್ಯ ಕೆ.ಲಕ್ಷ್ಮಿನಾರಾಯಣ ಪ್ರಶ್ನಿಸಿದರು.

 ಇದಕ್ಕೆ ತಾಲ್ಲೂಕು ಪಂಚಾಯಿತಿ ಇಓ ಬಿ.ಶಿವಕುಮಾರ್ ಉತ್ತರಿಸಿ, ತಾಲ್ಲೂಕು ಪಂಚಾಯಿತಿ ಯಲ್ಲಿ ಹೊರಗುತ್ತಿಗೆ ಆಧಾರದ ಮೇಲೆ ಕರ್ತವ್ಯ ನಿರ್ವಹಿಸುವ ನೌಕರರಿಗೆ ಸಂಬಳವನ್ನು ಏಜೆನ್ಸಿ ಮೂಲಕ ನೀಡುವುದರಿಂದ ಸಂಬಂಧಿಸಿದ ನೌಕರರು ಏಜೆನ್ಸಿ ವಿರುದ್ಧ ಪ್ರಕರಣ ದಾಖಲಿಸಬೇಕೆ ಹೊರತು ಅದಕ್ಕೂ ನನಗೂ ಯಾವುದೇ ಸಂಬಂಧವಿಲ್ಲ ಎಂದರು.

 ಇದಕ್ಕೆ ಸದಸ್ಯರು ಆಕ್ಷೇಪ ವ್ಯಕ್ತಪಡಿಸಿದಾಗ ಅಧ್ಯಕ್ಷ ರಾಜಶೇಖರ್ ಮಾತನಾಡಿ, ಸಂಬಂಧಪಟ್ಟ ನೌಕರರು ಲಿಖಿತವಾಗಿ ತಾಲ್ಲೂಕು ಪಂಚಾಯಿತಿಗೆ ಮನವಿಯೊಂದನ್ನು ನೀಡಿ. ಅದರಂತೆ ಸಂಬಂದಪಟ್ಟ ಏಜೆನ್ಸಿಯವರನ್ನು ಕರೆಸಿ ಮಾತನಾಡಿ ಸರಿಪಡಿಸಲಾಗುವುದು. ಒಂದು ವೇಳೆ ಮಾತುಕತೆಯಲ್ಲಿ ಬಗೆಹರಿಯದಿದ್ದಲ್ಲಿ ನ್ಯಾಯಾಲಯದಲ್ಲಿ ಪ್ರಕರಣ ದಾಖಲಿಸಲು ಮುಂದಾಗುವ ಬಗ್ಗೆ ಯೋಚಿಸೋಣ ಎಂದರು.

 ಇನ್ನು ಕಳೆದ ಜೂನ್ 5 ರಂದು ನಡೆದ ವಿಶ್ವ ಪರಿಸರ ದಿನಾಚರಣೆ ಕಾರ್ಯಕ್ರಮದಲ್ಲಿ ತಾಲ್ಲೂಕು ಪಂಚಾಯಿತಿ ಸದಸ್ಯರನ್ನು ಕಡೆಗಣಿಸಿದ್ದರ ಬಗ್ಗೆ ಬಹುತೇಕ ಸದಸ್ಯರು ಇಓ ವಿರುದ್ಧ ಹರಿಹಾಯ್ದರು. ತಾಲ್ಲೂಕು ಪಂಚಾಯಿತಿಗೆ ಸೇರಿದ ಸ್ಥಳದಲ್ಲಿ ಮಾಡುವ ಕಾರ್ಯಕ್ರಮಕ್ಕೆ ತಾಲ್ಲೂಕು ಪಂಚಾಯಿತಿ ಸದಸ್ಯರನ್ನೇ ಕಡೆಗಣಿಸಿದ್ದರ ಹಿಂದೆ ಇಓ ಕೈವಾಡವಿದೆ. ಜಿಲ್ಲಾ ಮಟ್ಟದ ಹಾಗೂ ತಾಲ್ಲೂಕು ಮಟ್ಟದ ಅಧಿಕಾರಿಗಳೇ ಕಾರ್ಯಕ್ರಮದ ರೂಪುರೇಷೆ ನಿರ್ಧರಿಸುವುದಾದರೆ ಜನಪ್ರತಿನಿಧಿಗಳ ಅಗತ್ಯ ಇಲ್ಲವೇ.

ಇಒ ಅವರ ವರ್ತನೆ ನೋಡಿ ತಾಲ್ಲೂಕಿನ ವಿವಿಧ ಗ್ರಾಮ ಪಂಚಾಯಿತಿಗಳ ಪಿಡಿಓಗಳು ಸಹ ತಾಲ್ಲೂಕು ಪಂಚಾಯಿತಿ ಸದಸ್ಯರ ಗಮನಕ್ಕೆ ಯಾವುದೇ ಕಾಮಗಾರಿಯ ಮಾಹಿತಿ ನೀಡುತ್ತಿಲ್ಲ. ಕೆಲ ಪಿಡಿಓ ಗಳು ಇದೇ ತಾಲ್ಲೂಕಿನಲ್ಲಿ ಸುಮಾರು ಏಳೆಂಟು ವರ್ಷಗಳಿಂದ ಸೇವೆ ಮಾಡುತ್ತಿರುವ ಪಿಡಿಓಗಳು ತಾವು ಮಾಡುವ ಕೆಲಸವನ್ನು ಬಿಟ್ಟು ರಾಜಕೀಯ ಮಾಡುತ್ತಿದ್ದಾರೆ. ಸರ್ಕಾರಿ ನೌಕರರೆಲ್ಲಾ ರಾಜಕೀಯ ಮಾಡುವುದಾದರೆ ಜನರಿಂದ ಆಯ್ಕೆ ಯಾಗಿ ಬಂದ ನಾವುಗಳು ಜನಕ್ಕೆ ಏನು ಉತ್ತರ ನೀಡಬೇಕು. ಕಳೆದ ಸುಮಾರು ವರ್ಷಗಳಿಂದ ತಾಲ್ಲೂಕಿನಲ್ಲಿ ಕೆಲಸ ಮಾಡುತ್ತಿರುವ ಪಿಡಿಓಗಳನ್ನು ಕೂಡಲೇ ಇಲ್ಲಿಂದ ಬೇರೆಡೆಗೆ ವರ್ಗಾವಣೆ ಮಾಡಲು ಮೇಲಧಿಕಾರಿಗಳಿಗೆ ಶಿಫಾರಸ್ಸು ಮಾಡಿ ಎಂದು ಒತ್ತಾಯಿಸಿದರು.

 ತಾಲ್ಲೂಕು ಪಂಚಾಯಿತಿ ಉಪಾಧ್ಯಕ್ಷೆ ಮುನಿನರಸಮ್ಮ, ಸಾಮಾಜಿಕ ನ್ಯಾಯ ಸ್ಥಾಯಿ ಸಮಿತಿ ಅಧ್ಯಕ್ಷೆ ಶೋಭಾ ಶಶಿಕುಮಾರ್, ಇಓ ಬಿ.ಶಿವಕುಮಾರ್, ನರೇಗಾ ಸಹಾಯಕ ನಿರ್ದೇಶಕ ಚಂದ್ರಪ್ಪ ಹಾಗೂ ತಾಲ್ಲೂಕು ಪಂಚಾಯಿತಿ ಸದಸ್ಯರು ಹಾಜರಿದ್ದರು.

Just Published

Latest news

- Advertisement -

Covid-19

Silk

Related news

- Advertisement -

LEAVE A REPLY

Please enter your comment!
Please enter your name here
Captcha verification failed!
CAPTCHA user score failed. Please contact us!
error: Content is protected !!