Tatahalli, Sidlaghatta : ಬೃಹತ್ತಾದ ಮಾಲ್ ಆಗಲೀ ಪಿ.ವಿ.ಆರ್ ಥಿಯೇಟರ್ ಆಗಲೀ ಊಹಿಸಿರದಿದ್ದ ತಾತಹಳ್ಳಿ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯ ವಿದ್ಯಾರ್ಥಿಗಳು ಗುರುವಾರ ಬೆಂಗಳೂರಿನ ಮಾಲ್ ನಲ್ಲಿ ಸುತ್ತಾಡಿ ಪಿ.ವಿ.ಆರ್ ಚಿತ್ರಮಂದಿರದಲ್ಲಿ ಇಂಗ್ಲೀಷ್ ಭಾಷೆಯ ವೋಂಕಾ ಚಲನಚಿತ್ರವನ್ನು ಪಾಪ್ ಕಾರ್ನ್ ತಿನ್ನುತ್ತಾ ವೀಕ್ಷಿಸಿ ಮರೆಯಲಾಗದ ಅನುಭವವನ್ನು ಹೊತ್ತು ತಂದಿದ್ದಾರೆ.
ತಾತಹಳ್ಳಿ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯ ಶಿಕ್ಷಕರು, ಎಸ್.ಡಿ.ಎಂ.ಸಿ ಅಧ್ಯಕ್ಷರೊಂದಿಗೆ ಪೋಷಕರ ಮನವೊಲಿಸಿ ಅರವತ್ತು ವಿದ್ಯಾರ್ಥಿಗಳೊಂದಿಗೆ ಒಂದು ದಿನದ ಬೆಂಗಳೂರು ಪ್ರವಾಸ ಮಾಡಿದ್ದಾರೆ.
ತಾತಹಳ್ಳಿಯಿಂದ ಬೆಂಗಳೂರಿಗೆ ಅರವತ್ತು ವಿದ್ಯಾರ್ಥಿಗಳು, ಮುಖ್ಯಶಿಕ್ಷಕರು, ಶಿಕ್ಷಕರು ಹಾಗೂ ಅಡುಗೆ ಸಿಬ್ಬಂದಿ ಬಸ್ಸಿನಲ್ಲಿ ಮುಂಜಾನೆ ತೆರಳಿದ್ದಾರೆ. ವಿಶ್ವೇಶ್ವರಯ್ಯ ಸೆಂಟ್ರಲ್ ಕಾಲೇಜ್ ಮೆಟ್ರೋ ನಿಲ್ದಾಣದಿಂದ ಡಾ.ಬಿ.ಆರ್.ಅಂಬೇಡ್ಕರ್ (ವಿಧಾನಸೌಧ) ನಿಲ್ದಾಣದವರೆಗೆ ಮೆಟ್ರೋದಲ್ಲಿ ಸಂಚರಿಸಿ ಮೆಟ್ರೋ ರೈಲಿನ ಅನುಭವವನ್ನು ಪಡೆದರು. ಅಲ್ಲಿಂದ ವಿಧಾನಸೌಧ ಮತ್ತು ಹೈ ಕೋರ್ಟ್ ನೋಡುತ್ತಾ ಜವಾಹರಲಾಲ್ ನೆಹರೂ ತಾರಾಲಯದಲ್ಲಿ “ನಮ್ಮ ಸೌರವ್ಯೂಹ” ಶೋ ವೀಕ್ಷಿಸಿದರು. ನಂತರ ವಿಶ್ವೇಶ್ವರಯ್ಯ ಕೈಗಾರಿಕಾ ಮತ್ತು ತಾಂತ್ರಿಕ ವಸ್ತು ಸಂಗ್ರಹಾಲಯದಲ್ಲಿ ತ್ರೀಡಿ ಶೋ ವೀಕ್ಷಿಸಿದರು.
ಅಲ್ಲಿಂದ ಹೊರಟು ಓರಿಯನ್ ಮಾಲ್ ನಲ್ಲಿನ ಪಿ.ವಿ.ಆರ್ ಚಿತ್ರಮಂದಿರದಲ್ಲಿ ಇಂಗ್ಲೀಷ್ ಭಾಷೆಯ ವೋಂಕಾ ಚಲನಚಿತ್ರವನ್ನು ವೀಕ್ಷಿಸಿದರು.
“ಮೆಟ್ರೋ ರೈಲ್ವೇ ಸ್ಟೇಷನ್ನಿನಲ್ಲಿ ಎಸ್ಕಲೇಟರ್ ನಲ್ಲಿ ಹೋಗುವುದು ಮತ್ತು ಮೆಟ್ರೋ ರೈಲಿನಲ್ಲಿನ ಪ್ರಯಾಣ ನಮ್ಮ ಮಕ್ಕಳಿಗೆ ವಿಶೇಷ ಅನುಭವವನ್ನು ಕೊಟ್ಟಿತು. ನೆಹರೂ ತಾರಾಲಯದಲ್ಲಿ ರಾತ್ರಿಯ ಆಗಸದಲ್ಲಿ ಸೌರವ್ಯೂಹ ವೀಕ್ಷಣೆಯ ಅನುಭವವನ್ನು ಕಟ್ಟಿಕೊಡುವ ಶೋ, ವಸ್ತು ಸಂಗ್ರಹಾಲಯದಲ್ಲಿ ತ್ರೀಡಿ ಶೋ ಸಹ ನಮ್ಮ ಮಕ್ಕಳಿಗೆ ಒಳ್ಳೆಯ ಅನುಭವ. ಮಾಲ್ ಎಂಬ ಜಗಮಗಿಸುವ ಲೋಕವನ್ನು ಬೆರಗುಕಣ್ಣಿನಿಂದ ಮಕ್ಕಳು ನೋಡಿ ಆನಂದಿಸಿದ್ದು ನಮಗೆಲ್ಲಾ ಖುಷಿ ಕೊಟ್ಟಿತು. ಮಾಲ್ ನಲ್ಲಿ ನಮ್ಮನ್ನು ಮತ್ತು ನಮ್ಮ ವಿದ್ಯಾರ್ಥಿಗಳನ್ನು ಅತ್ಯಂತ ಪ್ರೀತಿಯಿಂದ ಮುಖ್ಯ ವ್ಯಕ್ತಿಗಳಂತೆ ಬರಮಾಡಿಕೊಂಡು ಎಲ್ಲಾ ವಿವರಿಸುತ್ತಾ ಚಿತ್ರಮಂದಿರಕ್ಕೆ ಕರೆದೊಯ್ದರು. ಪಿವಿಆರ್ ಸಿಬ್ಬಂದಿ ಕಾರ್ತಿಕ್ ಮತ್ತು ತಂಡದವರು ನಮ್ಮ ವಿದ್ಯಾರ್ಥಿಗಳಿಗೆ ಉಚಿತವಾಗಿ ಪಾಪ್ ಕಾರ್ನ್ ಕೊಟ್ಟು ಸತ್ಕರಿಸಿದ್ದು ನಿಜಕ್ಕೂ ಮರೆಯಲಾಗದು” ಎಂದು ಮುಖ್ಯ ಶಿಕ್ಷಕಿ ಸರಸ್ವತಮ್ಮ ಹೇಳಿದರು.
“ನಮ್ಮ ಬಸ್ಸಿಗೆ ಮಾಲ್ ನಲ್ಲಿ ಉಚಿತವಾಗಿ ನಿಲ್ಲಿಸಲು ಗುರುಪ್ರಸಾದ್ ಎನ್ನುವವರು ಸಹಾಯ ಮಾಡಿದರೆ, ಪಿ.ವಿ.ಆರ್ ವೀಕ್ಷಣೆಗೆ ಸಚಿನ್ ಎನ್ನುವವರು ಸಹಾಯ ಮಾಡಿದರು. ಬೆಂಗಳೂರಿನ ಟಿ.ಮಂಜುನಾಥ್ ಮತ್ತು ಮಾರುತಿ ಎಂಬುವವರು ನಮ್ಮ ಮಕ್ಕಳಿಗೆ ರಾತ್ರಿ ಊಟವನ್ನು ತಮ್ಮ ಮನೆಯಿಂದಲೇ ತಂದು ಬಡಿಸಿ ಆತ್ಮೀಯವಾಗಿ ನೋಡಿಕೊಂಡರು. ನಮಗೂ ನಮ್ಮ ಮಕ್ಕಳಿಗೂ ಬೆಂಗಳೂರಿನಲ್ಲಿ ರಾಜೋಪಚಾರ ಸಿಕ್ಕಿತು” ಎಂದು ಅವರು ವಿವರಿಸಿದರು.
ಶಿಕ್ಷಕರಾದ ಪಿ.ಸುದರ್ಶನ, ಎಸ್.ಕಲಾಧರ, ಎ.ನಾಗರಾಜ, ಅಡುಗೆ ಸಿಬ್ಬಂದಿ , ಶಾಂತಮ್ಮ ಮತ್ತು ಗಂಗಮ್ಮ ಜೊತೆಗಿದ್ದರು.
For Daily Updates WhatsApp ‘HI’ to 7406303366




 
                                    




