Sidlaghatta : ಚಿಕ್ಕಬಳ್ಳಾಪುರ ಜಿಲ್ಲೆಯ ಶಿಡ್ಲಘಟ್ಟ ತಾಲ್ಲೂಕಿನ ಗೆಜ್ಜೆಗಾನಹಳ್ಳಿ ಗ್ರಾಮದಲ್ಲಿ ವಿಜಯನಗರ ಸಾಮ್ರಾಜ್ಯದ (Vijayanagara Empire) ಆರಂಭಿಕ ಕಾಲದ, ಅಂದರೆ ಹಕ್ಕ-ಬುಕ್ಕರ ಆಳ್ವಿಕೆಯ ಕಾಲದ ಅತ್ಯಂತ ಅಪರೂಪದ ಅಪ್ರಕಟಿತ ತಮಿಳು ಶಾಸನವೊಂದು ಪತ್ತೆಯಾಗಿದೆ. ಶಾಸನತಜ್ಞರಾದ ಕೆ.ಧನಪಾಲ್ ಮತ್ತು ಅಪ್ಪೇಗೌಡನಹಳ್ಳಿಯ ಎ.ಎಂ.ತ್ಯಾಗರಾಜ್ ಅವರು ಈ ಮಹತ್ವದ ಸಂಶೋಧನೆಯನ್ನು ಮಾಡಿದ್ದಾರೆ.
700 ವರ್ಷಗಳ ಹಿಂದಿನ ಇತಿಹಾಸ: ಗ್ರಾಮದ ಬೇಲಿಯಲ್ಲಿ ಹುದುಗಿಹೋಗಿದ್ದ ಈ ಶಾಸನದ ಕಲ್ಲನ್ನು ಗ್ರಾಮಸ್ಥರ ನೆರವಿನಿಂದ ಹೊರತೆಗೆದು ವೀರಾಂಜನೇಯಸ್ವಾಮಿ ದೇವಸ್ಥಾನದ ಬಳಿ ಇರಿಸಲಾಗಿದೆ. ಈ ಶಾಸನವು ಕ್ರಿ.ಶ. 1348 ರ ಜುಲೈ 7 ರ ಸೋಮವಾರದ ಕಾಲಮಾನಕ್ಕೆ ಸೇರಿದ್ದಾಗಿದೆ (ಶಕ ವರುಷ 1270). ಆ ಸಮಯದಲ್ಲಿ ವಿಜಯನಗರದ ಸ್ಥಾಪಕರಾದ ಶ್ರೀ ವೀರ ಹರಿಯಪ್ಪ ಒಡೆಯರು ಮತ್ತು ಬುಕ್ಕಣ್ಣ ಒಡೆಯರು ಒಟ್ಟಾಗಿ ಸಾಮ್ರಾಜ್ಯವನ್ನು ಆಳುತ್ತಿದ್ದರು ಎಂಬ ಇತಿಹಾಸಕ್ಕೆ ಈ ಶಾಸನವು ಪುಷ್ಟಿ ನೀಡುತ್ತದೆ.
ಗೆಜ್ಜೆಗಾನಹಳ್ಳಿಯ ಹಳೆಯ ಹೆಸರು ‘ಕಚ್ಛೆಗಾನಪಲ್ಲಿ’: ಈ ತಮಿಳು ಶಾಸನದಲ್ಲಿ ಪ್ರಸ್ತುತ ಗೆಜ್ಜೆಗಾನಹಳ್ಳಿಯನ್ನು ‘ಕಚ್ಛೆಗಾನಪಲ್ಲಿ’ ಎಂದು ಉಲ್ಲೇಖಿಸಲಾಗಿದೆ. ಅಂಬಡಕ್ಕಿ ನಾಡಿನ ಸಾಮಂತನಾಗಿದ್ದ ನರಲೋಕ ಗಂಡ ಮೈಲೇಯ ನಾಯಕನ ಕಾಲದಲ್ಲಿ, ಸ್ಥಳೀಯ ಆಳ್ವಿಕೆಗಾರರು ರಾಮಣ್ಣನ ಮಗ ನೀಲಪ್ಪನಿಗೆ ಕಚ್ಛೆಗಾನಪಲ್ಲಿ ಮತ್ತು ಮರುಗೈಪಲ್ಲಿಯ ಕೆರೆಯ ಕೆಳಗೆ ಜಮೀನನ್ನು ದಾನ ನೀಡಿದ ವಿವರಗಳು ಈ ಶಾಸನದಲ್ಲಿವೆ.
ಅಂಬಡಕ್ಕಿ ನಾಡು ಮತ್ತು ತಮಿಳು ಭಾಷೆಯ ಪ್ರಭಾವ
ಕನ್ನಡ ನಾಡಿನಲ್ಲಿ ತಮಿಳು ಶಾಸನ ಏಕೆ? 10ನೇ ಶತಮಾನದಲ್ಲಿ ದಕ್ಷಿಣ ಕರ್ನಾಟಕವನ್ನು ಚೋಳರು ಗೆದ್ದುಕೊಂಡಿದ್ದರಿಂದ ಇಲ್ಲಿ ತಮಿಳು ಅಧಿಕಾರಿಗಳು ಮತ್ತು ಶಿಲ್ಪಿಗಳ ಪ್ರಭಾವ ಹೆಚ್ಚಿತ್ತು. ಚೋಳರು ಹೋದ ಮೇಲೂ ಹೊಯ್ಸಳ ಮತ್ತು ಆರಂಭಿಕ ವಿಜಯನಗರದ ಕಾಲದವರೆಗೆ ಈ ಭಾಗದಲ್ಲಿ ತಮಿಳು ವ್ಯವಹಾರದ ಭಾಷೆಯಾಗಿ ಉಳಿದುಕೊಂಡಿತ್ತು ಎಂದು ಇತಿಹಾಸಕಾರರು ವಿವರಿಸುತ್ತಾರೆ.
ಅಂಬಡಕ್ಕಿ ನಾಡು ಎಂದರೇನು? 13ನೇ ಶತಮಾನದಲ್ಲಿ ಹೊಯ್ಸಳ ಸಾಮ್ರಾಜ್ಯದ ವಿಭಜನೆಯಾದಾಗ, ಕೈವಾರ ನಾಡಿನ ಒಂದು ಭಾಗವನ್ನು ‘ಅಂಬಡಕ್ಕಿ ನಾಡು’ ಎಂದು ಕರೆಯಲಾಗುತ್ತಿತ್ತು. ಇದರ ಆಡಳಿತ ಕೇಂದ್ರ ಇಂದಿನ ಉಪ್ಪಾರಪೇಟೆಯಾಗಿತ್ತು. ವಿಜಯಪುರದಿಂದ ಹಿಡಿದು ಶಿಡ್ಲಘಟ್ಟದ ಗುಡಿಹಳ್ಳಿಯವರೆಗೆ ಈ ನಾಡು ವ್ಯಾಪಿಸಿತ್ತು.








