19.1 C
Sidlaghatta
Thursday, October 30, 2025

ಎಂಟು ತಿಂಗಳಿನಲ್ಲಿ ಇನ್ನೂರಕ್ಕೂ ಹೆಚ್ಚು ಕಾರ್ಯಕ್ರಮ ಮಾಡಿರುವ ಶಿಡ್ಲಘಟ್ಟ ಕಸಾಪ

- Advertisement -
- Advertisement -

ಕಸಾಪ ತಾಲ್ಲೂಕು ಘಟಕ ಕಳೆದ ಎಂಟು ತಿಂಗಳಿನಲ್ಲಿ ಇನ್ನೂರಕ್ಕೂ ಹೆಚ್ಚು ಕಾರ್ಯಕ್ರಮಗಳನ್ನು ನಡೆಸಿದ್ದು, ಗ್ರಾಮೀಣ ಭಾಗದಲ್ಲಿ ಹೆಚ್ಚು ಕಾರ್ಯಕ್ರಮಗಳನ್ನು ನಡೆಸುವ ಮೂಲಕ ಕಸಾಪ ಉದ್ದೇಶವನ್ನು ಗ್ರಾಮೀಣ ಭಾಗಕ್ಕೆ ಕೊಂಡೊಯ್ಯುತ್ತಿದೆ ಎಂದು ಕಸಾಪ ತಾಲ್ಲೂಕು ಅಧ್ಯಕ್ಷ ಬಿ.ಆರ್‌.ಅನಂತಕೃಷ್ಣ ತಿಳಿಸಿದರು.
ತಾಲ್ಲೂಕಿನ ಕೊತ್ತನೂರು ಗ್ರಾಮದಲ್ಲಿ ಮಂಗಳವಾರ ಪರಿಸರಪ್ರೇಮಿ ಸ್ನೇಕ್‌ ನಾಗರಾಜ್‌ ಅವರ ಮನೆಯಲ್ಲಿ ಏರ್ಪಡಿಸಿದ್ದ ಮನೆಯಂಗಳದಲ್ಲಿ ನುಡಿಸಿರಿ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.
ಗ್ರಾಮೀಣ ಭಾಗದಲ್ಲಿ ಕನ್ನಡದ ಬಗ್ಗೆ ಒಲವಿರುವವರು, ಭಾಷಾಭಿಮಾನವಿರುವವರು ಹೆಚ್ಚಿದ್ದಾರೆ. ಅವರ ಬಳಿಗೆ ಕಸಾಪ ತಲುಪುತ್ತಿದೆ. ಸರ್ಕಾರಿ ಶಾಲೆಗಳಲ್ಲಿ ಮಕ್ಕಳಿಗೆ ಪುಸ್ತಕ ಓದಿ ಮಾತನಾಡುವ ಸ್ಪರ್ಧೆಯನ್ನು ನಡೆಸುವ ಮೂಲಕ ಓದುವ ಹವ್ಯಾಸವನ್ನು ಬೆಳೆಸುತ್ತಿದ್ದೇವೆ. ಕಸಾಪ ತಾಲ್ಲೂಕು ಘಟಕದಿಂದ ಒಂದು ಸಾವಿರಕ್ಕೂ ಹೆಚ್ಚಿನ ಪುಸ್ತಕಗಳನ್ನು ಬಹುಮಾನವಾಗಿ ಮತ್ತು ಶಾಲಾ ಗ್ರಂಥಾಲಯಗಳಿಗೆ ನೀಡಲಾಗಿದೆ ಎಂದು ಹೇಳಿದರು.
ಕಸಾಪ ತಾಲ್ಲೂಕು ಪ್ರಧಾನ ಕಾರ್ಯದರ್ಶಿ ಎ.ಎಂ.ತ್ಯಾಗರಾಜ್‌ ಮಾತನಾಡಿ, ಕನ್ನಡ ಎಂಬುದು ಒಂದು ಭಾಷೆಯ ಹೆಸರು ಮಾತ್ರವಲ್ಲ, ಅದು ನಮ್ಮ ಉಸಿರು, ನಮ್ಮ ಸಂಸ್ಕೃತಿ, ಜನಾಂಗದ ಮತ್ತು ಜನಜೀವನದ ಹೆಸರು ಕನ್ನಡ. ಕನ್ನಡಿಗರು ‘ನವೆಂಬರ್ ಕನ್ನಡಿಗ’ರಾಗದೆ ನಿತ್ಯ ಕನ್ನಡಿಗರಾಗಬೇಕು, ಕನ್ನಡ ನಿತ್ಯಜೀವನದಲ್ಲಿ ಹಾಸುಹೊಕ್ಕಾಗಬೇಕು. ವೃತ್ತಿ, ಪ್ರವೃತ್ತಿಗಳೆಲ್ಲ ಕನ್ನಡಮಯವಾಗಬೇಕು. ಉತ್ಸಾಹ ಕ್ಷಣಿಕವಾಗಬಾರದು ಎಂದು ಹೇಳಿದರು.
ಕೊತ್ತನೂರು ಗ್ರಾಮದ ಈಶ್ವರ ದೇವಾಲಯದ ಅರ್ಚಕ ಬಸವರಾಜ್‌ ಮಾತನಾಡಿ, ಕನ್ನಡ ಅಳಿಯುತ್ತಿರುವುದು ನಗರ ಪ್ರದೇಶಗಳಲ್ಲಿ ಮಾತ್ರ, ಗ್ರಾಮಾಂತರ ಪ್ರದೇಶಗಳಲ್ಲಿ ಅದು ಸುಸ್ಥಿರವಾಗಿದೆ ಎಂದು ಇದುವರೆಗೆ ನಾವು ತಿಳಿದಿದ್ದೆವು. ಆದರೆ ಈಗ ಅಲ್ಲಿಯೂ ಕನ್ನಡದ ಬೇರುಗಳು ಸಡಿಲವಾಗುತ್ತಿವೆ ಎಂಬುದು ಕಳವಳಕಾರಿ. ಕಾನ್ವೆಂಟ್ ಮೋಹ ಹಳ್ಳಿಗಾಡಿನಲ್ಲೂ ಮೂಡಿ ಬೆಳೆಯುತ್ತಿದೆ. ಜನರ ಬಾಯಲ್ಲಿ ಕನ್ನಡ ಶಬ್ದಗಳು ಮರೆಯಾಗಿ ಇಂಗ್ಲಿಷ್ ಶಬ್ದಗಳು ಅನಗತ್ಯವಾಗಿ ಮೆರೆಯುತ್ತಿವೆ ಎಂದು ಆತಂಕ ವ್ಯಕ್ತಪಡಿಸಿದರು.
ಗ್ರಾಮದ ರಾಧಮ್ಮ, ಸರೋಜಮ್ಮ ಮತ್ತು ಭವಾನಿ ಜನಪದ ಗೀತೆಗಳನ್ನು ಹಾಡಿದರು. ಪರಿಸರಪ್ರೇಮಿ ಸ್ನೇಕ್‌ನಾಗರಾಜ್‌ ಅವರನ್ನು ಕಸಾಪ ತಾಲ್ಲೂಕು ಘಟಕದಿಂದ ಸನ್ಮಾನಿಸಿ, ಪುಸ್ತಕವನ್ನು ನೀಡಲಾಯಿತು.
ಕಸಾಪ ತಾಲ್ಲೂಕು ಉಪಾಧ್ಯಕ್ಷ ಸಿ.ಪಿ.ಈ.ಕರಗಪ್ಪ, ಗ್ರಾಮಸ್ಥರಾದ ಕೆಂಪಣ್ಣ, ಬೈರರೆಡ್ಡಿ, ಮಂಜುನಾಥ್‌, ಚನ್ನಬಸವಯ್ಯ, ಶ್ರೀನಿವಾಸ್‌ ಮತ್ತಿತರರು ಈ ಸಂದರ್ಭದಲ್ಲಿ ಹಾಜರಿದ್ದರು.

Just Published

Latest news

- Advertisement -

Covid-19

Silk

Related news

- Advertisement -

LEAVE A REPLY

Please enter your comment!
Please enter your name here
Captcha verification failed!
CAPTCHA user score failed. Please contact us!
error: Content is protected !!