ಸಾಲವನ್ನು ಪಡೆದ ಉದ್ದೇಶಕ್ಕಾಗಿ ಮಾತ್ರ ಬಳಸಬೇಕು. ಸಾಲದ ಹಣದಿಂದ ಆರ್ಥಿಕವಾಗಿ ಮುಂದುವರೆಯುವುದರೊಂದಿಗೆ ಸಕಾಲದಲ್ಲಿ ಸಾಲ ಮರುಪಾವತಿಸುವ ಮೂಲಕ ಬ್ಯಾಂಕಿನ ಆಭಿವೃದ್ಧಿಗೆ ಎಲ್ಲರೂ ಶ್ರಮಿಸಬೇಕು ಎಂದು ಕರ್ನಾಟಕ ಬ್ಯಾಂಕಿನ ಮಹಾ ಪ್ರಬಂಧಕ ರಾಘವೇಂದ್ರಭಟ್ ತಿಳಿಸಿದರು.
ತಾಲ್ಲೂಕಿನ ಮಳಮಾಚನಹಳ್ಳಿ ಗ್ರಾಮದಲ್ಲಿ ಸೋಮವಾರ ಕರ್ನಾಟಕ ಬ್ಯಾಂಕಿನ ೭೪೪ ನೇ ಶಾಖೆಯ ನೂತನ ಕಟ್ಟಡದ ಉದ್ಘಾಟನೆ ಸಮಾರಂಭದ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.
ಗ್ರಾಮೀಣ ಹಾಗೂ ಪಟ್ಟಣ ಪ್ರದೇಶಗಳ ನಾಗರಿಕರ ಉಳಿತಾಯದ ಹಣವನ್ನು ಕ್ರೋಡೀಕರಿಸಿ ಅದನ್ನು ಅಗತ್ಯ ಇರುವವರಿಗೆ ಸಾಲದ ರೂಪದಲ್ಲಿ ನೀಡುವ ಮೂಲಕ ಮಹತ್ತರ ಜವಾಬ್ದಾರಿ ಹೊತ್ತಿರುವ ಕರ್ಣಾಟಕ ಬ್ಯಾಂಕ್ ನಿಧಾನವೇ ಪ್ರಧಾನ ಎಂಬ ಹಿರಿಯರ ಧ್ಯೇಯದೊಂದಿಗೆ ದೇಶಾಧ್ಯಂತ ವಿಸ್ತರಿಸಲಾಗುತ್ತಿದೆ ಎಂದರು.
ಗ್ರಾಹಕರ ಸೇವೆಯನ್ನೆ ಪ್ರಮುಖ ಉದ್ದೇಶವಾಗಿ ಇಟ್ಟುಕೊಂಡಿರುವ ಕರ್ನಾಟಕ ಬ್ಯಾಂಕ್ ಇದೀಗ ಕೋರ್ ಬ್ಯಾಂಕಿಂಗ್, ಅನ್ ಲೈನ್ ಬ್ಯಾಂಕಿಂಗ್ ನಂತಹ ಸೇವೆಗಳನ್ನು ಗ್ರಾಹಕರಿಗಾಗಿ ನೀಡುತ್ತಿದ್ದು ಸರ್ಕಾರಿ ಬ್ಯಾಂಕುಗಳಿಗಿಂತ ಹೆಚ್ಚಿನ ಸೇವೆಯನ್ನು ಒದಗಿಸಲು ಬದ್ದವಾಗಿದೆ. ಹಾಗಾಗಿ ತಾಲ್ಲೂಕಿನ ರೇಷ್ಮೆಬೆಳೆಗಾರರು ಸೇರಿದಂತೆ ಹೈನುಗಾರಿಕೆ ಮಾಡುವಂತಹ ರೈತರು ತಮ್ಮ ಬ್ಯಾಂಕಿನಲ್ಲಿ ಖಾತೆಯನ್ನು ತೆರೆದು ವ್ಯವಹಾರ ನಡೆಸಿ ಆರ್ಥಿಕವಾಗಿ ಮುಂದುವರೆಯಬೇಕು ಎಂದರು.
ತಹಸೀಲ್ದಾರ್ ಎಸ್.ಅಜಿತ್‌ಕುಮಾರ್‌ರೈ ಮಾತನಾಡಿ ಈಚೆಗೆ ಪ್ರದಾನಿ ನರೇಂದ್ರಮೋದಿ ಅವರು ೫೦೦ ಹಾಗೂ ೧೦೦೦ ರೂ ಮುಖಬೆಲೆಯ ನೋಟು ನಿಷೇದಿಸಿದ ಪರಿಣಾಮ ಇದೀಗ ಬಹುತೇಕ ಜನರು ಆನ್ ಲೈನ್ ಬ್ಯಾಂಕಿಂಗ್ ನತ್ತ ಒಲವು ತೋರುತ್ತಿದ್ದಾರೆ.
ಆನ್ ಲೈನ್ ಬ್ಯಾಂಕಿಂಗ್ ಬಳಸುವುದರಿಂದ ತಮ್ಮ ಸಮಯ ಉಳಿಸುವುದು ಸೇರಿದಂತೆ ದೇಶವನ್ನು ಕಪ್ಪು ಹಣ ದಿಂದ ಮುಕ್ತಿಗೊಳಿಸಬಹುದು. ಬ್ಯಾಂಕ್ ಶಾಖೆಗೆ ಹೋಗದೆ ನಾವು ಇರುವ ಸ್ಥಳದಿಂದಲೇ ಹಣ ಪಾವತಿ ಮಾಡಬಹುದು.
ಬಸ್ ಟಿಕೆಟ್, ರೈಲ್ವೆ ಟಿಕೆಟ್ ಮುಂತಾದುವುಗಳನ್ನು ಆನ್‌ಲೈನ್‌ನಲ್ಲೆ ಖರೀದಿಸುವ ಅವಕಾಶ ಇದ್ದು ವಿದ್ಯುಚ್ಚಕ್ತಿ, ದೂರವಾಣಿ, ನೀರಿನ ಬಿಲ್ ಸೇರಿದಂತೆ ಮತ್ತಿತರ ಬಿಲ್ಲುಗಳನ್ನು ಕುಳಿತ ಸ್ಥಳದಿಂದಲೇ ಪಾವತಿಸಬಹುದು. ಹಾಗಾಗಿ ಪ್ರತಿಯೊಬ್ಬರೂ ಬ್ಯಾಂಕಿನ ಖಾತೆ ತೆರೆದು ನೂತನ ತಂತ್ರಜ್ಞಾನದೊಂದಿಗೆ ಜೀವನ ನಡೆಸುವುದನ್ನು ರೂಡಿಸಿಕೊಳ್ಳಬೇಕು ಎಂದರು.
ಕರ್ನಾಟಕ ಬ್ಯಾಂಕ್‌ನ ಉಪ ಮಹಾ ಪ್ರಬಂಧಕ ರಾಜಕುಮಾರ್, ಮಳಮಾಚನಹಳ್ಳಿ ಎಂಪಿಸಿಎಸ್ ಅಧ್ಯಕ್ಷ ಕೃಷ್ಣಪ್ಪ, ಬ್ಯಾಂಕಿನ ಮುಖ್ಯ ವ್ಯವಸ್ಥಾಪಕ ಡಾ.ನಾಗರಾಜ್, ಶಾಖೆಯ ವ್ಯವಸ್ಥಾಪಕ ಎಚ್.ಎಸ್.ವೆಂಕಟೇಶ್, ಎಂಪಿಸಿಎಸ್ ಕಾರ್ಯದರ್ಶಿ ಚಂದ್ರಾಚಾರಿ ಸೇರಿದಂತೆ ಗ್ರಾಮದ ಮುಖಂಡರು ಹಾಜರಿದ್ದರು.
- Advertisement -
- Advertisement -
- Advertisement -