ಸುಮಾರು ಅರವತ್ತು ವರ್ಷಗಳು ಸೃಜನಶೀಲ ಬರವಣಿಗೆಯಲ್ಲಿ ತೊಡಗಿದ್ದವರು ಅಡಿಗರು. ನವ್ಯ ಸಂವೇದನೆಯ ಹರಿಕಾರರಾಗಿ ನೂತನ ರೀತಿಯ ಕಲಾತ್ಮಕತೆಯಿಂದ ಕಾವ್ಯಶಿಲ್ಪಗಳನ್ನು ಸೃಷ್ಟಿಸಿದ ಧೀಮಂತ ಕವಿ ಅಡಿಗರು ಎಂದು ಕಸಾಪ ತಾಲ್ಲೂಕು ಘಟಕದ ಅಧ್ಯಕ್ಷ ಬಿ.ಆರ್.ಅನಂತಕೃಷ್ಣ ತಿಳಿಸಿದರು.
ನಗರದ ದಿ ಕ್ರೆಸೆಂಟ್ ಶಾಲೆಯ ಆವರಣದಲ್ಲಿ ಭಾನುವಾರ ಸಂಜೆ ಕಸಾಪ ತಾಲ್ಲೂಕು ಘಟಕ ಮತ್ತು ಕನ್ನಡ ರಕ್ಷಣಾ ವೇದಿಕೆ ನಾರಾಯಣ ಗೌಡ ಬಣದ ತಾಲ್ಲೂಕು ಘಟಕದ ಸಹಯೋಗದೊಂದಿಗೆ ನಡೆದ ಕವಿ ಗೋಪಾಲಕೃಷ್ಣ ಅಡಿಗರ ಜನ್ಮಶತಮಾನೋತ್ಸವ ಸಂಭ್ರಮ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.
ಐವತ್ತೊಂದನೆಯ ಕನ್ನಡ ಸಾಹಿತ್ಯ ಸಮ್ಮೇಳನದ ಅಧ್ಯಕ್ಷರಾಗಿ ಗೌರವಿಸಲ್ಪಟ್ಟ ಅಡಿಗರು ರಾಜ್ಯ ಸಾಹಿತ್ಯ ಅಕಾಡೆಮಿ, ಕೇಂದ್ರ ಸಾಹಿತ್ಯ ಅಕಾಡೆಮಿ, ಕೇರಳದ ಕುಮಾರ್ ಆಸಾನ್ ಪ್ರಶಸ್ತಿ, ಕಬೀರ್ ಸಮ್ಮಾನ್ ಪ್ರಶಸ್ತಿಗಳನ್ನು ಪಡೆದರು. ‘ಸಾಕ್ಷಿ’ ಪತ್ರಿಕೆಯ ಸಂಪಾದಕರಾಗಿ ಹೊಸ ಸಂವೇದನೆ ಹಾಗೂ ಹೊಸ ಅಭಿವ್ಯಕ್ತಿ ವಿಧಾನಗಳಿಗೆ ಮಾರ್ಗದರ್ಶಕರಾದ ಅಡಿಗರು ತಮ್ಮ ಕಿರಿಯ ತಲೆಮಾರಿನವರ ಮೇಲೆ ಬೀರಿದ ಪ್ರಭಾವ, ಅವರ ಓರಗೆಯ ಮತ್ತು ಹಿರಿಯ ತಲೆಮಾರಿನವರಿಗೆ ಒಡ್ಡಿದ ಸವಾಲುಗಳು ಕನ್ನಡ ಆಧುನಿಕ ಸಾಹಿತ್ಯ ಚರಿತ್ರೆಯಲ್ಲಿ ಮಹತ್ವದ ಸಂಗತಿಯಾಗಿದೆ ಎಂದರು.
ಅರವತ್ತರ ದಶಕದ ಕೊನೆಯಲ್ಲಿ ಆರಂಭವಾಗಿ ಎಂಭತ್ತರ ದಶಕದ ತನಕ ಸುಮಾರು ಎರಡು ದಶಕಗಳ ಕಾಲ ಅಡಿಗರು ಸಂಪಾದಿಸಿದ ‘ಸಾಕ್ಷಿ’ ತ್ರೈಮಾಸಿಕ ಕನ್ನಡಿಗರ ಮನಸ್ಸನ್ನು ಆಳವಾಗಿ, ವಿಸ್ತಾರವಾಗಿ, ಮುಕ್ತ, ಪ್ರಾಮಾಣಿಕ, ಚಿಂತನಶೀಲತೆಯಲ್ಲಿ ಬೆಳೆಸಿದೆ. ಕನ್ನಡದ ಶ್ರೇಷ್ಠ ಕತೆಗಾರರ ಮಹತ್ವದ ಕತೆಗಳೆಲ್ಲ ಮೊದಲ ಬಾರಿಗೆ ‘ಸಾಕ್ಷಿ’ಯಲ್ಲಿ ಪ್ರಕಟವಾಗಿದ್ದವು. ಯಶವಂತ ಚಿತ್ತಾಲ, ದೇವನೂರು ಮಹಾದೇವ, ಕೆ.ಸದಾಶಿವ, ಎ.ಎನ್.ಪ್ರಸನ್ನ, ವೈದೇಹಿ, ರಾಜಶೇಖರ ನೀರಮಾನ್ವಿ, ಟಿ.ಜಿ.ರಾಘವ, ಪೂರ್ಣ ಚಂದ್ರ ತೇಜಸ್ವಿ ಮುಂತಾದವರ ಕಥೆಗಳು ‘ಸಾಕ್ಷಿ’ಯಲ್ಲಿ ಪ್ರಕಟವಾಗಿವೆ.
ಅಡಿಗರನ್ನು ನವ್ಯ ಕಾಲದ ಪ್ರವರ್ತಕರನ್ನಾಗಿ ಗುರುತಿಸುತ್ತ ‘ಒಂದು ಜನಾಂಗದ ಕಣ್ಣು ತೆರೆಸಿದ ಕವಿ’ ಎಂದು ಲಂಕೇಶ್ ಕರೆದಿದ್ದರು. ಹೊಸತು ಹಳೆಯದರ ಜೊತೆಗೂ, ಹಳೆಯದು ಹೊಸದರ ಜೊತೆಗೂ ಹೊಂದಿಕೊಳ್ಳದೆ ಬದುಕು ಸುಸಂಸ್ಕೃತವಾಗುವುದಿಲ್ಲ, ಕಾವ್ಯವು ಶ್ರೇಷ್ಠವಾಗುವುದಿಲ್ಲ ಎಂದು ಅಡಿಗರು ನಂಬಿದ್ದರು. ‘ತನ್ನತನದ ಅರಿವು ಮನುಷ್ಯತ್ವದ ವಿಶೇಷ ಲಕ್ಷಣ. ಆತ್ಮಸಾಕ್ಷಿಯಿಂದ ಮನುಷ್ಯನಿಗೆ ಬಿಡುಗಡೆಯಿಲ್ಲ. ಮನುಷ್ಯತ್ವದ ವಿಶೇಷ ಲಕ್ಷಣವಾದ ಈ ಸಾಕ್ಷಿ ಪ್ರಜ್ಞೆಯ ಬೆಳವಣಿಗೆಯೇ ಮನುಷ್ಯನ ನಿಜವಾದ ಬೆಳವಣಿಗೆ. ಕೇವಲ ಸಾಹಿತ್ಯೋಪಾಸನೆಯಿಂದ ಯಾವ ಭಾಷೆಯೂ ಬೆಳೆಯುವುದಿಲ್ಲ ಮಾತ್ರವಲ್ಲ, ಸಾಹಿತ್ಯವೂ ಬೆಳೆಯಲಾರದು. ಆಗಬೇಕಾದ್ದು ಒಟ್ಟು ಮನಸ್ಸಿನ ಕೆಲಸ. ಅಂತರಂಗ ವಿಕಸನವಾಗಬೇಕು’ ಎಂದು ಅಡಿಗರು ಹೇಳುತ್ತಿದ್ದರು ಎಂದು ವಿವರಿಸಿದರು.
ಕರವೇ ಜಿಲ್ಲಾಧ್ಯಕ್ಷ ಲೋಕೇಶ್, ತಾಲ್ಲೂಕು ಅಧ್ಯಕ್ಷ ನಾಗರಾಜ್, ಜಿಲ್ಲಾ ಉಪಾಧ್ಯಕ್ಷ ಸಯ್ಯದ್ ತಮೀಮ್ ಅನ್ಸಾರಿ, ಜಿಲ್ಲಾ ಕಾರ್ಯದರ್ಶಿ ದೇವರಾಜ್, ಶಬೀರ್ ಅಹಮದ್, ಎನ್.ಕೆ.ಗುರುರಾಜರಾವ್, ಕಸಾಪ ತಾಲ್ಲೂಕು ಕಾರ್ಯದರ್ಶಿ ಎ.ಎಂ.ತ್ಯಾಗರಾಜ್, ಸದಸ್ಯ ಗುರುನಂಜಪ್ಪ ಹಾಜರಿದ್ದರು.
- Advertisement -
- Advertisement -
- Advertisement -