ಗ್ರಾಹಕನನ್ನು ಮಾರುಕಟ್ಟೆಯ ‘ರಾಜ’ನೆಂದು ಪರಿಗಣಿಸಿದ್ದರೂ ವ್ಯಾಪಾರಿ ಸಂಸ್ಥೆಗಳು ನಿರಂತರವಾಗಿ ಅನುಚಿತ ವ್ಯಾಪಾರಿ ಪದ್ಧತಿಗಳಿಂದ ಅವನನ್ನು ಶೋಷಿಸುತ್ತಿವೆ. ಗ್ರಾಹಕನಲ್ಲಿ ಜಾಗೃತಿಯನ್ನು ಮೂಡಿಸಲು ಪ್ರತಿ ವರ್ಷ ಮಾರ್ಚ್ ೧೫ ರಂದು ಗ್ರಾಹಕನ ಹಕ್ಕುಗಳ ದಿನ ವೆಂದು ವಿಶ್ವದಾದ್ಯಂತ ಆಚರಿಸಲಾಗುತ್ತಿದೆ ಎಂದು ಹಿರಿಯ ಸಿವಿಲ್ ನ್ಯಾಯಾಧೀಶರಾದ ಡಿ.ಆರ್.ಮಂಜುನಾಥ್ ತಿಳಿಸಿದರು.
ನಗರದ ತಾಲ್ಲೂಕು ಕಚೇರಿ ಸಂಕೀರ್ಣದಲ್ಲಿ ಬುಧವಾರ ‘ವಿಶ್ವ ಗ್ರಾಹಕರ ಹಕ್ಕುಗಳ ದಿನಾಚರಣೆ’ ಅಂಗವಾಗಿ ತಾಲ್ಲೂಕು ಕಾನೂನು ಸೇವಾ ಸಮಿತಿಯಿಂದ ನಡೆದ ಕಾನೂನು ಅರಿವು ನೆರವು ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.
ಗ್ರಾಹಕರು ಅನೇಕ ಸಂದರ್ಭಗಳಲ್ಲಿ ಅವಶ್ಯಕ ಜ್ಞಾನವನ್ನು ಹೊಂದಿಲ್ಲದಿರುವುದರಿಂದ ತಮ್ಮ ಹಕ್ಕುಗಳನ್ನು ರಕ್ಷಿಸಿಕೊಳ್ಳುವಲ್ಲಿ ಅಥವಾ ವ್ಯಾಪಾರ ಸಂಸ್ಥೆಗಳ ಶೋಷಣೆಯ ವಿರುದ್ಧ ಧ್ವನಿ ಎತ್ತಲಾಗುತ್ತಿಲ್ಲ. ಆದುದರಿಂದ ಗ್ರಾಹಕರಿಗೆ ಸೂಕ್ತ ಶಿಕ್ಷಣ ಹಾಗೂ ಹಕ್ಕುಗಳ ಬಗ್ಗೆ ಮಾಹಿತಿಯನ್ನು ನೀಡುವುದರ ಮೂಲಕ ರಕ್ಷಿಸಬೇಕಾಗಿದೆ. ವ್ಯಾಪಾರ ಸಂಸ್ಥೆಗಳು ಅನುಚಿತ ವ್ಯಾಪಾರಿ ಪದ್ಧತಿಗಳಾದ ಕಲಬೆರಕೆ, ಕಾಳಸಂತೆ ವ್ಯಾಪಾರ, ತೂಕ ಮತ್ತು ಅಳತೆಯಲ್ಲಿ ಕೊರತೆ, ವಂಚನೆಯ ಜಾಹೀರಾತು, ಮುಂತಾದವುಗಳಿಂದ ಗ್ರಾಹಕನನ್ನು ಶೋಷಿಸುತ್ತಿರುವುದರಿಂದ ಗ್ರಾಹಕನ ಹಿತರಕ್ಷಣೆ ಅಗತ್ಯವಾಗಿದೆ ಎಂದು ಹೇಳಿದರು.
ಗ್ರಾಹಕರ ಹಿತರಕ್ಷಣಾ ಕಾಯ್ದೆಯನ್ನು ಗ್ರಾಹಕರ ಹಿತಾಸಕ್ತಿಯನ್ನು ಸಂರಕ್ಷಿಸುವ ಉದ್ದೇಶದಿಂದ ೧೯೮೬ ರಲ್ಲಿ ಜಾರಿಗೆ ತರಲಾಯಿತು. ಇದು ದೋಷಪೂರಿತ ವಸ್ತುಗಳು, ಅತೃಪ್ತಿದಾಯಕ ಸೇವೆಗಳು, ಅನುಚಿತ ವ್ಯಾಪಾರಿ ಪದ್ಧತಿಗಳು ಹಾಗೂ ಇತರೆ ಶೋಷಣೆಯ ವಿರುದ್ಧ ಪರಿಣಾಮಕಾರಿ ರಕ್ಷಣೆಯನ್ನು ಗ್ರಾಹಕರಿಗೆ ನೀಡುವ ಉದ್ದೇಶವನ್ನು ಹೊಂದಿದೆ. ಈ ಕಾಯ್ದೆ ಸರಕು ಮತ್ತು ಸೇವೆಗಳ ವಿರುದ್ಧ ದೂರುಗಳಿದ್ದಲ್ಲಿ ಇತ್ಯರ್ಥಪಡಿಸಲು ಕಾಲಮಿತಿಯ ಷರತ್ತನ್ನು ವಿಧಿಸಿದೆ. ಈ ಕಾನೂನಿನನ್ವಯ ಜಿಲ್ಲಾ, ರಾಜ್ಯ ಹಾಗೂ ರಾಷ್ಟ್ರಮಟ್ಟದಲ್ಲಿ ಗ್ರಾಹಕರ ದೂರುಗಳ ಪರಿಹಾರ ಸಂಸ್ಥೆಗಳನ್ನು ಸ್ಥಾಪಿಸಲಾಗಿದೆ. ಹಾಗೂ ರಾಜ್ಯಮಟ್ಟದಲ್ಲಿ ಗ್ರಾಹಕ ಹಿತರಕ್ಷಣಾ ಮಂಡಳಿಗಳನ್ನು ಸ್ಥಾಪಿಸಲಾಗಿದೆ. ಈ ಮಂಡಳಿಗಳು ಗ್ರಾಹಕರಿಗೆ ಸೂಕ್ತ ಶಿಕ್ಷಣವನ್ನು ನೀಡುವುದರ ಮೂಲಕ ಅವರ ಹಿತರಕ್ಷಣೆಯನ್ನು ಕಾಪಾಡುತ್ತಿದೆ ಎಂದು ವಿವರಿಸಿದರು.
ತಹಶೀಲ್ದಾರ್ ಅಜಿತ್ ಕುಮಾರ್ ರೈ ಮಾತನಾಡಿ, ಗ್ರಾಹಕರ ಹಿತರಕ್ಷಣಾ ಕಾಯ್ದೆಯ, ೧೯೮೬ ಅನ್ವಯ ಹಲವು ಹಕ್ಕುಗಳು ಗ್ರಾಹಕರಿಗೆ ದೊರೆಯುತ್ತಿವೆ. ಸುರಕ್ಷತೆಯ ಹಕ್ಕು, ಮಾಹಿತಿ ಪಡೆಯುವ ಹಕ್ಕು, ಆಯ್ಕೆಯ ಹಕ್ಕು, ಆಲಿಸುವ ಹಕ್ಕು, ಕುಂದುಕೊರತೆಗಳನ್ನು ನಿವಾರಿಸಿಕೊಳ್ಳುವ ಹಕ್ಕು, ಗ್ರಾಹಕರ ಶಿಕ್ಷಣದ ಹಕ್ಕು ಮುಂತಾದವುಗಳಿದ್ದು ಅವುಗಳ ಬಗ್ಗೆ ಮಾಹಿತಿಯನ್ನು ಹೊಂದಿದಾಗ ಮಾತ್ರ ಅನ್ಯಾಯವಾಗುವುದಿಲ್ಲ ಎಂದು ಹೇಳಿದರು.
ಸಂಪನ್ಮೂಲ ಭಾಷಣಕಾರರಾದ ವಕೀಲ ಸಿ.ಜಿ.ಭಾಸ್ಕರ್ ಗ್ರಾಹಕರ ಕಾಯ್ದೆಯ ಬಗ್ಗೆ ಮಾತನಾಡಿದರು.
ಪ್ರಧಾನ ಸಿವಿಲ್ ನ್ಯಾಯಾಧೀಶರು ಎನ್.ಎ.ಶ್ರೀಕಂಠ, ಸಿವಿಲ್ ನ್ಯಾಯಾಧೀಶರು ಟಿ.ಎಲ್.ಸಂದೀಶ್, ತಾಲ್ಲೂಕು ವಕೀಲರ ಸಂಘದ ಅಧ್ಯಕ್ಷ ಎಂ.ಪಾಪಿರೆಡ್ಡಿ, ಕಾರ್ಯದರ್ಶಿ ವಿ.ಎಂ.ಬೈರಾರೆಡ್ಡಿ, ವಕೀಲರಾದ ವೀಣಾ, ಮುನಿರಾಜು ಹಾಜರಿದ್ದರು.
- Advertisement -
- Advertisement -
- Advertisement -