ಬಯಲುಸೀಮೆಯ ಮೂಲಭೂತ ಅಗತ್ಯವಾದ ಕುಡಿಯುವ ನೀರು ಮತ್ತು ಕೃಷಿಗೆ ನೀರಿಗಾಗಿ ಶಾಶ್ವತವಾದ ಯೋಜನೆ ರೂಪಿಸಲು ಕಟಿಬದ್ಧರಾಗಿರುವ ಜೆಡಿಎಸ್ ರಾಜ್ಯಾಧ್ಯಕ್ಷ ಎಚ್.ಡಿ.ಕುಮಾರಸ್ವಾಮಿ ಅವರ ಸಂಕಲ್ಪಕ್ಕೆ ದೇವರು ಶಕ್ತಿ ನೀಡಲೆಂದು ಜೆಡಿಎಸ್ ಕಾರ್ಯಕರ್ತರು ತಾಲ್ಲೂಕಿನ ನೂರಾರು ಭಕ್ತರನ್ನು ಆದಿಪರಾಶಕ್ತಿಯ ದರ್ಶನಕ್ಕೆ ಕಳುಹಿಸುತ್ತಿದ್ದಾರೆ ಎಂದು ಶಾಸಕ ಎಂ.ರಾಜಣ್ಣ ತಿಳಿಸಿದರು.
ತಾಲ್ಲೂಕಿನ ಚಿಕ್ಕದಾಸರಹಳ್ಳಿಯ ಬ್ಯಾಟರಾಯಸ್ವಾಮಿ ದೇವಾಲಯದ ಮುಂದೆ ಬುಧವಾರ ಜೆಡಿಎಸ್ ಕಾರ್ಯಕರ್ತರು ಆಯೋಜಿಸಿದ್ದ ಮೇಲ್ಮರುವತ್ತೂರಿನ ಆದಿಪರಾಶಕ್ತಿ ದೇವಾಲಯಕ್ಕೆ ಯಾತ್ರೆಗೆ 14 ಬಸ್ಸುಗಳಲ್ಲಿ ತೆರಳಿದ 770 ಮಂದಿ ಭಕ್ತರಿಗೆ ಶುಭ ಕೋರಿ ಬೀಳ್ಕೊಟ್ಟು ಅವರು ಮಾತನಾಡಿದರು.
ಶಿಡ್ಲಘಟ್ಟ ವಿಧಾನಸಭಾ ಕ್ಷೇತ್ರದಿಂದ ಆದಿಪರಾಶಕ್ತಿಯ ಸನ್ನಿಧಿಗೆ ತೆರಳುತ್ತಿರುವ ಭಕ್ತರು ನಮ್ಮ ಭಾಗದ ಮಳೆ ಬೆಳೆಗಾಗಿ ಪ್ರಾರ್ಥಿಸಲಿ. ನಾಡು ಸುಭಿಕ್ಷವಾಗಿದ್ದರೆ, ಜನರೂ ಏಳಿಗೆ ಕಾಣುತ್ತಾರೆ. ಶ್ರದ್ಧಾಭಕ್ತಿಯಿಂದ ವ್ರತವನ್ನು ಆಚರಿಸಿ ಪೂಜಿಸುವ ಮನಸ್ಸುಗಳಿಗೆ ದೇವರು ಅನುಗ್ರಹಿಸುತ್ತಾರೆ. ದೇವರ ಅನುಗ್ರಹವಿದ್ದಲ್ಲಿ ನಮ್ಮ ಬಾಳು ಹಸನಾಗುತ್ತದೆ. ಮುಂದಿನ ಮುಖ್ಯಮಂತ್ರಿಯಾಗಿ ರಾಜ್ಯದ ಅಭಿವೃದ್ಧಿಯನ್ನು ಕುಮಾರಸ್ವಾಮಿಯವರು ಮಾಡಲು ತಾಯಿ ಶಕ್ತಿಯನ್ನು ನೀಡಲಿ ಎಂದು ಹೇಳಿದರು.
ಜೆಡಿಎಸ್ ಮುಖಂಡ ಮೇಲೂರು ಬಿ.ಎನ್.ರವಿಕುಮಾರ್ ಮಾತನಾಡಿ, ಬಯಲುಸೀಮೆಯ ಜಿಲ್ಲೆಗಳಿಗೆ ಶಾಶ್ವತ ನೀರಾವರಿ ಯೋಜನೆಯನ್ನು ಕಲ್ಪಿಸಲೆಂದು, ಅದಕ್ಕಾಗಿ ಮುಂದಿನ ವಿಧಾನಸಭೆಯ ಚುನಾವಣೆಯಲ್ಲಿ ಜೆಡಿಎಸ್ ಬಹುಮತವನ್ನು ಪಡೆದು ಎಚ್.ಡಿ.ಕುಮಾರಸ್ವಾಮಿ ಅವರು ಮುಖ್ಯಮಂತ್ರಿ ಆಗಲೆಂದು ದೇವರ ಆಶೀರ್ವಾದಕ್ಕಾಗಿ ಜೆಡಿಎಸ್ ಕಾರ್ಯಕರ್ತರು ಓಂ ಶಕ್ತಿ ದೇವಾಲಯಕ್ಕೆ ಭಕ್ತರಿಗೆ ಯಾತ್ರೆಯನ್ನು ಆಯೋಜಿಸಿದ್ದಾರೆ. ಇತ್ತೀಚೆಗಷ್ಟೆ ನಡೆದ ಎಚ್.ಡಿ.ಕುಮಾರಸ್ವಾಮಿ ಮತ್ತು ರೇವಣ್ಣನವರ ಹುಟ್ಟಿದ ಹಬ್ಬದ ಪ್ರಯುಕ್ತ ಆದಿಪರಾಶಕ್ತಿಯ ದರ್ಶನಕ್ಕೆ ಶಿಡ್ಲಘಟ್ಟ ವಿಧಾನಸಭಾ ಕ್ಷೇತ್ರದಿಂದ ಸುಮಾರು ನಾಲ್ಕು ಸಾವಿರ ಮಂದಿಯನ್ನು ಹಂತಹಂತವಾಗಿ ಕಳುಹಿಸುತ್ತಿರುವುದಾಗಿ ಹೇಳಿದರು.
ತಾಲ್ಲೂಕು ಪಂಚಾಯಿತಿ ಅಧ್ಯಕ್ಷ ಕೆ.ಲಕ್ಷ್ಮೀನಾರಾಯಣರೆಡ್ಡಿ, ಉಪಾಧ್ಯಕ್ಷ ಎಚ್.ನರಸಿಂಹಯ್ಯ, ಮೇಲೂರು ಮಾಜಿ ಗ್ರಾಮ ಪಂಚಾಯಿತಿ ಅಧ್ಯಕ್ಷ ಕೆ.ಎಸ್.ಮಂಜುನಾಥ್, ಮಳಮಾಚನಹಳ್ಳಿ ಬೈರೇಗೌಡ, ತಾದೂರು ರಘು, ಪುರಸಭೆ ಸದಸ್ಯ ವೆಂಕಟಸ್ವಾಮಿ, ಜೆಡಿಎಸ್ ತಾಲ್ಲೂಕು ಅಧ್ಯಕ್ಷ ಡಾ.ಧನಂಜಯರೆಡ್ಡಿ, ತಾಲ್ಲೂಕು ಪಂಚಾಯಿತಿ ಸದಸ್ಯ ರಾಜಶೇಖರ್, ಶ್ರೀನಿವಾಸಗೌಡ, ಜಂಗಮಕೋಟೆ ವೆಂಕಟೇಶ್ ಮತ್ತಿತರರು ಹಾಜರಿದ್ದರು.
- Advertisement -
- Advertisement -
- Advertisement -