ಬಾಬು ಜಗಜೀವನರಾಂ ಯಾವುದೇ ಒಂದು ಜಾತಿ, ಧರ್ಮಕ್ಕೆ ಸೀಮಿತವಾದವರಲ್ಲ ಬದಲಿಗೆ ಅವರು ಇಡೀ ದೇಶದ ಆಸ್ತಿಯಾಗಿದ್ದಾರೆ ಎಂದು ಶಾಸಕ ಎಂ.ರಾಜಣ್ಣ ಹೇಳಿದರು.
ಬಾಬು ಜಗಜೀವನರಾಂರ ೧೦೯ ನೇ ಜನ್ಮದಿನದ ಅಂಗವಾಗಿ ಮಂಗಳವಾರ ತಾಲ್ಲೂಕಿನ ವಿವಿದೆಡೆ ಬಾಬು ಜಗಜೀವನರಾಂ ಭವನ ಹಾಗು ಸಮುದಾಯ ಭವನಗಳ ನಿರ್ಮಾಣಕ್ಕೆ ಶಂಕುಸ್ಥಾಪನೆ ನೆರವೇರಿಸಿ ಅವರು ಮಾತನಾಡಿದರು.
ಸ್ವಾತಂತ್ರ್ಯ ಪೂರ್ವದಲ್ಲಿ ದೇಶದ ಶೋಷಿತವರ್ಗ ಅನುಭವಿಸುತ್ತಿದ್ದ ಸಂಕಷ್ಟಗಳನ್ನು ಹೋಗಲಾಡಿಸುವ ಸಲುವಾಗಿ ಡಾ.ಅಂಬೇಡ್ಕರ್ ಸಂವಿಧಾನ ರಚಿಸಿದರೆ ಅದನ್ನು ಅನುಷ್ಠಾನ ಗೊಳಿಸುವಲ್ಲಿ ಸಂಪೂರ್ಣ ಜವಾಬ್ದಾರಿ ವಹಿಸಿಕೊಂಡು ಕಾರ್ಯರೂಪಕ್ಕೆ ತಂದ ಕೀರ್ತಿ ಡಾ. ಬಾಬು ಜಗಜೀವನರಾಮ್ ರವರಿಗೆ ಸಲ್ಲುತ್ತದೆ.
ದೇಶದ ಸ್ವಾತಂತ್ರ್ಯಕ್ಕಾಗಿ ಹೋರಾಡಿ ದೇಶದಲ್ಲಿ ಹಸಿರು ಕ್ರಾಂತಿಯನ್ನು ತಂದಂತಹ ಇಂತಹ ಮಹಾನ್ ವ್ಯಕ್ತಿಯ ಜನ್ಮದಿನಾಚರಣೆ ಅಂಗವಾಗಿ ಮಂಗಳವಾರವಾದರೂ ಜನರಲ್ಲಿರುವ ಮೂಡನಂಬಿಕೆ ಹಾಗು ಮೌಡ್ಯತೆಯನ್ನು ಹೋಗಲಾಡಿಸುವ ದೃಷ್ಠಿಯಿಂದ ತಾಲ್ಲೂಕಿನಲ್ಲಿ ಐದು ಸಮುದಾಯ ಭವನಗಳ ನಿರ್ಮಾಣಕ್ಕೆ ಶಂಕುಸ್ಥಾಪನೆ ನೆರವೇರಿಸುತ್ತಿದ್ದೇವೆ ಎಂದರು.
ತಾಲ್ಲೂಕಿನ ಗಂಭೀರನಹಳ್ಳಿ ಸೇರಿದಂತೆ ಚಿಕ್ಕದಾಸರಹಳ್ಳಿ, ವೈ ಹುಣಸೇನಹಳ್ಳಿ, ಗಂಜಿಗುಂಟೆ ಗ್ರಾಮಗಳಲ್ಲಿ ತಲಾ ೧೦ ಲಕ್ಷ ರೂ ಗಳ ವೆಚ್ಚದಲ್ಲಿ ಬಾಬು ಜಗಜೀವನರಾಂ ಭವನ ಹಾಗು ಚಿಂತಡಿಪಿ ಗ್ರಾಮದಲ್ಲಿ ಸಮುದಾಯ ಭವನಕ್ಕೆ ಶಂಕುಸ್ಥಾಪನೆ ನೆರವೇರಿಸಲಾಯಿತು.
ತಾಲ್ಲೂಕು ಸಮಾಜ ಕಲ್ಯಾಣಾಧಿಕಾರಿ ಪುರುಷೋತ್ತಮ್, ಚೀಮಂಗಲ ಜಿಲ್ಲಾ ಪಂಚಾಯತಿ ಸದಸ್ಯೆ ತನುಜಾರಘು, ತಾಲ್ಲೂಕು ಪಂಚಾಯತಿ ಸದಸ್ಯ ರಾಜಶೇಖರ್ ಮುಖಂಡರಾದ ಬ್ಯಾಟರಾಯಶೆಟ್ಟಿ, ಬೈರೇಗೌಡ, ದಾಮೋದರ್ ಮತ್ತಿತರರು ಈ ಸಂದರ್ಭದಲ್ಲಿ ಹಾಜರಿದ್ದರು.
- Advertisement -
- Advertisement -
- Advertisement -