ಮುಖ್ಯಾಂಶಗಳು…
–ಜಿಲ್ಲೆಯ ಏಕೈಕ ಸ್ಪನ್ ರೇಷ್ಮೆ ತಯಾರಿಕಾ ಘಟಕ ಶಿಡ್ಲಘಟ್ಟದಲ್ಲಿ
–ಯೂರೋಪ್, ಚೀನಾ, ಅಮೆರಿಕಾಕ್ಕೆ ರಫ್ತಾಗುತ್ತಿದೆ ರೇಷ್ಮೆ
–ಘಟಕದ ಶುದ್ಧೀಕರಿಸಿದ ನೀರಿನಿಂದ 6 ಎಕರೆ ಹಿಪ್ಪು ನೇರಳೆ ಬೆಳೆ
ಶಿಡ್ಲಘಟ್ಟದ ರೇಷ್ಮೆ ಬಹಳ ಪ್ರಸಿದ್ಧಿ. ಇಲ್ಲಿ ತಯಾರಾಗುವ ರೇಷ್ಮೆ ದೂರದೂರುಗಳಿಗೆ ಹೋಗುತ್ತದೆ ಮತ್ತು ನೀರೆಯರು ಇಷ್ಟಪಡುವ ಸೀರೆಗಳಾಗಿ ಅಂದ ಚಂದಗಳನ್ನು ಹೆಚ್ಚಿಸುತ್ತವೆ.
ಶಿಡ್ಲಘಟ್ಟದಲ್ಲಿ ತಯಾರಾಗುವ ಕಚ್ಛಾರೇಷ್ಮೆಗೆ ಬಣ್ಣ, ಹೊಳಪು ಮತ್ತು ಹಿಗ್ಗುವಿಕೆ(ಎಲಾಸ್ಟಿಸಿಟಿ) ಗುಣವಿರುತ್ತೆ. ಹಾಗಾಗಿ ಈ ರೇಷ್ಮೆಯು ಸೀರೆ ತಯಾರಿಸಲು ಕಂಚಿಗೆ, ಜರಿ ತಯಾರಿಸಲು ಸೂರತ್ಗೆ ಹೆಚ್ಚಾಗಿ ಹೋಗುತ್ತೆ.
ಕೇವಲ ದೇಶೀಯ ಮಾರುಕಟ್ಟೆಯನ್ನಷ್ಟೇ ಅಲ್ಲದೆ ಶಿಡ್ಲಘಟ್ಟದ ರೇಷ್ಮೆ ವಿದೇಶದ ಮಾರುಕಟ್ಟೆಯನ್ನೂ ಪ್ರವೇಶಿಸಿದೆ ಎಂಬುದು ಬಹುತೇಕರಿಗೆ ತಿಳಿದಿಲ್ಲ. ಸ್ಪನ್ ರೇಷ್ಮೆ ಎಂದು ಕರೆಯಲ್ಪಡುವ ಶಿಡ್ಲಘಟ್ಟದಲ್ಲಿ ತಯಾರಾಗುವ ರೇಷ್ಮೆಯು ಯೂರೋಪ್ ಹಾಗೂ ಅಮೇರಿಕಾ ದೇಶಗಳಿಗೆ ರಫ್ತಾಗುತ್ತಿದೆ.
ಜಿಲ್ಲೆಯಲ್ಲಿಯೇ ಏಕೈಕ ಸ್ಪನ್ ರೇಷ್ಮೆ ತಯಾರಿಕಾ ಘಟಕವನ್ನು ನಗರದ ಇದ್ಲೂಡು ರಸ್ತೆಯಲ್ಲಿ ಸ್ಥಾಪಿಸಿರುವ ಸಯ್ಯದ್ ಅನ್ಸರ್ ಪಾಷ ಚೀನಾ, ಇಂಗ್ಲೆಂಡ್, ಇಟಲಿ, ಅಮೇರಿಕಾ ದೇಶಗಳಿಗೆ ಶಿಡ್ಲಘಟ್ಟದ ರೇಷ್ಮೆಯನ್ನು ಪರಿಚಯಿಸಿದ್ದಾರೆ.
ಕಚ್ಛಾ ರೇಷ್ಮೆ ತಯಾರಿಕಾ ಘಟಕದಲ್ಲಿ ಉತ್ಪಾದನೆಯಾಗುವ ಜೋಟ್ ಎಂಬ ಒಣತ್ಯಾಜ್ಯವನ್ನು ವಿವಿಧ ಹಂತಗಳಲ್ಲಿ ಸಂಸ್ಕರಿಸಿದ ನಂತರ ತಯಾರಾಗುವುದೇ ಸ್ಪನ್ ಸಿಲ್ಕ್. ವಿಶ್ವದೆಲ್ಲೆಡೆ ತಯಾರಾಗುವ ಉತ್ಕೃಷ್ಟ ದರ್ಜೆಯ ಕಾರ್ಪೆಟ್, ವಿವಿಧ ವಸ್ತ್ರದ ತಯಾರಿಕೆಗಳಲ್ಲಿ ಸ್ಪನ್ ರೇಷ್ಮೆ ಬಳಕೆಯಾಗುತ್ತದೆ.
ಸ್ಪನ್ ರೇಷ್ಮೆ ತಯಾರಿಕಾ ಘಟಕದಲ್ಲಿ ವಿವಿಧ ಹಂತಗಳಲ್ಲಿ ರೇಷ್ಮೆ ಹಾದು ನೂಲಾಗಿ ತಯಾರಾಗುತ್ತದೆ. ಅದಕ್ಕಾಗಿ ಹಲವಾರು ಯಂತ್ರೋಪಕರಣಗಳು ಹಾಗೂ ನುರಿತ ಕೆಲಸಗಾರರು ಬೇಕು. ರೇಷ್ಮೆಯಲ್ಲಿ ಸ್ಥಿರವಿದ್ಯುತ್ ಪ್ರವಹಿಸುವುದರಿಂದ ಈ ಘಟಕದಲ್ಲಿ ಆರ್ಧ್ರತೆ(ಹುಮಿಡಿಟಿ) ಕಾಪಾಡಿಕೊಳ್ಳುವ ವ್ಯವಸ್ಥೆಯಿರಬೇಕು. ಹೆಚ್ಚು ರೇಷ್ಮೆ ಉತ್ಪಾದನೆಯಾಗುವ ತಾಲ್ಲೂಕಿನಲ್ಲಿ ಸ್ಪನ್ ರೇಷ್ಮೆಯ ಕಚ್ಛಾ ಪದಾರ್ಥ ಜೋಟ್ ಅನ್ನು ಸ್ಥಳೀಯವಾಗಿ ಖರೀದಿಸುವುದರಿಂದ ಉತ್ತಮ ಬೆಲೆ ಕೂಡ ಸಿಗುತ್ತಿದೆ. ರೀಲರುಗಳಿಗೆ ಅನುಕೂಲವಾಗಿದೆ.
ರೇಷ್ಮೆಗೆ ಮೂಲವಾದ ಹಿಪ್ಪುನೇರಳೆ ಸೊಪ್ಪಿನ ತೋಟವೂ ಸಹ ಈ ಎಸ್.ಪಿ.ಎಸ್.ಎ ಸಿಲ್ಕ್ಸ್ ಎಂಬ ಹೆಸರಿನ ಸ್ಪನ್ ರೇಷ್ಮೆ ತಯಾರಿಕಾ ಘಟಕಕ್ಕೆ ಹೊಂದಿಕೊಂಡಿದ್ದು, ಘಟಕದಲ್ಲಿ ಬಳಸುವ ನೀರನ್ನು ಶುದ್ಧೀಕರಿಸಿ ತೋಟಕ್ಕೆ ಬಳಸಲಾಗುತ್ತಿದೆ.
‘ಶಿಡ್ಲಘಟ್ಟದಲ್ಲಿಯೇ ಹುಟ್ಟಿ ಬೆಳೆದ ನಾನು ವಿದ್ಯಾಭ್ಯಾಸ ಮುಗಿಸಿ ರೇಷ್ಮೆ ವ್ಯಾಪಾರದಲ್ಲಿ ತೊಡಗಿಸಿಕೊಂಡೆ. ನಮ್ಮ ತಾತನ ಕಾಲದಿಂದಲೂ ಕಚ್ಛಾ ರೇಷ್ಮೆ ತಯಾರಿಸಿ ಮಾರುವುದು ಕಸುಬಾಗಿತ್ತು. ಇದರೊಂದಿಗೆ ಸ್ಪನ್ ರೇಷ್ಮೆ ತಯಾರಿಕಾ ಘಟಕಗಳಿಗೆ ಜೋಟ್ ಮಾರಾಟ ಮಾಡುತ್ತಿದ್ದೆ. ಆಗ ನಮ್ಮೂರಿನಲ್ಲಿ ಒಂದು ಸ್ಪನ್ ರೇಷ್ಮೆ ತಯಾರಿಕಾ ಘಟಕ ಪ್ರಾರಂಭಿಸುವ ಆಲೋಚನೆ ಬಂದು ಸ್ಥಳೀಯವಾಗಿ ಸಣ್ಣ ಮಟ್ಟದಲ್ಲಿ 2001ರಲ್ಲಿ ಘಟಕವನ್ನು ಪ್ರಾರಂಭಿಸಿದೆ. ಒಂದೊಂದೇ ಹಂತದ ಸಂಸ್ಕರಣೆಯನ್ನು ಮಾಡುತ್ತಾ ನಿಧಾನವಾಗಿ ಯಂತ್ರೋಪಕರಣವನ್ನು ಖರೀದಿಸುತ್ತಾ ಘಟಕವನ್ನು ವಿಸ್ತರಿಸಿದೆ. ಈಗ ಇಟಲಿಯ ಅತ್ಯುತ್ತಮ ಯಂತ್ರಗಳನ್ನು ಬಳಸಲಾಗುತ್ತಿದೆ. ವಿದೇಶಗಳಿಗೆ ಉತ್ಪನ್ನ ರಫ್ತಾಗುವುದರಿಂದ ನಮ್ಮ ಘಟಕದಲ್ಲಿ ಗುಣಮಟ್ಟಕ್ಕೆ ಆದ್ಯತೆ ನೀಡಿದ್ದೇವೆ’ ಎಂದು ಎಸ್.ಪಿ.ಎಸ್.ಎ ಸಿಲ್ಕ್ಸ್ನ ಸಯ್ಯದ್ ಅನ್ಸರ್ ಪಾಷ ವಿವರಿಸಿದರು.
‘ಕಚ್ಛಾ ಪದಾರ್ಥ ಜೋಟನ್ನು ನಮ್ಮ ಶಿಡ್ಲಘಟ್ಟ ತಾಲ್ಲೂಕು ಸೇರಿದಂತೆ, ಕೊಳ್ಳೇಗಾಲ, ರಾಮನಗರ, ತಮಿಳುನಾಡು, ಶ್ರೀನಗರ ಮುಂತಾದೆಡೆಯಿಂದ ಖರೀದಿಸುತ್ತೇವೆ. ಕಚ್ಛಾ ರೇಷ್ಮೆಯನ್ನು ಗುಣಮಟ್ಟದಲ್ಲಿ ತಯಾರಿಸುವಂತೆಯೇ ಅದರಿಂದ ಉತ್ಪಾದನೆಯಾಗುವ ಜೋಟ್ ಕೂಡ ಗುಣಮಟ್ಟವನ್ನು ಹೊಂದಿರಬೇಕು. ಚೀನಾ, ವಿಯೆಟ್ನಾಂ, ಬ್ರೆಜಿಲ್, ಉಜ್ಬೆಕಿಸ್ತಾನ ಮುಂತಾದ ದೇಶಗಳಿಗೆ ಹೋಲಿಸಿದರೆ ನಮ್ಮ ದೇಶದ ರೇಷ್ಮೆ ಒಣ ತ್ಯಾಜ್ಯದ ಬೆಲೆ ಕಡಿಮೆ. ಈ ಬಗ್ಗೆ ಕೇಂದ್ರ ರೇಷ್ಮೆ ಮಂಡಳಿ ರೈತರು ಮತ್ತು ರೀಲರುಗಳಿಗೆ ಕಾರ್ಯಾಗಾರವನ್ನು ನಡೆಸಿ ಉತ್ಪನ್ನಗಳಿಗೆ ಮೌಲ್ಯ ಹೆಚ್ಚಿಸಬೇಕು. ಹಲವು ಕಾರಣಗಳಿಂದ ಕೆಲಸಗಾರರ ಕೊರತೆಯಿದೆ. ಆದರೂ ನಮ್ಮೂರಿನ ರೇಷ್ಮೆಯನ್ನು ವಿಶ್ವಕ್ಕೇ ಪರಿಚಯಿಸುವ ಹೆಬ್ಬಯಕೆಯಿದೆ’ ಎಂದು ಅವರು ತಿಳಿಸಿದರು.
- Advertisement -
- Advertisement -
- Advertisement -