21.5 C
Sidlaghatta
Thursday, July 31, 2025

ನಗರಸಭೆ ಪೌರಾಯುಕ್ತರ ವಿರುದ್ದ ಪ್ರತಿಭಟನೆ

- Advertisement -
- Advertisement -

ನಗರಸಭೆ ಪೌರಾಯುಕ್ತ ಜಿ.ಎನ್.ಚಲಪತಿ ಅವರ ಕಾರ್ಯವೈಖರಿಯನ್ನು ಖಂಡಿಸಿ ನಗರಸಭೆ ಕಾರ್ಯಾಲಯದ ಮುಂಭಾಗ ಸುಮಾರು ೧೪ ಮಂದಿ ಸದಸ್ಯರು ಸೇರಿದಂತೆ ಸಾರ್ವಜನಿಕರು ಸೋಮವಾರ ಪ್ರತಿಭಟನೆ ನಡೆಸಿದರು.
ಪ್ರತಿಭಟನೆಯ ನೇತೃತ್ವ ವಹಿಸಿ ನಗರಸಭೆ ಸದಸ್ಯ ಎಸ್.ರಾಘವೇಂದ್ರ ಮಾತನಾಡಿ, ಶಿಡ್ಲಘಟ್ಟ ಪುರಸಭೆಯಿಂದ ನಗರಸಭೆಯಾಗಿ ಮೇಲ್ದರ್ಜೆಗೇರಿದ್ದು ಇಲ್ಲಿ ಕರ್ತವ್ಯ ನಿರ್ವಹಿಸಲು ಕೆಎಂಎಎಸ್ ಗ್ರೇಡ್ ಅಧಿಕಾರಿ ಬೇಕಾಗಿರುತ್ತದೆ. ಆದರೆ ಕಂದಾಯ ಅಧಿಕಾರಿ (ಆರ್.ಐ) ಗ್ರೇಡ್ ನಿಂದ ಮುಖ್ಯಾಧಿಕಾರಿಯಾಗಿ ಸೇವೆ ಸಲ್ಲಿಸಿರುವ ವ್ಯಕ್ತಿಯನ್ನು ನಗರಸಭೆಗೆ ನಿಯೋಜಿಸಿರುವುದು ದುರದೃಷ್ಟ. ಈ ವ್ಯಕ್ತಿಗೆ ಚುನಾಯಿತ ನಗರಸಭೆ ಸದಸ್ಯರೊಂದಿಗೆ ಹೇಗೆ ಮಾತಾಡಬೇಕು ಎನ್ನುವುದೇ ಗೊತ್ತಿಲ್ಲ. ನಗರಸಭೆಗೆ ಸಂಬಂಧಿಸಿದ ಯಾವುದಾದರೂ ಸಮಸ್ಯೆಗಳನ್ನು ಕೇಳಲು ಹೋದ ನಗರಸಭೆಯ ಸದಸ್ಯರನ್ನು ಏಕವಚನದಲ್ಲಿ ನಿಂದಿಸುವ ಜೊತೆಗೆ ಕಚೇರಿಯಿಂದ ಹೊರಹೋಗುವಂತೆ ದೌರ್ಜನ್ಯವಾಗಿ ಮಾತನಾಡುತ್ತಾರೆ. ಈ ಅಧಿಕಾರಿ ತಾನು ಸಾರ್ವಜನಿಕರ ಸೇವಕ ಎಂಬುದನ್ನೂ ಮರೆತು ಯಾವುದೋ ಒಂದು ರಾಜಕೀಯ ಪಕ್ಷದ ಏಜೆಂಟರಂತೆ ವರ್ತಿಸುತ್ತಾರೆ. ಇವರ ಅಧಿಕಾರಾವಧಿಯಲ್ಲಿ ಸಾಕಷ್ಟು ಅವ್ಯವಹಾರಗಳು ನಡೆದಿದ್ದು ಕೂಡಲೇ ತನಿಖೆ ನಡೆಸಿ ತಪ್ಪಿತಸ್ಥ ಅಧಿಕಾರಿಯ ವಿರುದ್ದ ಕಾನೂನು ಕ್ರಮ ಜರುಗಿಸಬೇಕು ಎಂದರು.
ಮುಖಂಡ ಲಕ್ಷ್ಮಿನಾರಾಯಣ ಮಾತನಾಡಿ, ನಗರಸಭೆಗೆ ಪೌರಾಯುಕ್ತರಾಗಿ ಜಿ.ಎನ್.ಚಲಪತಿ ಬಂದಾಗಿನಿಂದಲೂ ನಗರದಲ್ಲಿ ಮಾಡಿರುವ ಕಳಪೆ ಕಾಮಗಾರಿಗಳೂ ಸೇರಿದಂತೆ ಅಕ್ರಮ ಬಿಲ್ ಮಾಡಿಕೊಂಡಿರುವುದರ ಬಗ್ಗೆ ಸೂಕ್ತ ತನಿಖೆಯಾಗಬೇಕು. ಗುತ್ತಿಗೆ ಆಧಾರದ ಮೇಲೆ ಕೆಲಸ ಮಾಡುವ ಪೌರ ಕಾರ್ಮಿಕರಿಗೆ ಸಂಬಳ ನೀಡದೇ ಸತಾಯಿಸುತ್ತಿರುವ ಈ ಅಧಿಕಾರಿಯ ವರ್ತನೆಯಿಂದ ಕೆಲ ಪೌರ ಕಾರ್ಮಿಕರು ಆತ್ಮಹತ್ಯೆ ಯತ್ನ ನಡೆಸಿದ್ದಾರೆ. ಆದರೂ ಅವರಿಗೆ ಸಂಬಳ ನೀಡದೇ ಕಿರುಕುಳ ನೀಡುತ್ತಾರೆ. ಹಿಂದಿನ ನಗರಸಭೆ ಆಡಳಿತ ಮಂಡಳಿ ಸದಸ್ಯರ ಸಭೆಯಲ್ಲಿ ನಗರೋತ್ಥಾನ ೩ ಯೋಜನೆಯಡಿ ನಗರದಲ್ಲಿ ವಿವಿಧ ಕಾಮಗಾರಿಗಳನ್ನು ಮಾಡಲು ಸದಸ್ಯರು ಅನುಮೋದನೆ ನೀಡಿದ್ದರೂ ಚುನಾವಣೆ ಮುಗಿದು ನೂತನ ಸದಸ್ಯರು ಆಯ್ಕೆಯಾದರೂ ಸಹ ಇದುವರೆಗೂ ಹಿಂದಿನ ಕಾಮಗಾರಿಗಳಿಗೆ ಚಾಲನೆ ನೀಡಿಲ್ಲ.
ತಾಲೂಕಿನ ಹಿತ್ತಲಹಳ್ಳಿ ಗ್ರಾಮದ ಬಳಿಯಿರುವ ಕಸ ವಿಲೇವಾರಿ ಘಟಕದಲ್ಲಿ ನಿರ್ಮಿಸಲು ಉದ್ದೇಶಿಸಿರುವ ಘನ ತ್ಯಾಜ್ಯ ವಿಂಗಡಿಸುವ ಯಂತ್ರ ಅಳವಡಿಸುವಲ್ಲಿ ಭಾರೀ ಅವ್ಯವಹಾರ ನಡೆದಿದ್ದು ಹಳೆ ಕಬ್ಬಿಣದ ಶೀಟ್ ಹಾಗೂ ಸರಳುಗಳನ್ನು ಬಳಸಿ ಹಣ ಲಪಟಾಯಿಸಿದ್ದು ಇದರ ತನಿಖೆಯಾಗಬೇಕು ಎಂದರು.
೨೦೧೮ ರ ಅಕ್ಟೋಬರ್ ತಿಂಗಳ ನಗರಸಭೆ ಖರ್ಚಿನ ವಿವರದಲ್ಲಿ ಪೌರಾಯುಕ್ತರು ಎನ್.ಎಚ್ ೨೩೪ ಯೋಜನೆಯಡಿ ಕೊರೆಸಿರುವ ೩ ಕೊಳವೆಬಾವಿಗಳಿಗೆ ೭೮,೩೫೦೦೦ ಖರ್ಚು ತೋರಿಸಿದ್ದು ಒಂದು ಕೊಳವೆ ಬಾವಿ ಕೊರೆಸಲು ಸುಮಾರು ೨೬ ಲಕ್ಷ ಖರ್ಚು ಮಾಡಿದ್ದಾರೆಯೇ ಎನ್ನುವ ಅನುಮಾನವಿದೆ. ಹಾಗಾಗಿ ಇದರ ಸಂಪೂರ್ಣ ತನಿಖೆಯಾಗಬೇಕು ಎಂದು ಒತ್ತಾಯಿಸಿದರು.
ಮುಖಂಡ ಎಸ್.ಎಂ.ರಮೇಶ್ ಮಾತನಾಡಿ, ನಗರದಲ್ಲಿರುವ ನೀರಿನ ಲಭ್ಯತೆಗನುಸಾರವಾಗಿ ಪ್ರತಿ ವಾರ್ಡಿಗೂ ಮೂರು ದಿನಕ್ಕೊಮ್ಮೆ ನೀರು ಸರಬರಾಜು ಮಾಡಬಹುದು. ಆದರೆ ಪೌರಾಯುಕ್ತರು ಹಾಗೂ ಅಧಿಕಾರಿಗಳು ಕುಡಿಯುವ ನೀರು ಪೂರೈಸಲು ಸಹ ಒಂದು ಪಕ್ಷದ ಏಜೆಂಟರಂತೆ ರಾಜಕೀಯ ಮಾಡುವ ಮೂಲಕ ಕೆಲ ವಾರ್ಡುಗಳಿಗೆ ತಿಂಗಳಿಗೊಮ್ಮೆ ನೀರು ಪೂರೈಸುತ್ತಿದ್ದಾರೆ. ಈ ಬಗ್ಗೆ ಯಾರಾದರೂ ಪ್ರಶ್ನಿಸಿದರೆ ನಿಮ್ಮ ಮೇಲೆ ಕೇಸು ಹಾಕಿಸುತ್ತೇನೆ ಎಂದು ಬೆದರಿಸುವ ಮೂಲಕ ಗೂಂಡಾ ವರ್ತನೆ ಪ್ರದರ್ಶಿಸುತ್ತಾರೆ ಎಂದರು.
ಬಿಜೆಪಿ ತಾಲ್ಲೂಕು ಅಧ್ಯಕ್ಷ ಬಿ.ಸಿ.ನಂದೀಶ್ ಮಾತನಾಡಿ, ನಗರದ ಸ್ವಚ್ಚತೆ ಕಾಪಾಡಬೇಕಾದ ನಗರಸಭೆ ಸಿಬ್ಬಂದಿಯೇ ನಗರದ ಯುಜಿಡಿ ಸಂಪರ್ಕವನ್ನು ಅಗೆದು ಚರಂಡಿಗೆ ಬಿಟ್ಟಿರುವುದರಿಂದ ನಗರದಾಧ್ಯಂತ ದುರ್ವಾಸನೆ ಬೀರುತ್ತಿದೆ. ಸೊಳ್ಳೆ ಕಾಟ ಹೆಚ್ಚಾಗಿದೆ. ಈ ಬಗ್ಗೆ ಅನೇಕ ಬಾರಿ ಮನವಿ ಮಾಡಿದರೂ ನಗರದ ಸ್ವಚ್ಚತೆ ಬಗ್ಗೆ ಕಾಳಜಿ ತೋರಿಸುತ್ತಿಲ್ಲ ಎಂದು ಆರೋಪಿಸಿದರು.
ಒಂದು ಪಕ್ಷದ ಕೆಲವೇ ಕೆಲ ಮುಖಂಡರ ಗುಂಪು ಕಟ್ಟಿಕೊಂಡು ನಗರಸಭೆ ವ್ಯಾಪ್ತಿಯಲ್ಲಿ ನಡೆಯುವ ಕಾಮಗಾರಿಗಳ ಹಾಗೂ ವಿವಿಧ ಅನುಧಾನಗಳಲ್ಲಿ ಅಕ್ರಮ ನಡೆಸಿ ಹಣ ಮಾಡುವ ದಂಧೆಗೆ ಇಳಿದಿರುವ ಜಿ.ಎನ್.ಚಲಪತಿ ರನ್ನು ಪೌರಾಯುಕ್ತ ಹುದ್ದೆಯಿಂದ ವಜಾಗೊಳಿಸಬೇಕು ಎಂದು ಪ್ರತಿಭಟನಾಕಾರರು ಒತ್ತಾಯಿಸಿದರು.
ನಗರಸಭಾ ಸದಸ್ಯರಾದ ಲಕ್ಷ್ಮಯ್ಯ, ಎಂ.ವಿ.ವೆಂಕಟಸ್ವಾಮಿ, ಸುಮಿತ್ರರಮೇಶ್, ಸುಗುಣ ಲಕ್ಷ್ಮಿನಾರಾಯಣ, ಎಸ್.ರಾಘವೇಂದ್ರ, ನಾರಾಯಣಸ್ವಾಮಿ, ಸುರೇಶ್, ಮುಖಂಡರಾದ ನಂದುಕಿಶನ್, ಜಬೀವುಲ್ಲಾ, ಕೆಂಪರೆಡ್ಡಿ, ಎಲ್.ಮಂಜುನಾಥ್, ಶ್ರೀಧರ್, ರಾಮಚಂದ್ರಪ್ಪ, ಸಿಕಂದರ್, ವೆಂಕಟರಾಜು ಪ್ರತಿಬಟನೆಯಲ್ಲಿ ಪಾಲ್ಗೊಂಡಿದ್ದರು.

Just Published

Latest news

- Advertisement -

Covid-19

Silk

Related news

- Advertisement -

LEAVE A REPLY

Please enter your comment!
Please enter your name here
Captcha verification failed!
CAPTCHA user score failed. Please contact us!
error: Content is protected !!