ನ್ಯಾಯಬೆಲೆ ಅಂಗಡಿಗಳಲ್ಲಿ ಗ್ರಾಹಕರಿಗೆ ಆಗುವಂತಹ ತೊಂದರೆಗಳನ್ನು ನಿವಾರಣೆ ಮಾಡಿ, ಸರ್ಕಾರದಿಂದ ನ್ಯಾಯಬೆಲೆ ಅಂಗಡಿಗಳ ಮೂಲಕ ವಿತರಣೆ ಮಾಡುವ ಆಹಾರಧಾನ್ಯಗಳು ಸಮರ್ಪಕವಾಗಿ ಲಭಿಸುವಂತೆ ಜಾಗೃತಿ ವಹಿಸುವುದು ಜಾಗೃತಿ ಸಮಿತಿ ಸದಸ್ಯರುಗಳ ಕರ್ತವ್ಯ ಎಂದು ಆಹಾರ ಇಲಾಖೆಯ ಮುಖ್ಯಕಾರ್ಯದರ್ಶಿ ಹರ್ಷಗುಪ್ತಾ ತಿಳಿಸಿದರು.
ನಗರದ ತಾಲ್ಲೂಕು ಕಚೇರಿಯಲ್ಲಿ ಶನಿವಾರ ತಾಲ್ಲೂಕಿನ ನ್ಯಾಯಬೆಲೆ ಅಂಗಡಿಗಳ ಮಾಲೀಕರು ಹಾಗೂ ಜಾಗೃತಿ ಸಮಿತಿ ಸದಸ್ಯರುಗಳಿಗೆ ಆಯೋಜನೆ ಮಾಡಲಾಗಿದ್ದ ವಿಡಿಯೋ ಸಂವಾದ ಕಾರ್ಯಕ್ರಮದಲ್ಲಿ ಅವರು ನ್ಯಾಯಬೆಲೆ ಅಂಗಡಿಗಳ ಮಾಲೀಕರು ಹಾಗೂ ಜಾಗೃತಿ ಸಮಿತಿಗಳ ಸದಸ್ಯರುಗಳೊಂದಿಗೆ ಸಂವಾದ ನಡೆಸಿ ಅವರ ಪ್ರಶ್ನೆಗಳಿಗೆ ಉತ್ತರಿಸಿದರು.
ಹಲವೆಡೆ ಜಾಗೃತಿ ಸಮಿತಿ ಸದಸ್ಯರುಗಳು ಜನರಿಗೆ ಆಗುತ್ತಿರುವ ಅನ್ಯಾಯದ ಬಗ್ಗೆ ಗಮನಹರಿಸುವುದರ ಬದಲಿಗೆ ಅವರೇ ಸ್ವತಃ ಆಹಾರ ಧಾನ್ಯಗಳನ್ನು ದುರುಪಯೋಗ ಪಡಿಸಿಕೊಳ್ಳಲು ಮುಂದಾಗುತ್ತಿರುವುದು ಕೇಳಿ ಬರುತ್ತಿದ್ದು ಯಾವುದೇ ಕಾರಣಕ್ಕೂ ಇಂತಹ ಅವ್ಯವಸ್ಥೆಯಾಗಬಾರದು. ಬಡವರು, ಮಧ್ಯಮ ವರ್ಗದ ಜನರು ಆಹಾರದ ಕೊರತೆ ಅನುಭವಿಸದಂತೆ ನೋಡಿಕೊಳ್ಳಲು ಸಮಿತಿಯ ಸದಸ್ಯರುಗಳು ಸಹಕಾರ ನೀಡಬೇಕು.
ನ್ಯಾಯಬೆಲೆ ಅಂಗಡಿಗಳಲ್ಲಿ ಏನಾದರೂ ಅಕ್ರಮಗಳು ನಡೆಯುತ್ತಿರುವುದು ಗಮನಕ್ಕೆ ಬಂದರೆ ತಕ್ಷಣ ಅಧಾರಸಹಿತ ಇಲಾಖೆಯ ಉಪನಿರ್ದೇಶಕರಿಗೆ ದೂರು ಸಲ್ಲಿಸಿದರೆ ಪರಿಶೀಲನೆ ನಡೆಸಿ ಅಂತಹ ನ್ಯಾಯಬೆಲೆಗಳನ್ನು ಅಮಾನತ್ತಿನಲ್ಲಿಟ್ಟು, ಆರೋಪಗಳು ಸಾಬೀತಾದರೆ ಅಂತಹವರ ಲೈಸನ್ಸ್ ವಜಾ ಮಾಡುತ್ತೇವೆ ಎಂದು ಹೇಳಿದರು.
ಜಿಲ್ಲಾ ಆಹಾರ ಇಲಾಖೆಯ ಉಪನಿರ್ದೇಶಕ ಶಿವಶಂಕರ್, ಶಿರಸ್ತೆದಾರ್ ಪ್ರಕಾಶ್ ಹಾಗೂ ತಾಲ್ಲೂಕಿನ ಜಾಗೃತಿ ಸಮಿತಿಯ ಸದಸ್ಯರುಗಳು, ನ್ಯಾಯಬೆಲೆ ಅಂಗಡಿಗಳ ಮಾಲೀಕರು ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು.
- Advertisement -
- Advertisement -
- Advertisement -