ಪಂಡಿತ್ ದೀನ್ ದಯಾಳ್ ಉಪಾಧ್ಯಾ್ಯಾಯ್ ಉತ್ತಮ ಬರಹಗಾರರಾಗಿದ್ದರು. ಪಾಂಚಜನ್ಯದಂತಹ ಅಪರೂಪದ ಪತ್ರಿಕೆಯನ್ನು ಹೊರತಂದು ಬ್ರಿಟಿಷರ ದೌರ್ಜನ್ಯದ ವಿರುದ್ಧ ಕಿಡಿಕಾರಿದ್ದರು. ಅವರ ಪುಸ್ತಕಗಳು ಜೀವನದ ದಾರಿ ದೀಪವಾಗಿವೆ ಎಂದು ಬಿಜೆಪಿ ತಾಲ್ಲೂಕು ಘಟಕದ ಅಧ್ಯಕ್ಷ ಬಿ.ಸಿ.ನಂದೀಶ್ ತಿಳಿಸಿದರು.
ನಗರದ ಸರ್ಕಾರಿ ಕೈಗಾರಿಕಾ ತರಬೇತಿ ಸಂಸ್ಥೆಯಲ್ಲಿ ಮಂಗಳವಾರ ಕೋಲಾರದ ನೆಹರು ಯುವ ಕೇಂದ್ರ ಹಾಗೂ ಸರ್ವೋದಯ ಸ್ವಯಂ ಸೇವಾ ಸಂಸ್ಥೆ ಆಯೋಜಿಸಲಾಗಿದ್ದ ಪಂಡಿತ್ ದೀನ್ ದಯಾಳ್ ಉಪಾಧ್ಯಾಯರವರ ಜಯಂತಿ ಕಾರ್ಯಕ್ರಮದಲ್ಲಿ ಭಾಗವಹಿಸಿ ಅವರು ಮಾತನಾಡಿದರು.
ಪಂಡಿತ್ ದೀನ್ ದಯಾಳ್ ಉಪಾಧ್ಯಾಯ್ ಭಾರತೀಯ ಜನ ಸಂಘದ ಮುಖಂಡರಾಗಿದ್ದವರು. ಏಕಾತ್ಮ ಮಾನವತಾವಾದ ಎಂಬ ಪ್ರಬಂಧ ಮಂಡಿಸಿ ಸಾಮ್ಯವಾದ ಮತ್ತು ಬಂಡವಾಳಶಾಹಿ ತತ್ವಗಳನ್ನು, ವಿಮರ್ಶಿಸಿ, ಅದಕ್ಕೆ ಬದಲಾಗಿ ರಾಜಕೀಯ ಮತ್ತು ಆಡಳಿತ ಪದ್ಧತಿಗೆ ಪ್ರಕೃತಿ ಮತ್ತು ಸೃಷ್ಟಿಯ ನಿಯಮಗಳಿಗೆ ಪೂರಕವಾದ ಮಾರ್ಗಗಳನ್ನು ಸೂಚಿಸಿದ್ದರು ಎಂದು ಹೇಳಿದರು.
ಬಿಜೆಪಿ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಮುರಳೀಧರ್ ಮಾತನಾಡಿ, ದೀನದಯಾಳ್ ಅವರು ಜನರ ನಾಡಿ ಮಿಡಿತವನ್ನು ಅರ್ಥೈಸಿಕೊಳ್ಳುವ ಮೂಲಕ ಹೋರಾಟ ಮನೋಭಾವವನ್ನು ರೂಢಿಸಿಕೊಂಡಿದ್ದರು. ಸರಳ ಜೀವಿಯಾಗಿದ್ದ ಅವರು, ಸಮಾಜ ಸೇವೆ, ಜನಪರ ಕಾಳಜಿ, ಜನರಿಗಾಗಿ ದುಡಿಯುವ ಮೂಲಕ ಉತ್ತಮ ಸೇವೆಯನ್ನು ಸಲ್ಲಿಸಿದ್ದಾರೆ ಎಂದು ನುಡಿದರು.
ಪ್ರತಿಯೊಬ್ಬ ವಿದ್ಯಾರ್ಥಿಯೂ ಹಾಗೂ ಪ್ರತಿಯೊಬ್ಬ ನಾಗರಿಕರೂ ಇಂದು ಅವರ ಆದರ್ಶವನ್ನು ನೆನೆದು ಅವರ ಹಾದಿಯನ್ನು ಅನುಸರಿಸಬೇಕೆಂದು ಹೇಳಿದರು.
ನಗರಸಭೆಯ ಸ್ಥಾಯಿ ಸಮಿತಿ ಅಧ್ಯಕ್ಷ ಕಿಶನ್, ಸದಸ್ಯ ರಾಘವೇಂದ್ರ, ಅಖಂಡ ಭಾರತ ಸೇವಾ ಸಮಿತಿ ಜಿಲ್ಲಾದ್ಯಕ್ಷ ಕಿರಣ್, ಭರತ್‌ರೆಡ್ಡಿ, ವೆಂಕಟೇಶ್, ಸರ್ಕಾರಿ ಕೈಗಾರಿಕಾ ತರಬೇತಿ ಸಂಸ್ಥೆಯ ಉಪಾನ್ಯಾಸಕ ಮಂಜುನಾಥ್, ಸರ್ವೋದಯ ಸೇವಾ ಸಂಸ್ಥೆಯ ಕಾರ್ಯದರ್ಶಿ ನರೇಶ್, ನಿರ್ದೇಶಕರಾದ ಅಶ್ವಥ್, ಸಂಪತ್, ಮತ್ತಿತರರು ಕಾರ್ಯಕ್ರಮದಲ್ಲಿ ಹಾಜರಿದ್ದರು.
- Advertisement -
- Advertisement -
- Advertisement -