ಪ್ರತಿಯೊಂದು ಮಗುವಿಗೂ ಉತ್ತಮ ಶಿಕ್ಷಣ ದೊರೆತಾಗ ಮಾತ್ರ ದೇಶದ ಅಭಿವೃದ್ಧಿ ಸಾಧ್ಯ ಎಂದು ಶಾಸಕ ಎಂ.ರಾಜಣ್ಣ ಹೇಳಿದರು.
ನಗರದ ಸ್ತ್ರೀ ಶಕ್ತಿ ಭವನದಲ್ಲಿ ರಾಜ್ಯ ಮಕ್ಕಳ ಹಕ್ಕುಗಳ ರಕ್ಷಣಾ ಆಯೋಗ, ಸಾರ್ವಜನಿಕ ಶಿಕ್ಷಣ ಇಲಾಖೆ ಹಾಗೂ ಮಹಿಳಾ ಮತ್ತು ಮಕ್ಕಳ ಅಭಿವೃದ್ದಿ ಸಹಯೋಗದಲ್ಲಿ ಶನಿವಾರ ಏರ್ಪಡಿಸಲಾಗಿದ್ದ ಶಾಲೆ ಕಡೆ ನನ್ನ ನಡೆ ಕಾರ್ಯಕ್ರಮದಲ್ಲಿ ಭಾಗವಹಿಸಿ ಅವರು ಮಾತನಾಡಿದರು.
ಪ್ರತಿಯೊಂದು ಮಗುವು ಉಚಿತ, ಕಡ್ಡಾಯ ಮತ್ತು ಸಮಾನ ಗುಣಮಟ್ಟದ ಶಿಕ್ಷಣ ಪಡೆಯುವ ಹಕ್ಕನ್ನು ಮೂಲ ಭೂತ ಹಕ್ಕನ್ನಾಗಿ ದೇಶದ ಸರ್ವೋಚ್ಛ ನ್ಯಾಯಾಲಯ ೧೯೯೩ ರಲ್ಲಿ ನೀಡಿರುವ ಐತಿಹಾಸಿಕ ತೀರ್ಪಿನ ಹಿನ್ನಲೆಯಲ್ಲಿ ಪ್ರತಿಯೊಂದು ಮಗುವಿಗೂ ಉತ್ತಮ ಮತ್ತು ಉಚಿತ ಶಿಕ್ಷಣ ನೀಡುವುದು ರಾಜ್ಯ ಹಾಗು ಕೇಂದ್ರ ಸರ್ಕಾರಗಳ ಆದ್ಯ ಕರ್ತವ್ಯವಾಗಿದೆ. ಈ ನಿಟ್ಟಿನಲ್ಲಿ ಉಚಿತ ಮತ್ತು ಕಡ್ಡಾಯ ಶಿಕ್ಷಣ ಹಕ್ಕು ೨೦೦೯ ರಂತೆ ೦೬ ರಿಂದ ೧೪ ವರ್ಷದೊಳಗಿನ ಎಲ್ಲಾ ಮಕ್ಕಳು ತಮ್ಮ ಸಮೀಪದ ಶಾಲೆಯಲ್ಲಿ ಪ್ರಾಥಮಿಕ ಶಿಕ್ಷಣ ಪೂರೈಸುವಂತೆ ಮಾಡಲು ಶಿಕ್ಷಕರೂ ಸೇರಿದಂತೆ ವಿವಿಧ ಸಂಘ ಸಂಸ್ಥೆಗಳು ಪೋಷಕರ ಮನವೊಲಿಸುವ ಕೆಲಸ ಮಾಡುವ ಅಗತ್ಯತೆ ಇದೆ ಎಂದರು.
ಸರ್ಕಾರ ಸಾರ್ವಜನಿಕ ಶಿಕ್ಷಣ ಇಲಾಖೆ ಹಾಗು ಮಕ್ಕಳ ಹಕ್ಕುಗಳ ರಕ್ಷಣಾ ಆಯೋಗದ ಸಹಯೋಗದಲ್ಲಿ ಈಗಾಗಲೇ ಶಾಲೆಯಿಂದ ಹೊರಗುಳಿದಿರುವ ಮಕ್ಕಳನ್ನು ಗುರುತಿಸಿ ಶಾಲೆಗೆ ಕರೆತರುವ ಕೆಲಸ ವಿನೂತನ ಜನಾಂದೋಲನವನ್ನು ರೂಪಿಸಿದೆ ಎಂದರು.
ರಾಜ್ಯದಲ್ಲಿನ ಎಲ್ಲಾ ಮಕ್ಕಳು ಶಾಲೆಗೆ ಬಂದು ಉತ್ತಮ ಶಿಕ್ಷಣ ಪಡೆದಾಗ ಮಾತ್ರ ಶಿಕ್ಷಣ ಎಂಬುದು ಮಗುವಿನ ಮೂಲಭೂತ ಹಕ್ಕು ಎಂಬುದಕ್ಕೆ ಹೊಸ ಅರ್ಥ ಬರುತ್ತದೆ. ಹಾಗಾಗಿ ಪ್ರತಿಯೊಬ್ಬ ಪೋಷಕರೂ ತಮ್ಮ ಮಕ್ಕಳನ್ನು ಶಾಲೆಗೆ ಕಳುಹಿಸಬೇಕು. ಶಾಲೆಯಿಂದ ಹೊರಗುಳಿದಿರುವ ಮಕ್ಕಳ ಬಗ್ಗೆ ಸಾರ್ವಜನಿಕರಿಗೇನಾದರೂ ಮಾಹಿತಿಯಿದ್ದಲ್ಲಿ ಕೂಡಲೇ ಸಂಬಂದಪಟ್ಟ ಅಧಿಕಾರಿಗಳಿಗೆ ಮಾಹಿತಿ ಮುಟ್ಟಿಸಿದಲ್ಲಿ ಅಂತಹ ಮಕ್ಕಳ ಪೋಷಕರ ಮನವೊಲಿಸಿ ಶಾಲೆಗೆ ಕರೆತರುವ ಕೆಲಸವನ್ನು ಅಧಿಕಾರಿಗಳು ಮತ್ತು ಶಿಕ್ಷಕರು ಮಾಡುತ್ತಾರೆ ಎಂದರು.
ಕಾರ್ಯಕ್ರಮದಲ್ಲಿ ಶಾಲೆಯಿಂದ ಹೊರಗುಳಿದಿದ್ದು ಪುನಃ ಶಾಲೆಗೆ ಸೇರಿರುವ ನಾಲ್ವರು ಮಕ್ಕಳಿಗೆ ಶಾಲಾ ಬ್ಯಾಗ್ಗಳನ್ನು ವಿತರಿಸಲಾಯಿತು.
ಕ್ಷೇತ್ರ ಶಿಕ್ಷಣಾಧಿಕಾರಿ ಎಸ್.ರಘುನಾಥರೆಡ್ಡಿ, ಮಹಿಳಾ ಮತ್ತು ಮಕ್ಕಳ ಕಲ್ಯಾಣಾಧಿಕಾರಿ ಲಕ್ಷ್ಮಿದೇವಮ್ಮ, ವೈದ್ಯಾಧಿಕಾರಿ ಡಾ.ಅನಿಲ್ಕುಮಾರ್, ಸಂಪನ್ಮೂಲ ವ್ಯಕ್ತಿ ಸುಧಾಕರ್, ಡಾ.ವಿಜಯಾ ಮತ್ತಿತರರು ಕಾರ್ಯಕ್ರಮದಲ್ಲಿ ಹಾಜರಿದ್ದರು.
- Advertisement -
- Advertisement -
- Advertisement -