ಲೋಕಾಯುಕ್ತ ಸಂಸ್ಥೆಯನ್ನು ಯಾವುದೇ ಕಾರಣಕ್ಕೂ ನಿಷ್ಕ್ರಿಯೆಗೊಳಿಸಬಾರದು ಹಾಗೂ ಎಸಿಬಿಯನ್ನು ಕೂಡಲೇ ರದ್ದುಗೊಳಿಸಬೇಕು ಎಂದು ಒತ್ತಾಯಿಸಿ ರಾಜ್ಯ ರೈತ ಸಂಘ ಮತ್ತು ಹಸಿರು ಸೇನೆಯ ತಾಲ್ಲೂಕು ಪದಾಧಿಕಾರಿಗಳು ಸೋಮವಾರ ತಾಲ್ಲೂಕು ಕಚೇರಿ ಮುಂಭಾಗ ಪ್ರತಿಭಟನೆ ನಡೆಸಿದರು.
ನಗರದ ಪ್ರವಾಸಿಮಂದಿರದಿಂದ ಮೆರವಣಿಗೆಯ ಮೂಲಕ ತೆರಳಿದ ರೈತ ಮುಖಂಡರು, ರಾಜ್ಯ ಸರ್ಕಾರ ತನ್ನ ಅಕ್ರಮಗಳನ್ನು ಮುಚ್ಚಲು ಲೋಕಾಯುಕ್ತ ಸಂಸ್ಥೆಯನ್ನು ಮುಚ್ಚಿ ಎಸಿಬಿ ಯನ್ನು ಜಾರಿಗೆ ತರಲು ಹೊರಟಿರುವುದು ಜನವಿರೋಧಿಯಾಗಿದೆ ಎಂದು ಆರೋಪಿಸಿದರು.
ರಾಜ್ಯದಲ್ಲಿ ೧೯೮೫ ರಿಂದ ಭ್ರಷ್ಟರ ಪಾಲಿಗೆ ಸಿಂಹಸ್ವಪ್ನವಾಗಿ ಕಾಡುತ್ತಾ ರಾಜ್ಯದ ವಿವಿಧ ನಾಯಕರು ಸೇರಿದಂತೆ ಅಧಿಕಾರಿಗಳನ್ನು ಬಲೆಗೆ ಕೆಡವಿದ್ದ ಲೋಕಾಯುಕ್ತ ಸಂಸ್ಥೆಯನ್ನು ನಿಷ್ಕ್ರಿಯಗೊಳಿಸಿ ಭ್ರಷ್ಟ ಆಡಳಿತ ವ್ಯವಸ್ಥೆಗೆ ಮುಂದಾಗಿರುವ ರಾಜ್ಯ ಸರಕಾರದ ವಿರುದ್ದ ಘೋಷಣೆಗಳನ್ನು ಕೂಗಿದರು.
ದ್ವೀತಿಯ ಪಿ.ಯು.ಸಿ. ಪರೀಕ್ಷೆಯ ಪ್ರಶ್ನೆಪತ್ರಿಕೆ ಸೋರಿಕೆ ಮಾಡಿರುವವರ ವಿರುದ್ದ ಕ್ರಮಕ್ಕೆ ಮುಂದಾಗಬೇಕು, ಕೃಷಿ ವಿಶ್ವ ವಿದ್ಯಾಲಯವನ್ನು ಖಾಸಗೀಕರಣ ಮಾಡಬಾರದು ಹಾಗೂ ನಗರದ ತಾಲ್ಲೂಕು ಕಚೇರಿಯಲ್ಲಿಯೂ ಕೂಡಾ ಭಷ್ಟಾಚಾರ ತಾಂಡವವಾಡುತ್ತಿದೆ ಎಂದ ಪ್ರತಿಭಟನಾಕಾರರು ಭೂ ಮಾಪಿಯಾಗಳ ಪರವಾಗಿ ಅಧಿಕಾರಿಗಳು ಕೆಲಸ ಮಾಡುತ್ತಿದ್ದಾರೆಯೇ ಹೊರತು ಕಳೆದ ಕೆಲ ವರ್ಷಗಳಿಂದ ಸಾಗುವಳಿ ಮಾಡುತ್ತಿರುವ ರೈತರಿಗೆ ಈವರೆಗೂ ಯಾವುದೇ ಭೂ ಮಂಜೂರಾತಿ ಮಾಡದೇ ನಿರ್ಲಕ್ಷ್ಯವಹಿಸಿದ್ದಾರೆ ಎಂದು ಆರೋಪಿಸಿದರು.
ಕೂಡಲೇ ಸರ್ಕಾರ ಈ ಬಗ್ಗೆ ಸೂಕ್ತ ಕ್ರಮ ಜರುಗಿಸಬೇಕು ಇಲ್ಲವಾದಲ್ಲಿ ಮುಂದಿನ ದಿನಗಳಲ್ಲಿ ಉಗ್ರ ಹೋರಾಟ ಮಾಡುವುದಾಗಿ ಎಚ್ಚರಿಸಿ ತಹಸೀಲ್ದಾರ್ ಮನೋರಮಾ ಅವರ ಮುಖಾಂತರ ಸರ್ಕಾರಕ್ಕೆ ಮನವಿ ಪತ್ರ ಸಲ್ಲಿಸಿದರು.
ರಾಜ್ಯ ರೈತ ಸಂಘ ಹಾಗೂ ಹಸಿರುಸೇನೆ ಜಿಲ್ಲಾಧ್ಯಕ್ಷ ಭಕ್ತರಹಳ್ಳಿ ಬೈರೇಗೌಡ, ತಾಲ್ಲೂಕು ಅಧ್ಯಕ್ಷ ತಾದೂರು ಮಂಜುನಾಥ್, ಉಪಾಧ್ಯಕ್ಷ ಮುನಿನಂಜಪ್ಪ, ಪದಾಧಿಕಾರಿಗಳಾದ ನಾರಾಯಣಸ್ವಾಮಿ, ಆಂಜನೇಯರೆಡ್ಡಿ, ಟಿ.ಕೃಷ್ಣಪ್ಪ, ಎಂ.ದೇವರಾಜ್, ವೇಣುಗೋಪಾಲ್, ಅಬ್ಲೂಡು ಆರ್.ದೇವರಾಜ್, ಲಕ್ಕಹಳ್ಳಿ ದೇವರಾಜ್, ಡಿ.ಬಿ.ಶ್ರೀನಿವಾಸರೆಡ್ಡಿ ಮತ್ತಿತರರು ಹಾಜರಿದ್ದರು.
- Advertisement -
- Advertisement -
- Advertisement -