ಹಸಿರು ಕ್ರಾಂತಿಯ ನೇತಾರ ಮಾಜಿ ಉಪಪ್ರಧಾನಿ ಡಾ.ಬಾಬುಜಗಜೀವನರಾಂ ಅವರ ದೂರದೃಷ್ಟಿಯಿಂದ ದೇಶದ ಎಲ್ಲಾ ವರ್ಗದ ಜನರು ಇಂದು ನೆಮ್ಮದಿಯಿಂದ ಜೀವನ ನಡೆಸುವಂತಾಗಿದೆ ಎಂದು ಶಾಸಕ ಎಂ.ರಾಜಣ್ಣ ಹೇಳಿದರು.
ನಗರದ ತಾಲ್ಲೂಕು ಕಚೇರಿ ಸಭಾಂಗಣದಲ್ಲಿ ರಾಷ್ಟ್ರೀಯ ಹಬ್ಬಗಳ ಆಚರಣಾ ಸಮಿತಿ ವತಿಯಿಂದ ಬುಧವಾರ ಆಯೋಜಿಸಲಾಗಿದ್ದ ಡಾ.ಬಾಬು ಜಗಜೀವನರಾಂ ಜಯಂತಿಯಲ್ಲಿ ಭಾಗವಹಿಸಿ ಅವರು ಮಾತನಾಡಿದರು.
ಬಾಬು ಜಗಜೀವನ್ರಾಂ ಅವರು ದೇಶದ ಉಪಪ್ರಧಾನಿಯಾಗಿ ಹಾಗು ವಿವಿಧ ಪ್ರಮುಖ ಹುದ್ದೆ ಅಲಂಕರಿಸಿ ಶೋಷಿತರ ಪರ ಹಾಗು ಸಮಾಜದಲ್ಲಿ ಜಾತಿ ಪದ್ದತಿಯನ್ನು ಹೋಗಲಾಡಿಸಲು ಹೋರಾಟ ನಡೆಸಿ ಸಮಾನತೆ ತರುವಲ್ಲಿ ಯಶಸ್ವಿಯಾದ ಮಹಾನ್ ಚೇತನವಾಗಿದ್ದರು ಎಂದರು.
ತಾಲ್ಲೂಕು ಪಂಚಾಯಿತಿ ಇಓ ವೆಂಕಟೇಶ್ ಮಾತನಾಡಿ, ಭಾರತ- ಚೀನಾ ಯುದ್ಧದ ಸಂದರ್ಭದಲ್ಲಿ ಕೇಂದ್ರದಲ್ಲಿ ರಕ್ಷಣಾ ಸಚಿವರಾಗಿ ಅವರು ತಾಳಿದ ದಿಟ್ಟ ನಿಲುವು ಭಾರತಕ್ಕೆ ಸಹಕಾರಿಯಾಯಿತು. ಸಿಕ್ಕ ಅವಕಾಶಗಳನ್ನು ಸಮರ್ಥವಾಗಿ ಬಳಸಿಕೊಂಡ ಅವರು ದೇಶದ ಹಿಂದುಳಿದ ವರ್ಗಗಳ ಕಲ್ಯಾಣಕ್ಕೆ ಅನೇಕ ಕ್ರಾಂತಿಕಾರಿ ಕಾರ್ಯಕ್ರಮಗಳನ್ನು ದೇಶಕ್ಕೆ ಕೊಟ್ಟರು. ಅವರು ಕೊಟ್ಟ ಯೋಜನೆಗಳೇ ಇಂದಿಗೂ ಸರ್ಕಾರಗಳಿಗೆ ಮಾದರಿ ಆಗಿವೆ. ಭಾರತದ ಸಂವಿಧಾನ ರಚನೆಯಲ್ಲಿ ಹಾಗು ಲೋಕಸಭೆ ಮತ್ತು ವಿಧಾನಸಭೆಯಲ್ಲಿ ಈಗಿರುವ ಮೀಸಲಾತಿ ವಿಚಾರದಲ್ಲಿ ಬಾಬು ಜಗಜೀವನ್ರಾಂ ರ ಪಾತ್ರ ಮಹತ್ವದ್ದಾಗಿದೆ ಎಂದರು.
ದಲಿತರು, ಹಿಂದುಳಿದ ವರ್ಗದವರು, ಅಲ್ಪಸಂಖ್ಯಾತರ ಏಳಿಗೆಯಾಗಬೇಕಾದರೆ ಪ್ರತಿಯೊಬ್ಬರೂ ಮೊದಲು ಇತಿಹಾಸ ಓದಬೇಕು ಮತ್ತು ಬಾಬು ಜಗಜೀವನ್ರಾಂ ರನ್ನು ಕೇವಲ ದಲಿತರಿಗಷ್ಟೇ ಸೀಮಿತಗೊಳಿಸದೇ ಅವರನ್ನು ದೇಶದ ಪ್ರತಿಯೊಬ್ಬರೂ ಗೌರವಿಸಬೇಕು ಎಂದರು.
ತಹಸೀಲ್ದಾರ್ ಎಸ್.ಅಜಿತ್ಕುಮಾರ್ ರೈ, ತಾಲ್ಲೂಕು ಪಂಚಾಯಿತಿ ಉಪಾಧ್ಯಕ್ಷ ಎಚ್.ನರಸಿಂಹಯ್ಯ, ಸಮಾಜ ಕಲ್ಯಾಣ ಇಲಾಖಾಧಿಕಾರಿ ಅನುಸೂಯಮ್ಮ, ಸರ್ಕಾರಿ ನೌಕರರ ಸಂಘದ ಅದ್ಯಕ್ಷ ಕೇಶವರೆಡ್ಡಿ, ಮಾಜಿ ಅಧ್ಯಕ್ಷ ಗುರುರಾಜ್ರಾವ್, ವಿವಿಧ ದಲಿತ ಸಂಘಟನೆಗಳ ಮುಖಂಡರು ಹಾಜರಿದ್ದರು.
- Advertisement -
- Advertisement -
For Daily Updates
WhatsApp 'HI' to 7406303366
- Advertisement -
- Advertisement -







