ಕೃಷಿಯಲ್ಲಿ ತಾಂತ್ರಿಕತೆಯು ಸ್ಥಾನ ಪಡೆಯುತ್ತಿದೆ. ರೈತರು ಕಾಲಕ್ಕೆ ತಕ್ಕಂತೆ ಆಧುನಿಕ ಯಂತ್ರೋಪಕರಣಗಳಿಗೆ ಶರಣಾಗುತ್ತಿದ್ದಾರೆ. ಈ ಬದಲಾವಣೆಗಳು ರೈತರ ಮಕ್ಕಳಿಗೆ ಅರಿವಿಗೇ ಬಂದಿರುವುದಿಲ್ಲ. ಈ ನಿಟ್ಟಿನಲ್ಲಿ ತಾಲ್ಲೂಕಿನ ವರದನಾಯಕನಹಳ್ಳಿಯ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯ ವಿದ್ಯಾರ್ಥಿಗಳಿಗೆ ಈಚೆಗೆ ಕೃಷಿಯಲ್ಲಿ ಬಳಸುವ ಆಧುನಿಕ ಯಂತ್ರೋಪಕರಣದ ಪರಿಚಯವನ್ನು ಶಿಕ್ಷಕರು ಮಾಡಿಸಿದರು.
ಗ್ರಾಮದಲ್ಲಿ ಬೃಹತ್ ಯಂತ್ರದ ಆಗಮನವಾಗಿರುವುದನ್ನು ಕಂಡ ವಿದ್ಯಾರ್ಥಿಗಳು ಶಿಕ್ಷಕರ ಗಮನಕ್ಕೆ ತಂದಿದ್ದಾರೆ. ರಾಗಿ ಬೆಳೆಯ ಕಟಾವನ್ನು ಯಂತ್ರದ ಮೂಲಕ ನಡೆಸಲಾಗುತ್ತಿರುವುದನ್ನು ಕಂಡು ಶಿಕ್ಷಕರು ವಿದ್ಯಾರ್ಥಿಗಳನ್ನು ಹೊಲಕ್ಕೆ ಕರೆದೊಯ್ದು, ಸಮಯ ಹಾಗೂ ಹಣದ ಉಳಿತಾಯವಾಗುವ ಯಂತ್ರದ ಬಗ್ಗೆ ವಿವರಿಸಿದ್ದಾರೆ. ಹಿಂದೆ ಇದ್ದ ಪದ್ಧತಿಯ ರೀತಿ, ಯಂತ್ರದ ಕಾರ್ಯಕ್ಷಮತೆ, ಸಾಧಕ ಬಾಧಕಗಳ ಬಗ್ಗೆ ತಿಳಿಸಿದ್ದಾರೆ.
‘ಸಣ್ಣಗಾತ್ರದ ಯಂತ್ರಗಳನ್ನು ಅವಲಂಬಿಸಿದ್ದ ಕೃಷಿಕ ಈಗ ಬೃಹತ್ ಯಂತ್ರಗಳನ್ನು ತನ್ನ ಹೊಲಗದ್ದೆಗಳಿಗೆ ಬರಮಾಡಿಕೊಳ್ಳುತ್ತಿದ್ದಾನೆ. ಹಿಂದೆ ಹೊಲಗದ್ದೆಗಳ ಕೊಯ್ಲು ಕಾರ್ಯಗಳು ಮಾನವ ಶಕ್ತಿಯಿಂದ ನಡೆಯುತ್ತಿದ್ದವು. ಇದರ ಕಾಲಾವಧಿ ದಿನಗಟ್ಟಲೆ ಆಗುತ್ತಿತ್ತು. ಆಗ ಕೃಷಿ ಕಾರ್ಮಿಕರು ಸುಲಭವಾಗಿ ಸಿಗುತ್ತಿದ್ದರು.
ಬದಲಾದ ಪರಿಸರ ಮತ್ತು ಆಧುನಿಕ ಕೃಷಿ ವಿಜ್ಞಾನ ಕ್ಷೇತ್ರದಲ್ಲಾದ ಆವಿಷ್ಕಾರಗಳು ಆದ್ಯತೆಗಳ ಕ್ರಮವನ್ನೇ ಬದಲಿಸಿಬಿಟ್ಟವು. ಕೂರಿಗೆ ಬಿತ್ತನೆ, ಕೈ ಬಿತ್ತನೆ, ಕೂಲಿಕಾರರಿಂದ ಕಳೆ ತೆಗೆಸುವುದು, ಕೈ ಕುಯಿಲು ಇವೆಲ್ಲಾ ಹಿಂದಕ್ಕೆ ಸರಿದು ಮಾನವನ ಕೈ ಆಡುತ್ತಿದ್ದ ಹೊಲಗದ್ದೆಗಳಲ್ಲಿ ಯಂತ್ರಗಳ ಮುಳ್ಳು ಇಲ್ಲವೆ ಹಲ್ಲುಗಳು ಆಡತೊಡಗಿದವು’ ಎಂದು ವಿದ್ಯಾರ್ಥಿಗಳಿಗೆ ಶಿಕ್ಷಕರು ಮನವರಿಕೆ ಮಾಡಿದರು.
ಕಟಾವು ಮತ್ತು ಕಾಳು ವಿಂಗಡಿಸುವ ಯಂತ್ರವನ್ನು ಆಂದ್ರದ ಅನಂತಪುರದಿಂದ ತರಿಸಿದ್ದಾರೆ. ಇದರ ವೆಚ್ಚ ಗಂಟೆಯೊಂದಕ್ಕೆ 3,500 ರೂಪಾಯಿಗಳು. ಒಂದು ಗಂಟೆಯ ಅವಧಿಯಲ್ಲಿ ಇದು ಒಂದರಿಂದ ಒಂದೂವರೆ ಎಕರೆಯಲ್ಲಿನ ಬೆಳೆಯನ್ನು ಕಟಾವು ಮಾಡಿ ಹುಲ್ಲು ಮತ್ತು ಕಾಳನ್ನು ಬೇರ್ಪಡಿಸುತ್ತದೆ. ಅವರೆ ಮತ್ತು ಜೋಳದ ಸಾಲುಗಳಿಲ್ಲದಿದ್ದರೆ ಮತ್ತು ಹೊಲ ಚದರವಾಗಿದ್ದರೆ ಕಟಾವಿನ ಕೆಲಸ ಬೇಗ ಮುಗಿಯುತ್ತದೆ. ಹಾಗೆಯೇ ವಿಂಗಡಿಸಿದ ಕಾಳನ್ನು ಈ ಯಂತ್ರ ತನ್ನ ಸಂಗ್ರಹ ಚೇಂಬರಿನಲ್ಲಿ ಇಟ್ಟುಕೊಂಡಿದ್ದು ಅದನ್ನು ಟ್ರಾಕ್ಟರಿಗೆ ವರ್ಗಾಯಿಸುತ್ತದೆ. ಹೀಗಾಗಿ ವರ್ಗಾಯಿಸುವ ಶ್ರಮವೂ ರೈತನಿಗಿರದು. ಜೊತೆಗೆ ಇದೇ ಯಂತ್ರ ದವಸವನ್ನು ಕಲ್ಲು ಮಣ್ಣುಗಳಿರದೆ ಸೋಸುತ್ತದೆ ಎಂದು ರೈತರಿಂದ ಮಾಹಿತಿಯನ್ನೂ ಪಡೆದರು.
‘ಈ ಕೊಯ್ಲು ಯಂತ್ರದಿಂದ ಅನುಕೂಲವಿದೆ. ಆದರೆ ಅವರೆ, ಜೋಳ, ನವಣೆ, ಹರಿಸಾಮೆ, ಹುಚ್ಚೆಳ್ಳಿನಂಥಹ ಬೆಳೆಗಳನ್ನು ಮಿಶ್ರ ಬೆಳೆಗಳಾಗಿ ಬೆಳೆಯುವ ಅವಕಾಶಗಳು ಕಡಿಮೆಯಾಗುತ್ತವೆ. ಮತ್ತು ತುಂಡು ಭೂಮಿ ಬೇಸಾಯಕ್ಕೆ ಈ ಯಂತ್ರ ಸಹಕಾರಿಯಲ್ಲ. ಈ ಯಂತ್ರದ ಬಳಕೆಯಿಂದ ಕಣದಲ್ಲಾಗುತ್ತಿದ್ದ ಕೆಲಸಗಳನ್ನು ಮಾಡಬಹುದಾದುದರಿಂದ ಈಗ ರಸ್ತೆಗಳಲ್ಲಿ ಒಕ್ಕಣಿಕೆಗಳಿಂದ ಉಂಟಾಗುತ್ತಿರುವ ಒತ್ತಡವನ್ನು ಕಡಿಮೆ ಮಾಡಬಹುದು’ ಎಂಬ ರೈತರ ಅಭಿಪ್ರಾಯವನ್ನು ವಿದ್ಯಾರ್ಥಿಗಳು ಕೇಳಿ ತಲೆದೂಗಿದರು.
- Advertisement -
- Advertisement -
- Advertisement -







