ಮಾರುಕಟ್ಟೆಯಲ್ಲಿ ಕೆಲವು ರೀಲರುಗಳು ನೀಡಿರುವ ಚೆಕ್ ಬೌನ್ಸ್ ಆಗಿದ್ದು, ಅದಕ್ಕಾಗಿ ಆಂಧ್ರದಿಂದ ಬಂದ ರೈತರು ನ್ಯಾಯಾಲಯಕ್ಕೆ ತಿರುಗಲು ಸಾಧ್ಯವಿಲ್ಲ. ಮಾರುಕಟ್ಟೆಯ ಆಪತ್ತು ನಿಧಿಯಿಂದ ರೈತರಿಗೆ ಹಣವನ್ನು ನೀಡಬೇಕೆಂದು ಜಿಲ್ಲಾ ರೇಷ್ಮೆ ಕೃಷಿ ಹಿತರಕ್ಷಣಾ ಸಮಿತಿ ಅಧ್ಯಕ್ಷ ಯಲುವಳ್ಳಿ ಸೊಣ್ಣೇಗೌಡ ಒತ್ತಾಯಿಸಿದರು.
ನಗರದ ರೇಷ್ಮೆ ಗೂಡಿನ ಮಾರುಕಟ್ಟೆಯಲ್ಲಿ ರೇಷ್ಮೆ ಇಲಾಖೆಯ ಜಂಟಿ ನಿರ್ದೇಶಕ ಪ್ರಭಾಕರ್ ನೇತೃತ್ವದಲ್ಲಿ ನಡೆದ ರೈತರು ರೀಲರುಗಳ ಸಭೆಯಲ್ಲಿ ಹಲವು ಸಮಸ್ಯೆಗಳ ಪರಿಹಾರಕ್ಕೆ ರೈತರು ಮತ್ತು ರೀಲರುಗಳು ಒತ್ತಾಯಿಸಿದ ಸಂದರ್ಭದಲ್ಲಿ ಅವರು ಮಾತನಾಡಿದರು.
ನೆರೆಯ ರಾಜ್ಯದಿಂದ ಹಲವಾರು ರೈತರು ಉತ್ತಮ ಬೆಲೆ ಸಿಗುವುದೆಂದು ಶಿಡ್ಲಘಟ್ಟದ ರೇಷ್ಮೆ ಗೂಡಿನ ಮಾರುಕಟ್ಟೆಗೆ ಬರುತ್ತಾರೆ. ಅವರಿಗೆ ಚೆಕ್ ನೀಡಿ ಮೋಸ ಮಾಡಲಾಗುತ್ತಿದೆ. ಈ ಬಗ್ಗೆ ಸರ್ಕಾರದ ಮಟ್ಟದಲ್ಲಿ ಕ್ರಮ ಕೈಗೊಳ್ಳಬೇಕು. ಮುಂದೆ ಯಾರು ಯಾರಿಗೂ ಮಾರುಕಟ್ಟೆಯಲ್ಲಿ ಮೋಸಮಾಡದಂತೆ ಗುಣಪಾಠ ಕಲಿಸಬೇಕು. ರೈತರು ನ್ಯಾಯಾಲಯಕ್ಕೆ ಹೋಗಲು ಸಾಧ್ಯವಿಲ್ಲ. ಈಗಾಗಲೇ ಆಂಧ್ರದಲ್ಲಿ ಮಾಡಿರುವಂತೆ ಸರ್ಕಾರದ ಖಾತೆ ತೆರೆದು ಅದರ ಚೆಕ್ ರೈತರಿಗೆ ನೀಡುವಂತೆ ಅತಿ ಶೀಘ್ರವಾಗಿ ವ್ಯವಸ್ಥೆ ರೂಪಿಸಬೇಕು ಎಂದು ಅವರು ಒತ್ತಾಯಿಸಿದರು.
ಈ ಸಂದರ್ಭದಲ್ಲಿ ಮಾತನಾಡಿದ ರೇಷ್ಮೆ ಇಲಾಖೆಯ ಜಂಟಿ ನಿರ್ದೇಶಕ ಪ್ರಭಾಕರ್ ಈ ಬಗ್ಗೆ ಆಯುಕ್ತರೊಂದಿಗೆ ಚರ್ಚಿಸಿ ಕ್ರಮ ಕೈಗೊಳ್ಳುವುದಾಗಿ ತಿಳಿಸಿದರು.
ರೇಷ್ಮೆ ಗೂಡಿನ ಮಾರುಕಟ್ಟೆಯ ಆವರಣದಲ್ಲಿ ಖಾಸಗಿ ಮಾರುಕಟ್ಟೆ ಜಾರಿಯಲ್ಲಿದೆ. ಅದಕ್ಕೆ ಕಡಿವಾಣ ಹಾಕುವಂತೆ ರೀಲರುಗಳು ಮತ್ತು ರೈತರು ಕೋರಿದರು. ತೂಕ ಹಾಗೂ ಮಾಪನ ಇಲಾಖೆಯ ಮೂಲಕ ಕಾನೂನು ಕ್ರಮ ಕೈಗೊಳ್ಳಬೇಕು ಎಂದು ಒತ್ತಾಯಿಸಿದರು.
ರೈತ ಸಂಘದ ಜಿಲ್ಲಾಧ್ಯಕ್ಷ ಭಕ್ತರಹಳ್ಳಿ ಬೈರೇಗೌಡ, ರೀಲರುಗಳಾದ ಅನ್ವರ್‌ಪಾಷ, ರೆಹಮಾನ್, ಅನಂತ್, ಮಂಜುನಾಥ್, ಮೂರ್ತಿ ಹಾಜರಿದ್ದರು.
- Advertisement -
- Advertisement -
For Daily Updates
WhatsApp 'HI' to 7406303366
- Advertisement -
- Advertisement -