ರೈತರ ಮೇಲಿನ ಪೋಲಿಸ್ ಲಾಠಿ ಪ್ರಹಾರ ಖಂಡಿಸಿ ತಾಲ್ಲೂಕಿನಾದ್ಯಾಂತ ಬಂದ್ ಯಶಸ್ವಿಯಾಗಿ ಆಚರಿಸಲಾಯಿತು.
ತಾಲ್ಲೂಕಿನ ರೈತ ಸಂಘಟನೆ ಮತ್ತು ವಿವಿದ ಸಂಘಟನೆಗಳು ರೈತರ ಮೇಲಿನ ಪೋಲಿಸ್ ಲಾಠಿ ಪ್ರಹಾರವನ್ನು ಖಂಡಿಸಿ ತಾಲ್ಲೂಕಿನಾದ್ಯಾಂತ ರಸ್ತೆ ಬಂದ್ ಮಾಡಿ ಸರ್ಕಾರದ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು.
ಜಿಲ್ಲೆಯಲ್ಲಿ ಕಳೆದ ೧೬೫ ದಿನಗಳಿಂದ ನಡೆಯುತ್ತಿರುವ ಶಾಶ್ವತ ನೀರಾವರಿ ಹೋರಾಟಕ್ಕೆ ಸರಿಯಾಗಿ ಸರ್ಕಾರ ಸ್ಪಂದಿಸುತ್ತಿಲ್ಲ ಎಂದು ಮಾರ್ಚ್ ೩ ರಂದು ಬೆಂಗಳೂರಿನಲ್ಲಿ ಶಾಶ್ವತ ನೀರಾವರಿ ಹೋರಾಟ ಸಮಿತಿ ಹಮ್ಮಿಕೊಂಡಿದ್ದ ಪ್ರತಿಭಟನೆಗೆ ಜಿಲ್ಲೆದ್ಯಾಂತ ಪ್ರತಿ ಹಳ್ಳಿಯಿಂದ ಟ್ರಾಕ್ಟರ್ ಮೂಲಕ ಹೊರಟ ರೈತರನ್ನು ಬೆಂಗಳೂರಿನಲ್ಲಿ ತಡೆದ ಪೋಲಿಸರು ರೈತರ ಮೇಲೆ ಲಾಠಿ ಪ್ರಹಾರ ನಡೆಸಿದನ್ನು ಸರ್ಕಾರದ ವಿರುದ್ಧ ಘೋಷಣೆಗಳನ್ನು ಕೂಗುತ್ತಾ ಖಂಡಿಸಿದರು.
ನಗರದ ಬಸ್ ನಿಲ್ದಾಣದ ಬಳಿ ಚಿಂತಾಮಣಿ- ಮತ್ತು ಚಿಕ್ಕಬಳ್ಳಾಪುರ ಮುಖ್ಯ ರಸ್ತೆಗಳನ್ನು ಬಂದ್ ಮಾಡಿ ವಿವಿಧ ಸಂಘಟನೆಗಳ ಸದಸ್ಯರು ಮಾನವ ಸರಪಣಿ ನಿರ್ಮಿಸಿ ಸರ್ಕಾರದ ವಿರುದ್ದ ಘೋಷಣೆಯನ್ನು ಕೂಗಿದರು.
ರೈತರ ಮೇಲಿನ ಪೋಲಿಸ್ ಲಾಠಿ ಪ್ರಹಾರವನ್ನು ಖಂಡಿಸಿ ರೇಷ್ಮೆ ಗೂಡಿನ ಮಾರುಕಟ್ಟೆಯಲ್ಲಿ ವಿವಿದೆಡೆಯಿಂದ ಆಗಮಿಸಿದ್ದ ರೈತರು ಮಾರುಕಟ್ಟೆ ವಹಿವಾಟನ್ನು ಸ್ಥಗಿತಗೊಳಿಸಿ ಬಂದ್ಗೆ ಬೆಂಬಲ ಸೂಚಿಸಿದರು. ತಾಲ್ಲೂಕು ವಕೀಲರ ಸಂಘ ಕಲಾಪ ಬಹಿಷ್ಕರಿಸಿ ಬಂದ್ಗೆ ಬೆಂಬಲ ವ್ಯಕ್ತಪಡಿಸಿದರು.
ಅಂಗಡಿ ಮುಗ್ಗಟ್ಟುಗಳು,ಹೋಟೆಲ್, ಚಿತ್ರಮಂದಿರ, ಬ್ಯಾಂಕ್, ಶಾಲಾ ಕಾಲೇಜುಗಳು, ವಿವಿಧ ಕಚೇರಿಗಳು, ಸ್ವಯಂ ಪ್ರೇರಿತರಾಗಿ ಬಂದ್ ಮಾಡುವ ಮೂಲಕ ಪ್ರತಿಭಟನೆಗೆ ಬೆಂಬಲ ಸೂಚಿಸಿದರು.
ಬಂದ್ ದಿನಗಳಲ್ಲಿ ತೆರೆಯಲು ಅವಕಾಶವಿರುವ ಔಷಧಿ ಅಂಗಡಿಗಳು, ಪೊಲೀಸ್ ಲಾಠಿ ಏಟಿನಿಂದ ನೋವಿನಲ್ಲಿರುವ ರೈತರಿಗೆ ಮಾನಸಿಕ ಸ್ಥೈರ್ಯ ನೀಡುವ ನಿಟ್ಟಿನಲ್ಲಿ ಸ್ವಯಂಪ್ರೇರಿತರಾಗಿ ಬಾಗಿಲು ಮುಚ್ಚುವ ಮೂಲಕ ಬಂದ್ಗೆ ಸಾಥ್ ನೀಡಿದರು.
ನಗರದ ಉಲ್ಲೂರುಪೇಟೆಯ ನಿವಾಸಿ ಅಶ್ವಥ್ಥ ಎಂಬುವರಿಗೆ ಪೋಲಿಸರ ಲಾಠಿ ಪ್ರಹಾರದಿಂದ ಬೆರಳು ಮುರಿದಿರುವುದನ್ನು ಖಂಡಿಸಿ ಈ ಭಾಗದ ನಿವಾಸಿಗಳು ರಸ್ತೆಯಲ್ಲಿ ಬೆಂಕಿಯನ್ನು ಹಾಕಿ ಪ್ರತಿಭಟಿಸಿದರು.
ಅಪ್ಪೇಗೌಡನಹಳ್ಳಿ ಗ್ರಾಮದವರು ತಮ್ಮ ಗ್ರಾಮದ ರೈತರ ಮೇಲಿನ ಪೋಲಿಸ್ ಲಾಠಿ ಪ್ರಹಾರವನ್ನು ಖಂಡಿಸಿ ನೂರಾರು ಯುವಕರು ಬೆಂಗಳೂರು ಮುಖ್ಯ ರಸ್ತೆಯಲ್ಲಿ ಮುಳ್ಳು ಮತ್ತು ಮರದ ದಿಂಡುಗಳನ್ನು ಹಾಕಿ ರಸ್ತೆತಡೆ ನಡೆಸಿ ಪ್ರತಿಭಟಿಸಿದರು.
ಶಾಶ್ವತ ನೀರಾವರಿ ಹೋರಾಟ ಸಮಿತಿ ಉಪಾದ್ಯಕ್ಷ ಹರೀಶ್ಗೆ ಪೋಲಿಸರ ಲಾಠಿ ಪ್ರಹಾರದಿಂದ ಕಾಲಿನ ಮೂಳೆ ಮುರಿದಿರುವ ಹಿನ್ನೆಲೆಯಲ್ಲಿ, ಮೇಲೂರು, ಮಳ್ಳೂರು ಭಾಗದಲ್ಲಿ ತೀವ್ರ ಆಕ್ರೋಶ ವ್ಯಕ್ತವಾಯಿತು. ಹಲವೆಡೆ ರಸ್ತೆಯಲ್ಲೇ ಅಡುಗೆಗಳನ್ನು ಮಾಡಿದರು.
ತಾಲ್ಲೂಕಿನ ಜಂಗಮಕೋಟೆ, ಎಚ್ಕ್ರಾಸ್, ನಾಗಮಂಗಲ, ಹೊಸಪೇಟೆ, ಮಳಮಾಚನಹಳ್ಳಿ, ಬೋದಗೂರು, ಆನೂರು, ದಿಬ್ಬೂರಳ್ಳಿ, ಮೇಲೂರು, ಮಳ್ಳೂರು, ಅಬ್ಲೂಡು, ಸೊಣ್ಣೆನಹಳ್ಳಿ, ತಲದುಮ್ಮನಹಳ್ಳಿ, ಬಚ್ಚಹಳ್ಳಿ, ಕೊತ್ತನೂರು, ಸಾದಲಿ ಗ್ರಾಮಗಳಲ್ಲಿ ರಸ್ತೆ ತಡೆನಡೆಸಿದ ರೈತರು ಸರ್ಕಾರ ಹಾಗೂ ಪೊಲೀಸ್ ಇಲಾಖೆ ವಿರುದ್ಧ ಘೋಷಣೆಗಳನ್ನು ಕೂಗಿ ಆಕ್ರೋಶ ವ್ಯಕ್ತಪಡಿಸಿದರು.
- Advertisement -
- Advertisement -
For Daily Updates
WhatsApp 'HI' to 7406303366
- Advertisement -
- Advertisement -