Sidlaghatta : ಶಿಡ್ಲಘಟ್ಟ : ಶಿಡ್ಲಘಟ್ಟ ನಗರಸಭೆ ಪೌರಾಯುಕ್ತೆಗೆ ಮೊಬೈಲ್ ಕರೆ ಮಾಡಿ ಧಮ್ಕಿ ಹಾಕಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಬಂಧಿತರಾಗಿರುವ ಕಾಂಗ್ರೆಸ್ ಮುಖಂಡ ರಾಜೀವ್ ಗೌಡ ಅವರನ್ನು ಶಿಡ್ಲಘಟ್ಟ ಜೆಎಂಎಫ್ಸಿ ನ್ಯಾಯಾಲಯವು ಫೆ.9ರವರೆಗೆ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿದೆ.
ರಾಜೀವ್ ಗೌಡ ಅವರಿಗೆ ಆಶ್ರಯ ನೀಡಿದ ಆರೋಪದಲ್ಲಿ ಬಂಧಿತರಾಗಿದ್ದ ಮಂಗಳೂರಿನ ಉದ್ಯಮಿ ಮೈಕಲ್ ಅವರಿಗೆ ಷರತ್ತುಬದ್ಧ ಜಾಮೀನು ಮಂಜೂರು ಮಾಡಿದೆ. ರಾಜೀವ್ ಗೌಡ ಅವರನ್ನು ಚಿಂತಾಮಣಿಯ ಉಪಕಾರಾಗೃದಲ್ಲಿ ಇರಿಸಲಾಗಿದೆ.
ವಿಚಾರಣೆಗಾಗಿ ರಾಜೀವ್ ಗೌಡ ಅವರನ್ನು ತಮ್ಮ ವಶಕ್ಕೆ ನೀಡುವಂತೆ ಪೊಲೀಸರು ಸಲ್ಲಿಸಿದ ಮನವಿಯನ್ನು ನ್ಯಾಯಾಧೀಶರು ತಿರಸ್ಕರಿಸಿದರು. ತಮ್ಮ ಕಕ್ಷಿದಾರರು ಸಮಾಜದಲ್ಲಿ ಪ್ರತಿಷ್ಠಿತ ವ್ಯಕ್ತಿ ಆಗಿದ್ದಾರೆ. ಕಾರಾಗೃಹಕ್ಕೆ ಕಳುಹಿಸಬಾರದು ಎಂದು ರಾಜೀವ್ ಗೌಡ ಪರ ವಕೀಲರು ಸಲ್ಲಿಸಿದ್ದ ಮಧ್ಯಂತರ ಜಾಮೀನು ಅರ್ಜಿಯನ್ನೂ ವಜಾಗೊಳಿಸಿದ ನ್ಯಾಯಾಧೀಶರು ಬುಧವಾರ ಜಾಮೀನಿನ ವಿಚಾರಣೆ ಆರಂಭಿಸುವುದಾಗಿ ತಿಳಿಸಿದರು.
ರಾಜೀವ್ ಗೌಡ ಪರ ವಿವೇಕ್ ಸುಬ್ಬಾರೆಡ್ಡಿ, ಸರ್ಕಾರದ ಪರ ಮಹಮ್ಮದ್ ಖಾಜಾ ವಾದ ಮಂಡಿಸಿದರು.
ಸೋಮವಾರ ಕೇರಳದ ಮಲ್ಲಪ್ಪುರಂ ಜಿಲ್ಲೆಯ ವಾಜಿ ಕಡಬು ಎಂಬಲ್ಲಿ ರಾಜೀವ್ ಗೌಡ ಮತ್ತು ಉದ್ಯಮಿ ಮೈಕಲ್ ಅವರನ್ನು ಚಿಕ್ಕಬಳ್ಳಾಪುರ ಪೊಲೀಸರು ಬಂಧಿಸಿದ್ದರು. ಮಂಗಳವಾರ ಬೆಳಗಿನ ಜಾವ ಚಿಕ್ಕಬಳ್ಳಾಪುರಕ್ಕೆ ಕರೆ ತಂದ ಪೊಲೀಸರು ಮಧ್ಯಾಹ್ನದವರೆಗೆ ಪೊಲೀಸ್ ಅತಿಥಿ ಗೃಹದಲ್ಲಿ ವಿಚಾರಣೆ ನಡೆಸಿದರು. ನಂತರ ಜಿಲ್ಲಾ ಆಸ್ಪತ್ರೆಯಲ್ಲಿ ವೈದ್ಯಕೀಯ ಪರೀಕ್ಷೆಗೆ ಒಳಪಡಿಸಿ ಶಿಡ್ಲಘಟ್ಟ ನ್ಯಾಯಾಲಯಕ್ಕೆ ಹಾಜರುಪಡಿಸಿದರು.
Sidlaghatta : ಹೈನುಗಾರಿಕೆಯಲ್ಲಿ ವಿಶ್ವದಲ್ಲೇ ಮುಂಚೂಣಿಯಲ್ಲಿರುವ ಸ್ವಿಟ್ಜರ್ಲೆಂಡ್ ದೇಶದ ವಿಜ್ಞಾನಿಗಳು ಮತ್ತು ರೈತರ ತಂಡವೊಂದು ಸೋಮವಾರ ರೇಷ್ಮೆ ನಾಡು ಶಿಡ್ಲಘಟ್ಟಕ್ಕೆ ಭೇಟಿ ನೀಡಿ ಇಲ್ಲಿನ ‘ಸಿಲ್ಕ್ ಮತ್ತು ಮಿಲ್ಕ್’ (ರೇಷ್ಮೆ ಮತ್ತು ಹಾಲು) ಸಂಯೋಜನೆಯ ಕೃಷಿ ಪದ್ಧತಿಯನ್ನು ಅಧ್ಯಯನ ಮಾಡಿತು.
ಜಿಕೆವಿಕೆ (GKVK) ರೇಷ್ಮೆ ಕೃಷಿ ವಿಭಾಗದ ವಿಜ್ಞಾನಿ ಡಾ. ಚಂದ್ರಶೇಖರ್ ಅವರ ನೇತೃತ್ವದಲ್ಲಿ ಆಗಮಿಸಿದ 22 ಜನರ ಈ ತಂಡದಲ್ಲಿ ವಿಜ್ಞಾನಿಗಳು, ಉದ್ಯಮಿಗಳು ಮತ್ತು ತಂತ್ರಜ್ಞರಿದ್ದರು.
ಹಂತ ಹಂತವಾಗಿ ಅಧ್ಯಯನ: ತಂಡವು ತಾಲ್ಲೂಕಿನ ಹಿತ್ತಲಹಳ್ಳಿಯ ಪ್ರಗತಿಪರ ರೈತ ಎಚ್.ಜಿ. ಗೋಪಾಲಗೌಡ ಅವರ ತೋಟಕ್ಕೆ ಭೇಟಿ ನೀಡಿ, ಹಿಪ್ಪುನೇರಳೆ ಕೃಷಿ ಮತ್ತು ರೇಷ್ಮೆ ಹುಳು ಸಾಕಾಣಿಕೆಯನ್ನು ವೀಕ್ಷಿಸಿತು. ನಂತರ ರೇಷ್ಮೆ ಗೂಡಿನ ಮಾರುಕಟ್ಟೆ, ನಾರಾಯಣಪ್ಪ ಅವರ ನೂಲು ಬಿಚ್ಚಾಣಿಕೆ ಕೇಂದ್ರ ಮತ್ತು ಮಧು ಅವರ ಸ್ವಯಂಚಾಲಿತ ರೀಲಿಂಗ್ ಘಟಕಗಳಿಗೆ ಭೇಟಿ ನೀಡಿ, ಗೂಡಿನಿಂದ ರೇಷ್ಮೆ ನೂಲು ತಯಾರಾಗುವವರೆಗಿನ ಪ್ರಕ್ರಿಯೆಯನ್ನು ಆಸಕ್ತಿಯಿಂದ ತಿಳಿದುಕೊಂಡರು.
ಸ್ವಿಸ್ ತಂತ್ರಜ್ಞಾನಕ್ಕೆ ಇಲ್ಲಿನ ಮಾದರಿ: ವಿಜ್ಞಾನಿ ಡಾ. ಚಂದ್ರಶೇಖರ್ ಮಾತನಾಡಿ, “ಸ್ವಿಟ್ಜರ್ಲೆಂಡ್ ಹೈನುಗಾರಿಕೆಯಲ್ಲಿ ಶ್ರೀಮಂತವಾಗಿದೆ. ಆದರೆ, ನಮ್ಮ ಭಾಗದ ರೈತರು ಹೈನುಗಾರಿಕೆಯ ಜೊತೆಗೆ ರೇಷ್ಮೆಯನ್ನು ಪೂರಕವಾಗಿ ಬೆಳೆಯುತ್ತಿರುವ ವಿಧಾನ ಅವರಿಗೆ ಆಶ್ಚರ್ಯ ಮೂಡಿಸಿದೆ. ಇಲ್ಲಿನ ಸಾವಯವ ಕೃಷಿ ಮತ್ತು ಮಾರುಕಟ್ಟೆ ವ್ಯವಸ್ಥೆಯನ್ನು ಅವರು ತಮ್ಮ ದೇಶದಲ್ಲಿ ಅಳವಡಿಸಿಕೊಳ್ಳಲು ಉತ್ಸುಕರಾಗಿದ್ದಾರೆ,” ಎಂದರು.
ಪ್ರಗತಿಪರ ಕೃಷಿಕ ಗೋಪಾಲಗೌಡ ಅವರು ವಿದೇಶಿ ಪ್ರತಿನಿಧಿಗಳಿಗೆ ಸಾವಯವ ಕೃಷಿಯ ಮಹತ್ವವನ್ನು ವಿವರಿಸಿದರು. ರೇಷ್ಮೆ ಬೆಳೆಗಾರರಾದ ಬೋದಗೂರು ವೆಂಕಟಸ್ವಾಮಿರೆಡ್ಡಿ, ಎಚ್.ಕೆ. ಸುರೇಶ್ ಸೇರಿದಂತೆ ಹಲವು ಗಣ್ಯರು ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು.
Sidlaghatta : “ಭಾರತದ ಸಂವಿಧಾನವು ಸಮಾಜದ ಕಟ್ಟಕಡೆಯ ಪ್ರಜೆಗೂ ಸಮಾನತೆ ಮತ್ತು ಗೌರವದಿಂದ ಬದುಕುವ ಹಕ್ಕನ್ನು ನೀಡಿದೆ. ಸಂವಿಧಾನದ ಚೌಕಟ್ಟಿನಲ್ಲಿ ಪ್ರತಿಯೊಂದು ಮಗುವಿಗೂ ಗುಣಮಟ್ಟದ ಶಿಕ್ಷಣ ಸಿಗುವುದು ಅತ್ಯಗತ್ಯ,” ಎಂದು ಶಾಸಕ ಬಿ.ಎನ್.ರವಿಕುಮಾರ್ ತಿಳಿಸಿದರು.
ನಗರದ ನೆಹರೂ ಕ್ರೀಡಾಂಗಣದಲ್ಲಿ ರಾಷ್ಟ್ರೀಯ ಹಾಗೂ ನಾಡ ಹಬ್ಬಗಳ ಆಚರಣಾ ಸಮಿತಿ ವತಿಯಿಂದ ಸೋಮವಾರ ಆಯೋಜಿಸಲಾಗಿದ್ದ 77ನೇ ಗಣರಾಜ್ಯೋತ್ಸವ ಸಮಾರಂಭದಲ್ಲಿ ಧ್ವಜಾರೋಹಣ ನೆರವೇರಿಸಿ ಅವರು ಮಾತನಾಡಿದರು.
ಯುವಶಕ್ತಿಯೇ ದೇಶದ ಭವಿಷ್ಯ: “ಭಾರತವು ಇಂದು ವಿಶ್ವದ ಮೂರನೇ ಅತಿದೊಡ್ಡ ಆರ್ಥಿಕತೆಯಾಗುವತ್ತ ವೇಗವಾಗಿ ಸಾಗುತ್ತಿದೆ. ಈ ಕನಸನ್ನು ನನಸು ಮಾಡುವ ಜವಾಬ್ದಾರಿ ಯುವಜನತೆಯ ಮೇಲಿದೆ. ಕೇವಲ ಕನಸು ಕಾಣುವವರಾಗದೆ, ಆ ಕನಸನ್ನು ನನಸು ಮಾಡುವ ಕಾಯಕಯೋಗಿಗಳಾಗಿ ಯುವಶಕ್ತಿ ಬೆಳೆಯಬೇಕು,” ಎಂದು ಅವರು ಕರೆ ನೀಡಿದರು. ಶಿಕ್ಷಕರು ಮಕ್ಕಳಿಗೆ ಸಂವಿಧಾನದ ರಚನೆ ಮತ್ತು ಉದ್ದೇಶಗಳ ಬಗ್ಗೆ ಬಾಲ್ಯದಿಂದಲೇ ಅರಿವು ಮೂಡಿಸಬೇಕು ಎಂದು ಅವರು ಒತ್ತಿ ಹೇಳಿದರು.
ಸರ್ಕಾರಿ ಶಾಲಾ ಸಾಧಕರಿಗೆ 50 ಸಾವಿರ ರೂ. ಬಹುಮಾನ: ಕಾರ್ಯಕ್ರಮದಲ್ಲಿ ಎಸ್ಎಸ್ಎಲ್ಸಿ ಪರೀಕ್ಷೆಯಲ್ಲಿ ಅತಿ ಹೆಚ್ಚು ಅಂಕ ಪಡೆದ ಸರ್ಕಾರಿ ಶಾಲೆಯ ಮೂವರು ವಿದ್ಯಾರ್ಥಿಗಳಿಗೆ ತಲಾ 50 ಸಾವಿರ ರೂ.ಗಳ ನಗದು ಬಹುಮಾನ ನೀಡಿ ಗೌರವಿಸಲಾಯಿತು. ವಿವಿಧ ಶಾಲಾ ಮಕ್ಕಳಿಂದ ನಡೆದ ಪಥಸಂಚಲನ ಮತ್ತು ಸಾಂಸ್ಕೃತಿಕ ನೃತ್ಯರೂಪಕಗಳು ನೋಡುಗರ ಗಮನ ಸೆಳೆದವು.
ತಹಶೀಲ್ದಾರ್ ಗಗನಸಿಂಧು ಮಾತನಾಡಿ, “ಜಾತ್ಯತೀತ ಮೌಲ್ಯಗಳು ಮತ್ತು ಭ್ರಾತೃತ್ವದ ಮೂಲಕ ದೇಶವನ್ನು ಪ್ರಗತಿಯತ್ತ ಕೊಂಡೊಯ್ಯೋಣ. ತಾಲ್ಲೂಕು ಆಡಳಿತವು ಜನಸ್ನೇಹಿಯಾಗಿ ಕಾರ್ಯನಿರ್ವಹಿಸಿ ಪ್ರತಿಯೊಬ್ಬರಿಗೂ ಹಕ್ಕುಗಳನ್ನು ಒದಗಿಸಲು ಬದ್ಧವಾಗಿದೆ,” ಎಂದರು. ತಾಲ್ಲೂಕು ಪಂಚಾಯಿತಿ ಇಓ ಹೇಮಾವತಿ, ಪೌರಾಯುಕ್ತೆ ಜಿ.ಅಮೃತಾ ಸೇರಿದಂತೆ ಹಲವು ಗಣ್ಯರು ಉಪಸ್ಥಿತರಿದ್ದರು.
Sidlaghatta : “ಇಂದಿನ ರಾಜಕಾರಣವು ಕೇವಲ ಹಣದ ವ್ಯವಹಾರವಾಗಿ ಮಾರ್ಪಟ್ಟಿದೆ. ಯಾರು ಹೆಚ್ಚು ಬಂಡವಾಳ ಹಾಕಬಲ್ಲರೋ ಮತ್ತು ಯಾರು ಜಾತಿ-ಧರ್ಮಗಳನ್ನು ಪ್ರಚೋದಿಸಬಲ್ಲರೋ ಅವರನ್ನೇ ಯೋಗ್ಯ ಅಭ್ಯರ್ಥಿಗಳೆಂದು ಪಕ್ಷಗಳು ಪರಿಗಣಿಸುತ್ತಿವೆ,” ಎಂದು ಕರ್ನಾಟಕ ರಾಜ್ಯ ರೈತ ಸಂಘ ಹಾಗೂ ಹಸಿರುಸೇನೆ ರಾಜ್ಯಾಧ್ಯಕ್ಷ ಕೋಡಿಹಳ್ಳಿ ಚಂದ್ರಶೇಖರ್ ತೀವ್ರ ಆಕ್ರೋಶ ವ್ಯಕ್ತಪಡಿಸಿದರು.
ನಗರದ ಶ್ರೀರಾಮ ಪ್ಯಾಲೆಸ್ನಲ್ಲಿ ಆಯೋಜಿಸಲಾಗಿದ್ದ “ಮಣ್ಣಿನ ಆರೋಗ್ಯ ಮತ್ತು ರೈತರ ಭೂಮಿ ರೈತರಿಂದ ಕಳೆದುಹೋಗುತ್ತಿರುವ ಬಗ್ಗೆ” ವಿಚಾರ ಸಂಕೀರ್ಣದಲ್ಲಿ ಅವರು ಮಾತನಾಡುತ್ತಿದ್ದರು.
ಪರ್ಯಾಯ ರಾಜಕಾರಣದತ್ತ ಹೆಜ್ಜೆ: ಪ್ರಸ್ತುತ ಇರುವ ಭ್ರಷ್ಟ ರಾಜಕಾರಣಕ್ಕೆ ಪರ್ಯಾಯ ಮಾರ್ಗವನ್ನು ಕಂಡುಕೊಳ್ಳಲು ಮಾರ್ಚ್ ಕೊನೆಯಲ್ಲಿ ಕಲ್ಬುರ್ಗಿಯಲ್ಲಿ ಬೃಹತ್ ರೈತ ಸಮಾವೇಶ ಆಯೋಜಿಸಲಾಗುತ್ತಿದೆ ಎಂದು ಅವರು ಘೋಷಿಸಿದರು. “ಗಾಂಧಿಯ ಹೆಸರನ್ನು ತೆಗೆದು ರಾಮನ ಹೆಸರನ್ನು ಇಡುವುದರಿಂದ ಕ್ರಾಂತಿಯಾಗುತ್ತದೆ ಎಂಬ ಭ್ರಮೆಯಿದ್ದರೆ ಅದು ಮೂರ್ಖತನ. ರಾಜಕೀಯ ಪಕ್ಷಗಳು ಬಡವರನ್ನು ಮೇಲೆತ್ತುವ ಬದಲು ಯೋಜನೆಗಳನ್ನು ರಾಜಕೀಯ ಅಸ್ತ್ರವನ್ನಾಗಿ ಬಳಸಿಕೊಳ್ಳುತ್ತಿವೆ,” ಎಂದು ಅವರು ಟೀಕಿಸಿದರು.
ಸರ್ಕಾರದ ವಿರುದ್ಧ ವಾಗ್ದಾಳಿ: ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ವಿರೋಧ ಪಕ್ಷದಲ್ಲಿದ್ದಾಗ ಭೂಸ್ವಾಧೀನ ಕಾಯ್ದೆಯನ್ನು ವಿರೋಧಿಸಿ ಈಗ ಅದನ್ನು ಮುಂದುವರಿಸುತ್ತಿರುವುದು ದೌರ್ಭಾಗ್ಯ. ರೈತರಿಂದ ಜಮೀನು ಪಡೆದು ಕೈಗಾರಿಕೆಗಳಿಗೆ ನೀಡುವ ಮೂಲಕ ಅನ್ನದಾತನನ್ನು ಕಡೆಗಣಿಸಲಾಗುತ್ತಿದೆ ಎಂದು ಅಸಮಾಧಾನ ವ್ಯಕ್ತಪಡಿಸಿದರು.
ಮಣ್ಣಿನ ಆರೋಗ್ಯವೇ ಜೀವಾಳ: ಕೋಲಾರ ಕೃಷಿ ವಿಜ್ಞಾನ ಕೇಂದ್ರದ ಡಾ.ಎಸ್. ಅನಿಲ್ ಕುಮಾರ್ ಮಾತನಾಡಿ, “ಭೂಮಿ ಕೇವಲ ಆಹಾರ ಬೆಳೆಯುವ ಕಾರ್ಖಾನೆಯಲ್ಲ, ಅದು ನಮ್ಮ ಸಂಸ್ಕೃತಿ. ರಾಸಾಯನಿಕಗಳ ಅತಿಯಾದ ಬಳಕೆಯಿಂದ ಮಣ್ಣಿನ ಆರೋಗ್ಯ ಕೆಡುತ್ತಿದೆ,” ಎಂದು ಎಚ್ಚರಿಸಿದರು. ತಹಶೀಲ್ದಾರ್ ಗಗನಸಿಂಧು ಅವರು ಮಾತನಾಡಿ, ರೈತರ ಸಮಸ್ಯೆಗಳಿಗೆ ತಾಲೂಕು ಕಚೇರಿಯಲ್ಲಿ ಮೊದಲ ಆದ್ಯತೆ ನೀಡಲಾಗುವುದು ಎಂದು ಭರವಸೆ ನೀಡಿದರು.
Sidlaghatta : ಶಿಡ್ಲಘಟ್ಟ ನಗರಸಭೆ ಪೌರಾಯುಕ್ತೆ ಅಮೃತ ಅವರ ಮೇಲೆ ಧಮ್ಕಿ ಹಾಕಿ, ಅವಾಚ್ಯ ಶಬ್ಧಗಳಿಂದ ನಿಂದಿಸಿದ ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿರುವ ಕಾಂಗ್ರೆಸ್ ಪಕ್ಷವು ರಾಜೀವ್ ಗೌಡ ಅವರನ್ನ ಪಕ್ಷದಿಂದ ಅಮಾನತ್ತು ಮಾಡಿದೆ.
ಕೆಪಿಸಿಸಿಯ ಶಿಸ್ತುಪಾಲನಾ ಸಮಿತಿಯ ಶಿಫಾರಸ್ಸಿನಂತೆ ಕೆಪಿಸಿಸಿಯ ಶಿಸ್ತುಪಾಲನಾ ಸಮಿತಿಯ ಅಧ್ಯಕ್ಷ ಕೆ.ರೆಹಮಾನ್ ಖಾನ್ ಅವರು ರಾಜೀವ್ ಗೌಡ ಅವರನ್ನು ಪಕ್ಷದಿಂದ ಅಮಾನತ್ತು ಮಾಡಿ ಆದೇಶಿಸಿದ್ದಾರೆ.
ಸಚಿವ ಜಮೀರ್ ಅಹ್ಮದ್ ಪುತ್ರ ಝೈದ್ ಖಾನ್ ಅಭಿನಯದ ಚಿತ್ರ ಕಲ್ಟ್ ಚಿತ್ರದ ಪ್ರಚಾರ ಫ್ಲೆಕ್ಸ್ ನ್ನು ತೆರವುಗೊಳಿಸಿದ ಹಿನ್ನಲೆಯಲ್ಲಿ ರಾಜೀವ್ಗೌಡ ಅವರು ಪೌರಾಯುಕ್ತೆ ಅಮೃತ ಅವರಿಗೆ ಕರೆ ಮಾಡಿ ಅವಾಚ್ಯ ಶಬ್ಧಗಳಿಂದ ನಿಂದಿಸಿ ಧಮ್ಕಿ ಹಾಕಿದ್ದರು.
ಈ ಆಡಿಯೋ ವೈರಲ್ ಆಗಿತ್ತಲ್ಲದೆ ರಾಜ್ಯಾದ್ಯಂತ ಸಂಚಲನ ಮೂಡಿಸಿತ್ತು. ಕಾಂಗ್ರೆಸ್ ಪಕ್ಷದ ಮುಖಂಡರು ಕೂಡ ಘಟನೆಯನ್ನು ಸಮರ್ಥಿಸಿಕೊಳ್ಳಲಾಗದೆ ಮುಜುಗರ ಪಡುವಂತಾಗಿತ್ತು.
Sidlaghatta : ಬೆಂಗಳೂರಿನ ಉಚ್ಚ ನ್ಯಾಯಾಲಯದ (High Court) ಆವರಣದಲ್ಲಿ ಕಾರ್ಯನಿರ್ವಹಿಸುತ್ತಿರುವ ರಾಜ್ಯದ ಏಕೈಕ ಮತ್ತು ಪ್ರತಿಷ್ಠಿತ ನ್ಯಾಯಮಿತ್ರ ಸಹಕಾರಿ ಬ್ಯಾಂಕ್ನ ಅಧ್ಯಕ್ಷ ಗಾದಿ ಈ ಬಾರಿ ಶಿಡ್ಲಘಟ್ಟದ ಪಾಲಾಗಿದೆ. ಶಿಡ್ಲಘಟ್ಟದ ಹಿರಿಯ ವಕೀಲರಾದ ಎಸ್.ಬಿ. ಶ್ರೀನಿವಾಸ್ ಅವರು ಈ ಬ್ಯಾಂಕ್ನ ನೂತನ ಅಧ್ಯಕ್ಷರಾಗಿ ಅಧಿಕಾರ ವಹಿಸಿಕೊಂಡಿದ್ದಾರೆ.
ಸುಮಾರು 10 ಸಾವಿರಕ್ಕೂ ಹೆಚ್ಚು ವಕೀಲರು ಷೇರುದಾರರಾಗಿರುವ ಈ ಬ್ಯಾಂಕ್ ರಾಜ್ಯದ ನ್ಯಾಯಾಂಗ ವಲಯದಲ್ಲಿ ಅತ್ಯಂತ ಮಹತ್ವದ ಸ್ಥಾನ ಹೊಂದಿದೆ. ಒಟ್ಟು 17 ಮಂದಿ ನಿರ್ದೇಶಕರನ್ನು (ಡೆಲಿಗೇಟ್ಸ್) ಒಳಗೊಂಡಿರುವ ಈ ಬ್ಯಾಂಕ್ನ ಇತಿಹಾಸದಲ್ಲೇ ಚಿಕ್ಕಬಳ್ಳಾಪುರ ಜಿಲ್ಲೆಯಿಂದ ಆಯ್ಕೆಯಾದ ಮೊದಲ ಮತ್ತು ಏಕೈಕ ಪ್ರತಿನಿಧಿ ಎಂಬ ಹೆಗ್ಗಳಿಕೆಗೆ ಎಸ್.ಬಿ. ಶ್ರೀನಿವಾಸ್ ಪಾತ್ರರಾಗಿದ್ದರು. ಈಗ ಅವರು ಬ್ಯಾಂಕ್ನ ಅತ್ಯುನ್ನತ ‘ಅಧ್ಯಕ್ಷ’ ಸ್ಥಾನಕ್ಕೇರುವ ಮೂಲಕ ಜಿಲ್ಲೆಯ ಕೀರ್ತಿಯನ್ನು ಹೆಚ್ಚಿಸಿದ್ದಾರೆ.
ಅಧ್ಯಕ್ಷರಾಗಿ ಆಯ್ಕೆಗೊಂಡ ಎಸ್.ಬಿ. ಶ್ರೀನಿವಾಸ್ ಅವರನ್ನು ಬ್ಯಾಂಕ್ನ ಎಲ್ಲಾ ನಿರ್ದೇಶಕರು ಹಾಗೂ ಹೈಕೋರ್ಟ್ನ ವಕೀಲರು ಹೂಮಾಲೆ ಹಾಕಿ, ಸಿಹಿ ಹಂಚಿ ಸಂಭ್ರಮಿಸಿದರು. ವಕೀಲ ಸಮುದಾಯದ ಆರ್ಥಿಕ ಭದ್ರತೆ ಮತ್ತು ಬ್ಯಾಂಕ್ನ ಅಭಿವೃದ್ಧಿಗೆ ಪ್ರಾಮಾಣಿಕವಾಗಿ ಶ್ರಮಿಸುವುದಾಗಿ ಈ ಸಂದರ್ಭದಲ್ಲಿ ಶ್ರೀನಿವಾಸ್ ಅವರು ಭರವಸೆ ನೀಡಿದರು.
Sidlaghatta : “ಹಿಂದೂ ಸಮಾಜದ ಮೇಲೆ ನಡೆಯುತ್ತಿರುವ ದೌರ್ಜನ್ಯಗಳ ಬಗ್ಗೆ ಜಾಗೃತಿ ಮೂಡಿಸಲು ಹಾಗೂ ಇಡೀ ಸಮಾಜವನ್ನು ಒಗ್ಗೂಡಿಸಲು ಫೆಬ್ರವರಿ 1 ರಂದು ನಗರದಲ್ಲಿ ಬೃಹತ್ ಹಿಂದೂ ಸಮಾಜೋತ್ಸವ ಹಮ್ಮಿಕೊಳ್ಳಲಾಗಿದೆ,” ಎಂದು ಬಿಜೆಪಿ ಗ್ರಾಮಾಂತರ ಮಂಡಲ ಅಧ್ಯಕ್ಷ ಸೀಕಲ್ ಆನಂದಗೌಡ ತಿಳಿಸಿದರು.
ನಗರದ ಕೋಟೆ ವೃತ್ತದ ಶ್ರೀ ಸೋಮೇಶ್ವರ ದೇವಾಲಯದಲ್ಲಿ ಗುರುವಾರ ವಿಶೇಷ ಪೂಜೆ ಸಲ್ಲಿಸಿ, ಕಾರ್ಯಕ್ರಮದ ಕರಪತ್ರಗಳನ್ನು ಬಿಡುಗಡೆ ಮಾಡಿ ಅವರು ಮಾತನಾಡಿದರು.
“ಈ ಸಮಾಜೋತ್ಸವವು ಯಾವುದೇ ಅನ್ಯ ಧರ್ಮಗಳ ವಿರುದ್ಧ ಮಾಡುವ ಶಕ್ತಿ ಪ್ರದರ್ಶನವಲ್ಲ. ಸಾವಿರಾರು ವರ್ಷಗಳ ಇತಿಹಾಸವಿರುವ ಭಾರತದಲ್ಲಿ ನಾವೆಲ್ಲರೂ ಸುಖ-ಶಾಂತಿಯಿಂದ ಬದುಕಬೇಕು. ಆದರೆ ಹಿಂದೂಗಳ ಮೇಲೆ ನಿರಂತರವಾಗಿ ನಡೆಯುತ್ತಿರುವ ದಬ್ಬಾಳಿಕೆಯನ್ನು ಎದುರಿಸಲು ನಮ್ಮಲ್ಲಿ ಒಗ್ಗಟ್ಟು ಅಗತ್ಯ. ಆ ಉದ್ದೇಶದಿಂದಲೇ ಈ ಕಾರ್ಯಕ್ರಮ ರೂಪಿಸಲಾಗಿದೆ,” ಎಂದು ಅವರು ಸ್ಪಷ್ಟಪಡಿಸಿದರು.
ಫೆಬ್ರವರಿ 1 ರ ಭಾನುವಾರ ಬೆಳಿಗ್ಗೆ 11 ಗಂಟೆಗೆ ನಗರದ ಬಸ್ ನಿಲ್ದಾಣದಿಂದ ಬೃಹತ್ ಶೋಭಾಯಾತ್ರೆ ಆರಂಭವಾಗಲಿದೆ. ಇದು ನಗರದ ಪ್ರಮುಖ ರಸ್ತೆಗಳಲ್ಲಿ ಸಾಗಿ ಕೋಟೆ ವೃತ್ತವನ್ನು ತಲುಪಲಿದೆ. ಮಧ್ಯಾಹ್ನ 2:30 ಕ್ಕೆ ವೇದಿಕೆ ಕಾರ್ಯಕ್ರಮ ನಡೆಯಲಿದ್ದು, ಕೋಲಾರ ಜಿಲ್ಲಾ ಸಂಘಚಾಲಕ ಗೋವಿಂದರಾಜ್ ಅವರು ಮುಖ್ಯ ಭಾಷಣ ಮಾಡಲಿದ್ದಾರೆ.
ಈ ಸಂದರ್ಭದಲ್ಲಿ ಸಮಿತಿ ಅಧ್ಯಕ್ಷ ಪ್ರಕಾಶ್, ಉಪಾಧ್ಯಕ್ಷ ಶ್ರೀನಿವಾಸ್, ಬಿಜೆಪಿ ನಗರ ಮಂಡಲ ಅಧ್ಯಕ್ಷ ನರೇಶ್ ಸೇರಿದಂತೆ ಹಲವು ಪ್ರಮುಖ ಮುಖಂಡರು ಉಪಸ್ಥಿತರಿದ್ದರು.