ದೇಶದ ಏಳಿಗೆಯು ಯುವಜನತೆಯ ಮೇಲೆ ಅವಲಂಬಿಸಿದ್ದು ದೇಶದಲ್ಲಿನ ಭ್ರಷ್ಟಾಚಾರ ಹಾಗೂ ಭಯೋತ್ಪಾದನೆ ನಿರ್ಮೂಲನೆ ಮಾಡಿ ರಾಷ್ಟ್ರದ ಪರಿವರ್ತನೆಗೆ ಯುವಜನತೆ ಮುಂದಾಗಬೇಕು ಎಂದು ಶಾಸಕ ವಿ.ಮುನಿಯಪ್ಪ ಹೇಳಿದರು.
ನಗರದ ನೆಹರೂ ಕ್ರೀಡಾಂಗಣದಲ್ಲಿ ರಾಷ್ಟ್ರೀಯ ಹಾಗೂ ನಾಡ ಹಬ್ಬಗಳ ಆಚರಣಾ ಸಮಿತಿ ವತಿಯಿಂದ ಗುರುವಾರ ಆಯೋಜನೆ ಮಾಡಲಾಗಿದ್ದ 74ನೇ ವರ್ಷದ ಗಣರಾಜ್ಯೋತ್ಸವ ಸಮಾರಂಭದಲ್ಲಿ ಭಾಗವಹಿಸಿ ಅವರು ಮಾತನಾಡಿದರು.
ಅತಿ ಹೆಚ್ಚು ಮಾನವ ಸಂಪನ್ಮೂಲವನ್ನು ಹೊಂದಿರುವ ಹಾಗೂ ಯುವಶಕ್ತಿಯಿಂದ ಕೂಡಿರುವ ರಾಷ್ಟ್ರವಾದ ಭಾರತವನ್ನು ಎಲ್ಲಾ ದೇಶಗಳಿಗಿಂತಲೂ ಅತ್ಯುನ್ನತ ಸ್ಥಿತಿಗೆ ಕರೆದೊಯ್ಯಬೇಕಾದಂತಹ ಹೊಣೆಗಾರಿಕೆ ಪ್ರತಿಯೊಬ್ಬರ ಮೇಲಿದೆ. ಪ್ರತಿಯೊಂದು ಮಗುವಿಗೂ ಗುಣಮಟ್ಟದ ಶಿಕ್ಷಣ ಸಿಗಬೇಕು. ಮಹಿಳೆಯರು ಮತ್ತು ಮಕ್ಕಳ ಮೇಲೆ ನಡೆಯುತ್ತಿರುವ ದೌರ್ಜನ್ಯಗಳನ್ನು ವಿರೋಧಿಸಿ, ಅವುಗಳನ್ನು ಬುಡ ಸಮೇತವಾಗಿ ಕಿತ್ತೊಗೆಯಬೇಕಾದಂತಹ ಮಾನಸಿಕ ಧೈರ್ಯವನ್ನು ಪ್ರತಿಯೊಬ್ಬ ನಾಗರಿಕರು ಪಡೆದುಕೊಳ್ಳಬೇಕು. ಶಿಕ್ಷಕರು ಮಕ್ಕಳಲ್ಲಿ ರಾಷ್ಟ್ರಪ್ರೇಮ ಮತ್ತು ರಾಷ್ಟ್ರದ ಹಿರಿಮೆಯ ಬಗ್ಗೆ ತಿಳುವಳಿಕೆ ನೀಡುವ ಜೊತೆಗೆ ದೇಶದ ಸಂವಿಧಾನದ ಉದ್ದೇಶಗಳು, ರಚನೆ ಮಾಡಿದ ರೀತಿ, ಅದನ್ನು ಅನಸರಿಸಬೇಕಾದಂತಹ ಅನಿವಾರ್ಯತೆ ಕುರಿತು ಮಕ್ಕಳಿಗೆ ಮನವರಿಕೆ ಮಾಡಿಕೊಡಬೇಕು ಎಂದರು.
ತಹಶೀಲ್ದಾರ್ ಬಿ.ಎಸ್.ರಾಜೀವ್ ಮಾತನಾಡಿ, ಭಾರತೀಯರ ಐಕ್ಯತೆಯ ಸಂಕೇತವಾಗಿ ಗಣರಾಜ್ಯೋತ್ಸವ ದಿನಾಚರಣೆ ಆಚರಿಸಲಾಗುತ್ತಿದೆ. ಈ ದೇಶದ ಪ್ರತಿಯೊಬ್ಬರೂ ನಾವು ಭಾರತೀಯರು ಎಂಬ ಭಾವನೆ ಬೆಳೆಸಿಕೊಂಡು ದೇಶವನ್ನು ಪ್ರಗತಿಯತ್ತ ಕೊಂಡೊಯ್ಯಬೇಕು. ಗಣತಂತ್ರ ವ್ಯವಸ್ಥೆಯ ಚೌಕಟ್ಟಿನಲ್ಲಿ, ಜಾತ್ಯತೀತ ಮೌಲ್ಯಗಳ ಪರಧಿಯಲ್ಲಿ ಮತ್ತು ಭ್ರಾತೃತ್ವದ ಬೆಸುಗೆಯಲ್ಲಿ ಸತ್ಯ,ನಿಷ್ಠೆ, ಪ್ರಾಮಾಣಿಕತೆಯಿಂದ ರಾಷ್ಟ್ರೀಯ ಭಾವೈಕ್ಯತೆಯನ್ನು ಸಾಕಾರಗೊಳಿಸಲು ಮತ್ತಷ್ಟು ಸಾಂಘಿಕವಾಗಿ ಶ್ರಮಿಸೋಣ. ತನ್ಮೂಲಕ ಪ್ರಜಾಸತ್ತಾತ್ಮಕ ವ್ಯವಸ್ಥೆಯ ಆದರ್ಶಗಳನ್ನು ಎತ್ತಿ ಹಿಡಿಯೋಣ ಎಂದರು.
ಇದೇ ಸಂಧರ್ಭದಲ್ಲಿ ವಿವಿಧ ಶಾಲಾ ಮಕ್ಕಳಿಂದ ಪಥಸಂಚಲನ ಹಾಗೂ ವಿವಿಧ ಮಾದರಿಯ ಕವಾಯತುಗಳನ್ನು ಆಯೋಜನೆ ಮಾಡಲಾಗಿತ್ತು.
ತಾಲ್ಲೂಕು ಪಂಚಾಯಿತಿ ಇಓ ಮುನಿರಾಜು, ನಗರಸಭೆ ಅಧ್ಯಕ್ಷೆ ಸುಮಿತ್ರ ರಮೇಶ್, ಉಪಾಧ್ಯಕ್ಷ ಅಫ್ಸರ್ಪಾಷ, ಪೌರಾಯುಕ್ತ ಆರ್.ಶ್ರೀಕಾಂತ್, ತಾಲ್ಲೂಕು ಆರೋಗ್ಯಾಧಿಕಾರಿ ಡಾ.ವೆಂಕಟೇಶಮೂರ್ತಿ, ಕ್ಷೇತ್ರ ಶಿಕ್ಷಣಾಧಿಕಾರಿ ಜಿ.ರಘುನಾಥರೆಡ್ಡಿ, ತಾಲ್ಲೂಕು ಸರ್ಕಾರಿ ನೌಕರರ ಸಂಘದ ಅಧ್ಯಕ್ಷ ಕೆ.ಎನ್.ಸುಬ್ಬಾರೆಡ್ಡಿ, ಲೆಫ್ಟಿನೆಂಟ್ ಕರ್ನಲ್ ಎಂ.ವಿ.ಸುನಿಲ್ ಕುಮಾರ್, ಕಸಾಪ ತಾಲ್ಲೂಕು ಅಧ್ಯಕ್ಷ ಬಿ.ಆರ್.ಅನಂತಕೃಷ್ಣ ಹಾಜರಿದ್ದರು.
ದೇಶೀಯ ಸೊಗಡು ಮತ್ತು ಸೊಬಗನ್ನು ಯಶಸ್ವಿಯಾಗಿ ಆವಾಹಿಸಿಕೊಂಡಿರುವ ಏಕಮೇವ ಗಂಡುಕಲೆ ತಮಟೆವಾದನ. ತಮಟೆವಾದನ ಬಯಲು ಸೀಮೆಯ ಜನಕ್ಕೆ ಸುಪರಿಚಿತ. ಮಾನವನ ಅಂತಿಮಯಾತ್ರೆಯಲ್ಲಿ ಮಸಣದವರೆಗೂ ಜತೆನೀಡಿ ವಿದಾಯ ಹೇಳುವುದೂ ತಮಟೆಯ ನಾದದಿಂದಲೇ. ಊರಜಾತ್ರೆ, ಮೆರವಣಿಗೆ ಅಥವಾ ಕರಗದಂತಹ ಸಾಂಸ್ಕೃತಿಕ ಉತ್ಸವಗಳಲ್ಲಿ ತಮಟೆ ಸದ್ದು ಕೇಳಿಸಲೇಬೇಕು.
ಇಂಥ ನೆಲಸಂಸ್ಕೃತಿಯ ಕಲೆಗೆ ಹೊಸ ಭಾಷ್ಯವನ್ನು ಬರೆದ ಅದ್ಭುತ ಕಲಾವಿದ ಪಿಂಡಿಪಾಪನಹಳ್ಳಿ ಮುನಿವೆಂಕಟಪ್ಪ (Pindipapanahalli Munivenkatappa). ದೇಶ ವಿದೇಶಗಳಲ್ಲಿ ತಮಟೆ ನಾದವನ್ನು ಮೊಳಗಿಸಿ ಕನ್ನಡನಾಡಿಗೆ ಕೀರ್ತಿ ತಂದಿದ್ದಾರೆ. ಮುನಿವೆಂಕಟಪ್ಪನವರ ಕೈಬೆರಳುಗಳಲ್ಲಿ ಹದವಾದ ಲಯಬದ್ಧವಾದ ನಾದ ಹೊರಹೊಮ್ಮುತ್ತದೆ. ಅವರ ವಾದನದ ವೈವಿಧ್ಯತೆಯು ಕೇಳುಗರನ್ನು ಬೆರಗುಗೊಳಿಸುತ್ತದೆ. ಅವರ ತಮಟೆ ವಾದನದ ಶಬ್ಧ ಗುಂಡಿಗೆಯನ್ನು ತಟ್ಟಿ ಎಬ್ಬಿಸಬಲ್ಲದು.
ತಾಳ, ನಾದ, ರಾಗ ಬದ್ಧವಾಗಿ ತಮಟೆ ನುಡಿಸುವ ಅವರ ಕೈಬೆರಳುಗಳು ತಮಟೆಯ ಮೇಲೆ ಮೋಡಿ ಮಾಡುತ್ತವೆ. ತಮಟೆ ಹಿಡಿದು ನಿಂತರೆ ಗಂಟೆಗಟ್ಟಲೆ ಕಾರ್ಯಕ್ರಮ ನೀಡಬಲ್ಲ ಅವರಿಗೆ ಈ ಕಲೆಯ ಮುವ್ವತ್ತಕ್ಕೂ ಹೆಚ್ಚು ರೀತಿಯ ವೈವಿಧ್ಯಮಯ ಮಜಲುಗಳು ಕರಗತವಾಗಿವೆ.
ಶಿಡ್ಲಘಟ್ಟ ತಾಲ್ಲೂಕಿನ ಪಿಂಡಿಪಾಪನಹಳ್ಳಿಯಲ್ಲಿ ಜನಿಸಿದ ಮುನಿವೆಂಕಟಪ್ಪ ಅವರದ್ದು ತೀರಾ ಬಡ ಕುಟುಂಬ. ತಂದೆ ಪಾಪಣ್ಣ, ತಾಯಿ ಮುನಿಗಂಗಮ್ಮ. ಬದುಕಿನ ಆಸರೆಯಾದದ್ದು ತಂದೆಯಿಂದ ಕಲಿತ ತಮಟೆವಾದನ. ಶ್ರದ್ಧೆ, ಛಲ ಹಾಗೂ ಸಾಧನೆಯಿಂದ ಹತ್ತಾರು ವರ್ಷ ಬಿದಿರ ಕಡ್ಡಿಗಳೊಂದಿಗೆ ಬೆರಳನ್ನು ಬೆರೆಸಿದ್ದು ಸಾರ್ಥಕವಾಯಿತು. ನಾಲ್ಕನೇ ತರಗತಿಯವರೆಗೆ ವಿದ್ಯೆ ಕಲಿತಿದ್ದರೂ, ತಮಟೆ ವಿದ್ಯೆ ಹಂಪಿ ಕನ್ನಡ ವಿಶ್ವವಿದ್ಯಾಲಯದ “ನಾಡೋಜ” ಪ್ರಶಸ್ತಿ ತಂದಿತ್ತಿದೆ.
ಮೈಸೂರು ದಸರೆ, ಹಂಪೆ ಉತ್ಸವ, ಜಾನಪದ ಜಾತ್ರೆಗಳಂಥ ಸಾಂಸ್ಕೃತಿಕ ಉತ್ಸವಗಳಲ್ಲಿ ಅವರ ತಮಟೆ ಸದ್ದು ಕೇಳುಗರಿಗೆ ಮೋಡಿ ಮಾಡಿದೆ. ತಾನು ಏಕಲವ್ಯನಂತೆ ತಮಟೆ ಕಲೆಯನ್ನು ಕಲಿತರೂ, ದ್ರೋಣಾಚಾರ್ಯರಾಗಿ ಹಲವಾರು ಶಿಷ್ಯರನ್ನು ತಯಾರು ಮಾಡಿದ್ದಾರೆ. ವೇದಿಕೆಯ ಮೇಲೆ ಹತ್ತು ಹನ್ನೆರಡು ಸಹ ಕಲಾವಿದರ ತಂಡದೊಡನೆ ಕಾರ್ಯಕ್ರಮ ನೀಡುತ್ತಾರೆ.
ಈಗಿರುವ ಸುಧಾರಿತ ರೆಕ್ಸಿನ್ ತಮಟೆಗಿಂತ ಹಿಂದೆ ಬಳಕೆಯಲ್ಲಿದ್ದ ಚರ್ಮದ ತಮಟೆಯೆ ಮುನಿವೆಂಕಟಪ್ಪನವರಿಗೆ ಪ್ರಿಯ. ಚರ್ಮವಾದನದಲ್ಲಿ ಹೊಮ್ಮುವ ನಾದದ ಗಮ್ಮತ್ತೇ ಬೇರೆ ಎಂಬುದು ಅವರ ಸ್ವಾನುಭವ. ಆದರೆ ಚರ್ಮದ ತಮಟೆ ತಯಾರಿಸುವುದು ಮತ್ತು ಅದನ್ನು ಕಾಯಿಸಿ ಹದ ಮಾಡುವ ತಾಳ್ಮೆ ಈಗ ಯಾರಿಗಿದೆ.
ಪಿಂಡಿಪಾಪನಹಳ್ಳಿಯಿಂದ ದಿಲ್ಲಿಯವರೆಗೂ ತಮಟೆ ನಾದದ ಸದ್ದನ್ನು ಹೊಮ್ಮಿಸಿರುವ ಮುನಿವೆಂಕಟಪ್ಪ ಜಪಾನ್ನಲ್ಲೂ ತನ್ನ ತಮಟೆಯ ಸದ್ದನ್ನು ಮೊಳಗಿಸಿದ್ದಾರೆ. ಅವರ ಕಲಾ ಪ್ರತಿಭೆಗೆ ಹಲವಾರು ಪ್ರಶಸ್ತಿಗಳು ಸಂದಿವೆ. ಹಂಪಿ ಕನ್ನಡ ವಿಶ್ವವಿದ್ಯಾಲಯದ ‘ನಾಡೋಜ’ ಪ್ರಶಸ್ತಿ, ಕನ್ನಡ ರಾಜ್ಯೋತ್ಸವ ಪ್ರಶಸ್ತಿ, ಕರ್ನಾಟಕ ಜಾನಪದ ಮತ್ತು ಯಕ್ಷಗಾನ ಅಕಾಡೆಮಿ ಪ್ರಶಸ್ತಿ, ಮೈಸೂರು ದಸರಾ ಪ್ರಶಸ್ತಿ, ಡಾ.ಎಲ್.ಬಸವರಾಜು ಪ್ರತಿಷ್ಠಾನ ಪ್ರಶಸ್ತಿ ಮುಂತಾದ ಪ್ರಶಸ್ತಿಗಳು ಅವರಿಗೆ ಸಂದಿವೆ. ಮುನಿವೆಂಕಟಪ್ಪ ಜನಪದ ಅಕಾಡೆಮಿಯ ಸದಸ್ಯರೂ ಆಗಿದ್ದರು.
1992ರಲ್ಲಿ ಜಪಾನ್ ದೇಶದಲ್ಲಿ ಕನ್ನಡದ ಕೀರ್ತಿಯನ್ನು ಬೆಳಗಿದ ಮುನಿವೆಂಕಟಪ್ಪ, 2014ರಲ್ಲಿ ಅಮೆರಿಕೆಯ ಉತ್ತರ ಕ್ಯಾಲಿಫೋರ್ನಿಯಾ ಕನ್ನಡ ಕೂಟದ ಆಶ್ರಯದಲ್ಲಿ ಸ್ಯಾನ್ಹೂಸೆ ನಗರದಲ್ಲಿ ನಡೆದ ಎಂಟನೇ ಅಕ್ಕ ವಿಶ್ವ ಕನ್ನಡ ಸಮ್ಮೇಳನದಲ್ಲಿ ಭಾಗವಹಿಸಿ ತಮಟೆಯ ಶಬ್ಧದ ಮಾಧುರ್ಯದಿಂದ ಅಲ್ಲಿನವರ ಮನಸೂರೆಗೊಂಡರು. ತಮಟೆ ಬಾರಿಸುತ್ತಲೇ ಕಣ್ಣಿನ ರೆಪ್ಪೆಗಳಿಂದ ನೋಟನ್ನು ಮತ್ತು ಗುಂಡು ಸೂಜಿಯನ್ನು ಮೇಲೆತ್ತುವ ಅವರ ಚಾಕಚಕ್ಯತೆಯನ್ನು ಬೆಕ್ಕಸ ಬೆರಗಾದರು.
2015ರಲ್ಲಿ ಉತ್ತರ ಅಮೆರಿಕದ ‘ನಾವಿಕ’(ನಾವು ವಿಶ್ವ ಕನ್ನಡಿಗರು) ಸಂಘಟನೆಯ ೩ನೆಯ ದ್ವೈವಾರ್ಷಿಕ ಸಮ್ಮೇಳನ ನಾರ್ತ್ ಕೆರೊಲೈನ ರಾಜ್ಯದ ರಾಜಧಾನಿ “ರಾಲಿ”ಯಲ್ಲಿ ನಡೆದಿತ್ತು. ಅಲ್ಲಿ ಸುಮಾರು 1,500 ರಷ್ಟು ಸಂಖ್ಯೆಯಲ್ಲಿ ಕನ್ನಡಿಗರು ಸೇರಿದ್ದ ಸಮ್ಮೇಳನದಲ್ಲಿ ಮುನಿವೆಂಕಟಪ್ಪ ಮತ್ತು ತಂಡದವರ ತಮಟೆ ವಾದನ ವಿಶೇಷ ಆಕರ್ಷಣೆಯಾಗಿತ್ತು. ಅಲ್ಲಿನ ಸಮ್ಮೇಳನದಲ್ಲಿ ನಮ್ಮ ದೇಸೀಯ ಸೊಗಡು ಮತ್ತು ಸೊಬಗನ್ನು ಆವಾಹಿಸಿಕೊಂಡಿರುವ ಗಂಡುಕಲೆ ತಮಟೆ ವಾದನವನ್ನು ಪ್ರತಿಧ್ವನಿಸಿ ಅನಿವಾಸಿ ಕನ್ನಡಿಗರನ್ನು ಕುಣಿಸಿದ್ದಾರೆ.
E. Timmasandra, Sidlaghatta : ಶಿಡ್ಲಘಟ್ಟ ತಾಲ್ಲೂಕಿನ ಈ.ತಿಮ್ಮಸಂದ್ರ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಡಿಜಿಟಲ್ ಗ್ರಂಥಾಲಯದಲ್ಲಿ ಶಾಲಾ ವಿದ್ಯಾರ್ಥಿಗಳೊಂದಿಗೆ ಕಾಫಿಯೊಂದಿಗೆ ಚರ್ಚೆ ಎನ್ನುವ ಮುಖಾಂತರ ವಿಭಿನ್ನ ರೀತಿಯಾಗಿ ರಾಷ್ಟ್ರೀಯ ಹೆಣ್ಣು ಮಕ್ಕಳ ದಿನಾಚರಣೆಯನ್ನು ಆಚರಿಸಲಾಯಿತು.
ಈ ಸಂದರ್ಭದಲ್ಲಿ ತಾಲ್ಲೂಕು ಪಂಚಾಯಿತಿ ಕಾರ್ಯನಿರ್ವಾಹಕ ಅಧಿಕಾರಿ ಮುನಿರಾಜ ಮಾತನಾಡಿ, ಹೆಣ್ಣು ಎಂದರೆ ತಾಯಿ. ಹೆಣ್ಣು ಎಂದರೆ ಸಹೋದರಿ. ಹೆಣ್ಣು ಎಂದರೆ ಗೆಳತಿ. ಹೆಣ್ಣು ಎಂದರೆ ಪತ್ನಿ. ಹೆಣ್ಣು ಎಂದರೆ ಮಗಳು. ಹೀಗೆ ಪ್ರತಿಯೊಬ್ಬರ ಪುರುಷನ ಬದುಕಿನಲ್ಲಿ ಅವಿಭಾಜ್ಯ ಅಂಗವಾಗಿ ಪ್ರಮುಖ ಪಾತ್ರವಹಿಸುತ್ತಿರುವ ಹೆಣ್ಣನ್ನು ಗೌರವಿಸುವುದಕ್ಕಾಗಿ ವಿಶೇಷ ದಿನವನ್ನು ನಿಗದಿಪಡಿಸಲಾಗಿದೆ ಎಂದರು.
ಲಿಂಗ ಅಸಮಾನತೆ ಮತ್ತು ದೈಹಿಕ ದೌರ್ಜನ್ಯದಂತಹ ಸಮಸ್ಯೆಗಳ ಮೇಲೆ ಬೆಳಕು ಚೆಲ್ಲುವ ಗುರಿಯನ್ನು ಹಾಗೂ ಹೆಣ್ಣು ಮಕ್ಕಳು ಎದುರಿಸುತ್ತಿರುವ ಸಮಸ್ಯೆಗಳ ಬಗ್ಗೆ, ಅವರ ಹಕ್ಕುಗಳು, ಶಿಕ್ಷಣ, ಆರೋಗ್ಯ ಮತ್ತು ಪೋಷಣೆಯ ಪ್ರಾಮುಖ್ಯತೆಯ ಬಗ್ಗೆ ತಿಳಿಯಬೇಕು ಎಂದರು.
ಅಂಗನವಾಡಿ ಕೇಂದ್ರದ ಮುಂಭಾಗ ಹೆಣ್ಣು ಮಕ್ಕಳೊಂದಿಗೆ ಸೇರಿ ಗಣ್ಯರು ಗಿಡನಾಟಿ ಮಾಡಿದರು.
ಗ್ರಾಮ ಪಂಚಾಯಿತಿ ಅಭಿವೃದ್ಧಿ ಅಧಿಕಾರಿ ತನ್ವೀರ್ ಅಹ್ಮದ್, ಆಶಾ ಕಾರ್ಯಕರ್ತೆಯರು, ಅಂಗನವಾಡಿ ಸಿಬ್ಬಂದಿ, ವಿದ್ಯಾರ್ಥಿಗಳು, ಗ್ರಾಮ ಪಂಚಾಯಿತಿ ಸಿಬ್ಬಂದಿ ಹಾಜರಿದ್ದರು.
Bhaktarahalli, Sidlaghatta : ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ, ಭಕ್ತರಹಳ್ಳಿ ಗ್ರಾಮ ಪಂಚಾಯಿತಿ ಹಾಗೂ ಗ್ರಾಮಸ್ಥರ ಸಹಕಾರದಲ್ಲಿ ಭಕ್ತರಹಳ್ಳಿ ಗ್ರಾಮದಲ್ಲಿ ಶನಿವಾರ ಸಾಮೂಹಿಕ ಶ್ರೀ ವರಮಹಾಲಕ್ಷ್ಮಿ ಪೂಜೆ ಹಾಗೂ ಧಾರ್ಮಿಕ ಸಭೆ ಯನ್ನು ಹಮ್ಮಿಕೊಳ್ಳಲಾಗಿತ್ತು.
ಕಾರ್ಯಕ್ರಮವನ್ನು ಉದ್ಘಾಟಿಸಿದ ರಾಜ್ಯ ರೈತ ಸಂಘ ಹಸಿರು ಸೇನೆಯ ರಾಜ್ಯ ಪ್ರಧಾನ ಕಾರ್ಯದರ್ಶಿ ಭೈರೇ ಗೌಡ ಮಾತನಾಡಿ, ಸಂಸಾರ ನಿರ್ವಹಣೆಯಲ್ಲಿ ಹಾಗೂ ಮಕ್ಕಳಿಗೆ ಸಂಸ್ಕಾರ ನೀಡುವಲ್ಲಿ ಮಹಿಳೆಯರ ಪಾತ್ರ ಅತ್ಯಂತ ಪ್ರಮುಖವಾದದ್ದು. ಇವತ್ತು ಮಕ್ಕಳಲ್ಲಿ ಧಾರ್ಮಿಕ ಪ್ರಜ್ಞೆ ಕಡಿಮೆಯಾಗುತ್ತಿದ್ದು ಮೊಬೈಲ್ ಇನ್ನಿತರ ವಿಚಾರದಲ್ಲಿ ಆಸಕ್ತಿ ಹೆಚ್ಚುತ್ತಿರುವುದು ವಿಷಾದನೀಯ ಎಂದರು.
ಪ್ರತಿ ದುರ್ಬಲ ಕುಟುಂಬದ ಅಬಿವೃದ್ಧಿಗೆ ಹಾಗೂ ಗ್ರಾಮಗಳ ಅಭಿವೃದ್ಧಿಗೆ ಪರಮಪೂಜ್ಯ ಧರ್ಮಾಧಿಕಾರಿಗಳು ನೀಡಿದ ಸೇವೆ ಶ್ಲಾಘನೀಯವಾದದ್ದು ಎಂದರು.
ಧಾರ್ಮಿಕ ಉಪನ್ಯಾಸ ನೀಡಿದ ಚೀಮಂಗಲ ಪ್ರೌಢಶಾಲೆಯ ಶಿಕ್ಷಕ ಡಾ. ಶಿವಕುಮಾರ್ ಮಾತನಾಡಿ, ಮನುಷ್ಯ ಸ್ನಾನ ಮಾಡುವುದರಿಂದ ಹೊರಗಿನ ಕೊಳೆ ಹೋಗುತ್ತದೆ. ಆದರೆ ನಿಷ್ಕಲ್ಮಷ ಮನಸ್ಸಿನ ಪ್ರಾರ್ಥನೆಯಿಂದ ಮನಸ್ಸಿನ ಒಳಗೆ ಇರುವ ಕೊಳೆ ಹೋಗುತ್ತದೆ. ಯಾರು ಬೇರೆಯವರ ಆನಂದಕ್ಕೆ ಕಾರಣನಾಗುತ್ತಾನೆ ಅವನೇ ದೇವರು ಎಂದು ಹೇಳಿದರು.
ನಿಸ್ವಾರ್ಥ ಸೇವೆಯಿಂದ ವ್ಯಕ್ತಿ ಪರಿಪೂರ್ಣನಾಗುತ್ತಾನೆ. ಪರಮ ಪೂಜ್ಯ ಹೆಗ್ಗಡೆಯವರ ಸಮಾಜಮುಖಿ ಕಾರ್ಯಕ್ರಮಗಳು ದೇಶಕ್ಕೆ ಮಾದರಿಯಾಗಿದೆ. ಇವತ್ತು ನಡೆದಾಡುವ ದೇವರಾದ ಸಿದ್ಧಗಂಗಾ ಸ್ವಾಮೀಜಿಯವರ ದಾಸೋಹ ದಿನ. ಆ ಪುಣ್ಯಪುರುಷರು ಕೂಡಾ ಎಷ್ಟೋ ಬಡ ವಿದ್ಯಾರ್ಥಿಗಳಿಗೆ ಅನ್ನದಾಸೋಹದ ಜೊತೆಗೆ ಅಕ್ಷರ ದಾಸೋಹ ನೀಡಿದವರು ಎಂದು ಸ್ಮರಿಸಿಕೊಂಡರು.. ಜಿಲ್ಲಾ ನಿರ್ದೇಶಕರಾದ ಪ್ರಶಾಂತ್ ಮಾತನಾಡಿ, ಶ್ರೀ ಕ್ಷೇತ್ರ ಧರ್ಮಸ್ಥಳ ಸಂಸ್ಥೆಯ ಮೂಲಕ ಅರ್ಥಿಕ ಸ್ವಾವಲಂಬನೆಯ ಜೊತೆಗೆ ಧಾರ್ಮಿಕ ಜಾಗೃತಿಯನ್ನು ಮೂಡಿಸುವ ಕೆಲಸ ರಾಜ್ಯಾದ್ಯಂತ ಪೂಜ್ಯ ಹೆಗ್ಗಡೆಯವರು ಮಾಡುತ್ತಿದ್ದಾರೆ. ಎಲ್ಲಿ ದೇವರ ಸ್ಮರಣೆ ಭಜನೆ ಇದೆಯೋ ಅಲ್ಲಿ ವಿಭಜನೆ ಇಲ್ಲ. ಭಜನೆಯಿಂದ ಭಗವಂತನೆಡೆಗೆ ಸಾಗಲು ಇಂತಹ ಧಾರ್ಮಿಕ ಕಾರ್ಯಕ್ರಮಗಳು ಹೆಚ್ಚು ನಡೆಯಬೇಕು. ಪ್ರತಿನಿತ್ಯ ದೇವರ ಸ್ಮರಣೆಗೆ ಸ್ವಲ್ಪ ಸಮಯ ಮೀಸಲಿಡಬೇಕಾದ ಅನಿವಾರ್ಯತೆ ನಮಗಿದೆ ಎಂದು ಎಚ್ಚರಿಸಿದರು.
ಗ್ರಾಮ ಪಂಚಾಯಿತಿ ಅಧ್ಯಕ್ಷೆ ಲಲಿತಮ್ಮ, ಯೋಜನಾಧಿಕಾರಿ ಪ್ರಕಾಶ್ ಕುಮಾರ್, ಬಿ ವಿ ಮುನೇಗೌಡ, ಕಲ್ಪನಾ ಮುನಿರಾಜು, ಚಂದ್ರಕಲಾ ಭೈರೆಗೌಡ, ವಿ ಕೃಷ್ಣಪ್ಪ, ವೆಂಕಟೇಶ್, ಆರ್ ಮುನಿರಾಜು, ಕೆ ವಿಜಯ ಕುಮಾರ್, ಕೋಟೆ ಚನ್ನೇಗೌಡ, ಹೇಮಂತ್ ಕುಮಾರ್, ಶಶಿಕಲಾ ಲಕ್ಷ್ಮಿನಾರಾಯಣ್, ಮಂಜುನಾಥ್, ಚಿದಾನಂದ ಮೂರ್ತಿ, ದ್ಯಾವಮ್ಮ ನಾರಾಯಣ ಸ್ವಾಮಿ, ಮುನಿಕೃಷ್ಣಪ್ಪ, ಬಿ ಎ ರಮೇಶ್, ಬಿ ಸಿ ರಾಮಚಂದ್ರಪ್ಪ, ಆನಂದ್, ಮುನಿರಾಜು, ಪ್ರಶಾಂತ್, ಎ ಎನ್ ದೇವರಾಜು, ಎಚ್ ವಿ ಮುನಿರೆಡ್ಡಿ, ಬಿ ಕೆ ರಾಮಚಂದ್ರ, ಅಂಜನ್ ಕುಮಾರ್, ಮೇಲ್ವಿಚಾರಕಿ ಅನಿತಾ, ಸೇವಾಪ್ರತಿನಿಧಿ ಗಗನಾ ಹಾಜರಿದ್ದರು.
Kannapanahalli, Sidlaghatta : ಸರ್ಕಾರ, ಸಾರ್ವಜನಿಕ ಹಾಗೂ ಸಮುದಾಯಕ್ಕಾಗಿ ಮೀಸಲಿಟ್ಟ ಯಾವುದೇ ಜಾಗವನ್ನು ಯಾರೂ ಒತ್ತುವರಿ ಮಾಡಬಾರದು. ಒತ್ತುವರಿ ಮಾಡಿದ್ದೇ ಆದಲ್ಲಿ ನಿರ್ದಾಕ್ಷಿಣ್ಯವಾಗಿ ಅಂತಹವರ ವಿರುದ್ದ ಕಾನೂನು ಕ್ರಮ ಜರುಗಿಸಲಾಗುವುದು ಎಂದು ಜಿಲ್ಲಾಧಿಕಾರಿ ಎನ್.ಎಂ.ನಾಗರಾಜ್ ಹೇಳಿದರು.
ಶಿಡ್ಲಘಟ್ಟ ತಾಲ್ಲೂಕಿನ ಪಲ್ಲಿಚೇರ್ಲು ಗ್ರಾಮ ಪಂಚಾಯಿತಿ ವ್ಯಾಪ್ತಿಯ ಕನ್ನಪನಹಳ್ಳಿ ಗ್ರಾಮದಲ್ಲಿ ಶನಿವಾರ ಜಿಲ್ಲಾಡಳಿತ ಹಾಗೂ ತಾಲ್ಲೂಕು ಆಡಳಿತದ ವತಿಯಿಂದ ಆಯೋಜಿಸಲಾಗಿದ್ದ “ಜಿಲ್ಲಾಧಿಕಾರಿಗಳ ನಡೆ ಹಳ್ಳಿಯ ಕಡೆ” ಕಾರ್ಯಕ್ರಮವನ್ನು ಉದ್ಘಾಟಿಸಿ ಅವರು ಮಾತನಾಡಿದರು.
ಸರ್ಕಾರಿ ಸ್ಥಳ ಸೇರಿದಂತೆ ಗ್ರಾಮದ ಕೆರೆ, ಕುಂಟೆಗಳೆಲ್ಲವು ಇರುವುದು ನಮಗಾಗಿ ಕೆರೆ, ಕುಂಟೆ ಸಂರಕ್ಷಣೆ ಮಾಡುವುದು ನಮ್ಮ ಜವಾಬ್ದಾರಿ ಎಂಬುದನ್ನು ಪ್ರತಿಯೊಬ್ಬರೂ ಅರಿತುಕೊಳ್ಳಬೇಕು. ಗ್ರಾಮದವರೇ ಒತ್ತುವರಿ ಮಾಡಿ ಗ್ರಾಮದವರೇ ಒತ್ತುವರಿ ತೆರವುಗೊಳಿಸಿ ಎಂದು ನಮಗೆ ಅರ್ಜಿ ಹಾಕುವ ಅದೆಷ್ಟೋ ಪ್ರಕರಣಗಳು ನಾವು ಕಂಡಿದ್ದೇವೆ. ಹಾಗಾಗಿ ಯಾರೊಬ್ಬರೂ ಸರ್ಕಾರಿ ಸ್ಥಳಗಳ ಒತ್ತುವರಿಗೆ ಮುಂದಾಗಬಾರದು. ಜಲಮೂಲಗಳ ಸಂರಕ್ಷಣೆಗೆ ಪ್ರತಿಯೊಬ್ಬರೂ ಮುಂದಾಗಬೇಕು ಎಂದರು.
ಮಹಾತ್ಮ ಗಾಂಧೀಜಿ ಅವರ ಆಶಯದಂತೆ ಗ್ರಾಮಗಳು ಅಭಿವೃದ್ಧಿಯಾಗಲು ಸ್ವಚ್ಛತೆ ಅತ್ಯಗತ್ಯವಾಗಿದೆ. ಪ್ರತಿಯೊಬ್ಬರೂ ತಮ್ಮ ಸುತ್ತಮುತ್ತಲಿನ ಪ್ರದೇಶವನ್ನು ಸ್ವಚ್ಛತೆಯಿಂದ ಕಾಪಾಡಿಕೊಳ್ಳಬೇಕು. ಗ್ರಾಮೀಣ ಭಾಗದ ಜನತೆ ಕಾಲ ಕಾಲಕ್ಕೆ ಆರೋಗ್ಯ ತಪಾಸಣೆ ಮಾಡಿಸಿಕೊಳ್ಳುವ ಮೂಲಕ ಆರೋಗ್ಯದ ಬಗ್ಗೆ ಹೆಚ್ಚಿನ ಕಾಳಜಿ ವಹಿಸಬೇಕು ಎಂದರು.
ಅಂಗನವಾಡಿ ಹಾಗೂ ಶಾಲೆಗಳಲ್ಲಿ ಮಕ್ಕಳಿಗೆ, ಗರ್ಭಿಣಿಯರಿಗೆ ಪೌಷ್ಠಿಕ ಆಹಾರ ಹಾಗೂ ಉತ್ತಮ ಶಿಕ್ಷಣವನ್ನು ನೀಡಲಾಗುತ್ತಿದೆ. ಯಾವುದೇ ಮಗು ಮೂಲ ಶಿಕ್ಷಣದಿಂದ ಹೊರಗುಳಿಯಬಾರದು ಎಂದು ಸರ್ಕಾರವು ಮಕ್ಕಳಿಗೆ ಪ್ರಾಥಮಿಕ ಶಿಕ್ಷಣವನ್ನು ನೀಡಲಾಗುತ್ತಿದೆ. ಜೊತೆಗೆ ಆರೋಗ್ಯ, ಕೃಷಿ, ತೋಟಗಾರಿಕೆ, ಪಶುಸಂಗೋಪನೆ ಇಲಾಖೆಗಳು ಸೇರಿದಂತೆ ಎಲ್ಲ ಇಲಾಖೆಗಳಲ್ಲಿ ಸರ್ಕಾರವು ಸಾಕಷ್ಟು ಸವಲತ್ತುಗಳನ್ನು ಒದಗಿಸಲಾಗುತ್ತಿದೆ. ಸಾರ್ವಜನಿಕರು ಇವುಗಳನ್ನು ಸದುಪಯೋಗ ಪಡಿಸಿಕೊಳ್ಳಬೇಕು ಎಂದರು.
ವಿವಿಧ ಇಲಾಖೆಗಳಿಂದ ತೆರಯಲ್ಪಟ್ಟ ಕೃಷಿ, ತೋಟಗಾರಿಕೆ, ರೇಷ್ಮೆ ವಸ್ತುಪ್ರದರ್ಶನ ಮಳಿಗೆಗಳು, ಆರೋಗ್ಯ ಶಿಬಿರ ಮಳಿಗೆ, ಆರೋಗ್ಯ ತಪಾಸಣೆ ಹಾಗೂ ಔಷಧಿಗಳ ವಿತರಣೆ, ಸೇರಿದಂತೆ ಇತರೆ ಎಲ್ಲಾ ಮಳಿಗೆಗಳಿಗೆ ಭೇಟಿ ನೀಡಿ ಪರಿಶೀಲಿಸಿದರು.
ವಿವಿಧ ಯೋಜನೆಗಳಿಂದ ಆಯ್ಕೆಯಾದ ಫಲಾನುಭವಿಗಳಿಗೆ ಹಕ್ಕು ಪತ್ರಗಳನ್ನು ವಿತರಿಸಲಾಯಿತು.
ಚಿಕ್ಕಬಳ್ಳಾಪುರ ಉಪವಿಭಾಗಾಧಿಕಾರಿ ಸಂತೋಷ್ಕುಮಾರ್, ತಹಶೀಲ್ದಾರ್ ಬಿ.ಎಸ್.ರಾಜೀವ್, ತಾಲ್ಲೂಕು ಪಂಚಾಯಿತಿ ಇಓ ಮುನಿರಾಜು, ತಾಲ್ಲೂಕು ಆರೋಗ್ಯಾಧಿಕಾರಿ ಡಾ.ವೆಂಕಟೇಶಮೂರ್ತಿ, ಸಿಡಿಪಿಓ ನೌತಾಜ್, ಬಿಸಿಎಂ ಅಧಿಕಾರಿ ನಾರಾಯಣಪ್ಪ, ಕ್ಷೇತ್ರ ಶಿಕ್ಷಣಾಧಿಕಾರಿ ಜಿ.ರಘುನಾಥರೆಡ್ಡಿ, ಗ್ರಾಮಪಂಚಾಯಿತಿ ಅಧ್ಯಕ್ಷೆ ರಾಮಕ್ಕ, ಉಪಾಧ್ಯಕ್ಷ ಜಿ.ರಾಮಚಂದ್ರರೆಡ್ಡಿ, ಸದಸ್ಯರು, ಗ್ರಾಮದ ಲಕ್ಷ್ಮಿನಾರಾಯಣ, ದೇವರಾಜ್, ವಿವಿಧ ಇಲಾಖೆಗಳ ತಾಲ್ಲೂಕು ಮಟ್ಟದ ಅಧಿಕಾರಿಗಳು, ಸಿಬ್ಬಂದಿ, ಆಶಾಕಾರ್ಯಕರ್ತೆಯರು ಹಾಗೂ ಗ್ರಾಮ ಪಂಚಾಯಿತಿಯ ಜನಪ್ರತಿನಿಧಿಗಳು ಹಾಜರಿದ್ದರು.
Sidlaghatta : BJP ವತಿಯಿಂದ ಶಿಡ್ಲಘಟ್ಟ ಮಂಡಲ ವ್ಯಾಪ್ತಿಯಲ್ಲಿ ಜನವರಿ 21 ರಿಂದ 29ರ ವರೆಗೆ ವಿಜಯ ಸಂಕಲ್ಪ ಅಭಿಯಾನ ಆಯೋಜಿಸಲಾಗಿದೆ ಎಂದು ಗ್ರಾಮಾಂತರ ಮಂಡಲದ ಅಧ್ಯಕ್ಷ ಸುರೇಂದ್ರಗೌಡ ತಿಳಿಸಿದರು.
ಶಿಡ್ಲಘಟ್ಟ ನಗರದ ಪತ್ರಕರ್ತರ ಭವನದಲ್ಲಿ ಶುಕ್ರವಾರ ವಿಜಯ ಸಂಕಲ್ಪ ಅಭಿಯಾನದ ಬಗ್ಗೆ ಸುದ್ದಿಗೋಷ್ಠಿ ನಡೆಸಿ ಮಾತನಾಡಿದರು. ಜನವರಿ 21ರಂದು ಬಿಜೆಪಿ ತಾಲ್ಲೂಕು ಪ್ರಧಾನ ಕಾರ್ಯದರ್ಶಿ ದೇವರಾಜ್ ಅವರ ಮನೆಯಲ್ಲಿ ವೀಕ್ಷಕರ ಸಮ್ಮುಖದಲ್ಲಿ ಅಭಿಯಾನಕ್ಕೆ ಚಾಲನೆ ನೀಡಲಾಗುವುದು. ಪ್ರತಿಯೊಂದು ಬೂತ್ಗಳಲ್ಲಿ ಕರಪತ್ರ ಹಂಚುವುದು, ಗೋಡೆಗಳಲ್ಲಿ ಬಿಜೆಪಿ ಸಾಧನೆ ಬಿಂಬಿಸುವ ಪೈಟಿಂಗ್, ವಾಹನಗಳ ಸ್ಟಿಕ್ಕರ್ ಅಂಟಿಸುವುದು, ಸದಸ್ಯತ್ವ ಅಭಿಯಾನ ಇತ್ಯಾದಿ ಕಾರ್ಯ ನಡೆಯಲಿದೆ ಎಂದರು.
ಪ್ರಧಾನಿ ನರೇಂದ್ರ ಮೋದಿ ಅವರ ಕಾರ್ಯವೈಖರಿ, ಮಾಜಿ ಮುಖ್ಯಮಂತ್ರಿ ಯಡಿಯೂರಪ್ಪ ಹಾಗೂ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರ ಜನಪರ ಸೇವೆ-ಸಾಧನೆ ಹಾಗೂ ಕೇಂದ್ರ ಸರ್ಕಾರ ಮತ್ತು ರಾಜ್ಯ ಸರ್ಕಾರದಿಂದ ಜನಸಾಮಾನ್ಯರಿಗೆ ದೊರಕುವ ಸೌಲಭ್ಯಗಳು – ಇತ್ಯಾದಿಗಳ ಬಗ್ಗೆ ಜನರಿಗೆ ಮಾಹಿತಿ ನೀಡಲಾಗುವುದು ಎಂದು ಅವರು ಹೇಳಿದರು.
ನಗರ ಮಂಡಲ ಅಧ್ಯಕ್ಷ ರಾಘವೇಂದ್ರ ಮಾತನಾಡಿ, ಇನ್ನು ತೊಂಬತ್ತು ದಿನಗಳಲ್ಲಿ ವಿಧಾನಸಭೆ ಚುನಾವಣೆ ನಡೆಯಲಿದ್ದು, ಕ್ಷೇತ್ರದ 205 ಬೂತ್ ಕಮಿಟಿ ಮಾಡಿದ್ದೇವೆ. ಪ್ರತಿಯೊಂದು ಬೂತ್ ನಲ್ಲೂ ಕನಿಷ್ಠ ಮುನ್ನೂರು ಸದಸ್ಯತ್ವ ಮಾಡಿಸುವ ಗುರಿ ಹೊಂದಿದ್ದೇವೆ. ಬೂತ್ ಮಟ್ಟದಲ್ಲಿ ಕಾರ್ಯಕರ್ತರನ್ನು ಸಂಘಟಿಸಲು ವಿಜಯ ಸಂಕಲ್ಪ ಅಭಿಯಾನ ಹಮ್ಮಿಕೊಳ್ಳಲಾಗಿದೆ ಎಂದರು.
ಜ.21ರಿಂದ ಅಭಿಯಾನ ಆರಂಭ ಆಗಲಿದ್ದು, ಅದಕ್ಕಾಗಿ ಈಗಾಗಲೇ ವ್ಯವಸ್ಥಿತವಾಗಿ ಪೂರ್ವಭಾವಿ ಸಿದ್ಧತೆ ನಡೆದಿವೆ. ಪಕ್ಷವು ತಳಹಂತದಿಂದ ಪಕ್ಷದ ಸದೃಢೀಕರಣ ಸೇರಿ ವಿವಿಧ ಕಾರ್ಯಕ್ರಮಗಳನ್ನು ಮಾಡಲಾಗುತ್ತಿದೆ. ಎಂದು ತಿಳಿಸಿದರು.
ಮಾಜಿ ಶಾಸಕ ಎಂ.ರಾಜಣ್ಣ ಮಾತನಾಡಿ, ಸರ್ಕಾರದ ಸಾಧನೆ ಹಾಗೂ ಜನ ಕಲ್ಯಾಣದಡಗೆ ಬಿಜೆಪಿಯ ಬದ್ಧತೆ ಸಾರಲು ಪ್ರತಿ ಬೂತ್ನಲ್ಲಿ ರಾಜ ಮತ್ತು ಕೇಂದ್ರ ಸರ್ಕಾರದ ಸಾಧನೆ ಸಾರುವ ಮತ್ತು ಯೋಜನೆಗಳ ಮಾಹಿತಿ ನೀಡುವ ಗೋಡೆ ಪೇಟಿಂಗ್ಗಳನ್ನು ಮಾಡಿಸಲಾಗುವುದು. ಸಾಮಾಜಿಕ ಜಾಲಾತಾಣಗಳ ಮೂಲಕವೂ ನಮ್ಮ ಯೋಜನೆಗಳ ಯಶಸ್ಸನ್ನು ಸಾರಲಾಗುವುದು ಎಂದರು.
ಸದಸ್ಯತ್ವ ಅಭಿಯಾನ ಸಂಪೂರ್ಣ ಆನ್ಲೈನ್ ಇರಲಿದ್ದು ಮಿಸ್ ಕಾಲ್ ಮೂಲಕ ನೋಂದಣಿಯಾದ ಸದಸ್ಯರ ಸಂಖ್ಯೆಯನ್ನು ವೆಬ್ಸೈಟ್ನಲ್ಲಿ ನೇರವಾಗಿ ನೋಡಬಹುದು. ನೋಂದಣಿ ಪ್ರಕ್ರಿಯೆ ಬಗೆಗೂ ಕಾರ್ಯಕರ್ತರಿಗೆ ಕಾರ್ಯಾಗಾರಗಳನ್ನು ನಡೆಸಲಾಗುತ್ತದೆ ಎಂದು ಮಾಹಿತಿ ನೀಡಿದರು.