21.1 C
Sidlaghatta
Sunday, December 28, 2025
Home Blog Page 1003

ಉತ್ಪಾದನೆ – ಉಪಯೋಗ ಯಾ ಉದ್ಯೋಗ?

0

ಸಾಮಾನ್ಯ ಪರಿಭಾಷೆಯಲ್ಲಿ ಹೇಳುವುದಾದರೆ ‘ಉತ್ಪಾದನೆ’ ಎಂದರೆ ತಯಾರಿಕೆ ಅಥವಾ ಏನನ್ನಾದರೂ ಬೆಳೆಯುವುದು. ಆದರೆ ಅರ್ಥಶಾಸ್ತ್ರದ ಪರಿಭಾಷೆಯಲ್ಲಿ ಉತ್ಪಾದನೆ ಕೇವಲ ತಯಾರಿಕೆ ಅಷ್ಟೇ ಅಲ್ಲ ಅದು ಬಳಕೆಗೆ ಯೋಗ್ಯವಾಗಿರಬೇಕು. ವಸ್ತುವು ಉಪಯೋಗಕ್ಕೆ ಯೋಗ್ಯವಾಗಿ – ಬಳಕೆ ಹೆಚ್ಚಾದರೆ ಅಂಥ ಉತ್ಪಾದನೆ ಬೆಳೆಯುಳ್ಳದ್ದು. ಜೊತೆಗೆ ಇದು ಕೇವಲ ವಸ್ತುವಿನ ಗುಣಮಟ್ಟಕ್ಕೆ ಮಾತ್ರ ಸೀಮಿತವಾಗಿರದೆ ಸೇವೆಗೂ ಯೋಗ್ಯವಾಗಿರುವಂಥದ್ದಾಗಿರಬೇಕು. “An activity of increasing the utility of goods and services is considered as “Production”.
ಹೀಗೆ ಯಾವುದೇ ಒಂದು ವಸ್ತುವಿನ ಉತ್ಪಾದನೆಯನ್ನು ಮಾಡುವುದು ಅದು ನಮ್ಮ ಬಳಕೆಗೆ ಉಪಯೋಗಕ್ಕೆ ಅನುವಾಗಲೆಂದೇ ವಿನಃ ಕೇವಲ ಉತ್ಪಾದನೆಯ ಚಟಕ್ಕೆ ಖಂಡಿತವಾಗಿಯೂ ಅಲ್ಲ. ನಾಗರೀಕತೆ ಬೆಳೆದಂತೆ ಮನುಷ್ಯ ತನ್ನ ಅಗತ್ಯಗಳಿಗೆ ಅನುಕೂಲವಾಗುವಂತೆ – ತಕ್ಕಂತೆ ಅನೇಕಾನೇಕ ವಸ್ತುಗಳನ್ನು ಬೇರೆ ಬೇರೆ ತರಹದ ಬೆಳೆಯನ್ನು ಉತ್ಪಾದಿಸಲು ಪ್ರಾರಂಭಿಸಿದ್ದು ಇತಿಹಾಸ. ಅದರ ಮುಂದುವರಿಕೆಯ ಭಾಗವಾಗಿ ‘ಉತ್ಪಾದನೆ’ ಯ ನೈಪುಣ್ಯವನ್ನು ಕಲಿಸಿ – ಬೆಳೆಸುವ ಪದ್ಧತಿ ಪ್ರಾರಂಭವಾಯಿತು. ಅಗತ್ಯಕ್ಕೆ ಮತ್ತು ಬೇಡಿಕೆಗೆ ತಕ್ಕಂತೆ ‘ಉತ್ಪಾದನೆ’ ಜರುಗುವುದು ಅನಿವಾರ್ಯವಾಯಿತು. ಕೆಲಸದ ಒತ್ತಡ ಅಧಿಕವಾದಂತೆ ಕೆಲಸಗಾರರಿಗೆ ಬೇಡಿಕೆಯೂ ಅಧಿಕವಾಗುತ್ತದೆ. ಕೆಲಸದ ಒತ್ತಡ ಕಡಿಮೆಯಾದಂತೆ ಕೆಲಸಗಾರರಿಗೆ ಇರುವ ಬೇಡಿಕೆ ಕೂಡ ತಗ್ಗುತ್ತದೆ. ಅತಿಯಾದ ಯಂತ್ರಗಳ ಬಳಕೆಯಿಂದಾಗಿ ದುಡಿಯುವ ಕೈಗಳು ನಿಧಾನವಾಗಿ ಕೆಲಸ ಕಳೆದುಕೊಳ್ಳುವುದು ಸಹಜವೇ. ಯಂತ್ರಗಳನ್ನಷ್ಟು ಬಳಸುವ ಕೌಶಲ್ಯ ಕಲಿತ ಕೆಲವೇ ಕೆಲವು ಮಂದಿ ಬಹಳಷ್ಟು ಜನಗಳಿಗೆ ಬದಲಾಗಿ ಸಾಕಾಗುವಂತಹ ಸ್ಥಿತಿ ನಿರ್ಮಾಣವಾಗುತ್ತ ಸಾಗುತ್ತಿದ್ದುದರ ಅಪಾಯವನ್ನು ಅರಿತ ಮಹಾತ್ಮ ಗಾಂಧಿಯವರು ‘ಗೃಹ ಕೈಗಾರಿಕೆ, ಗುಡಿ ಕೈಗಾರಿಕೆ’ಗೆ ಒತ್ತುಕೊಟ್ಟಿದ್ದೇ ಈ ಕಾರಣಕ್ಕಾಗಿ. ಮನುಷ್ಯನಿಗೆ ಕೆಲಸದ ಅವಶ್ಯಕತೆಯಿದೆ. ಪ್ರತಿಯೊಂದು ಕೈಗೂ ಕೆಲಸ ದಕ್ಕದ ಹೊರತೂ ‘ಅಭಿವೃದ್ಧಿ’ ಅಸಾಧ್ಯ ಸಂಬಳದ ಆದಾಯದ ಪ್ರಶ್ನೆಗಿಂತ ಮುಖ್ಯವಾದದ್ದು ‘ಉದ್ಯೋಗ’ದಲ್ಲಿ ತೊಡಗಿರುವುದು ಹಾಗಲ್ಲದೆ ಹೋದಲ್ಲಿ ‘Idle mind is the workshop of the devil’ ಎಂಬ ಮಾತು ಕೃತಿಯಾಗುತ್ತ ಸಾಗುವ ಅಪಾಯವಂತೂ ಇದ್ದೇ ಇದೆ.
ಉತ್ಪಾದನೆಗೂ ಉಪಯೋಗಕ್ಕೂ ಆಂತರಿಕ ಸಂಬಂಧವಂತೂ ಇದ್ದೇ ಇದೆ. ಉತ್ಪಾದನೆ – ಉಪಯೋಗಕ್ಕೆ – ಉದ್ಯೋಗಕ್ಕೆ ಒದಗುವಂತಿದ್ದರೆ ಮಾತ್ರ ಅದಕ್ಕೊಂದು ‘ಅರ್ಥ’ವಿರುತ್ತದೆ. ಹಾಗಲ್ಲದೇ ಒಟ್ಟಾರೆ ಉತ್ಪಾದನೆಯಷ್ಟೇ ಹೆಚ್ಚಾದರೆ ಬಳಕೆಯಾಗದೆ ವ್ಯರ್ಥವಾಗುವ ಸಾಧ್ಯತೆಯಿದೆ. ರಾಶ್ಯುತ್ಪನ್ನಗಳಿಂದಾಗಿ ಅನೇಕಬಾರಿ ಅವುಗಳಿಗೆ ಗ್ರಾಹಕರೇ ಇರದಿದ್ದಾಗ ಉತ್ಪಾದನಾ ವೆಚ್ಚ ಕೂಡ ಹುಟ್ಟದೆ ಅದು ತನ್ನಿಂದ ತಾನೇ ಮೂಲೆ ಸೇರಬೇಕಾಗುತ್ತದೆ. ವಸ್ತುಗಳ ವಿಚಾರದಲ್ಲಿ ಹೇಗೋ ಹಾಗೆಯೇ ವ್ಯಕ್ತಿಗಳ ವಿಚಾರದಲ್ಲೂ ಮೇಲಿನ ಮಾತುಗಳು ಅನ್ವಯವಾಗುತ್ತವೆ. ಅಗತ್ಯಕ್ಕಿಂತ ಅಧಿಕವಾದ ಉತ್ಪಾದನೆಯಾದಲ್ಲಿ ಅದೆಷ್ಟೇ ಗುಣಮಟ್ಟದಿಂದ ಕೂಡಿದ್ದರೂ (1) ಅದನ್ನು ಹಾಗೇ ಶೇಖರಿಸಿಟ್ಟುಕೊಳ್ಳಬೇಕು, ಮತ್ತೆಂದಾದರೂ ಅಗತ್ಯತೆ ಎದುರಾದಾಗ ಬಳಸಿಕೊಳ್ಳಬೇಕು. (2) ಹುಟ್ಟಿದಷ್ಟಕ್ಕೆ ಯಾ ಬಿಟ್ಟಿಯಾಗಿ ಬೇರೆಯವರಿಗಿತ್ತು ಕೈ ತೊಳೆದುಕೊಳ್ಳಬೇಕು. ವಸ್ತುಗಳಿಗಾದರೆ ಇವೆಲ್ಲ ಸರಿಯೇ ಆದರೆ ತಯಾರಿಸಿದ್ದು ವಸ್ತುವಾಗದೇ ವ್ಯಕ್ತಿಯೇ ಆಗಿದ್ದ ಪಕ್ಷದಲ್ಲಿ?
ಈ ದೃಷ್ಟಿಯಿಂದಲೇ ನಾವಿಂದು ನಮ್ಮ ಶಿಕ್ಷಣ ಪದ್ಧತಿಯನ್ನು ಗಮನಿಸುವ ತುರ್ತು ಹಿಂದೆಂದಿಗಿಂತ ಇಂದು ಅಧಿಕವಾಗಿದೆ ಎನ್ನಿಸುತ್ತದೆ. ಹಿಂದೆ ಜನರಿಗೆ ಬೇರೆ ಬೇರೆ ಕಸುಬುಗಳು ಕೌಟುಂಬಿಕ ಬಳುವಳಿಯಂತೆ ಬರುತ್ತಿದ್ದವು. ಹಾಗೇ ಓದು-ಬರಹ ಕೂಡಾ. ಆದರೆ ಈ ದೇಶಕ್ಕೆ ಬ್ರಿಟಿಷರು ಕಾಲಿಟ್ಟ ಅನಂತರ ಅವರು ಈ ದೇಶದವರ ಅಗತ್ಯಕ್ಕಿಂತಲೂ ಅಧಿಕವಾಗಿ ಅವರ ಅಗತ್ಯವನ್ನರಿತು ಇಲ್ಲಿ ಶೈಕ್ಷಣಿಕ ಪದ್ಧತಿಯನ್ನು ಜಾರಿಗೆ ತಂದದ್ದು ಈಗ ಇತಿಹಾಸ. ಅವರ ಕಛೇರಿ – ಆಡಳಿತವನ್ನಷ್ಟು ಸಮರ್ಥವಾಗಿ ನಡೆಸಿಕೊಂಡು ಹೋಗಲು ಬೇಕಾದ ‘ಗುಮಾಸ್ತ’ರನ್ನು ತಯಾರಿಸಿಕೊಳ್ಳಬೇಕಾದ ಅಗತ್ಯತೆ ಅವರಿಗಿತ್ತು. ಹಾಗಾಗಿ ಒಂದಿಷ್ಟು ಓದಲು ಬರೆಯಲು ಲೆಕ್ಕ ಮಾಡಲು ಲೆಕ್ಕ ಇಡಲು ಕಲಿತುಕೊಳ್ಳುವುದಕ್ಕೆ ಒತ್ತು ನೀಡಿದ ಶಿಕ್ಷಣ ಪ್ರಾರಂಭಿಸಿದರು. ನಾವು ಅವರ ಶಿಕ್ಷಣ ಪದ್ಧತಿಯನ್ನು ‘ಗುಮಾಸ್ತರನ್ನು ಉತ್ಪಾದಿಸುವ ಕಾರ್ಖಾನೆ’ ಎಂದು ಹೀಗಳೆಯುತ್ತಲೇ, ಅದನ್ನೇ ಮುಂದುವರಿಸುವ ಜಾಣತನವನ್ನು ತೋರುತ್ತಿರುವುದು ಪರಿಸ್ಥಿತಿಯ ವಿಪರ್ಯಾಸವೇ ವಿನಃ ಅಗತ್ಯವಂತೂ ಖಂಡಿತವಲ್ಲ.
ಕೆಲವೊಂದಿಷ್ಟು ವೃತ್ತಿ ಶಿಕ್ಷಣ ಪದ್ಧತಿಗಳನ್ನು ಹೊರತುಪಡಿಸಿದರೆ ಬಹುತೇಕ ಪದ್ಧತಿ ಅಂತೆಯೇ ಇದೆ. ಇಂದಿಗೂ ಬಹುಸಂಖ್ಯಾತ ವಿದ್ಯಾರ್ಥಿಗಳ ಕಲಿಕೆ ಆ ಬ್ರಿಟೀಷ್ ಮಾದರಿಯಲ್ಲೇ ಉಳಿದುಕೊಂಡಿದ್ದು ‘ಗುಮಾಸ್ತರ’ ಕೆಲಸಕ್ಕೆ ಸೂಕ್ತವೆನ್ನಿಸುವ ಶಿಕ್ಷಣವನ್ನೇ ಪಡೆಯುತ್ತಿದ್ದಾರೆ. ಅದರೊಟ್ಟಿಗೆ ಹೆಚ್ಚುವರಿಯಾಗಿ ಶಿಕ್ಷಣ – ಬ್ಯಾಂಕಿಂಗ್ ಇತ್ಯಾದಿ ಕಡೆ ‘ವೈಟ್ ಕಾಲರ್’ ನೌಕರಿಗಳಿಗೆ ಯೋಗ್ಯವಾಗುವಂತೆ ರೂಪುಗೊಳ್ಳುತ್ತಿದ್ದಾರೆ. ಅದಕ್ಕಾಗಿ ಸರಕಾರ ಇಂದು ದೇಶದಾದ್ಯಂತ ಅಸಂಖ್ಯಾತ ಶಾಲೆ, ಕಾಲೇಜು, ವಿಶ್ವವಿದ್ಯಾಲಯಗಳನ್ನು ಸ್ಥಾಪಿಸಿದ್ದು, ಇತ್ತೀಚೆಗೆ ಹೋಬಳಿ ಮಟ್ಟದಲ್ಲಿ ಕೂಡ ಪ್ರಥಮ ದರ್ಜೆ ಕಾಲೇಜುಗಳು ಮತ್ತು ಅವುಗಳಲ್ಲೇ ಸ್ನಾತಕೋತ್ತರ ಶಿಕ್ಷಣ ಪಡೆಯಲೂ ಸೂಕ್ತ (?) ವ್ಯವಸ್ಥೆ ಮಾಡಿರುವುದು ಸಾಮಾನ್ಯ ಸಂಗತಿಯೇನಲ್ಲ. ಇದೆಲ್ಲವೂ ಸರಿ, ಸರ್ವರಿಗೂ ಶಿಕ್ಷಣ ದೊರಕಬೇಕಾದದ್ದು ನ್ಯಾಯವಾದದ್ದೇ; ಆದರೆ ಹೀಗೆ ಶಿಕ್ಷಣ ನೀಡಿದ್ದರಿಂದ ಆದ ಉಪಯೋಗವನ್ನು ಗಣನೆಗೆ ತೆಗೆದುಕೊಳ್ಳಬೇಕಿದೆ. ಎಲ್ಲರೂ ಪದವಿ, ಸ್ನಾತಕೋತ್ತರ ಪದವಿ ಪಡೆದಿರುತ್ತಾರೆ ಖರೆ, ಆದರೆ ಅವರಿಗೆ ಅವರು ಪಡೆದ ಶಿಕ್ಷಣಕ್ಕೆ ತಕ್ಕಂತೆ ಉದ್ಯೋಗ? ಶಿಕ್ಷಣ ನೀಡುವುದಷ್ಟೇ ನಮ್ಮ ಗುರಿ – ನೌಕರಿ ಪಡೆಯುವುದು ಅವರವರ ಸಾಮಥ್ರ್ಯಕ್ಕೆ ಬಿಟ್ಟದ್ದು ಎಂಬ ಜಾರಿಕೆಯ ಮಾತನ್ನಾಡಬಹುದು. ಆದರೆ ಗಮನಿಸಬೇಕಾದ ಅಂಶವೆಂದರೆ ಸಾಮಥ್ರ್ಯವಿರದೆ ಅವರುಗಳೆಲ್ಲ ಪರೀಕ್ಷೆಗಳಲ್ಲಿ ಉತ್ತೀರ್ಣರಾಗಿ ಹೊರಗೆ ಬಂದಿರುವುದಿಲ್ಲ. ಸಾಮಥ್ರ್ಯವಿದೆ ಎಂಬುದರಲ್ಲಿ ಅಂಥ ಅನುಮಾನಗಳಿರಲು ಸಾಧ್ಯವಿಲ್ಲ. ದಿನನಿತ್ಯವೂ ಶಿಕ್ಷಣದಲ್ಲಿ ಗುಣಮಟ್ಟದ ಹೆಚ್ಚಳದ ಭಜನೆ ಕಾರ್ಯಕ್ರಮ ಮತ್ತು ಅದಕ್ಕಾಗಿ ಅನೇಕಾನೇಕ ಕೋಟಿ ರೂಪಾಯಿಗಳನ್ನು ವ್ಯಯಿಸಲಾಗುತ್ತಿದೆ. ಹೀಗಿದ್ದಾಗ ಸಹಜವಾಗಿಯೇ ಅಂಥಲ್ಲಿ ತಯಾರಾಗಿ ಹೊರಬಂದ ಉತ್ಪನ್ನಗಳ ಗುಣಮಟ್ಟ ಚೆನ್ನಾಗಿಯೇ ಇರುತ್ತದೆಂದು ಭಾವಿಸಬಹುದು. ಆದರೆ ಅವರಿಗೆಲ್ಲ ಉದ್ಯೋಗ ಎಲ್ಲ? ಎಲ್ಲರಿಗೂ ಅವರವರು ಪಡೆದ ಶಿಕ್ಷಣಕ್ಕನುಗುಣವಾಗಿ ಉದ್ಯೋಗವನ್ನು ಸೃಷ್ಟಿಸಲು ಸಾಧ್ಯವಿದೆಯೇ? ಉತ್ಪಾದನೆಗೆ ಮಾಡುವ ವೆಚ್ಚದ ರೀತಿಯಲ್ಲೇ ಉದ್ಯೋಗ ಸೃಷ್ಟಿಗೂ ನಾವು ವೆಚ್ಚಮಾಡುತ್ತಿದ್ದೇವೆಯೇ? ಯೋಚಿಸುವ ಅಗತ್ಯವಂತೂ ಇದ್ದೇ ಇದೆ. ಉತ್ಪಾದನೆ ಮತ್ತು ಉಪಯೋಗ- ಉದ್ಯೋಗದತ್ತ ಹೊಂದಾಣಿಕೆ ಏರ್ಪಡದಿದ್ದಲ್ಲಿ ಉತ್ಪಾದನೆಗೆ ಬೆಲೆ ಬರುವುದಿಲ್ಲ. ಉದ್ಯೋಗದ ಖಾತ್ರಿ ಇಲ್ಲ, ಅದು ಉಪಯೋಗಕ್ಕೆ ಬರುವುದು ನಿಕ್ಕಿ ಇಲ್ಲ ಎಂದಾದಲ್ಲಿ ಉತ್ಪಾದನೆಯಲ್ಲಿ ಭಾಗಿಯಾಗುವುದರಲ್ಲೂ ಶ್ರದ್ಧೆ ಉಳಿಯುವುದಿಲ್ಲ. ಇಂಥ ಪದವಿ ಪಡೆದರೆ ಅಥವಾ ಇದರಲ್ಲಿ ಇಷ್ಟು ಅಂಕಗಳನ್ನು ಪಡೆದು ಹೊರ ಬಂದರೆ ಇಂಥ ಉದ್ಯೋಗ ಖಾತ್ರಿ ಎಂದಾದರೆ ಕಷ್ಟಪಟ್ಟು, ಶ್ರದ್ಧೆಯಿಂದ ವಿದ್ಯಾಭ್ಯಾಸ ಪ್ರಕ್ರಿಯೆಯಲ್ಲಿ ಭಾಗವಹಿಸಲು ಸಾಧ್ಯ. ಮರವೊಂದನ್ನು ಏರಿದರೆ ‘ಫಲ’ ಸಿಗುವುದು ಗ್ಯಾರಂಟಿಯಿದ್ದ ಪಕ್ಷದಲ್ಲಿ ವ್ಯಕ್ತಿ ಮರವನ್ನೇರಲು ಖಂಡಿತ ಪ್ರಯತ್ನ ಪಡುತ್ತಾನೆ. ಅಷ್ಟೇ ಅಲ್ಲ ಅದೆಷ್ಟೇ ಕಷ್ಟವಾದರೂ ಸಾಧಿಸುವ ಛಲದಿಂದ ಮುನ್ನುಗ್ಗುತ್ತಾನೆ. ನಾನು ಈ ದಾರಿಯಲ್ಲಿ ಉಪಕ್ರಮಿಸಿದರೆ ನನಗೆ ಇಂಥದು ದಕ್ಕುತ್ತದೆ ಎಂದಾದರೆ ಆ ದಾರಿ ಎಷ್ಟೇ ಕಷ್ಟವಾದರೂ ಉಪಕ್ರಮಿಸಲು ಉದ್ಯುಕ್ತನಾಗುತ್ತಾನೆ. ಹಾಗಲ್ಲದೇ ಹೋದಲ್ಲಿ ತನ್ನಿಂದ ತಾನೇ ಆಲಸಿಯಾಗುತ್ತಾನೆ. ಒಟ್ಟಾರೆ ಒಂದು ಪದವಿ, ಒಂದು ಸರ್ಟಿಫಿಕೇಟು ಸಿಕ್ಕರೆ ಸಾಕು, ಹೇಗೋ ನಡೆಯುತ್ತದೆಂಬ ಭಾವನೆಗೆ ಒಳಗಾದರೆ ಒಳಗಿನ ಶಕ್ತಿ ಅಗತ್ಯಕ್ಕೆ ತಕ್ಕಂತೆ ಕೂಡ ಬಳಕೆಗೆ ಬಾರದೆ ವ್ಯರ್ಥವಾಗಿ ನಾಶವಾಗಬಹುದೆಂಬ ಗುಮಾನಿ ಸದ್ಯದ್ದು.
ಹಾಗಾಗಿ ಇಂದು ಪುನಃ ನಮ್ಮ ಉತ್ಪಾದನೆಯ ಕುರಿತು ತೀವ್ರವಾಗಿ ಚಿಂತಿಸಿ ಕರ್ತವ್ಯಕ್ಕೆ ಒತ್ತುಕೊಡುವುದು ಮೇಲು. ಇಂದು ನಮಗೆ ದಿನನಿತ್ಯ ಅಗತ್ಯವಾದ ಅನೇಕ ರೀತಿಯ ಕೆಲಸಗಳಿಗೆ ಕಾರ್ಮಿಕರೇ ಸಿಗುತ್ತಿಲ್ಲ ಎಂಬ ಮಾತುಗಳು ಚಾಲ್ತಿಯಲ್ಲಿವೆ. ಅಂದರೆ, ಅಗತ್ಯವಾದ ವೃತ್ತಿಗಳಿಗೆ ವ್ಯಕ್ತಿಗಳ ಕೌಶಲ್ಯ ಪಡೆದವರ ಕೊರತೆ ಒಂದೆಡೆಯಿದ್ದರೆ ಇನ್ನೊಂದೆಡೆ ಅನಗತ್ಯವಾಗಿ ‘ವೈಟ್‍ಕಾಲರ್’ ನೌಕರಿಗಾಗಷ್ಟೇ ಕಾಯುವ ಕೌಶಲ್ಯವನ್ನು ಪಡೆದುಕೊಂಡು ಅಲೆಯುತ್ತಿರುವ ಅನೇಕರು. ಅವರು ತಮಗೆ ಬೇಕಾದ ನೌಕರಿ ದೊರಕುತ್ತಿಲ್ಲ ಎಂದು ಗೊಣಗುತ್ತ ಅತೃಪ್ತ ಆತ್ಮಗಳಂತೆ ಅಲೆಯುತ್ತಿರುವ ದೃಶ್ಯ ಸಾಮಾನ್ಯ. ಅಂದರೆ ನಮ್ಮಲ್ಲಿ ‘ಕೆಲಸ’ವಿಲ್ಲ ಎಂದಲ್ಲ. ಬೇಕಾದ ಕೆಲಸವಿಲ್ಲ ಎಂಬುದಷ್ಟೆ. ಬೇಕಾದ ಕೆಲಸ ಬೇಕಾದಷ್ಟು ಲಭ್ಯವಿದ್ದಾಗ ಮಾತ್ರ ಲಭ್ಯ!. ಕೆಲಸಕ್ಕೆ ಅಗತ್ಯವಿದ್ದಷ್ಟು ಮತ್ತು ಆ ಕೆಲಸಕ್ಕೆ ಅಗತ್ಯವಾದ ಶಿಕ್ಷಣ ದೊರಕಿದರೆ ಈ ಪ್ರಶ್ನೆ ಉದ್ಭವಿಸದು. ಹಾಗಾಗಿ ನಾವು ಶಿಕ್ಷಣಕ್ಕೆ ಖರ್ಚು ಮಾಡುವ ಹಣ (ಅದು ಈ ದೇಶದ ಪ್ರಾಮಾಣಿಕ ತೆರಿಗೆದಾರರ ಹಣ)ದ ಪ್ರಯೋಜನಕ್ಕೆ ಬರುವುದು ಯಾವಾಗಲೆಂದರೆ ತಯಾರಿಸಿದ ಉತ್ಪನ್ನ ಮಾರುಕಟ್ಟೆಯಲ್ಲಿ ನ್ಯಾಯಯುತವಾಗಿ ಬಿಕರಿಯಾದಾಗ ಮಾತ್ರ. ಅಂದರೆ ಬಳಕೆಗೆ ಒದಗಿ ಬಂದಾಗ ಮಾತ್ರ. ಹಾಗಾಗಿ ಇಂದಿನ ಅಗತ್ಯ ‘ಉದ್ಯೋಗ ಸೃಷ್ಟಿ’ ಮತ್ತು ಉದ್ಯೋಗಕ್ಕನುಗುಣವಾದ ಶಿಕ್ಷಣ ನೀಡಿಕೆ. ಹಾಗಲ್ಲದೆ ಒಟ್ಟಾರೆ ರಾಶ್ಯುತ್ಪನ್ನಗಳ ತಯಾರಿಕೆ ಶಿಕ್ಷಣದ ನೀತಿಯಾದಲ್ಲಿ ಭವಿಷ್ಯದಲ್ಲಿ ಅದರ ಪರಿಣಾಮವನ್ನು ಈ ದೇಶವೇ ಎದುರಿಸಬೇಕು ಎಂಬ ಎಚ್ಚರಿಕೆ ಅಗತ್ಯ. ಕೇವಲ ಶಾಲೆ – ಕಾಲೇಜುಗಳನ್ನಷ್ಟೇ ಪ್ರಾರಂಭಿಸುತ್ತ, ಅವಕ್ಕೆ ಹಣವನ್ನು ಧಂಡಿಯಾಗಿ ಪೂರೈಸಿದರೆ ಪ್ರಯೋಜನವನ್ನು ಗಮನಿಸಬೇಕು. ಅನಿವಾರ್ಯತೆಗೆ ಖರ್ಚು ಮಾಡುವುದು ಬೇರೆ – ಖರ್ಚು ಮಾಡಲಿಕ್ಕೆ ಇದೆ ಎಂದು ಅನಿವಾರ್ಯವಾಗಿ ಖರ್ಚು ಮಾಡುವುದೇ ಬೇರೆ! ಕೆಲವು ಕಡೆಗಳಲ್ಲಿ ಹಣವಿದೆಯೆಂದು ಖರ್ಚು ತೋರಿಸುವ ಅನಿವಾರ್ಯತೆಯೆಂದು ಬೇಕಾದದ್ದು – ಬೇಡವಾದದ್ದನ್ನೆಲ್ಲ ಖರೀದಿಸಿ, ಕೂಡಿ ಹಾಕಿ, ಹಾಗೇ ಲಡ್ಡು ಹಿಡಿದು ಹೋಗುವಂತೆ ಮಾಡುವುದು ಸೂಕ್ತವಾದ ಆರ್ಥಿಕ ಬಳಕೆಯಾಗದು. ಅಷ್ಟೇ ಅಲ್ಲ ಅದು ನೀತಿಯೂ ಆಗದು. ಯಾವತ್ತೂ ಯಾವುದೇ ಬಗೆಯಾದ ಉತ್ಪಾದನೆಯಾದರೂ ಅದು ಉಪಯೋಗಕ್ಕೊದಗಬೇಕು. ಅದಕ್ಕೊಂದು ಶಕ್ತವಾದ ಮಾರುಕಟ್ಟೆ ಲಭ್ಯವಿರಬೇಕೆಂಬ ಪ್ರಾಥಮಿಕ ಜ್ಞಾನ ಸಾಮಾನ್ಯ ವಿವೇಕವೂ ಹೌದು.
ರವೀಂದ್ರ ಭಟ್ ಕುಳಿಬೀಡು.

ಪಿ.ಎಲ್.ಡಿ ಬ್ಯಾಂಕ್ಗೆ ಕಟ್ಟಡ ಕಟ್ಟಲು ಹತ್ತು ಲಕ್ಷ ರೂ

0

ಪಟ್ಟಣದ ಪಿ.ಎಲ್.ಡಿ ಬ್ಯಾಂಕಿಗೆ ಹೆಚ್ಚುವರಿ ಕಟ್ಟಡ ಕಟ್ಟಲು ಹತ್ತು ಲಕ್ಷ ರೂಗಳನ್ನು ತಮ್ಮ ಅನುದಾನದಲ್ಲಿ ನೀಡುವುದಾಗಿ ಸಹಕಾರ ಹಾಗೂ ಸಕ್ಕರೆ ಖಾತೆ ಸಚಿವ ಎಚ್.ಎಸ್.ಮಹದೇವಪ್ರಸಾದ್ ಘೋಷಿಸಿದರು.
ಪಟ್ಟಣದ ಪ್ರಾಥಮಿಕ ಸಹಕಾರ ಕೃಷಿ ಮತ್ತು ಗ್ರಾಮೀಣ ಅಭಿವೃದ್ಧಿ (ಪಿ.ಎಲ್.ಡಿ) ಬ್ಯಾಂಕ್ ಆವರಣದಲ್ಲಿ ಭಾನುವಾರ ಬ್ಯಾಂಕಿನ ಸಂಸ್ಥಾಪಕ ದಿ.ಪಿ.ಎಸ್.ಕೃಷ್ಣಮೂರ್ತಿರಾವ್ ಅವರ ಭಾವಚಿತ್ರ ಅನಾವರಣ, ಬ್ಯಾಂಕಿನ ನವೀಕೃತ ಕಟ್ಟಡ ಹಾಗೂ ನೂತನ ಕಟ್ಟಡ ಉದ್ಘಾಟನಾ ಸಮಾರಂಭದಲ್ಲಿ ಅವರು ಮಾತನಾಡಿದರು.
ರೈತರಿಂದ ರೈತರಿಗಾಗಿ ಇರುವ ಪಿ.ಎಲ್.ಡಿ ಬ್ಯಾಂಕ್ ಅಭಿವೃದ್ಧಿ ಹೊಂದಲು ಸಾಲವನ್ನು ನಿಗದಿತ ಸಮಯದಲ್ಲಿ ಮರುಪಾವತಿ ಮಾಡಬೇಕು. ಬೆಳೆ ಸರಿಯಾಗಿ ಆಗದೆ, ಬೆಳೆಗೆ ಸೂಕ್ತ ಬೆಲೆ ಸಿಗದೆ, ಪ್ರಕೃತಿ ವಿಕೋಪಗಳಿಗೆ ಗುರಿಯಾಗಿ ಹಲವಾರು ಮಂದಿ ರೈತರು ಸಂಕಷ್ಟಕ್ಕೀಡಾಗಿದ್ದಾರೆ. ರಾಜ್ಯದ 25 ಸಾವಿರ ಮಂದಿ ಪರಿಶಿಷ್ಠ ಜಾತಿ ಮತ್ತು ಪರಿಶಿಷ್ಠ ವರ್ಗದ ರೈತರ 35 ಸಾವಿರ ಕೋಟಿ ರೂಗಳ ಸಾಲದ ಅಸಲನ್ನು ಸರ್ಕಾರಿ ನೀಡಿ ಬ್ಯಾಂಕುಗಳಿಗೆ ಚೈತನ್ಯ ನೀಡುವ ಪ್ರಯತ್ನ ಮಾಡಿದ್ದೇವೆ ಎಂದು ಹೇಳಿದರು.
ಈ ಸಂದರ್ಭದಲ್ಲಿ ಶಾಶ್ವತ ನೀರಾವರಿಗೆ ಒತ್ತಾಯಿಸಿ ಮನವಿ ಪತ್ರವನ್ನು ನೀಡಿದ ರೈತ ಸಂಘದ ಮುಖಂಡರನ್ನುದ್ದೇಶಿ ಮಾತನಾಡಿ, ಮನವಿ ಪತ್ರವನ್ನು ಮುಖ್ಯಮಂತ್ರಿಗಳಿಗೆ ನೀಡಿ ಈ ಭಾಗದ ಜನರ ಕಷ್ಟವನ್ನು ತಿಳಿಸಿ ನೀರಿನ ಅಗತ್ಯತೆಯನ್ನು ವಿವರಿಸುತ್ತೇನೆ. ಈ ಭಾಗದ ಜನಪ್ರತಿನಿಧಿಗಳು ರೈತರು, ಮುಖಂಡರು ಒಗ್ಗೂಡಿ ಶಾಶ್ವತ ನೀರಾವರಿ ಯೋಜನೆಗಾಗಿ ಒಗ್ಗಟ್ಟಿನಿಂದ ಶ್ರಮಿಸಬೇಕೆಂದು ತಿಳಿಸಿದರು.
ಶಾಸಕ ಎಂ.ರಾಜಣ್ಣ ಮಾತನಾಡಿ, ಕೇವಲ ಶೇಕಡಾ 3 ರಷ್ಟು ಬಡ್ಡಿ ದರದಲ್ಲಿ ಪಿ.ಎಲ್.ಡಿ ಬ್ಯಾಂಕ್ ರೈತರಿಗೆ ಸಾಲ ನೀಡುತ್ತಿದ್ದು, ಸರಿಯಾಗಿ ಮರುಪಾವತಿ ಮಾಡಿ ಬ್ಯಾಂಕ್ ಅಭಿವೃದ್ಧಿಗೆ ಕಾರಣರಾಗಬೇಕು ಎಂದು ಹೇಳಿದರು.
ಕೋಲಾರ ಚಿಕ್ಕಬಳ್ಳಾಪುರ ಹಾಲು ಒಕ್ಕೂಟದ ತಾಲ್ಲೂಕು ಶಿಬಿರ ಕಚೇರಿಯ ವತಿಯಿಂದ ಜನಶ್ರೀ ವಿಮಾ ಯೋಜನೆಯ ವಿದ್ಯಾರ್ಥಿ ವೇತನ ಹಾಗೂ ಮರಣ ಹೊಂದಿದ ಮಿಶ್ರತಳಿ ರಾಸುಗಳ ಫಲಾನುಭವಿಗಳಿಗೆ ವಿಮಾ ಪರಿಹಾರದ ಚೆಕ್ಕುಗಳ ವಿತರಣೆಯನ್ನು ನಡೆಸಲಾಯಿತು.
ಸಂಸದ ಕೆ.ಎಚ್.ಮುನಿಯಪ್ಪ, ರಾಜ್ಯ ಸಹಕಾರ ಸಂಘಗಳ ಹಾಗೂ ಗ್ರಾಮೀಣ ಅಭಿವೃದ್ಧಿ ಬ್ಯಾಂಕ್ ಅಧ್ಯಕ್ಷ ಎ.ಆರ್.ಶಿವರಾಮ್, ಪಿಎಲ್ಡಿ ಬ್ಯಾಂಕ್ ಅಧ್ಯಕ್ಷ ರಾಮಚಂದ್ರ, ಜಿಲ್ಲಾ ನಿರ್ದೇಶಕ ನಾರಾಯಣಸ್ವಾಮಿ, ಸಹಕಾರ ಸಂಘಗಳ ಉಪ ನಿಬಂಧಕಿ ಬಿ.ಜಿ.ಮಂಜುಳ, ಪ್ರಭಾರ ಜಿಲ್ಲಾ ವ್ಯವಸ್ಥಾಪಕ ಎಸ್.ನಾಗರಾಜು, ಕೋಚಿಮುಲ್ ಅಧ್ಯಕ್ಷ ಜೆ.ಕಾಂತರಾಜ್, ವ್ಯವಸ್ಥಾಪಕ ಮುನಿಯಪ್ಪ, ಸಿ.ಎಂ.ಗೋಪಾಲ್, ಅಶ್ವತ್ಥನಾರಾಯಣರೆಡ್ಡಿ, ಡಿ.ಸಂಗಪ್ಪ, ಮುನಿಯಪ್ಪ, ಆರ್.ಬಿ.ಜಯದೇವ್, ಸಿ.ಅಶ್ವತ್ಥನಾರಾಯಣ, ರಾಮಲಕ್ಷ್ಮಮ್ಮ, ಎಂ.ಪಿ.ರವಿ, ಎಸ್.ಕೆ.ಮಯೂರ ಮತ್ತಿತರರು ಈ ಸಂದರ್ಭದಲ್ಲಿ ಹಾಜರಿದ್ದರು.

ತೊಗರಿ ಬೆಳೆ ಕ್ಷೇತ್ರೋತ್ಸವ

0

ತಾಲ್ಲೂಕಿನ ಮುತ್ತೂರು ಗ್ರಾಮದ ಎಂ.ಎಸ್.ಮಹೇಶ್ ಅವರ ಹೊಲದಲ್ಲಿ ಈಚೆಗೆ ಮಳೆಯಾಶ್ರಿತ ತೊಗರಿ ಬೆಳೆ ಕ್ಷೇತ್ರೋತ್ಸವವನ್ನು ಹಮ್ಮಿಕೊಳ್ಳಲಾಗಿತ್ತು.
ಆತ್ಮಯೋಜನೆಯಲ್ಲಿ ನಡೆದ ಕ್ಷೇತ್ರೋತ್ಸವದಲ್ಲಿ ಸಹಾಯಕ ಕೃಷಿ ನಿರ್ದೇಶಕ ಬಿ.ಸಿ.ದೇವೇಗೌಡ ಮಾತನಾಡಿ, ತೊಗರಿ ಬೆಳೆಯ ಮುಖ್ಯ ಬೇಸಾಯ ಕ್ರಮಗಳಾದ ಭೂಮಿ ಸಿದ್ಧತೆ, ತಳಿಗಳು ಮತ್ತು ಕಾಲಾವಧಿ, ಬಿತ್ತನೆಕಾಲ, ಬಿತ್ತನೆಬೀಜ ಹಾಗೂ ಇತರೆ ಪರಿಕರಗಳ ಅವಶ್ಯಕತೆ ಕುರಿತಂತೆ, ಇಲಾಖೆಯಿಂದ ರೈತರಿಗೆ ರಿಯಾಯಿತಿ ದರದಲ್ಲಿ ಸಿಗುವ ಸೌಲಭ್ಯಗಳು ಕುರಿತಂತೆ ಮಾಹಿತಿ ತಿಳಿಸಿದರು.
ಕೃಷಿ ಅಧಿಕಾರಿ ಗೋಪಾಲರಾವ್, ಬೀಜೋಪಚಾರ, ಸಮಗ್ರ ಪೋಷಕಾಂಶಗಳು ಮತ್ತು ಪೀಡೆನಾಶಕಗಳ ನಿರ್ವಹಣೆಯಿಂದ ಅಧಿಕ ಇಳುವರಿ ಪಡೆಯುವ ಬಗ್ಗೆ ತಿಳಿಸಿಕೊಟ್ಟರು.
ತಾಲ್ಲೂಕು ತಾಂತ್ರಿಕ ವ್ಯವಸ್ಥಾಪಕ ಎನ್.ಅಶ್ವತ್ಥನಾರಾಯಣ, ಆತ್ಮಯೋಜನೆಯಿಂದ ರೈತರಿಗೆ ಸಿಗುವ ವಿಸ್ತರಣಾ ಕಾರ್ಯಕ್ರಮಗಳು ಮತ್ತು ಪರಿಕರಗಳ ಬಗ್ಗೆ ಮಾಹಿತಿ ನೀಡಿದರು.
ಗ್ರಾಮ ಪಂಚಾಯತಿ ಸದಸ್ಯ ಎ.ಎಂ.ವೆಂಕಟರಾಜೇಗೌಡ, ಕೃಷಿಕ ಸಮಾಜದ ಸದಸ್ಯ ಎಂ.ಟಿ.ಕೆಂಪೇಗೌಡ, ರೈತರಾದ ಎಂ.ಬಿ.ವೇಣುಗೋಪಾಲ್, ಮುರಳಿ, ಗಂಗಾಧರ್, ಮಹೇಶ್, ಆತ್ಮ ಸಿಬ್ಬಂದಿಗಳಾದ ಶಿಲ್ಪ, ಕಾವ್ಯ, ಸುಶ್ಮಿತ, ಅನುವುಗಾರರಾದ ಗಜೇಂದ್ರ, ರಾಮಾಂಜಿ, ಚನ್ನರಾಯಪ್ಪ, ಲೋಕೇಶ್, ರಾಮಾಂಜಿನಪ್ಪ ಮತ್ತಿತರರು ಈ ಸಂದರ್ಭದಲ್ಲಿ ಹಾಜರಿದ್ದರು.

ರಸಮೇವು ತಯಾರಿಕಾ ಪ್ರಾತ್ಯಕ್ಷಿಕೆ

0

ತಾಲ್ಲೂಕಿನ ಮಳ್ಳೂರು ಗ್ರಾಮದಲ್ಲಿ ಈಚೆಗೆ ರಸಮೇವು ತಯಾರಿಕಾ ಪ್ರಾತ್ಯಕ್ಷಿಕೆಯನ್ನು ನಡೆಸಿಕೊಟ್ಟು, ಬರಗಾಲದಲ್ಲಿ ರಾಸುಗಳಿಗೆ ಮೇವನ್ನು ಹೇಗೆ ಸರಿದೂಗಿಸಿಕೊಳ್ಳಬಹುದೆಂದು ಕೋಚಿಮುಲ್ನ ಪಶು ಆಹಾರ ಮತ್ತು ಮೇವು ವಿಭಾಗದ ಅಧಿಕಾರಿಗಳು ತಿಳಿಸಿಕೊಟ್ಟರು.
ಪಶು ಆಹಾರ, ಹಿಂಡಿ, ಬೂಸಾಗಳ ಬೆಲೆ ಹೆಚ್ಚಾಗುತ್ತಿದ್ದು, ಪಶು ಆಹಾರ ತಯಾರಿಕೆಗೆ ಬೇಕಾದ ಖಚ್ಚಾ ಪದಾರ್ಥಗಳು ಹೆಚ್ಚಿನ ಪ್ರಮಾಣದಲ್ಲಿ ಸಿಗದಿರುವ ಕಾರಣ ಹೈನುಗಾರಿಕೆಯನ್ನು ನಂಬಿದವರು ಕಷ್ಟಪಡುವಂತಾಗಿದೆ. ಹಸಿರು ಮೇವನ್ನು ರಸಮೇವಾಗಿ ಪರಿವರ್ತಿಸಿ ಬರಗಾಲದಲ್ಲಿ ಬಳಸಿಕೊಳ್ಳುವ ಮೂಲಕ ನಷ್ಟವನ್ನು ಕಡಿಮೆ ಮಾಡಿಕೊಳ್ಳಬಹುದಾಗಿದೆ.
ಹಸಿರು ಮೇವನ್ನು ಸಂರಕ್ಷಿಸಿ, ಗುಣಾಂಶಗಳನ್ನು ಕೆಡದಂತೆ ಕಾಪಾಡಿ, ಹಸಿರು ಮೇವಿನ ಪೌಷ್ಠಿಕತೆಯನ್ನು ಹೆಚ್ಚಿಸಿ ಬೇಸಿಗೆಯ ಬರಗಾಲದಲ್ಲಿ ಹೈನುರಾಸುಗಳಿಗೆ ನೀಡುವುದನ್ನು ರೂಢಿಸಿಕೊಳ್ಳಬೇಕಿದೆ ಎಂದು ಪ್ರಾತ್ಯಕ್ಷಿಕೆಗಳ ಮೂಲಕ ಅಧಿಕಾರಿಗಳು ತೋರಿಸಿಕೊಟ್ಟರು.
ರಾಷ್ಟ್ರೀಯ ಹೈನುಯೋಜನೆಯ ಮೇವು ಅಭಿವೃದ್ಧಿ ಉಪಯೋಜನೆಯಲ್ಲಿ ಶೇಕಡಾ ನೂರರಷ್ಟು ಅನುದಾನ ಸಿಗುತ್ತಿದ್ದು ಸದ್ಭಳಕೆ ಮಾಡಿಕೊಳ್ಳಬೇಕೆಂದು ಈ ಸಂದರ್ಭದಲ್ಲಿ ಜಿಲ್ಲಾ ಹಾಲು ಒಕ್ಕೂಟದ ವ್ಯವಸ್ಥಾಪಕ ಡಾ.ಎ.ಬಿ.ಲೋಕೇಶ್ ತಿಳಿಸಿದರು.
ಒಂದು ರಸಮೇವು ಘಟಕಕ್ಕೆ 25 ಸಾವಿರ ರೂಗಳು ವೆಚ್ಚವಾಗುತ್ತದೆ. ಜಿಲ್ಲೆಯಲ್ಲಿ 49 ಘಟಕಗಳನ್ನು ಸ್ಥಾಪಿಸಲಿದ್ದು, ತಾಲ್ಲೂಕಿನಲ್ಲಿ 9 ಘಟಕಗಳು ಸ್ಥಾಪನೆಯಾಗುತ್ತಿವೆ. ಬರಗಾಲಕ್ಕೆ ಮುಂದಾಲೋಚನೆಯಾಗಿ ಈ ಪರಿಹಾರವನ್ನು ರೂಪಿಸಿಕೊಳ್ಳುವುದು ಸೂಕ್ತ ಎಂದು ಅವರು ಅಭಿಪ್ರಾಯಪಟ್ಟರು.
ಕೋಲಾರ ಹಾಲು ಒಕ್ಕೂಟದ ಸಹಾಯಕ ವ್ಯವಸ್ಥಾಪಕಿ ಆರ್.ವಿಜಯಲಕ್ಷ್ಮಿ, ಪ್ರಗತಿಪರ ರೈತ ಮಳ್ಳೂರು ಹರೀಶ್ ಮತ್ತಿತರರು ಈ ಸಂದರ್ಭದಲ್ಲಿ ಹಾಜರಿದ್ದರು.

ಪುಟಾಣಿ ಸಾಹಿತಿಗಳ 'ಶಾಮಂತಿ' ಪುಸ್ತಕ ಬಿಡುಗಡೆ

0

ಪುಟಾಣಿ ಮಕ್ಕಳಿಗಾಗಿ ಚಂದದೊಂದು ಹೊಸ ಪುಸ್ತಕ ಬಂದಿದೆ. ಪುಸ್ತಕ ಬರೆದಿರೋರು ಪ್ರಸಿದ್ಧ ವ್ಯಕ್ತಿಗಳ್ಯಾರೂ ಅಲ್ಲ. ಮುಗ್ಧ ಮನಸ್ಸಿನ ಚಿನ್ನಾರಿಗಳು. ಅವರು ತಾಲ್ಲೂಕಿನ ಕನ್ನಮಂಗಲದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ ವಿದ್ಯಾರ್ಥಿಗಳು.
14sdls2ಅಂದಹಾಗೆ ಆ ಶಾಲೆಯಿಂದ ಹೊರಬರುತ್ತಿರುವ ನಾಲ್ಕನೇ ಪುಸ್ತಕ ಇದು. ಹೆಸರು `ಶಾಮಂತಿ- 4′. ಇದರಲ್ಲಿ ಆ ಮಕ್ಕಳು ಬರೆದಿರೋ 52 ಬರಹಗಳಿವೆ. ಪುಸ್ತಕದ ಕುರಿತು ದೊಡ್ಡವರು ಬರೆದಿರುವ ಅಭಿಪ್ರಾಯಗಳನ್ನೂ ಸಂಗ್ರಹಿಸಲಾಗಿದೆ. ಮಕ್ಕಳಿಂದ ಬರೆಸಿ ಅದನ್ನು ಚಿಣ್ಣರಿಗೆ ಇಷ್ಟವಾಗುವಂತೆ ಹೊರ ತಂದಿರುವುದು ಸಂಪಾದಕ ಎಸ್. ಕಲಾಧರ. ಮುಖಪುಟ, ಒಳಪುಟಗಳ ವಿನ್ಯಾಸವನ್ನು ಅವರೇ ಮಾಡಿದ್ದಾರೆ. ಇವರ ಕೆಲಸವನ್ನು ಪ್ರೋತ್ಸಾಹಿಸಿರೋದು ಸಹಶಿಕ್ಷಕರು ಮತ್ತು ಕನ್ನಮಂಗಲದ ಸ್ನೇಹ ಕಲಾಸಂಘ.
ದೊಡ್ಡವರು ಬರೆವ ಮಕ್ಕಳ ಪುಸ್ತಕಕ್ಕಿಂತ ಇದು ವಿಭಿನ್ನ. ಈ ಎಳೆಯರ ಜಗತ್ತು ಅತ್ಯಂತ ತಾಜಾ. ದಿನವೂ ನೋಡುವ ಮನೆ, ಶಾಲೆ, ಮೈದಾನ, ತೋಟ, ಪ್ರಾಣಿ ಪಕ್ಷಿ ಮುಂತಾದವೆಲ್ಲಾ ಇಲ್ಲಿ ಬಣ್ಣ ತಳೆದಿವೆ. ಬರೆಯೋದು ಅಂದ್ರೆ ಬರೀ ಲೇಖನ ಅಲ್ಲ. ಅಲ್ಲಿ ಕತೆ, ಪದ್ಯ ಅಷ್ಟೇ ಏಕೆ, ನಾಟಕ ಕೂಡ ಇವೆ. ಕೆಲವು ಮಕ್ಕಳು ಒಳ್ಳೊಳ್ಳೆ ಚಿತ್ರ ಬರೆದಿದ್ದಾರೆ. ಅವರ ವಯಸ್ಸು ಅಬ್ಬಬ್ಬಾ ಅಂದ್ರೆ 9ರಿಂದ 13 ವರ್ಷ ಇರಬಹುದು ಅಷ್ಟೇ.
ಶಾಮಂತಿಯ ಮಕ್ಕಳ ಓದಿನ ಹರವು ಕೂಡ ವಿಸ್ತಾರವಾಗಿದೆಯೆಂದು ಮಕ್ಕಳ ಬರಹಗಳ ಮೂಲಕ ಗೊತ್ತಾಗುತ್ತದೆ. ಅದರಲ್ಲಿ ಕುವೆಂಪುರವರ ‘ಗಗನಗುರು’, ಲಂಕೇಶರ ‘ಅವ್ವ’, ಸಿದ್ದಲಿಂಗಯ್ಯನವರ ‘ನನ್ನ ಕವನ‘, ಬೋಳುವಾರು ಅವರ ‘ಪಾಪು ಗಾಂಧಿ ಗಾಂಧಿ ಬಾಪುವಾದ ಕತೆ’ ಯಂತಹ ಕವಿತೆ, ಕೃತಿಗಳ ಕುರಿತಾಗಿ ಸವಿಸ್ತಾರವಾಗಿ ತಾವು ಗ್ರಹಿಸಿದ್ದನ್ನು ಮಕ್ಕಳು ದಾಖಲಿಸಿದ್ದಾರೆ.
ಈ ಪುಸ್ತಕವನ್ನು ಶುಕ್ರವಾರ ಕನ್ನಮಂಗಲ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯ ಆವರಣದಲ್ಲಿ ನಡೆದ ಅಂತರಶಾಲಾ ನಾಟಕೋತ್ಸವ ಕಾರ್ಯಕ್ರಮದಲ್ಲಿ ಬಿಡುಗಡೆ ಮಾಡಿದ ಶಾಸನತಜ್ಞ ಡಾ. ಆರ್.ಶೇಷಶಾಸ್ತ್ರಿ, ‘ಡಿವಿಜಿ, ಮಾಸ್ತಿ ಅವರ ಬರಹಗಳನ್ನು ನಾನೆಷ್ಟು ಗೌರವಿಸುತ್ತೇನೆಯೋ, ಶಾಮಂತಿಯ ಲೇಖನಗಳನ್ನು ಕೂಡ ಅಷ್ಟೇ ಗೌರವಿಸುತ್ತೇನೆ. ಈ ಬರಹಗಳನ್ನು ಬರೆದಿರುವ ಮಕ್ಕಳು ಉತ್ತಮ ಸಾಹಿತಿಗಳಾಗದಿದ್ದರೂ ಒಳ್ಳೆಯ ಮನುಷ್ಯರಂತೂ ಖಂಡಿತ ಆಗುತ್ತಾರೆ. ಎಷ್ಟೋ ಜನಕ್ಕೆ ತಮ್ಮ ಭಾವನೆಗಳನ್ನು ಅಭಿವ್ಯಕ್ತಿಸಲು ಬರದು. ಆದರೆ ಈ ಮಕ್ಕಳು ತಮ್ಮ ಸುಖ, ದುಃಖ, ನೋವು ನಲಿವುಗಳನ್ನು ಹೇಳಿಕೊಳ್ಳಬಲ್ಲರು, ಬರೆಯಬಲ್ಲರು. ಈ ಸಂಸ್ಕಾರವನ್ನು ಒದಗಿಸಿರುವ ಇವರ ಶಿಕ್ಷಕರು ಮತ್ತು ಈ ಮಕ್ಕಳ ಭಾವನೆಗಳನ್ನು ಪುಸ್ತಕ ರೂಪದಲ್ಲಿ ತರುವ ಇಲ್ಲಿನ ಸ್ನೇಹ ಯುವಕ ಸಂಘದವರು ಮಾದರಿಯಾಗಿದ್ದಾರೆ. ಮಕ್ಕಳಿಗೆ ಅಭಿವ್ಯಕ್ತಿ, ಕೃತಜ್ಞತೆ ಮತ್ತು ಜಾನಪದ ಕತೆಗಳನ್ನು ತಮ್ಮದಾಗಿಸಿಕೊಳ್ಳುವುದನ್ನು ಕಲಿಸಿರುವ ಕನ್ನಮಂಗಲದ ಶಿಕ್ಷರು ಹಾಗೂ ಅವರ ಐಕ್ಯಮತ್ಯ ಅಭಿನಂದನೀಯ’ ಎಂದು ಹೇಳಿದರು.
ಶಾಮಂತಿಯಲ್ಲಿ ಮಕ್ಕಳು ಪ್ರಾಣಿ, ಪಕ್ಷಿ, ಗಿಡ, ಮರ, ಕೀಟಗಳ ಬಗ್ಗೆ ಬರೆದಿದ್ದಾರೆ. ಅಡುಗೆ, ಕೃಷಿ, ಕಣ, ದೇವಸ್ಥಾನ, ಹಬ್ಬ, ನಂಬಿಕೆಗಳು, ಪೂಜೆ, ನೋಡಿದ ಸಿನೆಮಾ, ಓದಿದ ಪುಸ್ತಕ, ಸರ್ಕಸ್ಸು, ನೋವು ನಲಿವು ದುಗುಡ ತಲ್ಲಣಗಳ ಬಗ್ಗೆಯೂ ಬರೆದಿದ್ದಾರೆ. ತಮ್ಮ ಶಾಲೆಯ ಅಂಗನವಾಡಿ ಸಹಾಯಕಿಯೊಳಗೆ ಪರಕಾಯ ಪ್ರವೇಶ ಮಾಡಿ ಆಕೆಯ ಮನಸ್ಸನ್ನು ಚಿತ್ರಿಸಿದ್ದಾರೆ. ತಾವು ನೋಡಿದ್ದು, ಆಡಿದ್ದು, ಅನುಭವಿಸಿದ್ದು, ತಿಂದಿದ್ದು, ಕುಡಿದಿದ್ದು, ಕುಣಿದಿದ್ದು, ಕೇಳಿದ್ದು ಎಲ್ಲವನ್ನೂ ಮುಚ್ಚುಮರೆಯಿಲ್ಲದೆಯೇ ಸರಾಗವಾಗಿ ಯಾವುದೇ ಹಿಂಜರಿಕೆಯಿಲ್ಲದೆ ಬರೆದಿದ್ದಾರೆ. ಓದುಗರ ಮನಸ್ಸನ್ನು ಆವರಿಸಿಕೊಳ್ಳುವ ಆಟದ ಅಂಗಳವನ್ನಾಗಿಸಿದ್ದಾರೆ.
ಶಾಮಂತಿ 4 ಕ್ಕೆ ಮುನ್ನುಡಿ ಬರೆದಿರುವ ಮುದ್ದು ತೀರ್ಥಹಳ್ಳಿ, ‘ಎಲ್ಲ ಶಾಲೆಗಳಲ್ಲೂ ಇಂಥಹ ಶಿಕ್ಷಕರಿದ್ದಲ್ಲಿ ಪ್ರತಿಯೊಂದು ಶಾಲೆಯಲ್ಲೂ ಶಾಮಂತಿ, ಅಬ್ಬಲಿಗೆ, ಮಲ್ಲಿಗೆ, ಜಾಜಿ, ಸುರಗಿ ಹೂವುಗಳೇನು ಹೂತೋಟವೇ ಮೈದಾಳಿ ಅರಳುತ್ತದೆ ಎನ್ನುವ ಗಟ್ಟಿಯಾದ ನಂಬಿಕೆ ನನಗಿದೆ. ಮಕ್ಕಳ ಭಾವನೆಗಳಿಗೆ ಬಾಯಿ ಮೂಡಿಸದಿದ್ದರೆ ಅವರೊಳಗನ್ನು ಅರಿಯುವುದಾದರೂ ಹೇಗೆ. ಇಂಥಹ ಬರಹಗಳನ್ನು ಮಕ್ಕಳು ಅಭಿವ್ಯಕ್ತಿಸಬೇಕಾದರೆ ಅದಕ್ಕೆ ಬೇಕಾಗುವ ಮುಕ್ತ ವಾತಾವರಣ ಸರ್ಕಾರಿ ಶಾಲೆಗಳಲ್ಲಿ ಮಾತ್ರ ಸಾಧ್ಯ. ಅದರಲ್ಲೂ ಸಂವೇದನಾಶೀಲ ಶಿಕ್ಷಕರಿದ್ದಲ್ಲಿ ಮಾತ್ರ ಅದು ಸಾಧ್ಯವಾಗಬಲ್ಲದು. ನಿಜವಾಗಿ ಕಲಿಕೆಯ ಮೌಲ್ಯಮಾಪನ ನಡೆಯಬೇಕಾಗಿರುವುದು ಪರೀಕ್ಷೆಗಳ ಅಂಕಗಳ ಮೂಲಕವಲ್ಲ, ಅದು ಶಾಮಂತಿಯಲ್ಲಿರುವಂತಹ ಬರಹಗಳಿಂದ’ ಎನ್ನುತ್ತಾರೆ.
ಇದೇ ಶಾಲೆಯಿಂದ ಮುಂದೊಂದು ದಿನ ಕಲಾವಿದೆಯರು, ಕತೆಗಾರರು, ಕವಿಗಳು, ನಟರು, ನಾಟಕಕಾರರು ಹುಟ್ಟಿದರೆ ಅವರೆಲ್ಲಾ ಖಂಡಿತಾ `ಶಾಮಂತಿ’ಯನ್ನೂ, ಅಲ್ಲಿನ ಮೇಷ್ಟ್ರುಗಳನ್ನೂ ನೆನೆಯದೇ ಇರುವುದಿಲ್ಲ.
ಮಕ್ಕಳಿರುವ ಮನೆಗಳಲ್ಲಿ ಇಂಥದ್ದೊಂದು ಪುಸ್ತಕ ಇರಲಿ. ಪುಸ್ತಕಕ್ಕಾಗಿ ಈ ನಂಬರ್ಗೆ ಫೋನ್ ಮಾಡಬಹುದು: 9900695142 ಅಥವಾ kaladhars152@gmail.com ಗೆ ಮೇಲ್ ಮಾಡಬಹುದು.
– ಡಿ.ಜಿ.ಮಲ್ಲಿಕಾರ್ಜುನ.

ಅಪರಾಧ ತಡೆ ಮಾಸಾಚರಣೆ

0

ಶಿಡ್ಲಘಟ್ಟದಲ್ಲಿ ಶುಕ್ರವಾರ ಪುರಠಾಣೆ ಪೊಲೀಸರು ಸಬ್ಇನ್ಸ್ಪೆಕ್ಟರ್ ಪುರುಷೋತ್ತಮ್ ನೇತೃತ್ವದಲ್ಲಿ ಅಪರಾಧ ತಡೆ ಮಾಸಾಚರಣೆಯ ಪ್ರಯುಕ್ತ ಆಟೋಚಾಲಕರಿಗೆ ಜಾಗೃತಿ ಮೂಡಿಸಿ ಆಟೋ ರ್ಯಾಲಿ ನಡೆಸಿದರು.

ಉತ್ತಮ ಗುಣಮಟ್ಟದ ರೇಷ್ಮೆಯನ್ನು ಉತ್ಪಾದನೆ ಮಾಡಿ

0

ಆಧುನಿಕ ತಾಂತ್ರಿಕತೆ ಬಳಸಿಕೊಂಡು ಉತ್ತಮ ಗುಣಮಟ್ಟದ ರೇಷ್ಮೆಯನ್ನು ಉತ್ಪಾದನೆ ಮಾಡುವತ್ತ ರೈತರು ಉತ್ಸುಕರಾಗಬೇಕು ಎಂದು ಬಾಗೇಪಲ್ಲಿ ರೇಷ್ಮೆ ಸಹಾಯಕ ನಿರ್ದೆಶಕ ಅಮರ್ನಾಥ್ ಹೇಳಿದರು.
ತಾಲ್ಲೂಕಿನ ಮಲ್ಲಹಳ್ಳಿ ಗ್ರಾಮದಲ್ಲಿ ಶುಕ್ರವಾರ ರೇಷ್ಮೆ ಇಲಾಖೆ ಏರ್ಪಡಿಸಿದ್ದ ರೇಷ್ಮೆ ಕೃಷಿ ದ್ವಿತಳಿ ಬೆಳೆ ಕ್ಷೇತ್ರೋತ್ಸವ ಕಾರ್ಯಕ್ರಮದಲ್ಲಿ ರೈತರನ್ನು ಉದ್ದೇಶಿಸಿ ಅವರು ಮಾತನಾಡಿದರು.
ಅಂತರಾಷ್ಟ್ರೀಯ ಮಟ್ಟದಲ್ಲಿ ದೇಶದ ಖ್ಯಾತಿಯನ್ನು ಹೆಚ್ಚಿಸಬೇಕಾದರೆ ರೈತರು ದ್ವಿತಳಿ ಗೂಡನ್ನು ಬೆಳೆಯಬೇಕು. ದ್ವಿತಳಿ ರೇಷ್ಮೆ ಗೂಡನ್ನು ಬೆಳೆಯಲು ಅಗತ್ಯವಾಗಿರುವ ವಿಧಾನಗಳನ್ನು ರೈತರು ಖಡ್ಡಾಯವಾಗಿ ಅನುಸರಿಸಬೇಕು.
ಹಿಪ್ಪುನೇರಳೆ ತೋಟಗಳ ನಿರ್ವಹಣೆಯನ್ನು ವ್ಯವಸ್ಥಿತವಾಗಿ ಮಾಡುವುದರೊಂದಿಗೆ ದ್ವಿತಳಿ ರೇಷ್ಮೆ ಗೂಡಿಗೆ ಪಕ್ವವಾಗಿರುವ ಹಿಪ್ಪುನೇರಳೆ ಸೊಪ್ಪನ್ನು ಕೊಡುವುದರಿಂದ ಉತ್ತಮ ಗುಣಮಟ್ಟದ ಬೆಳೆಯನ್ನು ಹಾಗೂ ಇಳುವರಿಯನ್ನು ಪಡೆಯಲು ಸಾಧ್ಯವಾಗುತ್ತದೆ ಎಂದರು.
ಪ್ರತಿ ಮೂರು ತಿಂಗಳಿಗೊಮ್ಮೆ ಮಣ್ಣಿನ ಪರೀಕ್ಷೆ ಮಾಡಿಸುವುದು ಖಡ್ಡಾಯವಾಗಿದ್ದು, ರೇಷ್ಮೆ ಹುಳುಸಾಕಾಣಿಕೆ ಮನೆಗಳಿಂದ ತೆಗೆದ ತ್ಯಾಜ್ಯವನ್ನು ಚೆನ್ನಾಗಿ ಕೊಳೆಸಿ ತೋಟಗಳಿಗೆ ನೀಡಬೇಕು. ಹಿಪ್ಪುನೇರಳೆ ಸೊಪ್ಪನ್ನು ಕಟಾವು ಮಾಡುವಂತಹ ಪದ್ದತಿಗಳನ್ನು ಬದಲಾವಣೆ ಮಾಡಬೇಕು. ತೋಟಗಳಿಗೆ ಬೇವಿನಹಿಂಡಿ, ಹೊಂಗೆಹಿಂಡಿಯನ್ನು ಕೊಡುವುದು ಸೂಕ್ತ. ಕಳಪೆ ಗುಣಮಟ್ಟದ ರಸಗೊಬ್ಬರಗಳನ್ನು ನೀಡುವುದು ಸೇರಿದಂತೆ ರಾಸಾಯನಿಕಗಳನ್ನು ಸಿಂಪಡಣೆ ಮಾಡಬಾರದು ಎಂದು ಎಚ್ಚರಿಸಿದರು.
ದ್ವಿತಳಿ ರೇಷ್ಮೆ ಗೂಡಿಗೆ ವ್ಯವಸ್ಥಿತ ಮಾರುಕಟ್ಟೆ ಸೌಲಭ್ಯವಿಲ್ಲದಿರುವುದರಿಂದ ರೈತರು ಬೆಳೆದ ದ್ವಿತಳಿ ರೇಷ್ಮೆ ಗೂಡನ್ನು ದೂರದ ರಾಮನಗರಕ್ಕೆ ಕೊಂಡೊಯ್ಯಬೇಕು ಹೀಗೆ ಕೊಂಡೊಯ್ಯಲು ಸಾಗಾಣಿಕೆ ವೆಚ್ಚ ದುಬಾರಿಯಾಗುತ್ತದೆ ಇದಕ್ಕೆ ರೈತರು ಏನು ಮಾಡಬೇಕು? ಎಂದು ರೈತರು ಕೇಳಿದ ಪ್ರಶ್ನೆಗೆ ಉತ್ತರಿಸಿದ ಅವರು ತಾಲೂಕಿನಾಧ್ಯಂತ ಹೆಚ್ಚು ಹೆಚ್ಚು ದ್ವಿತಳಿ ರೇಷ್ಮೆ ಗೂಡುಗಳನ್ನು ಉತ್ಪಾದನೆ ಮಾಡಿದಾಗ ಮಾರುಕಟ್ಟೆಯ ಸೌಲಭ್ಯವನ್ನು ಕಲ್ಪಿಸುವಂತೆ ಸರ್ಕಾರದ ಮೇಲೆ ಒತ್ತಡ ಹೇರಬಹುದು. ಆದರೆ ಬಹುತೇಕ ರೈತರು ಸರ್ಕಾರದಿಂದ ಸಿಗುವಂತಹ ಎಲ್ಲಾ ಸೌಲಭ್ಯಗಳನ್ನು ಪಡೆದುಕೊಳ್ಳುತ್ತಾರಾದರೂ ದ್ವಿತಳಿ ರೇಷ್ಮೆಗೂಡನ್ನು ಬೆಳೆಯಲು ಹಿಂದೇಟು ಹಾಕುವುದು ಸರಿಯಲ್ಲವೆಂದರು.
ಚಿಂತಾಮಣಿಯ ರೇಷ್ಮೆ ಸಹಾಯಕ ನಿರ್ದೇಶಕ ಕಾಳಪ್ಪ, ವಿಜ್ಞಾನಿ ಫಣಿರಾಜ್, ಶಿಡ್ಲಘಟ್ಟ ರೇಷ್ಮೆ ಸಹಾಯಕ ನಿರ್ದೇಶಕ ಚಂದ್ರಪ್ಪ, ಕೃಷಿ ವಿಸ್ತರಣಾಧಿಕಾರಿ ನಾರಾಯಣಸ್ವಾಮಿ, ರೈತರಾದ ಶಿವಣ್ಣ, ನಿರಂಜನ್, ದೊಡ್ಡಮಾರಪ್ಪ, ಶೆಟ್ಟಿಹಳ್ಳಿ ಆಂಜಿನಪ್ಪ, ಬಚ್ಚರೆಡ್ಡಿ, ಕೆ.ಹೆಚ್.ಮಂಜುನಾಥ್ ಮುಂತಾದವರು ಈ ಸಂದರ್ಭದಲ್ಲಿ ಹಾಜರಿದ್ದರು.

ಮಕ್ಕಳಿಗೆ ಕೃತಜ್ಞತೆ ಕಲಿಸಿದ ಶಿಕ್ಷಕರು ಧನ್ಯರು

0

ಮಕ್ಕಳಿಗೆ ಅಭಿವ್ಯಕ್ತಿ, ಕೃತಜ್ಞತೆ ಮತ್ತು ಜಾನಪದ ಕತೆಗಳನ್ನು ತಮ್ಮದಾಗಿಸಿಕೊಳ್ಳುವುದನ್ನು ಕಲಿಸಿರುವ ಕನ್ನಮಂಗಲದ ಶಿಕ್ಷರು ಹಾಗೂ ಅವರ ಐಕ್ಯಮತ್ಯ ಅಭಿನಂದನೀಯ ಎಂದು ನಿವೃತ್ತ ಪ್ರಾಧ್ಯಾಪಕ ಡಾ. ಆರ್.ಶೇಷಶಾಸ್ತ್ರಿ ತಿಳಿಸಿದರು.
ತಾಲ್ಲೂಕಿನ ಕನ್ನಮಂಗಲದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ ಹಾಗೂ ಗ್ರಾಮದ ಸ್ನೇಹ ಯುವಕರ ಕ್ಷೇಮಾಭಿವೃದ್ಧಿ ಸಂಘದ ವತಿಯಿಂದ ಶುಕ್ರವಾರ ಆಯೋಜಿಸಿದ್ದ 11ನೇ ವರ್ಷದ ಅಂತರ ಶಾಲಾ ನಾಟಕೋತ್ಸವ, ಕನ್ನಡ ರಾಜ್ಯೋತ್ಸವ ಮತ್ತು ಶಾಲಾ ಆವರಣದ ವಿದ್ಯಾಗಣಪತಿ ಮಂದಿರದ ಐದನೇ ವಾರ್ಷಿಕೋತ್ಸವ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.
ನಾಟಕದಂಥಹ ಪ್ರದರ್ಶಕ ಕಲೆಗಳ ಅಂತರ ಶಾಲಾ ನಾಟಕೋತ್ಸವ ನಡೆಸುವ ಮೂಲಕ ತಾಲ್ಲೂಕಿನಲ್ಲಿ ನಟನಾ ಪ್ರವೃತ್ತಿ ಮತ್ತು ಅದರೊಂದಿಗೆ ಸೃಜನಶೀಲತೆ ಹೆಚ್ಚಾಗುತ್ತದೆ. ನಾಟಕಗಳಿಗೆ ಆಯ್ದುಕೊಂಡ ವಿಷಯಗಳು ಸಮಕಾಲೀನ ಸಮಸ್ಯೆ, ಪ್ರಕೃತಿ ಮುಂತಾದವುಗಳಿದ್ದು, ಸರಳವಾಗಿವೆ. ಮಕ್ಕಳು ಮೊದಲ ಬಾರಿಯಾದರೂ ನುರಿತ ಕಲಾವಿದರಂತೆ ಅಭಿನಯಿಸಿದ್ದಾರೆ. ಗ್ರಾಮದ ಸ್ನೇಹ ಯುವಕರ ಕ್ಷೇಮಾಭಿವೃದ್ಧಿ ಸಂಘದವರು ಮಕ್ಕಳ ಅಭಿವ್ಯಕ್ತಿಯನ್ನು, ಬರಹಗಳನ್ನು ಪುಸ್ತಕ ರೂಪದಲ್ಲಿ ತರುತ್ತಿರುವುದು ಶ್ಲಾಘನೀಯ ಎಂದು ಹೇಳಿದರು.

ಶಿಡ್ಲಘಟ್ಟ ತಾಲ್ಲೂಕಿನ ಕನ್ನಮಂಗಲದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಶುಕ್ರವಾರ ಆಯೋಜಿಸಿದ್ದ 11ನೇ ವರ್ಷದ ಅಂತರ ಶಾಲಾ ನಾಟಕೋತ್ಸವ ಕಾರ್ಯಕ್ರಮದಲ್ಲಿ ಶಾಲೆಯಿಂದ ವರ್ಗಾವಣೆಗೊಂಡ ಶಿಕ್ಷಕ ಎಂ.ದೇವರಾಜ್ ಅವರಿಗೆ ಗ್ರಾಮಸ್ಥರು ದ್ವಿಚಕ್ರ ವಾಹನವನ್ನು ಉಡುಗೊರೆಯಾಗಿ ನೀಡಿದರು.
ಶಿಡ್ಲಘಟ್ಟ ತಾಲ್ಲೂಕಿನ ಕನ್ನಮಂಗಲದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಶುಕ್ರವಾರ ಆಯೋಜಿಸಿದ್ದ 11ನೇ ವರ್ಷದ ಅಂತರ ಶಾಲಾ ನಾಟಕೋತ್ಸವ ಕಾರ್ಯಕ್ರಮದಲ್ಲಿ ಶಾಲೆಯಿಂದ ವರ್ಗಾವಣೆಗೊಂಡ ಶಿಕ್ಷಕ ಎಂ.ದೇವರಾಜ್ ಅವರಿಗೆ ಗ್ರಾಮಸ್ಥರು ದ್ವಿಚಕ್ರ ವಾಹನವನ್ನು ಉಡುಗೊರೆಯಾಗಿ ನೀಡಿದರು.

ಕೆ.ಪಿ.ಸಿ.ಸಿ ಉಪಾಧ್ಯಕ್ಷ ವಿ.ಮುನಿಯಪ್ಪ ಮಾತನಾಡಿ, ಕನ್ನಮಂಗಲ ಗ್ರಾಮದ ಅಭಿವೃದ್ಧಿಗೆ ಮತ್ತು ಮಕ್ಕಳ ಬಹುಮುಖಿ ಬೆಳವಣಿಗೆಗೆ ಗ್ರಾಮದ ಯುವಕರು ಸಜ್ಜಾಗಿರುವುದು ಎಲ್ಲಾ ಗ್ರಾಮಗಳಿಗೂ ಪ್ರೇರಣೆಯಾಗಿದೆ. ಇಲ್ಲಿನ ಒಗ್ಗಟ್ಟು ಮಾದರಿಯಾಗಿದೆ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು.
ಈ ಸಂದರ್ಭದಲ್ಲಿ ನಿವೃತ್ತ ಪ್ರಾಧ್ಯಾಪಕರಾದ ಆರ್.ವೇಣುಗೋಪಾಲ್, ಡಾ. ಆರ್.ಶೇಷಶಾಸ್ತ್ರಿ, ಜಲತಜ್ಞ ಕೆ.ನಾರಾಯಣಸ್ವಾಮಿ, ವರ್ಗಾವಣೆಗೊಂಡ ಶಿಕ್ಷಕರಾದ ಎಚ್.ಡಿ.ಮಂಜುನಾಥ್, ವಿದ್ಯಾಲಕ್ಷ್ಮಿ, ನಿವೃತ್ತ ಅಂಗನವಾಡಿ ಸಹಾಯಕಿ ಆಂಜನಮ್ಮ ಅವರನ್ನು ಸನ್ಮಾನಿಸಲಾಯಿತು. ಶಾಲೆಯಿಂದ ವರ್ಗಾವಣೆಗೊಂಡ ಶಿಕ್ಷಕ ಎಂ.ದೇವರಾಜ್ ಅವರಿಗೆ ಗ್ರಾಮಸ್ಥರು ದ್ವಿಚಕ್ರ ವಾಹನವನ್ನು ಉಡುಗೊರೆಯಾಗಿ ನೀಡಿದರು.
ಜಿಲ್ಲಾ ಪಂಚಾಯತಿ ಮಾಜಿ ಸದಸ್ಯ ಆರ್.ಶ್ರೀನಿವಾಸ್, ತುಮ್ಮನಹಳ್ಳಿ ಗ್ರಾಮ ಪಂಚಾಯತಿ ಅಧ್ಯಕ್ಷೆ ಪಾರ್ವತಮ್ಮ ವೆಂಕಟೇಶಮೂರ್ತಿ, ಜಿಲ್ಲಾ ಪಂಚಾಯತಿ ಸದಸ್ಯ ಎಸ್.ಎಂ.ನಾರಾಯಣಸ್ವಾಮಿ, ಮಾಜಿ ಅಧ್ಯಕ್ಷ ಸುಬ್ರಮಣಿ, ಗ್ರಾಮ ಪಂಚಾಯತಿ ಸದಸ್ಯ ಡಿ.ಕೆ.ಶ್ರೀರಾಮ್, ಶಾಲಾಭಿವೃದ್ಧಿ ಸಮಿತಿ ಅಧ್ಯಕ್ಷ ವೆಂಕಟೇಶ್, ಕೆ.ಎಂ.ಕೇಶವಪ್ಪ, ನರಸಿಂಹಪ್ಪ, ಅರಿಕೆರೆ ಮುನಿರಾಜು, ಆರ್.ಮಧುಸೂದನ್ ಮತ್ತಿತರರು ಈ ಸಂದರ್ಭದಲ್ಲಿ ಹಾಜರಿದ್ದರು.

ಪೊಲೀಸರಿಗೆ ಆಧಾರ್ ಕಾರ್ಡ್

0

ಮೊಬೈಲ್ ಸಿಮ್ ತೆಗೆದುಕೊಳ್ಳಲು, ಬ್ಯಾಂಕ್ ಅಕೌಂಟ್ ಮಾಡಿಸಲು, ಪಾಸ್ ಪೋರ್ಟ್ ಮಾಡಿಸಲು, ಗ್ಯಾಸ್ ಪಡೆಯಲು ಆಧಾರ್ ಸಂಖ್ಯೆ ಕೊಡಿ ಎಂದು ಹೇಳುತ್ತಾರೆ. ಭಾರತೀಯ ರಾಷ್ಟ್ರೀಯ ಗುರುತಿನ ಚೀಟಿ ಪ್ರಾಧಿಕಾರ ನೀಡುವ 12 ಅಂಕಿಗಳ ಆಧಾರ್ ಕಾರ್ಡ್ಗೆ ಅಷ್ಟು ಪ್ರಾಮುಖ್ಯತೆ ಇದೆ.
ಸದಾ ಕೆಲಸದಲ್ಲಿ ತೊಡಗಿರುವ ಪೊಲೀಸರಿಗೆ ಹಾಗೂ ಅವರ ಕುಟುಂಬದವರಿಗೆ ಆಧಾರ್ ಕಾರ್ಡ್ ಮಾಡಿಸಲು ಪುರ ಪೊಲೀಸ್ ಠಾಣೆಯಲ್ಲಿ ಗುರುವಾರ ಆಧಾರ್ ನೋಂದಣಿ ತಂಡವು ಆಗಮಿಸಿ ನೋಂದಣಿ ಕಾರ್ಯವನ್ನು ನಡೆಸಿತು.
‘ಹಲವು ಸರ್ಕಾರಿ ಸೇವೆಗಳನ್ನು ಪಡೆಯಲು, ವಿಳಾಸ ದೃಡೀಕರಣಕ್ಕೆ ಆಧಾರ್ ಕಾರ್ಡ್ ಕಡ್ಡಾಯವಾಗಿದೆ. ಕೇಂದ್ರ ಸರ್ಕಾರದಿಂದ ಎಲ್ಪಿಜಿ ಸಬ್ಸಿಡಿ ಪಡೆಯಲು ಆಧಾರ್ ಕಾರ್ಡ್ ಅಗತ್ಯ. ಉದ್ಯೋಗ, ಶಿಕ್ಷಣ, ಪಿಂಚಣಿ ಯೋಜನೆಗಳು, ವಿಮೆ, ಮೊಬೈಲ್ ಸಿಮ್ ಖರೀದಿ, ಹೊಸ ಗ್ಯಾಸ್ ಖರೀದಿ, ಪಾಸ್ ಪೋರ್ಟ್ ಪಡೆಯವುದು ಸೇರಿದಂತೆ ಆಧಾರ್ ಕಾರ್ಡ್ನಿಂದ ಹಲವು ಉಪಯೋಗಗಳಿವೆ. ಇದೊಂದು ಬಹುಮುಖ್ಯವಾದ ವಿಳಾಸ ದೃಡೀಕರಣ ಪತ್ರವಾಗಿದೆ. ನಮ್ಮ ಪೊಲೀಸರಿಗೆ ಹಾಗೂ ಅವರ ಕುಟುಂಬದವರಿಗೆಲ್ಲಾ ಈ ಸೌಲಭ್ಯ ಸಿಗಲು ಈ ದಿನ ಪೊಲೀಸ್ ಠಾಣೆಯಲ್ಲಿಯೇ ನೋಂದಣಿ ಕಾರ್ಯವನ್ನು ನಡೆಸುತ್ತಿದ್ದೇವೆ’ ಎಂದು ಸರ್ಕಲ್ ಇನ್ಸ್ಪೆಕ್ಟರ್ ಶ್ರೀನಿವಾಸಮೂರ್ತಿ ಈ ಸಂದರ್ಭದಲ್ಲಿ ತಿಳಿಸಿದರು.

ಕಾನೂನು ಜೀವನದ ಪ್ರತಿ ಹಂತದಲ್ಲೂ ನೆರವಿಗೆ ಬರುತ್ತದೆ

0

ಕಾನೂನು ಜೀವನದ ಪ್ರತಿ ಹಂತದಲ್ಲೂ ನೆರವಿಗೆ ಬರುತ್ತದೆಯಲ್ಲದೆ ಅವಶ್ಯಕವೂ ಕೂಡ. ಒಬ್ಬ ಮನುಷ್ಯ ಹುಟ್ಟಿದಾಗಿನಿಂದ ಸಾಯುವವರೆಗೂ ಪ್ರತಿ ಹಂತದಲ್ಲೂ ಕಾನೂನು ಅವಶ್ಯ ಎಂದು ಪ್ರಧಾನ ಸಿವಿಲ್ ನ್ಯಾಯಾಧೀಶರಾದ ವಿಜಯದೇವರಾಜ್ ಅರಸ್ ತಿಳಿಸಿದರು.
ತಾಲ್ಲೂಕಿನ ದೊಡ್ಡತೇಕಹಳ್ಳಿಯ ಸರ್ಕಾರಿ ಪ್ರೌಢಶಾಲೆಯಲ್ಲಿ ಬುಧವಾರ ತಾಲ್ಲೂಕು ಕಾನೂನು ಸೇವಾ ಸಮಿತಿ, ವಕೀಲರ ಸಂಘ, ಪೊಲೀಸ್ ಇಲಾಖೆಯ ಆಶ್ರಯದಲ್ಲಿ ಮಾನವ ಹಕ್ಕುಗಳ ದಿನಾಚರಣೆ ಅಂಗವಾಗಿ ನಡೆದ ಕಾನೂನು ನೆರವು-ಅರಿವು ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.
ಮಹಿಳೆಯರನ್ನು ತಾಯಿ, ದೇವತೆಯ ಸ್ಥಾನದಲ್ಲಿನೋಡುವ ನಮ್ಮ ಸಮಾಜದಲ್ಲಿ ಅತ್ಯಾಚಾರ ನಡೆಯುವುದು ಇಡೀ ಸಮಾಜವೇ ತಲೆ ತಗ್ಗಿಸುವಂತ ವಿಚಾರ. ಈ ನೆಲದ ಕಾನೂನನ್ನು ಎಲ್ಲರೂ ಗೌರವಿಸಿ ಪಾಲಿಸಬೇಕು. ಆಗಲೇ ಸಮಾಜದಲ್ಲಿ ಎಲ್ಲರು ಸುಖ ಶಾಂತಿ ನೆಮ್ಮದಿಯಿಂದ ಬದುಕಲು ಸಾಧ್ಯವಾಗುತ್ತದೆ ಎಂದು ನುಡಿದರು.
ಮಗುವನ್ನು ಶಾಲೆಗೆ ಸೇರಿಸಲು ಕಾನೂನು ಪಾಲನೆ, ಕಡ್ಡಾಯ ಶಿಕ್ಷಣ ಹಕ್ಕು, ವಸ್ತುವೊಂದನ್ನು ಮಾರುಕಟ್ಟೆಯಲ್ಲಿ ಖರೀಸಿದಾಗ ವ್ಯತ್ಯಾಸವಾದಲ್ಲಿ ಗ್ರಾಹಕರ ಕಾಯಿದೆ, ಜಮೀನು, ಮನೆ, ನಿವೇಶನ ಖರೀದಿ ಮಾರಾಟಕ್ಕೆ ಭೂ ಕಾಯ್ದೆ ಇದೆ. ಹೀಗೆ ಪ್ರತಿಯೊಂದು ವಿಷಯಕ್ಕೂ ಸಂಬಂಸಿದಂತೆ ನಮ್ಮಲ್ಲಿ ಕಾನೂನು ಇದ್ದು ಅದು ಕಾಲ ಕಾಲಕ್ಕೆ ಅನುಕೂಲಕ್ಕೆ ತಕ್ಕಂತೆ ತಿದ್ದುಪಡಿಯಾಗುತ್ತಾ ಬಂದಿದೆ. ಎಲ್ಲರೂ ಕಾನೂನನ್ನು ತಿಳಿದುಕೊಂಡು ಪಾಲಿಸಿ ಎಂದು ಮನವಿ ಮಾಡಿದರು.
ವಕೀಲರ ಸಂಘದ ಅಧ್ಯಕ್ಷ ಎಂ.ಪಾಪಿರೆಡ್ಡಿ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿ, ನಮ್ಮಲ್ಲಿ ಧರ್ಮ, ಸಾಮಾಜಿಕ ಸ್ಥಿತಿಗತಿ, ಭೌಗೋಳಿಕ ವ್ಯವಸ್ಥೆಯನ್ನು ಆಧರಿಸಿಯೆ ಕಾನೂನುಗಳು ರೂಪುಗೊಂಡಿವೆ. ಯಾರು ಕಾನೂನನ್ನು ಗೌರವಿಸಿ ಪಾಲಿಸುತ್ತಾರೋ ಅವರನ್ನು ಕಾನೂನು ಕಾಪಾಡುತ್ತದೆ. ಹಾಗಾಗಿ ವಿದ್ಯಾರ್ಥಿಗಳಿಂದ ಹಿಡಿದು ಮುದುಕರವರೆಗೂ ಭಾಷೆ, ಗಡಿ, ಜಾತಿ, ಧರ್ಮದ ಅಂತರವಿಲ್ಲದೆ ಎಲ್ಲರೂ ಕಾನೂನುಗಳನ್ನು ತಿಳಿದು ಜೀವನದಲ್ಲಿ ಕಾನೂನು ಚೌಕಟ್ಟಿನೊಳಗೆ ಜೀವಿಸುವುದು ನಮ್ಮ ನಿಮ್ಮೆಲ್ಲರ ಕರ್ತವ್ಯ ಎಂದರು.
ಮಹಿಳೆಯರ ಮೇಲಿನ ಲೈಂಗಿಕ ಅಪರಾಧಗಳು, ಪೋಸ್ಕೋ ಕಾಯಿದೆ ಕುರಿತು ಸರ್ಕಾರಿ ವಕೀಲ ಈ.ಡಿ.ಶ್ರೀನಿವಾಸ್ ಉಪನ್ಯಾಸ ನೀಡಿದರೆ, ಬಾಲ್ಯ ವಿವಾಹ ನಿಷೇಧ ಕಾಯಿದೆ ಹಾಗೂ ಮೋಟಾರ್ ವಾಹನ ಕಾಯಿದೆ ಕುರಿತು ವಕೀಲ ಎಂ.ಬಿ.ಲೊಕೇಶ್ ಉಪನ್ಯಾಸ ನೀಡಿದರು.
ಸಿವಿಲ್ ನ್ಯಾಯಾಧೀಶರಾದ ಎನ್.ಎ.ಶ್ರೀಕಂಠ, ಶಾಲೆಯ ಮುಖ್ಯೋಪಾದ್ಯಾಯ ಟಿ.ಎ.ಸಿದ್ದೇಶ್, ಸರ್ಕಾರಿ ವಕೀಲೆ ಎಸ್.ಕುಮುದಿನಿ, ವಕೀಲರ ಸಂಘದ ಕಾರ್ಯದರ್ಶಿ ಬೈರಾರೆಡ್ಡಿ, ಕೃಷ್ಣಮೂರ್ತಿ ಮತ್ತಿತರರು ಈ ಸಂದರ್ಭದಲ್ಲಿ ಹಾಜರಿದ್ದರು.

error: Content is protected !!