35.1 C
Sidlaghatta
Friday, March 29, 2024

ಉತ್ಪಾದನೆ – ಉಪಯೋಗ ಯಾ ಉದ್ಯೋಗ?

- Advertisement -
- Advertisement -

ಸಾಮಾನ್ಯ ಪರಿಭಾಷೆಯಲ್ಲಿ ಹೇಳುವುದಾದರೆ ‘ಉತ್ಪಾದನೆ’ ಎಂದರೆ ತಯಾರಿಕೆ ಅಥವಾ ಏನನ್ನಾದರೂ ಬೆಳೆಯುವುದು. ಆದರೆ ಅರ್ಥಶಾಸ್ತ್ರದ ಪರಿಭಾಷೆಯಲ್ಲಿ ಉತ್ಪಾದನೆ ಕೇವಲ ತಯಾರಿಕೆ ಅಷ್ಟೇ ಅಲ್ಲ ಅದು ಬಳಕೆಗೆ ಯೋಗ್ಯವಾಗಿರಬೇಕು. ವಸ್ತುವು ಉಪಯೋಗಕ್ಕೆ ಯೋಗ್ಯವಾಗಿ – ಬಳಕೆ ಹೆಚ್ಚಾದರೆ ಅಂಥ ಉತ್ಪಾದನೆ ಬೆಳೆಯುಳ್ಳದ್ದು. ಜೊತೆಗೆ ಇದು ಕೇವಲ ವಸ್ತುವಿನ ಗುಣಮಟ್ಟಕ್ಕೆ ಮಾತ್ರ ಸೀಮಿತವಾಗಿರದೆ ಸೇವೆಗೂ ಯೋಗ್ಯವಾಗಿರುವಂಥದ್ದಾಗಿರಬೇಕು. “An activity of increasing the utility of goods and services is considered as “Production”.
ಹೀಗೆ ಯಾವುದೇ ಒಂದು ವಸ್ತುವಿನ ಉತ್ಪಾದನೆಯನ್ನು ಮಾಡುವುದು ಅದು ನಮ್ಮ ಬಳಕೆಗೆ ಉಪಯೋಗಕ್ಕೆ ಅನುವಾಗಲೆಂದೇ ವಿನಃ ಕೇವಲ ಉತ್ಪಾದನೆಯ ಚಟಕ್ಕೆ ಖಂಡಿತವಾಗಿಯೂ ಅಲ್ಲ. ನಾಗರೀಕತೆ ಬೆಳೆದಂತೆ ಮನುಷ್ಯ ತನ್ನ ಅಗತ್ಯಗಳಿಗೆ ಅನುಕೂಲವಾಗುವಂತೆ – ತಕ್ಕಂತೆ ಅನೇಕಾನೇಕ ವಸ್ತುಗಳನ್ನು ಬೇರೆ ಬೇರೆ ತರಹದ ಬೆಳೆಯನ್ನು ಉತ್ಪಾದಿಸಲು ಪ್ರಾರಂಭಿಸಿದ್ದು ಇತಿಹಾಸ. ಅದರ ಮುಂದುವರಿಕೆಯ ಭಾಗವಾಗಿ ‘ಉತ್ಪಾದನೆ’ ಯ ನೈಪುಣ್ಯವನ್ನು ಕಲಿಸಿ – ಬೆಳೆಸುವ ಪದ್ಧತಿ ಪ್ರಾರಂಭವಾಯಿತು. ಅಗತ್ಯಕ್ಕೆ ಮತ್ತು ಬೇಡಿಕೆಗೆ ತಕ್ಕಂತೆ ‘ಉತ್ಪಾದನೆ’ ಜರುಗುವುದು ಅನಿವಾರ್ಯವಾಯಿತು. ಕೆಲಸದ ಒತ್ತಡ ಅಧಿಕವಾದಂತೆ ಕೆಲಸಗಾರರಿಗೆ ಬೇಡಿಕೆಯೂ ಅಧಿಕವಾಗುತ್ತದೆ. ಕೆಲಸದ ಒತ್ತಡ ಕಡಿಮೆಯಾದಂತೆ ಕೆಲಸಗಾರರಿಗೆ ಇರುವ ಬೇಡಿಕೆ ಕೂಡ ತಗ್ಗುತ್ತದೆ. ಅತಿಯಾದ ಯಂತ್ರಗಳ ಬಳಕೆಯಿಂದಾಗಿ ದುಡಿಯುವ ಕೈಗಳು ನಿಧಾನವಾಗಿ ಕೆಲಸ ಕಳೆದುಕೊಳ್ಳುವುದು ಸಹಜವೇ. ಯಂತ್ರಗಳನ್ನಷ್ಟು ಬಳಸುವ ಕೌಶಲ್ಯ ಕಲಿತ ಕೆಲವೇ ಕೆಲವು ಮಂದಿ ಬಹಳಷ್ಟು ಜನಗಳಿಗೆ ಬದಲಾಗಿ ಸಾಕಾಗುವಂತಹ ಸ್ಥಿತಿ ನಿರ್ಮಾಣವಾಗುತ್ತ ಸಾಗುತ್ತಿದ್ದುದರ ಅಪಾಯವನ್ನು ಅರಿತ ಮಹಾತ್ಮ ಗಾಂಧಿಯವರು ‘ಗೃಹ ಕೈಗಾರಿಕೆ, ಗುಡಿ ಕೈಗಾರಿಕೆ’ಗೆ ಒತ್ತುಕೊಟ್ಟಿದ್ದೇ ಈ ಕಾರಣಕ್ಕಾಗಿ. ಮನುಷ್ಯನಿಗೆ ಕೆಲಸದ ಅವಶ್ಯಕತೆಯಿದೆ. ಪ್ರತಿಯೊಂದು ಕೈಗೂ ಕೆಲಸ ದಕ್ಕದ ಹೊರತೂ ‘ಅಭಿವೃದ್ಧಿ’ ಅಸಾಧ್ಯ ಸಂಬಳದ ಆದಾಯದ ಪ್ರಶ್ನೆಗಿಂತ ಮುಖ್ಯವಾದದ್ದು ‘ಉದ್ಯೋಗ’ದಲ್ಲಿ ತೊಡಗಿರುವುದು ಹಾಗಲ್ಲದೆ ಹೋದಲ್ಲಿ ‘Idle mind is the workshop of the devil’ ಎಂಬ ಮಾತು ಕೃತಿಯಾಗುತ್ತ ಸಾಗುವ ಅಪಾಯವಂತೂ ಇದ್ದೇ ಇದೆ.
ಉತ್ಪಾದನೆಗೂ ಉಪಯೋಗಕ್ಕೂ ಆಂತರಿಕ ಸಂಬಂಧವಂತೂ ಇದ್ದೇ ಇದೆ. ಉತ್ಪಾದನೆ – ಉಪಯೋಗಕ್ಕೆ – ಉದ್ಯೋಗಕ್ಕೆ ಒದಗುವಂತಿದ್ದರೆ ಮಾತ್ರ ಅದಕ್ಕೊಂದು ‘ಅರ್ಥ’ವಿರುತ್ತದೆ. ಹಾಗಲ್ಲದೇ ಒಟ್ಟಾರೆ ಉತ್ಪಾದನೆಯಷ್ಟೇ ಹೆಚ್ಚಾದರೆ ಬಳಕೆಯಾಗದೆ ವ್ಯರ್ಥವಾಗುವ ಸಾಧ್ಯತೆಯಿದೆ. ರಾಶ್ಯುತ್ಪನ್ನಗಳಿಂದಾಗಿ ಅನೇಕಬಾರಿ ಅವುಗಳಿಗೆ ಗ್ರಾಹಕರೇ ಇರದಿದ್ದಾಗ ಉತ್ಪಾದನಾ ವೆಚ್ಚ ಕೂಡ ಹುಟ್ಟದೆ ಅದು ತನ್ನಿಂದ ತಾನೇ ಮೂಲೆ ಸೇರಬೇಕಾಗುತ್ತದೆ. ವಸ್ತುಗಳ ವಿಚಾರದಲ್ಲಿ ಹೇಗೋ ಹಾಗೆಯೇ ವ್ಯಕ್ತಿಗಳ ವಿಚಾರದಲ್ಲೂ ಮೇಲಿನ ಮಾತುಗಳು ಅನ್ವಯವಾಗುತ್ತವೆ. ಅಗತ್ಯಕ್ಕಿಂತ ಅಧಿಕವಾದ ಉತ್ಪಾದನೆಯಾದಲ್ಲಿ ಅದೆಷ್ಟೇ ಗುಣಮಟ್ಟದಿಂದ ಕೂಡಿದ್ದರೂ (1) ಅದನ್ನು ಹಾಗೇ ಶೇಖರಿಸಿಟ್ಟುಕೊಳ್ಳಬೇಕು, ಮತ್ತೆಂದಾದರೂ ಅಗತ್ಯತೆ ಎದುರಾದಾಗ ಬಳಸಿಕೊಳ್ಳಬೇಕು. (2) ಹುಟ್ಟಿದಷ್ಟಕ್ಕೆ ಯಾ ಬಿಟ್ಟಿಯಾಗಿ ಬೇರೆಯವರಿಗಿತ್ತು ಕೈ ತೊಳೆದುಕೊಳ್ಳಬೇಕು. ವಸ್ತುಗಳಿಗಾದರೆ ಇವೆಲ್ಲ ಸರಿಯೇ ಆದರೆ ತಯಾರಿಸಿದ್ದು ವಸ್ತುವಾಗದೇ ವ್ಯಕ್ತಿಯೇ ಆಗಿದ್ದ ಪಕ್ಷದಲ್ಲಿ?
ಈ ದೃಷ್ಟಿಯಿಂದಲೇ ನಾವಿಂದು ನಮ್ಮ ಶಿಕ್ಷಣ ಪದ್ಧತಿಯನ್ನು ಗಮನಿಸುವ ತುರ್ತು ಹಿಂದೆಂದಿಗಿಂತ ಇಂದು ಅಧಿಕವಾಗಿದೆ ಎನ್ನಿಸುತ್ತದೆ. ಹಿಂದೆ ಜನರಿಗೆ ಬೇರೆ ಬೇರೆ ಕಸುಬುಗಳು ಕೌಟುಂಬಿಕ ಬಳುವಳಿಯಂತೆ ಬರುತ್ತಿದ್ದವು. ಹಾಗೇ ಓದು-ಬರಹ ಕೂಡಾ. ಆದರೆ ಈ ದೇಶಕ್ಕೆ ಬ್ರಿಟಿಷರು ಕಾಲಿಟ್ಟ ಅನಂತರ ಅವರು ಈ ದೇಶದವರ ಅಗತ್ಯಕ್ಕಿಂತಲೂ ಅಧಿಕವಾಗಿ ಅವರ ಅಗತ್ಯವನ್ನರಿತು ಇಲ್ಲಿ ಶೈಕ್ಷಣಿಕ ಪದ್ಧತಿಯನ್ನು ಜಾರಿಗೆ ತಂದದ್ದು ಈಗ ಇತಿಹಾಸ. ಅವರ ಕಛೇರಿ – ಆಡಳಿತವನ್ನಷ್ಟು ಸಮರ್ಥವಾಗಿ ನಡೆಸಿಕೊಂಡು ಹೋಗಲು ಬೇಕಾದ ‘ಗುಮಾಸ್ತ’ರನ್ನು ತಯಾರಿಸಿಕೊಳ್ಳಬೇಕಾದ ಅಗತ್ಯತೆ ಅವರಿಗಿತ್ತು. ಹಾಗಾಗಿ ಒಂದಿಷ್ಟು ಓದಲು ಬರೆಯಲು ಲೆಕ್ಕ ಮಾಡಲು ಲೆಕ್ಕ ಇಡಲು ಕಲಿತುಕೊಳ್ಳುವುದಕ್ಕೆ ಒತ್ತು ನೀಡಿದ ಶಿಕ್ಷಣ ಪ್ರಾರಂಭಿಸಿದರು. ನಾವು ಅವರ ಶಿಕ್ಷಣ ಪದ್ಧತಿಯನ್ನು ‘ಗುಮಾಸ್ತರನ್ನು ಉತ್ಪಾದಿಸುವ ಕಾರ್ಖಾನೆ’ ಎಂದು ಹೀಗಳೆಯುತ್ತಲೇ, ಅದನ್ನೇ ಮುಂದುವರಿಸುವ ಜಾಣತನವನ್ನು ತೋರುತ್ತಿರುವುದು ಪರಿಸ್ಥಿತಿಯ ವಿಪರ್ಯಾಸವೇ ವಿನಃ ಅಗತ್ಯವಂತೂ ಖಂಡಿತವಲ್ಲ.
ಕೆಲವೊಂದಿಷ್ಟು ವೃತ್ತಿ ಶಿಕ್ಷಣ ಪದ್ಧತಿಗಳನ್ನು ಹೊರತುಪಡಿಸಿದರೆ ಬಹುತೇಕ ಪದ್ಧತಿ ಅಂತೆಯೇ ಇದೆ. ಇಂದಿಗೂ ಬಹುಸಂಖ್ಯಾತ ವಿದ್ಯಾರ್ಥಿಗಳ ಕಲಿಕೆ ಆ ಬ್ರಿಟೀಷ್ ಮಾದರಿಯಲ್ಲೇ ಉಳಿದುಕೊಂಡಿದ್ದು ‘ಗುಮಾಸ್ತರ’ ಕೆಲಸಕ್ಕೆ ಸೂಕ್ತವೆನ್ನಿಸುವ ಶಿಕ್ಷಣವನ್ನೇ ಪಡೆಯುತ್ತಿದ್ದಾರೆ. ಅದರೊಟ್ಟಿಗೆ ಹೆಚ್ಚುವರಿಯಾಗಿ ಶಿಕ್ಷಣ – ಬ್ಯಾಂಕಿಂಗ್ ಇತ್ಯಾದಿ ಕಡೆ ‘ವೈಟ್ ಕಾಲರ್’ ನೌಕರಿಗಳಿಗೆ ಯೋಗ್ಯವಾಗುವಂತೆ ರೂಪುಗೊಳ್ಳುತ್ತಿದ್ದಾರೆ. ಅದಕ್ಕಾಗಿ ಸರಕಾರ ಇಂದು ದೇಶದಾದ್ಯಂತ ಅಸಂಖ್ಯಾತ ಶಾಲೆ, ಕಾಲೇಜು, ವಿಶ್ವವಿದ್ಯಾಲಯಗಳನ್ನು ಸ್ಥಾಪಿಸಿದ್ದು, ಇತ್ತೀಚೆಗೆ ಹೋಬಳಿ ಮಟ್ಟದಲ್ಲಿ ಕೂಡ ಪ್ರಥಮ ದರ್ಜೆ ಕಾಲೇಜುಗಳು ಮತ್ತು ಅವುಗಳಲ್ಲೇ ಸ್ನಾತಕೋತ್ತರ ಶಿಕ್ಷಣ ಪಡೆಯಲೂ ಸೂಕ್ತ (?) ವ್ಯವಸ್ಥೆ ಮಾಡಿರುವುದು ಸಾಮಾನ್ಯ ಸಂಗತಿಯೇನಲ್ಲ. ಇದೆಲ್ಲವೂ ಸರಿ, ಸರ್ವರಿಗೂ ಶಿಕ್ಷಣ ದೊರಕಬೇಕಾದದ್ದು ನ್ಯಾಯವಾದದ್ದೇ; ಆದರೆ ಹೀಗೆ ಶಿಕ್ಷಣ ನೀಡಿದ್ದರಿಂದ ಆದ ಉಪಯೋಗವನ್ನು ಗಣನೆಗೆ ತೆಗೆದುಕೊಳ್ಳಬೇಕಿದೆ. ಎಲ್ಲರೂ ಪದವಿ, ಸ್ನಾತಕೋತ್ತರ ಪದವಿ ಪಡೆದಿರುತ್ತಾರೆ ಖರೆ, ಆದರೆ ಅವರಿಗೆ ಅವರು ಪಡೆದ ಶಿಕ್ಷಣಕ್ಕೆ ತಕ್ಕಂತೆ ಉದ್ಯೋಗ? ಶಿಕ್ಷಣ ನೀಡುವುದಷ್ಟೇ ನಮ್ಮ ಗುರಿ – ನೌಕರಿ ಪಡೆಯುವುದು ಅವರವರ ಸಾಮಥ್ರ್ಯಕ್ಕೆ ಬಿಟ್ಟದ್ದು ಎಂಬ ಜಾರಿಕೆಯ ಮಾತನ್ನಾಡಬಹುದು. ಆದರೆ ಗಮನಿಸಬೇಕಾದ ಅಂಶವೆಂದರೆ ಸಾಮಥ್ರ್ಯವಿರದೆ ಅವರುಗಳೆಲ್ಲ ಪರೀಕ್ಷೆಗಳಲ್ಲಿ ಉತ್ತೀರ್ಣರಾಗಿ ಹೊರಗೆ ಬಂದಿರುವುದಿಲ್ಲ. ಸಾಮಥ್ರ್ಯವಿದೆ ಎಂಬುದರಲ್ಲಿ ಅಂಥ ಅನುಮಾನಗಳಿರಲು ಸಾಧ್ಯವಿಲ್ಲ. ದಿನನಿತ್ಯವೂ ಶಿಕ್ಷಣದಲ್ಲಿ ಗುಣಮಟ್ಟದ ಹೆಚ್ಚಳದ ಭಜನೆ ಕಾರ್ಯಕ್ರಮ ಮತ್ತು ಅದಕ್ಕಾಗಿ ಅನೇಕಾನೇಕ ಕೋಟಿ ರೂಪಾಯಿಗಳನ್ನು ವ್ಯಯಿಸಲಾಗುತ್ತಿದೆ. ಹೀಗಿದ್ದಾಗ ಸಹಜವಾಗಿಯೇ ಅಂಥಲ್ಲಿ ತಯಾರಾಗಿ ಹೊರಬಂದ ಉತ್ಪನ್ನಗಳ ಗುಣಮಟ್ಟ ಚೆನ್ನಾಗಿಯೇ ಇರುತ್ತದೆಂದು ಭಾವಿಸಬಹುದು. ಆದರೆ ಅವರಿಗೆಲ್ಲ ಉದ್ಯೋಗ ಎಲ್ಲ? ಎಲ್ಲರಿಗೂ ಅವರವರು ಪಡೆದ ಶಿಕ್ಷಣಕ್ಕನುಗುಣವಾಗಿ ಉದ್ಯೋಗವನ್ನು ಸೃಷ್ಟಿಸಲು ಸಾಧ್ಯವಿದೆಯೇ? ಉತ್ಪಾದನೆಗೆ ಮಾಡುವ ವೆಚ್ಚದ ರೀತಿಯಲ್ಲೇ ಉದ್ಯೋಗ ಸೃಷ್ಟಿಗೂ ನಾವು ವೆಚ್ಚಮಾಡುತ್ತಿದ್ದೇವೆಯೇ? ಯೋಚಿಸುವ ಅಗತ್ಯವಂತೂ ಇದ್ದೇ ಇದೆ. ಉತ್ಪಾದನೆ ಮತ್ತು ಉಪಯೋಗ- ಉದ್ಯೋಗದತ್ತ ಹೊಂದಾಣಿಕೆ ಏರ್ಪಡದಿದ್ದಲ್ಲಿ ಉತ್ಪಾದನೆಗೆ ಬೆಲೆ ಬರುವುದಿಲ್ಲ. ಉದ್ಯೋಗದ ಖಾತ್ರಿ ಇಲ್ಲ, ಅದು ಉಪಯೋಗಕ್ಕೆ ಬರುವುದು ನಿಕ್ಕಿ ಇಲ್ಲ ಎಂದಾದಲ್ಲಿ ಉತ್ಪಾದನೆಯಲ್ಲಿ ಭಾಗಿಯಾಗುವುದರಲ್ಲೂ ಶ್ರದ್ಧೆ ಉಳಿಯುವುದಿಲ್ಲ. ಇಂಥ ಪದವಿ ಪಡೆದರೆ ಅಥವಾ ಇದರಲ್ಲಿ ಇಷ್ಟು ಅಂಕಗಳನ್ನು ಪಡೆದು ಹೊರ ಬಂದರೆ ಇಂಥ ಉದ್ಯೋಗ ಖಾತ್ರಿ ಎಂದಾದರೆ ಕಷ್ಟಪಟ್ಟು, ಶ್ರದ್ಧೆಯಿಂದ ವಿದ್ಯಾಭ್ಯಾಸ ಪ್ರಕ್ರಿಯೆಯಲ್ಲಿ ಭಾಗವಹಿಸಲು ಸಾಧ್ಯ. ಮರವೊಂದನ್ನು ಏರಿದರೆ ‘ಫಲ’ ಸಿಗುವುದು ಗ್ಯಾರಂಟಿಯಿದ್ದ ಪಕ್ಷದಲ್ಲಿ ವ್ಯಕ್ತಿ ಮರವನ್ನೇರಲು ಖಂಡಿತ ಪ್ರಯತ್ನ ಪಡುತ್ತಾನೆ. ಅಷ್ಟೇ ಅಲ್ಲ ಅದೆಷ್ಟೇ ಕಷ್ಟವಾದರೂ ಸಾಧಿಸುವ ಛಲದಿಂದ ಮುನ್ನುಗ್ಗುತ್ತಾನೆ. ನಾನು ಈ ದಾರಿಯಲ್ಲಿ ಉಪಕ್ರಮಿಸಿದರೆ ನನಗೆ ಇಂಥದು ದಕ್ಕುತ್ತದೆ ಎಂದಾದರೆ ಆ ದಾರಿ ಎಷ್ಟೇ ಕಷ್ಟವಾದರೂ ಉಪಕ್ರಮಿಸಲು ಉದ್ಯುಕ್ತನಾಗುತ್ತಾನೆ. ಹಾಗಲ್ಲದೇ ಹೋದಲ್ಲಿ ತನ್ನಿಂದ ತಾನೇ ಆಲಸಿಯಾಗುತ್ತಾನೆ. ಒಟ್ಟಾರೆ ಒಂದು ಪದವಿ, ಒಂದು ಸರ್ಟಿಫಿಕೇಟು ಸಿಕ್ಕರೆ ಸಾಕು, ಹೇಗೋ ನಡೆಯುತ್ತದೆಂಬ ಭಾವನೆಗೆ ಒಳಗಾದರೆ ಒಳಗಿನ ಶಕ್ತಿ ಅಗತ್ಯಕ್ಕೆ ತಕ್ಕಂತೆ ಕೂಡ ಬಳಕೆಗೆ ಬಾರದೆ ವ್ಯರ್ಥವಾಗಿ ನಾಶವಾಗಬಹುದೆಂಬ ಗುಮಾನಿ ಸದ್ಯದ್ದು.
ಹಾಗಾಗಿ ಇಂದು ಪುನಃ ನಮ್ಮ ಉತ್ಪಾದನೆಯ ಕುರಿತು ತೀವ್ರವಾಗಿ ಚಿಂತಿಸಿ ಕರ್ತವ್ಯಕ್ಕೆ ಒತ್ತುಕೊಡುವುದು ಮೇಲು. ಇಂದು ನಮಗೆ ದಿನನಿತ್ಯ ಅಗತ್ಯವಾದ ಅನೇಕ ರೀತಿಯ ಕೆಲಸಗಳಿಗೆ ಕಾರ್ಮಿಕರೇ ಸಿಗುತ್ತಿಲ್ಲ ಎಂಬ ಮಾತುಗಳು ಚಾಲ್ತಿಯಲ್ಲಿವೆ. ಅಂದರೆ, ಅಗತ್ಯವಾದ ವೃತ್ತಿಗಳಿಗೆ ವ್ಯಕ್ತಿಗಳ ಕೌಶಲ್ಯ ಪಡೆದವರ ಕೊರತೆ ಒಂದೆಡೆಯಿದ್ದರೆ ಇನ್ನೊಂದೆಡೆ ಅನಗತ್ಯವಾಗಿ ‘ವೈಟ್‍ಕಾಲರ್’ ನೌಕರಿಗಾಗಷ್ಟೇ ಕಾಯುವ ಕೌಶಲ್ಯವನ್ನು ಪಡೆದುಕೊಂಡು ಅಲೆಯುತ್ತಿರುವ ಅನೇಕರು. ಅವರು ತಮಗೆ ಬೇಕಾದ ನೌಕರಿ ದೊರಕುತ್ತಿಲ್ಲ ಎಂದು ಗೊಣಗುತ್ತ ಅತೃಪ್ತ ಆತ್ಮಗಳಂತೆ ಅಲೆಯುತ್ತಿರುವ ದೃಶ್ಯ ಸಾಮಾನ್ಯ. ಅಂದರೆ ನಮ್ಮಲ್ಲಿ ‘ಕೆಲಸ’ವಿಲ್ಲ ಎಂದಲ್ಲ. ಬೇಕಾದ ಕೆಲಸವಿಲ್ಲ ಎಂಬುದಷ್ಟೆ. ಬೇಕಾದ ಕೆಲಸ ಬೇಕಾದಷ್ಟು ಲಭ್ಯವಿದ್ದಾಗ ಮಾತ್ರ ಲಭ್ಯ!. ಕೆಲಸಕ್ಕೆ ಅಗತ್ಯವಿದ್ದಷ್ಟು ಮತ್ತು ಆ ಕೆಲಸಕ್ಕೆ ಅಗತ್ಯವಾದ ಶಿಕ್ಷಣ ದೊರಕಿದರೆ ಈ ಪ್ರಶ್ನೆ ಉದ್ಭವಿಸದು. ಹಾಗಾಗಿ ನಾವು ಶಿಕ್ಷಣಕ್ಕೆ ಖರ್ಚು ಮಾಡುವ ಹಣ (ಅದು ಈ ದೇಶದ ಪ್ರಾಮಾಣಿಕ ತೆರಿಗೆದಾರರ ಹಣ)ದ ಪ್ರಯೋಜನಕ್ಕೆ ಬರುವುದು ಯಾವಾಗಲೆಂದರೆ ತಯಾರಿಸಿದ ಉತ್ಪನ್ನ ಮಾರುಕಟ್ಟೆಯಲ್ಲಿ ನ್ಯಾಯಯುತವಾಗಿ ಬಿಕರಿಯಾದಾಗ ಮಾತ್ರ. ಅಂದರೆ ಬಳಕೆಗೆ ಒದಗಿ ಬಂದಾಗ ಮಾತ್ರ. ಹಾಗಾಗಿ ಇಂದಿನ ಅಗತ್ಯ ‘ಉದ್ಯೋಗ ಸೃಷ್ಟಿ’ ಮತ್ತು ಉದ್ಯೋಗಕ್ಕನುಗುಣವಾದ ಶಿಕ್ಷಣ ನೀಡಿಕೆ. ಹಾಗಲ್ಲದೆ ಒಟ್ಟಾರೆ ರಾಶ್ಯುತ್ಪನ್ನಗಳ ತಯಾರಿಕೆ ಶಿಕ್ಷಣದ ನೀತಿಯಾದಲ್ಲಿ ಭವಿಷ್ಯದಲ್ಲಿ ಅದರ ಪರಿಣಾಮವನ್ನು ಈ ದೇಶವೇ ಎದುರಿಸಬೇಕು ಎಂಬ ಎಚ್ಚರಿಕೆ ಅಗತ್ಯ. ಕೇವಲ ಶಾಲೆ – ಕಾಲೇಜುಗಳನ್ನಷ್ಟೇ ಪ್ರಾರಂಭಿಸುತ್ತ, ಅವಕ್ಕೆ ಹಣವನ್ನು ಧಂಡಿಯಾಗಿ ಪೂರೈಸಿದರೆ ಪ್ರಯೋಜನವನ್ನು ಗಮನಿಸಬೇಕು. ಅನಿವಾರ್ಯತೆಗೆ ಖರ್ಚು ಮಾಡುವುದು ಬೇರೆ – ಖರ್ಚು ಮಾಡಲಿಕ್ಕೆ ಇದೆ ಎಂದು ಅನಿವಾರ್ಯವಾಗಿ ಖರ್ಚು ಮಾಡುವುದೇ ಬೇರೆ! ಕೆಲವು ಕಡೆಗಳಲ್ಲಿ ಹಣವಿದೆಯೆಂದು ಖರ್ಚು ತೋರಿಸುವ ಅನಿವಾರ್ಯತೆಯೆಂದು ಬೇಕಾದದ್ದು – ಬೇಡವಾದದ್ದನ್ನೆಲ್ಲ ಖರೀದಿಸಿ, ಕೂಡಿ ಹಾಕಿ, ಹಾಗೇ ಲಡ್ಡು ಹಿಡಿದು ಹೋಗುವಂತೆ ಮಾಡುವುದು ಸೂಕ್ತವಾದ ಆರ್ಥಿಕ ಬಳಕೆಯಾಗದು. ಅಷ್ಟೇ ಅಲ್ಲ ಅದು ನೀತಿಯೂ ಆಗದು. ಯಾವತ್ತೂ ಯಾವುದೇ ಬಗೆಯಾದ ಉತ್ಪಾದನೆಯಾದರೂ ಅದು ಉಪಯೋಗಕ್ಕೊದಗಬೇಕು. ಅದಕ್ಕೊಂದು ಶಕ್ತವಾದ ಮಾರುಕಟ್ಟೆ ಲಭ್ಯವಿರಬೇಕೆಂಬ ಪ್ರಾಥಮಿಕ ಜ್ಞಾನ ಸಾಮಾನ್ಯ ವಿವೇಕವೂ ಹೌದು.
ರವೀಂದ್ರ ಭಟ್ ಕುಳಿಬೀಡು.

Subscribe to ನಮ್ಮ ಶಿಡ್ಲಘಟ್ಟ Newspaper

Launching Soon! Register for your Free Newspaper Copy Today.

- Advertisement -

Just Published

Latest news

- Advertisement -

Covid-19

Silk

Related news

- Advertisement -

LEAVE A REPLY

Please enter your comment!
Please enter your name here
This site is protected by reCAPTCHA and the Google Privacy Policy and Terms of Service apply.

The reCAPTCHA verification period has expired. Please reload the page.
Captcha verification failed!
CAPTCHA user score failed. Please contact us!
error: Content is protected !!