16.1 C
Sidlaghatta
Saturday, December 27, 2025
Home Blog Page 1018

ಅಶೋಕ ರಸ್ತೆಯಲ್ಲಿರುವ ದ್ವಿಮುಖ ಗಣಪತಿ ದೇವಾಲಯದಲ್ಲಿ ಮೂರನೇ ವರ್ಷದ ವಾರ್ಷಿಕೋತ್ಸ

0

ಪಟ್ಟಣದ ಅಶೋಕ ರಸ್ತೆಯಲ್ಲಿರುವ ದ್ವಿಮುಖ ಗಣಪತಿ ದೇವಾಲಯದ ಮೂರನೇ ವರ್ಷದ ವಾರ್ಷಿಕೋತ್ಸವದ ಅಂಗವಾಗಿ ವಿಶೇಷ ಪೂಜಾ ಕಾರ್ಯಕ್ರಮಗಳನ್ನು ಶುಕ್ರವಾರ ನೆರವೇರಿಸಲಾಯಿತು.
ದ್ವಿಮುಖ ಗಣಪತಿ ದೇವಾಲಯದಲ್ಲಿ ಗಣಪತಿಗೆ ವಿಶೇಷ ಅಲಂಕಾರವನ್ನು ಮಾಡಲಾಗಿತ್ತು, ವಿಧ ವಿಧವಾದ ಹೂಗಳಿಂದ ದೇವಾಲಯವನ್ನು ಸಿಂಗಾರಗೊಳಿಸಲಾಗಿತ್ತು, ದೀಪಾಲಂಕಾರಗಳಿಂದ ಅಲಕರಿಸಲಾಗಿತ್ತು, ವಾರ್ಷಿಕೋತ್ಸವದ ಅಂಗವಾಗಿ ಭಕ್ತಾದಿಗಳು ಬೆಳಗಿನಿಂದಲೇ ದೇವಾಲಯಕ್ಕೆ ಬೇಟಿ ಪೂಜೆಗಳನ್ನು ಸಲ್ಲಿಸಿದರು.
ವಾರ್ಷಿಕೋತ್ಸವದ ಅಂಗವಾಗಿ ಗಣಪತಿ ಮೂರ್ತಿಗೆ ದ್ರಾಕ್ಷಿ ಗೋಡಂಬಿಯಿಂದ ವಿಶೇಷ ಅಲಂಕಾರ ಮಾಡಲಾಗಿತ್ತು, ಪೂಜೆಯಲ್ಲಿ ಭಾಗವಹಿಸಿದ್ದ ಭಕ್ತರಿಗೆ ಪ್ರಸಾದವನ್ನು ವಿತರಣೆ ಮಾಡಲಾಯಿತು.

ರೇಣುಕಾ ಎಲ್ಲಮ್ಮ ದೇವಿಯ ಪ್ರಥಮ ವರ್ಷದ ಅನ್ನಸಂತರ್ಪಣಾ ವಾರ್ಷಿಕೋತ್ಸವ

0

ಪಟ್ಟಣ ಟಿ.ಬಿ ರಸ್ತೆಯಲ್ಲಿರುವ ರೇಣುಕಾ ಎಲ್ಲಮ್ಮ ದೇವಾಲಯದಲ್ಲಿ ಪ್ರಥಮ ವರ್ಷದ ಅನ್ನ ಸಂತರ್ಪಣಾ ವಾರ್ಷಿಕೊತ್ಸವ ಕಾರ್ಯಕ್ರಮವನ್ನು ಶುಕ್ರವಾರ ಹಮ್ಮಿಕೊಳ್ಳಲಾಗಿತ್ತು.
ರೇಣುಕಾ ಎಲ್ಲಮ ದೇವಾಲಯದಲ್ಲಿ ಅಮ್ಮನವರಿಗೆ ವಿಶೇಷ ಅಲಂಕಾರ, ಮುತೈದೆಯರಿಗೆ ಬಳೆ ತೊಡಿಸುವ ಕಾರ್ಯಕ್ರಮ, ಅನ್ನ ಸಂತರ್ಪಣೆಯನ್ನು ಏರ್ಪಡಿಸಲಾಗಿತ್ತು. ನೂರಾರು ಭಕ್ತರು ರೇಣುಕಾ ಎಲ್ಲಮ್ಮ ದೇವಿಯ ದರ್ಶನ ಪಡೆದು ಪ್ರಸಾದ ಸ್ವೀಕರಿಸಿದರು.

ಗ್ರಾಮೀಣ ಸಂಪರ್ಕ ರಸ್ತೆ ಅಭಿವೃದ್ಧಿ ನಡೆಸಲಾಗುವುದು – ಶಾಸಕ ಎಂ.ರಾಜಣ್ಣ

0

ತಾಲ್ಲೂಕಿನಾದ್ಯಂತ ಗ್ರಾಮೀಣ ಸಂಪರ್ಕ ರಸ್ತೆ ಅಭಿವೃದ್ಧಿ ಯೋಜನೆಯಡಿ 38 ಕಿಮೀ ರಸ್ತೆ ಕಾಮಗಾರಿಯನ್ನು ನಡೆಸಲಾಗುವುದು ಎಂದು ಶಾಸಕ ಎಂ.ರಾಜಣ್ಣ ತಿಳಿಸಿದರು.
ತಾಲ್ಲೂಕಿನ ಅಬ್ಲೂಡು ಗ್ರಾಮ ಪಂಚಾಯತಿಯ ಮಲ್ಲಹಳ್ಳಿ ಗೇಟ್ ಮತ್ತು ಶೆಟ್ಟಹಳ್ಳಿ ನಡುವೆ ಪಿ.ಎಂ.ಜಿ.ಎಸ್‌.ವೈ ಯೋಜನೆಯ 62 ಲಕ್ಷ ರೂಗಳ ವೆಚ್ಚದಲ್ಲಿ ಒಂದೂವರೆ ಕಿ.ಮೀ ರಸ್ತೆ ಕಾಮಗಾರಿಯನ್ನು ಗುರುವಾರ ಉದ್ಘಾಟಿಸಿ ಅವರು ಮಾತನಾಡಿದರು.
ಗುಣಮಟ್ಟದ ಕಾಮಗಾರಿಯನ್ನು ನಡೆಸುವಂತೆ ಗುತ್ತಿಗೆದಾರರಿಗೆ ಸೂಚಿಸಿದ್ದೇವೆ. ಗ್ರಾಮಸ್ಥರೂ ಕಾಮಗಾರಿಯ ಗುಣಮಟ್ಟವನ್ನು ಗಮನಿಸಿಕೊಳ್ಳಬೇಕು. ಹಲವಾರು ವರ್ಷಗಳಿಂದ ಈ ರಸ್ತೆಯು ಹದಗೆಟ್ಟಿದ್ದು, ಈಗ ಇದರ ಅಭಿವೃದ್ಧಿ ಪ್ರಾರಂಭವಾಗಿದೆ ಎಂದು ಹೇಳಿದರು.
ಕನಕಪ್ರಸಾದ್‌, ಸೂರ್ಯನಾರಾಯಣಗೌಡ, ಮುನಿವೆಂಕಟಸ್ವಾಮಿ, ರಾಮಚಂದ್ರಪ್ಪ, ನಾರಾಯಣಸ್ವಾಮಿ, ಮಂಜುನಾಥ್‌, ಶ್ರೀನಿವಾಸ್‌ ಮತ್ತಿತರರು ಈ ಸಂದರ್ಭದಲ್ಲಿ ಹಾಜರಿದ್ದರು.

ಪ್ರತಿ ಲೀಟರ್ ಹಾಲಿಗೆ ಕನಿಷ್ಟ 25 ರೂಪಾಯಿಗಳನ್ನು ನೀಡುವಂತೆ ರಾಜ್ಯ ಸರ್ಕಾರಕ್ಕೆ ಒತ್ತಾಯ

0

ಮಳೆಯ ಅಭಾವದಿಂದ ಹಾಲು ಉತ್ಪಾದನೆ ಕುಂಠಿತಗೊಂಡಿದೆ. ಆದ್ದರಿಂದ ರೈತರು ನಷ್ಟ ಹೊಂದುವುದನ್ನು ತಡೆಯಲು ಪ್ರತಿ ಲೀಟರ್ ಹಾಲಿಗೆ ಕನಿಷ್ಟ ೨೫ ರೂಪಾಯಿಗಳನ್ನು ನೀಡುವಂತೆ ರಾಜ್ಯ ಸರ್ಕಾರಕ್ಕೆ ಒತ್ತಾಯ ಮಾಡಲಾಗುತ್ತದೆ ಎಂದು ಕೋಚಿಮುಲ್ ನಿರ್ದೇಶಕ ಬಂಕ್‌ಮುನಿಯಪ್ಪ ಹೇಳಿದರು.
ತಾಲ್ಲೂಕಿನ ಬೆಳ್ಳೂಟಿ ಗೇಟ್‌ನಲ್ಲಿರುವ ಗುಟ್ಟಾಂಜನೇಯಸ್ವಾಮಿ ಕಲ್ಯಾಣಮಂಟಪದಲ್ಲಿ ಮಂಗಳವಾರ ಹಾಲು ಒಕ್ಕೂಟದ ವತಿಯಿಂದ ಆಯೋಜನೆ ಮಾಡಲಾಗಿದ್ದ, ಅತ್ತಿಗಾನಹಳ್ಳಿ ಗ್ರಾಮದ ಡೈರಿ ಕಾರ್ಯದರ್ಶಿ ಕೃಷ್ಣಪ್ಪ ಅವರಿಗೆ ಶ್ರದ್ದಾಂಜಲಿ ಕಾರ್ಯಕ್ರಮ, ಹಾಗೂ ತಾಲ್ಲೂಕಿನ ವಿವಿಧ ಗ್ರಾಮಗಳಲ್ಲಿ ಕಾಲು ಬಾಯಿ ಜ್ವರದಿಂದ ಮೃತಪಟ್ಟಿದ್ದ ರಾಸುಗಳ ೧೫೮ ಮಂದಿ ಮಾಲೀಕರಿಗೆ ತಲಾ ೬,೦೦೦ ರೂಪಾಯಿಗಳಂತೆ ೯ ಲಕ್ಷ ೧೨.ಸಾವಿರ ರೂಪಾಯಿಗಳು, ಹಾಗೂ ದತ್ತಿ ವತಿಯಿಂದ ೨೬ ಮಂದಿ ಫಲಾನುಭವಿಗಳಿಗೆ ೫,೦೦೦ ರೂಪಾಯಿಗಳಂತೆ ೧ ಲಕ್ಷ ೩೦ ಸಾವಿರ ರೂಪಾಯಿಗಳ ಚೆಕ್ಕುಗಳನ್ನು ವಿತರಣೆ ಮಾಡಿ, ಕೃಷ್ಣಪ್ಪನ ಕುಟುಂಬಕ್ಕೆ ಸಹಾಯಧನ ನೀಡಿ ಅವರು ಮಾತನಾಡಿದರು.
ಕೋಲಾರ- ಚಿಕ್ಕಬಳ್ಳಾಪುರ ಹಾಲು ಒಕ್ಕೂಟದ ನಿರ್ದೇಶಕ ಬಂಕ್ ಮುನಿಯಪ್ಪ, ತಾಲ್ಲೂಕಿನ ಸುಮಾರು ೧೯೦ ಸಹಕಾರ ಸಂಘಗಳಲ್ಲಿ ಪ್ರಾಮಾಣಿಕವಾಗಿ ಸೇವೆ ಸಲ್ಲಿಸುತ್ತಿರುವ ಕಾರ್ಯದರ್ಶಿಗಳ ಕುಟುಂಬಗಳಿಗೆ ನೆರವಾಗಲು, ಈಗಾಗಲೇ ಕೋಲಾರದ ಒಕ್ಕೂಟದ ಸಭೆಯಲ್ಲಿ ಚರ್ಚೆ ಮಾಡಲಾಗಿದ್ದು, ಕಾರ್ಯದರ್ಶಿಗಳು ಅಕಾಲ ಮರಣಕ್ಕೆ ತುತ್ತಾದರೆ, ೧ ಲಕ್ಷ ರೂಪಾಯಿಗಳ ಸಹಾಯಧನವನ್ನು ನೀಡಲು ಉದ್ದೇಶಿಸಲಾಗಿದೆ, ಎಸ್.ಎಸ್.ಎಲ್.ಸಿ.,ಪಿ.ಯು.ಸಿ ಮತ್ತು ಪದವಿ ಶಿಕ್ಷಣ ಕ್ಷೇತ್ರದಲ್ಲಿ ಹೆಚ್ಚು ಅಂಕಗಳನ್ನು ಪಡೆದಿರುವಂತಹ ಕಾರ್ಯದರ್ಶಿಗಳ ಮಕ್ಕಳಿಗೆ ಪ್ರೋತ್ಸಾಹ ಮಾಡುವಂತಹ ಯೋಜನೆಗಳನ್ನು ಜಾರಿಗೆ ತರಲು ಚಿಂತನೆ ನಡೆಸಲಾಗಿದೆ. ಈಗ ತೀವ್ರ ಮಳೆಯ ಕೊರತೆಯಿಂದಾಗಿ ಹಾಲು ಉತ್ಪಾದಕರಿಗೆ ನಷ್ಟವುಂಟಾಗುತ್ತಿದೆ. ಈ ನಿಟ್ಟಿನಲ್ಲಿ ಸರ್ಕಾರ ಪ್ರತಿ ಲೀಟರ್ ಹಾಲಿಗೆ ೨೫ ರೂಪಾಯಿಗಳು ನೀಡಲು ಸಭೆಯಲ್ಲಿ ತೀರ್ಮಾನ ಮಾಡಿ ಠರಾವು ಹೊರಡಿಸಲಾಗುತ್ತಿದೆ. ಸರ್ಕಾರದ ಮೇಲೆ ಒತ್ತಡ ಹೇರಲಾಗುತ್ತದೆ. ಕಾರ್ಯದರ್ಶಿಗಳು ಪ್ರಾಮಾಣಿಕರಾಗಿ ಕೆಲಸ ಮಾಡಬೇಕು ಎಂದರು.
ಶಿಡ್ಲಘಟ್ಟ ಹಾಲು ಒಕ್ಕೂಟದ ಉಪವ್ಯವಸ್ಥಾಪಕ ಡಾ.ಕೆ.ಜಿ.ಈಶ್ವರಯ್ಯ ಮಾತನಾಡಿ, ರೈತರು ರಾಸುಗಳಿಗೆ ವಿಮೆಗಳನ್ನು ಮಾಡಿಸಿಕೊಳ್ಳಬೇಕು, ಈಗಾಗಲೇ ಈ ಸಾಲಿನಲ್ಲಿ ೬೦೦೦ ರಾಸುಗಳಿಗೆ ವಿಮೆ ಮಾಡಿಸಲಾಗಿದೆ, ರೈತರು ೪೦೦ ರೂಪಾಯಿಗಳು ಪಾವತಿಸಬೇಕು, ಒಕ್ಕೂಟ ೪೦೦ ರೂಪಾಯಿಗಳನ್ನು ಭರಿಸುತ್ತದೆ, ಇದರಿಂದ ರಾಸುಗಳು ಮರಣಹೊಂದಿದಾಗ ರೈತರಿಗೆ ಅನುಕೂಲವಾಗಲಿದೆ. ಕಾರ್ಯದರ್ಶಿಗಳು ಹೆಚ್ಚು ಆಸಕ್ತಿ ವಹಿಸಿ ರಾಸುಗಳಿಗೆ ವಿಮಾ ಸೌಲಭ್ಯಗಳನ್ನು ಮಾಡಿಸಿಕೊಡಲು ಸಹಕಾರಿಗಳಾಗಬೇಕು ಎಂದರು.
ಇದೇ ಸಂಧರ್ಭದಲ್ಲಿ ಮೃತ ಕೃಷ್ಣಪ್ಪ ಅವರ ಕುಟುಂಬಕ್ಕೆ ಸಹಾಯಧನ ಹಾಗೂ ಕಾಯಿಬಾಯಿ ರೋಗದಿಂದ ಸಾವನ್ನಪ್ಪಿರುವ ರಾಸುಗಳ ಮಾಲೀಕರಿಗೆ ಚೆಕ್ಕುಗಳನ್ನು ವಿತರಣೆ ಮಾಡಲಾಯಿತು. ಹಾಲು ಒಕ್ಕೂಟದ ಉಪ ವ್ಯವಸ್ಥಾಪಕ ಗೋಪಾಲರಾವ್, ಚಂದ್ರಶೇಖರ್, ಆಂಜಿನಪ್ಪ, ಕುಮ್ಮಯ್ಯ, ಕೆ.ಬಿ.ಎನ್.ರೆಡ್ಡಿ ಮತ್ತಿತರರು ಕಾರ್ಯಕ್ರಮದಲ್ಲಿ ಹಾಜರಿದ್ದರು.

ಮಾನಸಿಕ ದೌರ್ಭಲ್ಯಗಳನ್ನು ಮೀರಿ ಬೆಳೆಯಬೇಕು – ಪ್ರಧಾನ ಸಿವಿಲ್‌ ನ್ಯಾಯಾಧೀಶರಾದ ವಿಜಯ ದೇವರಾಜ ಅರಸ್

0

ಮಾನಸಿಕ ದೌರ್ಭಲ್ಯಗಳನ್ನು ಮೀರಿ ಬೆಳೆದಾಗ ಆತ್ಮಶಾಂತಿಯ ಜೊತೆಗೆ ಸಾಮಾಜಿಕ ಸ್ವಾಸ್ಥ್ಯವೂ ಉಳಿಯುತ್ತದೆ ಎಂದು ಪ್ರಧಾನ ಸಿವಿಲ್‌ ನ್ಯಾಯಾಧೀಶರಾದ ವಿಜಯ ದೇವರಾಜ ಅರಸ್‌ ಅಭಿಪ್ರಾಯಪಟ್ಟರು.
ಪಟ್ಟಣದ ಸಾರ್ವಜನಿಕ ಆಸ್ಪತ್ರೆಯಲ್ಲಿ ಮಂಗಳವಾರ ದಿ ರಿಚ್‌ಮಂಡ್‌ ಫೆಲೋಶಿಪ್‌ ಸೊಸೈಟಿ ಪ್ರಗತಿ ಗ್ರಾಮೀಣ ಶಾಖೆ ಹಾಗೂ ತಾಲ್ಲೂಕು ಕಾನೂನು ಸೇವಾ ಸಮಿತಿ ಸಹಯೋಗದೊಂದಿಗೆ ನಡೆದ ‘ವಿಶ್ವ ಮಾನಸಿಕ ಆರೋಗ್ಯ ದಿನಾಚರಣೆ ಮತ್ತು ಕಾನೂನು ಅರಿವು ನೆರವು’ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.
ಮಾನಸಿಕ ರಾಗ, ದ್ವೇಷ, ಅಹಂಕಾರ ಮುಂತಾದ ಕ್ಷುಲ್ಲಕ ಕಾರಣಗಳಿಂದಾಗಿಯೇ ಅನೇಕರು ನ್ಯಾಯಾಲಯದ ಮೆಟ್ಟಿಲೇರುತ್ತಾರೆ. ಇದರಿಂದಾಗಿ ಅವರ ಆರೋಗ್ಯ, ಹಣ, ಸಮಯ ವ್ಯರ್ಥವಾಗುತ್ತದೆ. ಮಾನಸಿಕ ಪ್ರಜ್ಞೆಯನ್ನು ಆತ್ಮಾವಲೋಕನಾ ಕ್ರಿಯೆಯೊಂದಿಗೆ, ಹೃದಯ ವೈಶಾಲ್ಯದಿಂದ ಬೆಳೆಸಿಕೊಳ್ಳುವ ಅತ್ಯಗತ್ಯವಿದೆ. ಮಾನಸಿಕ ಅಸ್ವಸ್ಥತೆಗೆ ಈಗ ವೈದ್ಯಕೀಯ ಚಿಕಿತ್ಸೆಗಳು ಸುಧಾರಣಾ ಕ್ರಮಗಳು ಇರುವುದನ್ನು ಮನಗಾಣಬೇಕು. ದಿ ರಿಚ್‌ಮಂಡ್‌ ಫೆಲೋಶಿಪ್‌ ಸೊಸೈಟಿ ಪ್ರಗತಿ ಗ್ರಾಮೀಣ ಶಾಖೆಯ ವತಿಯಿಂದ ಬೆಳ್ಳೂಟಿ ಗೇಟ್‌ ಬಳಿ ಉಚಿತ ಆಸ್ಪತ್ರೆ ಮತ್ತು ಪುನರ್ವಸತಿ ಪಾಲನಾ ಕೇಂದ್ರವನ್ನು ನೂತನವಾಗಿ ಮಾಡಿರುವುದು ಶ್ಲಾಘನೀಯ ಎಂದು ಹೇಳಿದರು.
ದಿ ರಿಚ್‌ಮಂಡ್‌ ಫೆಲೋಶಿಪ್‌ ಸೊಸೈಟಿ ಪ್ರಗತಿ ಗ್ರಾಮೀಣ ಶಾಖೆ ಅಧ್ಯಕ್ಷ ಎಸ್‌.ಎಂ.ನಾರಾಯಣಸ್ವಾಮಿ ಮಾತನಾಡಿ, ನಮ್ಮ ಸಂಸ್ಥೆಯ ವತಿಯಿಂದ ಇದುವರೆಗೂ ಮಾನಸಿಕ ರೋಗಿಗಳಿಗೆ ಉಚಿತ ಚಿಕಿತ್ಸೆ ಮತ್ತು ಔಷಧಿಗಳನ್ನು ನೀಡುತ್ತಿದ್ದೆವು. ಇನ್ನು ಮುಂದೆ ನೂತನ ಕಟ್ಟಡದಲ್ಲಿ ಅವರಿಗೆ ವೃತ್ತಿಪರ ಶಿಕ್ಷಣ ತರಬೇತಿಗಳಾದ ಕೆಮಿಕಲ್ಸ್‌ ತಯಾರಿಕೆ, ಆಹಾರ ಪದಾರ್ಥಗಳ ತಯಾರಿಕೆ, ಹಣ್ಣಿನ ಸಂಸ್ಕರಣೆ, ಹರ್ಬಲ್‌ ವಸ್ತುಗಳ ತಯಾರಿಕೆ, ರೇಷ್ಮೆ, ಹೈನುಗಾರಿಕೆ, ತೋಟಗಾರಿಕೆ, ಕಂಪ್ಯೂಟರ್‌, ಟೈಲರಿಂಗ್‌ ಮುಂತಾದ ತರಬೇತಿಗಳನ್ನು ನೀಡಿ ಅವರನ್ನು ಸ್ವಾವಲಂಬಿಗಳನ್ನಾಗಿ ಮಾಡಲು ಯೋಜನೆ ರೂಪಿಸಿದ್ದೇವೆ ಎಂದು ವಿವರಿಸಿದರು.
ಹೆಚ್ಚುವರಿ ಸಿವಿಲ್‌ ನ್ಯಾಯಾಧೀಶರಾದ ಎನ್‌.ಎ.ಶ್ರೀಕಂಠ, ತಾಲ್ಲೂಕು ವಕೀಲರ ಸಂಘದ ಅಧ್ಯಕ್ಷ ಎಂ.ಪಾಪಿರೆಡ್ಡಿ, ತಹಶೀಲ್ದಾರ್‌ ಜಿ.ಎ.ನಾರಾಯಣಸ್ವಾಮಿ, ಸರ್ಕಾರಿ ವಕೀಲ ಈ.ಡಿ.ಶ್ರೀನಿವಾಸ್‌, ತಾಲ್ಲೂಕು ಆರೋಗ್ಯಾಧಿಕಾರಿ ಡಾ.ಅನಿಲ್‌ಕುಮಾರ್‌, ಮಾನಸಿಕ ತಜ್ಞ ಡಾ.ಕಿಶೋರ್‌, ಡಾ.ವಿ.ವೆಂಕಟರಾಮಯ್ಯ, ಡಾ.ಮಲ್ಲಿಕಾ, ಲಕ್ಷ್ಮಣಾಚಾರ್‌, ಎಚ್‌.ವಿ.ರಾಮಕೃಷ್ಣಪ್ಪ, ಭಕ್ತರಹಳ್ಳಿ ಬೈರೇಗೌಡ, ಸೋಮಶೇಖರ್‌, ದೇವರಾಜ್‌, ಪಿ.ಗೋಪಿನಾಥ್‌ ಮತ್ತಿತರರು ಈ ಸಂದರ್ಭದಲ್ಲಿ ಹಾಜರಿದ್ದರು.

ಪಿಟೀಲು ವಿದ್ವಾನ್ ಹೊಸಪೇಟೆ ಎಚ್.ಬಿ.ನಾರಾಯಣಾಚಾರ್

0

ಪಿಟೀಲು ವಿದ್ವಾನ್ ಹೊಸಪೇಟೆ ಎಚ್.ಬಿ.ನಾರಾಯಣಾಚಾರ್ವೇದಿಕೆನ್ನು ಏರಿದ್ದು ಹದಿನೆಂಟರ ವಯಸ್ಸಿನಲ್ಲಿ. ಈಗ ವಯಸ್ಸು ತೊಂಬತ್ತಐದು ಆದರೂ ಪಿಟೀಲು ಕೈಯಲ್ಲಿಡಿಯುತ್ತಿದ್ದಂತೆಯೇ ಚಿಮ್ಮುತ್ತದೆ ಉತ್ಸಾಹ, ಹೊರಡುತ್ತದೆ ಸುಶ್ರಾವ್ಯ ಸಂಗೀತ. ತಾಲ್ಲೂಕಿನ ಜಂಗಮಕೋಟೆ ಹೋಬಳಿಯ ಹೊಸಪೇಟೆಯ ವಿದ್ವಾನ್ ಎಚ್.ಬಿ.ನಾರಾಯಣಾಚಾರ್ ತಮ್ಮ ಜೀವನವನ್ನೆಲ್ಲಾ ಕಲಾ ಸೇವೆ ಮತ್ತು ಪಿಟೀಲು ನುಡಿಸುವುದರಲ್ಲಿಯೇ ಕಳೆದಿದ್ದಾರೆ.

ಕರ್ನಾಟಕ ಸಂಗೀತದಲ್ಲಿ ಪಕ್ಕವಾದ್ಯವಾಗಿಯೂ ತನಿವಾದ್ಯವಾಗಿಯೂ ಬಳಸಲಾಗುವ ಪಿಟೀಲು ಭಾರತೀಯ ಸಂಗೀತಕ್ಕೆ ದೊರೆತದ್ದು ಪಾಶ್ಚಾತ್ಯ ಸಂಗೀತದ ಸಂಪರ್ಕದಿಂದ. ಆದರೆ ರಾವಣಹಸ್ತ ಎಂಬ ಭಾರತೀಯ ವಾದ್ಯದಿಂದ ಪಿಟೀಲು ರೂಪುಗೊಂಡಿರಬಹುದೆಂಬ ಅಭಿಮತವನ್ನು ಪಾಶ್ಚಾತ್ಯ ಸಂಗೀತಗಾರರೇ ಕೆಲವರು ವ್ಯಕ್ತಪಡಿಸಿದ್ದಾರೆ. ಪಿಟೀಲಿನಂಥ ಒಂದು ವಾದ್ಯ ನಮ್ಮಲ್ಲಿತ್ತೆಂದೂ ಅದನ್ನು ಧನುರ್ವೀಣೆ ಎಂದು ಕರೆಯುತ್ತಿದ್ದರೆಂದೂ ಕೆಲವರು ಹೇಳುತ್ತಾರೆ.

ಕರ್ನಾಟಕ ಮಾತ್ರವಲ್ಲದೆ, ನೆರೆಯ ತಮಿಳುನಾಡು ಮತ್ತು ಆಂಧ್ರಪ್ರದೇಶಗಳಲ್ಲಿ ನಿರಂತರವಾಗಿ ಪಿಟೀಲು ಸೋಲೋ ಕಾರ್ಯಕ್ರಮವನ್ನು ನೀಡುತ್ತಾ ಬಂದಿದ್ದಾರೆ.
ಇವರದ್ದು ಸಂಗೀತಗಾರರ ಮನೆತನ. ತಂದೆ ಪಂಚನನಾಚಾರ್ಯರು ತಬಲಾ ವಾದಕರು. ಚಿಕ್ಕಪ್ಪ ನಂಜುಂಡಾಚಾರ್ಯ ಸಂಗೀತ ವಿದ್ವಾಂಸರು. ತಂದೆ ಮತ್ತು ಚಿಕ್ಕಪ್ಪನವರಲ್ಲಿ ಸಂಗೀತದ ಪ್ರಾರಂಭಿಕ ಶಿಕ್ಷಣವನ್ನು ಪಡೆದು ಹಲಸೂರಿನ ವಿದ್ವಾನ್ ಅಣ್ಣಯ್ಯಸ್ವಾಮಿ ಅವರಲ್ಲಿ ಪಿಟೀಲುವಾದನವನ್ನು ಒಂದು ದಶಕದ ಕಾಲ ಅಭ್ಯಾಸ ಮಾಡಿದರು. ನಂತರ ವಿದ್ವಾಂಸರಾದ ಕಿತ್ತಂಡೂರು ರಾಮಕೃಷ್ಣಪ್ಪ ಮತ್ತು ದೊಡ್ಡಬಳ್ಳಾಪುರದ ಲಕ್ಷ್ಮೀನಾರಾಯಣಪ್ಪ ಅವರಲ್ಲಿ ಹೆಚ್ಚಿನ ಶಿಕ್ಷಣ ಪಡೆದರು.
ಸಂಗೀತ ಮತ್ತು ಹರಿಕಥಾ ಕ್ಷೇತ್ರಗಳಲ್ಲಿ ವಿದ್ವಾಂಸರಾದ ಚಿಮತಲಪಲ್ಲಿ ರಾಮಚಂದ್ರರಾವ್, ಚಿಂತಲಪಲ್ಲಿ ಕೃಷ್ಣಮೂರ್ತಿ, ಚಿಂತಲಪಲ್ಲಿ ವೆಂಕಟರಾವ್, ಚಿತ್ತೂರು ಸುಬ್ರಹ್ಮಣ್ಯ ಪಿಳ್ಳೈ, ಪೊಲ್ಲಾಚಿ ಶಂಕರನ್, ರಮಣಕುಮಾರ್, ಸರೋಜಾ ನಟರಾಜನ್, ಸಂಬಂಧಮೂರ್ತಿ ಭಾಗವತರ್, ಹೊನ್ನಪ್ಪ ಭಾಗವತರ್, ವೀರಗಂಧಂ ವೆಂಕಟಸುಬ್ಬರಾವ್, ತೆನಾಲಿ ರಾಮಕುಮಾರಿ, ಚನ್ನೈ ಕಮಲಾಕುಮಾರಿ, ಸರಸ್ವತಿ, ತೆನಾಲಿ ತಿರುಪತಿ ನಾಗರತ್ನಂ ಭಾಗವತಾರಿಣಿ, ಎನ್.ಆರ್.ಜ್ಞಾನಮೂರ್ತಿ ಮುಂತಾದ ಕಲಾವಿದರಿಗೆ ಪಿಟೀಲಿನ ಪಕ್ಕವಾದ್ಯ ನುಡಿಸಿದ್ದಾರೆ.
ಕೈವಾರ ರಾಷ್ಟ್ರೀಯ ಸಂಗೀತ ಮಹೋತ್ಸವ, ಹಂಪಿ ಉತ್ಸವ, ಧರ್ಮಸ್ಥಳ ಸಂಗೀತೋತ್ಸವ, ಮುಳಬಾಗಿಲು ಪುರಂದರೋತ್ಸವ, ಚಿಕ್ಕಬಳ್ಳಾಪುರ ಜಿಲ್ಲಾ ಉತ್ಸವ ಮುಂತಾದ ವೇದಿಕೆಗಳಲ್ಲಿ ಸಂಗೀತ ನೀಡಿರುವ ನಾರಾಯಣಾಚಾರ್ ನೂರಾರು ಪ್ರಬುದ್ಧ ಶಿಷ್ಯರನ್ನೂ ಸಂಗೀತ ಮಾಧ್ಯಮಕ್ಕೆ ಕೊಡುಗೆಯಾಗಿ ನೀಡಿದ್ದಾರೆ.
ಇವರ ಸಂಗೀತ ಸೇವೆಯನ್ನು ಗುರುತಿಸಿ ಹಲವಾರು ಸಂಘ ಸಂಸ್ಥೆಗಳು ಗೌರವ ಪುರಸ್ಕಾರಗಳೊಂದಿಗೆ ಸತ್ಕರಿಸಿವೆ. ‘ನಾದ ಚಿಂತಾಮಣಿ’, ‘ಪಿಟೀಲು ವಾದ್ಯ ಪ್ರವೀಣ’, ‘ಸಂಗೀತ ರತ್ನ’ ಮುಂತಾದ ಪುರಸ್ಕಾರಗಳು ಇವರಿಗೆ ಸಂದಿದೆ. ಕರ್ನಾಟಕ ಸಂಗೀತ ನೃತ್ಯ ಅಕಾಡೆಮಿ 2008-09ರ ಸಾಲಿನ ‘ಕರ್ನಾಟಕ ಕಲಾಶ್ರೀ’ ಪ್ರಶಸ್ತಿಯನ್ನು ನೀಡಿ ಗೌರವಿಸಿದೆ. ಗಂಜಿಗುಂಟೆ ಗೆಳೆಯರ ಬಳಗದಿಂದ “ಗಾನ ಕಮಲ” ಎಂಬ ಬಿರುದು ಮತ್ತು ಸನ್ಮಾನಕ್ಕೆ ಭಾಜನರಾಗಿದ್ದಾರೆ.

ಕಾಯಿಲೆ ವಾಸಿಗೆ ಕತ್ತೆ ಹಾಲು ಕುಡಿ

0

‘ಕತ್ತೆಹಾಲು ಬೇಕಾ ಕತ್ತೆ ಹಾಲು, ದಮ್ಮು, ಕೆಮ್ಮು, ವಾಯು, ಕಫ, ಶೀತ, ನೆಗಡಿ ಎಲ್ಲಾ ಮಾಯ ಕತ್ತೆಹಾಲು…., ಮಕ್ಳು ಮರಿ, ದೊಡ್ಡೋರ್‌, ಚಿಕ್ಕೋರ್‌ ಎಲ್ಲರಿಗೂ ಕತ್ತೆಹಾಲು….!’ ಇದು ಯಾವುದೋ ನಾಟಕದ ಸಂಭಾಷಣೆಯಲ್ಲ, ಬದಲಾಗಿ ತಾಲ್ಲೂಕಿನ ಅಪ್ಪೇಗೌಡನಹಳ್ಳಿಯಲ್ಲಿ ಈಚೆಗೆ ಈ ರೀತಿಯ ಧ್ವನಿಯೊಂದು ಕೇಳಿ ಬರುತ್ತಿತ್ತು.
ಈ ಧ್ವನಿ ಕೇಳಿದೊಡನೇ ಮಹಿಳೆಯರು ಅಡುಗೆ ಮನೆಯಲ್ಲಿದ್ದ ಪುಟ್ಟ ಲೋಟವನ್ನು ಒಂದು ಕೈಲಿ ಹಿಡಿದು ಕಂಕುಳಲ್ಲಿ ಮಗುವನ್ನು ಇನ್ನೊಂದು ಕೈಲಿ ಹಿಡಿದುಕೊಂಡು ಓಡುತ್ತಿದ್ದುದು ಮತ್ತೂ ವಿಶೇಷವಾಗಿತ್ತು. ಕತ್ತೆಯನ್ನಿಡಿದುಕೊಂಡು ಬಂದಿದ್ದ ಮುನಿಯಪ್ಪ, ಒಂದು ವಳಲೆ ಹಾಲನ್ನು ಕರೆದು ಮಹಿಳೆಯರು ತಂದಿದ್ದ ಲೋಟಕ್ಕೆ ಸುರಿದು 100 ರೂ ಪಡೆಯುತ್ತಿದ್ದ. ಮಹಿಳೆಯರು ಬೆಚ್ಚಗಿರುವ ಆ ಹಾಲನ್ನು ಮಕ್ಕಳನ್ನು ತೊಡೆಯ ಮೇಲೆ ಮಲಗಿಸಿಕೊಂಡು ಕುಡಿಸುತ್ತಿದ್ದರು. ಇದನ್ನು ನೋಡಿದ ದೊಡ್ಡವರೂ ನೂರು ರೂಗಳನ್ನು ನೀಡಿ ತಾವೂ ಕುಡಿದರೆ, ಇನ್ನು ಕೆಲವರು ಮನೆಗಳಿಗೆ ಕೊಂಡೊಯ್ಯುತ್ತಿದ್ದರು.
ಕತ್ತೆ ಎಂಬುದು ಅಪಹಾಸ್ಯಕ್ಕೊಳಗಾದ ಪ್ರಾಣಿಯೂ ಹೌದು. ಆದರೆ, ಕತ್ತೆಯ ಹಾಲಿನ ಪೌಷ್ಟಿಕಾಂಶದ ಗುಣ ನಗೆಯ ವಿಷಯವಲ್ಲ. ಕತ್ತೆಯ ಹಾಲೇ ಈಜಿಪ್ಟಿನ ರಾಜಕುಮಾರಿ ಕ್ಲಿಯೋಪಾತ್ರಾಳ ಮಿಂಚುವ ಸೌಂದರ್ಯಕ್ಕೆ ಕಾರಣವಾಗಿತ್ತೆನ್ನಲಾಗಿದೆ. ನವಜಾತ ಶಿಶುಗಳಿಗೆ ಉತ್ತಮ ಔಷಧೀಯ ಸತ್ತ್ವ ಕತ್ತೆಯ ಹಾಲಿನಲ್ಲಿದೆಯೆಂಬುದು ಬಹುತೇಕರ ನಂಬಿಕೆ. ಕತ್ತೆಯ ಹಾಲು ತಾಯಿಯ ಹಾಲಿಗೆ ಸಮಾನವಾದುದಾದರೂ, ಅದರಲ್ಲಿ ಪ್ರೋಟೀನ್ ಹಾಗೂ ಕೊಬ್ಬಿನಾಂಶ ಕಡಿಮೆಯಿದ್ದು, ಲ್ಯಾಕ್ಟೋಸ್‌ನ ಅಂಶ ಹೆಚ್ಚಿದೆ. ಕತ್ತೆಯ ಹಾಲು ಅಸ್ತಮಾದಿಂದ ಬಳಲುವ ನವಜಾತ ಶಿಶುಗಳಿಗೆ ಅತ್ಯುತ್ತಮ ಔಷಧಿ, ಕ್ಷಯ ಹಾಗೂ ಗಂಟಲು ಬೇನೆಗಳನ್ನು ಅದು ನಿವಾರಿಸುತ್ತದೆಂದು ಆಯುರ್ವೇದದ ತಜ್ಞರೂ ಹೇಳಿರುವುದರಿಂದ ಅದಕ್ಕೆ ಬೇಡಿಕೆ ಕುದುರಿದೆ.
‘ಒಂದು ಕತ್ತೆಯು ದಿನವೊಂದಕ್ಕೆ ಸುಮಾರು 300 ಎಂ.ಎಲ್‌. ನಿಂದ ಅರ್ಧ ಲೀಟರ್‌ ಹಾಲು ನೀಡುತ್ತದೆ. ಕತ್ತೆಮರಿಗಳಿಗಳು ಕುಡಿದು ಬಿಟ್ಟಿದ್ದನ್ನು ನಾವು ಹಳ್ಳಿ ಹಳ್ಳಿ ತಿರುಗಿ ಮಾರಾಟ ಮಾಡಬೇಕು. ಹೆಚ್ಚೆಂದರೆ ದಿನಕ್ಕೆ 600 ರಿಂದ 800ರೂ ಸಂಪಾದಿಸುತ್ತೇವೆ. ಸದಾ ಇದನ್ನೇ ನಂಬುವುದೂ ಕಷ್ಟ. ಒಂದೊಂದು ಪ್ರದೇಶದಲ್ಲಿ ಬೀಡುಬಿಟ್ಟು ಸುತ್ತಲಿನ ಹಳ್ಳಿಗಳಲ್ಲಿ ಸುತ್ತಾಡಿ ನಂತರ ವಾಪಸ್‌ ನಮ್ಮ ಸ್ಥಳಗಳಿಗೆ ತೆರಳುತ್ತೇವೆ’ ಎನ್ನುತ್ತಾರೆ ಕತ್ತೆಯ ಮಾಲೀಕ ಎಚ್‌.ಕ್ರಾಸ್‌ ಬಳಿಯಿಂದ ಬಂದ ಮುನಿಯಪ್ಪ.
‘ಕಾರ್ಯವಾಸಿ ಕತ್ತೆಕಾಲು ಹಿಡಿ’ ಎಂಬ ಹಳೆಗಾದೆಯನ್ನು ಈಗ ‘ಕಾಯಿಲೆ ವಾಸಿಗೆ ಕತ್ತೆ ಹಾಲು ಕುಡಿ’ ಎಂದು ಬದಲಾಯಿಸಿಕೊಳ್ಳುವಂತೆ ಕತ್ತೆಹಾಲು ಮಾರಾಟವಾಗುತ್ತಿದೆ. ಇತ್ತ 25 ರೂಗಳಿಗೆ ಒಂದು ಲೀಟರ್‌ ಹಸುವಿನ ಹಾಲು ಕೊಡುತ್ತೀವಿ ಎಂದರೂ ಮುಖ ಹಾಯಿಸದ ಜನರು ಕತ್ತೆಹಾಲಿಗೆ ಮುಗಿಬಿದ್ದಿರುವುದು ಸೋಜಿಗ ತಂದಿದೆ’ ಎಂದು ಅಪ್ಪೇಗೌಡನಹಳ್ಳಿಯ ತ್ಯಾಗರಾಜ್‌ ತಿಳಿಸಿದರು.
–ಡಿ.ಜಿ.ಮಲ್ಲಿಕಾರ್ಜುನ.

ಅಂಗನವಾಡಿ ನೌಕರರನ್ನು ಸರ್ಕಾರ ಕಡೆಗಣಿಸಿದೆ – ಸಿ.ಐ.ಟಿ.ಯು ಜಿಲ್ಲಾ ಕಾರ್ಯದರ್ಶಿ ಲಕ್ಷ್ಮೀದೇವಮ್ಮ

0

ಗ್ರಾಮೀಣ ಮಟ್ಟದಲ್ಲಿ ಎಲ್ಲಾ ಸರ್ಕಾರಿ ಯೋಜನೆಗಳನ್ನು ಜಾರಿಗೊಳಿಸಲು ಅಂಗನವಾಡಿ ನೌಕರರನ್ನು ಬಳಸಿಕೊಳ್ಳುತ್ತಾರೆ. ಆದರೆ, ಅವರಿಗೆ ಮಾತ್ರ ಸಮಾನ ವೇತನ ನೀಡದೆ ಸರ್ಕಾರ ಕಡೆಗಣಿಸಿದೆ ಎಂದು ಸಿ.ಐ.ಟಿ.ಯು ಜಿಲ್ಲಾ ಕಾರ್ಯದರ್ಶಿ ಲಕ್ಷ್ಮೀದೇವಮ್ಮ ಆರೋಪಿಸಿದರು.
ಪಟ್ಟಣದ ವಾಸವಿ ಕಲ್ಯಾಣಮಂಟಪದಲ್ಲಿ ಶನಿವಾರ ನಡೆದ ಅಂಗನವಾಡಿ ನೌಕರರ ಸಂಘದ ವಾರ್ಷಿಕ ಮಹಾಸಭೆಯನ್ನುದ್ದೇಶಿಸಿ ಅವರು ಮಾತನಾಡಿದರು. ಐ.ಸಿ.ಡಿ.ಎಸ್‌ ಯೋಜನೆಯನ್ನು ಬಲಪಡಿಸಬೇಕೆಂದು ಅನೇಕ ಬಾರಿ ಒತ್ತಾಯಿಸಿದ್ದರೂ ಸಹ ಆ ಯೋಜನೆಯನ್ನು ದುರ್ಬಲಗೊಳಿಸಲು ಸರ್ಕಾರ ಪ್ರಯತ್ನಿಸುತ್ತಿದೆ. ಅಂಗನವಾಡಿ ನೌಕರರು ಜನಗಣತೆ, ದನಕರುಗಳಗಣತಿ, ಚುನಾವಣಾ ಕೆಲಸ, ಸ್ತ್ರೀಶಕ್ತಿ ಸಂಘ ಮುಂತಾದ ಹತ್ತು ಹಲವು ಸರ್ಕಾರಿ ಯೋಜನೆಗಳು ಹಾಗೂ ಮಾಹಿತಿ ಸಂಗ್ರಹಣೆಯ ಕಾರ್ಯದಲ್ಲಿ ತೊಡಗಿಸಿಕೊಳ್ಳಬೇಕಾಗುತ್ತದೆ. ಆದ್ದರಿಂದ ಮುಂದಿನ ದಿನಗಳಲ್ಲಿ ಅಂಗನವಾಡಿ ಕೆಲಸವನ್ನು ಬಿಟ್ಟು ಬೇರೆ ಯಾವ ಕೆಲಸ ಕಾರ್ಯಗಳಲ್ಲಿ ಭಾಗಿಯಾಗದೆ ಹೋರಾಟ ಮಾಡುವ ಅಗತ್ಯವಿದೆ ಎಂದು ಹೇಳಿದರು.
ಸರ್ಕಾರ ಅಂಗನವಾಡಿ ಕೇಂದ್ರಗಳನ್ನು ಖಾಸಗೀಕರಣ ಮಾಡಲು ಹೊರಟಿರುವುದು ದುರದೃಷ್ಟಕರ. ಎನ್‌.ಜಿ.ಒ ಗಳ ಮುಖಾಂತರ ಕಾರ್ಯಕರ್ತೆಯರಿಗೆ ಕಿರುಕುಳ ಕೊಡುವ ಮುಖಾಂತರ ಮಹಿಳೆಯರ ಮೇಲೆ ದೌರ್ಜನ್ಯವೆಸಗಲಾಗುತ್ತಿದೆ. ಕನಿಷ್ಠ ವೇತನ 10 ಸಾವಿರ ರೂಗಳು ನಿಗದಿಪಡಿಸಬೇಕು. ಬೆಲೆ ಏರಿಕೆ ಆಗುತ್ತಿರುವ ಈ ಸಂದರ್ಭದಲ್ಲಿ ದಿನೇ ದಿನೇ ಅಗತ್ಯವಸ್ತುಗಳ ಬೆಲೆ ಗಗನಕ್ಕೇರುತ್ತಿವೆ. ಆದರೆ ವೇತನ ಮಾತ್ರ ಶ್ರಮಕ್ಕೆ ತಕ್ಕಂತೆ ನೀಡುತ್ತಿಲ್ಲ. ಯಾವುದೇ ಸೇವಾ ಭದ್ರತೆಯಿಲ್ಲದೆ ದುಡಿಯುತ್ತಿರುವ ನಮ್ಮನ್ನು ಸರ್ಕಾರ ಖಾಯಂಗೊಳಿಸಬೇಕೆಂದು ಒತ್ತಾಯಿಸಿದರು.
ಡಿ.ವೈ.ಎಫ್‌.ಐ ರಾಜ್ಯ ಮುಖಂಡ ಕುಂದಲಗುರ್ಕಿ ಮುನೀಂದ್ರ, ವಿಸ್ಡಂ ನಾಗರಾಜ್‌, ಅಂಗನವಾಡಿ ನೌಕರರ ಸಂಘದ ಅಧ್ಯಕ್ಷೆ ಅಶ್ವತ್ಥಮ್ಮ, ಕಾರ್ಯದರ್ಶಿ ಮಂಜುಳಾ, ಖಜಾಂಚಿ ಗುಲ್ಜಾರ್‌, ಉಪಾಧ್ಯಕ್ಷೆ ಭಾಗ್ಯಮ್ಮ, ಶಾಂತಮ್ಮ, ಅರುಣಾ ಮತ್ತಿತರರು ಸಭೆಯಲ್ಲಿ ಭಾಗವಹಿಸಿದ್ದರು.

ಸರ್ಕಾರ ಕಣ್ಣು ತೆರೆಯದಿದ್ದಲ್ಲಿ ನಮ್ಮ ಹೋರಾಟದಿಂದ ಕಣ್ತೆರೆಸುತ್ತೇವೆ

0

ವಿಷಪೂರಿತ ನೀರನ್ನು ಕುಡಿಯುತ್ತಾ ನರಳುತ್ತಿರುವ ಜಿಲ್ಲೆಗೆ ಸರ್ಕಾರ ಶಾಶ್ವತ ನೀರನ್ನು ಕಲ್ಪಿಸದಿದ್ದಲ್ಲಿ ಉಗ್ರ ಹೋರಾಟ ಮಾಡುವುದಾಗಿ ಶಾಶ್ವತ ನೀರಾವರಿ ಹೋರಾಟ ಸಮಿತಿಯ ಮುಖಂಡ ಮಳ್ಳೂರು ಹರೀಶ್‌ ಎಚ್ಚರಿಕೆ ನೀಡಿದರು.
ತಾಲ್ಲೂಕಿನ ನಾಗಮಂಗಲ, ತೊಟ್ಲಗಾನಹಳ್ಳಿ, ತಾದೂರು, ಬಸವಾಪಟ್ಟಣ, ಮಳಮಾಚನಹಳ್ಳಿ, ಭಕ್ತರಹಳ್ಳಿ, ಮೇಲೂರು, ಚೌಡಸಂದ್ರ, ಮಳ್ಳೂರು ಗ್ರಾಮಗಳಲ್ಲಿ ಜಲಜಾಗೃತಿ ಪಾದಯಾತ್ರೆಯನ್ನು ಕೈಗೊಂಡು ಶನಿವಾರ ಅವರು ಮಾತನಾಡಿದರು.
ವಿಷಯುಕ್ತ ಫ್ಲೋರೈಡ್ ನಿಂದಾಗಿ ಜಾನುವಾರುಗಳು ಕೃಷವಾಗಿವೆ. ತಾಯಿಯ ಹಾಲು, ಹಣ್ಣು, ತರಕಾರಿಗಳಲ್ಲೂ ಫ್ಲೋರೈಡ್ ಇರುವುದು ಪತ್ತೆಯಾಗಿದೆ. ತುರ್ತಾಗಿ ನೀರಾವರಿ ಯೋಜನೆ ರೂಪಿಸದಿದ್ದಲ್ಲಿ ನಮ್ಮ ಭಾಗದ ಜನರಿಗೆ ಭವಿಷ್ಯವಿಲ್ಲ. ಒಂದೋ ವಲಸೆ ಹೋಗಬೇಕು, ಇಲ್ಲವಾದಲ್ಲಿ ಖಾಯಿಲೆ ಬಂದು ಸಾಯಬೇಕು. ಜನರಿಗೆ ನಮ್ಮ ಸಂದಿಗ್ಧ ಸ್ಥಿತಿಯ ಮನವರಿಕೆ ಮಾಡಿಕೊಡುತ್ತಿದ್ದೇವೆ. ಸರ್ಕಾರ ಕಣ್ಣು ತೆರೆಯದಿದ್ದಲ್ಲಿ ನಮ್ಮ ಹೋರಾಟದಿಂದ ಕಣ್ತೆರೆಸಬೇಕಾಗುತ್ತದೆ ಎಂದು ಹೇಳಿದರು.
ಶಾಶ್ವತ ನೀರಾವರಿ ಹೋರಾಟ ಸಮಿತಿಯ ಅಧ್ಯಕ್ಷ ಆರ್‌.ಆಂಜನೇಯರೆಡ್ಡಿ ಮಾತನಾಡಿ, ಕೋಲಾರ ಚಿಕ್ಕಬಳ್ಳಾಪುರ ಮತ್ತು ಬೆಂಗಳೂರು ಗ್ರಾಮಾಂತರ ಜಿಲ್ಲೆಗಳಿಗೆ ಕುಡಿಯುವ ನೀರು ಹಾಗೂ ಕೃಷಿಗಾಗಿ ನೀರಾವರಿ ಯೋಜನೆಗೆ ಆಗ್ರಹಿಸಿ ಅಕ್ಟೋಬರ್‌ 2 ರ ಗಾಂಧಿ ಜಯಂತಿಯ ದಿನದಿಂದ ಪ್ರಾರಂಭಿಸಿ ಜನಜಾಗೃತಿ ಮತ್ತು ಜಲಜಾಗೃತಿ ಪಾದಯಾತ್ರೆ ನಡೆಸುತ್ತಿದ್ದೇವೆ. ರೈತರೊಂದಿಗೆ ನಗರಪ್ರದೇಶದ ವಿದ್ಯಾವಂತ ಯುವಸಮೂಹ, ಹಾಲು ಉತ್ಪಾದಕರ ಸಹಕಾರಿಗಳು, ಸ್ತ್ರೀಶಕ್ತಿ ಸಂಘಗಳು ನಮ್ಮೊಂದಿಗೆ ಕೈಜೋಡಿಸಿದ್ದಾರೆ. ಬಯಲುಸೀಮೆಯ ಪ್ರತೊಯೊಂದು ಕುಟುಂಬವೂ ಹೋರಾಟದಲ್ಲಿ ಭಾಗಿಯಾದಾಗ ಮಾತ್ರ ನಮ್ಮ ನೀರಿನ ಹಕ್ಕನ್ನು ಪಡೆಯಲು ಸಾಧ್ಯ. ಈಗ ನಾವು ಹೋರಾಡದಿದ್ದಲ್ಲಿ ಮುಂದಿನ ಪೀಳಿಗೆಗೆ ಭವಿಷ್ಯವಿಲ್ಲದಂತಾಗುತ್ತದೆ. ಪ್ರತಿಯೊಬ್ಬರೂ ಜಾತ್ಯಾತೀತವಾಗಿ ಪಕ್ಷಾತೀತವಾಗಿ ನೀರಿಗಾಗಿ ಹೋರಾಡುವ ಅಗತ್ಯತೆಯಿದೆ ಎಂದು ಹೇಳಿದರು.
ಶಾಶ್ವತ ನೀರಾವರಿ ಹೋರಾಟ ಸಮಿತಿಯ ಮುಖಂಡ ಯಲುವಳ್ಳಿ ಸೊಣ್ಣೇಗೌಡ ಮಾತನಾಡಿ ಅಂತರ್ಜಲ ಕುಸಿಯುತ್ತಿರುವ ಪರಿಣಾಮ ಕೃಷಿಯಾಧಾರಿತ ನಮ್ಮ ಜೆಲ್ಲೆಗಳು ಬಂಜರಾಗುತ್ತಿವೆ. ರೈತರು ಸಾಲಗಾರರಾಗುತ್ತಿದ್ದಾರೆ. ನೀರನ್ನು ಕೊಂಡು ಬೇಸಾಯ ಮಾಡುತ್ತಿದ್ದಾರೆ. ಇಂಥಹ ಸ್ಥಿತಿಯನ್ನು ತಲುಪಿರುವ ನಮ್ಮ ಬಗ್ಗೆ ಸರ್ಕಾರ ನಿರ್ಲಕ್ಷ್ಯ ಧೋರಣೆ ಅನುಸರಿಸಿರುವುದು ಖಂಡನೀಯ. ಕೃಷಿಕರು ತಮ್ಮ ಮಕ್ಕಳನ್ನು ನಗರಕ್ಕೆ ಕಳುಹಿಸುತ್ತಿರುವ ದುರಂತದ ಬದುಕನ್ನು ನಡೆಸುವಂತಾಗಿದೆ ಎಂದು ನುಡಿದರು.
ರೈತಸಂಘದ ಜಿಲ್ಲಾಧ್ಯಕ್ಷ ಭಕ್ತರಹಳ್ಳಿ ಬೈರೇಗೌಡ, ತಾದೂರು ರಮೇಶ್‌, ತಾದೂರು ಮಂಜುನಾಥ್‌, ತಮ್ಮಣ್ಣ, ರಾಮೇಗೌಡ, ಕೋದಂಡಪ್ಪ, ಚಂದ್ರಪ್ಪ, ವೆಂಕಟರಾಜು, ಮುನಿರಾಜು, ಟಿ.ವಿ.ಕೃಷ್ಣಪ್ಪ, ಚನ್ನಪ್ಪ, ಮುನಿನಾರಾಯಣಪ್ಪ, ಕನಕರಾಜು, ಪಿಳ್ಳಚಂದ್ರೇಗೌಡ, ಉಮೇಶ್‌ ಮತ್ತಿತರರು ಈ ಸಂದರ್ಭದಲ್ಲಿ ಹಾಜರಿದ್ದರು.

ಸಮಾಜದ ಚಲನಶೀಲ ಬಂಧು; ಪೋಸ್ಟ್‌ಮ್ಯಾನ್

0

ಸಣ್ಣ ಊರು ಅಥವಾ ಗ್ರಾಮಗಳಲ್ಲಿ ಪೋಸ್ಟ್‌ಮ್ಯಾನ್ ಅಥವಾ ಅಂಚೆಯಣ್ಣ ಕೇವಲ ಟಪಾಲು ಬಟವಾಡೆಯ ವೃತ್ತಿಯವನಾಗಿರುವುದಿಲ್ಲ. ಮದುವೆ, ಹೆರಿಗೆ, ಫಲಿತಾಂಶ, ಕೋರ್ಟು ವಾರಂಟು, ಸಾವು, ರೋಗ, ವೃದ್ಧಾಪ್ಯವೇತನ ಎಲ್ಲವನ್ನೂ ಮನೆಮನೆಗೆ ಹಂಚುವ ಅಂತರಂಗದ ಸದಸ್ಯ. ಕಾಗದಗಳ ಕಟ್ಟನ್ನು ಕ್ಯಾರಿಯರಿಗೆ ಸಿಕ್ಕಿಸಿಕೊಂಡು ಬೆವರೊರೆಸಿಕೊಳ್ಳುತ್ತಾ ಸೈಕಲ್ ತುಳಿಯುವ ಈತ ಸಮಾಜದ ಚಲನಶೀಲ ಬಂಧು.
ತಾಲ್ಲೂಕಿನ ಹನುಮಂತಪುರದ ವಾಸಿ ಎಚ್.ಕೆ.ರಮೇಶ್ ಇಂಥ ಚಲನಶೀಲ ಪೋಸ್ಟ್‌ಮ್ಯಾನ್‌ಗಳಲ್ಲೊಬ್ಬರು. ತಾಲ್ಲೂಕಿನ ಕುಂದಲಗುರ್ಕಿ ಗ್ರಾಮದಲ್ಲಿ ಅವರು ಹೆಸರಿಗಷ್ಟೇ ಬ್ರಾಂಚ್ ಪೋಸ್ಟ್ ಮಾಸ್ಟರ್. ಆದರೆ ಟಪಾಲು ಸ್ವೀಕಾರ, ಠಸ್ಸೆ ಹೊಡೆಯುವುದು, ರವಾನೆ, ಹಂಚಿಕೆ ಎಲ್ಲವೂ ಅವರೇ ಮಾಡಬೇಕು. ಜೊತೆಯಲ್ಲಿ ಕವರ್, ಕಾರ್ಡ್, ಸ್ಟಾಂಪ್, ಎಸ್‌ಬಿ, ಆರ್‌ಡಿ, ಪಿಎಲ್‌ಐ, ಎಂಓ, ಸ್ಪೀಡ್‌ಪೋಸ್ಟ್, ರಿಜಿಸ್ಟರ್‌ಪೋಸ್ಟ್ ಕೂಡ ನಿರ್ವಹಿಸಿ ಲೆಕ್ಕ ಪತ್ರಗಳ ಸಮೇತ ಬ್ಯಾಗ್ ತಯಾರಿಸಬೇಕು.
ಒಂದು ಲಕ್ಷ ಪೋಸ್ಟ್ ಕಚೇರಿಗಳು ಸ್ಥಾಪನೆಯಾದ ಸವಿನೆನಪಿಗೆ 1968 ರಲ್ಲಿ ಬಿಡುಗಡೆಯಾದ ಅಂಚೆ ಲಕೋಟೆ.ಅವರ ಕಾರ್ಯವ್ಯಾಪ್ತಿಗೆ ಕುಂದಲಗುರ್ಕಿ, ದೊಡ್ಡದಾಸೇನಹಳ್ಳಿ, ಚಿಕ್ಕದಾಸೇನಹಳ್ಳಿ, ಚಿಕ್ಕಪಾಪನಹಳ್ಳಿ, ಬಸವನಪರ್ತಿ, ಗೊಲ್ಲಹಳ್ಳಿ, ಸಿದ್ದಾಪುರ, ಗಂಗಾಪುರ ಮತ್ತು ರೊಪ್ಪಾರ್‍ಲಹಳ್ಳಿ ಬರುತ್ತವೆ. ಬೆಳಿಗ್ಗೆ ಶಿಡ್ಲಘಟ್ಟದ ಕಚೇರಿಯಲ್ಲಿ ಟಪಾಲುಗಳನ್ನು ಪಡೆದು ಕುಂದಲಗುರ್ಕಿಗೆ ಹೋಗಿ ಅಲ್ಲಿಂದ ಸೈಕಲ್ ಏರಿ ತಮ್ಮ ೧೦ ಕಿಮೀ ವ್ಯಾಪ್ತಿಯ ಹಳ್ಳಿಗಳಿಗೆ ತೆರಳಿ ಪತ್ರ ರವಾನಿಸಬೇಕು.
ಭಾರತೀಯ ಅಂಚೆಯು 150 ವರ್ಷ ಪೂರೈಸಿದ ನೆನಪಿಗಾಗಿ 2008ರಲ್ಲಿ ಬಿಡುಗಡೆಯಾದ ಅಂಚೆ ಲಕೋಟೆ.‘೩೦೦ ರೂಗಳಿಗೆ ಒಪ್ಪಂದದ ಮೇರೆಗೆ ೧೯೮೬ರಲ್ಲಿ ಕೆಲಸಕ್ಕೆ ಸೇರಿದೆ. ಈಗ ೩,೦೦೦ ರೂ ಸಂಬಳ ಬರುತ್ತಿದೆ. ತಾತ್ಕಾಲಿಕವಾಗಿ ನೇಮಿಸಿರುವುದರಿಂದ ಇತರೆ ಯಾವುದೇ ಸೌಲಭ್ಯವಿಲ್ಲ. ಅನೇಕ ಮುಷ್ಕರಗಳು ದೇಶದಾದ್ಯಂತ ನಡೆದರೂ ಪರಿಣಾಮಕಾರಿ ಬದಲಾವಣೆಗಳಾಗಿಲ್ಲ. ಮೊಬೈಲ್ ಬಳಕೆಯಿಂದಾಗಿ ಇತ್ತೀಚೆಗೆ ಟೆಲಿಗ್ರಾಂ ಮತ್ತು ಕ್ಷೇಮಸಮಾಚಾರದ ಪತ್ರಗಳು ಕಡಿಮೆಯಾಗಿವೆಯಷ್ಟೆ’ ಎಂದು ರಮೇಶ್ ಹೇಳಿದರು.
ಅಂಚೆಯಣ್ಣನ ಜ್ಞಾಪಕಾರ್ಥವಾಗಿ 1977ರಲ್ಲಿ ಬಿಡುಗಡೆಯಾದ 25 ಪೈಸೆ ಮುಖಬೆಲೆಯ ಅಂಚೆಚೀಟಿ.‘ಒಮ್ಮೆ ದೊಡ್ಡದಾಸೇನಹಳ್ಳಿಯ ಶಶಿಕಲಾ ಮತ್ತು ಮಂಜುನಾಥ್ ಎಂಬುವವರಿಗೆ ರಿಜಿಸ್ಟರ್‌ಪೋಸ್ಟ್ ಬಂದಿತ್ತು. ಮಧ್ಯಾಹ್ನ ಟಪಾಲು ಪಡೆದು ಹೋಗಿ ಅವರಿಗೆ ತಲುಪಿಸುವಷ್ಟರಲ್ಲಿ ಸಂಜೆಯಾಗಿತ್ತು. ಮಾರನೇ ದಿನವೇ ಅವರಿಗೆ ಸಂದರ್ಶನವಿತ್ತು. ಇಬ್ಬರೂ ಈಗ ಸಾರಿಗೆ ನಿರ್ವಾಹಕರು. ಅವರು ಸಿಕ್ಕಾಗೆಲ್ಲಾ ನನ್ನ ಕೆಲಸವನ್ನು ಹೊಗಳುವರು’ ಎಂದು ತನ್ನೆಲ್ಲಾ ಕಷ್ಟಗಳ ನಡುವೆಯೂ ನಡೆದಿರುವ ಸಂತಸದ ಸಂಗತಿಯನ್ನು ಅವರು ವಿವರಿಸುತ್ತಾರೆ.
ಶಿಡ್ಲಘಟ್ಟ ತಾಲ್ಲೂಕಿನ ಹನುಮಂತಪುರದ ವಾಸಿ ಎಚ್.ಕೆ.ರಮೇಶ್ ಹಳ್ಳಿಹಳ್ಳಿ ತಿರುಗಿ ಪತ್ರ ರವಾನಿಸುವುದು.‘ಹತ್ತಾರು ಕಿಮೀ ಸೈಕಲ್ ತುಳಿದು ಹಳ್ಳಿ ಹಳ್ಳಿಗೂ ಪತ್ರ ರವಾನಿಸಿ ಹಿಂತಿರುಗಿ ಬರುವಷ್ಟರಲ್ಲಿ ಕತ್ತಲಾಗಿರುತ್ತದೆ. ಊರಿಗೆ ಬರುವ ಬಸ್ ತಪ್ಪಿದರೆ ಸರಹೊದ್ದಿನಲ್ಲಿ ಹಳ್ಳಿಯಲ್ಲಿರುವ ಮನೆಗೆ ನಡೆದು ಬರಬೇಕು. ಅವರ ಕಷ್ಟ ನೋಡಿದರೆ ಯಾರಿಗೂ ಈ ವೃತ್ತಿ ಕೈಗೊಳ್ಳಲು ಇಷ್ಟವಾಗದು. ಸರ್ಕಾರ ಇಂಥವರಿಗೆ ಕಚೇರಿಯಲ್ಲಿ ಕೆಲಸ ಮಾಡುವವರಿಗೆ ಕೊಡುವ ಸೌಲಭ್ಯಗಳನ್ನೇ ನೀಡಬೇಕು’ ಎನ್ನುತ್ತಾರೆ ಹನುಮಂತಪುರದ ನಾಗಭೂಷಣ್.
–ಡಿ.ಜಿ.ಮಲ್ಲಿಕಾರ್ಜುನ

error: Content is protected !!