ಶಿಡ್ಲಘಟ್ಟ ತಾಲ್ಲೂಕಿನ ಮೇಲೂರು ಗ್ರಾಮದ ಗಂಗಾದೇವಿ ದೇವಾಲಯದಲ್ಲಿ ಗುರುವಾರ ಪೂಜೆ ಸಲ್ಲಿಸಿ ಶಾಶ್ವತ ನೀರಾವರಿ ಹೋರಾಟ ಸಮಿತಿಯ ಪದಾಧಿಕಾರಿಗಳು ತಾಲ್ಲೂಕಿನಲ್ಲಿ ಪ್ರತಿ ಪಂಚಾಯತಿಯಲ್ಲೂ ನಡೆಸುವ ಜಾಥಾ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು. ಜಿಲ್ಲಾ ರೈತ ಸಂಘದ ಅಧ್ಯಕ್ಷ ಭಕ್ತರಹಳ್ಳಿ ಬೈರೇಗೌಡ, ರೇಷ್ಮೆ ಹಿತರಕ್ಷಣಾ ಸಮಿತಿಯ ಜಿಲ್ಲಾ ಕಾರ್ಯದರ್ಶಿ ಮಳ್ಳೂರು ಹರೀಶ್, ಆರ್.ಎ.ಉಮೇಶ್, ನಾಗರಾಜು, ಸೂರ್ಯನಾರಾಯಣಗೌಡ, ಧರ್ಮೇಂದ್ರಕುಮಾರ್, ಜಿ.ಎನ್.ಶ್ರೀನಿವಾಸ್, ಗೋಪಾಲ್, ಶ್ರೀನಿವಾಸಮೂರ್ತಿ, ಅಶ್ವಥ್ಥಪ್ಪ ಹಾಜರಿದ್ದರು.
ಸಗಟೂರಿನಲ್ಲಿ ಗಾಂಧೀಜಿ, ಶಾಸ್ತ್ರೀಜಿ, ವಿ.ಸೀತಾರಾಮಯ್ಯ ಜಯಂತಿ ಆಚರಣೆ
ಕನ್ನಡ ಸಾರಸ್ವತ ಲೋಕಕ್ಕೆ ವಿ.ಸೀತಾರಾಮಯ್ಯನವರು ೩೦ ಕ್ಕೂ ಹೆಚ್ಚು ಕೃತಿಗಳನ್ನು ಕೊಡುಗೆಯಾಗಿ ನೀಡಿದ್ದು, ನಿರಂತರ ನಾಡು-ನುಡಿಯ ಸೇವೆಯನ್ನು ಗುರಿಯಾಗಿಸಿಕೊಂಡಿದ್ದರು ಎಂದು ತಾಲ್ಲೂಕು ಪ್ರೌಢಶಾಲಾ ಸಹಶಿಕ್ಷಕರ ಸಂಘದ ಸಹಕಾರ್ಯದರ್ಶಿ ಎಚ್.ಎಸ್.ರುದ್ರೇಶಮೂರ್ತಿ ಅಭಿಪ್ರಾಯಪಟ್ಟರು.
ತಾಲ್ಲೂಕಿನ ಸುಗಟೂರು ಗ್ರಾಮದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಜೆ.ವೆಂಕಟಾಪುರ ಗ್ರಾಮಪಂಚಾಯಿತಿ ಸಹಯೋಗದಲ್ಲಿ ಗುರುವಾರ ಹಮ್ಮಿಕೊಳ್ಳಲಾಗಿದ್ದ ಗಾಂಧಿಜಯಂತಿ, ಲಾಲ್‌ಬಹದ್ದೂರ್ ಶಾಸ್ತ್ರೀ ಮತ್ತು ವಿ ಸೀತಾರಾಮಯ್ಯ ಜಯಂತಿ ಹಾಗೂ ಸ್ವಚ್ಚ ಭಾರತ್ ಆಂದೋಲನದ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಅವರು ಮಾತನಾಡಿದರು.
ಸ್ವಾತಂತ್ರ್ಯಾನಂತರದಲ್ಲಿ ದೇಶ ಎದುರಿಸಿದ ಗಡಿವಿವಾದಗಳಂತಹ ಗಂಭೀರ ಸಮಸ್ಯೆಗಳನ್ನು ಸಮರ್ಥವಾಗಿ ಎದುರಿಸಿ ದೇಶಸೇವೆಯಲ್ಲಿಯೇ ತನುನೀಗಿದ ಲಾಲ್‌ಬಹದ್ದೂರ್ ಶಾಸ್ತ್ರೀಜಿಯವರ ಜೀವನಾದರ್ಶಗಳು ಅನುಕರಣೀಯ ಎಂದು ಅವರು ವಿವರಿಸಿದರು.
ಶಿಕ್ಷಕ ಎ.ಬಿ.ನಾಗರಾಜು ಅವರು ಗಾಂಧಿಜೀವನ ಕುರಿತು ಮಾತನಾಡಿದರು. ಶಿಕ್ಷಕ ಎಂ.ಎಂ.ಜಗದೀಶ್ ಅವರು ನೈರ್ಮಲ್ಯ ಕುರಿತು ಮಾತನಾಡಿದರು.
ಗ್ರಾಮದಲ್ಲಿ ಸ್ವಚ್ಚಭಾರತ್ ಅಭಿಯಾನ ಜಾಗೃತಿ ಜಾಥಾ ನಡೆಯಿತು. ಕಲ್ಲೇಶ್ವರ ಸ್ವಾಮಿ ದೇವಾಯದ ಆವರಣದಲ್ಲಿ ಸ್ವಚ್ಚ ಮಾಡುವ ಮೂಲಕ ಆಂದೋಲನಕ್ಕೆ ಚಾಲನೆ ನೀಡಲಾಯಿತು.
ಎಸ್‌ಡಿಎಂಸಿ ಅಧ್ಯಕ್ಷ ಎಸ್.ಆರ್.ನಾಗೇಶ್, ಜೆ.ವೆಂಕಟಾಪುರ ಗ್ರಾಮಪಂಚಾಯತಿ ಅಧ್ಯಕ್ಷೆ ಜಿ.ಭಾಗ್ಯಮ್ಮ, ಸದಸ್ಯ ಎನ್.ಅಶ್ವತ್ಥಪ್ಪ, ಚಂದ್ರೇಗೌಡ, ಶಿವಶಂಕರಪ್ಪ, ಪಂಚಾಯತಿ ಅಭಿವೃದ್ಧಿ ಅಧಿಕಾರಿ ಎಂ.ಕೆ.ಕಾತ್ಯಾಯಿನಿ, ಎಂ.ದೇವರಾಜು, ಮುಖ್ಯಶಿಕ್ಷಕ ವಿ.ಎನ್.ಗೋಪಾಲಕೃಷ್ಣಯ್ಯ, ಶಿಕ್ಷಕ ಬಿ.ನಾಗರಾಜು, ಎಚ್.ತಾಜೂನ್ ಮತ್ತಿತರರು ಈ ಸಂದರ್ಭದಲ್ಲಿ ಹಾಜರಿದ್ದರು.
[images cols=”three” lightbox=”true”]
[image link=”1862″ image=”1862″]
[image link=”1863″ image=”1863″]
[image link=”1864″ image=”1864″]
[/images]
ಗಾಂಧಿಜಯಂತಿ ಹಾಗೂ ಲಾಲ್‌ಬಹಾದ್ದೂರ್ ಶಾಸ್ತ್ರಿ ಜನ್ಮದಿನದ ಪ್ರಯುಕ್ತ ಭಾವಚಿತ್ರ ಕೊಡುಗೆ
ಶಿಡ್ಲಘಟ್ಟದ ಗರುಡಾದ್ರಿ ವಿದ್ಯಾಸಂಸ್ಥೆಯವರು ಗಾಂಧಿಜಯಂತಿ ಹಾಗೂ ಲಾಲ್‌ಬಹಾದ್ದೂರ್ ಶಾಸ್ತ್ರಿ ಜನ್ಮದಿನದ ಪ್ರಯುಕ್ತ ಪುರಸಭೆ, ಕ್ಷೇತ್ರ ಶಿಕ್ಷಣಾಧಿಕಾರಿ ಕಚೇರಿ, ಪೊಲೀಸ್ ಠಾಣೆಗಳು ಮತ್ತು ತಾಲ್ಲೂಕು ಕಚೇರಿಗಳಿಗೆ ಮಹಾತ್ಮಾ ಗಾಂಧೀಜಿ ಮತ್ತು ಲಾಲ್‌ಬಹಾದ್ದೂರ್ ಶಾಸ್ತ್ರಿ ಅವರ ಭಾವಚಿತ್ರಗಳನ್ನು ಕೊಡುಗೆಯಾಗಿ ನೀಡಿದರು.
ಸ್ವಚ್ಛತೆಯಿಂದ ಆರೋಗ್ಯ, ಆದಾಯ ಮತ್ತು ನೆಮ್ಮದಿ – ಶಾಸಕ ಎಂ.ರಾಜಣ್ಣ
ಮಕ್ಕಳು ಶೌಚಾಲಯ ನಿರ್ಮಿಸುವಂತೆ ಪೋಷಕರನ್ನು ಒತ್ತಾಯಿಸುವಂತೆ ಶಿಕ್ಷಕರು ಪ್ರೇರೇಪಿಸಬೇಕು. ಸ್ವಚ್ಛತೆಯಿಂದ ಆರೋಗ್ಯ, ಆದಾಯ ಮತ್ತು ನೆಮ್ಮದಿ ಎಂಬ ಮನಸ್ಥಿತಿ ಎಲ್ಲರಲ್ಲೂ ಮನೆಮಾಡಬೇಕು ಎಂದು ಶಾಸಕ ಎಂ.ರಾಜಣ್ಣ ಅಭಿಪ್ರಾಯಪಟ್ಟರು.
ತಾಲ್ಲೂಕಿನ ದಿಬ್ಬೂರಹಳ್ಳಿ ಗ್ರಾಮ ಪಂಚಾಯತಿ ಆವರಣದಲ್ಲಿ ಗುರುವಾರ ಗಾಂಧಿಜಯಂತಿ ಪ್ರಯುಕ್ತ ‘ಸ್ವಚ್ಛ ಭಾರತ ಅಭಿಯಾನ’ ಉದ್ಘಾಟಿಸಿ ಅವರು ಮಾತನಾಡಿದರು. ಕಸವನ್ನು ಚರಂಡಿ, ರಸ್ತೆ ಬದಿ ಹಾಗೂ ಎಲ್ಲೆಂದರಲ್ಲಿ ಹಾಕಬಾರದು. ಮಕ್ಕಳಲ್ಲಿ ಸ್ವಚ್ಛತೆಯ ಬಗ್ಗೆ ಅರಿವು ಮೂಡಿಸಬೇಕು. ನೀವಿರುವ ಸ್ಥಳ ಸ್ವಚ್ಛವಾಗಿರಲಿ. ಪ್ಲಾಸ್ಟಿಕ್ ಬಳಸುವುದನ್ನು ಕಡಿಮೆ ಮಾಡಿ. ನಮ್ಮ ಮನೆ ಮಾತ್ರ ಸ್ವಚ್ಛವಾಗಿದ್ದರೆ ಸಾಕು ಎಂಬ ಮನಸ್ಥಿತಿ ಬಿಡಬೇಕು. ಕೆರೆ ಅಥವಾ ನೀರಿನ ಮೂಲಗಳಿಗೆ ತ್ಯಾಜ್ಯ ಸೇರದಂತೆ ಎಚ್ಚರವಹಿಸಿ. ಮನೆಯ ಶೌಚಾಲಯದಂತೆ ಸಾರ್ವಜನಿಕ ಶೌಚಾಲಯವನ್ನು ಬಳಸಿ. ಸ್ವಚ್ಛ ಭಾರತ ನಿರ್ಮಾಣ ಸರ್ಕಾರಿ ಕಾರ್ಯಕ್ರಮವಲ್ಲ ನಮ್ಮ ಸ್ವಂತ ಕೆಲಸ ಎಂದು ಭಾವಿಸಿ ಎಂದು ಹೇಳಿದರು.
ಜಿಲ್ಲಾ ಯೋಜನಾಧಿಕಾರಿ ರಾಮಕೃಷ್ಣಪ್ಪ ಮಾತನಾಡಿ, ವಾರಕ್ಕೆರಡು ಗಂಟೆಯಂತೆ ವರ್ಷಕ್ಕೆ ನೂರು ಗಂಟೆಗಳ ಅವಧಿಯನ್ನು ಸಾರ್ವಜನಿಕರು ಶ್ರಮದಾನಕ್ಕೆ ಮೀಸಲಿಡಬೇಕು. ಪಂಚಾಯತಿ ವ್ಯಾಪ್ತಿಯಲ್ಲಿ ಸಭೆ ಕರೆದು ಸ್ವಚ್ಛತಾ ಆಂದೋಲನದ ಬಗ್ಗೆ ಅರಿವು ಮೂಡಿಸಿ ಗಾಂಧೀಜಿಯವರ ಆದರ್ಶವನ್ನು ಸಾಕಾರಗೊಳಿಸಬೇಕು.
ದಿಬ್ಬೂರಹಳ್ಳಿಯ ಬೀದಿಗಳಲ್ಲಿ ಕಸ ಗುಡಿಸುವ ಮೂಲಕ ಜನಪ್ರತಿನಿಧಿಗಳು, ಅಧಿಕಾರಿಗಳು ಮತ್ತು ವಿದ್ಯಾರ್ಥಿಗಳು ಸ್ವಚ್ಛ ಭಾರತ ಅಭಿಯಾನಕ್ಕೆ ಚಾಲನೆ ನೀಡಿದರು.
ತಹಶೀಲ್ದಾರ್ ಜಿ.ಎ.ನಾರಾಯಣಸ್ವಾಮಿ, ದಿಬ್ಬೂರಹಳ್ಳಿ ಪಂಚಾಯತಿ ಅಧ್ಯಕ್ಷ ಧನಂಜಯರೆಡ್ಡಿ, ಪ್ರಭಾರಿ ಕಾರ್ಯನಿರ್ವಾಹಣಾಧಿಕಾರಿ ಗಣಪತಿ ಸಾಕರೆ, ಕ್ಷೇತ್ರ ಶಿಕ್ಷಣಾಧಿಕಾರಿ ರಘುನಾಥರೆಡ್ಡಿ ಮತ್ತಿತರರು ಈ ಸಂದರ್ಭದಲ್ಲಿ ಹಾಜರಿದ್ದರು.
ವರದನಾಯಕನಹಳ್ಳಿಯ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲಾ ಆವರಣದಲ್ಲಿ ಸ್ವಚ್ಛತೆ
ತಾಲ್ಲೂಕಿನ ವರದನಾಯಕನಹಳ್ಳಿಯ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಗುರುವಾರ ಗಾಂಧಿ ಜಯಂತಿ ಪ್ರಯುಕ್ತ ಶಾಲಾ ಆವರಣದಲ್ಲಿ ಸ್ವಚ್ಛತಾ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿತ್ತು.
ವಿದ್ಯಾರ್ಥಿಗಳು ತಮ್ಮ ಮನೆಗಳಿಂದ ತಂದಿದ್ದ ಚನಿಕೆ, ಗುದ್ದಲಿ. ವರಾರಿ, ಕೊಡಲಿ ಮುಂತಾದ ಪರಿಕರಗಳಿಂದ ಶಾಲಾ ಆವರಣದ ಕಳ್ಳಿ ಮುಳ್ಳುಗಳನ್ನು ತೆಗೆದರು. ಇತ್ತೀಚೆಗಷ್ಟೆ ವಿಜನ್ ಗ್ರೀನ್ ಸಂಸ್ಥೆಯ ಸಹಯೋಗದೊಂದಿಗೆ ನೆಟ್ಟಿದ್ದ ನೂರು ಗಿಡಗಳ ಅಡಿಯಲ್ಲಿ ಪಾತಿ ಮಾಡಿದರು. ಹನಿನೀರಾವರಿ ಪೈಪುಗಳನ್ನು ಅಳವಡಿಸಿದರು. ಗಿಡಗಳಿಗೆ ಔಷಧಿಯನ್ನು ಸಿಂಪಡಿಸಿದರು. ವಿದ್ಯಾರ್ಥಿಗಳೊಂದಿಗೆ ಶಾಲಾ ಸಿಬ್ಬಂದಿ, ಅಂಗನವಾಡಿ, ಸಿಬ್ಬಂದಿ, ಶಾಲಾಭಿವೃದ್ಧಿ ಸಮಿತಿ ಸದಸ್ಯರು ಸ್ವಚ್ಛತಾ ಅಭಿಯಾನದಲ್ಲಿ ಭಾಗವಹಿಸಿದ್ದರು.
ವಿದ್ಯಾರ್ಥಿಗಳು ಗಾಂಧೀಜಿ ಮತ್ತು ಲಾಲ್‌ಬಹಾದ್ದೂರ್ ಶಾಸ್ತ್ರಿ ಕುರಿತಂತೆ ಮಾತನಾಡಿದರು.
ಸ್ವಾವಲಂಬನೆ ಜೀವನ ನಡೆಸಿ – ಅಸಿಸ್ಟೆಂಟ್ ಸಬ್‌ಇನ್ಸ್‌ಪೆಕ್ಟರ್ ನಂಜುಂಡಪ್ಪ
ಸ್ವಾವಲಂಬನೆ ಜೀವನ ನಡೆಸಲು ವಿವಿಧ ಯೋಜನೆಗಳು ಅಭ್ಯವಿದ್ದು ಸದುಪಯೋಗಪಡಿಸಿಕೊಳ್ಳುವಂತೆ ದಿಬ್ಬೂರಹಳ್ಳಿ ಪೋಲೀಸ್ ಠಾಣೆಯ ಅಸಿಸ್ಟೆಂಟ್ ಸಬ್‌ಇನ್ಸ್‌ಪೆಕ್ಟರ್ ನಂಜುಂಡಪ್ಪ ಹೇಳಿದರು.
ತಾಲ್ಲೂಕಿನ ದಿಬ್ಬೂರಹಳ್ಳಿ ಗ್ರಾಮ ಪಂಚಾಯತಿ ಆವರಣದಲ್ಲಿ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ವತಿಯಿಂದ ಏರ್ಪಡಿಸಲಾಗಿದ್ದ ಗ್ರಾಮ ಸಮಾಲೋಚನಾ ಸಭೆಯ ಉದ್ಘಾಟನೆ ನೆರವೇರಿಸಿ ಅವರು ಮಾತನಾಡಿದರು.
ಯಾವುದೇ ವ್ಯಕ್ತಿ ಬದುಕಿನಲ್ಲಿ ಉತ್ತಮ ಶಿಕ್ಷಣ, ಹಿರಿಯರ ಮಾರ್ಗದರ್ಶನ ಹಾಗೂ ಶಿಸ್ತು ಅಳವಡಿಸಿಕೊಂಡಲ್ಲಿ ಮಾತ್ರ ಸಮಾಜದಲ್ಲಿ ಉತ್ತಮ ಜೀವನ ನಡೆಸಬಹುದು ಎಂದರು.
ಯೋಜನಾಧಿಕಾರಿ ಬಿ.ಆರ್.ಯೋಗೀಶ್ ಮಾತನಾಡಿ, ಗ್ರಾಮೀಣ ಪ್ರದೇಶದ ಜನತೆಗೆ ಉದ್ಯೋಗಾವಕಾಶ ಕಲ್ಪಿಸುವ ನಿಟ್ಟಿನಲ್ಲಿ ಮಹಿಳಾ ಗುಂಪುಗಳನ್ನು ರಚಿಸಿ ಅವರಿಗೆ ಟೈಲರಿಂಗ್, ಪ್ರಸೂತಿ ತರಬೇತಿ ನೀಡಿ ಮಹಿಳೆಯರನ್ನು ಆರ್ಥಿಕವಾಗಿ ಸಬಲರನ್ನಾಗಿಸುವ ನಿಟ್ಟಿನಲ್ಲಿ ಯೋಜನೆಗಳನ್ನು ಸಂಸ್ಥೆಯ ವತಿಯಿಂದ ರೂಪಿಸಲಾಗುವುದು ಎಂದು ತಿಳಿಸಿದರು.
ಸಾದಲಿ ವಲಯದ ಮೇಲ್ವಿಚಾರಕ ಗಣೇಶ್, ತಾಲ್ಲೂಕು ಪಂಚಾಯತಿ ಉಪಾಧ್ಯಕ್ಷ ಡಿ.ಎಸ್.ರಾಜಣ್ಣ, ಗ್ರಾಮ ಪಂಚಾಯತಿ ಸದಸ್ಯರಾದ ಎಚ್.ಮಂಜುನಾಥ, ಡಿ.ಸಿ.ರಾಮಚಂದ್ರ, ಗ್ರಾಮದ ಹಿರಿಯ ಬಿ.ಚಿಕ್ಕಪ್ಪಯ್ಯ, ಮತ್ತಿತರರು ಈ ಸಂದರ್ಭದಲ್ಲಿ ಹಾಜರಿದ್ದರು.
ಆರೋಗ್ಯವಂತ ಪರಿಸರ ಸೃಷ್ಠಿಸಿ – ಗ್ರಾಮ ಪಂಚಾಯತಿಯ ಮಾಜಿ ಅಧ್ಯಕ್ಷ ಕೆ.ಮಂಜುನಾಥ್
ಆರೋಗ್ಯವಂತ ಪರಿಸರಕ್ಕಾಗಿ ಸ್ವಚ್ಛತೆ ಹಾಗೂ ಶೇಕಡಾ ನೂರರಷ್ಟು ಶೌಚಾಲಯವನ್ನು ಹೊಂದುವುದು ಅತ್ಯವಶ್ಯ ಎಂದು ಗ್ರಾಮ ಪಂಚಾಯತಿಯ ಮಾಜಿ ಅಧ್ಯಕ್ಷ ಕೆ.ಮಂಜುನಾಥ್ ತಿಳಿಸಿದರು.
ತಾಲ್ಲೂಕಿನ ಮೇಲೂರು ಗ್ರಾಮದ ಪಂಚಾಯತಿ ಕಚೇರಿಯಲ್ಲಿ ಸೋಮವಾರ ನಡೆದ ಗ್ರಾಮ ಸಭೆಯಲ್ಲಿ ಅವರು ಮಾತನಾಡಿದರು. ನೈರ್ಮಲ್ಯತೆಗೆ ಆದ್ಯತೆ ನೀಡುವುದರಿಂದ ಸ್ವಚ್ಛ ಶುಭ್ರ ಆರೋಗ್ಯಪೂರ್ಣ ಗ್ರಾಮಗಳಾಗುತ್ತವೆ, ಇತರರಿಗೆ ಮಾದರಿಯಾಗುತ್ತದೆ ಎಂದು ಹೇಳಿದರು.
ನೋಡೆಲ್ ಅಧಿಕಾರಿ ಗುರುಬಸಪ್ಪ ಮಾತನಾಡಿ ನರೇಗಾ ಯೋಜನೆಯಲ್ಲಿ ಸಿಸಿ ರಸ್ತೆಗಳನ್ನು ಮಾಡಬಹುದಾಗಿದೆ ಎಂದು ವಿವರಿಸಿದರು.
ಪ್ರಭಾರ ಅಭಿವೃದ್ಧಿ ಅಧಿಕಾರಿ ಸಿದ್ದಣ್ಣ, ಲೆಕ್ಕ ಪರಿಶೋಧಕ ಶ್ರೀನಿವಾಸ್, ಗ್ರಾಮ ಪಂಚಾಯತಿ ಅಧ್ಯಕ್ಷೆ ಮುನಿರತ್ನಮ್ಮ ತಿರುಮಳೇಶ್, ಸದಸ್ಯರಾದ ಮುನಿಕೃಷ್ಣಪ್ಪ, ರೂಪೇಶ್, ಸ್ಮಿತಾ ಸುರೇಶ್, ಕೃಷ್ಣಮ್ಮ ನಾಗರಾಜ ಮತ್ತಿತರರು ಸಭೆಯಲ್ಲಿ ಹಾಜರಿದ್ದರು.
ಜಮ್ನಾಪರಿ ತಳಿ ಮೇಕೆ ಜೋಡಿಗೆ ಒಂದು ಲಕ್ಷ ರೂಪಾಯಿ
ಇಪ್ಪತ್ತೈದು ಸಾವಿರ ರೂಪಾಯಿಗಳ ಬಂಡವಾಳ ಹೂಡಿ ಒಂದು ವರ್ಷವಾಗಿದೆಯಷ್ಟೆ. ಈಗ ಅದು ಒಂದು ಲಕ್ಷ ರೂಪಾಯಿಗಳ ಆದಾಯ ತರುತ್ತಿದೆ. ಇದು ಯಾವುದೇ ಶೇರ್ ಮಾರ್ಕೆಟ್ ವ್ಯವಹಾರವಲ್ಲ. ತಾಲ್ಲೂಕಿನ ತಲದುಮ್ಮನಹಳ್ಳಿಯ ರೈತ ಟಿ.ಆರ್.ವೆಂಕಟೇಶ್ ಅವರು ಸಾಕಿರುವ ಮೇಕೆಗಳ ಬೆಲೆಯಿದು.
ಕಳೆದ ವರ್ಷ ಹಿಂಡಿಗನಾಳ ಸಂತೆಯಲ್ಲಿ 25 ಸಾವಿರ ರೂಗಳು ಕೊಟ್ಟು ಜಮ್ನಾಪರಿ ತಳಿಯ ಎರಡು ಮೇಕೆಗಳನ್ನು ತಂದಿದ್ದ ವೆಂಕಟೇಶ್ ಒಂದು ವರ್ಷದ ತರುವಾಯ ಒಂದು ಲಕ್ಷ ರೂಗಳಿಗೆ ಮಾರಾಟ ಮಾಡಿದ್ದಾರೆ. ರೈತರು ಸಂಕಷ್ಟದಲ್ಲಿರುವ ಹೊತ್ತಿನಲ್ಲಿ ಹೊಸ ಆಶಾಕಿರಣದಂತೆ ಉಪಕಸುಬಿನಲ್ಲೂ ಹಣ ಸಂಪಾದಿಸಬಹುದೆಂದು ತೋರಿಸಿಕೊಟ್ಟಿದ್ದಾರೆ.
ಜಮ್ನಾಪರಿ ತಳಿಯು ನಮ್ಮ ದೇಶೀ ತಳಿಯಾಗಿದ್ದು, ಜಮುನಾ ನದಿ ದಂಡೆಯ ಪಶ್ಚಿಮ ಬಂಗಾಳ ಹಾಗೂ ಬಾಂಗ್ಲಾದೇಶದಲ್ಲಿ ಕಂಡು ಬರುತ್ತಿದ್ದುದರಿಂದ ಜಮ್ನಾಪರಿ ಎಂಬ ಹೆಸರು ಬಂದಿದೆ. ಹೆಚ್ಚಾಗಿ ಹಾಲು ಮತ್ತು ಮಾಂಸಕ್ಕಾಗಿಯೇ ಇವನ್ನು ಸಾಕಲಾಗುತ್ತದೆ. ಉದ್ದವಾದ ಜೋಲು ಕಿವಿಗಳು ಮತ್ತು ಕೊಂಬುಗಳು ಜಮ್ನಾಪುರಿ ಮೇಕೆಗಳ ವಿಶಿಷ್ಠ ಲಕ್ಷಣಗಳು.
ತಲದುಮ್ಮನಹಳ್ಳಿಯ ರೈತ ಟಿ.ಆರ್.ವೆಂಕಟೇಶ್‌ಅವರು ಸಾಕಿರುವ ಒಂದು ಮೇಕೆ 111 ಕೆಜಿ ಇದ್ದರೆ ಮತ್ತೊಂದು 120 ಕೆಜಿ ಭಾರವಿದೆ. ಅವರು ಚಳ್ಳಕೆರೆ ಕುರಿಗಳನ್ನೂ ಸಾಕಿದ್ದು, ಬಕ್ರಿದ್ ಹಬ್ಬದ ಆಸುಪಾಸಿನಲ್ಲಿ ಅಧಿಕ ಬೆಲೆಗೆ ಮಾರಾಟವಾಗುತ್ತಿವೆ.
‘ನಾಟಿ ಕುರಿ ಅಥವಾ ಮೇಕೆಯನ್ನು ಸಾಕಿದರೆ 30 ರಿಂದ 40 ಕೆಜಿ ತೂಕ ಬರಲು ಎರಡರಿಂದ ಎರಡೂವರೆ ವರ್ಷ ಸಾಕಬೇಕಾಗುತ್ತದೆ. ಆದರೆ ಒಂದು ವರ್ಷದ ಜಮ್ನಾಪುರಿ ತಳಿಯನ್ನು ತಂದು ಕೇವಲ ಒಂದು ವರ್ಷ ಸಾಕಿರುವೆ. 100 ರಿಂದ 120 ಕೆಜಿ ತೂಗುತ್ತಿವೆ. ಸೀಮೆಹುಲ್ಲು, ರಾಗಿಹುಲ್ಲು, ಹಿಪ್ಪುನೇರಳೆ ಸೊಪ್ಪಿನ ತ್ಯಾಜ್ಯ, ಮನೆಯಲ್ಲಿ ಉಳಿಯುವ ಅಡುಗೆ ಪದಾರ್ಥಗಳನ್ನಷ್ಟೆ ಹಾಕಿ ಸಾಕಿದ್ದೇವೆ. ಇವಕ್ಕೆ ರೋಗಗಳೂ ಹೆಚ್ಚಾಗಿ ಬರುವುದಿಲ್ಲ. ರೈತರಿಗೆ ಉಪಕಸುಬಿನಂತಿರುವ ಮೇಕೆ ಸಾಕಣೆಯಿಂದಾಗಿ ಆರ್ಥಕ ಸದೃಢರಾಗಬಹುದು. ಮನೆಯಲ್ಲಿ ಕುರಿ, ಮೇಕೆಗಳಿದ್ದರೆ ಎ.ಟಿ.ಎಂ ಇದ್ದಂತೆ’ ಎಂದು ವೆಂಕಟೇಶ್ ತಿಳಿಸಿದರು.
ಸಾಲ ಮರುಪಾವತಿಯಲ್ಲಿ ಮಹಿಳೆಯರು ಮುಂಚೂಣಿಯಲ್ಲಿದ್ದಾರೆ
ದೇಶಾದ್ಯಂತ ಸಾಲ ಮರುಪಾವತಿಯಲ್ಲಿ ಮಹಿಳೆಯರು ಹಾಗೂ ಸ್ತ್ರೀಶಕ್ತಿ ಸಂಘಗಳ ಸದಸ್ಯರು ಮುಂಚೂಣಿಯಲ್ಲಿರುವುದರಿಂದ ಮಹಿಳೆಯರಿಗೆ ಸಾಲ ನೀಡಲೂ ಬ್ಯಾಂಕ್‌ಗಳವರು ಮುಂದೆಬರಬೇಕೆಂದು ಸಂಸದ ಕೆ.ಹೆಚ್.ಮುನಿಯಪ್ಪ ಹೇಳಿದರು. ಮಳ್ಳೂರು ರೇಷ್ಮೆ ಬೆಳೆಗಾರರ ಹಾಗೂ ರೈತರ ಸೇವಾ ಸಹಕಾರ ಸಂಘದ ವತಿಯಿಂದ ಭಕ್ತರಹಳ್ಳಿ ಗ್ರಾಮದ ಸಂಘದ ಶಾಖೆಯ ಆವರಣದಲ್ಲಿ ಭಾನುವಾರ ಏರ್ಪಡಿಸಲಾಗಿದ್ದ ಮಹಿಳಾ ಸ್ವ-ಸಹಾಯ ಗುಂಪುಗಳ ಸಾಲ ಮತ್ತು ಕೆ.ಸಿ.ಸಿ. ಸಾಲ ವಿತರಣಾ ಸಮಾರಂಭದಲ್ಲಿ ೨ಕೋಟಿ ೩೮ ಲಕ್ಷದ ೮೦ ಸಾವಿರ ರೂ ಸಾಲದ ಚೆಕ್ಕುಗಳನ್ನು ವಿತರಣೆ ಮಾಡಿ ಅವರು ಮಾತನಾಡಿದರು.
ಬಡ್ಡಿ ರಹಿತ ಸಾಲಗಳನ್ನು ನಿಗದಿತ ಸಮಯದಲ್ಲಿ ರೈತರು ಮರುಪಾವತಿ ಮಾಡುವುದರೊಂದಿಗೆ ಸಹಕಾರ ಸಂಘಗಳ ಅಭಿವೃದ್ಧಿಗೆ ಸಹಕರಿಸಬೇಕು.ತೀವ್ರ ಮಳೆಯ ಕೊರತೆಯಿಂದಾಗಿ ಕೃಷಿಚಟುವಟಿಕೆಗಳಿಂದ ದೂರವುಳಿದು, ನಗರಪ್ರದೇಶಗಳ ಕಡೆಗೆ ಗುಳೆಹೊರಡುವಂತಹ ಸ್ಥಿತಿಗೆ ಬಂದು ತಲುಪಿರುವ ಈ ಭಾಗದ ಜನತೆಗೆ ಆಶಾಕಿರಣವಾಗಿ ಬಡ್ಡಿರಹಿತ ಸಾಲಗಳನ್ನು ನೀಡಲು ಮುಂದೆ ಬಂದಿರುವ ಕೋಲಾರ-ಚಿಕ್ಕಬಳ್ಳಾಪುರ ಡಿ.ಸಿ.ಸಿ. ಬ್ಯಾಂಕಿನ ಸೇವೆಯನ್ನು ಈ ಭಾಗದ ರೈತರು ಬಳಕೆ ಮಾಡಿಕೊಂಡು ಆರ್ಥಿಕವಾಗಿ ಸಬಲರಾಗಬೇಕು ಎಂದರು. ಈ ಭಾಗದ ಜನತೆಯ ದಶಕಗಳ ಕನಸಾಗಿರುವ ನೀರಾವರಿ ಯೋಜನೆಗಳನ್ನು ಜಾರಿಗೆ ತರಲು ರಾಜ್ಯ ಸರ್ಕಾರ ಅಗತ್ಯವಾಗಿರುವ ಎಲ್ಲಾ ಪ್ರಯತ್ನಗಳನ್ನು ಮಾಡಿದೆ. ಬೆಂಗಳೂರಿನಿಂದ ವ್ಯರ್ಥವಾಗಿ ವರ್ತೂರು ಕೆರೆಗೆ ಹರಿದು ಹೋಗುತ್ತಿರುವ ಕೊಳಚೆ ನೀರನ್ನು ಶುದ್ಧೀಕರಿಸಿ ಕೋಲಾರ- ಚಿಕ್ಕಬಳ್ಳಾಪುರ ಜಿಲ್ಲೆಗಳ ಕೆರೆಗಳಿಗೆ ಹರಿಸಲು ಚಿಂತನೆ ನಡೆಸಿದ್ದು ಈ ಭಾಗದ ಎಲ್ಲಾ ಜನಪ್ರತಿನಿಧಿಗಳು ಸೇರಿದಂತೆ ಅಧಿಕಾರಿಗಳೊಡನೆ ಚರ್ಚಿಸಿ ಆದಷ್ಟು ಬೇಗ ಈ ಭಾಗಕ್ಕೆ ನೀರು ತರಲು ಪ್ರಾಂಮಾಣಿಕವಾಗಿ ಪ್ರಯತ್ನಿಸುತ್ತೇನೆ ಎಂದು ನುಡಿದರು. ಶಾಸಕ ಎಂ.ರಾಜಣ್ಣ ಮಾತನಾಡಿ ಸಹಕಾರಿ ತತ್ವದಡಿಯಲ್ಲಿ ನಡೆಯುತ್ತಿರುವ ಈ ಬ್ಯಾಂಕುಗಳು ಸಕ್ರಿಯವಾಗಿ ಕಾರ್ಯನಿರ್ವಹಿಸುವಂತೆ ಮಾಡಲು ಸ್ಥಳೀಯ ಜನತೆಯ ಹೆಚ್ಚಿನ ಸಹಕಾರ ಅಗತ್ಯವಾಗಿದೆ, ಆಡಳಿತ ಮಂಡಳಿಗಳು ಹೆಚ್ಚು ಕಾಳಜಿಯಿಂದ ಪ್ರಾಮಾಣಿಕವಾಗಿ ಕೆಲಸ ಮಾಡಬೇಕಾಗಿದೆ ಎಂದರು.
ಕೋಲಾರ ಡಿ.ಸಿ.ಸಿ.ಬ್ಯಾಂಕಿನ ಅಧ್ಯಕ್ಷ ಬ್ಯಾಲಹಳ್ಳಿ ಗೋವಿಂದೆಗೌಡ ಮಾತನಾಡಿ ಈ ಭಾಗದ ರೈತರು ಹೂಡಿಕೆ ಮಾಡಿಟ್ಟಿರುವ ಹಣವನ್ನು ಕ್ರೋಡಿಕರಿಸಿ ಉಳಿಕೆ ಮಾಡಿದ ಹಣವನ್ನು ರೈತರು ಸೇರಿದಂತೆ ಸ್ತ್ರೀ ಶಕ್ತಿ ಸ್ವಸಹಾಯ ಸಂಘಗಳಿಗೆ ನೀಡಿ ಅವರನ್ನು ಸ್ವಾವಲಂಬಿಗಳನ್ನಾಗಿ ಮಾಡಲು ಚಿಂತನೆ ನಡೆಸಲಾಗಿದೆ ಎಂದರು. ಈ ಸಂದರ್ಭದಲ್ಲಿ ೧೫ ಮಹಿಳಾ ಸ್ವಸಹಾಯ ಸಂಘಗಳಿಗೆ ೫೫ ಲಕ್ಷ ೬೦ ಸಾವಿರ ರೂ ಸೇರಿದಂತೆ ಕೆಸಿಸಿ ಸಾಲ ೯೨ ಮಂದಿ ಫಲಾನುಭವಿಗಳಿಗೆ ೧ಕೋಟಿ ೮೩ ಲಕ್ಷದ ೨೦ ಸಾವಿರ ಸೇರಿದಂತೆ ಒಟ್ಟು ೨ಕೋಟಿ ೩೮ ಲಕ್ಷದ ೮೦ ಸಾವಿರ ರೂ ಸಾಲದ ಚೆಕ್ಕುಗಳನ್ನು ವಿತರಣೆ ಮಾಡಲಾಯಿತು.
ಮಳ್ಳೂರು ರೇಷ್ಮೆ ಬೆಳೆಗಾರರ ಹಾಗು ರೈತರ ಸೇವಾ ಸಹಕಾರ ಸಂಘದ ಅಧ್ಯಕ್ಷ ಎಸ್.ನಾರಾಯಣಸ್ವಾಮಿ, ಜಿಲ್ಲಾ ಪಂಚಾಯಿತಿ ಸದಸ್ಯರಾದ ಎಸ್.ಎಂ.ನಾರಾಯಣಸ್ವಾಮಿ, ಸತೀಶ್, ಭಕ್ತರಹಳ್ಳಿ ಗ್ರಾಮ ಪಂಚಾಯತಿ ಅಧ್ಯಕ್ಷ ಬಿ.ಎಂ.ಗೋಪಾಲಗೌಡ, ಮುಖಂಡ ಬಿ.ಎನ್.ರವಿಕುಮಾರ್, ಕೆ.ಎಂ. ಜಗದೀಶ್, ಹಾಪ್‌ಕಾಮ್ಸ್ ಮಾಜಿ ಅಧ್ಯಕ್ಷ ಬಿ.ವಿ.ಮುನೇಗೌಡ, ವೆಂಕಟಮೂರ್ತಿ, ಎಸ್.ಎನ್.ವೆಂಕಟೇಶ್, ಸೂರ್ಯನಾರಾಯಣಗೌಡ, ಕಾಳಪ್ಪ, ರಮೇಶ್, ಡಿ.ಸಿ.ಸಿ.ಬ್ಯಾಂಕ್ ನಿರ್ದೇಶಕ ಪಿ.ಶಿವಾರೆಡ್ಡಿ, ಡಿಸಿಸಿ ಬ್ಯಾಂಕ್ ಶಿಡ್ಲಘಟ್ಟ ಶಾಖೆಯ ವ್ಯವಸ್ಥಾಪಕ ಆರ್.ಲಿಂಗರಾಜು, ತಾಲ್ಲೂಕು ಪಂಚಾಯತಿ ಸದಸ್ಯ ವೆಂಕಟೇಶ್, ಸಂಘದ ಮುಖ್ಯಕಾರ್ಯನಿರ್ವಾಹಕ ಅಧಿಕಾರಿ ಎಂ.ಎಸ್.ಮಂಜುನಾಥ್, ಜಿ.ಕೆ.ಪೃಥ್ವೀಶ್ ಮತ್ತಿತರರು ಕಾರ್ಯಕ್ರಮದಲ್ಲಿ ಹಾಜರಿದ್ದರು.
ಶುಲ್ಕ ವಸೂಲಿ ವಿರುದ್ಧ ರೈತರ ಪ್ರತಿಭಟನೆ
ರೇಷ್ಮೆ ಗೂಡಿನ ಮಾರುಕಟ್ಟೆಗೆ ಗೂಡುಗಳನ್ನು ಹೊತ್ತು ತರುವಂತಹ ವಾಹನಗಳಿಂದ ಪುರಸಭೆಯವರು ಶುಲ್ಕ ವಸೂಲಿ ಮಾಡುವ ಕ್ರಮವನ್ನು ವಿರೋಧಿಸಿ ಸೋಮವಾರ ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆ ಪದಾಧಿಕಾರಿಗಳು ಪುರಸಭೆ ಕಾರ್ಯಾಲಯಕ್ಕೆ ಮುತ್ತಿಗೆ ಹಾಕಿ ಪ್ರತಿಭಟನೆ ನಡೆಸಿದರು.
ರಾಜ್ಯದ ವಿವಿದೆಡೆಯಿಂದ ಪಟ್ಟಣದ ರೇಷ್ಮೆ ಗೂಡಿನ ಮಾರುಕಟ್ಟೆಗೆ ಗೂಡುಗಳನ್ನು ಹೊತ್ತು ತರುವಂತಹ ವಾಹನಗಳಿಂದ ಪುರಸಭೆಯಿಂದ ವಸೂಲಿ ಮಾಡುತ್ತಿದ್ದ ಶುಲ್ಕದ ಟೆಂಡರ್‌ನ್ನು ಕಳೆದ ಏಪ್ರಿಲ್ ನಿಂದ ನಿಲ್ಲಿಸಿದ್ದರು. ಆದರೆ ಇದೀಗ ರೈತರ ವಾಹನಗಳಿಂದ ಶುಲ್ಕ ವಸೂಲಿ ಮಾಡುವ ಷಡ್ಯಂತ್ರ ರೂಪಿಸಿರುವ ಪುರಸಭೆ ಮುಖ್ಯಾಧಿಕಾರಿ ಎಸ್.ಎ.ರಾಮ್‌ಪ್ರಕಾಶ್ ಅವರ ಕ್ರಮ ವಿರೋಧಿಸಿ ರೈತರು ಪ್ರತಿಭಟಿಸಿದರು. ಅಂತರಾಷ್ಟ್ರೀಯ ಮಟ್ಟದಲ್ಲಿ ಖ್ಯಾತಿಯನ್ನು ಪಡೆದಿರುವ ಪಟ್ಟಣದ ರೇಷ್ಮೆ ಗೂಡಿನ ಮಾರುಕಟ್ಟೆಗೆ ರಾಜ್ಯದ ಬೇರೆ ಬೇರೆ ಕಡೆಗಳಿಂದ ರೈತರ ಗೂಡುಗಳನ್ನು ಹೊತ್ತುತರಲು ನೂರಾರು ವಾಹನಗಳು ಬರುತ್ತವೆ. ಹೀಗೆ ಬಂದ ವಾಹನಗಳಿಂದ ರಾಜ್ಯದ ಯಾವುದೇ ಮಾರುಕಟ್ಟೆಯಲ್ಲಿ ಹಣ ವಸೂಲಿ ಮಾಡುವುದಿಲ್ಲ. ಶಿಡ್ಲಘಟ್ಟದಲ್ಲಿ ರೇಷ್ಮೆ ಗೂಡು ಮಾರುಕಟ್ಟೆಗೆ ಯಾವುದೇ ಮೂಲಭೂತ ಸವಲತ್ತುಗಳನ್ನು ಒದಗಿಸದ ಪುರಸಭೆಯವರು ಹಣ ವಸೂಲಿ ಮಾಡುವುದನ್ನು ಈ ಹಿಂದೆ ರೈತರು ಸೇರಿದಂತೆ ರೀಲರ್‌ಗಳು ಪ್ರತಿಭಟಿಸಿದ್ದರು. ಕಳೆದ ಮಾರ್ಚ್ ತಿಂಗಳ ಅಂತ್ಯಕ್ಕೆ ಶುಲ್ಕ ವಸೂಲಿ ಮಾಡುವುದನ್ನು ಪುರಸಭೆ ಅಧಿಕಾರಿಗಳು ಕೈಬಿಟ್ಟಿದ್ದರು.
ಆದರೆ ಇದೀಗ ಸೆಪ್ಟೆಂಬರ್ ೩೦ ರಂದು ನಡೆಯಲಿರುವ ಪುರಸಭೆ ಸಾಮಾನ್ಯ ಸಭೆಯಲ್ಲಿ ಚರ್ಚಿಸುವ ವಿಷಯಗಳ ಪೈಕಿ ಈ ಮೇಲ್ಕಂಡ ವಿಷಯವನ್ನು ಸೇರಿಸಿ ರೈತರಿಗೆ ಮೋಸ ಮಾಡಲು ಹೊರಟಿರುವ ಮುಖ್ಯಾಧಿಕಾರಿಗಳ ವಿರುದ್ದ ಘೋಷಣೆಗಳನ್ನು ಕೂಗಿದರು. ಈಗಾಗಲೇ ತೀವ್ರ ಬರಗಾಲದಿಂದಾಗಿ ನೀರಿನ ಸಮಸ್ಯೆಯನ್ನು ಎದುರಿಸುತ್ತಿರುವ ರೈತರು ಸಂಕಷ್ಟಕ್ಕೆ ಸಿಲುಕಿದ್ದಾರೆ. ಇಂತಹ ಪರಿಸ್ಥಿತಿಯಲ್ಲಿ ರೈತರ ಸಹಾಯಕ್ಕೆ ಬರಬೇಕಾದ ಅಧಿಕಾರಿಗಳು ಹಾಗು ಜನಪ್ರತಿನಿಧಿಗಳು ರೈತರನ್ನು ಸುಲಿಗೆ ಮಾಡಲು ಮುಂದಾಗಿರುವುದು ವಿಪರ್ಯಾಸ ಎಂದ ಪ್ರತಿಭಟನಾಕಾರರು, ಈ ಕೂಡಲೇ ರೈತರಿಂದ ಶುಲ್ಕದ ರೂಪದಲ್ಲಿ ವಸೂಲಿ ಮಾಡಲೊರಟಿರುವ ಕ್ರಮ ಕೈಬಿಡಬೇಕು. ಇಲ್ಲವಾದಲ್ಲಿ ಮುಂದಿನ ದಿನಗಳಲ್ಲಿ ರೈತರು ಸೇರಿದಂತೆ ರೀಲರ್‌ಗಳು ಸೇರಿ ಬೃಹತ್ ಪ್ರತಿಭಟನೆ ಹಮ್ಮಿಕೊಳ್ಳುವುದಾಗಿ ಎಚ್ಚರಿಸಿ ಮುಖ್ಯಾಧಿಕಾರಿಗೆ ಮನವಿ ಸಲ್ಲಿಸಿದರು.
ಮನವಿ ಸ್ವೀಕರಿಸಿದ ಮುಖ್ಯಾಧಿಕಾರಿ ಎಸ್.ಎ.ರಾಮ್‌ಪ್ರಕಾಶ್ ಮಾತನಾಡಿ, ಮಾರುಕಟ್ಟೆಯ ಬಳಿ ವಸೂಲಿ ಮಾಡುತ್ತಿದ್ದ ಶುಲ್ಕವನ್ನು ಈಗಾಗಲೇ ನಿಲ್ಲಿಸಲಾಗಿದ್ದು, ಕಳೆದ ಪುರಸಭೆ ಸಾಮಾನ್ಯ ಸಭೆಯಲ್ಲಿ ಈ ವಿಷಯದ ಬಗ್ಗೆ ಚರ್ಚೆ ಬಂದಿತ್ತಾದರೂ ಮುಂದಿನ ಸಭೆಯಲ್ಲಿ ಇದರ ಬಗ್ಗೆ ಚರ್ಚಿಸಿ ತೀರ್ಮಾನ ಕೈಗೊಳ್ಳುವ ನಿರ್ದಾರ ವ್ಯಕ್ತವಾಗಿತ್ತು. ಹಾಗಾಗಿ ನಾಳೆಯ ಸಭೆಯಲ್ಲಿ ಚರ್ಚಿಸುವ ವಿಷಯಗಳಲ್ಲಿ ಇದನ್ನು ಸೇರಿಸಲಾಗಿದೆಯೇ ಹೊರತು ಇದರಲ್ಲಿ ರೈತರಿಗೆ ಅನ್ಯಾಯ ಮಾಡುವ ಉದ್ದೇಶವಿಲ್ಲ. ಇನ್ನು ಈಗ ರೈತರು ನೀಡಿರುವ ಮನವಿಯನ್ನು ನಾಳಿನ ಸಭೆಯಲ್ಲಿ ಪ್ರಸ್ತಾಪಿಸಿ ಚರ್ಚಿಸಿ ತೀರ್ಮಾನ ತೆಗೆದುಕೊಳ್ಳಲಾಗುವುದು ಎಂದು ತಿಳಿಸಿದರು.
ಕರ್ನಾಟಕ ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆ ಜಿಲ್ಲಾಧ್ಯಕ್ಷ ಭಕ್ತರಹಳ್ಳಿಬೈರೇಗೌಡ, ತಾಲ್ಲೂಕು ಅಧ್ಯಕ್ಷ ತಾದೂರು ಮಂಜುನಾಥ್, ಉಪಾಧ್ಯಕ್ಷ ಮುನಿನಂಜಪ್ಪ, ಆಂಜನೇಯರೆಡ್ಡಿ, ಕಾರ್ಯದರ್ಶಿ ಟಿ.ಕೃಷ್ಣಪ್ಪ, ಬೋದಗೂರು ಮುನಿರಾಜು, ಟಿ.ಆರ್.ದೇವರಾಜ್ ಮತ್ತಿತರರು ಈ ಸಂದರ್ಭದಲ್ಲಿ ಹಾಜರಿದ್ದರು.

