15.1 C
Sidlaghatta
Saturday, December 27, 2025
Home Blog Page 1021

ಯುವಜನರು ರಾಜಕೀಯ ಕ್ಷೇತ್ರಕ್ಕೆ ಪ್ರವೇಶಿಸಬೇಕು

0

ಯುವಜನರು ರಾಜಕೀಯ ಕ್ಷೇತ್ರಕ್ಕೆ ಪ್ರವೇಶಿಸಿ, ದೇಶದಲ್ಲಿ ಬೇರು ಮಟ್ಟದಲ್ಲಿ ತಳವೂರಿರುವ ಭ್ರಷ್ಟಾಚಾರವನ್ನು ಕಿತ್ತು ಹಾಕುವ ಕೆಲಸ ತುರ್ತಾಗಿ ಆಗಬೇಕಿದೆ ಎಂದು ಭಾರತ ಪ್ರಜಾಸತ್ತಾತ್ಮಕ ಯುವಜನ ಫೆಡರೇಷನ್(ಡಿವೈಎಫ್‌ಐ)ನ ರಾಜ್ಯ ಸಮಿತಿ ಖಜಾಂಚಿ ಬಿ.ವಿ.ಸಂಪಂಗಿ ಅಭಿಪ್ರಾಯಪಟ್ಟರು.
ದೇಶಪ್ರೇಮಿ ಭಗತ್‌ಸಿಂಗ್‌ರವರ 108ನೇ ಜನ್ಮ ದಿನೋತ್ಸವ ಅಂಗವಾಗಿ ಭಾನುವಾರ ಪಟ್ಟಣದ ರಾಜ್ಯ ಸಾರಿಗೆ ಬಸ್ ನಿಲ್ದಾಣದಲ್ಲಿ ಡಿವೈಎಫ್‌ಐನಿಂದ ಹಮ್ಮಿಕೊಂಡಿದ್ದ ಡಿವೈಎಫ್‌ಐ ಸಂಘಟನೆಯ ಸದಸ್ಯತ್ಯ ನೋಂದಣಿಗೆ ಚಾಲನೆ ನೀಡಿ ಮಾತನಾಡಿದರು.
ಇತ್ತೀಚಿನ ದಿನಗಳಲ್ಲಿ ಯುವಜನರಲ್ಲಿ ಹೋರಾಟದ ಮನೋಭಾವವೇ ಇಲ್ಲವಾಗುತ್ತಿದೆ. ನೆರೆ ಹೊರೆಯ ಸಮಾಜದಲ್ಲಿ ಏನೆ ಆಗಲಿ ಅದಕ್ಕೂ ನಮಗೂ ಸಂಬಂಧವೇ ಇಲ್ಲ ಎನ್ನುವಂತೆ ಯುವಜನರು ವರ್ತಿಸುತ್ತಿರುವುದು ವಿಷಾಧಕರ ಸಂಗತಿ. ವಿಜ್ಞಾನ ತಂತ್ರಜ್ಞಾನ ಬೆಳವಣಿಗೆಯಾದಂತೆ ಯುವಜನರು ಹಾಗೂ ವಿದ್ಯಾರ್ಥಿಗಳ ಬೆರಳ ತುದಿಯಲ್ಲೇ ಇಂಟರ್‌ನೆಟ್, ಫೇಸ್‌ಬುಕ್ ಇನ್ನಿತರೆ ಹತ್ತು ಹಲವು ಸೌಕರ್ಯಗಳ ಲಭ್ಯವಿದ್ದು ತಂತ್ರಜ್ಞಾನದ ಬೆಳವಣಿಗೆಯಿಂದ ಇಡೀ ವಿಶ್ವವೇ ಪುಟ್ಟ ಗ್ರಾಮದಂತಾಗಿದೆ.ನಾನಾ ದೇಶಗಳ ಆಚಾರ, ವಿಚಾರ, ತೊಡುಗೆ, ಉಡುಗೆ ಸೇರಿದಂತೆ ಅಲ್ಲಿನ ಸಂಸ್ಕೃತಿಯ ಪ್ರಭಾವವೂ ನಮ್ಮವರ ಮೇಲೆ ಬಿದ್ದಿದ್ದು ನಮ್ಮ ದೇಶದ ಆಚಾರ, ವಿಚಾರಗಳು ಅಪಥ್ಯವಾಗುತ್ತಿವೆ. ಇದರಿಂದಾಗಿ ನಮ್ಮ ದೇಶದ ಸ್ವಾತಂತ್ರ್ಯಕ್ಕಾಗಿ ಹೋರಾಟ ಮಾಡಿ ತನು, ಮನ, ಧನ ಅರ್ಪಿಸಿ ಹುತ್ಮಾತ್ಮರು ಸಹ ಯಾರೆಂದು ಗೊತ್ತಿಲ್ಲದಂತಾಗಿದೆ ಎಂದು ವಿಷಾಸಿದರು. ಯುವಜನರು, ವಿದ್ಯಾರ್ಥಿಗಳು ಮನಸ್ಸು ಮಾಡಿದರೆ ಮಾತ್ರವೇ ಇದೆಲ್ಲದಕ್ಕೂ ಪರಿಹಾರ ಸಿಗಲಿದೆ. ಇಲ್ಲವಾದಲ್ಲಿ ನಮ್ಮ ಮುಂದಿನ ಪೀಳಿಗೆ ಸಹ ಈ ಸಮಸ್ಯೆಗಳನ್ನು ಎದುರಿಸಿಕೊಂಡೆ ಬದುಕಬೇಕಾಗುತ್ತದೆ ಎಂದು ಎಚ್ಚರಿಸಿದರು.
ಡಿವೈಎಫ್‌ಐ ಸಂಘಟನೆಗೆ ಸದಸ್ಯತ್ವವನ್ನು ಆರಂಭಿಸಲಾಯಿತು. ಮುಖಂಡರಾದ ಕುಂದಲಗುರ್ಕಿ ಮುನೀಂದ್ರ, ಸದಾನಂದ, ವಾಸು, ಸಯ್ಯದ್, ಮಂಜುನಾಥ್, ವೆಂಕಟೇಶ್, ಸಿಐಟಿಯುನ ಲಕ್ಷ್ಮಿದೇವಮ್ಮ, ಎಸ್‌ಎಫ್‌ಐನ ಅಂಬರೀಷ್ ಮತ್ತಿತರರು ಈ ಸಂದರ್ಭದಲ್ಲಿ ಹಾಜರಿದ್ದರು.

ಸ್ವಪ್ರತಿಷ್ಠೆಗಾಗಿ ಖಾಸಗಿ ವಸತಿಶಾಲೆಗಳತ್ತ ಆಕರ್ಷಿತರಾಗುತ್ತಿರುವ ಪೋಷಕರು

0

ಪೋಷಕರು ತಮ್ಮ ಸ್ವಪ್ರತಿಷ್ಠೆಗಾಗಿ ಖಾಸಗಿ ವಸತಿಶಾಲೆಗಳತ್ತ ಆಕರ್ಷಿತರಾಗುತ್ತಿದ್ದಾರೆ. ಇದರಿಂದ ಮಕ್ಕಳಿಗೆ ಕೌಟುಂಬಿಕ ಪ್ರೀತಿ, ಜವಾಬ್ದಾರಿ ಹಾಗೂ ಸಂಬಂಧಗಳ ಕೊರತೆಯುಂಟಾಗಲಿದೆ ಎಂದು ವರದನಾಯಕನಹಳ್ಳಿ ಸರ್ಕಾರಿ ಶಾಲೆಯ ವಿಜ್ಞಾನ ಶಿಕ್ಷಕ ರಾಮಕೃಷ್ಣ ಕಳವಳ ವ್ಯಕ್ತಪಡಿಸಿದರು.
ಪಟ್ಟಣದ ಸರ್ಕಾರಿ ರೇಷ್ಮೆ ಗೂಡಿನ ಮಾರುಕಟ್ಟೆಯ ಸಮೀಪವಿರುವ ಮುತ್ತೂಟ್‌ ಹಣಕಾಸು ಸಂಸ್ಥೆಯಲ್ಲಿ ಭಾನುವಾರ ನಡೆದ ಉಚಿತ ಪುಸ್ತಕ ವಿತರಣೆ ಮತ್ತು ಶಿಕ್ಷಣ ಜಾಗೃತಿ ಶಿಬಿರದಲ್ಲಿ ಅವರು ಮಾತನಾಡಿದರು. ಶಿಕ್ಷಣದಲ್ಲಿ ಮಾನವೀಯ ಮೌಲ್ಯಗಳು ಕ್ಷೀಣಿಸಿ ವಿದ್ಯಾರ್ಥಿಗಳ ಜೀವನದ ಮೇಲೆ ಪ್ರತಿಕೂಲ ಪರಿಣಾಮ ಬೀರುತ್ತಿದೆ. ಪಠ್ಯದಲ್ಲಿ ಮಾನವೀಯ ಮೌಲ್ಯಗಳ ವಿಷಯಗಳನ್ನು ಅಳವಡಿಸಬೇಕಾದ ಅಗತ್ಯವಿದೆ. ಶಿಕ್ಷಣ ಕೇವಲ ಅಂಕಗಳಿಕೆ ಸೀಮಿತವಾಗುತ್ತಿದೆ. ವಿದ್ಯಾರ್ಥಿಗಳಿಗೆ ಆಸಕ್ತಿ ಹೊಂದಿರುವ ಕ್ಷೇತ್ರಗಳನ್ನು ಆಯ್ಕೆ ಮಾಡಿಕೊಳ್ಳಲು ಸ್ವಾತಂತ್ರ್ಯ ನೀಡಬೇಕು. ಗಾಂಧಿಜಿ ಅವರ ಆಸೆಯಂತೆ ಮೂಲ ಶಿಕ್ಷಣ ಕಲಿಸಲು ಆದ್ಯತೆ ನೀಡಬೇಕೆಂದರು.
ತಾಲೂಕಿನ ತುಮ್ಮನಹಳ್ಳಿ ಸರಕಾರಿ ಶಾಲೆಯ ಶಿಕ್ಷಕ ಶ್ರೀಧರ್ ಮಾತನಾಡಿ, ಅವಿಭಜಿತ ಕೋಲಾರ ಜಿಲ್ಲೆಯಲ್ಲಿ ನೀರಿಗಾಗಿ ಆಹಾಕಾರ ಉಂಟಾಗಿ ಅಂತರ್ಜಲಮಟ್ಟ ಕುಸಿದು ಫ್ಲೋರೈಡ್ ಮಿಶ್ರಿತ ನೀರು ಸೇವಿಸುತ್ತಾ ಜನರ ಆರೋಗ್ಯದ ಮೇಲೆ ದುಷ್ಟಪರಿಣಾಮ ಬೀರುತ್ತಿದೆ. ಸಂಘ-ಸಂಸ್ಥೆಗಳು ಹಾಗೂ ವಿದ್ಯಾರ್ಥಿಗಳು ನೀರಿನ ಮಹತ್ವದ ಕುರಿತು ಜನರಲ್ಲಿ ಜಲಜಾಗೃತಿ ಮೂಡಿಸಬೇಕೆಂದು ಕರೆ ನೀಡಿದರು. ಈ ಸಂದರ್ಭದಲ್ಲಿ ವಿದ್ಯಾರ್ಥಿಗಳಿಗೆ ಲೇಖನಾ ಸಾಮಾಗ್ರಿಗಳು ಹಾಗೂ ನೋಟ್‌ಪುಸ್ತಕಗಳನ್ನು ವಿತರಿಸಲಾಯಿತು.
ಮುತ್ತೂಟ್‌ ಸಂಸ್ಥೆಯ ಮಾಕೇಟಿಂಗ್ ಮುಖ್ಯಸ್ಥ ಶಿವಕುಮಾರ್, ವೈದ್ಯ ಡಾ.ಸತ್ಯನಾರಾಯಣರಾವ್‌, ಜಿಲ್ಲಾ ಪಂಚಾಯತಿ ಮಾಜಿ ಸದಸ್ಯ ಆನೂರು ನಾರಾಯಣಪ್ಪ, ಉದ್ಯಮಿ ಎಂ.ಎಸ್‌.ಜ್ಞಾನೇಶ್ವರ್, ವಾಸವಿ ಶಾಲೆಯ ಶಿಕ್ಷಕ ನಾಗರಾಜ್, ಮುತ್ತೂಟ್‌ ಸಂಸ್ಥೆಯ ವ್ಯವಸ್ಥಾಪಕ ಮನೋಹರ್ ಮತ್ತಿತರರು ಕಾರ್ಯಕ್ರಮದಲ್ಲಿ ಹಾಜರಿದ್ದರು.

ಮಕ್ಕಳನ್ನು ಆರೋಗ್ಯವಂತರನ್ನಾಗಿ, ಗುಣವಂತರನ್ನಾಗಿ ಮಾಡಬೇಕು

0

ಮಂಗಳ ಗ್ರಹವನ್ನು ತಲುಪಿದ ಉಪಗ್ರಹವನ್ನು ತಯಾರಿಸಿರುವ ಮೇಧಾವಿಗಳಿರುವ ಭಾರತದಲ್ಲಿ ಇಂದಿಗೂ ಮಕ್ಕಳ ಪೌಷ್ಟಿಕತೆ ಹಾಗು ಮಕ್ಕಳಿಗೆ ಅಕ್ಷರಭ್ಯಾಸ ಮಾಡಿಸುವ ಶಿಕ್ಷಣ ನೀಡುವ ನಿಟ್ಟಿನಲ್ಲಿ ಕಾರ್ಯಾಗಾರಗಳನ್ನು ಮಾಡುತ್ತಿರುವುದು ದುಃಖಕರ ಸಂಗತಿ ಎಂದು ಚಿಕ್ಕಬಳ್ಳಾಪುರ ಹೆಚ್ಚುವರಿ ಜಿಲ್ಲಾ ಮತ್ತು ಸತ್ರ ನ್ಯಾಯಾಧೀಶರಾದ ಜಿ.ವಿ.ತುರಮರಿ ಹೇಳಿದರು.
ತಾಲ್ಲೂಕಿನ ಬೆಳ್ಳೂಟಿ ಗ್ರಾಮದ ಕಲ್ಯಾಣಮಂಟಪದಲ್ಲಿ ಭಾನುವಾರ ಏರ್ಪಡಿಸಲಾಗಿದ್ದ ಮಕ್ಕಳ ಅಪೌಷ್ಠಿಕತೆ ತಡೆಗಟ್ಟುವುದರ ಬಗೆಗಿನ ಸಮಗ್ರ ಕಾರ್ಯಯೋಜನೆ ಅನುಷ್ಠಾನ ಹಾಗೂ ಶಾಲೆ ಬಿಟ್ಟ ಮಕ್ಕಳನ್ನು ಮರಳಿ ಶಾಲೆಗೆ ಕರೆ ತರುವುದರ ಬಗ್ಗೆ ಅರಿವು-ನೆರವು ಕಾರ್ಯಾಗಾರವನ್ನು ಉದ್ಘಾಟಿಸಿ ಅವರು ಮಾತನಾಡಿದರು. ಮುಂದುವರೆಯುತ್ತಿರುವ ಭಾರತ ದೇಶದಲ್ಲಿ ಅಪೌಷ್ಟಿಕತೆಯನ್ನು ತಡೆಗಟ್ಟಿ ಸಮಾಜವನ್ನು ಸದೃಢವಾಗಿ ನಿರ್ಮಾಣ ಮಾಡುವಲ್ಲಿ ಸಮಾಜದ ಎಲ್ಲಾ ವರ್ಗದ ಜನತೆ ಆಸಕ್ತಿ ವಹಿಸಬೇಕು. ಪ್ರತಿಯೊಂದು ಮಗುವಿಗೂ ತಾಯಂದಿರು ತಮ್ಮ ಎದೆಹಾಲನ್ನು ಉಣಿಸುವುದರೊಂದಿಗೆ, ಮಕ್ಕಳಿಗೆ ಹಸಿರು ತರಕಾರಿಗಳು, ಸೊಪ್ಪು, ಸೇರಿದಂತೆ ಪೌಷ್ಟಿಕಾಂಶ ಭರಿತವಾದ ಆಹಾರವನ್ನು ನೀಡಿ ಮಕ್ಕಳನ್ನು ಆರೋಗ್ಯವಂತರನ್ನಾಗಿ ಮಾಡಬೇಕು. ಗುಣಮಟ್ಟದ ಶಿಕ್ಷಣ ಮತ್ತು ಚಿಕ್ಕವಯಸ್ಸಿನಿಂದಲೇ ಸಂಸ್ಕಾರವನ್ನು ಬೆಳೆಸಿದಾಗ ಮಾತ್ರ ಮಕ್ಕಳು ಸಮಾಜದಲ್ಲಿ ಉತ್ತಮ ಪ್ರಜೆಗಳಾಗುತ್ತಾರೆ. ಶಾಲೆಯಿಂದ ಹೊರಗುಳಿದಿರುವ ಮಕ್ಕಳನ್ನು ಖಡ್ಡಾಯವಾಗಿ ಮರಳಿ ಶಾಲೆಯ ಕಡೆಗೆ ತರುವಂತಹ ಕೆಲಸಕ್ಕೆ ಪ್ರತಿಯೊಬ್ಬರೂ ಮುಂದಾಗಬೇಕು ಎಂದು ಹೇಳಿದರು.
ಮಕ್ಕಳಿಗೆ, ಗರ್ಭಿಣಿಯರಿಗೆ ನೀಡಬೇಕಿರುವ ವಿವಿಧ ರೀತಿಯ ಕಾಳು ಬೇಳೆಗಳು, ತರಕಾರಿ ಸೊಪ್ಪು, ಮೊಳಕೆ ಬರಿಸಿರುವ ಕಾಳುಗಳು, ಹಣ್ಣುಗಳು ಮುಂತಾದ ತಿನಿಸುಗಳು ಹಾಗೂ ಮಾಹಿತಿ ಫಲಕಗಳನ್ನು ಈ ಸಂದರ್ಭದಲ್ಲಿ ಪ್ರದರ್ಶಿಸಲಾಗಿತ್ತು.
ಹಿರಿಯ ಸಿವಿಲ್ ನ್ಯಾಯಾಧೀಶರಾದ ಕುಮಾರಿ ಎನ್.ಶೀಲಾ, ಪ್ರಧಾನ ಸಿವಿಲ್ ನ್ಯಾಯಾಧೀಶರಾದ ವಿಜಯದೇವರಾಜ್‌ಅರಸ್, ಹೆಚ್ಚುವರಿ ಸಿವಿಲ್ ನ್ಯಾಯಾಧೀಶರಾದ ಎನ್.ಎ.ಶ್ರೀಕಂಠ, ತಹಸೀಲ್ದಾರ್ ಜಿ.ಎ.ನಾರಾಯಣಸ್ವಾಮಿ, ತಾಲ್ಲೂಕು ವಕೀಲರ ಸಂಘದ ಅಧ್ಯಕ್ಷ ಎಂ.ಪಾಪಿರೆಡ್ಡಿ, ಸರ್ಕಾರಿ ವಕೀಲರಾದ ಈ.ಡಿ.ಶ್ರೀನಿವಾಸ್, ಎಸ್.ಕುಮುದಿನಿ, ತಾಲ್ಲೂಕು ಆರೋಗ್ಯಾಧಿಕಾರಿ ಡಾ.ಅನಿಲ್‌ಕುಮಾರ್, ಮಹಿಳಾ ಮತ್ತು ಮಕ್ಕಳ ಕಲ್ಯಾಣಾಧಿಕಾರಿ ಲಕ್ಷ್ಮಿದೇವಮ್ಮ, ಕ್ಷೇತ್ರ ಶಿಕ್ಷಣಾಧಿಕಾರಿ ರಘುನಾಥರೆಡ್ಡಿ, ಗ್ರಾಮೀಣಾಭಿವೃದ್ಧಿ ಸಂಸ್ಥೆಯ ಡಾ.ಎಂ.ವಿಜಯಾ, ಮಕ್ಕಳ ತಜ್ಞ ಡಾ. ಗಿರೀಶ್, ಸೌಮ್ಯ ಮತ್ತಿತರರು ಈ ಸಂದರ್ಭದಲ್ಲಿ ಹಾಜರಿದ್ದರು.

ಅಂಧ ಮಕ್ಕಳ ಶಾಲೆಯಲ್ಲಿ ‘ಅವನಿ ಬಳಗ’

0

ಪಟ್ಟಣದ ಆಶಾಕಿರಣ ಅಂಧ ಮಕ್ಕಳ ಶಾಲೆಯಲ್ಲಿ ಭಾನುವಾರ ಚಿಕ್ಕಬಳ್ಳಾಪುರದ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ಹಿರಿಯ ವಿದ್ಯಾರ್ಥಿಗಳು ವಿಶಿಷ್ಠವಾಗಿ ಸಾಮಾಜಿಕ ಕಳಕಳಿಯುಳ್ಳ ಸಂಘವೊಂದನ್ನು ಉದ್ಘಾಟಿಸಿದರು.

ಕಾರ್ಯಕ್ರಮದಲ್ಲಿದ್ದ ಆಶಾಕಿರಣ ಅಂಧ ಮಕ್ಕಳು ಮತ್ತು ಚಿಕ್ಕಬಳ್ಳಾಪುರದ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ಹಿರಿಯ ವಿದ್ಯಾರ್ಥಿಗಳು.
ಕಾರ್ಯಕ್ರಮದಲ್ಲಿದ್ದ ಆಶಾಕಿರಣ ಅಂಧ ಮಕ್ಕಳು ಮತ್ತು ಚಿಕ್ಕಬಳ್ಳಾಪುರದ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ಹಿರಿಯ ವಿದ್ಯಾರ್ಥಿಗಳು.

‘ಅವನಿ ಬಳಗ’ ಎಂಬ ಹೆಸರಿನ ಸಂಘವನ್ನು ಪ್ರಾಧ್ಯಾಪಕಿ ಡಾ.ಸುಧಾ ಅವರಿಂದ ಉದ್ಘಾಟಿಸಿ, ಅಂಧಮಕ್ಕಳೊಂದಿಗೆ ಹಿರಿಯ ವಿದ್ಯಾರ್ಥಿಗಳು ದಿನ ಪೂರ್ತಿ ಕಳೆದರು. ಅಂಧ ಮಕ್ಕಳಿಗೆ ಹಾಡು ಕಲಿಸಿ, ಆಟ ಆಡಿಸಿ, ಸಿಹಿ ಹಂಚಿ, ಅವರೊಂದಿಗೆ ಊಟ ಮಾಡಿ ‘ಎಲ್ಲರೊಳಗೊಂದಾಗು ಮಂಕುತಿಮ್ಮ’ ಎಂಬ ಹಿರಿಯರ ವಾಣಿಯನ್ನು ಪಾಲಿಸಿದರು.
‘ಏನಾಗಲಿ ಮುಂದೆ ಸಾಗು ನೀ..’ ಎಂಬ ಹಾಡನ್ನು ಮಕ್ಕಳೊಂದಿಗೆ ಹಾಡು ತಾವೂ ಸ್ಫೂರ್ತಿಯನ್ನು ಪಡೆದರು. ಮಕ್ಕಳ ಪ್ರತಿಭಾ ಪ್ರದರ್ಶನದಲ್ಲಿ ಅವರು ಪ್ರದರ್ಶಿಸಿದ ಏಕಪಾತ್ರಾಭಿನಯ, ಸಂಗೀತ, ಕಥೆ ಮುಂತಾದವುಗಳನ್ನು ಕಂಡು ಮೂಕ ವಿಸ್ಮಿತರಾದರು. ಅಂಧ ಮಕ್ಕಳಿಗೆ ಹಾಡುಗಳ ರಸಪ್ರಶ್ನೆಯನ್ನು, ವಿವಿಧ ಆಟಗಳನ್ನು ಏರ್ಪಡಿಸಿ ತಾವೂ ಭಾಗಿಯಾಗಿ ನಲಿದರು. ಜೊತೆಯಲ್ಲೇ ಸಿಹಿ ತಿಂದು, ಊಟ ಮಾಡಿದರು.
‘ಅವನಿ ಎಂದರೆ ಭೂಮಿ. ಬಳಗ ಅಂದರೆ ಕುಟುಂಬ. ಬೇರೆ ಬೇರೆ ಮನೆಯಲ್ಲಿ ಹುಟ್ಟಿ ಬೆಳೆದಿದ್ದರೂ ನಮ್ಮ ಭೂತಾಯಿಯ ಸೇವೆ ಮಾಡುವುದು ನಮ್ಮೆಲ್ಲರ ಆದ್ಯ ಕರ್ತವ್ಯವೆಂದು ಭಾವಿಸಿ ಚಿಕ್ಕಬಳ್ಳಾಪುರದ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ಹಿರಿಯ ವಿದ್ಯಾರ್ಥಿಗಳೊಂದಿಗೆ ಒಂದು ಕುಟುಂಬದಂತೆ ‘ಅವನಿ ಬಳಗ’ವನ್ನು ಸ್ಥಾಪಿಸಿದ್ದೇವೆ. ಸಮಾಜಕ್ಕೆ ಅಲ್ಪ ಸೇವೆಯನ್ನು ಸಲ್ಲಿಸುವ ಉದ್ದೇಶದಿಂದ ಸ್ಥಾಪಿಸಿರುವ ಸಂಘದಿಂದ ವಿವಿಧ ಚಟುವಟಿಕೆಗಳನ್ನು ಹಮ್ಮಿಕೊಳ್ಳಲಿದ್ದೇವೆ. ಉಚಿತ ಆರೋಗ್ಯ ಸೇವೆ, ವಿದ್ಯಾರ್ಥಿಗಳ ಪ್ರತಿಭಾ ಪುರಸ್ಕಾರ, ಅಂಧ ಮಕ್ಕಳೊಂದಿಗೆ, ವೃದ್ಧಾಶ್ರಮದ ವೃದ್ಧರೊಂದಿಗೆ ಕಾಲ ಕಳೆದು ನೆರವು ನೀಡುವುದು ಮುಂತಾದ ಯೋಜನೆಗಳಿವೆ. ಭಗತ್‌ಸಿಂಗ್‌ ಅವರ ಜನ್ಮದಿನದಂದು ಈ ಸಂಘ ಉದ್ಘಾಟನೆಯಾಗುತ್ತಿರುವುದು ಸಕಾರಾತ್ಮಕವಾಗಿದೆ. ಯುವಜನರಿಂದ ಬದಲಾವಣೆ ಸಾಧ್ಯ ಎಂಬ ಅವರ ಮಾತುಗಳನ್ನು ನಾವು ಅಕ್ಷರಶಃ ಪಾಲಿಸುತ್ತಿದ್ದೇವೆ’ ಎಂದು ‘ಅವನಿ ಬಳಗ’ದ ಗೌರವಾಧ್ಯಕ್ಷೆ ಡಾ.ಸುಧಾ ತಿಳಿಸಿದರು.
ಶಿಕ್ಷಕ ವೇಣುಗೋಪಾಲ್‌, ಪ್ರಾಧ್ಯಾಪಕ ಗಂಗಾಧರ್‌, ‘ಅವನಿ ಬಳಗ’ದ ಅಧ್ಯಕ್ಷೆ ಉಷಾ, ಕಾರ್ಯದರ್ಶಿ ಚನ್ನಕೇಶವ, ಖಜಾಂಚಿ ಗಾಯಿತ್ರಿ ಮತ್ತಿತರರು ಈ ಸಂದರ್ಭದಲ್ಲಿ ಹಾಜರಿದ್ದರು.

ಟಿ.ಬೈರಗಾನಹಳ್ಳಿಯಲ್ಲಿ ಹಾಲು ಉತ್ಪಾದಕರ ಸಹಕಾರ ಸಂಘ ಉದ್ಘಾಟನೆ

0

ಶಿಡ್ಲಘಟ್ಟ ತಾಲ್ಲೂಕಿನ 190 ನೇ ಹಾಲು ಉತ್ಪಾದಕರ ಸಹಕಾರ ಸಂಘವನ್ನು ಟಿ.ಬೈರಗಾನಹಳ್ಳಿಯಲ್ಲಿ ಉದ್ಘಾಟನೆಯನ್ನು ಕೋಚಿಮುಲ್‌ ನಿರ್ದೇಶಕ ಬಂಕ್‌ ಮುನಿಯಪ್ಪ ಉದ್ಘಾಟಿಸಿದರು. ಡಿ.ಸಿ.ಸಿ ಬ್ಯಾಂಕ್‌ ನಿರ್ದೇಶಕ ಶಿವಾರೆಡ್ಡಿ, ಕೋಚಿಮುಲ್‌ ಉಪವ್ಯವಸ್ಥಾಪಕ ಡಾ.ಕೆ.ಜಿ.ಈಶ್ವರಯ್ಯ, ವಿಸ್ತರಣಾಧಿಕಾರಿ ಅಮರೇಶ್‌, ಸಂಘದ ಅಧ್ಯಕ್ಷೆ ಸುಮಾ ಹಾಜರಿದ್ದರು.

ಗೊಂಬೆಗಳ ಮೂಲಕ ಭಾರತದರ್ಶನ

0

ಶಿಡ್ಲಘಟ್ಟದ ಮೊದಲನೇ ನಗರ್ತಪೇಟೆಯಲ್ಲಿರುವ ಪ್ರಸೂತಿ ತಜ್ಞೆ ಡಾ.ರೋಹಿಣಿ ರವಿಶಂಕರ್‌ ರಾಷ್ಟ್ರದ ವಿವಿದೆಡೆಗಳಿಂದ ತಂದ ಗೊಂಬೆಗಳನ್ನು ಜೋಡಿಸಿಟ್ಟು ಗೊಂಬೆಹಬ್ಬವನ್ನು ವಿಶಿಷ್ಠವಾಗಿ ಆಚರಿಸುತ್ತಿದ್ದಾರೆ.
ಶಿಡ್ಲಘಟ್ಟದ ಮೊದಲನೇ ನಗರ್ತಪೇಟೆಯಲ್ಲಿರುವ ಪ್ರಸೂತಿ ತಜ್ಞೆ ಡಾ.ರೋಹಿಣಿ ರವಿಶಂಕರ್‌ ರಾಷ್ಟ್ರದ ವಿವಿದೆಡೆಗಳಿಂದ ತಂದ ಗೊಂಬೆಗಳನ್ನು ಜೋಡಿಸಿಟ್ಟು ಗೊಂಬೆಹಬ್ಬವನ್ನು ವಿಶಿಷ್ಠವಾಗಿ ಆಚರಿಸುತ್ತಿದ್ದಾರೆ.

ಆಶ್ವಯುಜ ಶುದ್ಧ ಪಾಡ್ಯದಿಂದ ದಶಮಿಯವರೆಗೆ ಹತ್ತು ದಿನಗಳ ಕಾಲ ನಡೆಯುವ ದಸರಾ ಹಬ್ಬದ ಸಂದರ್ಭದಲ್ಲಿ ಮೈಸೂರಿನ ಅರಮನೆ ಸಂಪ್ರದಾಯವನ್ನು ಅನುಸರಿಸಿ ಸಾಮಾಜಿಕ ಹಾಗು ಸಾಂಸ್ಕೃತಿಕ ಪರಂಪರೆಯನ್ನು ಬಿಂಬಿಸಲು ಗೊಂಬೆಹಬ್ಬವನ್ನು ನಮ್ಮ ನಾಡಿನ ಗೃಹಿಣಿಯರು ಮನೆಮನೆಗಳಲ್ಲಿ ಆಚರಿಸುವರು.
ಒರಿಸ್ಸಾದ ಮೀನುಗಾರ ದಂಪತಿಗಳು
ಒರಿಸ್ಸಾದ ಮೀನುಗಾರ ದಂಪತಿಗಳು

ಅರಸರ ಕಾಲದಲ್ಲಿ ಉತ್ತುಂಗದಲ್ಲಿದ್ದ ಬೊಂಬೆಹಬ್ಬದ ಪರಿಕಲ್ಪನೆಯೂ ಈಗ ಬದಲಾಗಿದೆ. ಗೊಂಬೆ ಕೂರಿಸುವ ಬಹುತೇಕ ಮನೆಗಳಲ್ಲಿ ಪಟ್ಟದ ಗೊಂಬೆಗಳನ್ನು ಹೊರತುಪಡಿಸಿ ಮಿಕ್ಕೆಲ್ಲವೂ ಆಧುನಿಕ ಗೊಂಬೆಗಳೇ. ಗೊಂಬೆ ಪ್ರದರ್ಶನದಲ್ಲಿ ಆಧುನಿಕ ಸಂಗತಿಗಳು, ಪ್ರಸ್ತುತ ವಿಷಯಗಳು ಮಹತ್ವ ಪಡೆಯುತ್ತಿವೆ.
ಪಟ್ಟಣದ ಮೊದಲನೇ ನಗರ್ತಪೇಟೆಯಲ್ಲಿರುವ ಪ್ರಸೂತಿ ತಜ್ಞೆ ಡಾ.ರೋಹಿಣಿ ರವಿಶಂಕರ್‌ ರಾಷ್ಟ್ರದ ವಿವಿದೆಡೆಗಳಿಂದ ತಂದ ಗೊಂಬೆಗಳನ್ನು ಜೋಡಿಸಿಟ್ಟು ಗೊಂಬೆಹಬ್ಬವನ್ನು ವಿಶಿಷ್ಠವಾಗಿ ಆಚರಿಸುತ್ತಿದ್ದಾರೆ. ದಸರಾ ಗೊಂಬೆಗಳ ಮೂಲಕ ನಮ್ಮ ಅನೇಕತೆಯಲ್ಲಿ ಏಕತೆಯನ್ನು ಬಿಂಬಿಸುವ ರಾಷ್ಟ್ರ ಪ್ರಜ್ಞೆಯನ್ನು ಸಾರುತ್ತಿದ್ದಾರೆ.
ತಂಜಾವೂರಿನ ನೃತ್ಯಗಾತಿ
ತಂಜಾವೂರಿನ ನೃತ್ಯಗಾತಿ

ಗೊಂಬೆಹಬ್ಬದ ಕೇಂದ್ರಬಿಂದುವಾದ ಪಟ್ಟದ ಗೊಂಬೆಗಳೊಂದಿಗೆ, ಗೊಂಬೆಗಳಿಗೆ ಖ್ಯಾತಿ ಪಡೆದಿರುವ ತಂಜಾವೂರಿನ ನರ್ತಕಿ, ಶೆಟ್ಟಿ ದಂಪತಿಗಳು, ಮದುರೈನ ಮೀನಾಕ್ಷಿ ಸುಂದರೇಶ್ವರ, ಅಷ್ಟಲಕ್ಷ್ಮಿಯರು, ತಿರುಪತಿಯ ರಾಮ ಸೀತೆ ಲಕ್ಷಣ ಹನುಮ, ಅರ್ಧನಾರೀಶ್ವರ, ಬೆಂಗಳೂರಿನಿಂದ ತಂದ ದಶಾವತಾರ, ಯಕ್ಷಗಾನ, ಆಡಿಸಿ ನೋಡಿ ಬೀಳಿಸಿ ನೋಡು ಗೊಂಬೆಗಳು, ಒರಿಸ್ಸಾದ ಮೀನುಗಾರ, ಮಥುರೆಯ ಶ್ರೀಕೃಷ್ಣ, ಮೀರಾಬಾಯಿ, ರಾಜಾಸ್ಥಾನದ ಪಗಡಿಧಾರಿ ಪುರುಷ ಮತ್ತು ಸಾಂಪ್ರದಾಯಿಕ ಮಹಿಳೆ, ವೈಷ್ಣೋದೇವಿ ಮುಂತಾದ ಗೊಂಬೆಗಳು ದೇಶದ ವಿವಿಧ ರಾಜ್ಯಗಳ ವೈವಿಧ್ಯತೆಯನ್ನು ಹಾಗೂ ಸಂಸ್ಕೃತಿಯನ್ನು ಪ್ರದರ್ಶಿಸುತ್ತಿವೆ. ಈ ಗೊಂಬೆಗಳನ್ನು ಹಾಗೂ ಇದರೊಂದಿಗೆ ಹಲವು ಬಗೆಯ ಗೊಂಬೆಗಳನ್ನು ಹಂತ ಹಂತವಾಗಿ ಅಲಂಕರಿಸಲಾದ ಜಗತಿಗಳ ಮೇಲೆ ಕೂರಿಸಿ ಅಲಂಕರಿಸಿದ್ದಾರೆ.
ಪಟ್ಟದ ಗೊಂಬೆಗಳು
ಪಟ್ಟದ ಗೊಂಬೆಗಳು

‘ಪ್ರವಾಸಕ್ಕಾಗಿ ಹೋದ ಸ್ಥಳಗಳಿಂದೆಲ್ಲಾ ಗೊಂಬೆಗಳನ್ನು ತರುವ ಅಭ್ಯಾಸವಿದೆ. ದಸರಾ ಹಬ್ಬದ ಪ್ರಯುಕ್ತ ಈ ರೀತಿ ಸಂಗ್ರಹಿಸಿರುವ ಗೊಂಬೆಗಳನ್ನೆಲ್ಲಾ ಜೋಡಿಸಿಟ್ಟಾಗ ನಾವು ಭೇಟಿ ನೀಡಿರುವ ದೇಶದ ವಿವಿಧ ಪ್ರದೇಶಗಳು, ದೇವಾಲಯಗಳು, ಸಂಸ್ಕೃತಿ, ರೀತಿ ರಿವಾಜುಗಳು, ಉಡುಪು, ಖಾದ್ಯ ಎಲ್ಲವೂ ಚಿತ್ರಾವಳಿಯಂತೆ ಕಣ್ಮುಂದೆ ಬರುತ್ತದೆ. ದೇಶದ ಸಾಂಸ್ಕೃತಿಕ ವೈವಿಧ್ಯತೆ ಹೆಮ್ಮೆ ತರುತ್ತದೆ. ‘ನೀರಜ ಮುಖಿಗೆ ಮಡಿಲ ತುಂಬಿದರೋ…, ಮುತ್ತಿನಾರತಿ ಕರವೆತ್ತಿ ಬೆಳಗಿರೋ….’ಎಂದು ಒಕ್ಕೊರಲಿನಿಂದ ಹಾಡುತ್ತಾ ನಾವು ಚಿಕ್ಕಂದಿನಲ್ಲಿ ಮನೆಮನೆಗೆ ತೆರಳಿ ತಮ್ಮ ಗೊಂಬೆ ಬಾಗಿನದ ಡಬ್ಬಿಯನ್ನು ತುಂಬಿಸಿಕೊಳ್ಳುತ್ತಿದ್ದೆವು. ಒಂದು ದಿನ ಚಕ್ಕುಲಿ, ರವೆ ಉಂಡೆ, ಕೋಡುಬಳೆ, ಸಜ್ಜಪ್ಪ, ನಿಪ್ಪಟ್ಟು ಎಂದೆಲ್ಲಾ ಮಕ್ಕಳೇನು ದೊಡ್ಡವರ ಬಾಯಲ್ಲೂ ನೀರು ತರಿಸುವ ತಿಂಡಿಗಳನ್ನು ಮಾಡುತ್ತಿದ್ದರು. ಈಗ ಕಾಲ ಬದಲಾದಂತೆ ಆದ್ಯತೆಗಳೂ ಬದಲಾಗಿವೆ. ಆದರೆ ಮೂಲ ಆಶಯ ಹಾಗೇ ಉಳಿದಿದೆ. ನಮಗೆ ಪುರಾಣಗಳ ಬಗ್ಗೆ ತಿಳಿಸಿಕೊಟ್ಟ ಗೊಂಬೆಗಳ ಮೂಲಕ ದೇಶದ ವೈವಿಧ್ಯತೆಯನ್ನು ತಿಳಿಸಲು ಪ್ರಯತ್ನಿಸಿದ್ದೇನೆ’ ಎನ್ನುತ್ತಾರೆ ಡಾ. ಡಾ.ರೋಹಿಣಿ ರವಿಶಂಕರ್‌.
–ಡಿ.ಜಿ.ಮಲ್ಲಿಕಾರ್ಜುನ.

ತುಮ್ಮನಹಳ್ಳಿಯ ಹೆಜ್ಜೇನಿನ ಗೂಡುಗಳು

0

ಟೊಮೇಟೋ, ಹುರಳಿಕಾಯಿ, ಕ್ಯಾರೆಟ್, ಈರುಳ್ಳಿ ಮುಂತಾದ ತರಕಾರಿಗಳಿಲ್ಲದೆ ನಮ್ಮ ಆಹಾರ ಅಪೂರ್ಣ. ಇಂತಹ ತರಕಾರಿಗಳ ಹುಟ್ಟಿಗೆ ಕಾರಣವಾಗುವುವು ಅಜ್ಞಾತ ಬಂಧುಗಳಾದ ಜೇನುನೊಣಗಳು. ಇಂತಹ ರೈತಸ್ನೇಹಿ ಹೆಜ್ಜೇನುಗಳ ನೂರಾರು ಗೂಡುಗಳು ತಾಲ್ಲೂಕಿನ ತುಮ್ಮನಹಳ್ಳಿಯಲ್ಲಿವೆ.
ತಾಲ್ಲೂಕಿನ ತುಮ್ಮನಹಳ್ಳಿಯ ಗ್ರಾಮ ಪಂಚಾಯಿತಿ ಕಚೇರಿ ಎದುರಿನ ಗುಂಡುತೋಪಿನಲ್ಲಿರುವ ಅತ್ಯಂತ ಹಳೆಯದಾದ ಮಾವಿನ ಮರಗಳಲ್ಲಿ ಹಲವಾರು ವರ್ಷಗಳಿಂದ ನೂರಾರು ಜೇನುಗಳು ಗೂಡುಗಳನ್ನು ಕಟ್ಟಿಕೊಂಡು ಮನುಷ್ಯರೊಂದಿಗೆ ಸಹಬಾಳ್ವೆ ನಡೆಸಿವೆ.
ಪ್ರಪಂಚದ ಆರನೇ ಒಂದು ಭಾಗದ ಹೂ ಬಿಡುವ ಸಸ್ಯಗಳ ಪರಾಗಸ್ಪರ್ಶ ನಡೆಯುವುದು ಮತ್ತು ಸುಮಾರು ನಾನ್ನೂರು ಕೃಷಿ ಸಸ್ಯಗಳ ಪರಾಗಸ್ಪರ್ಶಕ್ಕೆ ಕಾರಣವಾಗಿರುವುದು ಜೇನ್ನೊಣಗಳು. ಸುತ್ತಮುತ್ತ ಹೆಚ್ಚು ಸಸ್ಯ ವೈವಿಧ್ಯವಿರುವ, ತೊಂದರೆ ಇಲ್ಲದ ಎತ್ತರದ ಸ್ಥಳಗಳನ್ನು ಹೆಜ್ಜೇನುಗಳು ಆಯ್ಕೆ ಮಾಡಿಕೊಂಡು ನೆಲೆಗಳನ್ನು ಸ್ಥಾಪಿಸಿಕೊಳ್ಳುತ್ತವೆ. ಜೇನಿನ ಸಹಾಯವಿಲ್ಲದೆ ಹೂ ಬಿಡುವ ಸಸ್ಯಗಳು ಕಾಯಿ, ಬೀಜಗಳಾಗದು. ಬೀಜಗಳುದುರಿ ಗಿಡವಾಗಿ ಹೂಬಿಡದಿದ್ದರೆ ಜೇನು ಹುಳುವಿಗೆ ಮಕರಂದ ಸಿಗದು. ಸಮತೋಲನ ಹದ ತಪ್ಪಿದಲ್ಲಿ ಪರಿಸರ ಮತ್ತು ಪ್ರಕೃತಿಯಲ್ಲಿ ವೈಪರೀತ್ಯಗಳು ಸಂಭವಿಸಿ ಮಾನವನ ಜೀವನದಲ್ಲೂ ತನ್ನ ಸ್ವರೂಪ ತೋರಿಸುತ್ತದೆ.
ಜೇನು ತಯಾರಿಗೆ ಬೇಕಾದ ಕಚ್ಚಾ ವಸ್ತು ಹೂವಿನ ಮಕರಂದ. ಜೇನುಗಳು ಹೊಟ್ಟೆಯಲ್ಲಿ ಸುಕ್ರೋಸ್‌ನಂಥ ಸಂಕೀರ್ಣ ಸಕ್ಕರೆ ಎನ್‌ಜೈಮುಗಳ ಮೂಲಕ ಫ್ರಕ್ಟೋಸ್ ಗ್ಲೂಕೋಸ್‌ಗಳಂಥ ಸರಳ ರೂಪಕ್ಕೆ ಪರಿವರ್ತಿತವಾಗುತ್ತದೆ. ಶೇಕಡಾ ೮೦ರಷ್ಟು ಸಕ್ಕರೆ ಅಂಶವಿರುವ ಜೇನು ಸಿದ್ಧವಾಗುತ್ತದೆ. ಜೇನುತುಪ್ಪ ಸಂಗ್ರಹಿಸುವ ಜೇನ್ನೊಣಗಳಲ್ಲಿ ಹೆಜ್ಜೇನು, ಕೋಲುಜೇನು, ತುಡುವಿ, ಮಿಸ್ರಿ ಎಂಬ ನಾಲ್ಕು ಜಾತಿಯ ನೊಣಗಳು ಭಾರತದಲ್ಲಿವೆ. ಇವುಗಳಲ್ಲಿ ತುಡುವಿ ಜೇನ್ನೊಣಗಳನ್ನು ಮಾತ್ರ ಸಾಕಬಹುದು. ಹೆಜ್ಜೇನಿನ ಒಂದು ಹುಟ್ಟಿನಿಂದ ೩೦ ಕೆಜಿ ಜೇನು ಸಿಗುತ್ತದೆ.
ಜೇನಿನ ಹಲವಾರು ಉಪಯುಕ್ತತೆಗಳನ್ನು ಮನಗಂಡಿದ್ದ ಹಿಂದಿನ ರೈತಾಪಿ ಜನರು ಗ್ರಾಮದ ಗುಂಡುತೋಪುಗಳು, ಬಂಡೆಗಲ್ಲುಗಳ ಬಳಿ ಕಟ್ಟಿರುವ ಹೆಜ್ಜೇನುಗಳ ತಂಟೆಗೆ ಹೋಗಬಾರದು ಎನ್ನುತ್ತಿದ್ದರು. ಗ್ರಾಮದ ಸುತ್ತಮುತ್ತ ಜೇನುಗೂಡುಗಳು ಹೆಚ್ಚಿದ್ದಷ್ಟೂ ಗ್ರಾಮಕ್ಕೇ ಉಪಯೋಗ ಎಂಬ ನಂಬಿಕೆಯಿದೆ. ಔಷಧಿ ಸಿಂಪಡನೆ ಹೆಚ್ಚಿದಂತೆ ಮತ್ತು ಜೇನುತುಪ್ಪದ ಆಸೆಗೆ ಜೇನುಗೂಡಿಗೆ ಕೈಹಾಕಿದಂತೆ ಹಲವೆಡೆ ಜೇನುಗಳು ಗ್ರಾಮಗಳ ಬಳಿಯಿರುವ ತಮ್ಮ ವಾಸಸ್ಥಳಗಳನ್ನು ತೊರೆದಿವೆ.
’ನಮ್ಮ ಗ್ರಾಮ ಪಂಚಾಯಿತಿ ಕಚೇರಿ ಮುಂದೆ ರಸ್ತೆ ಬದಿಯಲ್ಲಿರುವ ಗುಂಡು ತೋಪಿನಲ್ಲಿ ಹಳೆಯ ಕಾಲದ ಮಾವಿನ ಮರಗಳಲ್ಲಿ ಹಲವಾರು ವರ್ಷಗಳಿಂದ ಹೆಜ್ಜೇನುಗಳು ಗೂಡು ಕಟ್ಟಿಕೊಂಡಿವೆ. ಸುಮಾರು ೧೩೦ ವರ್ಷಗಳಿಗೂ ಹಿಂದಿನ ಮರಗಳಿವು. ಬಹಳ ಎತ್ತರದಲ್ಲಿರುವುದರಿಂದ ಜೇನುಗೂಡುಗಳನ್ನು ಯಾರೂ ಕೀಳಲು ಹೋಗಿಲ್ಲ. ಅವುಗಳೂ ಇದುವರೆಗೂ ಯಾರ ಮೇಲೂ ಧಾಳಿ ಮಾಡಿಲ್ಲ. ನಮ್ಮ ಗ್ರಾಮದಲ್ಲಿ ಮತ್ತು ಸುತ್ತಮುತ್ತಲ ಪ್ರದೇಶಗಳಲ್ಲಿನ ಬೆಳೆ ಹೆಚ್ಚಾಗಲು ಈ ಜೇನ್ನೊಣಗಳು ಕಾರಣವಾಗಿವೆ. ಸಾವಯವ ಕೃಷಿಯನ್ನು ಅಳವಡಿಸಿಕೊಂಡಿರುವವರಿಗೆ ಇವುಗಳು ನಿಜಕ್ಕೂ ವರದಾನವಾಗಿವೆ’ ಎನ್ನುತ್ತಾರೆ ತುಮ್ಮನಹಳ್ಳಿಯ ಬಚ್ಚರೆಡ್ಡಿ.
–ಡಿ.ಜಿ.ಮಲ್ಲಿಕಾರ್ಜುನ.

ಮಳ್ಳೂರು, ಎಚ್‌.ಕ್ರಾಸ್‌ನ ದೇವಾಲಯಗಳಲ್ಲಿ ಕಳ್ಳತನ

0

ತಾಲ್ಲೂಕಿನ ಮಳ್ಳೂರು ಮತ್ತು ಎಚ್‌.ಕ್ರಾಸ್‌ ದೇವಾಲಯಗಳಲ್ಲಿ ಶುಕ್ರವಾರ ರಾತ್ರಿ ಕಳ್ಳತನ ನಡೆದಿದೆ.

ಶಿಡ್ಲಘಟ್ಟ ತಾಲ್ಲೂಕಿನ ಮಳ್ಳೂರು ಗ್ರಾಮದ ಕರಗದಮ್ಮ ದೇವಿ ದೇವಾಲಯದಲ್ಲಿ ಶುಕ್ರವಾರ ರಾತ್ರಿ ದೇವಿಯ ಕಿರೀಟ, ಆಭರಣಗಳು ಮತ್ತು ಹುಂಡಿಯಲ್ಲಿನ ಹಣವನ್ನು ಕಳ್ಳರು ದೋಚಿದ್ದಾರೆ.
ಶಿಡ್ಲಘಟ್ಟ ತಾಲ್ಲೂಕಿನ ಮಳ್ಳೂರು ಗ್ರಾಮದ ಕರಗದಮ್ಮ ದೇವಿ ದೇವಾಲಯದಲ್ಲಿ ಶುಕ್ರವಾರ ರಾತ್ರಿ ದೇವಿಯ ಕಿರೀಟ, ಆಭರಣಗಳು ಮತ್ತು ಹುಂಡಿಯಲ್ಲಿನ ಹಣವನ್ನು ಕಳ್ಳರು ದೋಚಿದ್ದಾರೆ.

ಮಳ್ಳೂರಿನ ಕರಗದಮ್ಮ ದೇವಿ ದೇವಾಲಯದ ಬಾಗಿಲನ್ನು ಮುರಿದು ದೇವಿಯ ಕಿರೀಟ, ಆಭರಣಗಳು ಮತ್ತು ಹುಂಡಿಯಲ್ಲಿನ ಹಣವನ್ನು ಕಳ್ಳರು ದೋಚಿದ್ದಾರೆ. ಸುಮಾರು ಒಂದೂವರೆ ಲಕ್ಷ ರೂಗಳ ದೇವಿಯ ಕಿರೀಟ, ಆಭರಣಗಳು ಹಾಗೂ ಸುಮಾರು ಒಂದು ಲಕ್ಷಕ್ಕೂ ಹೆಚ್ಚಿನ ಹಣವನ್ನು ಹುಂಡಿಯಿಂದ ದೋಚಿ ಹುಂಡಿಯನ್ನು ಕೆರೆಯ ಅಂಗಳದಲ್ಲಿ ಬಿಸಾಡಿದ್ದು ಕಂಡು ಬಂದಿದೆ.
ಕರಗದಮ್ಮ ದೇವಿ ದೇವಾಲಯ ಪುರಾತನವಾಗಿದ್ದು ಕಳೆದ ವರ್ಷವಷ್ಟೇ ಪುನರುಜ್ಜೀವನಗೊಳಿಸಲಾಗಿತ್ತು. ದೇವಾಲಯದ ಸುತ್ತ ಮನೆಗಳಿದ್ದರೂ ಸಹ ಕಳ್ಳತನವಾಗಿರುವುದು ಸೋಜಿಗವಾಗಿದೆ ಮತ್ತು ಗ್ರಾಮದಲ್ಲಿ ಭೀತಿಯ ವಾತಾವರಣ ಸೃಷ್ಠಿಯಾಗಿದೆ. ಕಳ್ಳರು ಹತ್ತಿರದ ಮನೆಗಳಿಗೆ ಹೊರಗಿನಿಂದ ಚಿಲಕ ಹಾಕಿದ್ದರು ಎನ್ನಲಾಗಿದೆ. ದೇವಾಲಯ ಸಮಿತಿಯವರ ದೂರಿನ ಹಿನ್ನೆಲೆಯಲ್ಲಿ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲಿಸಿದರು. ಶ್ವಾನ ದಳವನ್ನೂ ಕರೆಸಲಾಗಿತ್ತು.
ಶಿಡ್ಲಘಟ್ಟ ತಾಲ್ಲೂಕಿನ ಎಚ್‌.ಕ್ರಾಸ್‌ನ ಪ್ರಸಿದ್ಧ ಆಂಜನೇಯಸ್ವಾಮಿ ದೇವಾಲಯದಲ್ಲಿ ಶುಕ್ರವಾರ ರಾತ್ರಿ  ಹುಂಡಿಯಲ್ಲಿನ ಹಣವನ್ನು ಕಳ್ಳರು ದೋಚಿದ್ದಾರೆ.
ಶಿಡ್ಲಘಟ್ಟ ತಾಲ್ಲೂಕಿನ ಎಚ್‌.ಕ್ರಾಸ್‌ನ ಪ್ರಸಿದ್ಧ ಆಂಜನೇಯಸ್ವಾಮಿ ದೇವಾಲಯದಲ್ಲಿ ಶುಕ್ರವಾರ ರಾತ್ರಿ ಹುಂಡಿಯಲ್ಲಿನ ಹಣವನ್ನು ಕಳ್ಳರು ದೋಚಿದ್ದಾರೆ.

ತಾಲ್ಲೂಕಿನ ಎಚ್‌.ಕ್ರಾಸ್‌ನ ಪ್ರಸಿದ್ಧ ಆಂಜನೇಯಸ್ವಾಮಿ ದೇವಾಲಯದ ಬಾಗಿಲು ಮುರಿದು ಹುಂಡಿಯಲ್ಲಿದ್ದ ಹಣವನ್ನು ದೋಚಲಾಗಿದೆ. ದೇವಾಲಯದ ಹಿಂಬಾಗದ ಆವರಣದಲ್ಲಿಯೇ ಪೊಲೀಸ್‌ ಠಾಣೆಯಿದ್ದು, ಮುಂದೆ ಹಾಗೂ ಪಕ್ಕ ಹೆದ್ದಾರಿಯಿದೆ. ಆದರೂ ಕಳ್ಳತನ ನಡೆದಿರುವುದು ಸಾರ್ವಜನಿಕರಲ್ಲಿ ಚರ್ಚೆಗೆ ಗ್ರಾಸವಾಗಿದೆ.

ಶ್ರೀ ವೀರಾಂಜನೇಯ ಸ್ವಾಮಿ ದೇವಾಲಯದ ಭಜನೆ ಸೇವೆ

0

ಶಿಡ್ಲಘಟ್ಟ ಪಟ್ಟಣದ ಉಲ್ಲೂರುಪೇಟೆ ಶ್ರೀ ವೀರಾಂಜನೇಯ ಸ್ವಾಮಿ ದೇವಾಲಯದಲ್ಲಿ ಪ್ರತಿ ಶನಿವಾರದ ಮುಂಜಾನೆಯ ಭಜನೆ ಸೇವೆ ಲಕ್ಷ್ಮಯ್ಯ – ತಬಲ, ಗೋಪಾಲಪ್ಪ – ಕಂಜರಿ, ಮುನಿಯಪ್ಪ – ಹಾರ್ಮೋನಿಯಮ್ ಹಾಗೂ ದೇವರಮಳ್ಳೂರು ವೆಂಕಟರಾಯಪ್ಪನವರ ಗಾಯನದೊಂದಿಗೆ ಹಲವು ವರ್ಷಗಳಿಂದ ನೆರವೇರಲ್ಪಡುತ್ತಿದೆ.

ಬರಗಾಲ, ಮೇವು ನೀರಿನ ಕೊರತೆಯ ಹೊರತಾಗಿಯೂ ಹೈನುಗಾರಿಕೆ ಕ್ಷೇತ್ರದಲ್ಲಿ ತಾಲ್ಲೂಕು ಮುಂದಿದೆ

0

ಬಯಲುಸೀಮೆಯ ಪ್ರದೇಶದಲ್ಲಿ ಅಲ್ಪಸ್ವಲ್ಪ ನೀರನ್ನು ಸದ್ಭಳಕೆ ಮಾಡಿಕೊಳ್ಳುವ ಮೂಲಕ ಶ್ರಮಿಕ ರೈತರು ಸ್ವಾವಲಂಬಿ ಜೀವನ ನಡೆಸುತ್ತಿದ್ದಾರೆ ಎಂದು ಶಾಸಕ ಎಂ.ರಾಜಣ್ಣ ತಿಳಿಸಿದರು.
ತಾಲ್ಲೂಕಿನ ಭಕ್ತರಹಳ್ಳಿ ಹಾಲು ಉತ್ಪಾದಕರ ಸಹಕಾರ ಸಂಘದ 20 ಲಕ್ಷ ರೂಗಳ ವೆಚ್ಚದ ನೂತನ ಕಟ್ಟಡವನ್ನು ಶುಕ್ರವಾರ ಉದ್ಘಾಟಿಸಿ ಅವರು ಮಾತನಾಡಿದರು.
ಈ ಬಾರಿ ಮಳೆಯಾಗದೇ ಬರಗಾಲ ಬಂದಿದ್ದು, ರಾಸುಗಳಿಗೆ ಮೇವು ಮತ್ತು ನೀರಿನ ಕೊರತೆ ಉಂಟಾಗಿದೆ. ಈಚೆಗೆ ಪರಿಶೀಲನೆಗೆಂದು ಆಗಮಿಸಿದ್ದ ಕೃಷಿ ಸಚಿವ ಕೃಷ್ಣ ಬೈರೇಗೌಡ ಅವರಿಗೆ ವಸ್ತುಸ್ಥಿತಿಯನ್ನು ಮನವರಿಕೆ ಮಾಡಿಕೊಟ್ಟಿದ್ದು, ಸರ್ಕಾರದಿಂದ ರೈತರಿಗೆ ಸೂಕ್ತ ಪರಿಹಾರ ಒದಗಿಸಲು ಮನವಿ ಮಾಡಿದ್ದೇನೆ. ನೀರಿನ ತೊಂದರೆಯಿದ್ದರೂ ಜಿಲ್ಲೆಯು ಹಾಲಿನ ಉತ್ಪಾದನೆಯಲ್ಲಿ ರಾಜ್ಯದಲ್ಲೇ ಎರಡನೇ ಸ್ಥಾನದಲ್ಲಿದೆ. ಗುಣಮಟ್ಟದ ಹಾಲಿಗೂ ಜಿಲ್ಲೆ ಹೆಸರುಪಡೆದಿದೆ. ಹೈನುಗಾರಿಕೆ ಕ್ಷೇತ್ರದ ಅಭಿವೃದ್ಧಿಗೆ ಮಹಿಳೆಯರ ಪಾತ್ರವೂ ಬಹುಮುಖ್ಯ. ಭಕ್ತರಹಳ್ಳಿ ಹಾಲು ಉತ್ಪಾದಕರ ಸಹಕಾರ ಸಂಘವು ಪ್ರತಿದಿನ 3000 ಲೀಟರ್ ಹಾಲು ಸಂಗ್ರಹಿಸಿ ತಾಲ್ಲೂಕಿನಲ್ಲೇ ದ್ವಿತೀಯ ಸ್ಥಾನದಲ್ಲಿರುವುದು ಹೆಮ್ಮೆಯ ಸಂಗತಿ ಎಂದು ಹೇಳಿದರು.
ಈ ಸಂದರ್ಭದಲ್ಲಿ ಭಕ್ತರಹಳ್ಳಿ ಹಾಲು ಉತ್ಪಾದಕರ ಸಹಕಾರ ಸಂಘದ ಸದಸ್ಯರ ಪ್ರತಿಭಾವಂತ ಮಕ್ಕಳನ್ನು ಪುರಸ್ಕರಿಸಲಾಯಿತು. ಹೆಚ್ಚು ಹಾಲನ್ನು ಉತ್ಪಾದಿಸುವ ಸದಸ್ಯರಿಗೆ ಬಹುಮಾನಗಳನ್ನು ನೀಡಲಾಯಿತು.
ಭಕ್ತರಹಳ್ಳಿ ಹಾಲು ಉತ್ಪಾದಕರ ಸಹಕಾರ ಸಂಘದ ಅಧ್ಯಕ್ಷ ಬಿ.ಕೆ.ಚನ್ನೇಗೌಡ, ಕೋಚಿಮುಲ್ ನಿರ್ದೇಶಕ ಬಂಕ್ ಮುನಿಯಪ್ಪ, ಗ್ರಾಮ ಪಂಚಾಯತಿ ಅಧ್ಯಕ್ಷ ಬಿ.ಎಂ.ಗೋಪಾಲಗೌಡ, ಉಪಾಧ್ಯಕ್ಷೆ ಶಶಿಕಲಾ ನಟರಾಜ್, ಮೇಲೂರು ರವಿಕುಮಾರ್, ಕೋಚಿಮುಲ್ ಉಪವ್ಯವಸ್ಥಾಪಕ ಡಾ.ಕೆ.ಜಿ.ಈಶ್ವರಯ್ಯ, ವಿಸ್ತರಣಾಧಿಕಾರಿ ಕೆ.ಎನ್.ಬಿ.ರೆಡ್ಡಿ, ಕೆನರಾಬ್ಯಾಂಕ್ ಪ್ರಧಾನ ವ್ಯವಸ್ಥಾಪಕ ವಿಜಯಕುಮಾರ್, ಎಸ್.ಎಫ್.ಸಿ.ಎಸ್ ಅಧ್ಯಕ್ಷ ನಾರಾಯಣಸ್ವಾಮಿ, ಮುನಿನಾರಾಯಣಪ್ಪ, ವೆಂಕಟಮೂರ್ತಿ, ಪುಟ್ಟಮೂರ್ತಿ, ಬಿ.ಕೆ.ರಾಮಚಂದ್ರ, ರಮೇಶ, ಸೂರ್ಯನಾರಾಯಣಗೌಡ, ಅಫ್ಸರ್ಪಾಷ, ರಘುರಾಜ್, ನಾರಾಯಣಸ್ವಾಮಿ, ಮುನಿರಾಜು ಮತ್ತಿತರರು ಕಾರ್ಯಕ್ರಮದಲ್ಲಿ ಹಾಜರಿದ್ದರು.

error: Content is protected !!