17.1 C
Sidlaghatta
Saturday, December 27, 2025
Home Blog Page 1022

ರೇಷ್ಮೆ ಉದ್ದಿಮೆಯ ಅಧ್ಯಯನಕ್ಕಾಗಿ ಥಾಯ್ಲೆಂಡ್ ಅಧಿಕಾರಿಗಳ ಭೇಟಿ

0

ಶಿಡ್ಲಘಟ್ಟದ ರೇಷ್ಮೆ ಉದ್ದಿಮೆಯನ್ನು ಅಧ್ಯಯನ ಮಾಡಿ ತಮ್ಮ ದೇಶದಲ್ಲಿ ಅಳವಡಿಸಿಕೊಳ್ಳಲೆಂದು ಗುರುವಾರ ಥಾಯ್ಲೆಂಡ್ ದೇಶದ ರೇಷ್ಮೆ ಇಲಾಖೆಯ ವಿವಿಧ ಅಧಿಕಾರಿಗಳ ತಂಡ ಭೇಟಿ ನೀಡಿದ್ದರು.
ಥಾಯ್ಲೆಂಡ್ ದೇಶದ ‘ದ ಕ್ವೀನ್ ಸಿರಿಕಿಟ್’ ರೇಷ್ಮೆ ಇಲಾಖೆ, ಕೃಷಿ ಇಲಾಖೆಯ ಅಧಿಕಾರಿಗಳು, ಸಂಶೋಧಕರು ಹಾಗೂ ಆರ್ಥಿಕ ತಜ್ಞರ ಒಂಬತ್ತು ಮಂದಿಯ ತಂಡ, ಪಟ್ಟಣದ ರೇಷ್ಮೆ ಗೂಡಿನ ಮಾರುಕಟ್ಟೆ, ರೇಷ್ಮೆ ನೂಲು ಬಿಚ್ಚಾಣಿಕಾ ಕೇಂದ್ರಗಳು, ಟ್ವಿಸ್ಟಿಂಗ್ ಘಟಕಗಳು, ರೇಷ್ಮೆ ಜೋಟ್ ಸಂಸ್ಕರಿಸಿ ನೂಲು ಬಿಚ್ಚಾಣಿಕಾ ಘಟಕವನ್ನು ವೀಕ್ಷಿಸಿ ಮಾಹಿತಿಯನ್ನು ಪಡೆದರು.
ಥಾಯ್ಲೆಂಡ್ ಅಧಿಕಾರಿಗಳ ತಂಡದ ಒಂದು ವಾರದ ಭಾರತ ಭೇಟಿಯಲ್ಲಿ ರಾಮನಗರ ಮತ್ತು ಶಿಡ್ಲಘಟ್ಟದಲ್ಲಿ ರೇಷ್ಮೆ ಉದ್ದಿಮೆ, ಕಾಮಗಾರಿ ವೀಕ್ಷಣೆ, ಆರ್ಥಿಕತೆಯ ಅಧ್ಯಯನದೊಂದಿಗೆ ಮೈಸೂರು ಹಾಗೂ ಬೆಂಗಳೂರು ರೇಷ್ಮೆ ಸಂಶೋಧನಾ ಕೇಂದ್ರಗಳಿಗೂ ಭೇಟಿ ನೀಡಲಿದ್ದಾರೆ.
ಪಟ್ಟಣದ ರೇಷ್ಮೆ ಗೂಡಿನ ಮಾರುಕಟ್ಟೆಗೆ ಗುರುವಾರ ಬೆಳಿಗ್ಗೆ ಭೇಟಿ ನೀಡಿ ರೇಷ್ಮೆ ಗೂಡಿನ ವಹಿವಾಟು, ಹರಾಜು ಪ್ರಕ್ರಿಯೆ, ರೇಷ್ಮೆ ಗೂಡಿನ ಗುಣಮಟ್ಟವನ್ನು ವೀಕ್ಷಿಸಿ, ಕಚ್ಛಾ ರೇಷ್ಮೆ ಉತ್ಪಾದನಾ ಘಟಕಗಳಾದ ಚರಕಾ, ಫಿಲೇಚರ್ ಹಾಗೂ ಮಲ್ಟಿ ಎಂಡ್ ಕೇಂದ್ರಗಳಿಗೆ ಸ್ಥಳೀಯ ಅಧಿಕಾರಿಗಳೊಂದಿಗೆ ತೆರಳಿ ಮಾಹಿತಿಯನ್ನು ಪಡೆದರು. ತಾಲ್ಲೂಕಿನ ಹನುಮಂತಪುರದ ಬಳಿಯಿರುವ ಎಸ್.ಪಿ.ಎಸ್ ಮುನಾವರ್ ಅವರ ರೇಷ್ಮೆ ಜೋಟ್ ಸಂಸ್ಕರಿಸಿ ನೂಲು ಬಿಚ್ಚಾಣಿಕಾ ಘಟಕಕ್ಕೂ ಭೇಟಿ ನೀಡಿ, ತ್ಯಾಜ್ಯರೇಷ್ಮೆಯನ್ನು ಸಂಸ್ಕರಿಸಿ ಹತ್ತಿಯಂತೆ ಮಾಡಿ ಅದರಿಂದ ನೂಲು ತಯಾರಿಸುವ ರೀತಿಯನ್ನು ಹಾಗೂ ಅಲ್ಲಿ ಕೆಲಸ ಮಾಡುವ ಕಾರ್ಮಿಕರ ಕೌಶಲ್ಯದ ಬಗ್ಗೆಯೂ ತಿಳಿದುಕೊಂಡರು.
‘ಥಾಯ್ಲೆಂಡ್ನಲ್ಲಿ ರೇಷ್ಮೆ ಉದ್ದಿಮೆ ಸಣ್ಣ ಪ್ರಮಾಣದಲ್ಲಿದೆ. ನಮ್ಮ ದೇಶ ಕೂಡ ಭಾರತದಂತೆಯೇ ಉಷ್ಣವಲಯದ ದೇಶವಿದ್ದು, ರೇಷ್ಮೆ ಉದ್ದಿಮೆ ಬೆಳೆಸಲು ಸಾಕಷ್ಟು ಅವಕಾಶಗಳಿವೆ. ಯಾಂತ್ರಿಕತೆಯನ್ನೇ ಹೆಚ್ಚಾಗಿ ಅವಲಂಬಿಸಿರುವ ನಾವು ಇಲ್ಲಿನ ಶ್ರಮಿಕರ ಕೌಶಲ್ಯವನ್ನು ಕಂಡು ಬೆರಗಾದೆವು. ಉತ್ತಮ ಗುಣಮಟ್ಟದ ರೇಷ್ಮೆ ಉತ್ಪಾದನೆಯ ಬಗ್ಗೆ ಸಾಕಷ್ಟು ಮಾಹಿತಿಯನ್ನು ಪಡೆದಿದ್ದೇವೆ. ನಮ್ಮೊಂದಿಗೆ ನಮ್ಮ ದೇಶದ ಆರ್ಥಿಕ ತಜ್ಞರೂ ಬಂದಿದ್ದು, ಅಂಕಿ ಅಂಶಗಳನ್ನು ಸಂಗ್ರಹಿಸಿದ್ದಾರೆ. ಎರಡೂ ದೇಶಗಳ ಬಾಂಧವ್ಯ ಉತ್ತಮವಾಗಿರುವುದರಿಂದ ತಂತ್ರಜ್ಞಾನ, ಕೌಶಲ್ಯ, ಗುಣಮಟ್ಟದ ಬಗ್ಗೆ ತಿಳಿದುಕೊಂಡು ನಮ್ಮಲ್ಲೂ ರೇಷ್ಮೆ ಉದ್ದಿಮೆಯನ್ನು ಅಭಿವೃದ್ಧಿಪಡಿಸಲು ಭಾರತಕ್ಕೆ ಬಂದಿದ್ದೇವೆ’ ಎಂದು ‘ದ ಕ್ವೀನ್ ಸಿರಿಕಿಟ್’ ರೇಷ್ಮೆ ಇಲಾಖೆಯ ನಿರ್ದೇಶಕಿ ಸಿರಿಪೋರ್ನ್ ಬೂನ್ಚೋ ತಿಳಿಸಿದರು.
ಈ ಸಂದರ್ಭದಲ್ಲಿ ರೇಷ್ಮೆ ಸಂಶೋಧನಾ ಕೇಂದ್ರದ ವಿಜ್ಞಾನಿಗಳಾದ ಎಚ್.ಎನ್.ಮಹೇಶ್, ಪ್ರಕಾಶ್ ಭಟ್, ರೇಷ್ಮೆ ಇಲಾಖೆಯ ಸಹಾಯಕ ನಿರ್ದೇಶಕ ಶಂಕರಪ್ಪ, ಥಾಯ್ಲೆಂಡ್ ನಿಯೋಗದ ಮೊನ್ಚಾಯ್ ಮೀಸುಕ್, ಸಮ್ರನ್ ಸುಕ್ಜಯ್, ದಿರಕೆ ಸುಂಗ್ಸೋರ್ನ್, ರುಂಗ್ಸಕ್ ಬೂನೋಂನ್ಟೆ, ತಿಪ್ಪತ್ತೊಸ್ನ್ ಮಸ್ಗರೂನ್, ಪಕ್ವಿಪಾ ಪೆಚ್ವಿಚಿಟ್, ಕನ್ನಿಕಾ ಸೊಂತಿ, ಕನೋಕ್ವಾನ್ ಕುನ್ನಥಮ್ ಹಾಜರಿದ್ದರು.

ನವರಾತ್ರಿಯ ದಸರಾ ಗೊಂಬೆ ಆಕರ್ಷಣೆ

0

ಶಿಡ್ಲಘಟ್ಟದ ಗೌಡರಬೀದಿಯ ಮಂಜುನಾಥ್ ಅವರ ಮನೆಯಲ್ಲಿ ನವರಾತ್ರಿಯ ಪ್ರಯುಕ್ತ ಗೊಂಬೆಗಳನ್ನು ಆಕರ್ಷಕವಾಗಿ ಜೋಡಿಸಿಟ್ಟಿದ್ದಾರೆ.

ತಾಲ್ಲೂಕಿನ ಮಳ್ಳೂರು ಸಮೀಪದ ಸಾಯಿನಾಥ ಜ್ಞಾನಮಂದಿರದಲ್ಲಿ ದಸರಾ ಗೊಂಬೆಗಳನ್ನು ಆಕರ್ಷಕವಾಗಿ ಜೋಡಿಸಿಡಲಾಗಿದೆ.
ತಾಲ್ಲೂಕಿನ ಮಳ್ಳೂರು ಸಮೀಪದ ಸಾಯಿನಾಥ ಜ್ಞಾನಮಂದಿರದಲ್ಲಿ ದಸರಾ ಗೊಂಬೆಗಳನ್ನು ಆಕರ್ಷಕವಾಗಿ ಜೋಡಿಸಿಡಲಾಗಿದೆ.

ಶಿಡ್ಲಘಟ್ಟ ತಾಲ್ಲೂಕಿನ ಮಳ್ಳೂರು ಸಮೀಪದ ಸಾಯಿನಾಥ ಜ್ಞಾನಮಂದಿರದಲ್ಲಿ ನವರಾತ್ರಿ ಹೋಮಗಳನ್ನು ಹಮ್ಮಿಕೊಂಡಿದ್ದು, ದಸರಾ ಗೊಂಬೆಗಳನ್ನು ಆಕರ್ಷಕವಾಗಿ ಜೋಡಿಸಿಡಲಾಗಿದೆ.

ರಾಜೀ ಸಂಧಾನದ ಮೂಲಕ ಹಣ, ಸಮಯ ಉಳಿಸಿ

0

ರಾಜೀ ಸಂಧಾನದ ಮೂಲಕ ನ್ಯಾಯಾಲಯದಲ್ಲಿ ಪ್ರಕರಣಗಳನ್ನು ಇತ್ಯರ್ಥಪಡಿಸಿಕೊಳ್ಳಬಹುದಾದ ಅವಕಾಶವಿದ್ದು ಅದರ ಸದುಪಯೋಗಪಡಿಸಿಕೊಳ್ಳುವಂತೆ ಪ್ರಧಾನ ಸಿವಿಲ್ ನ್ಯಾಯಾಧಿಶರಾದ ವಿಜಯ್ದೇವರಾಜ್ ಅರಸ್ ತಿಳಿಸಿದರು.
ನ್ಯಾಯಾಲಯದಲ್ಲಿ ಗುರುವಾರ ಪತ್ರಿಕಾಗೋಷ್ಠಿಯಲ್ಲಿ ಅವರು ಮಾತನಾಡಿ ರಾಷ್ಟ್ರೀಯ ಕಾನೂನು ಸೇವೆಗಳ ಪ್ರಾಧಿಕಾರವು ರಾಷ್ಟ್ರಾದ್ಯಂತ ಸೆಪ್ಟೆಂಬರ್ 1ರಿಂದ ಡಿಸೆಂಬರ್ 6 ರವರೆಗೆ ಬೃಹತ್ ಜನತಾ ನ್ಯಾಯಾಲಯ ಕಾರ್ಯಕ್ರಮವನ್ನು ಆಯೋಜಿಸಿದೆ. ಈ ಕಾರ್ಯಕ್ರಮವು ಶಿಡ್ಲಘಟ್ಟದ ನ್ಯಾಯಾಲಯದಲ್ಲೂ ನಡೆಯುತ್ತಿದೆ. ಈ ಕಾರ್ಯಕ್ರಮದಲ್ಲಿ ಕಾನೂನಿನನ್ವಯ ರಾಜೀ ಇತ್ಯರ್ಥಕ್ಕೆ ಅರ್ಹವಾದ ಕ್ರಿಮಿನಲ್ ಪ್ರಕರಣಗಳು, ಚೆಕ್ ಅಮಾನ್ಯ ಪ್ರಕರಣಗಳು, ಸಿವಿಲ್ ದಾವೆಗಳು ಮುಂತಾದ ಪ್ರಕರಣಗಳನ್ನು ರಾಜೀ ಸಂಧಾನದ ಮೂಲಕ ಇತ್ಯರ್ಥಪಡಿಸಿಕೊಳ್ಳಲು ಅವಕಾಶವಿದೆ. ಅದೇ ರೀತಿ ವ್ಯಾಜ್ಯ ಪೂರ್ವ ಪ್ರಕರಣಗಳನ್ನು ಇತ್ಯರ್ಥಪಡಿಸಿಕೊಳ್ಳಲು ಅವಕಾಶವಿದೆ. ಈ ರೀತಿ ಇತ್ಯರ್ಥಪಡಿಸಿಕೊಂಡ ದಾವೆಗಳಲ್ಲಿ ನ್ಯಾಯಾಲಯದ ಶುಲ್ಕವನ್ನು ಸಂಪೂರ್ಣವಾಗಿ ಸಂಬಂಧಪಟ್ಟ ಪಕ್ಷಗಾರರಿಗೆ ಹಿಂದಿರುಗಿಸಲಾಗುತ್ತದೆ ಎಂದು ತಿಳಿಸಿದರು.

ಆಂಥ್ರಾಕ್ಸ್ ಖಾಯಿಲೆಯಿಂದ ರಾಸುಗಳ ಸಾವು

0

ಕ್ಷೇತ್ರದ ಶಾಸಕ ಎಂ.ರಾಜಣ್ಣ ಅವರ ಸ್ವಗ್ರಾಮ ಎಲ್.ಮುತ್ತುಗದಹಳ್ಳಿಯಲ್ಲಿ ಸುಮಾರು ಹನ್ನೊಂದು ರಾಸುಗಳ ಮರಣದ ಹಿನ್ನೆಲೆಯಲ್ಲಿ ಪಶುಪಾಲನಾ ಮತ್ತು ಪಶುವೈದ್ಯ ಸೇವಾ ಇಲಾಖೆಯ ಅಧಿಕಾರಿಗಳು ಭೇಟಿ ನೀಡಿ ಪರಿಶೀಲಿಸಿದರು.
‘ಜುಲೈ ತಿಂಗಳ ಕೊನೆಯ ವಾರದಲ್ಲಿ ಎಲ್.ಮುತ್ತುಗದಹಳ್ಳಿಯ ಅಂಗಡಿ ಮುನಿವೆಂಕಟಸ್ವಾಮಿ ಅವರ ಒಂದು ಮಿಶ್ರತಳಿ ಹಸು, ಆಗಸ್ಟ್ ತಿಂಗಳಿನಲ್ಲಿ ಅಕ್ಕಲಪ್ಪ ಅವರ ಮಿಶ್ರತಳಿ ಹಸುವಿಗೆ ಚಿಕಿತ್ಸೆ ನೀಡಿದ ನಂತರ ಮೃತಪಟ್ಟ ಹಿನ್ನೆಲೆಯಲ್ಲಿ ಅವುಗಳ ಕಿವಿಯನ್ನು ಬೆಂಗಳೂರಿನ ಪ್ರಯೋಗಾಲಯಕ್ಕೆ ಕಳುಹಿಸಿದ ನಂತರ ಅದು ನೆರಡಿ ರೋಗ(ಆಂಥ್ರಾಕ್ಸ್) ಎಂದು ತಿಳಿದು ಬಂದಿತು. ಹೀಗಾಗಿ ಗ್ರಾಮದ 138 ದನಗಳು, 48 ಎಮ್ಮೆಗಳು, 518 ಕುರಿಗಳು ಮತ್ತು 40 ಮೇಕೆಗಳಿಗೆ ಆಂಥ್ರಾಕ್ಸ್ ಖಾಯಿಲೆಯ ವಿರುದ್ಧ ಲಸಿಕೆ ಹಾಕಿದ್ದೇವೆ. ನಾವು ಚಿಕಿತ್ಸೆ ನೀಡಿ ಪ್ರಯೋಗಾಲಯದಿಂದ ವರದಿ ಬಂದಿರುವ ಪ್ರಕಾರ ಎರಡು ಹಸುಗಳು ಆಂಥ್ರಾಕ್ಸ್ ಖಾಯಿಲೆಯಿಂದ ಮೃತಪಟ್ಟಿವೆ’ ಎಂದು ಪಶುಪಾಲನಾ ಮತ್ತು ಪಶುವೈದ್ಯ ಸೇವಾ ಇಲಾಖೆಯ ಸಹಾಯಕ ನಿರ್ದೇಶಕ ಡಾ.ಮುನಿನಾರಾಯಣರೆಡ್ಡಿ ತಿಳಿಸಿದರು.
‘ಎಲ್.ಮುತ್ತುಗದಹಳ್ಳಿ ಹಾಗೂ ಸುತ್ತಮುತ್ತಲಿನ ಗ್ರಾಮಗಳು ಆಂಥ್ರಾಕ್ಸ್ ರೋಗಗ್ರಸ್ಥ ಗ್ರಾಮಗಳಾಗಿರುವುದರಿಂದ ಸತ್ತ ಜಾನುವಾರುಗಳನ್ನು ಆಳವಾದ ಗುಣಿಯಲ್ಲಿ ಹೂಳಬೇಕು. ನಂತರ ಸುಣ್ಣ ಹಾಕಬೇಕು. ಈ ರೋಗ ಮನುಷ್ಯರಿಗೂ ಹರಡುವ ಸಾಧ್ಯತೆಯಿದೆ. ಹಲವು ವರ್ಷಗಳ ಹಿಂದೆ ಅಲಗುರ್ಕಿ ಗ್ರಾಮದ ಶ್ರೀರಾಮಪ್ಪ ಅವರಿಗೆ ಈ ಖಾಯಿಲೆ ತಗುಲಿ ರಾಷ್ಟ್ರೀಯ ಸುದ್ದಿಯಾಗಿತ್ತು’ ಎಂದು ಪಶುವೈದ್ಯ ಸೇವಾ ಇಲಾಖೆಯ ಉಪ ನಿರ್ದೇಶಕ ಡಾ.ಬಿ.ಎನ್.ಶಿವರಾಮ್ ಹೇಳಿದರು.
‘ಸಾಮಾನ್ಯವಾಗಿ ಮಳೆಗಾಲದಲ್ಲಿ ಕಾಣಿಸಿಕೊಳ್ಳುವ ಆಂಥ್ರಾಕ್ಸ್ ಖಾಯಿಲೆ ತಾಲ್ಲೂಕಿನ ಹಲವಾರು ಗ್ರಾಮಗಳಲ್ಲಿ ಹಲವು ವರ್ಷಗಳಿಂದ ಅಲ್ಲಲ್ಲಿ ಕಾಣಿಸಿಕೊಳ್ಳುತ್ತಿದೆ. ಆಂಥ್ರಾಕ್ಸ್, ಗಳಲೆ ಮತ್ತು ಚಪ್ಪೆರೋಗಗಳ ಗುಣಲಕ್ಷಣಗಳು ಒಂದೇ ರೀತಿಯಾಗಿದ್ದು ಪ್ರಯೋಗಾಲಯದ ಮೂಲಕವಷ್ಟೇ ಅವನ್ನು ಗುರುತಿಸಬೇಕು. ಈ ರೀತಿಯ ಖಾಯಿಲೆಗಳು ಕಂಡುಬಂದಲ್ಲಿ ತಕ್ಷಣವೇ ಕೋಚಿಮುಲ್, ಪಶುವೈದ್ಯಾಧಿಕಾರಿಗಳಿಗೆ, ಹಾಲು ಉತ್ಪಾದಕರ ಸಹಕಾರ ಸಂಘದ ಕಾರ್ಯದರ್ಶಿಗೆ ಮಾಹಿತಿ ನೀಡಿ. ಗುಂಪು ವಿಮಾ ಯೋಜನೆಯನ್ನು ಹಾಲು ಒಕ್ಕೂಟ ಜಾರಿಗೆ ತಂದಿದ್ದು, ಕೇವಲ 400 ರೂಗಳಷ್ಟು ಹಣ ಕಟ್ಟಿ 40 ಸಾವಿರ ರೂಗಳ ವಿಮೆಯನ್ನು ಪಡೆದುಕೊಳ್ಳಬಹುದು. ಸುಮಾರು 150 ರಾಸುಗಳಿರುವ ಎಲ್.ಮುತ್ತುಗದಹಳ್ಳಿಯಲ್ಲಿ ಕೇವಲ 40 ರಾಸುಗಳಿಗೆ ವಿಮೆ ಮಾಡಿಸಿದ್ದಾರೆ’ ಎಂದು ಕೋಚಿಮುಲ್ ಉಪವ್ಯವಸ್ಥಾಪಕ ಡಾ.ಕೆ.ಜಿ.ಈಶ್ವರಯ್ಯ ಹೇಳಿದರು.
ರೈತ ಸಂಘದ ಜಿಲ್ಲಾ ಅಧ್ಯಕ್ಷ ಭಕ್ತರಹಳ್ಳಿ ಬೈರೇಗೌಡ ಮಾತನಾಡಿ, ‘ರೈತರು ಈಗಾಗಲೇ ಸಂಕಷ್ಟದಲ್ಲಿದ್ದಾರೆ. ಜಾನುವಾರುಗಳನ್ನೇ ನಂಬಿ ಬದುಕುತ್ತಿರುವ ಅವರಿಗೆ ಸರ್ಕಾರ ಪರಿಹಾರ ನೀಡಬೇಕು. ಆಂಥ್ರಾಕ್ಸ್ ಖಾಯಿಲೆಯೆಂದು ದೃಢಪಟ್ಟಿರುವುದರಿಂದ ಪಂಚಾಯತಿ ವತಿಯಿಂದ ಸ್ವಚ್ಛತೆಗೆ ಗಮನ ಕೊಡಬೇಕು. ಆಂಥ್ರಾಕ್ಸ್ ಖಾಯಿಲೆ ಮನುಷ್ಯರಿಗೂ ಹರಡುವ ಸಾಧ್ಯತೆಯಿರುವುದರಿಂದ ಸಾರ್ವಜನಿಕ ಆಸ್ಪತ್ರೆಯ ಆರೋಗ್ಯಾಧಿಕಾರಿಗಳು ಮೊಕ್ಕಾಂ ಹೂಡಿ ಜನರಲ್ಲಿ ಅರಿವು ಮೂಡಿಸಬೇಕು’ ಎಂದು ಒತ್ತಾಯಿಸಿದರು.

ಪರೋಪಕಾರದಿಂದ ಆತ್ಮ ತೃಪ್ತಿ

0

ಎಂದಿನಂತೆ ಇಂದು ಬೆಳಿಗ್ಗೆ ಪೇಪರ್ ಓದುತ್ತಿರುವಾಗ ಒಂದು ಲೇಖನ ಕಣ್ಣಿಗೆ ಬಿತ್ತು. ಅದರಲ್ಲಿ ಕತ್ತಲೆಯಾಗಿ ದಾರಿ ಕಾಣದೇ ಹೋದಾಗ ದೇವರು ಒಂದು ಸಣ್ಣ ಬೆಳಕನ್ನು ಚೆಲ್ಲುತ್ತಾನೆ ಎನ್ನುವ ಉಲ್ಲೇಖವಿತ್ತು. ಅದನ್ನು ಓದುತ್ತಾ ನನ್ನ ಜೀವನದ ಒಂದು ಘಟನೆ ನೆನಪಿಗೆ ಬಂತು.
15 ವರ್ಷಗಳ ಕೆಳಗಿನ ಮಾತು, ಒಮ್ಮೆ ಅಮ್ಮ ಹೇಳಿದ ವಸ್ತುಗಳನ್ನು ತರಲು ನಾನು ನಮ್ಮ ಮನೆಯ ಹತ್ತಿರದ ಅಂಗಡಿಗೆ ಹೊಗುತ್ತಿರುವಾಗ, 10-12 ವರ್ಷದ ಸಣ್ಣ ಬಾಲಕ ಸೈಕಲನ್ನು ಜೋರಾಗಿ ತುಳಿದುಕೊಂಡು ಬರುತ್ತಿದ್ದ. ಅದು ಏನಾಯಿತೋ ನಾಕಾಣೆ, ಸೈಕಲ್ ಮೇಲಿನ ಸಂತುಲನೆ ತಪ್ಪಿ ಆ ಹುಡುಗ ಬಿದ್ದುಬಿಟ್ಟ. ನಾನು ಒಮ್ಮೆಲೆ ಓಡಿ ಹೋಗಿ ಅವನ ಸೈಕಲ್ ಎತ್ತಿ ನಿಲ್ಲಿಸಿ “ಯಾಕೋ ಪುಟ್ಟ ಏನಾಯಿತು, ನಿಧಾನವಾಗಿ ಹೊಡೆಯಬಾರದಾ ಪೆಟ್ಟಾಯಿತಾ” ಎಂದು ಕೇಳುತ್ತಾ ಅವನನ್ನು ಎತ್ತಿ ನಿಲ್ಲಿಸಿ ಮೈದಡವಿದೆ, ಗಾಯವೇನಾದರೂ ಆಗಿದೆಯಾ ಎಂದು ನೋಡಿದೆ. ಆದರೆ ಆತ ನಾಚಿಕೆಯಿಂದ ಮುದ್ದೆಯಾಗಿ “ಇಲ್ಲ ಅಕ್ಕ ಏನೂ ಆಗಿಲ್ಲ” ಎಂದು ಹೇಳಿ ಒಂದು ಕ್ಷಣವೂ ನಿಲ್ಲದೆ ಸೈಕಲ್ ಏರಿ ಹೊರಟು ಹೋದ. ಆ ಘಟನೆಯನ್ನು ಅಲ್ಲಿಗೆ ಬಿಟ್ಟು ಅಮ್ಮ ಹೇಳಿದ್ದನ್ನು ತರಲು ಅಂಗಡಿಯ ಕಡೆಗೆ ನಡೆದೆ.
ಕೆಲವು ದಿನಗಳ ನಂತರ ಅದೇ ದಾರಿಯಲ್ಲಿ ಹೋಗುವಾಗ ಒಬ್ಬ ಹುಡುಗ “ಅಕ್ಕ ಚೆನ್ನಾಗಿದ್ದಿರಾ” ಎಂದು ಕೇಳಿದ, ಅರೆ! ಇವನ್ಯಾರು ನಾನು ನೋಡೇ ಇಲ್ಲ ಎಂದು ಯೋಚಿಸುತ್ತಾ, ” ನೀನು ಯಾರು ಪುಟ್ಟ ನನಗೆ ಗೊತ್ತಾಗಲಿಲ್ಲ” ಎಂದೆ. ಆಗ ಆ ಹುಡುಗ ಹೇಳಿದ, “ಅಂದು ಸೈಕಲ್‍ನಿಂದ ಬಿದ್ದಾಗ ನೀವು ಎತ್ತಿದ್ದಿರಲ್ಲ ಅವನು ನಾನು” ಎಂದ. ಆಗ ನೆನಪಾಯಿತು ಆತ ಅಂದು ನಾಚಿಕೆಯಿಂದ ಓಡಿದ ಕಾರಣ ಅವನ ಮುಖ ಪರಿಚಯ ನನಗೆ ಆಗಿರಲಿಲ್ಲ. ಆತನ ಕುಶಲೋಪರಿ ವಿಚಾರಿಸಿ ನಾನೂ ಮುಂದೆ ನಡೆದೆ.
ಆದರೆ ಅಂದಿನ ದಿನ ನನ್ನ ಮನಸ್ಸು ಅದೆಷ್ಟು ಉಲ್ಲಸಿತವಾಗಿ ಹಾರಾಡುತ್ತಿತ್ತು ಎಂದು ನಾನು ಮಾತಿನಲ್ಲಿ ವ್ಯಕ್ತಪಡಿಸಲಾರೆ. ಪರಿಚಯವೇ ಇಲ್ಲದೇ ಮಾಡಿದ ಒಂದು ಸಣ್ಣ ಸಹಾಯಕ್ಕೆ ಆತ ನನ್ನ ನೆನಪಿಟ್ಟು ಮಾತನಾಡಿಸಿದ್ದ. ನಮಗೆ ಅದೆಷ್ಟೇ ಕಷ್ಟವಾದರೂ ಆ ಸಮಯದಲ್ಲಿ ದೊರೆಯುವ ಸಣ್ಣ ಸಹಾಯವೂ ಅತೀ ಮಹತ್ವದ ಪಾತ್ರವಹಿಸುತ್ತದೆ.
ಮನುಷ್ಯ ಮತ್ತೊಬ್ಬರಿಗೆ ಸಹಾಯ ಮಾಡಿದಾಗ ದೊರೆಯುವ ತೃಪ್ತಿ, ಆನಂದ ಬೇರೆಯಾವುದರಿಂದಲೂ ಸಿಗಲಾರದು. ಮನುಷ್ಯರಾದ ನಾವು ಇಂಥ ಆನಂದವನ್ನು ಅನುಭವಿಸಿದಾಗಲೇ ಜೀವನ ಸಾರ್ಥಕ ಎನ್ನಿಸುತ್ತದೆ.
– ಕುಸುಮ

ಶಾಸಕರ ಸ್ವಗ್ರಾಮದಲ್ಲಿ ಹನ್ನೊಂದು ರಾಸುಗಳ ಮರಣ

0

ಕ್ಷೇತ್ರದ ಶಾಸಕ ಎಂ.ರಾಜಣ್ಣ ಅವರ ಸ್ವಗ್ರಾಮ ಎಲ್.ಮುತ್ತುಗದಹಳ್ಳಿಯಲ್ಲಿ ಕಳೆದ ಇಪ್ಪತ್ತು ದಿನಗಳಲ್ಲಿ ಸುಮಾರು ಹನ್ನೊಂದು ಹಸುಗಳು ಮೃತಪಟ್ಟಿದ್ದು, ಇದುವರೆಗೂ ಯಾವುದೇ ಕ್ರಮ ಕೈಗೊಂಡಿಲ್ಲ ಎಂದು ಗ್ರಾಮಸ್ಥರು ದೂರುತ್ತಾರೆ.
ಪಶುವೈದ್ಯಾಧಿಕಾರಿಗಳು ಬಂದು ಹೋಗಿದ್ದಾರೆ ಆದರೆ ಇದುವರೆಗೂ ಜಾನುವಾರುಗಳಗೆ ಯಾವ ರೋಗ ಬಂದಿದೆ, ಏಕೆ ಸಾಮೂಹಿಕವಾಗಿ ಮರಣವನ್ನಪ್ಪುತ್ತಿದೆ ಎಂಬುದನ್ನು ಧೃಡಪಡಿಸುತ್ತಿಲ್ಲ. ಹಸುಗಳನ್ನೇ ನಂಬಿ ಬದುಕುತ್ತಿದ್ದೇವೆ. ಹಲವರು ಮೃತಪಟ್ಟ ಜಾನುವಾರುಗಳನ್ನು ಹೂಳಲೂ ಆಗದೇ ಕೆರೆಯ ಪಕ್ಕ ಬಿಸಾಡಿದ್ದಾರೆ. ಖಾಯಿಲೆ ವಾಸಿಯಾಗುವುದಿಲ್ಲವೆಂದು ಕೆಲವರು ಕಸಾಯಖಾನೆಗೆ ಮಾರಿದ್ದಾರೆ. ಯಾರೋ ಒಬ್ಬಿಬ್ಬರು ಮಾತ್ರ ಸ್ವಂತ ಖರ್ಚಿನಿಂದ ಜೆಸಿಬಿ ತರಿಸಿ ಹೂಳು ತಗಿಸಿ ಸತ್ತ ಹಸುಗಳನ್ನು ಮಣ್ಣು ಮಾಡಿದ್ದಾರೆ. ಸತ್ತ ಹಸುವಿನ ನೋವು, ಆರ್ಥಿಕ ಹೊರೆಯನ್ನು ಹೊತ್ತಿರುವ ರೈತನಿಗೆ ಸೂಕ್ತ ಮಾರ್ಗದರ್ಶನ ಮಾಡುವವರು ಇಲ್ಲವಾಗಿದ್ದಾರೆ. ಹಾಲು ಒಕ್ಕೂಟದವರಾಗಲೀ, ಹಾಲು ಉತ್ಪಾದಕರ ಸಹಕಾರ ಸಂಘದವರಾಗಲೀ ರೋಗ ಹರದಂತೆ ತಡೆಯಲು ಕನಿಷ್ಠ ಹಸುವನ್ನು ಹೂಳಲಾದರೂ ಸಹಾಯ ಮಾಡಬೇಕು. ಕೆಲವಕ್ಕೆ ವಿಮೆ ಮಾಡಿಸಿದ್ದರೆ, ಕೆಲವಕ್ಕೆ ಮಾಡಿಸಿಲ್ಲ. ಹೈನುಗಾರಿಕೆಯನ್ನು ನಂಬಿದವರು ನೆಲಕಚ್ಚಿದ್ದಾರೆ. ಸರ್ಕಾರ ಸಹಾಯ ಮಾಡಬೇಕು ಎನ್ನುತ್ತಾರೆ ಗ್ರಾಮಸ್ಥರು.
ಎಲ್.ಮುತ್ತುಗದಹಳ್ಳಿ ಗ್ರಾಮದ ಮುನಿವೆಂಕಟಸ್ವಾಮಿ, ಸೊಣ್ಣಪ್ಪ, ಅಕ್ಕಲಪ್ಪ, ಎಂ.ನಾರಾಯಣಸ್ವಾಮಿ, ವೆಂಕಟೇಶಪ್ಪ, ರಾಮಣ್ಣ, ಸುಬ್ರಮಣಿ ಅವರ ಒಂದೊಂದು ಹಸುಗಳು ಹಾಗೂ ಕೃಷ್ಣಪ್ಪ ಮತ್ತು ಸುಬ್ಬರಾಯಪ್ಪ ಅವರ ಎರಡು ಹಸುಗಳು ಸೇರಿದಂತೆ ಒಟ್ಟು 11 ಹಸುಗಳು ಮೃತಪಟ್ಟಿವೆ.
‘ಮೇವು ತಿನ್ನುತ್ತಾ ನೀರು ಕುಡಿಯುತ್ತಿದ್ದ ಹಸು ಇದ್ದಕ್ಕಿದ್ದಂತೆಯೇ ಸಪ್ಪಗಾಯಿತು. ತಿನ್ನುವುದನ್ನು ನಿಲ್ಲಿಸಿಬಿಟ್ಟಿತು. ತಕ್ಷಣ ಹೋಗಿ ಪಶುವೈದ್ಯಾಧಿಕಾರಿ ಡಾ.ಮುನಿನಾರಾಯಣರೆಡ್ಡಿ ಅವರನ್ನು ಕರೆದುಕೊಂಡು ಬಂದೆವು. ಅವರು ಚಿಕಿತ್ಸೆ ನೀಡಿದರೂ ಫಲಕಾರಿಯಾಗಲಿಲ್ಲ. ನೋಡನೋಡುತ್ತಿದ್ದಂತೆಯೇ ಹಸು ಮೃತಪಟ್ಟಿತು. ವೈದ್ಯಾಧಿಕಾರಿ ಅದರ ಕಿವಿಯನ್ನು ಕತ್ತರಿಸಿ ರೋಗದ ಕಾರಣ ಕಂಡು ಹಿಡಿಯಲು ಬೆಂಗಳೂರಿನ ಪ್ರಯೋಗಾಲಯಕ್ಕೆ ಕಳುಹಿಸಿಕೊಟ್ಟರು. ಇನ್ನೊಂದು ಹಸುವೂ ಅದೇ ರೀತಿ ಆಯಿತು. ಅದಕ್ಕೂ ವೈದ್ಯರು ಚಿಕಿತ್ಸೆ ನೀಡಿದರೂ ಬದುಕುಳಿಯಲಿಲ್ಲ. ಯಾವ ರೋಗ, ಏನಾಗುತ್ತಿದೆ ಎಂದು ತಿಳಿಯದಂತೆ ಕೆಲ ಗಂಟೆಗಳಲ್ಲಿ ನಮ್ಮ ಎರಡು ಹಸುಗಳನ್ನು ಕಳೆದುಕೊಂಡೆವು. ವೈದ್ಯರು ಆಂಥ್ರಾಕ್ಸ್ ರೋಗವಿರಬಹುದೆಂದು ಶಂಕೆ ವ್ಯಕ್ತಪಡಿಸಿದ್ದಾರೆ’ ಎಂದು ಎಚ್.ಕೃಷ್ಣಪ್ಪ ತಿಳಿಸಿದರು.
‘ಬರಪೀಡಿತ ಜಿಲ್ಲೆಯೆಂದು ಘೋಷಿಸಬೇಕು. ಜಾನುವಾರುಗಳಿಗೆ ಮೇವಿಲ್ಲ. ಕುಡಿಯಲು ನೀರಿಲ್ಲ ಎಂದು ಈಗಾಗಲೇ ರೈತಸಂಘದಿಂದ ಮನವಿಗಳನ್ನು ಸರ್ಕಾರಕ್ಕೆ ನೀಡಿದ್ದೇವೆ. ಇಂಥಹ ಕ್ಲಿಷ್ಟಕರ ಪರಿಸ್ಥಿತಿಯಲ್ಲಿರುವಾಗ ಕಷ್ಟಪಟ್ಟು ಜಾನುವಾರುಗಳನ್ನು ಸಾಕುವ ರೈತನಿಗೆ ಕೊಡಲಿಪೆಟ್ಟಿನಂತೆ ಹಸುಗಳಿಗೆ ಖಾಯಿಲೆ ಬಂದು ಮೃತಪಡುತ್ತಿವೆ. ಇಷ್ಟೊಂದು ರಾಸುಗಳು ಸತ್ತಿದ್ದರೂ ಖಾಯಿಲೆ ಯಾವುದು ಎಂಬುದನ್ನು ಅಧಿಕಾರಿಗಳು ಧೃಡಪಡಿಸದಿರುವುದು ದುರದೃಷ್ಟಕರ. ಸತ್ತ ರಾಸುಗಳ ಮಾಲೀಕರಿಗೆ ಸರ್ಕಾರ ಕನಿಷ್ಠ 50 ಸಾವಿರ ರೂಗಳಾದರೂ ಪರಿಹಾರ ನೀಡಿ ಅವರನ್ನು ಉಳಿಸಬೇಕು’ ಎಂದು ರೈತಸಂಘದ ಜಿಲ್ಲಾಧ್ಯಕ್ಷ ಭಕ್ತರಹಳ್ಳಿ ಬೈರೇಗೌಡ ತಿಳಿಸಿದ್ದಾರೆ.
ರೈತಸಂಘದ ತಾಲ್ಲೂಕು ಅಧ್ಯಕ್ಷ ತಾದೂರು ಮಂಜುನಾಥ್, ಅಬ್ಲೂಡು ಆರ್.ದೇವರಾಜ್, ಗ್ರಾಮದ ಮಂಜುನಾಥರೆಡ್ಡಿ, ಶಶಿಧರ್, ಮುನಿನಾರಾಯಣಪ್ಪ, ಸುಶೀಲಮ್ಮ, ಕೆಂಪಮ್ಮ, ಪ್ರಕಾಶ್ ಮತ್ತಿತರರು ಈ ಸಂದರ್ಭದಲ್ಲಿ ಹಾಜರಿದ್ದರು.

ಬಶೆಟ್ಟಹಳ್ಳಿ ಗ್ರಾಮದದಲ್ಲಿ ಧರ್ಮಸ್ಥಳ ಗ್ರಾಮಾಭಿವೃದ್ಧಿಯೋಜನೆ ಗುಂಪು ರಚನಾ ಕಾರ್ಯಕ್ರಮ ಉದ್ಘಾಟನೆ

0

ಶಿಡ್ಲಘಟ್ಟ ತಾಲ್ಲೂಕು ಬಶೆಟ್ಟಹಳ್ಳಿ ಗ್ರಾಮದ ಈಶ್ವರದೇವಾಸ್ಥಾನದಲ್ಲಿ ಧರ್ಮಸ್ಥಳ ಗ್ರಾಮಾಭಿವೃದ್ಧಿಯೋಜನೆ ವತಿಯಿಂದ ಹಮ್ಮಿಕೊಂಡಿದ್ದ ಗುಂಪು ರಚನಾ ಕಾರ್ಯಕ್ರಮವನ್ನು ಗ್ರಾಮ ಪಂಚಾಯತಿ ಸದಸ್ಯ ಗೋಪಾಲ ರೆಡ್ಡಿಯವರು ಉದ್ಘಾಟಿಸಿದರು. ಮೇಲ್ವಿಚಾರಕ ಜನಾರ್ಧನ್ ನಾಯ್ಕ್, ಶಶಿಕುಮಾರ್, ವಕೀಲೆ ಲಕ್ಷ್ಮಿ, ಚಿಕ್ಕದಾಸಪ್ಪ, ಕೆಂಪಣ್ಣ, ಆಂಜನೇಯರೆಡ್ಡಿ, ವೆಂಕಟೇಶಪ್ಪ ಹಾಜರಿದ್ದರು.

ವೃತ್ತಿಯನ್ನು ಗೌರವ ಹಾಗೂ ಪ್ರೀತಿಯಿಂದ ಕಾಣಬೇಕು – ಶಾಸಕ ಎಂ.ರಾಜಣ್ಣ

0

ಪೌರ ಕಾರ್ಮಿಕರು ತಮ್ಮ ಆರೋಗ್ಯವನ್ನೂ ಲೆಕ್ಕಿಸದೆ ಪುರದ ಸ್ವಚ್ಛದ ಕಾರ್ಯ ಕೈಗೊಳ್ಳುತ್ತಾರೆ. ಅವರನ್ನು ಗೌರವದಿಂದ ಕಾಣಬೇಕು ಎಂದು ಶಾಸಕ ಎಂ.ರಾಜಣ್ಣ ತಿಳಿಸಿದರು.
ಪಟ್ಟಣದ ನಗರೇಶ್ವರ ಕಲ್ಯಾಣ ಮಂಟಪದಲ್ಲಿ ಮಂಗಳವಾರ ರಾಜ್ಯ ಪೌರ ನೌಕರರ ಸೇವಾ ಸಂಘದ ಶಿಡ್ಲಘಟ್ಟ ಶಾಖೆಯ ವತಿಯಿಂದ ಆಯೋಜಿಸಿದ್ದ ಪೌರಕಾರ್ಮಿಕರ ದಿನಾಚರಣೆಯನ್ನು ಉದ್ಘಾಟಿಸಿ ಅವರು ಮಾತನಾಡಿದರು.
ಪೌರಕಾರ್ಮಿಕರ ಸಮಸ್ಯೆಗಳೂ ಸಾಕಷ್ಟಿದ್ದು ಅದರ ಬಗ್ಗೆ ಚರ್ಚೆ ಹಾಗೂ ಸಮಸ್ಯೆ ನಿವಾರಣೆಗಾಗಿ ಪರಿಹಾರ ಕಂಡುಕೊಳ್ಳುವುದು ಕೂಡ ನಡೆಯಬೇಕಿದೆ. ಪ್ರತಿಯೊಬ್ಬರೂ ತಮ್ಮ ವೃತ್ತಿಯನ್ನು ಗೌರವ ಹಾಗೂ ಪ್ರೀತಿಯಿಂದ ಕಾಣುವುದಲ್ಲದೆ ಇತರ ವೃತ್ತಿಯನ್ನೂ ಗೌರವಿಸಬೇಕು. ಪೌರಕಾರ್ಮಿಕರೂ ಕೂಡ ತಮ್ಮ ಜವಾಬ್ದಾರಿಯುತ ಕೆಲಸವನ್ನು ಪ್ರೀತಿಯಿಂದ ಮಾಡಬೇಕು. ಜನಪ್ರತಿನಿಧಿಗಳು ನಿಮ್ಮ ಬೇಡಿಕೆಗಳಿಗೆ ಸ್ಪಂದಿಸುತ್ತೇವೆ ಎಂದು ಹೇಳಿದರು.
ರಾಜ್ಯ ಪೌರ ನೌಕರರ ಸೇವಾ ಸಂಘದ ಜಿಲ್ಲಾಧ್ಯಕ್ಷ ಮುರಳಿ ಮಾತನಾಡಿ, ‘ಹತ್ತು ವರ್ಷಕ್ಕೂ ಮೇಲ್ಪಟ್ಟು ಸೇವೆ ಸಲ್ಲಿಸಿರುವ ಪೌರಕಾರ್ಮಿಕರನ್ನು ಖಾಯಂ ಗೊಳಿಸುವಂತೆ ಸರ್ಕಾರ ಆದೇಶಿಸಿದೆ. ಪೌರಕಾರ್ಮಿಕರ ಸಮಸ್ಯೆಗಳನ್ನು ಸರ್ಕಾರದ ಗಮನಕ್ಕೆ ತಂದಿದ್ದು ಕೆಲವೊಂದು ಸಮಸ್ಯೆಗಳನ್ನು ಬಗೆಹರಿಸುವ ಭರವಸೆ ಸಿಕ್ಕಿದೆ. ನಮ್ಮ ಕಷ್ಟ ಹಾಗೂ ತೊಂದರೆಗಳನ್ನು ನಿವಾರಿಸುವಲ್ಲಿ ಸಂಘವು ಶ್ರಮಿಸುತ್ತಿದೆ’ ಎಂದು ನುಡಿದರು.
ಈ ಸಂದರ್ಭದಲ್ಲಿ ಉತ್ತಮ ಸೇವೆ ಸಲ್ಲಿಸಿರುವ ಪೌರಕಾರ್ಮಿಕರಾದ ಮುನಿಯಪ್ಪ, ಷಮೀವುಲ್ಲಾ, ಕೋದಂಡ, ಶ್ರೀರಾಂ, ರಾಮು, ಮಾರಕ್ಕ, ಲೋಕೇಶ್, ವೆಂಕಟಮ್ಮ, ಜಯಲಕ್ಷ್ಮಮ್ಮ ಅವರನ್ನು ಸನ್ಮಾನಿಸಲಾಯಿತು.
ಪುರಸಭಾ ಅಧ್ಯಕ್ಷೆ ಮುಷ್ಠರಿ ತನ್ವೀರ್, ರಾಜ್ಯ ಪೌರ ನೌಕರರ ಸೇವಾ ಸಂಘದ ತಾಲ್ಲೂಕು ಅಧ್ಯಕ್ಷ ಶಂಕರಪ್ಪ, ನಾರಾಯಣಸ್ವಾಮಿ, ಡಾ.ಸತ್ಯನಾರಾಯಣರಾವ್, ಮುಖ್ಯಾಧಿಕಾರಿ ರಾಮ್ಪ್ರಕಾಶ್, ಪುರಸಭಾ ಸದಸ್ಯರಾದ ಚಿಕ್ಕಮುನಿಯಪ್ಪ, ವೆಂಕಟಸ್ವಾಮಿ, ಬಾಲಕೃಷ್ಣ, ಲಕ್ಷ್ಮಣ, ನಂದಕಿಶನ್, ರಮೇಶ್ ಮತ್ತಿತರರು ಕಾರ್ಯಕ್ರಮದಲ್ಲಿ ಹಾಜರಿದ್ದರು.

ಚಾರಿತ್ರಿಕ ಹಿನ್ನೆಲೆಯುಳ್ಳ ವೀರಗಲ್ಲುಗಳು

0

ಪುರಾತನವಾದ, ಚಾರಿತ್ರಿಕ ಹಿನ್ನೆಲೆಯುಳ್ಳ ವೀರಗಲ್ಲುಗಳನ್ನು ಕೆಲವೆಡೆ ಮಾತ್ರ ವೀರರಗುಡಿ ಎಂದು ಕರೆದು ಪೂಜಿಸಿದರೆ, ಬಹುತೇಕ ಕಡೆಗಳಲ್ಲಿ ಇವುಗಳನ್ನು ನಿರ್ಲಕ್ಷಿಸಿರುವುದು ಕಂಡುಬರುತ್ತದೆ. ಆದರೆ ತಾಲ್ಲೂಕಿನ ಚೀಮಂಗಲ ಗ್ರಾಮದಲ್ಲಿ ಸುತ್ತಮುತ್ತ ಸಿಕ್ಕ ಎಲ್ಲ ವೀರಗಲ್ಲುಗಳನ್ನು ಅಂದವಾಗಿ ಕಾಂಪೋಂಡ್ಗೆ ಅಳವಡಿಸಿ ಸಂರಕ್ಷಿಸಿದ್ದಾರೆ.
ಚೀಮಂಗಲ ಗ್ರಾಮದ ಚೌಡೇಶ್ವರಮ್ಮ ದೇವಾಲಯದ ಕಾಂಪೋಂಡ್ ಬಳಿ ಎಂಟು ವೀರಗಲ್ಲುಗಳನ್ನು ಸಂರಕ್ಷಿಸಲಾಗಿದೆ. ಕುದುರೆಯ ಮೇಲೆ ಕತ್ತಿ ಹಿಡಿದಿರುವ ವೀರನಿಗೆ ಚಾಮರ ಹಿಡಿದಿರುವ ಸೇವಕ, ಕಳಶ ಹೊತ್ತ ಮಹಿಳೆಯರು, ಕತ್ತಿ ಗುರಾಣಿ ಹಿಡಿದ ವೀರ, ಬಿಲ್ಲುಬಾಣ ಹಿಡಿದ ವೀರ, ಹಸುಗಳನ್ನು ಸಂರಕ್ಷಿಸಲು ಪ್ರಾಣತೆತ್ತ ವೀರ… ಹೀಗೆ ನಾನಾ ಚಿತ್ರಗಳನ್ನು ಕಲ್ಲಿನಲ್ಲಿ ಕೆತ್ತಲಾಗಿದೆ.
’ಗ್ರಾಮದಲ್ಲಿ ಮೊದಲು ವೀರಗುಡಿ ಎಂಬುದಿತ್ತು ಅಲ್ಲಿ ಕೆಲವು ಕಲ್ಲುಗಳಿದ್ದವು. ಅದೆಲ್ಲ ಕುಸಿದು ಹಾಳಾಗಿತ್ತು. ಚೌಡೇಶ್ವರಮ್ಮ ದೇವಾಲಯವನ್ನು ಜೀರ್ಣೋದ್ದಾರ ಮಾಡುವ ಸಂದರ್ಭದಲ್ಲಿ ಅವನ್ನು ಮತ್ತು ಗ್ರಾಮದ ಸುತ್ತಮುತ್ತ ಅಲ್ಲಲ್ಲಿ ಬಿದ್ದಿದ್ದ ಇಂಥಹ ಕಲ್ಲುಗಳನ್ನು ತಂದು ಕಾಂಪೋಂಡ್ಗೆ ಅಳವಡಿಸಿದೆವು. ನಮ್ಮ ಗ್ರಾಮಕ್ಕೆ ಸಂಬಂಧಿಸಿದ ವೀರರ ನೆನಪಿಗಾಗಿ ನಿರ್ಮಿಸಿರುವ ಸ್ಮಾರಕಗಳಿವು ಎಂದು ಹಿರಿಯರು ಹೇಳುತ್ತಾರೆ. ಅಂಥಹ ವೀರರ ಚಿತ್ರಗಳನ್ನು ಜೋಪಾನವಾಗಿರಿಸುವುದು ನಮ್ಮ ಕರ್ತವ್ಯ’ ಎನ್ನುತ್ತಾರೆ ಗ್ರಾಮದ ಆಂಜಿನಪ್ಪ.
’ತಾಲ್ಲೂಕಿನ ಹಲವು ಗ್ರಾಮಗಳಲ್ಲಿ ಈ ರೀತಿಯ ವೀರಗಲ್ಲುಗಳು ಮತ್ತು ಶಾಸನಗಳು ಅನಾಥವಾಗಿವೆ. ಗ್ರಾಮಗಳ ದೇವಾಲಯಗಳನ್ನು ದುರಸ್ಥಿ ಅಥವಾ ಜೀಣೋದ್ಧಾರ ಮಾಡುವಾಗ ಚೀಮಂಗಲದ ಚೌಡೇಶ್ವರಿ ದೇವಾಲಯದಂತೆ ವೀರಗಲ್ಲುಗಳನ್ನು ಜೋಡಿಸಿಟ್ಟರೆ, ದೇವಾಲಯದ ಅಂದವೂ ಹೆಚ್ಚುತ್ತದೆ ಮತ್ತು ವೀರಗಲ್ಲುಗಳ ಸಂರಕ್ಷಣೆಯೂ ಆಗುತ್ತದೆ’ ಎಂದು ಗ್ರಾಮದ ಶಿಕ್ಷಕರು ತಿಳಿಸಿದರು.
– ಡಿ ಜಿ ಮಲ್ಲಿಕಾರ್ಜುನ

ಅಬ್ಲೂಡು ಜಿಲ್ಲಾ ಪಂಚಾಯತಿ ವ್ಯಾಪ್ತಿಗೆ ಬರುವ ಅಂಗವಿಕಲರಿಗೆ ಚೆಕ್ ವಿತರಣೆ

0

ಪಟ್ಟಣದಲ್ಲಿ ಸೋಮವಾರ ಜಿಲ್ಲಾ ಪಂಚಾಯತಿ ಸದಸ್ಯೆ ಶಿವಲೀಲಾ ರಾಜಣ್ಣ ಅಬ್ಲೂಡು ಜಿಲ್ಲಾ ಪಂಚಾಯತಿ ವ್ಯಾಪ್ತಿಗೆ ಬರುವ ಹದಿನಾರು ಮಂದಿ ಅಂಗವಿಕಲರಿಗೆ ಒಟ್ಟು 85 ಸಾವಿರ ರೂಗಳನ್ನು ವಿತರಿಸಿದರು.
‘ಅಬ್ಲೂಡು ಜಿಲ್ಲಾ ಪಂಚಾಯತಿ ವ್ಯಾಪ್ತಿಗೆ ಅಂಗವಿಕಲರಿಗಾಗಿ 85 ಸಾವಿರ ರೂಗಳ ಅನುದಾನ ಬಂದಿದ್ದು, ಅದನ್ನು 16 ಮಂದಿ ಅಂಗವಿಕಲರಿಗೆ ವಿತರಿಸುತ್ತಿದ್ದೇನೆ. ಮತ್ತೊಬ್ಬರ ಮೇಲೆ ಅವಲಂಬಿತರಾಗಿರುವ ಬಹುಪಾಲು ಅಂಗವಿಕಲರು ತಮಗೆ ಅತ್ಯಗತ್ಯವನ್ನು ಪೂರೈಸಿಕೊಳ್ಳಲು ಈ ಹಣವನ್ನು ಸದುಪಯೋಗ ಮಾಡಿಕೊಳ್ಳಬಹುದು’ ಎಂದು ಜಿಲ್ಲಾ ಪಂಚಾಯತಿ ಸದಸ್ಯೆ ಶಿವಲೀಲಾ ರಾಜಣ್ಣ ಈ ಸಂದರ್ಭದಲ್ಲಿ ತಿಳಿಸಿದರು.

error: Content is protected !!