18.1 C
Sidlaghatta
Saturday, December 27, 2025
Home Blog Page 1024

ಪ್ರತಿಭಾ ಪುರಸ್ಕಾರ; ಪ್ರತಿಭಾನ್ವಿತ ವಿದ್ಯಾರ್ಥಿಗಳಿಂದ ಅರ್ಜಿ ಆಹ್ವಾನ

0

ಪಟ್ಟಣದ ವಿಪ್ರ ಪ್ರತಿಭಾ ಪುರಸ್ಕಾರ ಮತ್ತು ಸೇವಾ ಟ್ರಸ್ಟ್‌ ವತಿಯಿಂದ ಪ್ರತಿಭಾ ಪುರಸ್ಕಾರ ಮತ್ತು ಅಭಿನಂದನಾ ಸಮಾರಂಭವನ್ನು ನವೆಂಬರ್‌ 23 ರ ಭಾನುವಾರ ಹಮ್ಮಿಕೊಂಡಿದ್ದು, ಅದರಂತೆ 2013–14ನೇ ಸಾಲಿನಲ್ಲಿ ಎಸ್‌.ಎಸ್‌.ಎಲ್‌.ಸಿ, ಪಿ.ಯು.ಸಿ ಮತ್ತು ಪದವಿ ಪರೀಕ್ಷೆಗಳಲ್ಲಿ ಅನುಕ್ರಮವಾಗಿ ಶೇಕಡಾ 85, 75 ಮತ್ತು 60 ಹಾಗೂ ಮೇಲ್ಪಟ್ಟು ಅಂಕ ಗಳಿಸಿರುವ ತಾಲ್ಲೂಕಿನ ಬ್ರಾಹ್ಮಣ ಜನಾಂಗದ ವಿದ್ಯಾರ್ಥಿಗಳು ಅಂಕಪಟ್ಟಿ ನಕಲು ಹಾಗೂ ಮೂರು ಪಾಸ್‌ಪೋರ್ಟ್‌ ಅಳತೆಯ ಭಾವಚಿತ್ರವನ್ನು ಅಕ್ಟೋಬರ್‌ 5 ನೇ ತಾರೀಖಿನ ಒಳಗೆ ನೀಡಬೇಕೆಂದು ವಿಪ್ರ ಪ್ರತಿಭಾ ಪುರಸ್ಕಾರ ಮತ್ತು ಸೇವಾ ಟ್ರಸ್ಟ್‌ ಅಧ್ಯಕ್ಷ ಬಿ.ಆರ್‌.ಅನಂತಕೃಷ್ಣ ಪ್ರಕಟಣೆಯಲ್ಲಿ ತಿಳಿಸಿದ್ದಾರೆ. ಹೆಚ್ಚಿನ ವಿವರಗಳಿಗೆ
ಬಿ.ಆರ್‌.ಅನಂತಕೃಷ್ಣ(9964182305), ಡಾ.ಡಿ.ಟಿ.ಸತ್ಯನಾರಾಯಣರಾವ್‌(9980901675), ವಿ.ಕೃಷ್ಣ(9632025422), ಎನ್‌.ಶ್ರೀಕಾಂತ್‌(9845062116) ಸಂಪರ್ಕಿಸಲು ಕೋರಿದ್ದಾರೆ.

ಕನ್ನಮಂಗಲ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಓಝೋನ್ ದಿನಾಚರಣೆ

0

ತಾಲ್ಲೂಕಿನ ಕನ್ನಮಂಗಲ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಬುಧವಾರ ಓಝೋನ್ ದಿನಾಚರಣೆಯನ್ನು ಆಚರಿಸಲಾಯಿತು. ಓಝೋನ್ ದಿನಾಚರಣೆಯ ಅಂಗವಾಗಿ ವಿಜ್ಞಾನ ವಸ್ತುಪ್ರದರ್ಶನವನ್ನು ಹಮ್ಮಿಕೊಳ್ಳಲಾಗಿತ್ತು. ಶಾಲಾ ವಿದ್ಯಾರ್ಥಿಗಳಿಗೆ ಓಝೋನ್ ಕುರಿತಾದ ಸಾಕ್ಷ್ಯಚಿತ್ರವನ್ನು ಪ್ರದರ್ಶಿಸಲಾಯಿತು. ಇದರ ಜೊತೆಗೆ ಶಾಲಾ ವಿದ್ಯಾರ್ಥಿಗಳು ವಿಜ್ಞಾನ ವಸ್ತುಪ್ರದರ್ಶನವನ್ನು ಹಮ್ಮಿಕೊಂಡಿದ್ದರು. ಇದರಲ್ಲಿ ೪೦ ವಿದ್ಯಾರ್ಥಿಗಳು ಓಝೋನ್, ರಾಕೆಟ್, ಅಗ್ನಿಪರ್ವತ, ಶ್ವಾಸಕೋಶ, ಸೂಕ್ಷ್ಮದರ್ಶಕ, ಇತ್ಯಾದಿ ವೈಜ್ಞಾನಿಕ ಪ್ರಯೋಗ ಹಾಗೂ ಮಾದರಿಗಳನ್ನು ಸಿದ್ಧಪಡಿಸಿ ಪ್ರದರ್ಶಿಸಿದರು.
ಈ ಕಾರ್ಯಕ್ರಮಕ್ಕೆ ಮುಖ್ಯ ಅತಿಥಿಗಳಾಗಿ ಆಗಮಿಸಿದ್ದ ಕ್ಷೇತ್ರ ಶಿಕ್ಷಣಾಧಿಕಾರಿ ಎಸ್.ರಘುನಾಥರೆಡ್ಡಿ ಮಕ್ಕಳನ್ನು ಉದ್ದೇಶಿಸಿ ಮಾತನಾಡಿ,‘ಪರಿಸರ ದಿನಾಚರಣೆ ಹಾಗೂ ಓಝೋನ್ ದಿನಾಚರಣೆಗಳ ಯಾಂತ್ರಿಕ ಆಚರಣೆಯಿಂದ ಯಾವುದೇ ಪ್ರಯೋಜನವಿಲ್ಲ. ಬದಲಿಗೆ ನಿಜವಾಗಿಯೂ ಪರಿಸರ ಕಾಳಜಿಯಿಂದ ನಮ್ಮ ಜೀವನಶೈಲಿಗಳನ್ನು ಮರುರೂಪಿಸಿಕೊಂಡರೆ ಮಾತ್ರ ಅದೇ ನಿಜವಾದ ಆಚರಣೆ’ ಎಂದು ಹೇಳಿದರು.
ಈ ಕಾರ್ಯಕ್ರಮದಲ್ಲಿ ತುಮ್ಮನಹಳ್ಳಿ ಸಿ.ಆರ್.ಪಿ. ಚಂದ್ರಶೇಖರ್, ಸ್ನೇಹ ಯುವಕರ ಕ್ಷೇಮಾಭಿವೃದ್ಧಿ ಸಂಘದ ಅಧ್ಯಕ್ಷ ವಸಂತ ಕುಮಾರ್, ಕಾರ್ಯದರ್ಶಿ ವಾಸುದೇವ್, ನಿವೃತ್ತ ಶಿಕ್ಷಣ ಸಂಯೋಜಕ ಆರ್.ಕೃಷ್ಣಪ್ಪ, ಎಸ್‌ಡಿಎಂಸಿ ಉಪಾಧ್ಯಕ್ಷ ನಾಗರಾಜ್, ಸದಸ್ಯರಾದ ದೇವರಾಜ್, ಮುನಿಯಪ್ಪ ಶಾಲಾಮುಖ್ಯಶಿಕ್ಷಕ ಎಚ್. ಮುನಿಯಪ್ಪ, ಶಿಕ್ಷಕರಾದ ಕೆ.ಶಿವಶಂಕರ್, ಜೆ.ಶ್ರೀನಿವಾಸ್, ಎಸ್.ಕಲಾಧರ, ಟಿ.ಜೆ.ಸುನೀತ ಹಾಗೂ ಅಂಗನವಾಡಿ ಶಿಕ್ಷಕಿ ಪದ್ಮಾವತಮ್ಮ ಭಾಗವಹಿಸಿದ್ದರು. ಆಶಯಗೀತೆಯನ್ನು ವಿದ್ಯಾರ್ಥಿ ಧನುಷ್ ಹಾಡಿದರು. ವಿದ್ಯಾರ್ಥಿನಿ ಭವಾನಿ ನಿರೂಪಿಸಿದರು.

ವಿಶ್ವಕರ್ಮ ಜಯಂತಿಯ ಆಚರಣೆ

0

ತಾಲ್ಲೂಕಿನ ದಿಬ್ಬೂರಹಳ್ಳಿ ಗ್ರಾಮದಲ್ಲಿ ಬುಧವಾರ ವಿಶ್ವಕರ್ಮ ಜಯಂತಿಯ ಆಚರಣೆಯ ಅಂಗವಾಗಿ ಸರ್ಕಾರಿ ಆಸ್ಪತ್ರೆಯ ರೋಗಿಗಳಿಗೆ ಹಣ್ಣು ಹಂಪಲುಗಳನ್ನು ಹಾಗೂ ಶಾಲಾ ವಿದ್ಯಾರ್ಥಿಗಳಿಗೆ ನೋಟ್‌ಪುಸ್ತಕ ಹಾಗೂ ಲೇಖನ ಸಾಮಗ್ರಿಯನ್ನೂ ವಿತರಿಸಲಾಯಿತು. ಈ ಸಂದರ್ಭದಲ್ಲಿ ನಿವೃತ್ತ ಶಾಲಾ ಮುಖ್ಯ ಶಿಕ್ಷಕ ಲಕ್ಷ್ಮೀನಾರಾಯಣಾಚಾರಿ ಅವರನ್ನು ಸನ್ಮಾನಿಸಲಾಯಿತು.
‘ತಾಲ್ಲೂಕಿನಲ್ಲಿ ಅತ್ಯಂತ ಕಡಿಮೆ ಜನಸಂಖ್ಯೆಯನ್ನು ಹೊಂದಿರುವ ವಿಶ್ವಕರ್ಮ ಜನಾಂಗದ ಅಭಿವೃದ್ಧಿಗಾಗಿ ಎಲ್ಲಾ ಗ್ರಾಮಗಳಲ್ಲಿರುವ ಜನಾಂಗದವರನ್ನು ಒಗ್ಗೂಡಿಸಬೇಕು. ಆರ್ಥಿಕವಾಗಿ, ಸಾಮಾಜಿಕವಾಗಿ, ಶೈಕ್ಷಣಿಕವಾಗಿ ಜನಾಂಗವು ಅಭಿವೃದ್ಧಿಯತ್ತ ಸಾಗಲು ಪ್ರಯತ್ನಿಸಬೇಕು. ಸರ್ಕಾರದ ಸೌಲಭ್ಯಗಳು ಬಡವರಿಗೆ ತಲುಪಲು ಶ್ರಮಿಸಬೇಕು’ ಎಂದು ಗ್ರಾಮ ಪಂಚಾಯತಿ ಅಧ್ಯಕ್ಷ ಡಾ.ಧನಂಜಯರೆಡ್ಡಿ ತಿಳಿಸಿದರು.
ದಿಬ್ಬೂರಹಳ್ಳಿ ವಿಶ್ವಕರ್ಮ ಕ್ಷೇಮಾಭಿವೃದ್ಧಿ ಸಂಘದ ಅಧ್ಯಕ್ಷ ಈಶ್ವರಾಚಾರಿ ಸಂಘದ ಕಟ್ಟಡಕ್ಕೆ ನಿವೇಶನ ನೀಡುವಂತೆ ಗ್ರಾಮ ಪಂಚಾಯತಿ ಅಧ್ಯಕ್ಷರಿಗೆ ಮನವಿ ಸಲ್ಲಿಸಿದರು. ದಿಬ್ಬೂರಹಳ್ಳಿ ವ್ಯಾಪ್ತಿಯಲ್ಲಿರುವ ಸರ್ಕಾರಿ ಜಾಗದಲ್ಲಿ ನಿವೇಶನ ನೀಡುವುದಾಗಿ ಗ್ರಾಮ ಪಂಚಾಯತಿ ಅಧ್ಯಕ್ಷ ಡಾ.ಧನಂಜಯರೆಡ್ಡಿ ಹೇಳಿದರು.
ಶಾಲಾ ವಿದ್ಯಾರ್ಥಿಗಳಿಂದ ಸಾಂಸ್ಕೃತಿಕ ಕಾರ್ಯಕ್ರಮಗಳು ನಡೆದವು. ಸುಂದರಾಚಾರಿ, ಆದಿನಾರಾಯಣಾಚಾರಿ, ಶ್ರೀನಿವಾಸಾಚಾರಿ, ಕೃಷ್ಣಾಚಾರಿ, ಮುನಿರತ್ನಮಾಚಾರಿ, ಗ್ರಾಮ ಪಂಚಾಯತಿ ಸದಸ್ಯರು ಮತ್ತಿತರರು ಕಾರ್ಯಕ್ರಮದಲ್ಲಿ ಹಾಜರಿದ್ದರು.

ಚಂದ್ರಶೇಖರಸ್ವಾಮಿ ಗುಡಿಯ ವಿನಾಯಕನ ಶಿಲ್ಪ ಕಳ್ಳತನ

0

ಶಿಡ್ಲಘಟ್ಟದ ಹೊರವಲಯದ ಚಿಂತಾಮಣಿ ರಸ್ತೆಯಲ್ಲಿರುವ ಪುರಾತನ ಚಂದ್ರಶೇಖರಸ್ವಾಮಿ ಗುಡಿಯಲ್ಲಿರುವ ವಿನಾಯಕನ ಶಿಲ್ಪವನ್ನು ದುಷ್ಕರ್ಮಿಗಳು ಮಂಗಳವಾರ ರಾತ್ರಿ ಕದ್ದೊಯ್ದಿದ್ದಾರೆ.
ಶಿಡ್ಲಘಟ್ಟದ ಹೊರವಲಯದ ಚಿಂತಾಮಣಿ ರಸ್ತೆಯಲ್ಲಿರುವ ಪುರಾತನ ಚಂದ್ರಶೇಖರಸ್ವಾಮಿ ಗುಡಿಯಲ್ಲಿರುವ ವಿನಾಯಕನ ಶಿಲ್ಪವನ್ನು ದುಷ್ಕರ್ಮಿಗಳು ಮಂಗಳವಾರ ರಾತ್ರಿ ಕದ್ದೊಯ್ದಿದ್ದಾರೆ.

ಪಟ್ಟಣದ ಹೊರವಲಯದ ಚಿಂತಾಮಣಿ ರಸ್ತೆಯಲ್ಲಿರುವ ಪುರಾತನ ಚಂದ್ರಶೇಖರಸ್ವಾಮಿ ಗುಡಿಯಲ್ಲಿರುವ ವಿನಾಯಕನ ಶಿಲ್ಪವನ್ನು ದುಷ್ಕರ್ಮಿಗಳು ಮಂಗಳವಾರ ರಾತ್ರಿ ಕದ್ದೊಯ್ದಿದ್ದಾರೆ.
ಅತ್ಯಂತ ಪುರಾತನವಾದ ದೇವಾಲಯದಲ್ಲಿರುವ ಗಣೇಶನ ಮೂರ್ತಿಯೂ ಕೂಡ ಪುರಾತನದ್ದಾಗಿದ್ದು, ಕಲ್ಲಿನಲ್ಲಿ ಕೆತ್ತಿದ ಶಿಲ್ಪವು ಬಹಳ ಸುಂದರವಾಗಿತ್ತು. ಕದ್ದೊಯ್ಯುವ ಮುನ್ನ ಸ್ಥಳದಲ್ಲಿ ಪೂಜೆ ನಡೆಸಿರುವ ಕುರುಹಾಗಿ ಅರಿಶಿನ ಕುಂಕುಮ ಕಂಡುಬರುತ್ತಿದೆ ಎಂದು ಸ್ಥಳೀಯರು ತಿಳಿಸಿದ್ದಾರೆ.
ಪೊಲೀಸರು ಸ್ಥಳ ಪರಿಶೀಲನೆ ನಡೆಸಿದ್ದು ಮುಂದಿನ ಕ್ರಮ ಕೈಗೊಳ್ಳುವುದಾಗಿ ತಿಳಿಸಿದ್ದಾರೆ.

ಏಷ್ಯಾದ ಪ್ರಮುಖ ರಾಷ್ಟ್ರಗಳ ಪ್ರಿಯವಾದ ಖಾದ್ಯ 'ಮೊಮೊಸ್'

0

ಬೇಕಾಗುವ ಸಾಮಾಗ್ರಿ
ಸ್ಟಫಿಂಗ್
1 ಟೀ ಸ್ಪೂನ್ ಸಾಸಿವೆ
1 ಟೀ ಸ್ಪೂನ್ ಕಡಳೆಬೇಳೆ
1 ಟೀ ಸ್ಪೂನ್ ಉದ್ದಿನಬೇಳೆ
2 ಟೇಬಲ್ ಸ್ಪೂನ್ ಹೆಸರು ಬೇಳೆ
1 ಇಂಚು ಶುಂಠಿ
1 ಮಿಡಿಯಂ ಸೈಜ್ ಈರುಳ್ಳಿ
10 ಹಸಿರು ಮೆಣಸಿನಕಾಯಿ
1 ಸಣ್ಣ ಎಲೆಕೋಸು
ರುಚಿಗೆ ತಕ್ಕಷ್ಟು ಉಪ್ಪು
50 ಗ್ರಾಂ ಪನ್ನೀರ್
ನಿಂಬೆ ಹುಳಿ
ರುಬ್ಬಲು
1 ಕಪ್ಪು ಕಾಯಿತುರಿ
ಮೆಣಸಿನ ಕಾಯಿ
1 ಟೀ ಸ್ಪೂನ್ ಜೀರಿಗೆ
1 ಟೀ ಸ್ಪೂನ್ ಅರಿಶಿನದ ಪುಡಿ
ಹಿಟ್ಟು
1 ಲೋಟ ಮೈದಾಹಿಟ್ಟು,
1 ಟೀ ಸ್ಪೂನ್ ಉಪ್ಪು
1 ಟೀ ಸ್ಪೂನ್ ಸಕ್ಕರೆ
2 ಟೇಬಲ್ ಸ್ಪೂನ್ ಎಣ್ಣೆ ಹಾಕಿ ಸ್ವಲ್ಪ ಗಟ್ಟಿಯಾಗಿ ಕಲಸಿ, 30 ನಿಮಿಷ ನೆನೆಯಲು ಬಿಡಿ
ಮಾಡುವ ವಿಧಾನ
4 ಟೇಬಲ್ ಸ್ಪೂನ್ ಎಣ್ಣೆಗೆ ಕ್ರಮವಾಗಿ ಕಡಲೆ ಬೇಳೆ ಉದ್ದಿನ ಬೇಳೆ, ಹೆಸರುಬೇಳೆ, ಶುಂಠಿ, ಈರುಳ್ಳಿ, ಎಲೆಕೋಸು ಹಾಕುತ್ತ ಬನ್ನಿ. ಒಂದಾದ ಮೇಲೆ ಒಂದು. ಎಲೆಕೋಸು ಬೆಂದ ಮೇಲೆ ಉಪ್ಪು, ರುಬ್ಬಿದ ಮಸಾಲ ಹಾಕಿ ನೀರು ಹಾಕದೆ ಬೇಯಿಸಿ.
ಪನ್ನೀರನ್ನು 2 ಟೇಬಲ್ ಸ್ಪೂನ್ ತುಪ್ಪದಲ್ಲಿ ಹುರಿದಿಟ್ಟುಕೊಳ್ಳಿ. ಕೊನೆಯಲ್ಲಿ ಪಲ್ಯಕ್ಕೆ ಪನ್ನೀರ್ ಕೊತ್ತಂಬರಿ, ಸೊಪ್ಪು ನಿಂಬೆ ಹುಳಿ ಹಾಕಿ.
ನಂತರ ನೆನೆದ ಹಿಟ್ಟನ್ನು ಚಪಾತಿ ತರಹ ಲಟಿಸಿಕೊಳ್ಳಿ, ಅದರ ಮಧ್ಯದಲ್ಲಿ ಸ್ವಲ್ಪ ಪಲ್ಯ ಇಟ್ಟು ನಿಮಗೆ ಯಾವ ಆಕಾರ ಬೇಕೋ ಅದನ್ನು ಮಡಿಕೆ ಮಾಡಿ 5-6 ನಿಮಿಷ ಉಗಿಯಲ್ಲಿ ಇಡ್ಲಿ ತರ ಬೇಯಿಸಿ. ಇದನ್ನು ಟೊಮೆಟೋ ಅಥವಾ ಚಿಲ್ಲಿ – ಗಾರ್ಲಿಕ್ ಸಾಸ್ ಜೊತೆ ಸವಿಯಲು ಕೊಡಿ.

ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಗುಂಪು ಉದ್ಗಾಟನಾ ಹಾಗೂ ಗ್ರಾಮ ಸಮಾಲೋಚನಾ ಸಭೆ ಕಾರ್ಯಕ್ರಮ

0

ಶಿಡ್ಲಘಟ್ಟ ತಾಲ್ಲೂಕಿನ ಜಂಗಮಕೋಟೆಯ ಈಶ್ವರ ದೇವಸ್ಥಾನದಲ್ಲಿ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ವತಿಯಿಂದ ಹಮ್ಮಿಕೊಂಡಿದ್ದ ಗುಂಪು ಉದ್ಗಾಟನಾ ಹಾಗೂ ಗ್ರಾಮ ಸಮಾಲೋಚನಾ ಸಭೆ ಕಾರ್ಯಕ್ರಮದಲ್ಲಿ ತಾಲ್ಲೂಕು ಯೋಜನಾಧಿಕಾರಿ ಬಿ.ಆರ್‌.ಯೋಗಿಶ್‌ ಕ್ಷೇತ್ರದ ಹಿನ್ನೆಲೆ, ಯೋಜನೆಯಲ್ಲಿ ಸಿಗುವ ಸವಲತ್ತುಗಳು, ಗುಂಪು ರಚನೆ, ಗುಂಪಿನಲ್ಲಿರುವ ಸದಸ್ಯರಿಗೆ ಆಗುವ ಉಪಯೋಗಗಳ ಬಗ್ಗೆ ಮಾಹಿತಿಯನ್ನು ನೀಡಿದರು. ಜಂಗಮಕೋಟೆ ಠಾಣೆ ಎ.ಎಸ್‌.ಐ ವೀರಪ್ಪ, ಜ್ಯೋತಿ ವಿದ್ಯಾಸಂಸ್ಥೆ ಅಧ್ಯಕ್ಷ ಶ್ರೀಧರ್‌, ಸುರೇಂದ್ರಬಾಬು, ಜನಾರ್ಧನ್‌ ನಾಯಕ್‌ ಹಾಜರಿದ್ದರು.

ಜಂಗಮಕೋಟೆ ಗ್ರಾಮದಲ್ಲಿ ಹದಿನೆಂಟು ಗ್ರಾಮದೇವರುಗಳ ಮೆರವಣಿಗೆ

0

ತಾಲ್ಲೂಕಿನ ಜಂಗಮಕೋಟೆ ಗ್ರಾಮದಲ್ಲಿ ಸೋಮವಾರ ಸಂಜೆ ವಿನಾಯಕ ಮೂರ್ತಿಯ ವಿಸರ್ಜನೆಯ ಪ್ರಯುಕ್ತ ಗ್ರಾಮದ ಹದಿನೆಂಟು ದೇವರುಗಳ ಮೆರವಣಿಗೆಯನ್ನು ವಿಜೃಂಭಣೆಯಿಂದ ನಡೆಸಲಾಯಿತು.
ವಿನಾಯಕ, ಗಂಗಾಧರೇಶ್ವರಸ್ವಾಮಿ, ಮುತ್ಯಾಲಮ್ಮ, ಸಪ್ಪಲಮ್ಮ, ಮದಗದಮ್ಮ, ಪೂಜಮ್ಮ, ಭೀಮೇಶ್ವರ, ಸೋಮೇಶ್ವರಸ್ವಾಮಿ, ಎಲ್ಲಮ್ಮ, ಅಣ್ಣಮ್ಮತಾಯಿ, ದ್ರೌಪದಮ್ಮ, ಕನಕದಾಸ, ಬಸವಣ್ಣ, ಶನೇಶ್ವರ, ಆಂಜನೇಯ, ಗಂಗಮ್ಮ, ಮುನೇಶ್ವರ ಮತ್ತು ಚಂದ್ರಮೌಳೇಶ್ವರಸ್ವಾಮಿ ದೇವರುಗಳನ್ನು ವಿಶೇಷವಾಗಿ ವಿವಿಧ ಹೂಗಳಿಂದ ಅಲಂಕರಿಸಿ ಮುತ್ತಿನ ಪಲ್ಲಕ್ಕಿಗಳೊಂದಿಗೆ 18 ವಾಹನಗಳಲ್ಲಿ ಗ್ರಾಮದ ಪ್ರಮುಖ ಬೀದಿಗಳಲ್ಲಿ ಮೆರವಣಿಗೆಯನ್ನು ನಡೆಸಲಾಯಿತು.
ಗ್ರಾಮದ ಬೀದಿಗಳನ್ನು ವಿದ್ಯುತ್‌ ದೀಪಗಳು ಹಾಗೂ ರಂಗೋಲಿಗಳಿಂದ ಅಲಂಕರಿಸಲಾಗಿತ್ತು. ಕರಗ ಮಹೋತ್ಸವವನ್ನು ಹೊರತುಪಡಿಸಿದರೆ, ಹದಿನೆಂಟು ಗ್ರಾಮ ದೇವರುಗಳ ಮೆರವಣಿಗೆಯನ್ನು ಗಣೇಶ ಮೂರ್ತಿಯ ವಿಸರ್ಜನೆಯ ಪ್ರಯುಕ್ತ ಆಯೋಜಿಸಿದ್ದು ವಿಶೇಷವಾಗಿತ್ತು. ಗ್ರಾಮದಲ್ಲಿ ಮಳೆ ಬೆಳೆ ಆಗಿ, ಶಾಂತಿ ನೆಲೆಸಲೆಂದು ಈ ದೇವರುಗಳ ಮೆರವಣಿಗೆ ಆಯೋಜಿಸಿರುವುದಾಗಿ ಗಂಗಾಧರೇಶ್ವರಸ್ವಾಮಿ ಗೆಳೆಯರ ಬಳಗದ ಸದಸ್ಯರು ತಿಳಿಸಿದರು.
ಮಂಜುನಾಥ್‌, ಶ್ರೀನಿವಾಸ್‌, ಚಂದ್ರು, ಜಗ್ಗು, ನಾರಾಯಣಸ್ವಾಮಿ, ಜೆ.ಎಂ.ವೆಂಕಟೇಶ್‌ ಮತ್ತಿತರರು ಈ ಸಂದರ್ಭದಲ್ಲಿ ಹಾಜರಿದ್ದರು.

ಕಣ್ಣುಗಳು ಮಣ್ಣಾಗುವ ಬದಲು ಅಂಧರಿಗೆ ಬೆಳಕಾಗುವಂತೆ ಪಣ ತೊಡಬೇಕು – ವೈದ್ಯಾಧಿಕಾರಿ ಡಾ.ಲವಕುಮಾರ್

0

ಪ್ರತಿಯೊಬ್ಬ ವ್ಯಕ್ತಿಗೂ ಕಣ್ಣುಗಳು ದೇವರು ಕೊಟ್ಟ ವರದಾನವಾಗಿವೆ. ದೇಹಾಂತ್ಯದ ನಂತರ ನಮ್ಮ ಕಣ್ಣುಗಳು ಮಣ್ಣಾಗುವ ಬದಲು ಇಬ್ಬರು ಅಂಧರಿಗೆ ಬೆಳಕಾಗುವಂತೆ ಪಣ ತೊಡಬೇಕಾದ ಕಾರ್ಯ ಎಲ್ಲರಿಂದಾಗಬೇಕಿದೆ ಎಂದು ಜಂಗಮಕೋಟೆ ಸರ್ಕಾರಿ ಆಸ್ಪತ್ರೆಯ ನೇತ್ರ ವೈದ್ಯಾಧಿಕಾರಿ ಡಾ.ಲವಕುಮಾರ್ ಕರೆನೀಡಿದರು.
ತಾಲ್ಲೂಕಿನ ಜಂಗಮಕೋಟೆ ಸರ್ಕಾರಿ ಮಾದರಿ ಹಿರಿಯ ಪ್ರಾಥಮಿಕ ಶಾಲಾ ಆವರಣದಲ್ಲಿ ಜಿಲ್ಲಾ ಆರೋಗ್ಯ ಮತ್ತು ಕುಟುಂಬಕಲ್ಯಾಣ ಸಂಘ, ಅಂಧತ್ವ ನಿವಾರಣಾ ವಿಭಾಗದ ವತಿಯಿಂದ ಹಮ್ಮಿಕೊಳ್ಳಲಾಗಿದ್ದ ರಾಷ್ಟ್ರೀಯ ಅಂಧತ್ವ ನಿಯಂತ್ರಣಾ ಜಾಗೃತಿ ಕಾರ್ಯಕ್ರಮದ ಪ್ರಯುಕ್ತ ಮಕ್ಕಳ ಜಾಥಾ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಮಾತನಾಡಿದರು.
ಪ್ರತಿಯೊಬ್ಬರೂ ಬದುಕಿದ್ದಾಗಲೇ ನೇತ್ರದಾನ ಮಾಡುವುದಾಗಿ ವಾಗ್ದಾನವನ್ನು ಮಾಡಿ ಜೀವನವನ್ನು ಸಾರ್ಥಕ ಮಾಡಿಕೊಳ್ಳಬೇಕು.ಕನ್ನಡಕ ಧರಿಸುವವರು, ಸಕ್ಕರೆ ಕಾಯಿಲೆ, ರಕ್ತದೊತ್ತಡ, ಅಸ್ತಮಾದಂತಹ ಕಾಯಿಲೆಗಳಿರುವ ವ್ಯಕ್ತಿಗಳೂ ನೇತ್ರದಾನ ಮಾಡಬಹುದು ಎಂದು ಅವರು ವಿವರಿಸಿದರು.
ಇದೇ ಸಂದರ್ಭದಲ್ಲಿ ಶಾಲಾ ಮಕ್ಕಳಿಂದ ಗ್ರಾಮದಲ್ಲಿ ಘೋಷಣೆಗಳೊಂದಿಗೆ ಜಾಗೃತಿ ಜಾಥಾ ನಡೆಯಿತು. ಆರೋಗ್ಯ ಇಲಾಖೆಯ ಸಿಬ್ಬಂದಿ, ಶಾಲಾ ಶಿಕ್ಷಕವರ್ಗದವರು, ಮತ್ತಿತರರು ಇದ್ದರು.

ಮಾದರಿ ಗ್ರಾಮ ಪಂಚಾಯತಿಗಳನ್ನಾಗಿಸಲು ಕಾರ್ಯಾಗಾರ

0

ಗ್ರಾಮ ಪಂಚಾಯತಿಗಳನ್ನು ಮಾದರಿ ಗ್ರಾಮ ಪಂಚಾಯತಿಗಳನ್ನಾಗಿ ಬದಲಾಯಿಸಲು ಗ್ರಾಮೀಣಾಭಿವೃದ್ಧಿಯೊಂದಿಗೆ ಮಾನವಾಭಿವೃದ್ಧಿಯನ್ನೂ ಮಾಡುವ ನಿಟ್ಟಿನಲ್ಲಿ ಕಾರ್ಯಾಗಾರ ನಡೆಸುತ್ತಿರುವುದಾಗಿ ಅಬ್ದುಲ್ ನಜೀರ್ ಸಾಬ್‌ ರಾಜ್ಯ ಗ್ರಾಮೀಣಾಭಿವೃದ್ಧಿ ಸಂಸ್ಥೆಯ ಸಂಪನ್ಮೂಲ ವ್ಯಕ್ತಿ ರಾಮಕೃಷ್ಣಪ್ಪ ತಿಳಿಸಿದರು.
ತಾಲ್ಲೂಕು ಪಂಚಾಯತಿ ಸಭಾಂಗಣದಲ್ಲಿ ಮಂಗಳವಾರ ನಡೆದ ‘ಗ್ರಾಮ ಪಂಚಾಯತಿ ಮಾನವ ಅಭಿವೃದ್ಧಿ ಹಾಗೂ ಸಂಬಂಧ’ ಕುರಿತಂತೆ ತರಬೇತಿ ಕಾರ್ಯಾಗಾರದಲ್ಲಿ ಅವರು ಮಾತನಾಡಿದರು.
ನೈರ್ಮಲ್ಯ, ಆರೋಗ್ಯ, ಶುದ್ದ ಕುಡಿಯುವ ನೀರು, ಅಂಗನವಾಡಿ ಪೂರಕ ಶಿಕ್ಷಣ ಮತ್ತು ಪ್ರಾಥಮಿಕ ಶಿಕ್ಷಣದ ಬಗ್ಗೆ ಅರಿವನ್ನು ಮೂಡಿಸುವ ತರಬೇತಿ ಕಾರ್ಯಕ್ರಮವಿದು. ಈ ಶಿಬಿರದ ಮೂಲಕ ಗ್ರಾಮೀಣ ಭಾಗದಲ್ಲಿ ಸೇವೆ ಸಲ್ಲಿಸುವವರಿಗೆ ಬಹಳಷ್ಟು ಉಪಯುಕ್ತ ಮಾಹಿತಿಯನ್ನು ನೀಡಲಾಗುತ್ತಿದೆ. ಗ್ರಂಥಾಲಯಗಳ ಆಧುನೀಕರಣ, ಆಡಳಿತ ಸುಧಾರಣೆಗೆ ಜನಪ್ರತಿನಿಧಿಗಳ ಪಾತ್ರ ತಿಳಿಸಿಕೊಡಲಾಗುತ್ತಿದೆ.
ಅಬ್ದುಲ್ ನಜೀರ್ ಸಾಬ್‌ ರಾಜ್ಯ ಗ್ರಾಮೀಣಾಭಿವೃದ್ಧಿ ಸಂಸ್ಥೆಯ ಸಹಯೋಗದೊಂದಿಗೆ ಗ್ರಾಮ ಪಂಚಾಯತಿ ಅಧ್ಯಕ್ಷರು, ಉಪಾಧ್ಯಕ್ಷರು, ಸದಸ್ಯರು, ಪಂಚಾಯತಿ ಅಭಿವೃದ್ಧಿ ಅಧಿಕಾರಿಗಳು, ಅಂಗನವಾಡಿ ಕಾರ್ಯಕರ್ತೆಯರು, ಹಿರಿಯ ಆರೋಗ್ಯ ಸಹಾಯಕರು, ಆಶಾ ಕಾರ್ಯಕರ್ತೆಯರು, ಮುಖ್ಯಶಿಕ್ಷಕರು, ಶಾಲಾಭಿವೃದ್ಧಿ ಅಧ್ಯಕ್ಷರುಗಳಿಗೆ ಈ ತರಬೇತಿ ಶಿಬಿರವನ್ನು ಆಯೋಜಿಸಿದ್ದು, ತಾಲ್ಲೂಕಿನ 27 ಗ್ರಾಮ ಪಂಚಾಯತಿಗಳನ್ನು ವಿಂಗಡಿಸಿ ಹಂತಹಂತವಾಗಿ ಡಿಸೆಂಬರ್‌ ತಿಂಗಳವರೆಗೂ ಶಿಬಿರಗಳನ್ನು ನಡೆಸಲಾಗುತ್ತಿದೆ ಎಂದು ತಿಳಿಸಿದರು.
ಅಬ್ದುಲ್ ನಜೀರ್ ಸಾಬ್‌ ಗ್ರಾಮೀಣ ಅಭಿವೃದ್ಧಿ ಸಂಸ್ಥೆಯ ಸಂಪನ್ಮೂಲ ವ್ಯಕ್ತಿ ಮಂಜುನಾಥ್‌, ನಾಗಮಂಗಲ ಪಂಚಾಯತಿ ಕಾರ್ಯದರ್ಶಿ ಗೋಪಿ ಹಾಜರಿದ್ದರು.

ಮಳ್ಳೂರು ಗ್ರಾಮದ ಸಾಯಿನಾಥ ಜ್ಞಾನ ಮಂದಿರ ವಾರ್ಷಿಕೋತ್ಸವ

0

ಜಾತಿ ಬೇದ ತೊರೆದು ಎಲ್ಲರನ್ನೂ ಮಾನವೀಯತೆಯಿಂದ ಕಾಣಬೇಕೆಂದು ಬೆಂಗಳೂರಿನ ಮುಕ್ತಿನಾಗ ದೇವಾಲಯದ ಸಂಚಾಲಕ ಸುಬ್ರಮಣ್ಯ ಸ್ವಾಮಿ ತಿಳಿಸಿದರು.
ತಾಲ್ಲೂಕಿನ ಮಳ್ಳೂರು ಗ್ರಾಮದ ಹೊರವಲಯದ ಸಾಯಿನಾಥ ಜ್ಞಾನ ಮಂದಿರದಲ್ಲಿ ಭಾನುವಾರ ವಾರ್ಷಿಕೋತ್ಸವ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.
ಸಾಯಿಬಾಬಾ ಶ್ರೇಷ್ಠ ದಾರ್ಶನಿರಾಗಿದ್ದು ಸಾಮಾನ್ಯರಲ್ಲಿ ಸರಳವಾದ ರೀತಿಯಲ್ಲಿ ದೈವ ಸಾಕ್ಷಾತ್ಕಾರ ಮಾಡಿದವರು. ಯಾಂತ್ರಿಕ ಯುಗದ ಇಂದಿನ ಜೀವನದಲ್ಲಿ ಮಾನಸಿಕ ನೆಮ್ಮದಿಗಾಗಿ ದಾರ್ಮಿಕ ಕ್ಷೇತ್ರಗಳನ್ನು ಬೇಟಿ ನೀಡಬೇಕು. ಎಲ್ಲರಲ್ಲೂ ದೇವರಿದ್ದಾನೆ ಬಡವ ಶ್ರೀಮಂತ ಬೇದ ಬಾವ ತೊರೆದು ಎಲ್ಲರನ್ನೂ ಸಮಾನವಾಗಿ ಕಾಣಬೇಕೆಂಬುದೇ ಸಾಯಿ ಬಾಬಾ ಆಶಯವಾಗಿತ್ತು ಎಂದು ಹೇಳಿದರು.
ದೇವಾಲಯದಲ್ಲಿ ವಾರ್ಷಿಕೋತ್ಸವದ ಅಂಗವಾಗಿ ಲಕ್ಮೀ ನರಸಿಂಹ ಕಲ್ಯಾಣೋತ್ಸವ, ಲಕ್ಮೀ ನರಸಿಂಹ ಹೋಮ ಏರ್ಪಡಿಸಲಾಗಿತ್ತು. ಸಾಯಿಬಾಬಾ ಪಲ್ಲಕ್ಕಿಯೊಂದಿಗೆ ಸುಮಂಗಲಿಯರು ಕಳಶ ಹೊತ್ತು ಗ್ರಾಮದಲ್ಲಿ ಶೋಭಾಯಾತ್ರೆ ನಡೆಸಿದರು. ವಿವಿದ ಜಾನಪದ ಕಲಾತಂಡಗಳು ಮೆರವಣಿಗೆಯಲ್ಲಿ ಪಾಲ್ಗೊಂಡಿದ್ದವು.
ಸಂಜೆ ಬಾಗ್ಯಲಕ್ಷೀ ಅಯ್ಯರ್ ಮತ್ತು ತಂಡದಿಂದ ಭಕ್ತಿಗೀತೆಗಳು, ಪವನ್‌ ಮತ್ತು ತಂಡದಿಂದ ಭರತ ನಾಟ್ಯ ಕಾರ್ಯಕ್ರಮಗಳನ್ನು ಏರ್ಪಡಿಸಲಾಗಿತ್ತು. ಸಾಯಿನಾಥ ಜ್ಞಾನ ಮಂದಿರದ ಕಾರ್ಯಕಾರಿ ಸಮಿತಿಯ ಸದಸ್ಯರು, ಗ್ರಾಮಸ್ಥರು ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು.

error: Content is protected !!