20.1 C
Sidlaghatta
Friday, December 26, 2025
Home Blog Page 1025

ಎಂಜಿನಿಯರ್‌ಗಳ ದಿನಾಚರಣೆಯ ಅಂಗವಾಗಿ ಎಂಜಿನಿಯರ್‌ ಆಗಿರುವ ಶಾಲೆಯ ವಿದ್ಯಾರ್ಥಿಗೆ ಸನ್ಮಾನ

0

ತಾಲ್ಲೂಕಿನ ಗುಡಿಹಳ್ಳಿಯ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಸೋಮವಾರ ಎಂಜಿನಿಯರ್‌ಗಳ ದಿನಾಚರಣೆಯನ್ನು ವಿಶಿಷ್ಠವಾಗಿ ಆಚರಿಸಲಾಯಿತು.
ಗುಡಿಹಳ್ಳಿ ಗ್ರಾಮದಲ್ಲಿ ಹುಟ್ಟಿ ಅದೇ ಸರ್ಕಾರಿ ಶಾಲೆಯಲ್ಲಿ ಪ್ರಾಥಮಿಕ ಶಿಕ್ಷಣ ಮುಗಿಸಿ ಎಂಜಿನಿಯರ್‌ಗಳಾಗಿ ಉದ್ಯೋಗದಲ್ಲಿರುವ ಶಾಲೆಯ ಹಿರಿಯ ವಿದ್ಯಾರ್ಥಿಗಳಾದ ಜಿ.ಸಿ.ರಾಘವೇಂದ್ರ ಮತ್ತು ಜಿ.ಎಲ್‌. ನಳಿನ ಅವರನ್ನು ಶಾಲಾ ಶಿಕ್ಷಕರು, ಎಸ್‌.ಡಿ.ಎಂ.ಸಿ ಸಮಿತಿ, ಗ್ರಾಮಸ್ಥರು ಹಾಗೂ ವಿದ್ಯಾರ್ಥಿಗಳು ಸನ್ಮಾನಿಸಿದರು.
ಸನ್ಮಾನವನ್ನು ಸ್ವೀಕರಿಸಿ ಮಾತನಾಡಿದ ಜಿ.ಸಿ.ರಾಘವೇಂದ್ರ, ತಾವು ಕಲಿತ ಶಾಲೆ ಮತ್ತು ಶಿಕ್ಷಕರ ಋಣವನ್ನು ತೀರಿಸಲಾಗದು. ನಮ್ಮಂತೆ ಇನ್ನೂ ಹೆಚ್ಚು ಮಂದಿ ಉನ್ನತ ಶಿಕ್ಷಣವನ್ನು ಪೂರೈಸಿ ಗ್ರಾಮಕ್ಕೆ ಮಾದರಿಯಾಗಲಿ, ಗ್ರಾಮದ ಏಳಿಗೆಗಾಗಿ ಶ್ರಮಿಸಲಿ. ನಮ್ಮ ಶಾಲೆಯ ಕೀರ್ತಿಯನ್ನು ಬೆಳಗಲಿ ಎಂಬ ಆಶಯವನ್ನು ವ್ಯಕ್ತಪಡಿಸಿದರು.
‘ಪ್ರಸ್ತುತ ಜಿ.ಸಿ.ರಾಘವೇಂದ್ರ ಅವರು ಬೆಂಗಳೂರಿನಲ್ಲಿ ಮೆಕ್ಯಾನಿಕಲ್‌ ಎಂಜಿನಿಯರ್‌ ಆಗಿ, ಜಿ.ಎಲ್‌. ನಳಿನ ಅವರು ಚಿಂತಾಮಣಿಯಲ್ಲಿ ಸಹಾಯಕ ಎಂಜಿನಿಯರ್‌ ಆಗಿ ಸೇವೆ ಸಲ್ಲಿಸುತ್ತಿದ್ದು, ಮಕ್ಕಳು ಶಾಲೆಯ ಹಿರಿಯ ವಿದ್ಯಾರ್ಥಿಗಳಾದ ಇವರಿಂದ ಪ್ರೇರಣೆ ಪಡೆಯಬೇಕು’ ಎಂದು ಮುಖ್ಯ ಶಿಕ್ಷಕ ಶ್ರೀರಾಮಪ್ಪ ತಿಳಿಸಿದರು.
ಶಾಲಾಭಿವೃದ್ಧಿ ಸಮಿತಿಯ ಸೊಣ್ಣಪ್ಪ, ಶಾಲಾ ಶಿಕ್ಷಕರಾದ ಎಂ.ಬಾಲಚಂದ್ರ, ಎಂ.ಪರಮೇಶ್ವರಪ್ಪ, ಎಂ.ಎನ್‌.ಲಕ್ಷ್ಮಿ, ಸಿಬ್ಬಂದಿಗಳಾದ ರತ್ನಮ್ಮ, ಜಯಲಕ್ಷ್ಮಮ್ಮ, ಭಾಗ್ಯಮ್ಮ ಮತ್ತಿತರರು ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು.

ಅಪ್ಪೇಗೌಡನಹಳ್ಳಿಯಲ್ಲಿ ಶ್ರೀರಾಮದಂಡು ವ್ರತಾಚರಣೆ

0

ಶಿಡ್ಲಘಟ್ಟದ ತಾಲ್ಲೂಕು ಅಪ್ಪೇಗೌಡನಹಳ್ಳಿ ಗ್ರಾಮಸ್ಥರು ಒಂಭತ್ತು ಗ್ರಾಮಗಳಿಗೆ ಶ್ರೀರಾಮ ಚಿತ್ರಪಟ ಮತ್ತು ದೀಪಸ್ತಂಭದೊಂದಿಗೆ ರಾಮ ಭಜನೆ ಮಾಡುತ್ತಾ ತೆರಳಿ ‘ಶ್ರೀರಾಮದಂಡು’ ವ್ರತಾಚರಣೆಯನ್ನು ನಡೆಸಿದರು. ವೀರಪ್ಪ, ಕುಮಾರಪ್ಪ, ಮುನಾಂಜಿನಪ್ಪ, ಎ.ಎಂ.ತ್ಯಾಗರಾಜ್‌, ನಾಗರಾಜು, ರಾಮಚಂದ್ರ, ಆನಂದ್‌, ಕೇಶವ ಹಾಜರಿದ್ದರು.

ತಾಲ್ಲೂಕನ್ನು ಬರಪೀಡಿತವೆಂದು ಘೋಷಿಸಲು ರೈತ ಸಂಘ ಹಾಗೂ ಹಸಿರುಸೇನೆ ಮನವಿ

0

ತಾಲ್ಲೂಕನ್ನು ಬರಪೀಡಿತವೆಂದು ಘೋಷಿಸುವಂತೆ ರೈತ ಸಂಘ ಹಾಗೂ ಹಸಿರುಸೇನೆಯ ಪದಾಧಿಕಾರಿಗಳು ಸೋಮವಾರ ತಹಶೀಲ್ದಾರ್‌ ಜಿ.ಎ.ನಾರಾಯಣಸ್ವಾಮಿ ಅವರ ಮೂಲಕ ಮುಖ್ಯಮಂತ್ರಿಗಳಿಗೆ ಮನವಿಯನ್ನು ಸಲ್ಲಿಸಿದರು.
ತಾಲ್ಲೂಕಿನಲ್ಲಿ 17,285 ಹೆಕ್ಟೇರ್‌ ಕೃಷಿ ಭೂಮಿಯಿದ್ದು, ಅದರಲ್ಲಿ 15,236 ಹೆಕ್ಟೇರ್‌ ಭೂಮಿಯಲ್ಲಿ ಮಾತ್ರ ಬಿತ್ತನೆ ಕಾರ್ಯ ನಡೆದಿದೆ. ಇದರಲ್ಲಿ ಶೇಕಡಾ 25 ರಷ್ಟು ಮೊಳಕೆ ಕೂಡ ಬಂದಿಲ್ಲ. ಸುಮಾರು 435 ಮಿಮೀ ಮಳೆ ಬೇಕಿದ್ದು ಕೇವಲ 198 ಮಿಮೀ ಮಳೆಯಾಗಿದೆ. ಕುಡಿಯಲು ನೀರಿಲ್ಲದೆ ಮೇವಿಲ್ಲದೆ ದನಕರುಗಳು ಸೊರಗುತ್ತಿವೆ. ಕೃಷಿ ಕಾರ್ಮಿಕರು ವಲಸೆ ಹೋಗತೊಡಗಿದ್ದಾರೆ. ಸರ್ಕಾರ ತಕ್ಷಣ ಕ್ರಮ ಕೈಗೊಂಡು ತಾಲ್ಲೂಕನ್ನು ಬರಪೀಡಿತವೆಂದು ಘೋಷಿಸಿ ರೈತರನ್ನು ಉಳಿಸಬೇಕೆಂದು ಮನವಿ ಸಲ್ಲಿಸಿದರು.
ಜಿಲ್ಲಾಡಳಿತ ತಕ್ಷಣ ಕ್ರಮ ಕೈಗೊಳ್ಳದಿದ್ದಲ್ಲಿ ರೈತ ಕುಲ ನಾಶವಾಗಲಿದೆ. ಮೂಕ ಜಾನುವಾರುಗಳು ಮೇವು ಮತ್ತು ನೀರಿಲ್ಲದೆ ನಶಿಸಲಿವೆ. ಕಾರ್ಮಿಕರು ವಲಸೆ ಹೋಗುತ್ತಿದ್ದಾರೆ. ರೈತರು ಎಲ್ಲಿಗೆ ಹೋಗುವುದೆಂದು ತಿಳಿಯದೆ ತಲೆ ಮೇಲೆ ಕೈಹೊತ್ತು ಕುಳಿತಿದ್ದಾರೆ ಎಂದು ವಿವರಿಸಿದರು.
ತಹಶೀಲ್ದಾರ್‌ ಜಿ.ಎ.ನಾರಾಯಣಸ್ವಾಮಿ ಮಾತನಾಡಿ, ಕೃಷಿ ಇಲಾಖೆಯ ಸಹಾಯಕ ನಿರ್ದೇಶಕರೊಂದಿಗೆ ಸೇರಿ ವಸ್ತುನಿಷ್ಠ ವರದಿಯನ್ನು ತಯಾರಿಸಿದ್ದು, ಎಷ್ಟು ಹೆಕ್ಟೇರ್‌ ಪ್ರದೇಶದಲ್ಲಿ ಬೇಳೆಯಾಗಿಲ್ಲ, ಎಷ್ಟು ಹೆಕ್ಟೇರ್‌ ಪ್ರದೇಶದಲ್ಲಿ ಬೆಳೆ ನಷ್ಟವಾಗಿದೆ ಎಂಬುದನ್ನೆಲ್ಲಾ ನಮೂದಿಸಿ, ರೈತರ ಮನವಿಯನ್ನೂ ಸೇರಿಸಿ ಜಿಲ್ಲಾಧಿಕಾರಿಗಳ ಮೂಲಕ ಸರ್ಕಾರಕ್ಕೆ ಸಲ್ಲಿಸುತ್ತೇನೆ. ರೈತರಿಗೆ ಅನ್ಯಾಯವಾಗಬಾರದು ಎಂಬುದು ನಮ್ಮ ಉದ್ದೇಶ ಕೂಡ ಆಗಿದೆ ಎಂದು ಹೇಳಿದರು.
ರೈತ ಸಂಘ ಹಾಗೂ ಹಸಿರುಸೇನೆಯ ಜಿಲ್ಲಾಧ್ಯಕ್ಷ ಭಕ್ತರಹಳ್ಳಿ ಬೈರೇಗೌಡ, ತಾಲ್ಲೂಕು ಅಧ್ಯಕ್ಷ ತಾದೂರು ಮಂಜುನಾಥ್‌, ಆಂಜನೇಯರೆಡ್ಡಿ, ಮುನಿನಂಜಪ್ಪ, ಟಿ.ಕೃಷ್ಣಪ್ಪ, ಎಂ.ದೇವರಾಜ್‌, ಅಂಬರೀಷ್‌, ಗೋಪಾಲ್‌, ರಾಮಚಂದ್ರಪ್ಪ, ನಾರಾಯಣಸ್ವಾಮಿ, ಗಜೇಂದ್ರ ಮತ್ತಿತರರು ಈ ಸಂದರ್ಭದಲ್ಲಿ ಹಾಜರಿದ್ದರು.

ಸರ್.ಎಂ.ವಿ ರವರ ಕೈಗಾರಿಕಾ ಸಾಧನೆಯಲ್ಲಿ ಶಿಡ್ಲಘಟ್ಟದ ಪಾತ್ರ

0

ಭಾರತರತ್ನ ಸರ್.ಎಂ.ವಿಶ್ವೇಶ್ವರಯ್ಯನವರ 154 ನೇ ಜನ್ಮದಿನವಿಂದು. ದೇಶದೆಲ್ಲೆಡೆ ಅವರ ಜನ್ಮದಿನವನ್ನು ಎಂಜಿನಿಯರ್ ದಿನವೆಂದೇ ಆಚರಿಸಲಾಗುತ್ತಿದೆ. ನಮ್ಮ ಜಿಲ್ಲೆಯಲ್ಲಿ ಜನಿಸಿದ್ದ ಸರ್.ಎಂ.ವಿ ಅವರಿಗೆ ಗ್ರಾಮೀಣರಿಗೆ ಉದ್ಯೋಗ ಸಿಗುವಂತಹ ಕಾರ್ಖಾನೆಯೊಂದನ್ನು ಸ್ಥಾಪಿಸುವ ಕನಸಿತ್ತು. ಅದಕ್ಕೆಂದೇ 1952ರಲ್ಲಿ ತಾಲ್ಲೂಕಿನ ಮೇಲೂರು ಗ್ರಾಮದಲ್ಲಿ ಕಿಸಾನ್ ಸಿಲ್ಕ್ ಇಂಡಸ್ಟ್ರಿ ಎಂಬ ರೇಷ್ಮೆಯ ಕಾರ್ಖಾನೆಯನ್ನು ಸ್ಥಾಪಿಸಿದ್ದಲ್ಲದೆ ಅದನ್ನು ಸರ್.ಎಂ.ವಿ ಅವರೇ ಆಗಮಿಸಿ ಉದ್ಘಾಟಿಸಿದ್ದರು.
ಸುಮಾರು 60 ವರ್ಷಗಳ ಹಿಂದೆಯೇ ದೂರದೃಷ್ಟಿಯುಳ್ಳ ಗ್ರಾಮೀಣ ಪ್ರಗತಿಯ ಯೋಜನೆಯನ್ನು ಸರ್.ಎಂ.ವಿ ಅವರು ರೂಪಿಸಿದ್ದರು. ಇಲ್ಲಿನ ಭೂಮಿ, ಹವಾಗುಣ ರೇಷ್ಮೆ ಗೂಡು ಹಾಗೂ ನೂಲು ತಯಾರಿಕೆಗೆ ಸೂಕ್ತವಾದುದು. ಇಲ್ಲಿನ ಜನರು ಇದರಿಂದ ಆರ್ಥಿಕ ಪ್ರಗತಿ ಕಾಣುವಂತಾಗಲೆಂದು ಅವರು ಕಿಸಾನ್ ಸಿಲ್ಕ್ ಇಂಡಸ್ಟ್ರಿಯನ್ನು ಪ್ರಾರಂಭಿಸಿದ್ದರು.
ಮೇಲೂರಿನಿಂದ ಕಂಬದಹಳ್ಳಿಗೆ ಹೋಗುವ ರಸ್ತೆಯಲ್ಲಿ ಪ್ರಾರಂಭವಾದ ಕಿಸಾನ್ ಸಿಲ್ಕ್ ಇಂಡಸ್ಟ್ರಿ ಜಿಲ್ಲೆಯ ಗ್ರಾಮೀಣ ಭಾಗದಲ್ಲಿ ಪ್ರಾರಂಭವಾದ ಮೊಟ್ಟಮೊದಲ ಕಾರ್ಖಾನೆ ಎಂಬ ಹೆಗ್ಗಳಿಕೆಗೆ ಪಾತ್ರವಾಯಿತು.
‘ಆಗ ಗ್ರಾಮವನ್ನೆಲ್ಲಾ ಸಿಂಗರಿಸಿದ್ದೆವು. ದಿವಾನರಾದ ವಿಶ್ವೇಶ್ವರಯ್ಯನವರು ಬರುತ್ತಾರೆಂದರೆ ಸುಮ್ಮನೆ ಮಾತೇ. ಮನೆಗಳ ಮುಂದೆಲ್ಲಾ ರಂಗೋಲಿ ಹಾಕಿ, ತಳಿರು ತೋರಣಗಳಿಂದ ಅಲಂಕರಿಸಿದ್ದೆವು. ಗ್ರಾಮವೆಲ್ಲಾ ಹಬ್ಬದ ಸಡಗರದಿಂದ ಸಂಭ್ರಮಪಟ್ಟಿತ್ತು. ನಾನು ಚಪ್ಪರ ಹಾಕುವುದರಿಂದ ಹಿಡಿದು ತೋರಣ ಕಟ್ಟುವುದರೊಂದಿಗೆ ವೇದಿಕೆಯನ್ನು ಸಿಂಗರಿಸುವಲ್ಲಿ ತೊಡಗಿಸಿಕೊಂಡಿದ್ದೆ. ಅವರ ಮೆರವಣಿಗೆ, ಸಭೆ, ಭಾಷಣ ನೆನೆದರೆ ರೋಮಾಂಚನವಾಗುತ್ತದೆ. ನಮ್ಮ ಗ್ರಾಮದಲ್ಲಿ ಕಾರ್ಖಾನೆಯೊಂದನ್ನು ಸ್ಥಾಪಿಸಿ ನಮಗೆಲ್ಲಾ ಶ್ರಮಜೀವಿಗಳಾಗುವಂತೆ ಕರೆ ಕೊಟ್ಟ ಆ ಮಹಾನುಭಾವರ ಚಿತ್ರ ಇನ್ನೂ ಕಣ್ಣಮುಂದಿದೆ’ ಎಂದು ಹಳೆಯ ದಿನಗಳನ್ನು ಮೆಲುಕು ಹಾಕುತ್ತಾರೆ 92 ವರ್ಷದ ಇಳಿವಯಸ್ಸಿನ ನಿವೃತ್ತ ಉಪಾಧ್ಯಾಯ ಎಂ.ರಾಮಯ್ಯ.
–ಡಿ.ಜಿ.ಮಲ್ಲಿಕಾರ್ಜುನ

ಅಮೆರಿಕೆಯಲ್ಲಿ ಮೊಳಗಿದ ಪಿಂಡಿಪಾಪನಹಳ್ಳಿಯ ಮುನಿವೆಂಕಟಪ್ಪ ಮತ್ತು ತಂಡದವರ ತಮಟೆ ವಾದನ

0

ದೇಸೀಯ ಸೊಗಡು ಮತ್ತು ಸೊಬಗನ್ನು ಆವಾಹಿಸಿಕೊಂಡಿರುವ ಗಂಡುಕಲೆ ತಮಟೆ ವಾದನ ಶಿಡ್ಲಘಟ್ಟ ತಾಲ್ಲೂಕಿನ ಪಿಂಡಿಪಾಪನಹಳ್ಳಿಯಿಂದ ಅಮೆರಿಕೆಗೆ ತೆರಳಿ ಅಲ್ಲಿ ಮೊಳಗಿ ತನ್ನ ಶಬ್ಧ ಮಾಧುರ್ಯದಿಂದ ಅಲ್ಲಿನವರ ಮನಸೂರೆಗೊಂಡಿದೆ.
ಈಚೆಗೆ ಅಮೆರಿಕೆಯ ಉತ್ತರ ಕ್ಯಾಲಿಫೋರ್ನಿಯಾ ಕನ್ನಡ ಕೂಟದ ಆಶ್ರಯದಲ್ಲಿ ಸ್ಯಾನ್‌ಹೂಸೆ ನಗರದಲ್ಲಿ ನಡೆದ ಎಂಟನೇ ಅಕ್ಕ ವಿಶ್ವ ಕನ್ನಡ ಸಮ್ಮೇಳನದಲ್ಲಿ ತಾಲ್ಲೂಕಿನ ಪಿಂಡಿಪಾಪನಹಳ್ಳಿಯ ತಮಟೆ ವಾದಕ ಮುನಿವೆಂಕಟಪ್ಪ ಮತ್ತು ತಂಡದವರು ಭಾಗವಹಿಸಿದ್ದರು. ತಾಲ್ಲೂಕಿನ ತಮಟೆ, ತಾಸು, ಡೋಲು ಮತ್ತು ಡ್ರಮ್‌ ಅಮೆರಿಕೆಯಲ್ಲಿ ಮಾಡಿದ ಶಬ್ದಕ್ಕೆ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದವರು ಕುಣಿದು ಕುಪ್ಪಳಿಸಿದ್ದಾರೆ. ತಮಟೆ ಬಾರಿಸುತ್ತಲೇ ಕಣ್ಣಿನ ರೆಪ್ಪೆಗಳಿಂದ ನೋಟನ್ನು ಮತ್ತು ಗುಂಡು ಸೂಜಿಯನ್ನು ಮೇಲೆತ್ತುವ ಮುನಿವೆಂಕಟಪ್ಪನವರ ಚಾಕಚಕ್ಯತೆಗೆ ಬೆಕ್ಕಸ ಬೆರಗಾಗಿದ್ದಾರೆ. ಅವರ ತಮಟೆಯ ಗಂಡು ದನಿಗೆ ಮಾರು ಹೋದ ಆಯೋಜಕರು ನಿಮ್ಮ ನೆನಪಿಗಾಗಿ ತಮಟೆಯನ್ನು ಕೊಡಿ ಎಂದು ಕೇಳಿ ಪಡೆದಿದ್ದಾರೆ.
ಪಿಂಡಿಪಾಪನಹಳ್ಳಿಯ ತಮಟೆ ವಾದಕ ನಾಡೋಜ ಮುನಿವೆಂಕಟಪ್ಪ ಅವರೊಂದಿಗೆ ಅವರ ಶಿಷ್ಯರಾದ ಮಧು, ಪ್ರಸನ್ನ, ದೇವರಮಳ್ಳೂರು ಮುನಿಯಪ್ಪ, ದ್ಯಾವಪ್ಪ, ವೆಂಕಟೇಶಪ್ಪ, ಶ್ರೀನಿವಾಸಪುರ ವೆಂಕಟೇಶ, ಕೋಲಾರ ಶ್ರೀನಿವಾಸಯ್ಯ ಅಮೆರಿಕೆಗೆ ಹೋಗಿ ಬಂದಿದ್ದಾರೆ.
ತಮಟೆ ವಾದನ ಬಯಲು ಸೀಮೆಯ ಜನಕ್ಕೆ ಸುಪರಿಚಿತ. ಅಂತಿಮ ಯಾತ್ರೆಯಲ್ಲಿ ಮಸಣದವರೆಗೂ ಜತೆ ನೀಡಿ ವಿದಾಯ ಹೇಳುವುದೂ ತಮಟೆಯ ನಾದದಿಂದಲೇ. ಊರ ಜಾತ್ರೆ, ಮೆರವಣಿಗೆ ಅಥವಾ ಕರಗದಂತಹ ಸಾಂಸ್ಕೃತಿಕ ಉತ್ಸವಗಳಲ್ಲಿ ತಮಟೆ ಸದ್ದು ಕೇಳಿಸಲೇಬೇಕು. ಇಂಥ ನೆಲ ಸಂಸ್ಕೃತಿಯ ಕಲೆಯನ್ನು ಪಿಂಡಿಪಾಪನಹಳ್ಳಿ ಮುನಿವೆಂಕಟಪ್ಪ ಹೊಸ ಭಾಷ್ಯವನ್ನು ಬರೆದ ಅದ್ಭುತ ಕಲಾವಿದ. ದೇಶ ವಿದೇಶಗಳಲ್ಲಿ ತಮಟೆ ನಾದವನ್ನು ಮೊಳಗಿಸಿ ಕನ್ನಡನಾಡಿಗೆ ಕೀರ್ತಿ ತಂದಿದ್ದಾರೆ. ಪ್ರಶಸ್ತಿಗಳ ಸರಮಾಲೆಯೇ ಇವರ ಕೊರಳನ್ನು ಅಲಂಕರಿಸಿದೆ. ಹಂಪಿ ಕನ್ನಡ ವಿಶ್ವವಿದ್ಯಾಲಯದ ‘ನಾಡೋಜ’ ಪ್ರಶಸ್ತಿಯೂ ಸಂದಿದೆ. ಜನಪದ ಅಕಾಡೆಮಿಯ ಸದಸ್ಯರೂ ಆಗಿದ್ದಾರೆ.
ಶಿಡ್ಲಘಟ್ಟ ತಾಲ್ಲೂಕಿನ ಕುಗ್ರಾಮ ಪಿಂಡಿಪಾಪನಹಳ್ಳಿಯಲ್ಲಿ ಜನಿಸಿದ ಇವರದು ಬಡಕುಟುಂಬ. ತಂದೆ ಪಾಪಣ್ಣ ತಾಯಿ ಮುನಿಗಂಗಮ್ಮ. ಬದಕಿನ ಆಸರೆಗಾಗಿ ತಂದೆಯಿಂದಲೇ ತಮಟೆ ವಾದನದ ಮೊದಲ ಪಾಠ. ನಾಲ್ಕನೇ ಕ್ಲಾಸಿಗೇನೆ ಕಲಿಕೆ ನಿಲ್ಲಿಸಿದ ಮುನಿವೆಂಕಟಪ್ಪ ‘ನಾಡೋಜ’ ಪ್ರಶಸ್ತಿಯವರೆಗೂ ಬೆಳೆದು ನಿಂತದ್ದು ಮಾತ್ರ ಅವರ ಏಕಲವ್ಯ ಸಾಧನೆಯ ಮಹಾನ್ ಯಾತ್ರೆ!
‘1992 ರಲ್ಲಿ ಜಪಾನ್‌ಗೆ ಸರ್ಕಾರ ಕಳುಹಿಸಿತ್ತು. ಅಲ್ಲಿ ಏಳು ದಿನಗಳ ಕಾಲದ ಕಾರ್ಯಕ್ರಮದಲ್ಲಿ ತಮಟೆಯ ನಾದಕ್ಕೆ ಅಪಾರ ಮೆಚ್ಚುಗೆ ವ್ಯಕ್ತವಾಗಿತ್ತು. ಈಚೆಗೆ ಅಮೆರಿಕೆಗೆ ಹೋಗುವ ಅವಕಾಶ ಒದಗಿ ಬಂದಿತು. ಪಾಸ್‌ಪೋರ್ಟ್‌ ಕಳೆದು ಹೋಗಿತ್ತು. ಹೊಸದಾಗಿ ಪಾಸ್‌ಪೋರ್ಟ್‌ ಮಾಡಿಸಿ ವೀಸಾ ಮಾಡಿಸುವಷ್ಟರಲ್ಲಿ ಸಾಕುಸಾಕಾಯಿತು. ನನ್ನ ಮಗ, ತಮ್ಮನ ಮಗ ಮತ್ತು ಐದು ಮಂದಿ ಶಿಷ್ಯರೊಂದಿಗೆ ಅಮೆರಿಕೆಯ ಅಕ್ಕ ಸಮ್ಮೇಳನದಲ್ಲಿ ತಮಟೆ, ತಾಸು, ಡೋಲು ಮತ್ತು ಡ್ರಮ್‌ ಬಾರಿಸಿ ವಿವಿಧ ಚಮತ್ಕಾರಗಳನ್ನು ಪ್ರದರ್ಶಿಸಿದೆವು. ನಮ್ಮ ನಾದಕ್ಕೆ ಅಲ್ಲಿನವರು ಕುಣಿದು ಕುಪ್ಪಳಿಸಿದರು. ಅಲ್ಲಿನ ಗೋಲ್ಡನ್‌ ಬೇ ಸೇತುವೆ, ಬೀಚ್‌ ಮುಂತಾದ ಸ್ಥಳಗಳನ್ನು ತೋರಿಸಿ ಆತ್ಮೀಯವಾಗಿ ಉಪಚರಿಸಿದರು. ಕಾರ್ಯಕ್ರಮದ ಆಯೋಜಕರು ಆಸೆ ಪಟ್ಟು ಕೇಳಿದರೆಂದು ತಮಟೆ ಮತ್ತು ಕಡ್ಡಿಗಳನ್ನು ಕೊಟ್ಟು ಬಂದೆ’ ಎಂದು ಅಮೆರಿಕೆಯ ಅನುಭವವನ್ನು 67 ವರ್ಷದ ಪಿಂಡಿಪಾಪನಹಳ್ಳಿ ಮುನಿವೆಂಕಟಪ್ಪ ತಿಳಿಸಿದರು.

ಅಮೆರಿಕೆಯಲ್ಲಿ ಈಚೆಗೆ ನಡೆದ ಎಂಟನೇ ಅಕ್ಕ ವಿಶ್ವಕನ್ನಡ ಸಮ್ಮೇಳನದಲ್ಲಿ ಭಾಗವಹಿಸಿದ್ದ ತಾಲ್ಲೂಕಿನ ತಮಟೆ ವಾದಕರ ತಂಡ.
ಅಮೆರಿಕೆಯಲ್ಲಿ ಈಚೆಗೆ ನಡೆದ ಎಂಟನೇ ಅಕ್ಕ ವಿಶ್ವಕನ್ನಡ ಸಮ್ಮೇಳನದಲ್ಲಿ ಭಾಗವಹಿಸಿದ್ದ ತಾಲ್ಲೂಕಿನ ತಮಟೆ ವಾದಕರ ತಂಡ.

ಅಮೆರಿಕೆಯಲ್ಲಿ ಮೊಳಗಿದ ಪಿಂಡಿಪಾಪನಹಳ್ಳಿ ಮುನಿವೆಂಕಟಪ್ಪನವರ ತಮಟೆ ಸದ್ದು.
ಅಮೆರಿಕೆಯಲ್ಲಿ ಮೊಳಗಿದ ಪಿಂಡಿಪಾಪನಹಳ್ಳಿ ಮುನಿವೆಂಕಟಪ್ಪನವರ ತಮಟೆ ಸದ್ದು.

ಅಮೆರಿಕಗೆ ತೆರಳಿದ ತಂಡದೊಂದಿಗೆ  ಪಿಂಡಿಪಾಪನಹಳ್ಳಿ ಮುನಿವೆಂಕಟಪ್ಪನವರ ತಂಡ.
ಅಮೆರಿಕಗೆ ತೆರಳಿದ ತಂಡದೊಂದಿಗೆ ಪಿಂಡಿಪಾಪನಹಳ್ಳಿ ಮುನಿವೆಂಕಟಪ್ಪನವರ ತಂಡ.

ಅಮೆರಿಕೆಯಲ್ಲಿ ಮೊಳಗಿದ ಪಿಂಡಿಪಾಪನಹಳ್ಳಿ ಮುನಿವೆಂಕಟಪ್ಪನವರ ತಮಟೆ ಸದ್ದು.
ಅಮೆರಿಕೆಯಲ್ಲಿ ಮೊಳಗಿದ ಪಿಂಡಿಪಾಪನಹಳ್ಳಿ ಮುನಿವೆಂಕಟಪ್ಪನವರ ತಮಟೆ ಸದ್ದು.

ಪ್ರದೇಶ ಜನತಾದಳ(ಜಾತ್ಯಾತೀತ) ಕಾರ್ಮಿಕ ವಿಭಾಗದ ರಾಜ್ಯಮಟ್ಟದ ಪದಾಧಿಕಾರಿಗಳ ಹಾಗೂ ಜಿಲ್ಲಾಧ್ಯಕ್ಷರುಗಳ ಕಾರ್ಯಕಾರಿಣಿ ಸಭೆ

0

ಅಸಂಘಟಿತ ಕಾರ್ಮಿಕರ ಸಮಸ್ಯೆಗೆ ಸ್ಪಂದಿಸಿ ಅದನ್ನು ಬಗೆಹರಿಸುವುದು ಜೆಡಿಎಸ್‌ ಪಕ್ಷದ ಪ್ರಮುಖ ಉದ್ದೇಶಗಳಲ್ಲೊಂದು ಎಂದು ಕರ್ನಾಟಕ ಪ್ರದೇಶ ಜನತಾದಳ(ಜಾತ್ಯಾತೀತ) ಕಾರ್ಮಿಕ ವಿಭಾಗದ ರಾಜ್ಯಾಧ್ಯಕ್ಷ ಜಿ.ಶ್ರೀರಾಮಯ್ಯ ತಿಳಿಸಿದರು.
ಪಟ್ಟಣದ ನಗರೇಶ್ವರ ಕಲ್ಯಾಣ ಮಂಟಪದಲ್ಲಿ ಶನಿವಾರ ನಡೆದ ಕರ್ನಾಟಕ ಪ್ರದೇಶ ಜನತಾದಳ(ಜಾತ್ಯಾತೀತ) ಕಾರ್ಮಿಕ ವಿಭಾಗದ ರಾಜ್ಯಮಟ್ಟದ ಪದಾಧಿಕಾರಿಗಳ ಹಾಗೂ ಜಿಲ್ಲಾಧ್ಯಕ್ಷರುಗಳ ಕಾರ್ಯಕಾರಿಣಿ ಸಭೆಯಲ್ಲಿ ಅವರು ಮಾತನಾಡಿದರು.
ಪಕ್ಷ ಸಂಘಟನೆಗೆ ಒತ್ತು ನೀಡಲಾಗುತ್ತಿದೆ. ಕೈಗಾರಿಕೆಗಳನ್ನು ಸ್ಥಾಪಿಸಿ ನಿರುದ್ಯೋಗ ನಿವಾರಿಸಬೇಕು ಹಾಗೂ ಈ ಭಾಗದ ರೈತರ ಸಮಸ್ಯೆಗಳ ಬಗ್ಗೆ ಪಕ್ಷದ ಮೂಲಕ ಹೋರಾಟ ಮಾಡುವುದರ ಮೂಲಕ ಸರ್ಕಾರದ ಮೇಲೆ ಒತ್ತಡ ತರುತ್ತೇವೆ ಎಂದು ಹೇಳಿದರು.
ಜೆಡಿಎಸ್‌ ಪ್ರಭಾರಿ ರಾಜ್ಯಾಧ್ಯಕ್ಷ ಎಂ.ಎಸ್‌.ನಾರಾಯಣರಾವ್‌ ಮಾತನಾಡಿ, ರಾಷ್ಟ್ರಾದ್ಯಂತ 2000 ಕೋಟಿ ರೂಗಳಷ್ಟು ಹಣ ಮೀಸಲಿದ್ದರೂ ಕೇವಲ 100 ಕೋಟಿ ರೂಗಳಷ್ಟು ಮಾತ್ರ ಖರ್ಚು ಮಾಡಲಾಗಿದೆ. ಅತ್ಯಂತ ಕಷ್ಟದ ಸ್ಥಿತಿಯಲ್ಲಿ ದುಡಿಯುವ ಕಾರ್ಮಿಕರ ಪರವಾಗಿ ಯೋಜನೆಗಳನ್ನು ಹಮ್ಮಿಕೊಳ್ಳಬೇಕು. ಹಲವಾರು ಐಟಿಐ ಫ್ಯಾಕ್ಟರಿಗಳನ್ನು ಮುಚ್ಚುತ್ತಿರುವುದು ದುರದೃಷ್ಟಕರ. ಎಚ್‌.ಎಂ.ಟಿ ಫ್ಯಾಕ್ಟರಿ ಕೂಡ ಅವಸಾನದತ್ತ ಸಾಗಿರುವುದು ದುರಂತ. ಇವೆಲ್ಲ ಕಾರ್ಮಿಕ ವಿರೋಧಿ ನೀತಿಯ ಉದಾಹರಣೆಗಳಾಗಿವೆ ಎಂದು ನುಡಿದರು.
ಜೆಡಿಎಸ್‌ ಜಿಲ್ಲಾಧ್ಯಕ್ಷ ಕೆ.ವಿ.ನಾಗರಾಜು ಮಾತನಾಡಿ, ಜೆಡಿಎಸ್‌ ಪಕ್ಷದಲ್ಲಿ ಯಾವುದೇ ಗೊಂದಲಗಳಿಲ್ಲ. ಕಾರ್ಯಕರ್ತರು ನಿಷ್ಠೆಯಿಂದ ಇರುವರು. ನಮ್ಮ ಭಾಗಕ್ಕೆ ಶಾಶ್ವತ ನೀರಾವರಿಯನ್ನು ಕುಮಾರಸ್ವಾಮಿ ಅವರ ನೇತೃತ್ವದ ಸರ್ಕಾರದಿಂದ ಮಾತ್ರ ಸಾಧ್ಯ. ಈ ನಿಟ್ಟಿನಲ್ಲಿ ಪಕ್ಷವನ್ನು ಸಂಘಟಿಸಿ ಅವರ ಕೈ ಬಲಪಡಿಸಬೇಕು ಎಂದು ಹೇಳಿದರು. ಈಗಿನ ಸಿದ್ಧರಾಮಯ್ಯನವರ ಸರ್ಕಾರ ಯಾಂತ್ರಕವಾಗಿದೆ ಅಷ್ಟೆ. ತಾಂತ್ರಿಕವಾಗಿ ಕೆಲಸ ಮಾಡುತ್ತಿಲ್ಲ. ನೀಡಿದ ಆಶ್ವಾಸನೆಗಳನ್ನು ಮರೆತು ಧೀರ್ಘ ಕಾಲಿಕ ಯೋಜನೆಗಳನ್ನು ರೂಪಿಸದೆ ಜಡವಾಗಿದೆ ಎಂದು ದೂರಿದರು.
ಈ ಸಂದರ್ಭದಲ್ಲಿ ಮಾಜಿ ಶಾಸಕ ಬಚ್ಚೇಗೌಡ, ಕೋಚಿಮುಲ್‌ ನಿರ್ದೇಶಕ ಬಂಕ್‌ ಮುನಿಯಪ್ಪ, ಜಿಲ್ಲಾ ಪಂಚಾಯತಿ ಸದಸ್ಯೆ ಶಿವಲೀಲಾ ರಾಜಣ್ಣ, ಡಿಸಿಸಿ ಬ್ಯಾಂಕ್‌ ನಿರ್ದೇಶಕ ಶಿವಾರೆಡ್ಡಿ, ಜೆಡಿಎಸ್‌ ತಾಲ್ಲೂಕು ಅಧ್ಯಕ್ಷ ಡಾ.ಧನಂಜಯರೆಡ್ಡಿ, ಜೆಡಿಎಸ್‌ ಕಾರ್ಮಿಕ ವಿಭಾಗದ ರಾಜ್ಯ ಪ್ರಧಾನ ಕಾರ್ಯದರ್ಶಿ ರಹಮತ್ತುಲ್ಲ ಮಾತನಾಡಿದರು.
ಜೆಡಿಎಸ್‌ ಕಾರ್ಮಿಕ ವಿಭಾಗದ ರಾಜ್ಯ ಉಪಾಧ್ಯಕ್ಷ ಗಂಗುಲಪ್ಪ, ಪ್ರಧಾನ ಕಾರ್ಯದರ್ಶಿ ಮಹಮ್ಮದ್‌ ರಫೀ, ಜಿಲ್ಲಾ ಘಟಕದ ಅಧ್ಯಕ್ಷ ಕನಕಪ್ರಸಾದ್‌, ಜೆಡಿಎಸ್‌ ಮಹಿಳಾ ಜಿಲ್ಲಾ ಘಟಕದ ಅಧ್ಯಕ್ಷೆ ಆಯಿಷಾ ಸುಲ್ತಾನ್‌, ತಾಲ್ಲೂಕು ಪಂಚಾಯತಿ ಸದಸ್ಯೆಯರಾದ ರಾಧಿಕಾ, ಮಂಜುಳ, ನೇತ್ರಾ, ಮುಖಂಡರಾದ ಮುನಿವೆಂಕಟಸ್ವಾಮಿ, ಅಫ್ಸರ್‌ ಪಾಷ ಮುಂತಾದವರು ಪಾಲ್ಗೊಂಡಿದ್ದರು.

ದಸರಾ ಕ್ರೀಡಾಕೂಟದಲ್ಲಿ ವಿಜೇತರಾಗಿ ವಿಭಾಗೀಯ ಮಟ್ಟಕ್ಕೆ ಆಯ್ಕೆಯಾದ ಚೀಮನಹಳ್ಳಿಯ ಕಬಡ್ಡಿ ತಂಡ

0

ಶಿಡ್ಲಘಟ್ಟ ತಾಲ್ಲೂಕಿನ ಚೀಮನಹಳ್ಳಿಯ ಕಬಡ್ಡಿ ತಂಡವು ಜಿಲ್ಲಾ ಮಟ್ಟದ ದಸರಾ ಕ್ರೀಡಾಕೂಟದಲ್ಲಿ ವಿಜೇತರಾಗಿ ವಿಭಾಗೀಯ ಮಟ್ಟಕ್ಕೆ ಆಯ್ಕೆಯಾಗಿದ್ದಾರೆ. ಕೋಚ್‌ ಸಿ.ಕೆ.ರವಿ, ಆಟಗಾರರಾದ ಸಿ.ಆರ್‌.ನವೀನ್‌, ಸಿ.ಬಿ.ಹರೀಶ್‌, ಸಿ.ಎಸ್‌.ಅನಿಲ್‌, ಶ್ರೀಕಾಂತ್‌, ದಿಲೀಪ್‌, ನಿತಿನ್‌, ಉನೀತ್‌, ಸಿ.ಬಿ.ವಿನಯ್‌, ಶ್ರೀನಾಥ್‌, ಹರಿ, ಅಭಿ, ಶಿವಕುಮಾರ್‌ ಇದ್ದಾರೆ.

ನಡಿಪಿನಾಯಕನಹಳ್ಳಿಯ ಕಪಿಲಮ್ಮ ಪದವಿ ಪೂರ್ವ ಕಾಲೇಜಿನ ಶಾಲಾ ಆವರಣದಲ್ಲಿ ಭರ್ಜರಿ ವ್ಯಾಪಾರ

0

ಅಮ್ಮನ ಕಾಯಿ ಹೋಳಿಗೆ ತಿಂದು ರುಚಿ ನೋಡಿ ಎಂದು ಒಂದೆಡೆ ಕರೆಯುತ್ತಿದ್ದರೆ, ಆಸ್ಮಾನ್ ಚಾಟ್ ಸೆಂಟರ್ ಇದು ಬಗೆಬಗೆಯ ಚಾಟ್ಸ್ ದೊರೆಯುತ್ತದೆ ಬನ್ನಿ ಬನ್ನಿ ಎಂದು ಮತ್ತೊಂದೆಡೆ ತಿನಿಸುಗಳ ಅಂಗಡಿಯ ಬುಲಾವ್ ಕೇಳಿಬರುತ್ತಿತ್ತು.
ತಾಲ್ಲೂಕಿನ ನಡಿಪಿನಾಯಕನಹಳ್ಳಿಯ ಕಪಿಲಮ್ಮ ಪದವಿ ಪೂರ್ವ ಕಾಲೇಜಿನ ವಿದ್ಯಾರ್ಥಿಗಳು ಶುಕ್ರವಾರ ವ್ಯಾಪಾರ ದಿನದ ಅಂಗವಾಗಿ ವೈವಿಧ್ಯಮಯ ಅಂಗಡಿಗಳನ್ನು ಶಾಲಾ ಆವರಣದಲ್ಲಿ ತೆರೆದು ಭರ್ಜರಿ ವ್ಯಾಪಾರ ನಡೆಸಿದರು.
ಬಾಯಲ್ಲಿ ನೀರೂರಿಸುವ ಉಪ್ಪು ಖಾರ ಹಚ್ಚಿರುವ ಸೌತೇಕಾಯಿ, ಬಗೆಬಗೆಯ ಶರಬತ್ತುಗಳು, ಪಾನೀಪುರಿ, ಕಾಫಿ ಚಹಾ, ಮನೆಯಲ್ಲಿ ತಯಾರಿಸಿರುವ ಹೋಳಿಗೆ, ಲಡ್ಡು, ವಿವಿಧ ದಿನಬಳಕೆ ವಸ್ತುಗಳು, ತರಕಾರಿ, ಮೊಟ್ಟೆ, ಬೋಟಿ, ಬಿಸ್ಕತ್‌, ಚಾಕೋಲೇಟ್‌ಗಳು, ಶಾಂಪೂ ಪೊಟ್ಟಣಗಳು, ಪೆನ್ನು, ಪೆನ್ಸಿಲ್‌ಗಳು, ರಸ್ಕು, ಬ್ರೆಡ್‌, ಬನ್ನು, ಗುಲ್ಕನ್ನು, ಎಳೆನೀರು, ಸೀಬೆಹಣ್ಣು, ಪಪ್ಪಾಯ, ಬಿಸಿಬಿಸಿ ಬೋಂಡ, ಬಜ್ಜಿ, ಇಡ್ಲಿ, ವಡೆ ಮುಂತಾದವುಗಳನ್ನು ಮಾರಾಟಕ್ಕಿಡಲಾಗಿತ್ತು.
ತಳ್ಳಿಕೊಂಡು ಹೋಗುವ ಪಾನೀಪುರಿ ಗಾಡಿಗಳನ್ನೇ ಶಾಲಾ ಆವರಣಕ್ಕೆ ತಂದಿಟ್ಟಿದ್ದರು. ವಿದ್ಯಾರ್ಥಿಗಳು ಗ್ರಾಹಕರ ಅನುಕೂಲಕ್ಕಾಗಿ ನೆರಳಿಗಾಗಿ ಟಾರ್ಪಾಲನ್ನು ಕಟ್ಟಿದ್ದರು. ಶಾಲೆಯಲ್ಲಿದ್ದ ವಿದ್ಯಾರ್ಥಿಗಳು ಕೂರುವ ಬೆಂಚುಗಳು ಶಾಲಾ ಆವರಣದಲ್ಲಿ ಗ್ರಾಹಕರು ಅಂಗಡಿಗಳ ಮುಂದೆ ಕುಳಿತುಕೊಳ್ಳುವ ಬೆಂಚುಗಳಾಗಿ ಮಾರ್ಪಾಡಾಗಿದ್ದವು.
ವಿದ್ಯಾರ್ಥಿಗಳೇ ಮೂರು ನಾಲ್ಕು ಮಂದಿ ಗುಂಪುಗಳಾಗಿ ವಿಂಗಡಿಸಿಕೊಂಡು ಒಂದೊಂದು ರೀತಿಯ ಅಂಗಡಿಗಳನ್ನು ತೆರೆದು ವ್ಯಾಪಾರ ನಡೆಸುತ್ತಿದ್ದರು. ಕೆಲವರು ತಮ್ಮಲ್ಲಿ ಮಾರಾಟಕ್ಕಿರುವ ವಸ್ತುಗಳ ಬಗ್ಗೆ ಜೋರಾಗಿ ಕೂಗಿ ಹೇಳುತ್ತಾ ಗ್ರಾಹಕರನ್ನು ಆಕರ್ಷಿಸುತ್ತಿದ್ದರೆ, ಕೆಲವರು ಹಣವನ್ನು ಎಣಿಸಿಕೊಂಡು ಲೆಕ್ಕ ಬರೆದಿಡುವ ಕೆಲಸವಾಗಿತ್ತು.
‘ವಿದ್ಯಾರ್ಥಿಗಳಲ್ಲಿ ವ್ಯವಹಾರಜ್ಞಾನ ಬೆಳೆಸಲು ವ್ಯಾಪಾರ ದಿನವನ್ನು ಆಚರಿಸುತ್ತಿದ್ದೇವೆ. ಅವರೇ ಬಂಡವಾಳ ಹೂಡಿ ವ್ಯಾಪಾರ ನಡೆಸಿ ಲಾಭ ನಷ್ಟದ ಬಗ್ಗೆ ವರದಿ ಸಲ್ಲಿಸುತ್ತಾರೆ. ಗ್ರಾಹಕರ ಮನಸ್ಸನ್ನು ಅರಿತು ಅವರಿಗೆ ಬೇಕಾದ ವಸ್ತುಗಳನ್ನು ನೀಡುವುದಲ್ಲದೆ ಅವರಿಗೆ ಅಗತ್ಯವೆನಿಸುವಂತೆ ವಸ್ತುಗಳನ್ನು ಬಿಂಬಿಸಿ ಮಾರುವ ಕಲೆಯನ್ನೂ ಬೆಳೆಸಿಕೊಳ್ಳಬೇಕು ಎಂಬುದು ನಮ್ಮ ಉದ್ದೇಶ’ ಎಂದು ಶಾಲಾ ಕಾಲೇಜು ಸಂಸ್ಥಾಪಕರಾದ ಕೃಷ್ಣಮೂರ್ತಿ ತಿಳಿಸಿದರು.
ಕಾಲೇಜು ಪ್ರಾಂಶುಪಾಲ ಸುದರ್ಶನ್‌, ಶಾಲಾ ಮುಖ್ಯಶಿಕ್ಷಕ ಸತ್ಯನಾರಾಯಣ, ಸುಮಾ ಮತ್ತಿತರರು ಇ ಸಂದರ್ಭದಲ್ಲಿ ಹಾಜರಿದ್ದರು.

ತಾಲ್ಲೂಕು ಮಟ್ಟದ ಪ್ರತಿಭಾಕಾರಂಜಿಯ ವಿಜೇತರು

0

ತಾಲ್ಲೂಕು ಮಟ್ಟದ ಪ್ರತಿಭಾಕಾರಂಜಿಯಲ್ಲಿ ಪ್ರಥಮ ಸ್ಥಾನ ಪಡೆದು ಜಿಲ್ಲಾಮಟ್ಟಕ್ಕೆ ಆಯ್ಕೆಯಾದ ವಿಜೇತರ ಫಲಿತಾಂಶ:
ಪ್ರಾಥಮಿಕ ಶಾಲೆ(1 ರಿಂದ 4):
ಕಂಠಪಾಠ (ಕನ್ನಡ): ಕಂಬಾಲಹಳ್ಳಿ ಸರ್ಕಾರಿ ಕಿರಿಯ ಪ್ರಾಥಮಿಕ ಶಾಲೆಯ ಕೆ.ಎಂ.ಗಗನ್,
ಕಂಠಪಾಠ (ಇಂಗ್ಲೀಷ್‌): ಡಾಲ್ಫಿನ್‌ ಶಾಲೆಯ ಲುಬ್ನಾ ರೈನಾ,
ಕಂಠಪಾಠ (ಹಿಂದಿ): ಪಿಂಡಿಪಾಪನಹಳ್ಳಿ ಬೃಂದಾ ಶಾಲೆಯ ಚೈತನ್ಯ,
ಕಂಠಪಾಠ (ಉರ್ದು): ಗಾಂಧಿನಗರ ಸರ್ಕಾರಿ ಉರ್ದು ಕಿರಿಯ ಪ್ರಾಥಮಿಕ ಶಾಲೆಯ ಜೈಬಾಫಾತೀಮಾ,
ಧಾರ್ಮಿಕಪಠಣ ಸಂಸ್ಕೃತ: ವಾಸವಿ ವಿದ್ಯಾಸಂಸ್ಥೆಯ ಎಸ್‌.ಎಸ್‌.ರಚನಾ,
ಧಾರ್ಮಿಕಪಠಣ ಅರೇಬಿಕ್‌: ಜಂಗಮಕೋಟೆ ತೋಟಗಳ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯ ಅರ್ಬಾಜ್‌ಪಾಷ,
ಲಘು ಸಂಗೀತ: ಬಶೆಟ್ಟಹಳ್ಳಿ ಸರ್ಕಾರಿ ಕಿರಿಯ ಪ್ರಾಥಮಿಕ ಶಾಲೆಯ ಪಿ.ಎಂ.ಕಾವ್ಯ.
ಛದ್ಮವೇಷ: ಸೊಣಗಾನಹಳ್ಳಿ ಸರ್ಕಾರಿ ಕಿರಿಯ ಪ್ರಾಥಮಿಕ ಶಾಲೆಯ ದರ್ಶಿನಿ,
ಚಿತ್ರಕಲೆ: ಚನ್ನಹಳ್ಳಿ ಸರ್ಕಾರಿ ಕಿರಿಯ ಪ್ರಾಥಮಿಕ ಶಾಲೆಯ ಸಿ.ಎಂ.ಅನಿಲ್‌ಕುಮಾರ್‌,
ಕಥೆ ಹೇಳುವುದು: ಜೆ.ವೆಂಕಟಾಪುರ ಸರ್ಕಾರಿ ಕಿರಿಯ ಪ್ರಾಥಮಿಕ ಶಾಲೆಯ ಎಂ.ಪರಿಮಳ,
ಅಭಿನಯಗೀತೆ: ಚನ್ನಪ್ಪನಹಳ್ಳಿ ಸರ್ಕಾರಿ ಕಿರಿಯ ಪ್ರಾಥಮಿಕ ಶಾಲೆಯ ನಂದಿನಿ,
ಕ್ಲೇ ಮಾಡೆಲಿಂಗ್‌: ಚಿಕ್ಕಪಾಪನಹಳ್ಳಿ ಸರ್ಕಾರಿ ಕಿರಿಯ ಪ್ರಾಥಮಿಕ ಶಾಲೆಯ ಸುಮಂತ್‌,
ಜಾನಪದ ನೃತ್ಯ: ಬೈರಗಾನಹಳ್ಳಿ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯ ಸ್ಪಂದನ ಮತ್ತು ತಂಡ,
ದೇಶಭಕ್ತಿಗೀತೆ: ಕನ್ನಪ್ಪನಹಳ್ಳಿ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯ ಶಿರೀಷ ಮತ್ತು ತಂಡ,
ಕೋಲಾಟ: ಯಣ್ಣಂಗೂರು ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯ ಸುಚಿತ್ರಾ ಮತ್ತು ತಂಡ,
ಕ್ವಿಜ್‌: ಮಳ್ಳೂರು ಸ್ವಾಮಿ ವಿವೇಕಾನಂದ ವಿದ್ಯಾಸಂಸ್ಥೆಯ ಪ್ರೀತಿ ಮತ್ತು ತಂಡ.
ಹಿರಿಯಪ್ರಾಥಮಿಕ ಶಾಲೆ(5 ರಿಂದ 7):
ಕಂಠಪಾಠ (ಕನ್ನಡ): ಸಾದಲಿಯ ಶಾಲವಿ ಕಾನ್ವೆಂಟ್‌ ಎನ್‌.ಮೋಹನ್‌,
ಕಂಠಪಾಠ (ಇಂಗ್ಲೀಷ್‌): ರಾಮೇಶ್ವರ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯ ವಿ.ಬಿ.ಅನಿತಾ,
ಕಂಠಪಾಠ (ಹಿಂದಿ): ಚೊಕ್ಕನಹಳ್ಳಿ ಕ್ರಾಸ್‌ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯ ಸಿ.ಎಂ.ಅನಿತಾ,
ಕಂಠಪಾಠ (ಉರ್ದು): ಸಂತೋಷ್‌ನಗರ ಸರ್ಕಾರಿ ಉರ್ದು ಹಿರಿಯ ಪ್ರಾಥಮಿಕ ಶಾಲೆಯ ಮಿಸ್ಬ,
ಕಂಠಪಾಠ(ಸಂಸ್ಕೃತ): ಕುದುಪಗುಂಟೆ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯ ಆಫೀಸಾಕೌಸರ್‌.
ಧಾರ್ಮಿಕಪಠಣ ಸಂಸ್ಕೃತ: ದಿಬ್ಬೂರಹಳ್ಳಿ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯ ಅಫ್ಜಲ್‌.
ಲಘು ಸಂಗೀತ: ಆಶಾಕಿರಣ ಅಂಧಮಕ್ಕಳ ಶಾಲೆಯ ಗಮನಿಕ.
ಛದ್ಮವೇಷ: ಕಂಬಾಲಹಳ್ಳಿ ಸರ್ಕಾರಿ ಕಿರಿಯ ಪ್ರಾಥಮಿಕ ಶಾಲೆಯ ರಜನಿ,
ಚಿತ್ರಕಲೆ: ಮೇಲೂರು ಸೆಂಟ್‌ ಥಾಮಸ್‌ ಶಾಲೆಯ ಟಿ.ಚಂದನ್‌,
ಕಥೆ ಹೇಳುವುದು: ಜೆ.ವೆಂಕಟಾಪುರ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯ ಬಿ.ಅಕ್ಷಯ್‌,
ಅಭಿನಯಗೀತೆ: ಕೊಂಡಪ್ಪಗಾರಹಳ್ಳಿ ಸರ್ಕಾರಿ ಕಿರಿಯ ಪ್ರಾಥಮಿಕ ಶಾಲೆಯ ಸಿಂಧು,
ಕ್ಲೇ ಮಾಡೆಲಿಂಗ್‌: ತುಮ್ಮನಹಳ್ಳಿ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯ ತ್ರಿವೇಣಿ,
ಯೋಗಾಸನ: ಮಳ್ಳೂರು ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯ ರಂಜಿತ್‌ಕುಮಾರ್‌,
ಜಾನಪದ ನೃತ್ಯ: ಕನ್ನಪ್ಪನಹಳ್ಳಿ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯ ಕೀರ್ತಿ ಮತ್ತು ತಂಡ,
ದೇಶಭಕ್ತಿಗೀತೆ: ಕನ್ನಪ್ಪನಹಳ್ಳಿ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯ ಚಂದನ ಮತ್ತು ತಂಡ,
ಕೋಲಾಟ: ಯಣ್ಣಂಗೂರು ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯ ಅನು ಮತ್ತು ತಂಡ,
ಕ್ವಿಜ್‌: ಸಾದಲಿ ಶಾಲವಿ ಕಾನ್ವೆಂಟ್‌ ರೋಹಿತ್‌ ಮತ್ತು ಹರೀಶ್‌.
ಪ್ರೌಢಶಾಲೆ(8 ರಿಂದ 10):
ಕನ್ನಡ ಭಾಷಣ: ಮಳ್ಳೂರು ಸ್ವಾಮಿ ವಿವೇಕಾನಂದ ಸಂಸ್ಥೆಯ ಬಿ.ಇಂದುಶ್ರೀ,
ಇಂಗ್ಲಿಷ್ ಭಾಷಣ: ಮಳ್ಳೂರು ಸ್ವಾಮಿ ವಿವೇಕಾನಂದ ಸಂಸ್ಥೆಯ ಎಂ.ನಿಹಾರಿಕಾ,
ಹಿಂದಿ ಭಾಷಣ: ಜಂಗಮಕೋಟೆ ಸರ್ಕಾರಿ ಪ್ರೌಢಶಾಲೆಯ ಜೆ.ವಿ.ಹರ್ಷಿಯಾ,
ಉರ್ದು ಭಾಷಣ: ಜಂಗಮಕೋಟೆ ಸರ್ಕಾರಿ ಪ್ರೌಢಶಾಲೆಯ ಶಬರೀನ್‌,
ಧಾರ್ಮಿಕ ಪಠಣ(ಸಂಸ್ಕೃತ): ಸರಸ್ವತಿ ಕಾನ್ವೆಂಟ್‌ ವಿ.ಗಂಗಾಧರ,
ಧಾರ್ಮಿಕ ಪಠಣ(ಅರೇಬಿಕ್‌): ಜಂಗಮಕೋಟೆ ಸರ್ಕಾರಿ ಪ್ರೌಢಶಾಲೆಯ ಹರ್ಷಿಯಾ,
ಯೋಗಾಸನ: ಚೀಮಂಗಲ ಸರ್ಕಾರಿ ಪ್ರೌಢಶಾಲೆಯ ಅರುಣ್‌,
ಕರ್ನಾಟಕ ಶಾಸ್ತ್ರೀಯ ಸಂಗೀತ: ಬಿ.ಜಿ.ಎಸ್‌ ಹನುಮಂತಪುರ ತಾಳಂಕಿ ರಚಿತ,
ಹಿಂದೂಸ್ಥಾನಿ ಶಾಸ್ತ್ರೀಯ ಸಂಗೀತ: ಆಶಾಕಿರಣ ಅಂಧ ಮಕ್ಕಳ ಶಾಲೆಯ ಅಮರಜ್ಯೋತಿ,
ಜಾನಪದ ಗೀತೆ: ಭಕ್ತರಹಳ್ಳಿ ಬಿ.ಎಂ.ವಿ. ಪ್ರೌಢಶಾಲೆಯ ಬಿ.ಎನ್‌.ಪವಿತ್ರ,
ಭಾವಗೀತೆ: ಸಾದಲಿ ಸರ್ಕಾರಿ ಪ್ರೌಢಶಾಲೆಯ ಜ್ಞಾನೇಶ್ವರಿ,
ಭರತನಾಟ್ಯ: ಬಿ.ಜಿ.ಎಸ್‌ ಹನುಮಂತಪುರ ರುಚಿತಾ ಎನ್‌.ರಂಜನ್‌,
ಛದ್ಮವೇಷ: ದೊಡ್ಡತೇಕಹಳ್ಳಿ ಸರ್ಕಾರಿ ಪ್ರೌಢಶಾಲೆಯ ಮಂಜುನಾಥ,
ಕ್ಲೇಮಾಡೆಲಿಂಗ್‌: ಬಶೆಟ್ಟಹಳ್ಳಿ ಸರ್ಕಾರಿ ಪ್ರೌಢಶಾಲೆಯ ವೇಣು,
ಆಶುಭಾಷಣ: ಎಚ್‌.ಕ್ರಾಸ್‌ ಸುಮುಖ ಪ್ರೌಢಶಾಲೆಯ ಅರ್ಚನಾ,
ಮಿಮಿಕ್ರಿ: ಮಳ್ಳೂರು ಸ್ವಾಮಿ ವಿವೇಕಾನಂದ ಪ್ರೌಢಶಾಲೆಯ ಪವನ್‌ಗೌಡ,
ಪ್ರಬಂಧರಚನೆ: ಸುಗಟೂರು ಸರ್ಕಾರಿ ಪ್ರೌಢಶಾಲೆಯ ಎಸ್‌.ಆರ್‌.ಮೂರ್ತಿ,
ಚರ್ಚಾಸ್ಪರ್ಧೆ: ಮಳ್ಳೂರು ಸ್ವಾಮಿ ವಿವೇಕಾನಂದ ಪ್ರೌಢಶಾಲೆಯ ಬಿ.ಇಂದೂಶ್ರೀ,
ಚಿತ್ರಕಲೆ: ಜಂಗಮಕೋಟೆ ಸರ್ಕಾರಿ ಪ್ರೌಢಶಾಲೆಯ ಮುರಳಿ,
ರಂಗೋಲಿ: ಶಾರದಾ ಬಾಲಕಿಯರ ಪ್ರೌಢಶಾಲೆಯ ಸಿ.ಆರ್‌.ನವ್ಯಾ,
ಗಝಲ್‌: ಸರ್ಕಾರಿ ಉರ್ದು ಪ್ರೌಢಶಾಲೆಯ ಎಚ್‌.ಮುಸ್‌ಖಾನ್‌,
ಜಾನಪದ ನೃತ್ಯ: ಬಶೆಟ್ಟಹಳ್ಳಿ ಸರ್ಕಾರಿ ಪ್ರೌಢಶಾಲೆಯ ಪ್ರಿಯಾಂಕ ಮತ್ತು ತಂಡ,
ನಾಟಕ: ಭಕ್ತರಹಳ್ಳಿ ಬಿ.ಎಂ.ವಿ.ಪ್ರೌಢಶಾಲೆಯ ಪವಿತ್ರಾ ಮತ್ತು ತಂಡ,
ಕೋಲಾಟ: ಜಂಗಮಕೋಟೆ ಸರ್ಕಾರಿ ಪ್ರೌಢಶಾಲೆಯ ಚಂದನಾ ಮತ್ತು ತಂಡ,
ಕವ್ವಾಲಿ: ಸರ್ಕಾರಿ ಪ್ರೌಢಶಾಲೆಯ ವಸಿಉಲ್ಲಾ ಮತ್ತು ತಂಡ,
ವಿಜ್ಞಾನ ಮಾದರಿ: ನವೋದಯ ನಡಿಪಿನಾಯಕನಹಳ್ಳಿ ಶಾಲೆಯ ವೈ.ನಿರಂಜನಗೌಡ,
ಕ್ವಿಜ್‌: ಮಳ್ಳೂರು ಸ್ವಾಮಿ ವಿವೇಕಾನಂದ ಪ್ರೌಢಶಾಲೆಯ ಜಿ.ಎಚ್‌.ತೇಜಸ್‌.

ಕನಿಷ್ಠ ಇಬ್ಬರಿಗಾದರೂ ಕಲಿಕೆಯನ್ನು ಕಲಿಸಿ. ಕಲಿತ ಋಣ ಕಲಿಸಿ ತೀರಿಸಿ

0

ಮರದಿಂದ ಬಿದ್ದ ಬೀಜ, ಎದೆಯಲ್ಲಿ ನಾಟಿದ ಅಕ್ಷರ ಇಂದಲ್ಲ ನಾಳೆ ಫಲ ಕೊಟ್ಟೇ ಕೊಡುತ್ತದೆ. ಕನಿಷ್ಠ ಇಬ್ಬರಿಗಾದರೂ ಕಲಿಕೆಯನ್ನು ಕಲಿಸಿ. ಕಲಿತ ಋಣ ಕಲಿಸಿ ತೀರಿಸಿ ಎಂದು ಜಿಲ್ಲಾ ಪಂಚಾಯತಿ ಅಧ್ಯಕ್ಷ ಪಿ.ಕೇಶವರೆಡ್ಡಿ ಹೇಳಿದರು.
ಪಟ್ಟಣದ ತಾಲ್ಲೂಕು ಪಂಚಾಯತಿ ಸಭಾಂಗಣದಲ್ಲಿ ಈಚೆಗೆ ಏರ್ಪಡಿಸಲಾಗಿದ್ದ ಸಾಕ್ಷರತಾ ದಿನಾಚರಣೆಯ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು. ತಾಲ್ಲುಕಿನಾದ್ಯಂತ ಅನಕ್ಷರಸ್ಥರು 29,951 ಅನಕ್ಷರಸ್ಥರಿದ್ದಾರೆ. ಈ ವರ್ಷದ ಗುರಿ 16,841 ಇದೆ. 54 ಮಂದಿ ಪ್ರೇರಕರನ್ನು ನಿಯೋಜಿಸಿದ್ದು, 27 ಕೇಂದ್ರಗಳನ್ನು ಆಯ್ಕೆ ಮಾಡಲಾಗಿದೆ. ಅಕ್ಷರ ಕಲಿಸುವ ಜೊತೆಯಲ್ಲಿ ಮನೆಗೊಂದು ಶೌಚಾಲಯ ನಿರ್ಮಾಣದ ಅಗತ್ಯತೆಯನ್ನು ತಿಳಿಸಿ ಎಂದು ಹೇಳಿದರು.
ಜಿಲ್ಲಾ ಪಂಚಾಯತಿ ಸದಸ್ಯ ಎಸ್‌.ಎಂ.ನಾರಾಯಣಸ್ವಾಮಿ ಮಾತನಾಡಿ ಹಿಂದಿನ ಸ್ಲೇಟು ಬಳಪದ ಕಾಲದಿಂದ ಈಗಿನ ಕಂಪ್ಯೂಟರ್‌ವರೆಗೂ ಕಾಲದ ಪ್ರವಾಹ ಸಾಗಿದೆ. ಈಗಿನ ಜಗತ್ತಿನ ಬದಲಾವಣೆಯಲ್ಲಿ ಜೀವಿಸಲು ಅಕ್ಷರ ಜ್ಞಾನ ಅತ್ಯಗತ್ಯ. ಸಾಕ್ಷರತೆಯಿಂದಲೇ ಪ್ರಗತಿ ಸಾಧ್ಯ. ಕೇವಲ ಅಧಿಕಾರಿಗಳಷ್ಟೇ ಅಲ್ಲ, ಸಮುದಾಯದ ಭಾಗವಹಿಸುವಿಕೆಯೂ ಇದರಲ್ಲಿ ಮುಖ್ಯ ಎಂದು ನುಡಿದರು.
ಜಿಲ್ಲಾ ಪಂಚಾಯಿತಿ ಉಪಾಧ್ಯಕ್ಷೆ ವೀಣಾಗಂಗುಲಪ್ಪ, ತಾಲ್ಲೂಕು ಪಂಚಾಯತಿ ಅಧ್ಯಕ್ಷೆ ಆಂಜಿನಮ್ಮ, ಉಪಾಧ್ಯಕ್ಷ ಡಿ.ಎಸ್‌.ಎನ್‌.ರಾಜು, ಜಿಲ್ಲಾ ಪಂಚಾಯತಿ ಸದಸ್ಯರಾದ ಶಿವಲೀಲಾರಾಜಣ್ಣ, ಸತೀಶ್‌, ತಾಲ್ಲೂಕು ಪಂಚಾಯತಿ ಪ್ರಭಾರಿ ಕಾರ್ಯನಿರ್ವಾಹಕ ಅಧಿಕಾರಿ ಗಣಪತಿ ಸಾಕರೆ, ತಾಲ್ಲೂಕು ಲೋಕ ಶಿಕ್ಷಣ ಸಮಿತಿ ಸಂಯೋಜಕರಾದ ಟಿ.ವಿ.ಶ್ರೀನಿವಾಸ್‌, ಜಿ.ಎನ್‌.ಕ್ಯಾತಪ್ಪ, ಸಂಪನ್ಮೂಲ ವ್ಯಕ್ತಿ ವಿ.ಕೃಷ್ಣ ಮತ್ತಿತರರು ಹಾಜರಿದ್ದರು.

error: Content is protected !!