ರಾಗಿ ತೂರುತ್ತಾ, ನೆಲ್ಲು ಕುಟ್ಟುತ್ತಾ, ಕಾಳುಗಳನ್ನು ಒಕ್ಕಣೆ ಮಾಡುತ್ತಾ, ಜನಪದ ಗೀತೆಗಳನ್ನು ಹಾಡುತ್ತಾ ಕಣ ಸಂಸ್ಕೃತಿಯನ್ನು ಮರುಸೃಷ್ಠಿ ಮಾಡಲಾಗಿತ್ತು.
ಪಟ್ಟಣದ ಹೊರವಲಯದ ಬಿ.ಜಿ.ಎಸ್ ಪಬ್ಲಿಕ್ ಶಾಲೆಯ ಜ್ಞಾನ ಸಹ್ಯಾದ್ರಿ ಕ್ಯಾಂಪಸ್‌ನಲ್ಲಿ ಗುರುವಾರ ನಡೆದ ಜನಾಂಗೀಯ ಸಂಸ್ಕೃತಿ ದಿನಾಚರಣೆಯ ಅಂಗವಾಗಿ ಗ್ರಾಮೀಣ ಜನಜೀವನ, ಜಾನಪದ, ಕೃಷಿ, ಆಚಾರ, ವಿಚಾರ, ವಿಜ್ಞಾನ, ತಂತ್ರಜ್ಞಾನ, ಪರಿಸರವನ್ನು ವಿದ್ಯಾರ್ಥಿಗಳು ಸೃಷ್ಠಿಸಿದ್ದರು. ದೇಶೀಯ ಸಂಸ್ಕೃತಿಯನ್ನು ಬಿಂಬಿಸುವ ವೇಷಭೂಷಣಗಳನ್ನು ವಿದ್ಯಾರ್ಥಿಗಳು ಮತ್ತು ಶಿಕ್ಷಕರು ಧರಿಸಿ ಶಾಲೆಯನ್ನು ತಳಿರು ತೋರಣಗಳು ಮತ್ತು ಹೂಗಳಿಂದ ಅಲಂಕರಿಸಿದ್ದರು.
ಕಾಡು ಮನುಷ್ಯರು ಅವರ ಆಚರಣೆಗಳು, ಕಾಡಿನ ಪರಿಸರ, ವನ್ಯ ಜೀವಿಗಳು, ಉಳುವಾ ಯೋಗಿಯಂಥ ರೈತ, ಬಿತ್ತನೆ ಕಾರ್ಯ, ಪೈರು ನಾಟಿ, ಬೆಳೆದ ಪೈರು, ಕೊಯ್ಲು ಮಾಡಿ ಶೇಖರಣೆ, ನಂತರದ ಸುಗ್ಗಿ ನೃತ್ಯ, ಕಣದ ಏರ್ಪಾಡುಗಳು, ಧಾನ್ಯಗಳ ವಿಂಗಡಣೆ, ಶೇಖರಣೆ, ಸಂರಕ್ಷಣೆ, ವಿವಿಧ ಕಾಳು, ಬೇಳೆಗಳ ಮೊಳಕೆಗಳ ಆಹಾರ ಪದಾರ್ಥಗಳು, ಗುಡಿಸಲು, ಮಣ್ಣಿನ ಮನೆ, ಎತ್ತಿನ ಗಾಡಿ, ಹುತ್ತದಲ್ಲಿ ಹಾವು, ಅದರ ವೈರಿ ಮುಂಗುಸಿ, ಬದಲಿ ವಿದ್ಯುತ್ ಮೂಲಗಳಾದ ಗಾಳಿಯಂತ್ರ ಮತ್ತು ಸೋಲಾರ್, ಬ್ಯಾಂಕ್ ನಿರ್ವಹಣೆಯನ್ನು ಪ್ರತಿಬಿಂಬಿಸುವ ಪ್ರತಿಕೃತಿಗಳು, ಮೈಸೂರು ಅರಮನೆ, ವಿವಿಧ ದೇವಾಲಯಗಳು, ಆದಿಚುಂಚನಗಿರಿ ಕ್ಷೇತ್ರದ ಪ್ರತಿಕೃತಿ, ದೇವರ ರಥಗಳು, ಜಲಪಾತ, ಬಣ್ಣಬಣ್ಣದ ರಂಗೋಲಿಗಳು, ಪುರಾತನ ನಾಣ್ಯಗಳು ಮುಂತಾದ ಜನಾಂಗೀಯ ಬದುಕನ್ನು ಬಿಂಬಿಸುವ ಸಂಗತಿಗಳನ್ನು ವಿದ್ಯಾರ್ಥಿಗಳು ಪ್ರದರ್ಶಿಸಿದ್ದರು.
‘ನಮ್ಮ ದೇಶೀ ಸಂಸ್ಕೃತಿ, ಆಚಾರ ವಿಚಾರ, ಜನಜೀವನ, ಜಾನಪದ ಮುಂತಾದ ವಿಚಾರಗಳು ಮಕ್ಕಳ ಮನಸ್ಸಿಗೆ ತಲುಪಲು ಅವರೇ ಪರಕಾಯ ಪ್ರವೇಶಿಸಿದಂತೆ ಅನುಭವಿಸಿ ಪ್ರದರ್ಶಿಸುವ ಉದ್ದೇಶದಿಂದ ಜನಾಂಗೀಯ ಸಂಸ್ಕೃತಿ ದಿನಾಚರಣೆಯನ್ನು ಆಚರಿಸುತ್ತಿದ್ದೇವೆ. ಶಿಕ್ಷಕರು ಕೂಡ ಮಕ್ಕಳೊಂದಿಗೆ ನಮ್ಮ ದೇಶೀ ಪದ್ಧತಿಯಲ್ಲೇ ಉಡುಗೆ ತೊಡುಗೆಗಳನ್ನು ಧರಿಸಿ ವಿದ್ಯಾರ್ಥಿಗಳೊಂದಿಗೆ ಭಾಗವಹಿಸಿದ್ದೇವೆ. ಮಕ್ಕಳಿಗೆ ಪ್ರೋತ್ಸಾಹ ನೀಡುವ ಉದ್ದೇಶದಿಂದ ಅವರ ಪ್ರತಿಭೆಯನ್ನು ಗುರುತಿಸಿ ಬಹುಮಾನಗಳನ್ನೂ ವಿತರಿಸಲಿದ್ದೇವೆ. ಅಳಗುಳಿಮನೆ, ಚೌಕಾಬಾರ, ಕಲ್ಲಾಟ ಮುಂತಾದ ಜಾನಪದ ಆಟಗಳು, ಸುಗ್ಗಿ ಹಾಡು, ಪೈರು ಹಾಡು ಮುಂತಾದ ಕೃಷಿ ಸಂಸ್ಕೃತಿಯ ಹಾಡುಗಳನ್ನು ಮಕ್ಕಳು ಪ್ರದರ್ಶಸುತ್ತಿರುವುದು ಸಂತಸ ತಂದಿದೆ’ ಎಂದು ಪ್ರಾಂಶುಪಾಲ ಮಹದೇವಯ್ಯ ತಿಳಿಸಿದರು.
ಜನಾಂಗೀಯ ಸಂಸ್ಕೃತಿ ದಿನಾಚರಣೆಯ ಅಂಗವಾಗಿ ಜನಾಂಗೀಯ ಸಂಸ್ಕೃತಿ ಪ್ರದರ್ಶಿಸಿದ ಮಕ್ಕಳು
ಬಿಲ್ವಪತ್ರೆ ತಂಬುಳಿ
ಬೇಕಾಗುವ ಸಾಮಾಗ್ರಿ
4 ಪತ್ರೆಸೊಪ್ಪು
1 ಟೀ ಸ್ಪೂನ್ ಜೀರಿಗೆ
5 ಕಾಳುಮೆಣಸು
1 ಕಪ್ಪು ತೆಂಗಿನ ತುರಿ
ಉಪ್ಪು
1 ಟೀ ಸ್ಪೂನ್ ಬೆಲ್ಲ
ಮಾಡುವ ವಿಧಾನ
ಸೊಪ್ಪಿನ ದಂಟನ್ನು ತೆಗೆದುಕೊಳ್ಳಿ, ಬಾಣಲೆಯಲ್ಲಿ ಒಂದು ಚಮಚ ತುಪ್ಪ ಹಾಕಿ ಬಿಸಿ ಆದ ನಂತರ ಅದಕ್ಕೆ ಸೊಪ್ಪು, ಜೀರಿಗೆ ಮತ್ತು ಕಾಳುಮೆಣಸು ಹಾಕಿ ಹುರಿದುಕೊಳ್ಳಿ. ಹುರಿದ ಮಿಶ್ರಣಕ್ಕೆ ಒಂದು ಕಪ್ಪು ತೆಂಗಿನ ತುರಿ, ರುಚಿಗೆ ತಕ್ಕಷ್ಟು ಉಪ್ಪು, ಬೆಲ್ಲ ಹಾಕಿ ಮಿಕ್ಸಿಯಲ್ಲಿ ನುಣ್ಣಗೆ ರುಬ್ಬಿ. ಇದು ಸಾಂಬಾರಿನಷ್ಟು ತೆಳ್ಳಗೆ ಇರಲಿ. ನಂತರ ಇದಕ್ಕೆ ತಪ್ಪದಲ್ಲಿ ಜೀರಿಗೆ ಹಾಕಿ ಒಗ್ಗರಣೆ ಕೊಡಿ. ಇದನ್ನು ಅನ್ನಕ್ಕೆ ಕಲಸಿ ತಿನ್ನಬಹುದು. ಇದೇ ವಿಧಾನದಲ್ಲಿ ಎಲವರಿಗೆಸೊಪ್ಪು, ಸೊರಲೆಸೊಪ್ಪಿನಿಂದಲೂ ಮಾಡಬಹುದು.
ಉಪಯೋಗ
ಇದು ಬೇಸಿಗೆಯ ಬೇಗೆಗೆ ತುಂಬಾ ಉತ್ತಮ ಪದಾರ್ಥ, ಅಲ್ಲದೇ ಪತ್ರೆಸೊಪ್ಪು ಆರೋಗ್ಯಕ್ಕೂ ಒಳ್ಳೆಯದು.
ಪ್ರತಿಯೊಂದು ಕುಟುಂಬವೂ ಶೌಚಾಲಯ ನಿರ್ಮಿಸಿಕೊಳ್ಳಬೇಕು – ತಾಲ್ಲೂಕು ಪಂಚಾಯತಿ ಅಧ್ಯಕ್ಷೆ ಆಂಜಿನಮ್ಮ
ಪ್ರತಿಯೊಂದು ಕುಟುಂಬವೂ ಶೌಚಾಲಯ ನಿರ್ಮಿಸಿಕೊಂಡಾಗ ಗ್ರಾಮದಲ್ಲಿ ನೈರ್ಮಲ್ಯ ಕಾಪಾಡುವುದು ಸೇರಿದಂತೆ ಎಲ್ಲರ ಆರೋಗ್ಯವೂ ಸುಧಾರಿಸುತ್ತದೆ ಎಂದು ತಾಲ್ಲೂಕು ಪಂಚಾಯತಿ ಅಧ್ಯಕ್ಷೆ ಆಂಜಿನಮ್ಮ ಹೇಳಿದರು.
ತಾಲ್ಲೂಕಿನ ಎಸ್.ದೇವಗಾನಹಳ್ಳಿ ಗ್ರಾಮ ಪಂಚಾಯತಿ ವ್ಯಾಪ್ತಿಯ ವರದಗಾನಹಳ್ಳಿ ಗ್ರಾಮದಲ್ಲಿ ಬುಧವಾರ ನಿರ್ಮಲ ಭಾರತ್ ಅಭಿಯಾನ ಕಾರ್ಯಕ್ರಮದ ಉದ್ಘಾಟನೆ ನೆರವೇರಿಸಿ ಅವರು ಮಾತನಾಡಿದರು.
ಕೇಂದ್ರ ಮತ್ತು ರಾಜ್ಯ ಸರ್ಕಾರದ ಮಹತ್ವಾಕಾಂಕ್ಷೆಯ ಯೋಜನೆಯಾದ ನರೇಗಾ ಸೇರಿದಂತೆ ನಿರ್ಮಲ ಭಾರತ ಅಭಿಯಾನ ಯೋಜನೆಯಡಿಯಲ್ಲಿ ವೈಯಕ್ತಿಕ ಶೌಚಾಲಯಗಳನ್ನು ನಿರ್ಮಾಣ ಮಾಡಿಕೊಳ್ಳಲು ಗ್ರಾಮ ಪಂಚಾಯತಿಯ ಮುಖಾಂತರ ಸಹಾಯಧನವನ್ನು ಬಿಡುಗಡೆ ಮಾಡಲಾಗುತ್ತಿದೆ. ಗ್ರಾಮಸ್ಥರು ಹಣದ ಬಿಡುಗಡೆ ವಿಷಯದಲ್ಲಿ ಗೊಂದಲ ಪಡುವುದು ಬೇಡ. ಗ್ರಾಮದಲ್ಲಿರುವ ಎಲ್ಲಾ ಕುಟುಂಬದವರೂ ಕಡ್ಡಾಯವಾಗಿ ಶೌಚಾಲಯಗಳನ್ನು ನಿರ್ಮಿಸಿ ಗ್ರಾಮದ ನೈರ್ಮಲ್ಯ ಕಾಪಾಡಬೇಕು. ಶೌಚಾಲಯ ನಿರ್ಮಿಸಿಕೊಂಡ ಎಲ್ಲಾ ಫಲಾನುಭವಿಗಳ ಬ್ಯಾಂಕ್ ಖಾತೆಗಳಿಗೆ ಹಂತ ಹಂತವಾಗಿ ಹಣ ಸಂದಾಯ ಮಾಡಲಾಗುತ್ತದೆ ಎಂದರು.
ತಾಲ್ಲೂಕು ಪಂಚಾಯತಿ ಉಪಾಧ್ಯಕ್ಷ ಡಿ.ಎಸ್.ಎನ್.ರಾಜು ಮಾತನಾಡಿ ಪಂಚಾಯತಿ ವ್ಯಾಪ್ತಿಯ ಪ್ರತಿಯೊಂದು ಹಳ್ಳಿಯಲ್ಲೂ ವೈಯಕ್ತಿಕ ಶೌಚಾಲಯಗಳ ನಿರ್ಮಾಣ ಮಾಡಿಕೊಳ್ಳಲು ಗ್ರಾಮ ಪಂಚಾಯತಿ ಸದಸ್ಯರೂ ಸೇರಿದಂತೆ ಅಧಿಕಾರಿಗಳು ಅರಿವು ಮೂಡಿಸುವಲ್ಲಿ ಸಹಕಾರ ನೀಡಬೇಕೆಂದರು.
ತಾಲ್ಲೂಕು ಪಂಚಾಯತಿ ಕಾರ್ಯನಿರ್ವಾಹಕ ಅಧಿಕಾರಿ ಗಣಪತಿಸಾಕರೆ ಮಾತನಾಡಿ ಸರ್ಕಾರದಿಂದ ಸಹಾಯಧನ ಬಿಡುಗಡೆಯಾಗಿದ್ದು ಮುಂದಿನ ದಿನಗಳಲ್ಲಿ ಹಂತ ಹಂತವಾಗಿ ಅಧಿಕಾರಿಗಳು ನಿಮ್ಮ ಗ್ರಾಮಗಳಿಗೆ ಭೇಟಿ ನೀಡಿ ಶೌಚಾಲಯಗಳ ನಿರ್ಮಾಣ ಕಾರ್ಯದ ಬಗ್ಗೆ ಪರಿಶೀಲನೆ ನಡೆಸುವುದರೊಂದಿಗೆ ಶೌಚಾಲಯಗಳು ಸಂಪೂರ್ಣವಾಗಿ ಮುಗಿದಿದ್ದರೆ ನಿಮ್ಮ ಹಣವನ್ನು ನೀಡಲು ಯಾವುದೇ ಕಾರಣಕ್ಕೂ ವಿಳಂಬ ಮಾಡುವುದಿಲ್ಲ. ಸ್ಯಾನಿಟರಿ ಗುಂಡಿಗಳನ್ನು ಅಗೆಯಲು ಸಾಧ್ಯವಾಗದ ಬೆಟ್ಟ ಗುಡ್ಡಗಳ ಪ್ರದೇಶದಲ್ಲಿ ನಗರಗಳಲ್ಲಿ ನಿರ್ಮಾಣ ಮಾಡಿದಂತೆ ಯುಜಿಡಿ ವ್ಯವಸ್ಥೆಯ ರೀತಿ ಪೈಪ್‌ಗಳನ್ನು ಅಳವಡಿಸಲು ಮೇಲಾಧಿಕಾರಿಗಳ ಬಳಿ ಚರ್ಚೆ ನಡೆಸಲಾಗುತ್ತದೆ. ಮುಂಬರುವ ದಿನಗಳಲ್ಲಿ ಸರ್ಕಾರದ ಯಾವುದೇ ಸೌಲಭ್ಯವನ್ನು ಪಡೆಯಬೇಕಾದರೂ ಶೌಚಾಲಯ ಖಡ್ಡಾಯವಾಗಿದ್ದು ಎಲ್ಲರೂ ಕಡ್ಡಾಯವಾಗಿ ನಿರ್ಮಾಣ ಮಾಡಿಕೊಳ್ಳಬೇಕು. ಕಾರ್ಯಕ್ರಮದಲ್ಲಿ ಬಯಲು ಮಲವಿಸರ್ಜನೆಯಿಂದ ಅನೇಕ ರೋಗಗಳು ಹರಡುತ್ತಿರುವ ಬಗ್ಗೆ ಗ್ರಾಮಸ್ಥರಿಗೆ ಮನವರಿಕೆ ಮಾಡಿಕೊಡುವುದರೊಂದಿಗೆ ಹೆಣ್ಣು ಮಕ್ಕಳ ಮೇಲೆ ಆಗುತ್ತಿರುವ ಲೈಂಗಿಕ ದೌರ್ಜನ್ಯಗಳನ್ನು ತಡೆಗಟ್ಟಲೂ ಸಾಧ್ಯವಾಗುತ್ತದೆ ಎಂದರು.
ತಾಲ್ಲೂಕು ಪಂಚಾಯತಿ ಉಪಾಧ್ಯಕ್ಷ ಡಿ.ಎಸ್.ಎನ್.ರಾಜು, ಕಾರ್ಯನಿರ್ವಾಹಕ ಅಧಿಕಾರಿ ಗಣಪತಿಸಾಕರೆ, ತಾಲ್ಲೂಕು ಪಂಚಾಯತಿ ಸದಸ್ಯರಾದ ನಾರಾಯಣಸ್ವಾಮಿ, ವೇಣುಗೋಪಾಲ್, ಎಸ್.ದೇವಗಾನಹಳ್ಳಿ ಗ್ರಾಮ ಪಂಚಾಯತಿ ಅಧ್ಯಕ್ಷ ಗಂಗಾಧರಪ್ಪ, ಅಶ್ವಥ್ಥರೆಡ್ಡಿ ಮತ್ತಿತರರು ಹಾಜರಿದ್ದರು.
ವಿಭಾಗಮಟ್ಟಕ್ಕೆ ಆಯ್ಕೆಯಾದ ಚೀಮಂಗಲ ಸರ್ಕಾರಿ ಪ್ರೌಢಶಾಲೆಯ ಎನ್.ಶಿವಕುಮಾರ್
ಶಿಡ್ಲಘಟ್ಟ ತಾಲ್ಲೂಕಿನ ಚೀಮಂಗಲ ಸರ್ಕಾರಿ ಪ್ರೌಢಶಾಲೆಯ ವಿದ್ಯಾರ್ಥಿ ಎನ್.ಶಿವಕುಮಾರ್ ‘ಸುಸ್ಥಿರ ಭವಿಷ್ಯಕ್ಕಾಗಿ ಕೃಷಿಯಲ್ಲಿ ನಾವೀನ್ಯತೆಗಳು, ಅವಕಾಶಗಳು ಮತ್ತು ಸವಾಲುಗಳು’ ವಿಷಯವಾಗಿ ನಡೆದ ಜಿಲ್ಲಾ ಮಟ್ಟದ ವಿಜ್ಞಾನ ವಿಚಾರ ಗೋಷ್ಠಿಯಲ್ಲಿ ಪ್ರಥಮ ಸ್ಥಾನ ಪಡೆದು ವಿಭಾಗಮಟ್ಟಕ್ಕೆ ಆಯ್ಕೆಯಾಗಿದ್ದಾರೆ. ಮುಖ್ಯಶಿಕ್ಷಕ ಶಿವಶಂಕರ್ ಪ್ರಶಸ್ತಿಪತ್ರವನ್ನು ನೀಡಿದರು.
ಅನುದಾನವನ್ನು ಬಿಡುಗಡೆ ಮಾಡದಿರುವುದನ್ನು ಖಂಡಿಸಿ ಅಂಗವಿಕಲರ ಪ್ರತಿಭಟನೆ
ತಾಲ್ಲೂಕು ಪಂಚಾಯತಿ ಅನುದಾನದಲ್ಲಿ ಶೇಕಡಾ 3 ರಷ್ಟು ಅನುದಾನವನ್ನು ಅಂಗವಿಕಲರಿಗೆ ಬಿಡುಗಡೆ ಮಾಡದಿರುವುದನ್ನು ಖಂಡಿಸಿ ಬುಧವಾರ ತಾಲ್ಲೂಕು ಅಂಗವಿಕಲರ ಒಕ್ಕೂಟದ ವತಿಯಿಂದ ತಾಲ್ಲೂಕು ಪಂಚಾಯತಿ ಮುಂದೆ ಪ್ರತಿಭಟನೆಯನ್ನು ನಡೆಸಲಾಯಿತು.
ತಾಲ್ಲೂಕಿನಾದ್ಯಂತ 3342 ಕ್ಕೂ ಮೇಲ್ಪಟ್ಟು ಅಂಗವಿಕಲರಿದ್ದು, ಅವರು ಕನಿಷ್ಠ ಪ್ರಮಾಣದ ಮೂಲಭೂತ ಹಕ್ಕುಗಳಾದ ಆರೋಗ್ಯ, ಶಿಕ್ಷಣ ಮತ್ತು ಆರ್ಥಿಕ ಸೌಲಭ್ಯಗಳಿಂದ ವಂಚಿತರಾಗಿದ್ದಾರೆ. ತಾಲ್ಲೂಕು ಪಂಚಾಯತಿ ಅನುದಾನದಲ್ಲಿ ಅಂಗವಿಕಲರಿಗೆ ಮೀಸಲಿಡಬೇಕಾದ ಹಣವನ್ನು ಬಿಡುಗಡೆ ಮಾಡದೇ ಅಂಗವಿಕಲರ ಹಕ್ಕನ್ನು ಉಲ್ಲಂಘಿಸಿದ್ದಾರೆ ಎಂದು ತಾಲ್ಲೂಕು ಅಂಗವಿಕಲರ ಒಕ್ಕೂಟದ ಬಿ.ಮುನಿರಾಜು ಆರೋಪಿಸಿದರು.
ಅಂಗವಿಕಲರಿಗೆ ಮೀಸಲಿಡಬೇಕಾದ ಶೇಕಡಾ 3 ರಷ್ಟು ಅನುದಾನ ಈ ಕೂಡಲೇ ಬಿಡುಗಡೆ ಮಾಡಬೇಕು. ಎಲ್ಲಾ ತಾಲ್ಲೂಕುಗಳಂತೆ ಅನುದಾನ ಚೆಕ್ ವಿತರಿಸಬೇಕು. ಗ್ರಾಮ ಪಂಚಾಯತಿಗಳಲ್ಲಿ ಅಂಗವಿಕಲರಿಗೆ ಆಶ್ರಯ ಯೋಜನೆಯಲ್ಲಿ ಸೌಲಭ್ಯ ಸಿಗಬೇಕು. 2012 ರಿಂದ 2014 ರವರೆಗೂ ಅಂಗವಿಕಲರಿಗೆ ಅನುದಾನ ನೀಡದೆ ಸುಳ್ಳು ಭರವಸೆ ನೀಡುತ್ತಿರುವ ಅಧಿಕಾರಿಗಳು ಹಾಗೂ ಜನಪ್ರತಿನಿಧಿಗಳ ಮೇಲೆ ಶಿಸ್ತುಕ್ರಮ ಜರುಗಿಸಬೇಕೆಂದು ಈ ಸಂದರ್ಭದಲ್ಲಿ ಒತ್ತಾಯಿಸಿದರು. ಅಧಿಕಾರಿಗಳು ಹಾಗೂ ಜನಪ್ರತಿನಿಧಿಗಳ ವಿರುದ್ಧ ಅಂಗವಿಕಲರು ಘೋಷಣೆಗಳನ್ನು ಕೂಗಿದರು. ಸಂತೋಷ್‌ಕುಮಾರ್, ಭಾಸ್ಕರ್, ರೂಪ, ಮೋತಿ, ವಿನೋದಮ್ಮ, ಚಿಕ್ಕಮಾರಪ್ಪ, ಮಂಜುನಾಥ ಮತ್ತಿತರರು ಪ್ರತಿಭಟನೆಯಲ್ಲಿ ಪಾಲ್ಗೊಂಡಿದ್ದರು.
ಸಂಕಷ್ಟದಲ್ಲಿ ರೈತ; ಭಾರವಾದ ಜಾನುವಾರು, ಎತ್ತಿನ ಬದಲು ಪವರ್ ಟಿಲ್ಲರ್
ಆಧುನಿಕತೆ ಮತ್ತು ತಾಂತ್ರಿಕತೆಯತ್ತ ಕೃಷಿ ವಾಲುತ್ತಿರುವುದು ಒಂದೆಡೆಯಾದರೆ, ಕೃಷಿ ಉಪಕರಣಗಳ ಚಾಲನಾ ಶಕ್ತಿಯಾದ ದನಸಂಪತ್ತುಗಳನ್ನು ಕಳೆದುಕೊಳ್ಳುತ್ತಿರುವುದು ಮತ್ತೊಂದೆಡೆಯಾಗಿ ಸೇರಿಕೊಂಡು ತಾಲ್ಲೂಕಿನಲ್ಲಿ ರಾಗಿ ಹೊಲದಲ್ಲಿ ಗುಂಟವೆ ಹಾಕುವುದಕ್ಕೆ ಪವರ್ ಟಿಲ್ಲರ್ ಬಳಸಲು ಪ್ರಾರಂಭಿಸಿದ್ದಾರೆ.
ರಾಗಿ ಹೊಲದಲ್ಲಿ ಕೈಬಿತ್ತನೆ ಮಾಡುವುದರಿಂದ ಕೆಲವೆಡೆ ಹೆಚ್ಚು ಪೈರು ಬೆಳೆದರೆ ಇನ್ನು ಕೆಲವು ಕಡೆ ಕಡಿಮೆ ಪೈರು ಮೊಳೆತಿರುತ್ತದೆ. ಇವನ್ನು ಸರಿದೂಗಿಸಲು ಹಾಗೂ ಕಳೆಯನ್ನು ಹೋಗಲಾಡಿಸಲು ಗುಂಟವೆ ಹಾಕುತ್ತಾರೆ. ಉದ್ದುದ್ದ ಗುಂಟವೆ ಮತ್ತು ಅಡ್ಡ ಗುಂಟವೆ ಎಂದು ಎರಡು ರೀತಿಯಾಗಿ ಹಾಕುವುದೂ ಉಂಟು. ಇದರಿಂದಾಗಿ ಪೈರು ಚೆನ್ನಾಗಿ ಬೇರು ಬಿಟ್ಟುಕೊಳ್ಳುವುದರಿಂದ ‘ಗುಂಟವೆ ಹಾಕಿದ ಹೊಲ ಚೆನ್ನ…’ ಎಂಬ ಗಾದೆ ಮಾತಿದೆ. ಈ ಕೆಲಸಕ್ಕೆ ಅನುಭವವಿರಲೇ ಬೇಕು.
ಮಳೆ ಬೆಳೆ ಸರಿಯಾಗಿಲ್ಲದೆ ಈಗ ಜಾನುವಾರುಗಳ ಪೋಷಣೆ ಗ್ರಾಮಗಳಲ್ಲಿ ಕಷ್ಟವಾಗತೊಡಗಿದೆ. ವ್ಯವಸಾಯದ ಬದುಕಿನ ಅವಿಭಾಜ್ಯ ಅಮಗವಾಗಿದ್ದ ಎತ್ತುಗಳ ಪೋಷಣೆ ಮೊದಲಿನಷ್ಟು ಸುಲಭವಾಗಿಲ್ಲ. ಬರದ ಕಾರಣ ಕೃಷಿ ಜಾನುವಾರುಗಳನ್ನು ಕಳೆದುಕೊಂಡು ಯಂತ್ರಗಳ ಮೇಲಿನ ಅವಲಂಬನೆ ಅನಿವಾರ್ಯವಾಗಿದೆ.
‘ಎತ್ತುಗಳ ಪಾಲನೆ ಪೋಷಣೆ ಈಗ ರೈತರಿಗೆ ಹೊರೆಯಾಗತೊಡಗಿದೆ. ಅಲ್ಲದೆ ಕೃಷಿ ಯಂತ್ರೋಪಕರಣಗಳಿಗೆ ಸರ್ಕಾರ ಸಹಾಯಧನ ನೀಡುತ್ತಿರುವುದರಿಂದಾಗಿ ಗುಂಟವೆ ಹಾಕಲು ಪವರ್ ಟಿಲ್ಲರ್ ಬಳಸಲು ತಾಲ್ಲುಕಿನ ಕೃಷಿಕರು ಪ್ರಾರಂಭಿಸಿದ್ದಾರೆ. ಪವರ್ ಟಿಲ್ಲರ್ ಬಳಸುವುದರಿಂದ ಮೂರರಿಂದ ನಾಲ್ಕು ಗುಂಟವೆ ಕೋಲುಗಳನ್ನು ಕಟ್ಟಬಹುದು ಮತ್ತು ವೇಗವಾಗಿ ಅಂದರೆ ದಿನಕ್ಕೆ ಮೂರು ಎಕರೆಯಷ್ಟು ಗುಂಟವೆ ಹಾಕಬಹುದಾಗಿದೆ. ಕಾಲಕ್ಕೆ ತಕ್ಕಂತೆ ಹೊಂದಾಣಿಕೆ ಮಾಡಿಕೊಳ್ಳಬೇಕಾದ ಅನಿವಾರ್ಯತೆಯು ಕೃಷಿಕನಿಗೂ ಬಂದೊದಗಿದೆ’ ಎನ್ನುತ್ತಾರೆ ತಲಕಾಯಲಬೆಟ್ಟ ಸಾವಯವ ಕೃಷಿ ಪರಿವಾರದ ಸಂಚಾಲಕ ಬೂದಾಳ ರಾಮಾಂಜಿನಪ್ಪ.
–ಡಿ.ಜಿ.ಮಲ್ಲಿಕಾರ್ಜುನ.
ಅಧಿಕಾರಿಗಳು ವಸ್ತುಸ್ಥಿತಿಯ ಅಧ್ಯಯನ ಮಾಡಿ ಅಂಕಿ ಅಂಶಗಳನ್ನು ನೀಡಬೇಕು – ಜಿಲ್ಲಾ ಪಂಚಾಯತಿ ಅಧ್ಯಕ್ಷ ಪಿ.ಕೇಶವರೆಡ್ಡಿ
ಅಧಿಕಾರಿಗಳು ನೀಡುವ ಅಂಕಿ ಅಂಶಗಳ ಆಧಾರದ ಮೇಲೆ ಜಿಲ್ಲೆಯನ್ನು ಬರಗಾಲ ಪೀಡಿತ ಪ್ರದೇಶವೆಂದು ಸರ್ಕಾರ ಘೋಷಣೆ ಮಾಡಲು ಸಾಧ್ಯವಾಗುತ್ತದೆ. ಆದ್ದರಿಂದ ಅಧಿಕಾರಿಗಳು ವಸ್ತುಸ್ಥಿತಿಯ ಅಧ್ಯಯನ ಮಾಡಿ ಅಂಕಿ ಅಂಶಗಳನ್ನು ನೀಡಬೇಕು ಎಂದು ಜಿಲ್ಲಾ ಪಂಚಾಯತಿ ಅಧ್ಯಕ್ಷ ಪಿ.ಕೇಶವರೆಡ್ಡಿ ಹೇಳಿದರು.
ಪಟ್ಟಣದ ತಾಲ್ಲೂಕು ಪಂಚಾಯತಿ ಸಭಾಂಗಣದಲ್ಲಿ ಮಂಗಳವಾರ ಏರ್ಪಡಿಸಲಾಗಿದ್ದ ಪ್ರಗತಿ ಪರಿಶೀಲನಾ ಸಭೆಯಲ್ಲಿ ಅವರು ಮಾತನಾಡಿದರು. ಜಿಲ್ಲೆಯಾಧ್ಯಂತ ನಿರೀಕ್ಷಿತ ಮಟ್ಟದಲ್ಲಿ ಮಳೆಯಾಗದೆ ಇರುವುದರಿಂದ ಕೆಲವು ಕಡೆ ಬಿತ್ತನೆ ಕಾರ್ಯ ಆಗಿದೆ ಇನ್ನು ಕೆಲವೆಡೆ ಬಿತ್ತನೆ ಕಾರ್ಯವಾಗಿಲ್ಲ. ಹಾಗಾಗಿ ರೈತರು ಸಂಕಷ್ಟಕ್ಕೆ ತುತ್ತಾಗುತ್ತಿದ್ದಾರೆ. ಕೃಷಿ ಇಲಾಖೆಯ ಅಧಿಕಾರಿಗಳು ಹದಿನೈದು ದಿನಗಳಿಗೊಮ್ಮೆ ಕ್ಷೇತ್ರದಲ್ಲಿ ಸಂಚಾರ ನಡೆಸಿ, ವಸ್ತುಸ್ಥಿತಿಯ ಬಗ್ಗೆ ಅಂಕಿ ಅಂಶಗಳನ್ನು ನೀಡಬೇಕು, ಇಲಾಖೆಯ ಮುಖಾಂತರ ರೈತರಿಗೆ ಸಿಗುವಂತಹ ಸೌಲಭ್ಯಗಳನ್ನು ಪ್ರಾಮಾಣಿಕವಾಗಿ ತಲುಪಿಸಬೇಕು, ರೈತರಿಗೆ ವಿತರಣೆಯಾಗುತ್ತಿರುವ ರಸಗೊಬ್ಬರಗಳು ಹಾಗೂ ವಿವಿಧ ಸೌಲಭ್ಯಗಳು ದುರುಪಯೋಗವಾಗುತ್ತಿರುವುದರ ಬಗ್ಗೆ ದೂರುಗಳು ಬರುತ್ತಿದ್ದು ಅವಶ್ಯವಿರುವ ರೈತರಿಗೆ ಮಾತ್ರ ಸೌಲಭ್ಯಗಳನ್ನು ಒದಗಿಸುವಂತೆ ಹೇಳಿದರು.
ತೋಟಗಾರಿಕೆ ಇಲಾಖೆಯಲ್ಲಿ ಈಗಾಗಲೇ ಬಹಳಷ್ಟು ಮಂದಿ ರೈತರು ಪೌಲ್ಟ್ರಿಹೌಸ್‌ಗಳನ್ನು ನಿರ್ಮಾಣ ಮಾಡಿಕೊಂಡಿದ್ದರೂ ಈವರೆಗೂ ಸಹಾಯಧನ ಬಿಡುಗಡೆಯಾಗಿಲ್ಲ. ಅನುದಾನ ಬಿಡುಗಡೆ ಮಾಡಲು ಅಗತ್ಯವಾಗಿರುವ ಕ್ರಮಗಳನ್ನು ಶೀಘ್ರವಾಗಿ ಕೈಗೊಳ್ಳಲಾಗುತ್ತದೆ ಎಂದರು.
ರೇಷ್ಮೆ ಇಲಾಖೆಯ ಮುಖಾಂತರ ಗೂಡು ಬೆಳೆಯುವಂತಹ ರೈತರಿಗೆ ನೀಡುತ್ತಿರುವ ಪ್ರೋತ್ಸಾಹ ಧನ ಮಿಶ್ರತಳಿಗೆ ೩೦ ರೂಪಾಯಿಗಳು, ದ್ವಿತಳಿ ಗೂಡಿಗೆ ೫೦ ರೂಪಾಯಿಗಳಂತೆ ನಿಗದಿ ಮಾಡಿರುವುದರಿಂದ ರೈತರು ನೇರವಾಗಿ ಬೆಳೆದ ಗೂಡನ್ನು ಮಾರುಕಟ್ಟೆಗೆ ತರುತ್ತಿದ್ದಾರೆ, ಇದರಿಂದ ಬಿಡುಗಡೆಯಾಗುತ್ತಿರುವ ಅನುದಾನಗಳ ಮೊತ್ತ ಕಡಿಮೆಯಾಗಿದ್ದು ಸಕಾಲದಲ್ಲಿ ರೈತರಿಗೆ ಹಣವನ್ನು ಹಂಚಿಕೆ ಮಾಡಲು ಕಷ್ಟಕರವಾಗಿದೆ ಎಂದು ಸಹಾಯಕ ನಿರ್ದೇಶಕ ಚಂದ್ರಪ್ಪ ವಿವರಿಸಿದರು.
ಸಮಾಜ ಕಲ್ಯಾಣ ಇಲಾಖೆಯ ಅಧಿಕಾರಿಗಳು ಹಾಗೂ ಬಿ.ಸಿ.ಎಂ. ಇಲಾಖೆಯ ಅಧಿಕಾರಿಗಳು ವಿಧ್ಯಾರ್ಥಿನಿಲಯಗಳಿಗೆ ಬೇಟಿ ನೀಡಿ ಪರಿಶೀಲನೆ ನಡೆಸಬೇಕು, ಹೆಣ್ಣು ಮಕ್ಕಳ ವಿಧ್ಯಾರ್ಥಿನಿಲಯಗಳಲ್ಲಿ ಮಹಿಳಾ ವಾರ್ಡನ್‌ಗಳನ್ನು ನೇಮಕ ಮಾಡಬೇಕು, ಭದ್ರತೆಯನ್ನು ಒದಗಿಸಬೇಕು, ಗುಣಮಟ್ಟದ ಆಹಾರ ಪದಾರ್ಥಗಳನ್ನು ವಿತರಣೆ ಮಾಡದ ಏಜೆಂಟರುಗಳ ಮೇಲೆ ಕ್ರಮಕ್ಕೆ ಮುಂದಾಗಬೇಕು, ಎಲ್ಲಾ ವಿಧ್ಯಾರ್ಥಿನಿಲಯಗಳಲ್ಲಿ ಖಡ್ಡಾಯವಾಗಿ ಬಿಸಿನೀರು ದೊರೆಯುವಂತೆ ನೋಡಿಕೊಳ್ಳಬೇಕು, ಎಲ್ಲಾ ನಿಲಯಗಳಲ್ಲಿ ಯು.ಪಿ.ಎಸ್.ಗಳನ್ನು ಅಳವಡಿಸಬೇಕು ಎಂದು ಇಲಾಖೆಯ ಅಧಿಕಾರಿ ಪುರುಷೋತ್ತಮ್ ಹಾಗೂ ವಾರ್ಡನ್ ಲಕ್ಷ್ಮೀದೇವಮ್ಮ ಅವರಿಗೆ ಸೂಚಿಸಿದರು.
ಕುಡಿಯುವ ನೀರಿಗಾಗಿ ಕೊರೆಯಿಸಿರುವ ಕೊಳವೆಬಾವಿಗಳಿಗೆ ಜಿಲ್ಲಾ ಪಂಚಾಯತ್ ಇಂಜಿನಿಯರಿಂಗ್ ವಿಭಾಗದ ಅಧಿಕಾರಿಗಳ ಸಹಕಾರವನ್ನು ಪಡೆದುಕೊಂಡು ತುರ್ತಾಗಿ ವಿದ್ಯು ತ್ ಸಂಪರ್ಕವನ್ನು ಕಲ್ಪಿಸುವಂತೆ ಬೆಸ್ಕಾಂ ಇಲಾಖೆಯ ಎಇಇ ಬೈರೇಗೌಡ ಅವರಿಗೆ ಸೂಚಿಸಿದರು.
ಶಿಕ್ಷಣ ಇಲಾಖೆ, ಆರೋಗ್ಯ ಇಲಾಖೆ, ಅರಣ್ಯ ಇಲಾಖೆ, ಕೈಗಾರಿಕಾ ಇಲಾಖೆ, ಪಶುವೈದ್ಯ ಇಲಾಖೆ, ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ, ಜಲಾನಯನ ಇಲಾಖೆ ಸೇರಿದಂತೆ ಉಳಿದ ಇಲಾಖಾಧಿಕಾರಿಗಳಿಂದ ಮಾಹಿತಿ ಪಡೆದರು.
ಜಿಲ್ಲಾ ಪಂಚಾಯಿತಿ ಉಪಾಧ್ಯಕ್ಷೆ ವೀಣಾಗಂಗುಲಪ್ಪ, ತಾಲ್ಲೂಕು ಪಂಚಾಯತಿ್ತಿ ಅಧ್ಯಕ್ಷೆ ಆಂಜಿನಮ್ಮ, ಜಿ.ಪಂ.ಸದಸ್ಯ ಎಸ್.ಎಂ.ನಾರಾಯಣಸ್ವಾಮಿ, ಶಿವಲೀಲಾರಾಜಣ್ಣ, ತಾಲ್ಲೂಕು ಪಂಚಾಯತಿ ಪ್ರಭಾರಿ ಕಾರ್ಯನಿರ್ವಾಹಕ ಅಧಿಕಾರಿ ಗಣಪತಿ ಸಾಕರೆ ಮತ್ತಿತರರು ಹಾಜರಿದ್ದರು.
ವಿದ್ಯಾರ್ಥಿಗಳು ಆಚರಿಸಿದ ಶಿಕ್ಷಕರ ದಿನಾಚರಣೆ
ತಾಲ್ಲೂಕಿನ ಗುಡಿಹಳ್ಳಿಯ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಸೋಮವಾರ ವಿಶಿಷ್ಠವಾಗಿ ವಿದ್ಯಾರ್ಥಿಗಳು ಶಿಕ್ಷಕರ ದಿನಾಚರಣೆಯನ್ನು ಆಚರಿಸಿದರು.
ವಿದ್ಯಾರ್ಥಿಗಳೇ ರೂಪಿಸಿದ್ದ ಕಾರ್ಯಕ್ರಮದಲ್ಲಿ ಡಾ.ಎಸ್.ರಾಧಾಕೃಷ್ಣನ್ ಅವರ ಭಾವಚಿತ್ರಕ್ಕೆ ಪೂಜೆ ಸಲ್ಲಿಸಿದರು. ಶಿಕ್ಷಕರಿಗೆ ವಿವಿಧ ಕ್ರೀಡೆಗಳನ್ನು ನಡೆಸಿ ಬಹುಮಾನಗಳನ್ನು ವಿತರಿಸಿದ್ದು ವಿಶೇಷವಾಗಿತ್ತು.
ಮ್ಯೂಸಿಕಲ್ ಚೇರ್‌ನಲ್ಲಿ ಶಿಕ್ಷಕರಾದ ಬಾಲಚಂದ್ರ(ಪ್ರಥಮ), ಎಂ.ಎನ್.ಲಕ್ಷ್ಮೀ(ದ್ವಿತೀಯ), ಎಂ.ಪರಮೇಶ್ವರಪ್ಪ(ತೃತೀಯ)ರಾದರೆ, ಬಕೆಟ್‌ಗೆ ಬಾಲ್ ಹಾಕುವುದರಲ್ಲಿ ಎಂ.ಬಾಲಚಂದ್ರ(ಪ್ರಥಮ), ಪರಮೇಶ್ವರಪ್ಪ(ದ್ವಿತೀಯ), ಶ್ರೀರಾಮಪ್ಪ(ತೃತೀಯ)ರಾದರು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿದ್ದ ವಿದ್ಯಾರ್ಥಿನಿ ಸ್ನೇಹಲತಾ ಮತನಾಡಿ ವರ್ಷಪೂರ್ತಿ ನಮ್ಮನ್ನು ರೂಪಿಸುವ, ತಿದ್ದುವ, ಕಲಿಸುವ ಶಿಕ್ಷಕರ ದಿನಾಚರಣೆಯನ್ನು ವಿದ್ಯಾರ್ಥಿಗಳಾದ ನಾವು ಅವರು ಆಡಿ ನಲಿಯುವಂತೆ ಮಾಡುವ ಮೂಲಕ ಆಚರಿಸಬೇಕೆಂದು ಕಾರ್ಯಕ್ರಮವನ್ನು ರೂಪಿಸಿದ್ದೇವೆ ಎಂದು ಹೇಳಿದರು.
ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಗಳಾಗಿ ವಿದ್ಯಾರ್ಥಿಗಳಾದ ನಯನಾ, ರಜನಿ, ಮುತ್ತುರಾಜ್ ಭಾಗವಹಿಸಿದ್ದರು.
ಶೈಕ್ಷಣಿಕ ಬಂದ್‌ಗೆ ವಿದ್ಯಾರ್ಥಿಗಳ ಬೆಂಬಲ
ವಿದ್ಯಾರ್ಥಿಗಳ ಶೈಕ್ಷಣಿಕ ಬೇಡಿಕೆಗಳ ಈಡೇರಿಕೆಗಾಗಿ ರಾಜ್ಯ ಮತ್ತು ಕೇಂದ್ರ ಸರ್ಕಾರವನ್ನು ಒತ್ತಾಯಿಸಿ ಎಸ್.ಎಫ್.ಐ ಸಂಘಟನೆಯು ಸೆಪ್ಟೆಂಬರ್ 10 ರಂದು ರಾಜ್ಯಾದ್ಯಂತ ಶೈಕ್ಷಣಿಕ ಬಂದ್‌ಗೆ ಕರೆ ನೀಡಿದ್ದು, ಈ ಬಗ್ಗೆ ಸೋಮವಾರ ಎಸ್.ಎಫ್.ಐ ವತಿಯಿಂದ ಪಟ್ಟಣದ ಶಾಲಾ ಕಾಲೇಜುಗಳಲ್ಲಿ ಪ್ರಚಾರ ನಡೆಸಿ ಸಹಕಾರ ನೀಡುವಂತೆ ಭಿತ್ತಿಪತ್ರಗಳನ್ನು ಹಂಚಲಾಯಿತು.
ವಿವಿಧ ಬೇಡಿಕೆಗಳನ್ನು ಸರ್ಕಾರದ ಮುಂದಿಟ್ಟು ಪ್ರತಿಭಟನೆ ಕೈಗೊಳ್ಳುತ್ತಿದ್ದೇವೆ. ವಿದ್ಯಾರ್ಥಿನಿಯರ ಮೇಲಿನ ಅತ್ಯಾಚಾರ, ಲೈಂಗಿಕ ಕಿರುಕುಳ ಹಾಗೂ ದೌರ್ಜನ್ಯಗಳನ್ನು ತಡೆಗಟ್ಟಲು ಸುಪ್ರೀಂ ಕೋರ್ಟ್ ನಿರ್ದೇಶನದಂತೆ ಶಾಲಾ ಕಾಲೇಜುಗಳಲ್ಲಿ ಲೈಂಗಿಕ ಕಿರುಕುಳ ವಿರೋಧಿ ಸಮಿತಿಯನ್ನು ರಚಿಸಬೇಕು. ವಿದ್ಯಾರ್ಥಿನಿಯರಿಗೆ ಸೂಕ್ತ ರಕ್ಷಣೆ ಒದಗಿಸಬೇಕು. ಶಿಕ್ಷಣಕ್ಕಾಗಿ ರಾಜ್ಯ ಬಜೆಟ್‌ನಲ್ಲಿ ಶೇಕಡಾ 30 ಹಾಗೂ ಕೇಂದ್ರ ಬಜೆಟ್‌ನಲ್ಲಿ ಶೇಕಡಾ 6 ರಷ್ಟು ಹಣವನ್ನು ಮೀಸಲಿಡಬೇಕು. ಪದವಿ ಪಠ್ಯ ಪುಸ್ತಕ ವಿಳಂಬವಾಗಬಾರದು. ಪರಿಶಿಷ್ಠ ಜಾತಿ ಹಾಗೂ ಪಂಗಡ ಮತ್ತು ಒ.ಬಿ.ಸಿ ಹಾಸ್ಟೆಲ್ ವಿದ್ಯಾರ್ಥಿಗಳ ಮಾಸಿಕ ಆಹಾರ ಭತ್ಯೆಯನ್ನು ಹೆಚ್ಚಿಸಬೇಕು. ಅಗತ್ಯ ಮೂಲಭೂತ ಸೌಕರ್ಯಗಳನ್ನು ನೀಡಿ ಉನ್ನತೀಕರಿಸಬೇಕು. ರಾಜ್ಯದಲ್ಲಿ ಖಾಸಗಿ ವಿಶ್ವವಿದ್ಯಾಲಯಗಳ ಅನುಮತಿಯನ್ನು ರದ್ದುಪಡಿಸಿ ಸರ್ಕಾರಿ ವಿಶ್ವವಿದ್ಯಾಲಯಗಳನ್ನು ಬಲಪಡಿಸಬೇಕು. ಖಾಸಗಿ ಶಿಕ್ಷಣ ಸಂಸ್ಥೆಗಳಲ್ಲಿ ಅಕ್ರಮ ಡೊನೇಷನ್ ವಸೂಲಿ ನಿಲ್ಲಬೇಕು. ಆರ್.ಟಿ.ಇ ಕಾಯ್ದೆಯನ್ನು ಸಮರ್ಪಕವಾಗಿ ಜಾರಿಗೊಳಿಸಬೇಕು ಮುಂತಾದ ಬೇಡಿಕೆಗಳನ್ನು ಇಡುತ್ತಿದ್ದೇವೆ. ಎಲ್ಲಾ ವಿದ್ಯಾರ್ಥಿಗಳೂ ಶೈಕ್ಷಣಿಕ ಸುವ್ಯವಸ್ಥೆಗಾಗಿ ಬಂದ್‌ಗೆ ಸಹಕರಿಸಬೇಕೆಂದು ಕೋರಿದರು.
ಡಿ.ವೈ.ಎಫ್.ಐ ರಾಜ್ಯ ಸಮಿತಿ ಸದಸ್ಯ ಕುಂದಲಗುರ್ಕಿ ಮುನೀಂದ್ರ, ಎಸ್.ಎಫ್.ಐ ಸಂಘಟನೆಯ ಅಂಬರೀಷ್, ನಾಗೇಶ್, ಹರೀಶ್, ಮಂಜುನಾಥ್, ಮುಜಾಹಿದ್ ಮತ್ತಿತರರು ಈ ಸಂದರ್ಭದಲ್ಲಿ ಹಾಜರಿದ್ದರು.
ಮಕ್ಕಳ ಜೊತೆ ಪ್ರಧಾನಿ ಸಂವಾದ
ಶಿಕ್ಷಕರ ದಿನಾಚರಣೆ ಅಂಗವಾಗಿ ಶುಕ್ರವಾರ ಮಕ್ಕಳ ಜೊತೆ ಪ್ರಧಾನಿ ನರೇಂದ್ರ ಮೋದಿ ನಡೆಸಿದ ಸಂವಾದವನ್ನು ತಾಲ್ಲೂಕಿನ ಹಲವಾರು ಶಾಲೆಗಳಲ್ಲಿ ದೂರದರ್ಶನದಲ್ಲಿ ಮಕ್ಕಳು ವೀಕ್ಷಿಸಿದರು.
ಇತ್ತೀಚೆಗೆ ಜಪಾನ್ ದೇಶಕ್ಕೆ ಭೇಟಿ ನೀಡಿದ್ದ ಪ್ರಧಾನಿಯವರು ಅಲ್ಲಿ ತಮ್ಮ ಶಾಲೆಯನ್ನು ಶುಚಿಗೊಳಿಸುವ ವಿದ್ಯಾರ್ಥಿಗಳು ಮತ್ತು ಶಿಕ್ಷಕರ ಬಗ್ಗೆ ಹೇಳಿದ್ದು ಮತ್ತು ಪರಿಸರ ಕಾಳಜಿಯ ಬಗ್ಗೆ ಇಷ್ಟವಾಯಿತು ಎಂದು ಕ್ರೆಸೆಂಟ್ ಶಾಲೆಯ ಸುನೀತಾ ರಾವಲ್ ಹೇಳಿದರೆ, ವಿದ್ಯುತ್ ಮತ್ತು ನೀರಿನ ಉಳಿತಾಯದ ಬಗ್ಗೆ ಹೇಳಿದ್ದು ಮತ್ತು ನಿರುದ್ಯೋಗ ನಿವಾರಣೆಗಾಗಿ ಕೌಶಲ್ಯ ಅಭಿವೃದ್ಧಿಗೆ ನೀಡುತ್ತಿರುವ ಪ್ರಾಮುಖ್ಯತೆಯನ್ನು ಕ್ರೆಸೆಂಟ್ ಶಾಲೆಯ ವಿದ್ಯಾರ್ಥಿ ಮೊಹಮ್ಮದ್ ಜಾಯಿದ್ ಮೆಚ್ಚಿದರು.
‘ಇದೊಂದು ವಿನೂತನ ಪ್ರಯೋಗ. ಮಕ್ಕಳಿಗೆ ಪ್ರಧಾನಿಯೊಂದಿಗೆ ಮಾತನಾಡಬಹುದು ಎಂಬ ಸಂಗತಿಯೇ ಅವರಲ್ಲಿ ಉತ್ಸಾಹ ಹಾಗೂ ಪ್ರೇರಣೆ ನೀಡುತ್ತದೆ. ಹೆಣ್ಣು ಮಕ್ಕಳ ಶಿಕ್ಷಣಕ್ಕೆ ಆದ್ಯತೆ, ಉತ್ತಮ ಶಿಕ್ಷಕರಾಗಲು ಅವರು ಕರೆ ನೀಡಿದ್ದು ಮಹತ್ವದ್ದಾಗಿತ್ತು. ಆಸಕ್ತಿಕರವಾಗಿದ್ದ ಈ ಕಾರ್ಯಕ್ರಮ ಮಕ್ಕಳನ್ನು ಆಲೋಚನೆಗೆ ಹಚ್ಚಿತು’ ಎಂದು ಕ್ರೆಸೆಂಟ್ ಶಾಲೆಯ ಮುಖ್ಯಶಿಕ್ಷಕ ತಮೀಮ್‌ಪಾಷ ತಿಳಿಸಿದರು.

