25.1 C
Sidlaghatta
Friday, December 26, 2025
Home Blog Page 1029

ಸಾರ್ವಜನಿಕ ಶಿಕ್ಷಣ ಇಲಾಖೆ ಮತ್ತು ಪೈಕಾ ವತಿಯಿಂದ ನಡೆದ ತಾಲ್ಲೂಕು ಮಟ್ಟದ ಕಬಡ್ಡಿ, ಖೋ-ಖೋ ವಿಭಾಗದ ವಿಜೇತರು

0

ಶಿಡ್ಲಘಟ್ಟ ತಾಲ್ಲೂಕಿನ ತುಮ್ಮನಹಳ್ಳಿಯ ಸರ್ಕಾರಿ ಪ್ರೌಢಶಾಲೆಯ ವಿದ್ಯಾರ್ಥಿಗಳು ಸಾರ್ವಜನಿಕ ಶಿಕ್ಷಣ ಇಲಾಖೆ ಮತ್ತು ಪೈಕಾ ವತಿಯಿಂದ ನಡೆದ ತಾಲ್ಲೂಕು ಮಟ್ಟದ ಕ್ರೀಡಾಕೂಟದಲ್ಲಿ ಕಬಡ್ಡಿ ಬಾಲಕಿಯರ ವಿಭಾಗ ಪ್ರಥಮ, ಖೋ-ಖೋ ಬಾಲಕರ ವಿಭಾಗ ಪ್ರಥಮ, ಖೋ-ಖೋ ಬಾಲಕಿಯರ ವಿಭಾಗ ಪ್ರಥಮ ಸ್ಥಾನ ಪಡೆದು ಜಿಲ್ಲಾ ಮಟ್ಟಕ್ಕೆ ಹಾಗೂ ಪೈಕಾ ಕ್ರೀಡಾಕೂಟದಲ್ಲಿ ಮೇಲಾಟದಲ್ಲಿ ವಿಜೇತರಾಗಿ ಜಿಲ್ಲಾ ಮಟ್ಟಕ್ಕೆ ಆಯ್ಕೆಯಾಗಿದ್ದಾರೆ.

ಗೌರಿ-ಗಣೇಶ ಚತುರ್ಥಿಗೆ ಪರಿಸರ ಸ್ನೇಹಿ ಗಣಪ

0

ಗೌರಿ-ಗಣೇಶ ಚತುರ್ಥಿ ಸಮೀಪಿಸುತ್ತಿದೆ. ಪ್ರತಿಬಾರಿಯಂತೆ ಪರಿಸರ ಸ್ನೇಹಿ ಬಣ್ಣರಹಿತ ಗಣೇಶ ವಿಗ್ರಹ ಪ್ರತಿಷ್ಠಾನೆ ಮಾತು ಅಲ್ಲಲ್ಲಿ ಕೇಳಿ ಬರುತ್ತದೆ. ಪರಿಸರ ಮಾಲಿನ್ಯ ನಿಯಂತ್ರಣ ಮಂಡಳಿ ಕರಪತ್ರ ವಿತರಿಸಿ ಕೈತೊಳೆದುಕೊಳ್ಳುತ್ತಿದೆ. ಇಷ್ಟಾಗಿಯೂ ಬಣ್ಣಕ್ಕೆ ಮಾರು ಹೋಗುವ ಬೆನ್ನಲ್ಲೇ ಪರಿಸರ ಕಾಳಜಿಯ ಮಾತು ಕೇಳಿಬರುತ್ತದೆ. `ಪರಿಸರಕ್ಕೆ ಬಣ್ಣ ಮಾರಕ’ ಎನ್ನುವ ವಿಚಾರ ಮಾತ್ರ ಗಣೇಶ ಚತುರ್ಥಿಯ ಆಸು-ಪಾಸಿನಲ್ಲೇ ಸುಳಿದು ಮರೆಯಾಗುತ್ತದೆ.
ಆದರೆ ಇದಕ್ಕೆ ಅಪವಾದದಂತೆ ತಾಲ್ಲೂಕಿನ ಕೊತ್ತನೂರು ಗ್ರಾಮದಲ್ಲಿ ಪರಿಸರ ಸ್ನೇಹಿ ಗಣಪ ಸಿದ್ಧಗೊಳ್ಳುತ್ತಿದ್ದಾನೆ. ವಿಶೇಷವೆಂದರೆ ತನ್ನ ಸ್ನೇಹಿತರ ಸಹಾಯ ಪಡೆದು ಕಿರಣ್‌ ಎಂಬ ಯುವಕ ಗ್ರಾಮದ ಗಣಪನನ್ನು ತಾನೇ ಸಿದ್ಧಪಡಿಸುತ್ತಿದ್ದಾನೆ. ತನ್ನ ಮಾವ ಶಿಲ್ಪಿ ನಾಗರಾಜ್‌ ಹಾಗೂ ಕೊಲ್ಕತ್ತದಲ್ಲಿ ತರಬೇತಿಯನ್ನು ಪಡೆದಿರುವ ಈತ ತನ್ನೂರಿನಲ್ಲಿ ತಾನೇ ತಯಾರಿಸಿರುವ ಗಣಪನ ಮೂರ್ತಿಯನ್ನಿಟ್ಟು ಹಬ್ಬ ಆಚರಿಸುವ ಆಸೆಯನ್ನಿಟ್ಟುಕೊಂಡು ತಯಾರಿಕೆಯಲ್ಲಿ ತೊಡಗಿದ್ದಾನೆ.
`ಸಂಪೂರ್ಣ ಕೈಯಿಂದ ತಯಾರಿಸಿರುವುದು ಹಾಗೂ ಕೇವಲ ಮಣ್ಣನ್ನು ಬಳಸಿರುವುದು ನಮ್ಮ ಗಣೇಶನ ವೈಶಿಷ್ಟ್ಯ. ನೆಲ್ಲುಲ್ಲಿ, ನೆಲ್ಲು ಹೊಟ್ಟು, ದಾರ, ಕಡ್ಡಿ, ಹುತ್ತದಮಣ್ಣನ್ನು ಬಳಸಿದ್ದೇನೆ. ಯಂತ್ರಗಳ ಮೂಲಕ ಮಣ್ಣನ್ನು ಬೇಯಿಸಿಲ್ಲ, ಬದಲಾಗಿ ಸ್ಪಷ್ಟರೂಪ ಕೊಟ್ಟು ಬಿಸಿಲಿನಲ್ಲಿಟ್ಟು ಒಣಗಿಸಿದ್ದೇನೆ. ಗಣಪನಿಗೆ ನಾವು ರಾಸಾಯನಿಕ ಬಣ್ಣಗಳನ್ನು ಬಳಸುವುದಿಲ್ಲ. ಮಣ್ಣಿನಿಂದ ತಯಾರಾದ ಗಣಪ ಬೇಗ ನೀರಿನಲ್ಲಿ ಕರಗುತ್ತಾನೆ. ಜನರು ತಾವು ಕೊಳ್ಳುವ ಉದ್ದ ಸೊಂಡಿಲ ಮುದ್ದು ಗಣಪ ಪರಿಸರಸ್ನೇಹಿಯಾಗಿರಲಿ, ಹಬ್ಬವನ್ನು ಅದ್ದೂರಿಯಿಂದ ಆಚರಿಸುವ ಮುನ್ನ ಅದರಿಂದ ನಿಸರ್ಗದ ಮೇಲಾಗುವ ಹಾನಿಗಳತ್ತ ಸ್ವಲ್ಪ ಚಿಂತಿಸುವಂತಾಗಲಿ. ಎಲ್ಲರೂ ಒಂದಾದರೆ ಅನೇಕ ಕೆರೆಗಳ ನೀರು ಕಲುಷಿತವಾಗುವುದನ್ನು ತಡೆಯಬಹುದು’ ಎನ್ನುತ್ತಾರೆ ಕಿರಣ್‌.
`ಪ್ರತಿಯೊಂದು ಒಂದಡಿ ಕೃತಕ ಬಣ್ಣಗಳ ಗಣಪನ ಮೇಲ್ಮೈ ಮೇಲೆ ೧೦ರಿಂದ ೨೦ ಗ್ರಾಂ ಸೀಸ ಇರುತ್ತದೆ. ಕೆರೆಯಲ್ಲಿ ಇಂಥ ಹತ್ತಿಪ್ಪತ್ತು ಸಾವಿರ ಗಣಪಗಳನ್ನು ಮುಳುಗಿಸಿದರೆ ನೀರಿಗೆ ಸೇರುವ ಸೀಸ ಪ್ರಮಾಣವನ್ನು ಯೋಚಿಸಬೇಕು. ನಿಧಾನವಿಷ ಸೀಸವು ಬಣ್ಣಗಳ ಮೂಲಕ ಜನರ ದೇಹವನ್ನು ಪ್ರವೇಶಿಸುತ್ತದೆ. ಇಂಥ ಬಣ್ಣಗಳ ಗಣಪನನ್ನು ಬಕೆಟಿನಲ್ಲಿ ಮುಳುಗಿಸಿದ ಮೇಲೆ ಬಕೆಟಿನ ನೀರನ್ನು ತುಳಸಿ ಗಿಡಕ್ಕೆ ಹಾಕಿದರೆ ಅದೂ ವಿಷವಾಗುತ್ತದೆ’ ಎಂದು ಅವರು ತಿಳಿಸಿದರು.
‘ಕುಡಿಯಲು ನೀರಿಲ್ಲದ ಇಂದಿನ ಬರದ ಪರಿಸ್ಥಿತಿಯಲ್ಲಂತೂ, ಇರುವ ಕೆರೆ, ಕಟ್ಟೆ, ಹೊಳೆ, ತೊರೆಗಳು ಸಂಪ್ರದಾಯದ ಹೆಸರಿನಲ್ಲಿ ಕಲುಷಿತವಾದಲ್ಲಿ ಇದಕ್ಕೆ ಯಾರು ಹೊಣೆ? ವ್ಯಾಪಾರ ಚಿಂತನೆ ಆಧರಿಸಿ ಕುಶಲಕರ್ಮಿಗಳು ಬಣ್ಣಾಕರ್ಷಣೆ ನೀಡಿ ಲಾಭ ಪಡೆಯುತ್ತಾರೆ. ಬಣ್ಣ ಲೇಪಿತ ಗಣೇಶಮೂರ್ತಿಗಳು ಅನಿವಾರ್‍ಯವಾಗಿ ಮಾರುಕಟ್ಟೆಗೆ ಬಂದಿಳಿಯುತ್ತವೆ. ಮಣ್ಣಿನಿಂದಷ್ಟೇ ಮೈದಳೆದ ಬಣ್ಣರಹಿತ ಮಡಿಗಣಪನಿಗೆ ಸಾಂಪ್ರದಾಯಕವಾಗಿಯೂ ಮನ್ನಣೆ ನೀಡಲಾಗುತ್ತದೆ. ಬಣ್ಣದಲ್ಲಿನ ರಾಸಾಯನಿಕ ಪದಾರ್ಥಗಳು ನೀರಿಗೆ ವಿಲೀನವಾಗುವುದು ತಪ್ಪುವುದರಿಂದಾಗಿ, ಪರಿಸರಸ್ನೇಹಿಯಾಗಿ ಮನಗೆಲ್ಲುತ್ತದೆ’ ಎಂದು ಕೊತ್ತನೂರು ಗ್ರಾಮದ ಸ್ನೇಕ್‌ ನಾಗರಾಜ್‌ ತಿಳಿಸಿದರು.

ಅಪ್ಪೇಗೌಡನಹಳ್ಳಿ ಗೇಟ್‌ ಬಳಿಯಿರುವ ಬಯಲಾಂಜನೇಯಸ್ವಾಮಿ ದೇವಾಲಯದಲ್ಲಿ ಪೂಜೆ ಹಾಗೂ ಭಜನೆ

0

ಶಿಡ್ಲಘಟ್ಟ ತಾಲ್ಲೂಕಿನ ಅಪ್ಪೇಗೌಡನಹಳ್ಳಿ ಗೇಟ್‌ ಬಳಿಯಿರುವ ಬಯಲಾಂಜನೇಯಸ್ವಾಮಿ ದೇವಾಲಯದಲ್ಲಿ ಸೋಮವಾರ ದೇವರಿಗೆ ವಿಶೇಷ ಹೂವಿನ ಅಲಂಕಾರ, ಪೂಜೆ ಹಾಗೂ ಭಜನೆಯನ್ನು ಏರ್ಪಡಿಸಲಾಗಿತ್ತು.

ಬ್ರಹ್ಮ ಕುಮಾರಿ ವಿಶ್ವ ವಿದ್ಯಾಲಯದಲ್ಲಿ ವಿಶ್ವ ಬಂದುತ್ವ ದಿನಾಚರಣೆಯ ಅಂಗವಾಗಿ ಪ್ರವಚನ

0

ಇಂದಿನ ಯಾಂತ್ರಿಕ ಜೀವನದಿಂದ ಜನರು ಮಾನಸಿಕ ನೆಮ್ಮದಿಯಿಂದ ವಂಚಿತರಾಗುತ್ತಿದ್ದು ಆದ್ಯಾತ್ಮಿಕತೆ ಮತ್ತು ಧ್ಯಾನದಿಂದ ಮಾತ್ರ ನೆಮ್ಮದಿಯ ಜೀವನ ಸಾಗಿಸಲು ಸಾದ್ಯ ಎಂದು ಜಿಲ್ಲಾ ಆರ್‍ಯ ವೈಶ್ಯ ಮಹಾಸಭಾದ ಕಾರ್ಯದರ್ಶಿ ಸ್ವರ್ಣಲತಾ ಗುಪ್ತಾ ತಿಳಿಸಿದರು.
ಪಟ್ಟಣದ ಷರಾಫ್ ಬೀದಿಯಲ್ಲಿರುವ ಬ್ರಹ್ಮ ಕುಮಾರಿ ವಿಶ್ವ ವಿದ್ಯಾಲಯದಲ್ಲಿ ಸೋಮವಾರ ಏರ್ಪಡಿಸಲಾಗಿದ್ದ “ವಿಶ್ವ ಬಂದುತ್ವ ದಿನಾಚರಣೆ” ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು. ವಸುದೈವ ಕುಟುಂಬಕಂ ಎಂಬ ದ್ಯೇಯದೊಂದಿಗೆ ಬ್ರಹ್ಮ ಕುಮಾರಿಯ ವಿಶ್ವ ವಿದ್ಯಾಲಯವು ಜಗತ್ತಿನಾದ್ಯಂತ ಶಾಂತಿ ಸಂದೇಶಗಳನ್ನು ನೀಡುತ್ತಿದೆ. ವಿಶ್ವದಲ್ಲಿಂದು ಅಶಾಂತಿ ಜಾತಿ ಸಂಘರ್ಷಗಳ ನಡುವೆ ಎಲ್ಲ ವರ್ಗದ ಜನರಿಗೂ ನೆಮ್ಮದಿಯ ಜೀವನ ನಡೆಸುವ ಶಿಕ್ಷಣ ನೀಡುತ್ತಿರುವ ಏಕೈಕ ಸಂಸ್ಥೆ ಬ್ರಹ್ಮ ಕುಮಾರಿ ವಿಶ್ವವಿದ್ಯಾನಿಲಯವಾಗಿದ್ದು ಎಲ್ಲ ವರ್ಗದ ಎಲ್ಲ ಧರ್ಮಗಳ ಜನರು ಬ್ರಹ್ಮ ಕುಮಾರಿ ಶಾಂತಿ ಕೇಂದ್ರಗಳಿಗೆ ಭೇಟಿ ನೀಡಿ ಆದ್ಯಾತ್ಮಿಕ ಧ್ಯಾನದಿಂದ ಪುನೀತರಾಗಬಹುದು. ನಿತ್ಯ ಜೀವನದಲ್ಲಿ ದ್ಯಾನಾಸಕ್ತಿಯನ್ನು ಬೆಳಸಿಕೊಂಡಲ್ಲಿ ಮಾತ್ರ ವಿಶ್ವ ಬಂದುತ್ವ ದಿನ ಆಚರಣೆ ಮಾಡುವುದಕ್ಕೆ ಮಹತ್ವದೊರೆಯಲಿದೆ ಎಂದರು.
ವಿಶ್ವ ಬಂದುತ್ವ ಮತ್ತು ಗೋಕುಲಾಷ್ಠಮಿಯ ಮಹತ್ವದ ಬಗ್ಗೆ ಬ್ರಹ್ಮ ಕುಮಾರಿ ವಿಶ್ವವಿದ್ಯಾಲಯದ ಸಂಚಾಲಕಿ ಜಯಕ್ಕ ಪ್ರವಚನ ನೀಡಿದರು. ಗೋಕುಲಾಷ್ಠಮಿಯಂದು ಏರ್ಪಡಿಸಲಾಗಿದ್ದ ಕೃಷ್ಣ ವೇಷಧಾರಿ ಮಕ್ಕಳಿಗೆ ಬಹುಮಾನಗಳನ್ನು ವಿತರಿಸಲಾಯಿತು.
ಕಾರ್ಯಕ್ರಮದಲ್ಲಿ ಸರಸ್ವತಿ ವಿದ್ಯಾಸಂಸ್ಥೆಗಳ ಅಧ್ಯಕ್ಷ ವೆಂಕಟಸುಬ್ಬರಾವ್, ಕ.ಸ.ಪ. ನಿಕಟ ಪೂರ್ವ ಅದ್ಯಕ್ಷ ರೂಪಸಿ ರಮೇಶ್, ನಾಗರತ್ನ, ರಮಾಮಣಿ, ವಿಮಲ, ಶೈಲ ಮತ್ತಿರರು ಹಾಜರಿದ್ದರು.

ಕೋಟೆ ವೃತ್ತದಲ್ಲಿರುವ ಸರ್ಕಾರಿ ಬಾಲಕಿಯರ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಪ್ರತಿಭಾ ಕಾರಂಜಿ

0

ಪಟ್ಟಣದ ಕೋಟೆ ವೃತ್ತದಲ್ಲಿರುವ ಸರ್ಕಾರಿ ಬಾಲಕಿಯರ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಸೋಮವಾರ ಪಟ್ಟಣ ಸಿ.ಆರ್.ಸಿ.ಹಂತದ ಪ್ರತಿಭಾ ಕಾರಂಜಿಯನ್ನು ನಡೆಸಲಾಯಿತು. ಪ್ರತಿಭಾ ಕಾರಂಜಿಯಲ್ಲಿ 25 ಶಾಲೆಗಳ ವಿದ್ಯಾರ್ಥಿಗಳು ಭಾಗವಹಿಸಿದ್ದರು.
ಸಾಮೂಹಿಕ ಸ್ಪರ್ಧೆಗಳ ವಿಭಾಗ:
ಜಾನಪದ ನೃತ್ಯ: ವಾಸವಿ ಶಾಲೆಯ ಅಕ್ಷಯ ತಂಡ;
ಕ್ವಿಜ್‌: ವರದನಾಯಕನಹಳ್ಳಿ ಸ.ಹಿ.ಪ್ರಾ.ಶಾಲೆಯ ಕಿಶೋರ್‌ ತಂಡ;
ಕೋಲಾಟ: ಹನುಮಂತಪುರ ಸ.ಹಿ.ಪ್ರಾ.ಶಾಲೆಯ ನಂದಿನಿ ತಂಡ;
ದೇಶಭಕ್ತಿಗೀತೆ: ಕೋಟೆ ಬಾಲಕಿಯರ ಸ.ಹಿ.ಪ್ರಾ.ಶಾಲೆಯ ಪ್ರತಿಭಾ ತಂಡ;
ವೈಯಕ್ತಿಕ ಸ್ಪರ್ಧೆ ವಿಭಾಗ:
ಕಥೆ ಹೇಳುವುದು: ಬಡಾವಣೆ ಶಾಲೆಯ ಮಧುಲತಾ;
ಕಂಠಪಾಠ: ಡಾಲ್ಫಿನ್‌ ಶಾಲೆಯ ಲುಗ್ಮಾರೈನಾ;
ಅಭಿನಯಗೀತೆ: ವಾಸವಿ ಶಾಲೆಯ ಅಮೃತಾ;
ಧಾರ್ಮಿಕ ಪಠಣ: ತೈಬಾನಗರದ ಉರ್ದು ಶಾಲೆಯ ಸಾದಿಕ್‌ಪಾಷ;
ಕನ್ನಡ ಕಂಠಪಾಠ: ಆಶಾಕಿರಣ ಅಂಧ ಮಕ್ಕಳ ಶಾಲೆಯ ಗಮನಿಕ.
ಕಾರ್ಯಕ್ರಮದಲ್ಲಿ ಕ್ಷೇತ್ರ ಶಿಕ್ಷಣಾಧಿಕಾರಿ ರಘುನಾಥರೆಡ್ಡಿ, ಶಿಕ್ಷಣ ಸಂಯೋಜಕ ಮನ್ನಾರಸ್ವಾಮಿ, ಕ್ಷೇತ್ರ ಸಂಪನ್ಮೂಲ ವ್ಯಕ್ತಿ ಕೃಷ್ಣಂರಾಜು, ಎಂ.ಸೀನಪ್ಪ, ಕೆ.ಮುನಿಯಪ್ಪ ಹಾಜರಿದ್ದರು.

ಸ್ವಂತ ಖರ್ಚಿನಿಂದ ಕಾಲುವೆ ದುರಸ್ಥಿಗೊಳಿಸಿದ ರೈತರು

0

ಮಳೆ ನೀರು ಹರಿಯುವ ಕಾಲುವೆಯು ಮುಚ್ಚಿರುವುದರಿಂದ ಮಳೆ ಬಂದಾಗ ನೀರು ರಸ್ತೆ, ಹೊಲ ಹಾಗೂ ಹಿಪ್ಪುನೇರಳೆ ಸೊಪ್ಪಿನ ತೋಟಗಳಿಗೆ ನುಗ್ಗುವುದನ್ನು ತಡೆಯಲು ಸೋಮವಾರ ರೈತರು ಸ್ವಂತ ಖರ್ಚಿನಿಂದ ಜೆಸಿಬಿ ಬಳಸಿ ಕಾಲುವೆಯನ್ನು ಸರಿಪಡಿಸಿದ ಘಟನೆ ತಾಲ್ಲೂಕಿನ ಹಿತ್ತಲಹಳ್ಳಿ ಬಳಿ ನಡೆದಿದೆ.
ತಾಲ್ಲೂಕಿನ ಹಿತ್ತಲಹಳ್ಳಿ ಬಳಿಯಿರುವ ಘನತ್ಯಾಜ್ಯ ನಿರ್ವಹಣಾ ಘಟಕದ ಬಳಿ ಅವೈಜ್ಞಾನಿಕವಾಗಿ ಪುರಸಭೆಯವರು ಸೇತುವೆ ನಿರ್ಮಿಸಿರುವುದು ಮತ್ತು ಅಕ್ಕಪಕ್ಕದ ಜಮೀನುಗಳವರು ಓಡಾಡಲೆಂದು ಕಾಲುವೆಯನ್ನು ಮುಚ್ಚಿರುವುದರಿಂದ ನೀರು ಸರಾಗವಾಗಿ ಕಾಲುವೆಯಲ್ಲಿ ಹರಿಯದಂತಾಗಿದೆ. ಮಳೆ ಬಂದಾಗ ಹಲವು ಬಾರಿ ಹೊಲ, ತೋಟಗಳಲ್ಲಿ ಲಕ್ಷಾಂತರ ರೂಗಳ ಬೆಳೆ ನಷ್ಟವಾಗಿದೆ. ಶಿಡ್ಲಘಟ್ಟದಿಂದ ಆನೂರು ಮಾರ್ಗವಾಗಿ ಸುಮಾರು 33 ಅಡಿ ಅಗಲದ ಈ ಕಾಲುವೆ ಹಲವೆಡೆ ಒತ್ತುವರಿಯಾಗಿರುವುದರಿಂದ ಕೆರೆಗೆ ಹರಿಯಬೇಕಾದ ನೀರು ಕೂಡ ವ್ಯರ್ಥವಾಗುತ್ತಿದೆ.
ತಾಲ್ಲೂಕಿನ ಹಿತ್ತಲಹಳ್ಳಿಯ ಬಳಿ ಪುರಸಭೆಯ ವತಿಯಿಂದ ಘನತ್ಯಾಜ್ಯ ನಿರ್ವಹಣೆಗೆಂದು ಘಟಕವೊಂದನ್ನು ನಿರ್ಮಿಸಲಾಗಿದೆ. ತ್ಯಾಜ್ಯ ನಿರ್ವಹಣಾ ಘಟಕಕ್ಕೆ ಹೋಗಲು ಮಳೆಯ ನೀರು ಹರಿಯುವ ಕಾಲುವೆಗೆ ಅಡ್ಡವಾಗಿ ರಸ್ತೆಯನ್ನು ನಿರ್ಮಿಸಿದ್ದಾರೆ. ತೀರ ಕೆಳಮಟ್ಟದಲ್ಲಿ ಅವೈಜ್ಞಾನಿಕವಾಗಿ ಇಲ್ಲಿ ಸೇತುವೆಯನ್ನು ನಿರ್ಮಿಸಲಾಗಿದೆ. ಸೇತುವೆಯ ಕೆಳಗೆ ನೀರು ಸರಾಗವಾಗಿ ಹರಿಯಲು ಆಗದಂತೆ ಕಸಕಡ್ಡಿ, ಮಣ್ಣು ತುಂಬಿಕೊಂಡಿದೆ. ಹೀಗಾಗಿ ಬಿದ್ದ ಮಳೆಯ ನೀರು ಕಾಲುವೆಯ ಮೂಲಕ ಹರಿಯಲಾಗದೇ ಹೊರಕ್ಕೆ ರಸ್ತೆ ಬದಿಗೆ ಹರಿಯುತ್ತದೆ. ಇದರಿಂದಾಗಿ ಕೆರೆಗೆ ಹೋಗಬೇಕಿದ್ದ ನೀರು ರಸ್ತೆ ಹಾಗೂ ತೋಟಗಳಿಗೆ ನುಗ್ಗಿ ನಷ್ಟವನ್ನು ಅನುಭವಿಸುವಂತಾಗಿದೆ.
ಶೀಘ್ರದಲ್ಲಿ ಪುರಸಭೆಯವರು ಅವೈಜ್ಞಾನಿಕವಾಗಿ ತಳಮಟ್ಟದಲ್ಲಿ ನಿರ್ಮಿಸಿರುವ ಸೇತುವೆಯನ್ನು ತೆಗೆದು ಎತ್ತರಮಟ್ಟದಲ್ಲಿ ನೀರು ಹರಿಯುವಂತೆ ನಿರ್ಮಿಸದಿದ್ದಲ್ಲಿ ನಾವೇ ತೆಗೆದು ನೀರು ಹರಿಯುವಂತೆ ಮಾಡಬೇಕಾಗುತ್ತದೆ ಎಂದು ರೈತರು ಎಚ್ಚರಿಸಿದ್ದಾರೆ.
‘ಪ್ರತಿ ಬಾರಿ ಮಳೆ ಜೋರಾಗಿ ಬಿದ್ದಾಗ ಇದೇ ಸಮಸ್ಯೆ ಉಂಟಾಗುತ್ತೆ. ಪುರಸಭೆಯವರಿಗೆ ಹಲವು ಬಾರಿ ಈ ಬಗ್ಗೆ ಹೇಳಿದ್ದರೂ ಕ್ರಮ ಕೈಗೊಳ್ಳುತ್ತಿಲ್ಲ. ಈ ವರ್ಷವೂ ಇದೇ ಸಮಸ್ಯೆ ತಲೆದೋರಿದೆ. ಇಲ್ಲಿ ಸೇತುವೆ ನಿರ್ಮಿಸಿರುವುದೇ ಸರಿಯಾಗಿಲ್ಲ. ಇದರಲ್ಲಿ ಪುರಸಭೆಯವರ ಜವಾಬ್ದಾರಿಯೊಂದಿಗೆ ಕೆರೆ ಅಭಿವೃದ್ಧಿ ಸಂಘಗಳ ಜವಾಬ್ದಾರಿಯೂ ಇದೆ. ನೀರು ಪೋಲಾಗುವುದರ ಜೊತೆಗೆ ತೋಟಗಳಿಗೆ ನುಗ್ಗಿ ನಷ್ಟ ಅನುಭವಿಸುವವರ ಕಷ್ಟಕ್ಕೆ ಪರಿಹಾರ ನೀಡುವವರ್‍ಯಾರು. ಈಗಲೇ ನಮ್ಮಲ್ಲಿ ಮಳೆಯ ಪ್ರಮಾಣ ಕಡಿಮೆಯಾಗುತ್ತಿದೆ. ಬರುವ ನೀರೂ ಪೋಲಾದರೆ ಹೇಗೆ. ಘನತ್ಯಾಜ್ಯ ನಿರ್ವಹಣಾ ಘಟಕದಲ್ಲಿ ಕೇವಲ ಊರಿನ ತ್ಯಾಜ್ಯವನ್ನು ತಂದು ಸುರಿಯುತ್ತಿದ್ದಾರೆ. ಅವಕ್ಕೆ ಆಗಾಗ ಬೆಂಕಿ ಹಚ್ಚುತ್ತಾರೆ. ಅದರಿಂದ ಬರುವ ಹೊಗೆಯಿಂದ ಅಕ್ಕಪಕ್ಕದ ಹಿಪ್ಪುನೇರಳೆ ಸೊಪ್ಪಿನ ತೋಟಗಳು ಹಾಳಾಗುವ ಜೊತೆಗೆ ರೇಷ್ಮೆ ಹುಳುಗಳೂ ಸಾವನ್ನಪ್ಪುತ್ತಿವೆ. ಮಳೆ ಬಂದಾಗ ಇದರಿಂದ ಕೊಳೆತ ತ್ಯಾಜ್ಯದಿಂದ ಕೆಟ್ಟ ವಾಸನೆ ಬರುತ್ತಿದ್ದು, ಗ್ರಾಮಗಳಿಗೆ ತ್ಯಾಜ್ಯದೊಂದಿಗೆ ಖಾಯಿಲೆಗಳನ್ನೂ ಪುರಸಭೆಯವರು ರವಾನಿಸುತ್ತಿದ್ದಾರೆ. ಆದ್ದರಿಂದ ನಾವೇ ರೈತರು ಒಗ್ಗೂಡಿ ಸ್ವಂತ ಖರ್ಚಿನಿಂದ ಜೆಸಿಬಿ ತರಿಸಿ ಕಾಲುವೆಯನ್ನು ಸರಿಪಡಿಸುತ್ತಿದ್ದೇವೆ’ ಎಂದು ಗ್ರಾಮ ಪಂಚಾಯತಿ ಅಧ್ಯಕ್ಷ ಹಿತ್ತಲಹಳ್ಳಿಯ ನಂಜುಂಡಪ್ಪ ದೂರುತ್ತಾರೆ.
ಹಿತ್ತಲಹಳ್ಳಿ ಎಚ್‌.ಜಿ.ಗೋಪಾಲಗೌಡ, ಎಚ್‌.ಕೆ.ಸುರೇಶ್‌, ವೆಂಕಟರೋಣಪ್ಪ, ಅಶ್ವತ್ಥಪ್ಪ, ನರಸಪ್ಪ, ಎಸ್‌.ಮೂರ್ತಿ ಮತ್ತಿತರರು ಈ ಸಂದರ್ಭದಲ್ಲಿ ಹಾಜರಿದ್ದರು.

ಡಾ.ಯು.ಆರ್‌.ಅನಂತಮೂರ್ತಿ ಅವರಿಗೆ ಶ್ರದ್ಧಾಂಜಲಿ

0

ಶಿಡ್ಲಘಟ್ಟದ ಹೂವಿನ ವೃತ್ತದಲ್ಲಿ ಶನಿವಾರ ಚುಟುಕು ಸಾಹಿತ್ಯ ಪರಿಷತ್‌ ತಾಲ್ಲೂಕು ಘಟಕ ಹಾಗೂ ರೈತ ಸಂಘದ ವತಿಯಿಂದ ಡಾ.ಯು.ಆರ್‌.ಅನಂತಮೂರ್ತಿ ಅವರಿಗೆ ಶ್ರದ್ಧಾಂಜಲಿ ಅರ್ಪಿಸಿದರು. ರೈತ ಸಂಘದ ಜಿಲ್ಲಾಧ್ಯಕ್ಷ ಭಕ್ತರಹಳ್ಳಿ ಬೈರೇಗೌಡ, ಖಾ.ರಾ.ಖಂಡೇರಾವ್‌, ಈಧರೆ ತಿರುಮಲಪ್ರಕಾಶ್‌, ನಂಜಪ್ಪ, ದೇವರಾಜ್‌, ಕ.ಸಾ.ಪ ತಾಲ್ಲೂಕು ಅಧ್ಯಕ್ಷ ಶ್ರೀನಿವಾಸ್‌ ಹಾಜರಿದ್ದರು.

ಗರ್ಭಿಣಿಯರ ಆರೋಗ್ಯ ಮತ್ತು ಮಕ್ಕಳ ಪೋಷಣೆಯ ಬಗ್ಗೆ ಮಾಹಿತಿ ಶಿಬಿರ

0

ಗರ್ಭಿಣಿಯರ ಆರೋಗ್ಯ ಮತ್ತು ಮಕ್ಕಳ ಪೋಷಣೆಯ ಬಗ್ಗೆ ಪಟ್ಟಣದ ಕದಿರಿಪಾಳ್ಯ ಅಂಗನವಾಡಿ ಕೇಂದ್ರದಲ್ಲಿ ಗುರುವಾರ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಮತ್ತು ಆರೋಗ್ಯ ಇಲಾಖೆ ಸಹಭಾಗಿತ್ವದಲ್ಲಿ ಮಾಹಿತಿ ಶಿಬಿರವನ್ನು ಆಯೋಜಿಸಲಾಗಿತ್ತು.
ಎದೆ ಹಾಲಿನ ಮಹತ್ವ, ಮಕ್ಕಳಲ್ಲಿ ಕಂಡು ಬರುವ ಆರೋಗ್ಯ ಸಮಸ್ಯೆಗಳು, ರೋಗನಿರೋಧಕ ಚುಚ್ಚುಮದ್ದುಗಳ ಬಗ್ಗೆ, ಪೂರಕ ಪೌಷ್ಠಿಕ ಆಹಾರಗಳು ಹಾಗೂ ಇಲಾಖೆಯ ಸೇವಾ ಸೌಲಭ್ಯಗಳ ಮಾಹಿತಿಯನ್ನು ತಾಯಂದಿರು ಹಾಗೂ ಅಂಗನವಾಡಿ ಕಾರ್ಯಕರ್ತೆಯರಿಗೆ ನೀಡಲಾಯಿತು.
ಶಿಬಿರದ ಉದ್ಘಾಟನೆಯನ್ನು ಮೊಳಕೆ ಬರಿಸಿದ ಕಾಳುಗಳು, ಹಣ್ಣುಗಳು, ತರಕಾರಿ, ಸೊಪ್ಪು, ಹಾಲು, ಮೊಟ್ಟೆ, ಬೇಳೆಗಳನ್ನಿರಿಸಿ ದೀಪ ಬೆಳಗಿಸುವ ಮೂಲಕ ಮಾಡಲಾಗಿದ್ದು ವಿಶೇಷವಾಗಿತ್ತು. ತಾಯಂದಿರು ಹಾಗೂ ಶಿಶು ಅಭಿವೃದ್ಧಿಗೆ ಪೂರಕವಾದ ಆಹಾರ, ಔಷಧಿ, ಸ್ವಚ್ಛತೆ, ಚಿಕಿತ್ಸೆ ಮುಂತಾದವುಗಳ ಅಗತ್ಯತೆಯನ್ನು ತಿಳಿಸಿಕೊಡಲಾಯಿತು.
ಈ ಸಂದರ್ಭದಲ್ಲಿ ಮಾತನಾಡಿದ ತಾಲ್ಲೂಕು ಆರೋಗ್ಯಾಧಿಕಾರಿ ಡಾ.ಅನಿಲ್‌ ಕುಮಾರ್‌, ‘ಗರ್ಭಿಣಿಯರು ತಮ್ಮೊಡಲಲ್ಲಿ ಬೆಳೆಯುವ ಮಗುವಿಗೆ ಸಿಗಬೇಕಾದ ಪೋಷ್ಠಿಕಾಂಶಗಳನ್ನು ಕಾಲಕಾಲಕ್ಕೆ ಸೇವಿಸಬೇಕು. ಮೂಢನಂಬಿಕೆಗಳಿಗೆ ಬಲಿಯಾಗದೆ ವೈದ್ಯರ ಸಲಹೆ ಸೂಚನೆಗಳನ್ನು ಪಾಲಿಸಬೇಕು. ಗರ್ಭಿಣಿಯರು ತೆಗೆದುಕೊಳ್ಳುವ ಮುಂಜಾಗರೂಕತೆ ಮುಂದೆ ಮಗುವಿನ ಆರೋಗ್ಯ ವೃದ್ಧಿಸಲು ಸಹಕಾರಿಯಾಗುತ್ತದೆ. ತಾಯಿ ಹಾಲು ಅಮೃತದಂತೆ. ಮಗುವಿಗೆ ಅತ್ಯವಶ್ಯಕ’ ಎಂದು ಹೇಳಿದರು.
ಶಿಶು ಅಭಿವೃದ್ಧಿ ಯೋಜನಾಧಿಕಾರಿ ಜಿ.ಕೆ.ಲಕ್ಷ್ಮೀದೇವಮ್ಮ ಮಾತನಾಡಿ, ‘ಮನೆಗಳ ಬಳಿಯೇ ಸೊಪ್ಪು ತರಕಾರಿಗಳನ್ನು ಬೆಳೆದುಕೊಂಡು ಬಳಸಬೇಕು. ಮನೆಯಲ್ಲಿ ಲಭ್ಯವಿರುವ ಬೇಳೆ ಕಾಳುಗಳನ್ನು ಮೊಳಕೆ ಬರಿಸಿ ತಿನ್ನುವುದರಿಂದ ಹೆಚ್ಚೆಚ್ಚು ಪೌಷ್ಠಿಕಾಂಶಗಳು ಸಿಗುತ್ತವೆ’ ಎಂದು ವಿವರಿಸಿದರು.
ಪುರಸಭಾ ಸದಸ್ಯೆ ಪ್ರಭಾವತಿ ಸುರೇಶ್‌, ಆಯುಷ್‌ ವೈದ್ಯಾರಾದ ಡಾ.ವಿಜಯಕುಮಾರ್‌, ಆರೋಗ್ಯ ಶಿಕ್ಷಕ ಕಿರಣ್‌ಕುಮಾರ್‌, ಕುಮಾರಸ್ವಾಮಿ, ಮಹಿಳಾ ಆರೋಗ್ಯ ಸಹಾಯಕಿಯರಾದ ವಿಜಯ, ಆದಮ್ಮ, ಮೇಲ್ವಿಚಾರಕರಾದ ಗಿರಿಜಾಂಬಾ, ಶಾಂತಾ, ರಾಧಮ್ಮ, ಸರೋಜಮ್ಮ ಮತ್ತಿತರರು ಈ ಸಂದರ್ಭದಲ್ಲಿ ಹಾಜರಿದ್ದರು.

ಪುರಸಭೆಯ ಸ್ಥಳವೇ ತ್ಯಾಜ್ಯಗಳ ತಾಣ

0

ಪಟ್ಟಣದ ಮುಖ್ಯ ರಸ್ತೆಯಾದ ಟಿ.ಬಿ.ರಸ್ತೆಯಲ್ಲಿರುವ ಪುರಸಭೆ ಮಳಿಗೆಗಳ ಹಿಂಭಾಗದ ಸ್ಥಳವು ತ್ಯಾಜ್ಯದ ತಾಣವಾಗಿದ್ದು, ರೋಗ ರುಜಿನಗಳನ್ನು ಹರಡುತ್ತಿದೆ.
ಪುರ ಪೊಲೀಸ್ ಠಾಣೆ ಪಕ್ಕದಲ್ಲಿರುವ ಈ ಸ್ಥಳದ ಸುತ್ತ ಹೋಟೆಲು, ಸಾರ್ವಜನಿಕ ವಸತಿ ಗೃಹಗಳು, ವೈದ್ಯಕೀಯ ಪ್ರಯೋಗಾಲಯ, ಅಂಧ ಮಕ್ಕಳ ಶಾಲೆ, ಕೆನರಾ ಬ್ಯಾಂಕ್‌ ಇವೆ. ಈ ಪುರಸಭೆಯ ಸ್ಥಳದಲ್ಲಿ ಕಸ ಹಾಕಲು ಒಂದು ಕಂಟೈನರನ್ನು ಇಡಲಾಗಿದೆ. ಅದು ತುಂಬಿ ತುಳುಕುತ್ತಿದೆ ಹಾಗೂ ಅದರ ಸುತ್ತಮುತ್ತ ತ್ಯಾಜ್ಯದ ರಾಶಿ ತುಂಬಿಹೋಗಿದ್ದು, ಬೀದಿ ನಾಯಿಗಳ ತಾಣವಾಗಿದೆ. ಪಟ್ಟಣದ ಮುಖ್ಯ ರಸ್ತೆಯಲ್ಲಿ ಒಂದೇ ಒಂದು ಶೌಚಾಲಯವಿರದ ಕಾರಣ ಈ ಪುರಸಭೆಯ ಸ್ಥಳವು ಸಾರ್ವಜನಿಕ ಶೌಚಾಲಯ ಕೂಡ ಆಗಿಹೋಗಿದೆ. ಮಳೆ ಬಿದ್ದ ಕಾರಣ ಈ ಸ್ಥಳದಲ್ಲಿರುವರು ಕೆಟ್ಟ ವಾಸನೆಯಿಂದ ಮೂಗುಮುಚ್ಚಿ ಓಡಾಡುವಂತಾಗಿದೆ.
ಪಕ್ಕದಲ್ಲಿನ ನಿವಾಸಿಗರು ಸೊಳ್ಳೆಕಾಟ ಹಾಗೂ ಗಬ್ಬು ನಾರುತ್ತಿರುವ ತ್ಯಾಜ್ಯದ ವಾಸನೆಗೆ ರೋಸಿಹೋಗಿ ಪುರಸಭೆ ಅಧಿಕಾರಿಗಳಿಗೆ ಪ್ರತಿನಿತ್ಯ ಹಿಡಿಶಾಪ ಹಾಕುತ್ತಾರೆ. ಪುರಸಭೆಯವರು ತಮ್ಮದೇ ಸ್ಥಳವನ್ನು ಸ್ವಚ್ಛವಾಗಿಟ್ಟುಕೊಂಡಿಲ್ಲ ಇನ್ನು ಊರಿನ ಸ್ವಚ್ಛತೆಯನ್ನು ಏನು ತಾನೆ ಮಾಡಿಯಾರು ಎಂದು ಪ್ರಶ್ನಿಸುತ್ತಾರೆ. ಮುಖ್ಯ ರಸ್ತೆಯ ಪಕ್ಕದಲ್ಲೇ ಈ ರೀತಿಯ ದುಸ್ಥಿತಿಯಿದೆ. ಶಿಡ್ಲಘಟ್ಟದಲ್ಲಿ ಮಳೆ ಬಂದರೆ ಚರಂಡಿಗಳು ತುಂಬಿ ತುಳುಕಿ ರಸ್ತೆ ಹಾಗೂ ಮನೆ ಒಳಗೆ ಹರಿಯುತ್ತಿವೆ. ಅಧಿಕಾರಿಗಳು ಕೇವಲ ಕಚೇರಿಗೆ ಸೀಮಿತರಾಗಿದ್ದಾರೆ. ವಾಸಯೋಗ್ಯವಿಲ್ಲದಂತೆ ಪರಿಸರವಿಲ್ಲಿ ಸೃಷ್ಠಿಯಾಗಿದೆ. ಸಂಜೆ ವೇಳೆಯಾದರೆ ಸಾಕು ಸೊಳ್ಳೆಗಳು ಹೆಚ್ಚಾಗುತ್ತವೆ. ಮನೆಯಲ್ಲಿ ಸಂಜೆ ಮಕ್ಕಳನ್ನು ಆಡಲು ಕೂಡ ಬಿಡದಂತೆ ಬಾಗಿಲು ಹಾಕಿಕೊಳ್ಳಬೇಕಾಗಿದೆ ಎಂದು ಈ ಪ್ರದೇಶದ ವಾಸಿ ಸಮೀವುಲ್ಲಾ ಹಾಗೂ ಬಿ.ಸಿ.ಲೋಕೇಶ್‌ ದೂರುತ್ತಾರೆ.
‘ಪುರಸಭೆಯ ವತಿಯಿಂದ ಕೋಟ್ಯಾಂತರ ರೂಗಳನ್ನು ಖರ್ಚು ಮಾಡಿ ಹಿತ್ತಲಹಳ್ಳಿಯ ಬಳಿ ತ್ಯಾಜ್ಯವಿಲೇವಾರಿ ಘಟಕವನ್ನು ಸ್ಥಾಪಿಸಿದ್ದಾರೆ. ಆದರೆ ಪಟ್ಟಣದಲ್ಲಿ ಮಾತ್ರ ಎಲ್ಲೆಂದರಲ್ಲಿ ತ್ಯಾಜ್ಯಗಳು ಕಂಡುಬರುತ್ತಿರುವುದು ವಿಪರ್ಯಾಸವಾಗಿದೆ. ಅಲ್ಲಲ್ಲಿ ತ್ಯಾಜ್ಯಗಳನ್ನು ಸುರಿಯಲೆಂದು ಕಂಟೈನರ್‌ಗಳನ್ನು ಇರಿಸಿದ್ದು, ಅವು ತ್ಯಾಜ್ಯದಿಂದ ತುಂಬಿ ತುಳುಕುತ್ತಿದ್ದರೂ ಕಸ ವಿಲೇವಾರಿ ಮಾಡುತ್ತಿಲ್ಲ. ಮಳೆ ಬಂದಾಗ ಇಂಥಹ ತ್ಯಾಜ್ಯವಿರುವ ಸ್ಥಳಗಳು ಖಾಯಿಲೆ ಹರಡುತ್ತವೆಂದು ತಿಳಿದಿದ್ದರೂ, ಪುರಸಭೆಯವರು ಕನಿಷ್ಠ ತಮ್ಮದೇ ಆದ ಸ್ಥಳವನ್ನೂ ಸ್ವಚ್ಛವಾಗಿಟ್ಟುಕೊಂಡಿರದಿರುವುದು ಶಿಡ್ಲಘಟ್ಟದ ಜನರ ದೌರ್ಭಾಗ್ಯವಾಗಿದೆ’ ಎಂದು ಹಿರಿಯ ವಕೀಲ ಅಶ್ವತ್ಥನಾರಾಯಣ್‌ ತಿಳಿಸಿದರು.

ಮಳೆಯಿಂದಾಗಿ ಸರ್ಕಾರಿ ಪದವಿ ಪೂರ್ವ ಕಾಲೇಜಿನ ಮುಂಭಾಗ ಜಲಾವೃತ

0

ಶಿಡ್ಲಘಟ್ಟದಲ್ಲಿ ಬುಧವಾರ ರಾತ್ರಿ ಬಿದ್ದ ಮಳೆಯಿಂದಾಗಿ ಸರ್ಕಾರಿ ಪದವಿ ಪೂರ್ವ ಕಾಲೇಜಿನ ಮುಂಭಾಗ ಜಲಾವೃತವಾಗಿದ್ದು ವಿದ್ಯಾರ್ಥಿಗಳಿಗೆ ತೊಂದರೆಯುಂಟಾಗಿರುವುದಲ್ಲದೆ ಕಟ್ಟಡಕ್ಕೂ ಹಾನಿಯಾಗುವ ಸಾಧ್ಯತೆಯಿದೆ.

error: Content is protected !!