ಶ್ರೀಕೃಷ್ಣ ಜನ್ಮಾಷ್ಠಮಿ ಪ್ರಯುಕ್ತ ಭಾನುವಾರ ಪಟ್ಟಣದ ಟಿ.ಬಿ.ರಸ್ತೆಯಲ್ಲಿರುವ ಕೃಷ್ಣಸ್ವಾಮಿ ದೇವಸ್ಥಾನದಲ್ಲಿ ವಿಶೇಷ ಹೂವಿನ ಅಲಂಕಾರ, ಹೋಮ, ಪೂಜೆ ನಡೆಸಲಾಯಿತು. ಯಾದವ ಕುಲಸ್ಥರು ಕುಟುಂಬ ಸಮೇತರಾಗಿ ವಿಶೇಷ ಪೂಜೆಯಲ್ಲಿ ಪಾಲ್ಗೊಂಡರು. ಮಹಿಳೆಯರು ತಂಬಿಟ್ಟು ದೀಪಗಳನ್ನು ಮೆರವಣಿಗೆಯಲ್ಲಿ ತಂದು ಪೂಜೆಯನ್ನು ನೆರವೇರಿಸಿದರು.
ತಾಲ್ಲೂಕಿನ ಯಾದವ ಕುಲಸ್ಥರಿಂದ ಮೆರವಣಿಗೆಯನ್ನು ಆಯೋಜಿಸಿದ್ದು, ಶ್ರೀಕೃಷ್ಣ ಮೂರ್ತಿಗಳಿರುವ ಮುತ್ತಿನ ಪಲ್ಲಕ್ಕಿಗಳು, ಸಪ್ತಾಶ್ವದ ರಥಗಳು, ಕೀಲುಕುದುರೆ, ಗಾರ್ಡಿಬೊಂಬೆ, ನವಿಲುಬೊಂಬೆ, ತಮಟೆ ವಾದನ, ನಾದಸ್ವರ, ಶ್ರೀಕೃಷ್ಣ ವೇಷಧಾರಿಗಳಾದ ಮಕ್ಕಳು, ದೀಪಗಳನ್ನು ಹೊತ್ತ ಮಹಿಳೆಯರು ಪಟ್ಟಣದ ಪ್ರಮುಖ ಬೀದಿಗಳಲ್ಲಿ ಮೆರವಣಿಗೆಯಲ್ಲಿ ಸಾಗಿದ್ದು ಆಕರ್ಷಕವಾಗಿತ್ತು.
ಕೃಷ್ಣಸ್ವಾಮಿ ದೇವಸ್ಥಾನದಲ್ಲಿ ಬಾಲಕೃಷ್ಣನ ಮೂರ್ತಿಯನ್ನು ತೊಟ್ಟಿಲಲ್ಲಿರಿಸಿ ಬೆಣ್ಣೆ, ಚಕ್ಕುಲಿ, ನಿಪ್ಪಟ್ಟು, ಕೋಡುಬಳೆ ಹಾಗೂ ಹಣ್ಣುಗಳಿಂದ ಸಿಂಗರಿಸಲಾಗಿತ್ತು. ದೇವಾಲಯದಲ್ಲಿ ಮಹಾಮಂಗಳಾರತಿಯ ನಂತರ ಪ್ರಸಾದವನ್ನು ವಿನಿಯೋಗಿಸಲಾಯಿತು. ಪಟ್ಟಣದ ಉಲ್ಲೂರುಪೇಟೆಯ ಭಜನೆ ಮಂದಿರದಲ್ಲಿರುವ ಪುರಾತನ ತಂಜಾವೂರು ಚಿತ್ರಕಲೆಯ ಬಾಲಕೃಷ್ಣನ ಚಿತ್ರಪಟಕ್ಕೆ ವಿಶೇಷ ಅಲಂಕಾರವನ್ನು ಮಾಡಿ ಪೂಜೆಯನ್ನು ನೆರವೇರಿಸಲಾಯಿತು. ಕೆ.ಪಿ.ಸಿ.ಸಿ. ಉಪಾಧ್ಯಕ್ಷ ವಿ.ಮುನಿಯಪ್ಪ, ಮಾಜಿ ಜಿಲ್ಲಾ ಪಂಚಾಯತಿ ಸದಸ್ಯ ಸುಬ್ರಮಣಿ ಪೂಜೆಯಲ್ಲಿ ಪಾಲ್ಗೊಂಡಿದ್ದರು.
ಪ್ರಥಮ ಬಾರಿಗೆ ತಾಲ್ಲೂಕು ಕಚೇರಿಯ ಮುಂಭಾಗದಲ್ಲಿ ನಾಡಹಬ್ಬಗಳ ಆಚರಣಾ ಸಮಿತಿಯಿಂದ ಶ್ರೀಕೃಷ್ಣ ಜಯಂತಿಯನ್ನು ಆಯೋಜಿಸಿದ್ದು, ಶಾಸಕ ಎಂ.ರಾಜಣ್ಣ ಉದ್ಘಾಟಿಸಿ ಮಾತನಾಡಿ, ‘ಶ್ರೀಕೃಷ್ಣ ಭರತಖಂಡದ ಐಕ್ಯತೆಗಾಗಿ ಶ್ರಮಿಸಿದ ಮಹಾನುಭಾವ. ಶ್ರೀಕೃಷ್ಣ ಯಾವುದೇ ರಾಜ್ಯದ ರಾಜನಾಗದಿದ್ದರೂ ದೇಶದಲ್ಲಿದ್ದ ಆಗಿನ ಎಲ್ಲಾ ರಾಜರಿಂದಲೂ ಪೂಜಿಸಿಕೊಂಡಥಹ ಶ್ರೇಷ್ಠ ವ್ಯಕ್ತಿ. ದೇಶದಲ್ಲಿ ಧರ್ಮದ ಸ್ಥಾಪನೆಗಾಗಿ ಅಧರ್ಮದ ಹಾದಿಯಲ್ಲಿದ್ದವರನ್ನೆಲ್ಲಾ ನಾಶ ಮಾಡಿ, ಜಗತ್ತಿಗೆ ಗೀತೆಯನ್ನು ನೀಡಿ ಬದುಕುವ ಮಾರ್ಗವನ್ನು ತಿಳಿಸಿಕೊಟ್ಟಿದ್ದಾರೆ. ಶ್ರೀಕೃಷ್ಣ ಯಾವುದೇ ಜಾತಿಗೆ ಸೀಮಿತವಾಗಿಲ್ಲ. ಮನುಕುಲಕ್ಕೇ ಸೇರುವಂಥಹ ಶ್ರೇಷ್ಠ ವ್ಯಕ್ತಿತ್ವ. ಗೀತೆಯ ಸಾರವನ್ನು ಜನಸಾಮಾನ್ಯರಿಗೆ ತಲುಪಿಸುವುದು ಮತ್ತು ಅದನ್ನು ಅಳವಡಿಸಿಕೊಳ್ಳುವುದು ಸಮಾಜದ ಏಳಿಗೆಗೆ ಅತ್ಯಗತ್ಯ’ ಎಂದು ಹೇಳಿದರು.
ತಹಶೀಲ್ದಾರ್ ಜಿ.ಎ.ನಾರಾಯಣಸ್ವಾಮಿ, ಜಿಲ್ಲಾ ಪಂಚಾಯತಿ ಸದಸ್ಯ ನಾರಾಯಣಸ್ವಾಮಿ, ತಾಲ್ಲೂಕು ಯಾದವ ಸಂಘದ ಅಧ್ಯಕ್ಷ ಯೋಗಾನಂದ, ಯಾದವ ಸಂಘದ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಡಿ.ಆರ್.ನರನಿಂಹರಾಜು, ಕೆ.ಎಂ.ಎಫ್. ನಿರ್ದೇಶಕ ಬಂಕ್ ಮುನಿಯಪ್ಪ, ಡಾ.ಡಿ.ಟಿ.ಸತ್ಯನಾರಾಯಣರಾವ್ ಕಾರ್ಯಕ್ರಮದಲ್ಲಿ ಮಾತನಾಡಿದರು.
ಮೆರವಣಿಗೆಯಲ್ಲಿ ಭಾಗವಹಿಸಿದ್ದ ಎಲ್ಲಾ ಪಲ್ಲಕ್ಕಿಗಳ ತಂಡದವರಿಗೆ ನೆನಪಿನ ಕಾಣಿಕೆಯನ್ನು ನೀಡಲಾಯಿತು. ತಾಲ್ಲೂಕು ಪಂಚಾಯತಿ ಅಧ್ಯಕ್ಷೆ ಆಂಜಿನಮ್ಮ, ಮಾಜಿ ಅಧ್ಯಕ್ಷ ವೇಣುಗೋಪಾಲ್, ಪಿ.ಎಲ್.ಡಿ. ಬ್ಯಾಂಕ್ ಮಾಜಿ ಉಪಾಧ್ಯಕ್ಷ ಅಶ್ವತ್ಥಪ್ಪ, ಪುರಸಭೆ ಸದಸ್ಯ ಲಕ್ಷ್ಮಣ್, ಡಿ.ಬಿ.ವೆಂಕಟೇಶ್, ಆರ್.ವಿಜಯಕುಮಾರ್, ಎಸ್.ಎ.ನಾಗರಾಜ್, ಕುಮಾರ್, ರಾಮಚಂದ್ರಪ್ಪ, ಗುರುರಾಜರಾವ್, ರಜಸ್ವ ನಿರೀಕ್ಷಕ ಸುಬ್ರಮಣಿ ಮತ್ತಿತರರು ಈ ಸಂದರ್ಭದಲ್ಲಿ ಹಾಜರಿದ್ದರು.
ಶಿಡ್ಲಘಟ್ಟದಲ್ಲಿ ವೈಭವದಿಂದ ಶ್ರೀಕೃಷ್ಣ ಜನ್ಮಾಷ್ಠಮಿ ಆಚರಣೆ
ಕೋಟೆ ಆಂಜನೇಯ ಸ್ವಾಮಿ ದೇವಾಲಯದಲ್ಲಿ ವಿಶೇಷ ಪೂಜಾ ಕಾರ್ಯಕ್ರಮ
ತಾಲ್ಲೂಕು ಸವಿತಾ ಸಮಾಜ ಹಾಗೂ ತಾಲ್ಲೂಕು ಸವಿತಾ ಕಲಾವಿದರ ಸಂಘದ ವತಿಯಿಂದ ಮೂರನೇ ಶ್ರಾವಣ ಶನಿವಾರದ ಪ್ರಯುಕ್ತ ಕೋಟೆ ಆಂಜನೇಯ ಸ್ವಾಮಿ ದೇವಾಲಯದಲ್ಲಿ ವಿಶೇಷ ಪೂಜಾ ಕಾರ್ಯಕ್ರಮವನ್ನು ಏರ್ಪಡಿಸಲಾಗಿತ್ತು.
ಪಟ್ಟಣದ ಅಶೋಕ ರಸ್ತೆಯಲ್ಲಿ ಅನಾದಿಕಾಲದಿಂದಲೂ ನೆಲೆಸಿರುವ ಕೋಟೆ ಆಂಜನೇಯ ಸ್ವಾಮಿ ದೇವಾಲಯದಲ್ಲಿ ಅಭಿಷೇಕ, ವಿಶೇಷ ಹೂವಿನ ಅಲಂಕಾರ ಮಹಾ ಮಂಗಳಾರತಿ, ಪ್ರಸಾದ ವಿನಿಯೋಗ ನಡೆದಿದ್ದು ಸವಿತಾ ಸಮಾಜದ ಎಲ್ಲಾ ಮುಖಂಡರು ಯುವಕರು ಹಾಗು ಪಟ್ಟಣದ ನಾಗರೀಕರು ಪೂಜೆ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು.
ಊರಿನ ಪ್ರಮುಖ ಬೀದಿಗಳಲ್ಲಿ ಮುತ್ತಿನ ಪಲ್ಲಕಿಯಲ್ಲಿ ಮಂಗಳವಾದ್ಯಗಳೊಂದಿಗೆ ಸ್ವಾಮಿಯ ಮೆರವಣಿಗೆ ಮಾಡಲಾಯಿತು.
ಸವಿತಾ ಸಮಾಜದ ತಾಲ್ಲೂಕು ಅಧ್ಯಕ್ಷ ಮುನಿಕೃಷ್ಣಪ್ಪ, ತಿಮ್ಮರಾಜು, ನಾಗಪ್ಪ, ಪ್ರೊ. ಆರ್ ಶ್ರೀನಿವಾಸ್, ಚಂದ್ರು, ರಮೇಶ್, ಬಾಲಕೃಷ್ಣ, ನಾರಾಯಣ ಸ್ವಾಮಿ, ಮುನಿಶಾಮಪ್ಪ, ಮತ್ತಿತರರು ಹಾಜರಿದ್ದರು.
ಶಿಡ್ಲಘಟ್ಟದ ನೆಹರೂ ಕ್ರೀಡಾಂಗಣದಲ್ಲಿ 68ನೇ ಸ್ವಾತಂತ್ರ್ಯ ದಿನಾಚರಣೆ
ಪಟ್ಟಣದ ನೆಹರೂ ಕ್ರೀಡಾಂಗಣದಲ್ಲಿ 68ನೇ ಸ್ವಾತಂತ್ರ್ಯ ದಿನಾಚರಣೆಯನ್ನು ಉದ್ದೇಶಿಸಿ ಮಾತನಾಡಿದ ಶಾಸಕ ಎಂ. ರಾಜಣ್ಣ ದೇಶಾದ್ಯಂತ ಉದ್ಭವಿಸಿರುವ ಜ್ವಲಂತ ಸಮಸ್ಯೆಗಳ ಪರಿಹಾರ ಕೇವಲ ಯುವಶಕ್ತಿ ವಿದ್ಯಾವಂತರಾದಲ್ಲಿ ಮಾತ್ರ ಸಾದ್ಯ ಎಂದು ಅಭಿಪ್ರಾಯಪಟ್ಟರು.
ದೇಶದಲ್ಲಿ ತುಂಬಿ ತುಳುಕುತ್ತಿರುವ ಭ್ರಷ್ಟಾಚಾರ, ಭಯೋತ್ಪಾದನೆ, ಅರಾಜಕತೆ ಇವುಗಳಿಗೆ ಮೂಲ ಕಾರಣ ಅನಕ್ಷರತೆ, ಬಡತನ ಕಾರಣವಾದ ಮಾತ್ರಕ್ಕೆ ಯುವಜನತೆ ತಪ್ಪು ದಾರಿಯನ್ನಿಡುವ ಮನೋಭಾವವನ್ನು ಮೂಡಿಸಿಳ್ಳಬಾರದು. ಶ್ರಮಪಟ್ಟು ದುಡಿದು ಜೀವನ ನಡೆಸುವ ಮೂಲಕ ಸ್ವಾವಲಂಬಿಗಳಾಗಿ ಬದುಕುವ ರೀತಿಯನ್ನು ಪ್ರಾಥಮಿಕ ಹಂತದಿಂದಲೇ ಮೈಗೂಡಿಸಿಕೊಳ್ಳಬೇಕೆಂದು ವಿದ್ಯಾರ್ಥಿಗಳಿಗೆ ಕರೆ ನೀಡಿದರು.
ಬಯಲು ಸೀಮೆ ಪ್ರದೇಶವಾದ ನಮ್ಮ ಎರಡೂ ಜಿಲ್ಲೆಗಳಲ್ಲಿ ಬಹಳಷ್ಟು ನೀರಿನ ಸಮಸ್ಯೆ ಇದ್ದು ಹನಿ,ಹನಿ ನೀರನ್ನು ಒಗ್ಗೂಡಿಸಿ ಬೆಳೆ ಬೆಳೆದು ಜೀವನ ನಡೆಸುವ ಪರಿಸ್ಥಿತಿ ನಿರ್ಮಾಣವಾಗಿದೆ. ಈ ನಿಟ್ಟಿನಲ್ಲಿ ಪ್ರಕೃತಿಯೂ ಕೂಡ ಸಹಕರಿಸುತ್ತಿಲ್ಲ. ಇಂದಿನ ಮಕ್ಕಳೇ ಮುಂದಿನ ಪ್ರಜೆಗಳು, ವಿದ್ಯಾರ್ಥಿ ಜೀವನವನ್ನು ದೇಶದ ಒಳತಿಗಾಗಿ ಶ್ರಮಿಸುವಂತಹ ದೇಶಪ್ರೇಮವನ್ನು ವಿದ್ಯಾರ್ಥಿಗಳಿಗೆ ಶಿಕ್ಷಕರು ಬೋಧಿಸಬೇಕು ಎಂದರು.
ಇದೇ ಸಂದರ್ಭದಲ್ಲಿ ವಿವಿಧ ಶಾಲೆಗಳ ಮಕ್ಕಳಿಂದ ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ನಡೆಸಿಕೊಡಲಾಯಿತು. ಕಾರ್ಯಕ್ರಮದಲ್ಲಿ ಸ್ವಾತಂತ್ರಹೋರಾಟಗಾರರನ್ನು ಹಾಗು ಶಿಕ್ಷಕರನ್ನು ಸನ್ಮಾನಿಸಲಾಯಿತು, ವಿಕಲಚೇತನರಿಗೆ ಟ್ರೈ್ರಿಸೈಕಲ್ ಹಾಗು ವಾಟರ್‌ಬೆಡ್‌ಗಳನ್ನು ಹದಿನೈದು ಜನ ಫಲಾನುಭವಿಗಳಿಗೆ ವಿತರಿಸಲಾಯಿತು.
ತಹಶೀಲ್ದಾರ್ ನಾರಾಯಣ ಸ್ವಾಮಿ, ತಾಲ್ಲೂಕು ಪಂಚಾಯತಿ ಅಧ್ಯಕ್ಷೆ ಆಂಜಿನಮ್ಮ, ಉಪಾಧ್ಯಕ್ಷ ಡಿ ಎಸ್ ಎನ್ ರಾಜು, ಪುರಸಭೆ ಅಧಕ್ಷೆ ಮುಸ್ಟರಿ ತನ್ವೀರ್, ಉಪಾಧ್ಯಕ್ಷೆ ಸುಮಿತ್ರ ರಮೇಶ್, ಬಂಕ್ ಮುನಿಯಪ್ಪ, ಸುರೇಂದ್ರಗೌಡ, ರಾಮಚಂದ್ರಪ್ಪ, ಬಿ.ಇ.ಒ ರಘುನಾಥ ರೆಡ್ಡಿ, ಸರ್ಕಲ್ ಇನ್ಸ್‌ಪೆಕ್ಟರ್ ಶ್ರೀನಿವಾಸಮೂರ್ತಿ, ಎ.ಇ.ಇ ಗಣಪತಿ ಸಾಕರೆ ಮುಂತಾದವರು ಹಾಜರಿದ್ದರು.
ಪಾರಂಪರಿಕ ವೃಕ್ಷಗಳ ವೆಂಕಟಾಪುರ
ಸುತ್ತಲೂ ಏಳು ಬೆಟ್ಟಗಳು. ನಡುವೆ ಮೂರು ಕೆರೆಗಳು. ಮೊದಲ ಕೆರೆಯ ಕಟ್ಟೆಯ ಮೇಲೆ ಪುರಾತನ ಬೇವಿನ ಮರಗಳ ಸಾಲು. ಅವುಗಳಲ್ಲಿ ಒಂದು ಇನ್ನೂರು ವರ್ಷಕ್ಕೂ ಹಳೆಯದು. ಇದು ಕಥೆಯಲ್ಲ. ಮಲೆನಾಡಿನ ಪ್ರದೇಶವೊಂದರ ವರ್ಣನೆಯೂ ಅಲ್ಲ. ತಾಲ್ಲೂಕಿನ ಸಾದಲಿ ಹೋಬಳಿಯ ಎಸ್.ವೆಂಕಟಾಪುರದ ಬಳಿಯಿರುವ ಸುಂದರ ದೃಶ್ಯವಿದು.
ಇನ್ನೂರು ವರ್ಷಗಳ ಇತಿಹಾಸ ಹೊಂದಿರುವ ಬೇವಿನ ಮರ ಸಾಮಾನ್ಯವಾದುದ್ದೇನಲ್ಲ. ಜೈವಿಕ ವಿಜ್ಞಾನ ವೈವಿಧ್ಯ ಕಾಯ್ದೆ 2002ರ ಕಾಲಂ 63(2)(G) ಅನ್ವಯ ಕರ್ನಾಟಕ ಜೀವ ವೈವಿಧ್ಯ ಮಂಡಳಿಯೂ ಪರಂಪರೆ ಮರಗಳು (ಹರಿಟೇಜ್ ಟ್ರೀಸ್) ಎಂದು ಆಯ್ದುಕೊಂಡಿರುವ ರಾಜ್ಯದ ಹತ್ತು ಮರಗಳಲ್ಲಿ ಈ ವಿಶಿಷ್ಟ ರೀತಿಯ ಮರವೂ ಒಂದು. ಬಯಲುಸೀಮೆ ಮತ್ತು ಬರಡು ಸೀಮೆ ಎಂದು ಕರೆಯಲ್ಪಡುವ ಜಿಲ್ಲೆಯಲ್ಲಿ ಈ ಅಪರೂಪದ ಮರ ಇರುವುದು ವಿಶೇಷ.
ಸುಮಾರು ಇಪ್ಪತ್ತು ಅಡಿ ಸುತ್ತಳತೆ ಹೊಂದಿರುವ ಈ ಮರವು ಎಸ್.ವೆಂಕಟಾಪುರ, ಪೂಸಗಾನದೊಡ್ಡಿ, ನೇರಳೇಮರದಹಳ್ಳಿ ಮತ್ತು ಎಸ್.ಗೊಲ್ಲಹಳ್ಳಿ ಎಂಬ ನಾಲ್ಕು ಗ್ರಾಮಗಳಿಗೆ ಸೇರಿದೆ. ಕೆರೆ ಕಟ್ಟೆಯು ಬೆಟ್ಟಗಳ ನಡುವೆ ನಿರ್ಮಾಣಗೊಂಡಿದೆ. ಎಸ್.ವೆಂಕಟಾಪುರ ಗ್ರಾಮದ ಗದ್ದೆಗಳಿಗೆ ಈ ಕೆರೆಯೇ ನೀರಿನ ಮೂಲ. ಈ ಪರಂಪರೆಯ ವೃಕ್ಷದೊಂದಿಗೆ ಇನ್ನೂ ಹತ್ತು ಬೃಹತ್ ಗಾತ್ರದ ಬೇವಿನ ಮರಗಳಿವೆ. ಸುತ್ತಲೂ ಹೊಂಗೆ ತೋಪಿದೆ. ವೃಕ್ಷದ ಕೆಳಗೆ ಮುನೇಶ್ವರನ ಪುಟ್ಟ ದೇಗುಲವಿದೆ. ಆದರಿಂದಲೇ ಈ ಕಟ್ಟೆಗೆ ಮುನಿಯಪ್ಪನ ಕಟ್ಟೆ ಎಂದು ಕರೆಯಲಾಗುತ್ತದೆ. ಇಲ್ಲಿ ಗಂಗಮ್ಮ ಮತ್ತು ಅಕ್ಕಯ್ಯಗಾರು ಹೆಸರಿನ ಪುಟ್ಟ ಗುಡಿಗಳೂ ಇವೆ. ದೇಗುಲದ ಮುಂಭಾಗದಲ್ಲಿ ದೇವಕಣಿಗಲೆ ಮರವಿದೆ. ಕಟ್ಟೆಯ ಬಲಭಾಗದಲ್ಲಿ ಬಿಲ್ಲುಬಾಣಗಳನ್ನು ಹಿಡಿದಿರುವ ಮೂವರು ವೀರರ ವೀರಗಲ್ಲು ಇದೆ. ಎಷ್ಟೇ ಬಿರುಬಿಸಿಲಿದ್ದರೂ ಈ ಪ್ರದೇಶ ಮಾತ್ರ ಸದಾ ತಂಪಾಗಿರುತ್ತದೆ.
‘ಪ್ರತಿ ಮಂಗಳವಾರ ಮತ್ತು ಶುಕ್ರವಾರ ದೇವರ ಪೂಜೆಗಾಗಿ ಇಲ್ಲಿ ಜನ ಸೇರುತ್ತಾರೆ. ಪ್ರತಿ ವರ್ಷ ಏಪ್ರಿಲ್‌ನಲ್ಲಿ ನಾಲ್ಕೂ ಗ್ರಾಮಗಳ ಜನರು ಜಾತ್ರೆ ನಡೆಸುತ್ತಾರೆ. ಇಷ್ಟಾರ್ಥಗಳು ನೆರವೇರುತ್ತವೆ ಎಂಬ ನಂಬಿಕೆಯಿಂದ ಅನೇಕ ಕಡೆಗಳಿಂದ ಭಕ್ತರು ಆಗಮಿಸುತ್ತಾರೆ. ಕಟ್ಟೆಯ ಮೇಲಿರುವ ಮರಗಳ ಕಟ್ಟಿಗೆಗಳನ್ನು ಯಾರೂ ತೆಗೆದುಕೊಂಡು ಹೋಗಬಾರದು. ಕೆಡುಕಾಗುತ್ತದೆ ಎಂಬ ನಂಬಿಕೆಯು ಹಲವು ಜನರಲ್ಲಿದೆ’ ಎಂದು ದೇವಾಲಯದ ಅರ್ಚಕ ಗುರುಮೂರ್ತಿ ತಿಳಿಸಿದರು.
‘ಏಳು ಬೆಟ್ಟಗಳನ್ನೂ ನಲ್ಲಕೊಂಡಲು ಎಂದು ಕರೆಯುತ್ತಾರೆ. ಇಲ್ಲಿರುವ ಮೂರು ಕೆರೆಗಳನ್ನು ಮೂವರು ವೇಶ್ಯೆಯರು ಕಟ್ಟಿಸಿದ್ದು, ತಿಪ್ಪಸಾನಿಕೆರೆ, ರಾಜಸಾನಿಕೆರೆ ಮತ್ತು ನಲ್ಲಸಾನಿಕೆರೆ ಎಂದು ಅವರ ಹೆಸರಿನಿಂದಲೇ ಕರೆಯಲ್ಪಡುತ್ತವೆ. ಈ ಬೆಟ್ಟಗಳಲ್ಲಿ ಚಿರತೆ, ಜಿಂಕೆ, ಮೊಲ, ಕರಡಿ, ನರಿ ಮುಂತಾದ ಪ್ರಾಣಿಗಳು ಇದ್ದವು. ತಿಪ್ಪಸಾನಿಕೆರೆ ಅಥವಾ ತಿಪ್ಪರಾಸಕೆರೆಯ ಕಟ್ಟೆಯ ಮೇಲಿರುವ ಬೇವಿನ ಮರಗಳನ್ನು ನಾನು ಚಿಕ್ಕಂದಿನಿಂದಲೇ ನೋಡಿದ್ದೇನೆ. ಕೆರೆಗಳನ್ನು ಕಟ್ಟಿದ ಮಹಾತಾಯಂದಿರೆ ಇವನ್ನೂ ನೆಟ್ಟಿರಬೇಕು’ ಎನ್ನುತ್ತಾರೆ ಗ್ರಾಮದ ೯೪ರ ವಯೋವೃದ್ಧ ನರಸರಾಮಪ್ಪ.
‘ಇಲ್ಲಿ ಸುತ್ತ ಇರುವ ಬೆಟ್ಟಗಳೆಲ್ಲ ಚಾರಣಕ್ಕೆ ಯೋಗ್ಯವಾಗಿವೆ. ಒಂದೊಂದರಲ್ಲೀ ಒಂದೊಂದು ವಿಶೇಷವಿದೆ. ಪರಂಪರೆ ವೃಕ್ಷವೆಂದು ಸರ್ಕಾರ ಹೆಸರಿಸಿರುವುದರಿಂದ ಪ್ರವಾಸೋದ್ಯಮ ಇಲಾಖೆ ಸೂಕ್ತವಾಗಿ ಕೆಲಸ ಮಾಡಿದರೆ ಈ ಪ್ರದೇಶದ ಅಭಿವೃದ್ಧಿ ಮತ್ತು ಸಂರಕ್ಷಣೆಯಾಗುತ್ತದೆ. ಸ್ಥಳೀಯರಿಗೆ ಉದ್ಯೋಗ ದೊರಕುತ್ತದೆ. ತಾಲ್ಲೂಕಿನ ಮೂಲೆಯಲ್ಲಿರುವ ಈ ಪ್ರದೇಶ ಮುಂದುವರೆಯಲು ಸಾಧ್ಯವಾಗುತ್ತದೆ’ ಎಂದು ಹಿರಿಯ ಶಿಕ್ಷಕ ಕೆ.ಎನ್.ಲಕ್ಷ್ಮೀನರಸಿಂಹಯ್ಯ ಹೇಳಿದರು.
ಬಶೆಟ್ಟಹಳ್ಳಿ ಗ್ರಾಮದಲ್ಲಿ ಉಚಿತ ಆರೋಗ್ಯ ಶಿಬಿರ
ತಾಲ್ಲೂಕಿನ ಬಶೆಟ್ಟಹಳ್ಳಿ ಗ್ರಾಮದಲ್ಲಿ ಈಚೆಗೆ ಉಚಿತ ಆರೋಗ್ಯ ತಪಾಸಣೆ ಹಾಗು ಶಸ್ತ್ರ ಚಿಕಿತ್ಸಾ ಶಿಬಿರವನ್ನು ಎಂ. ಎಸ್. ರಾಮಯ್ಯ ಆಸ್ಪತ್ರೆ, ಎ. ಡಿ. ಎ. ಟಿ ಎಸ್ ಹಾಗೂ ಅಂಬೇಡ್ಕರ್ ಯುವಸೇನೆ ಸಹಯೋಗದೊಂದಿಗೆ ಆಯೋಜಿಸಲಾಗಿತ್ತು.
ಆರೋಗ್ಯ ಶಿಬಿರವನ್ನು ಉದ್ಘಾಟಿಸಿ ಮಾತನಾಡಿದ ಅಂಬೇಡ್ಕರ್ ಯುವಸೇನೆ ರಾಜ್ಯಾಧ್ಯಕ್ಷ ಕೋದಂಡರಾಮ ಮಾತನಾಡಿ, ‘ಜಿಲ್ಲೆಯಲ್ಲಿ ಸುಮಾರು ವರ್ಷಗಳಿಂದ ಬಡ ಕೂಲಿ ದಲಿತ ಕುಟುಂಬಗಳಿದ್ದು, ಅವರ ಸಾಮಾಜಿಕ, ಶೈಕ್ಷಣಿಕ ಬೆಳವಣಿಗೆಗಾಗಿ ಈ ರೀತಿಯ ಕಾರ್ಯಕ್ರಮಗಳು ಅತ್ಯವಶ್ಯಕ’ ಎಂದು ಹೇಳಿದರು
ಶಿಬಿರದಲ್ಲಿ 739 ಜನರಿಗೆ ಉಚಿತವಾಗಿ ಔಷಧಿ ನೀಡಲಾಯಿತು. ೭೭ ಜನರನ್ನು ಹೆಚ್ಚಿನ ಉಚಿತ ಚಿಕಿತ್ಸೆಗಾಗಿ ಎಂ. ಎಸ್. ರಾಮಯ್ಯ ಆಸ್ಪತ್ರೆಗೆ ಬರುವಂತೆ ತಿಳಿಸಿದರು.
ಎಂ.ಎಸ್. ರಾಮಯ್ಯ ಆಸ್ಪತ್ರೆಯ ಸಮಾಜ ಕಲ್ಯಾಣ ಅಧಿಕಾರಿ ಲಕ್ಷಿನಾರಾಯಣ, ಎ. ಡಿ. ಎ. ಟಿ. ಎಸ್ ವೆಂಕಟೇಶ್, ಪುಷ್ಪ, ಪಿ ವೆಂಕಟರಾಯಪ್ಪ, ಕಾಂತರಾಜ್, ಜಾರ್ಜಮಣಿ, ನಾಗಾರ್ಜುನ, ನಾರಾಯಣಸ್ವಾಮಿ,ು ಅಂಬೇಡ್ಕರ್ ಯುವಸೇನೆಯ ದೇವಾ ಮತ್ತಿತರರು ಈ ಸಂದರ್ಭದಲ್ಲಿ ಹಾಜರಿದ್ದರು.
ಚೀಮಂಗಲ ಸರ್ಕಾರಿ ಪ್ರೌಢಶಾಲೆಯಲ್ಲಿ ಕಲಾಸಂಗಮ ಸಾಂಸ್ಕೃತಿಕ ಕಾರ್ಯಕ್ರಮ
ತಾಲ್ಲೂಕಿನ ಚೀಮಂಗಲ ಸರ್ಕಾರಿ ಪ್ರೌಢಶಾಲೆಯಲ್ಲಿ ಈಚೆಗೆ ರತ್ನಾವಳಿ ನಾಟ್ಯ ಕ್ರೀಡಾ ಸಾಮಾಜಿಕ ಅಭಿವೃದ್ಧಿ ಸಂಸ್ಥೆಯಿಂದ ಕಲಾಸಂಗಮ ಎಂಬ ಸಾಂಸ್ಕೃತಿಕ ಕಾರ್ಯಕ್ರಮವನ್ನು ಆಯೋಜಿಸಲಾಗಿತ್ತು.
ಸಾಂಸ್ಕೃತಿಕ ಕಾರ್ಯಕ್ರಮದಲ್ಲಿ ಮೂರು ನಾಟಕಗಳನ್ನು ಪ್ರದರ್ಶಿಸಲಾಯಿತು. ವಿಶ್ವ ಸಾಂಸ್ಕೃತಿಕ ಮತ್ತು ಸಾಮಾಜಿಕ ಅಭಿವೃದ್ಧಿ ಸಂಸ್ಥೆ ವತಿಯಿಂದ ಪೌರಾಣಿಕ ನಾಟಕ ‘ಸಮಾಗಮ’, ಎಚ್.ಕ್ರಾಸ್‌ನ ಸ್ವಾಮಿ ವಿವೇಕಾನಂದ ಸಾಂಸ್ಕೃತಿಕ ಮತ್ತು ಸಾಮಾಜಿಕ ಅಭಿವೃದ್ಧಿ ಯುವಕರ ಸಂಘದಿಂದ ಜಾನಪದ ನೃತ್ಯ, ಜಾನಪದ ಗೀತ ಗಾಯನ, ರಂಗಗೀತೆಗಳ ಗಾಯನ, ಗುಡಗೊಂಡಹಳ್ಳಿಯ ತಂಡದಿಂದ ರೌಡಿ ರಂಗ ಹಾಸ್ಯ ನಾಟಕ, ರತ್ನಾವಳಿ ನಾಟ್ಯ ಕ್ರೀಡಾ ಸಾಮಾಜಿಕ ಅಭಿವೃದ್ಧಿ ಸಂಸ್ಥೆಯಿಂದ ಐತಿಹಾಸಿಕ ನಾಟಕ ‘ಒತ್ತೆ’ ಪ್ರದರ್ಶಿಸಲಾಯಿತು.
ಶಾಲೆಯ ಮುಖ್ಯ ಶಿಕ್ಷಕ ಎಸ್.ಶಿವಶಂಕರ್, ಶಾಲಾಭಿವೃದ್ಧಿ ಸಮಿತಿ ಅಧ್ಯಕ್ಷ ಮುನೇಗೌಡ, ಗ್ರಾಮ ಪಂಚಾಯಿತಿ ಅಧ್ಯಕ್ಷ ಈಶ್ವರ್, ಕಲಾವಿದರಾದ ಮುನಿನಾರಾಯಣ, ಸಿ.ಆಂಜಿನಪ್ಪ, ಕೆ.ಎ.ರಾಜಪ್ಪ, ಎಂ.ಆಶಾ, ಚೈತನ್ಯ, ಚಂದ್ರಿಕಾ, ಚೇತನ್, ಚೈತ್ರಾ, ಲಕ್ಷ್ಮಿ, ಸ್ವಾಮಿ ವಿವೇಕಾನಂದ ಮತ್ತಿತರರು ಹಾಜರಿದ್ದರು.
ರಾಘವೇಂದ್ರಸ್ವಾಮಿಯವರ ಆರಾಧನಾ ಮಹೋತ್ಸವ
ಪಟ್ಟಣದ ಮುತ್ತೂರು ಬೀದಿಯ ರಾಘವೇಂದ್ರಸ್ವಾಮಿ ದೇವಾಲಯದಲ್ಲಿ ಮಂಗಳವಾರ ರಾಘವೇಂದ್ರಸ್ವಾಮಿಯವರ 343ನೇ ಆರಾಧನಾ ಮಹೋತ್ಸವವನ್ನು ವಿಜೃಂಭಣೆಯಿಂದ ಆಚರಿಸಲಾಯಿತು.
ಮೂರು ದಿನಗಳ ಕಾಲ ನಡೆಸುವ ಆರಾಧನಾ ಮಹೋತ್ಸವವು ಸೋಮವಾರ ಪ್ರಾರಂಭವಾಯಿತು. ಸುಪ್ರಭಾತ ಸೇವೆ, ಪಂಚಾಮೃತ ಅಭಿಷೇಕ, ಸಹಸ್ರನಾಮಾರ್ಚನೆ, ಹಸ್ತೋದಕ, ಮಹಾಮಂಗಳಾರತಿ ನಡೆದು ಸಂಜೆ ಪತಂಜಲಿ ಯೋಗ ಶಿಕ್ಷಣ ಅಮಿತಿ ವತಿಯಿಂದ ಹಾಗೂ ಗಾಯಿತ್ರಿ ಮಹಿಳಾ ಮಂಡಳಿಯಿಂದ ಭಜನೆ ನಡೆಯಿತು.
ಮಂಗಳವಾರ ಸುಪ್ರಭಾತ ಸೇವೆ, ಪಂಚಾಮೃತ ಅಭಿಷೇಕ, ಸಹಸ್ರನಾಮಾರ್ಚನೆಯ ನಂತರ ರಾಯರ ಉತ್ಸವವನ್ನು ಪಟ್ಟಣದ ಪ್ರಮುಖ ಬೀದಿಗಳಲ್ಲಿ ಮಂಗಳವಾದ್ಯಗಳೊಂದಿಗೆ ನಡೆಸಲಾಯಿತು. ಹಸ್ತೋದಕ, ಮಹಾಮಂಗಳಾರತಿಯ ನಂತರ ಬ್ರಾಹ್ಮಣರ ಸಂತರ್ಪಣೆಯನ್ನು ನಡೆಸಲಾಯಿತು.
‘ಸುಮಾರು 30 ವರ್ಷಗಳಿಂದಲೂ ಪಟ್ಟಣದ ರಾಯರ ಮಠದಲ್ಲಿ ಮೂರು ದಿನಗಳ ಆರಾಧನೆಯನ್ನು ನಡೆಸಿಕೊಂಡು ಬರುತ್ತಿದ್ದೇವೆ. ಪೂರ್ವಾರಾಧನೆ, ಮಧ್ಯಾರಾಧನೆ ಮತ್ತು ಉತ್ತರಾರಾಧನೆ ಎಂದು ಮೂರು ದಿನಗಳ ಕಾಲ ನಡೆಯುವ ಆರಾಧನೆಯಲ್ಲಿ ಹೋಮ ಹವನಗಳು, ರಾಯರ ಕಥೆಯನ್ನು ತಿಳಿಸುಕೊಡುವುದು, ವಿಶೇಷ ಪೂಜೆಗಳು, ಭಜನೆ, ಗೀತಗಾಯನಗಳನ್ನು ಆಯೋಜಿಸಲಾಗುತ್ತದೆ. ರಾಯರು ಭಕ್ತಿಯಿಂದ ಪೂಜಿಸುತ್ತಿದ್ದ ರಾಮ, ಕೃಷ್ಣ, ವೇದವ್ಯಾಸ, ಲಕ್ಷ್ಮೀನರಸಿಂಹ ಮತ್ತು ಹಯಗ್ರೀವ ದೇವರುಗಳನ್ನು ಪೂಜಿಸಲಾಗುತ್ತದೆ. ಸರ್ವರಿಗೂ ಸಲ್ಲುವ ರಾಯರ ಮಹಿಮೆಯನ್ನು ಎಲ್ಲರಿಗೂ ಸಾರುವ ಉದ್ದೇಶದಿಂದ ಸಂಜೆಗೆ ದೇವರನಾಮಗಳು ಹಾಗೂ ಶ್ರೀರಾಘವೇಂದ್ರ ವಿಜಯ ಹರಿಕಥೆಯನ್ನು ಆಯೋಜಿಸಿದ್ದೇವೆ. ಬುಧವಾರ ಸಂಜೆ ಶೃಂಗೇರಿ ಸಹೋದರಿಯರಿಂದ ಸಂಗೋತ ಕಚೇರಿ ಹಾಗೂ ಎನ್.ಮೇಘನಾ ಅವರಿಂದ ದೇವರನಾಮಗಳನ್ನು ಆಯೋಜಿಸಿದ್ದೇವೆ’ ಎಂದು ಬ್ರಾಹ್ಮಣ ಸಂಘದ ಜಿಲ್ಲಾಧ್ಯಕ್ಷ ಎಂ.ವಾಸುದೇವರಾವ್ ತಿಳಿಸಿದರು.
ಸರ್ಕಾರಿ ಶಾಲೆಯ ಆವರಣದಲ್ಲಿ ನೂರು ಸಸಿ
ಶಾಲೆ, ವಿದ್ಯಾರ್ಥಿಗಳು, ಶಿಕ್ಷಕರು, ಗ್ರಾಮಸ್ಥರು ಮತ್ತು ಸಮುದಾಯದ ಸಾಂಘಿಕ ಪ್ರಯತ್ನದಿಂದಾಗಿ ತಾಲ್ಲೂಕಿನ ವರದನಾಯಕನಹಳ್ಳಿಯ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯ ಆವರಣದಲ್ಲಿ ನೂರು ಸಸಿಗಳನ್ನು ನೆಡುವ ಕೆಲಸ ಶನಿವಾರ ನಡೆದಿದೆ.
ತಾಲ್ಲೂಕಿನ ವರದನಾಯಕನಹಳ್ಳಿ ಗ್ರಾಮದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯ ಆವರಣ ಎರಡು ಎಕರೆ ಪ್ರದೇಶವನ್ನು ಹೊಂದಿದ್ದು, ಇತ್ತೀಚೆಗಷ್ಟೆ ಸರ್ಕಾರಿ ಹಣ ಮತ್ತು ಗ್ರಾಮಸ್ಥರ ನೆರವಿನಿಂದ ಕಾಂಪೋಂಡ್ ನಿರ್ಮಿಸಲಾಗಿತ್ತು. ‘ವಿಷನ್ ಗ್ರೀನ್’ ಎಂಬ ಸಂಘವನ್ನು ಕಟ್ಟಿಕೊಂಡು ಜಿಲ್ಲೆಯಲ್ಲಿ ಹಸಿರು ಬೆಳೆಸುವ ಉದ್ದೇಶವನ್ನು ಹೊಂದಿರುವ ಒಂದು ತಂಡ ಹಾಲು ಸಕ್ಕರೆ ಬೆರೆತಂತೆ ಶಾಲೆಯೊಂದಿಗೆ ಸೇರಿಕೊಂಡು ಗಿಡಗಳನ್ನು ನೆಡುವ ಯೋಜನೆ ಹಮ್ಮಿಕೊಂಡಿದೆ.
ಚಿಂತಾಮಣಿಯಲ್ಲಿ ಪಿಯುಸಿ ಓದುವಾಗ ಜೊತೆಗಾರರಾಗಿದ್ದವರು ಈಗ ಬೇರೆ ಬೇರೆ ನಗರಗಳಲ್ಲಿ ವಿವಿಧ ಹುದ್ದೆಗಳಲ್ಲಿದ್ದು ತಮ್ಮ ಬದುಕನ್ನು ಕಟ್ಟಿಕೊಳ್ಳುತ್ತಿರುವ ಸುಮಾರು 20 ಮಂದಿಯ ಯುವ ತಂಡವು ತಮ್ಮ ಬೇರನ್ನು ಚಿಗುರಿಸುವ ಕನಸಿನಿಂದ ‘ವಿಷನ್ ಗ್ರೀನ್’ ಎಂಬ ಸಂಘ ಮಾಡಿಕೊಂಡಿದ್ದಾರೆ. ಜಿಲ್ಲೆಯ ಜ್ವಲಂತ ನೀರಿನ ಸಮಸ್ಯೆ ನಿವಾರಣೆಗೆ ಗಿಡ ಮರಗಳನ್ನು ಬೆಳೆಸುವ ಮೂಲಕ ತಮ್ಮ ಅಳಿಲು ಸೇವೆ ಸಲ್ಲಿಸಲು ಮುಂದಾಗಿದ್ದಾರೆ.
ನೇರಳೆ, ಬೇವು, ಮತ್ತಿ, ಸಂಪಿಗೆ, ಹೂವರಸಿ, ಹೊಂಗೆ, ಬೀಟೆ, ಮಹಾಗನಿ, ಬಸವನಪಾದ, ಮಾವು, ಗಸಗಸೆ, ಅರಳಿ, ಕಾಡುಬಾದಾಮಿ, ಅತ್ತಿ, ನುಗ್ಗೆ ಮುಂತಾದ ಸ್ಥಳೀಯ ಗಿಡಗಳನ್ನು ನೆಡಲಾಯಿತು.
‘ನಾವು ಸುಮಾರು 20 ಮಂದಿ ಸ್ನೇಹಿತರು ಮೂರು ತಿಂಗಳಿಗೊಮ್ಮೆ ಸೇರುತ್ತೇವೆ. ನಮ್ಮಿಂದ ನಮ್ಮ ಜಿಲ್ಲೆಗೆ ಸೇವೆ ಸಲ್ಲಿಸುವ ಉದ್ದೇಶದಿಂದ ಸಸಿಗಳನ್ನು ನೆಟ್ಟು ಬೆಳೆಸಲು ಮುಂದಾದೆವು. ಆದರೆ ನಾವು ನೆಟ್ಟು ಹೋದ ಮೇಲೆ ಅದನ್ನು ಪೋಷಿಸಿ ಪೊರೆಯುವ ಜನರ ಅಗತ್ಯವಿದೆ. ನಾವು ಆ ರೀತಿಯ ಸ್ಥಳವನ್ನು ಹುಡುಕುವಾಗ ವರದನಾಯಕನಹಳ್ಳಿ ಗ್ರಾಮದ ಸರ್ಕಾರಿ ಶಾಲಾ ಶಿಕ್ಷಕ ಎಚ್.ವಿ. ವೆಂಕಟರೆಡ್ಡಿ ಅವರ ಪರಿಚಯವಾಯಿತು. ಅವರ ಶಾಲೆಯ ಎರಡು ಎಕರೆ ಸ್ಥಳವಿದ್ದು, ಈಚೆಗಷ್ಟೆ ಕಾಂಪೋಂಡ್ ನಿರ್ಮಿಸಿದ್ದಾರೆ. ಅಲ್ಲಿ ಗ್ರಾಮಸ್ಥರು ಶಾಲೆಯ ಅಭಿವೃದ್ಧಿಗಾಗಿ ಸಹಕಾರ ನೀಡುವಂಥಹವರು. ಹೀಗಾಗಿ ನಮ್ಮ ಚೊಚ್ಚಲ ಪರಿಸರ ಪ್ರಯತ್ನಕ್ಕೆ ಈ ಶಾಲೆಯನ್ನು ಆರಿಸಿಕೊಂಡೆವು. ಶಿಕ್ಷಕರು ಸ್ಥಳೀಯ ಗಿಡಗಳಿಗೆ ಪ್ರಾತಿನಿದ್ಯ ನೀಡಬೇಕು ಎಂದು ಹೇಳಿ ಅರಣ್ಯ ಇಲಾಖೆಯ ನರ್ಸರಿಯಿಂದ ಗಿಡಗಳನ್ನು ತಂದರು. ನಾವು ಗುಂಡಿಗಳನ್ನು ಜೆಸಿಬಿ ಮೂಲಕ ತೋಡಿಸಿಕೊಟ್ಟೆವು. ಶಾಲೆಯಲ್ಲಿ ನೀರಿನ ವ್ಯವಸ್ಥೆಯಿದೆ. ನೂರು ಗಿಡಗಳಿಗೆ ಮಕ್ಕಳು ನೀರು ಹಾಕುವುದು ಕಷ್ಟ ಮತ್ತು ಬೇಸಿಗೆಯಲ್ಲಿ ನೀರು ಕಡಿಮೆಯಾಗುವುದರಿಂದ ಹನಿನೀರಾವರಿಯನ್ನು ನಾವು ಮಾಡಿಸಿಕೊಡುತ್ತಿದ್ದೇವೆ. ಮೂರು ತಿಂಗಳಿಗೊಮ್ಮೆ ಬಂದು ಮಕ್ಕಳಿಗೆ ಆಡಿಯೋ ವೀಡಿಯೋ ಮೂಲಕ ಪರಿಸರ ಪಾಠ ಮಾಡಿ ಹೋಗುವ ಉದ್ದೇಶವಿದೆ’ ಎಂದು ಭರತ್ ಮತ್ತು ರಾಜೇಶ್ ತಿಳಿಸಿದರು.
‘ಸಾಫ್ಟ್‌ವೇರ್ ಎಂಜಿನಿಯರ್‌ಗಳು, ಪಶುವೈದ್ಯರು, ಅರಣ್ಯ ಇಲಾಖೆಯ ಅಧಿಕಾರಿ, ಶಿಕ್ಷಕರು ಮುಂತಾದ ವಿವಿಧ ರಂಗಗಳಲ್ಲಿ ಜೀವನ ಕಂಡುಕೊಂಡಿರುವ ಯುವಕರ ತಂಡವು ‘ವಿಷನ್ ಗ್ರೀನ್’ ಎಂಬ ಸಂಘದ ರೂಪದಲ್ಲಿ ನಮ್ಮಲ್ಲಿ ಬಂದರು. ಸ್ಥಳೀಯ ಗಿಡಗಳನ್ನು ನೆಡುವುದರಿಂದ ಮುಂದೆ ಗಿಡ ಬೆಳೆದಂತೆ ಹಕ್ಕಿ ಚಿಟ್ಟೆಗಳೂ ಬರುತ್ತವೆಂದು ಅವರ ಮನವೊಲಿಸಿದೆವು. ಗುಣಿ ತೋಡಲು ಮತ್ತು ಹನಿನೀರಾವರಿಗಾಗಿ ನೆರವು ನೀಡುವುದರೊಂದಿಗೆ ಖುದ್ದಾಗಿ ಮಕ್ಕಳೊಂದಿಗೆ ಸೇರಿ ಗಿಡಗಳನ್ನು ನೆಟ್ಟರು. ಗ್ರಾಮಸ್ಥರೂ ನೆರವಾದರು. ಮಕ್ಕಳಿಗೆ ‘ವಿಷನ್ ಗ್ರೀನ್’ ತಂಡದವರು ಪರಿಸರದ ಬಗ್ಗೆ ಆಡಿಯೋ ವೀಡಿಯೋ ಕ್ಲಿಪ್ಪಿಂಗ್ಸ್ ತೋರಿಸಿ ಸಂವಾದವನ್ನು ನಡೆಸಿ ಸಿಹಿ ಹಂಚಿದರು. ಶಾಲೆಗೆ ಗ್ಲೋಬ್ ಅನ್ನು ಕೊಡುಗೆಯಾಗಿ ನೀಡಿದ್ದಾರೆ. ಮೂರು ತಿಂಗಳಿಗೊಮ್ಮೆ ಬಂದು ಗಿಡಗಳನ್ನು ಗಮನಿಸಿ, ಮಕ್ಕಳಿಗೆ ಪರಿಸರ ವಿಷಯವಾಗಿ ಕ್ಲಿಪ್ಪಿಂಗ್ಸ್, ಸಾಕ್ಷ್ಯಚಿತ್ರಗಳನ್ನು ತೋರಿಸುವುದಾಗಿ ಹೇಳಿರುವರು’ ಎಂದು ಶಿಕ್ಷಕ ಎಚ್.ವಿ.ವೆಂಕಟರೆಡ್ಡಿ ತಿಳಿಸಿದರು.
‘ವಿಷನ್ ಗ್ರೀನ್’ ತಂಡದ ರಾಜೇಶ್, ಬಿ.ಭರತ್, ಬಿ.ಎಸ್.ಭರತ್, ವಿನಯ್, ವಿನೋದ್, ಶ್ರೀನಾಥ, ಶ್ರೀನಿವಾಸ, ರಘು, ಚೇತನ್, ಮದನ್, ಸ್ಮಿತಾ, ಸೋಮಶೇಖರ್, ಸಾಗರ್, ಮಹೇಶ್, ಸಂದೀಪ್, ತೇಜುಕೃಷ್ಣ, ಕಿರಣ್, ವೆಂಕಟರೆಡ್ಡಿ, ಮಂಜುನಾಥ, ಹರೀಶ್, ಶಾಲಾಭಿವೃದ್ಧಿ ಸಮಿತಿ ಅಧ್ಯಕ್ಷ ದೇವರಾಜ್, ಗ್ರಾಮಸ್ಥರಾದ ಜಯರಾಮ್, ಕೇಶವ, ರಾಮಕೃಷ್ಣ, ದೇವರಾಜ್, ವೆಂಕಟರೆಡ್ಡಿ, ವಿನಯ್, ಶಿಕ್ಷಕರಾದ ನಾಗಭೂಷಣ್, ರಾಮಕೃಷ್ಣ, ಗಂಗಶಿವಪ್ಪ ಈ ಸಂದರ್ಭದಲ್ಲಿ ಹಾಜರಿದ್ದರು.
ಬಿ.ಜೆ.ಪಿ ಮಹಿಳಾ ಮೋರ್ಚಾ ಸದಸ್ಯರಿಂದ ಸಾರ್ವಜನಿಕರಿಗೆ ತಿಲಕವಿಟ್ಟು ರಾಖಿ ಕಟ್ಟಿ ಹಬ್ಬ ಆಚರಣೆ
ಹೆಣ್ಣಿನ ಮೇಲೆ ನಡೆಯುತ್ತಿರುವ ದೌರ್ಜನ್ಯದಿಂದ ಸಮಾಜ ಮುಕ್ತರಾಗಬೇಕಾದರೆ ಸಮಾಜದಲ್ಲಿ ಮಮತೆ, ಭಾತೃತ್ವ, ಸ್ತ್ರೀಯನ್ನು ಗೌರವಿಸುವ ಬಗ್ಗೆ ಶಿಕ್ಷಣ ಸ್ವರೂಪೀ ಆಂಧೋಲನದ ಅಗತ್ಯವಿದೆ ಎಂದು ಬಿ.ಜೆ.ಪಿ ಜಿಲ್ಲಾ ರೈತ ಮೋರ್ಚಾ ಪ್ರಧಾನ ಕಾರ್ಯದರ್ಶಿ ಮಂಜುಳಮ್ಮ ತಿಳಿಸಿದರು.
ಪಟ್ಟಣದಲ್ಲಿ ಭಾನುವಾರ ರಕ್ಷಾಬಂಧನ ಹಬ್ಬದ ಪ್ರಯುಕ್ತ ಪ್ರಮುಖ ಬೀದಿಗಳಲ್ಲಿ ಸಾರ್ವಜನಿಕರಿಗೆ ತಿಲಕವಿಟ್ಟು ರಾಖಿ ಕಟ್ಟಿ ಅವರು ಮಾತನಾಡಿದರು. ರಕ್ಷಾಬಂಧನವೆಂಬುದು ಸೋದರ ಸಂಬಂಧದ ಪ್ರೀತಿ ಮಮತೆಯ ಪ್ರತೀಕ. ಹೆಣ್ಣನ್ನು ಪೂಜ್ಯ ಭಾವದಿಂದ ನೋಡುವ ನಮ್ಮ ದೇಶದಲ್ಲಿ ಇಂದು ಹೆಣ್ಣಿನ ಸ್ಥಿತಿ ಆತಂಕಕಾರಿಯಾಗಿರುವುದು ದುರದೃಷ್ಟಕರ. ಹೆಣ್ಣಿಗೆ ರಕ್ಷಣೆ ಸಿಗಲು ಕೇವಲ ಕಾನೂನಿನ ಬಿಗಿಯಷ್ಟೇ ಸಾಲದು, ಸಮಾಜದ ಮಾನಸಿಕ ಪರಿವರ್ತನೆಯೂ ಅಗತ್ಯವಿದೆ. ಈ ನಿಟ್ಟಿನಲ್ಲಿ ಪಟ್ಟಣದಲ್ಲಿ ಸಾರ್ವಜನಿಕವಾಗಿ ಬಿ.ಜೆ.ಪಿ ಮಹಿಳಾ ಮೋರ್ಚಾ ವತಿಯಿಂದ ರಾಖಿ ಕಟ್ಟಿ, ತಿಲಕವನ್ನಿಟ್ಟು
ಸೋದರ ಭಾವನೆ, ಹೆಣ್ಣನ್ನು ಗೌರವಿಸುವ ಸಂದೇಶವನ್ನು ಸಾರುತ್ತಿದ್ದೇವೆ ಎಂದು ಹೇಳಿದರು.
ಬಿ.ಜೆ.ಪಿ ಪಕ್ಷದ ಸುಜಾತಮ್ಮ, ಮುನಿರತ್ನಮ್ಮ, ಸುಶೀಲಮ್ಮ, ಶಿವಮ್ಮ, ಸುರೇಂದ್ರಗೌಡ, ಲೋಕೇಶ್‌ಗೌಡ, ಶಿವಕುಮಾರಗೌಡ, ತ್ಯಾಗರಾಜ್, ರವಿ ಮತ್ತಿತರರು ಈ ಸಂದರ್ಭದಲ್ಲಿ ಹಾಜರಿದ್ದರು.
ಶ್ರೀಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ತಾಲ್ಲೂಕು ಯೋಜನಾ ಕಚೇರಿ ಉದ್ಘಾಟನೆ
ಸಹಕಾರ ತತ್ವದಿಂದ ಸಾಮಾಜಿಕ ಅಭಿವೃದ್ಧಿ ಸಾಧ್ಯವೆಂದು ಮನಗಂಡು ಗ್ರಾಮಾಭಿವೃದ್ಧಿ ಯೋಜನೆಯು ರೂಪುಗೊಂಡಿದೆ ಎಂದು ಡಾ.ಡಿ.ಟಿ.ಸತ್ಯನಾರಾಯಣರಾವ್ ತಿಳಿಸಿದರು.
ಪಟ್ಟಣದ ಚಿಂತಾಮಣಿ ರಸ್ತೆಯ ಕೆಂಪೇಗೌಡ ಕಟ್ಟಡದಲ್ಲಿ ಭಾನುವಾರ ಶ್ರೀಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ತಾಲ್ಲೂಕು ಯೋಜನಾ ಕಚೇರಿಯನ್ನು ಉದ್ಘಾಟಿಸಿ ಅವರು ಮಾತನಾಡಿದರು.
ಭ್ರಷ್ಟಾಚಾರ, ಮಹಿಳಾ ದೌರ್ಜನ್ಯ, ಬಡತನ ಮುಂತಾದ ಸಾಮಾಜದ ನಕಾರಾತ್ಮಕ ಅಂಶಗಳಿಂದ ಮುಕ್ತರಾದಾಗ ಮಾತ್ರ ಪ್ರಗತಿಯು ಸಾಧ್ಯ. ಶಾಂತಿ ಮತ್ತು ನೆಮ್ಮದಿಯ ಜೀವನವನ್ನು ನಡೆಸಿ ಉತ್ತಮ ಆರೋಗ್ಯ, ಶಿಕ್ಷಣ ಪಡೆಯಲು ಸಾಂಘಿಕ ಪ್ರಯತ್ನದ ಅಗತ್ಯವಿದೆ ಎಂದು ತಿಳಿಸಿದರು.
ಶ್ರೀಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಶಿಡ್ಲಘಟ್ಟ ತಾಲ್ಲೂಕು ಯೋಜನಾಧಿಕಾರಿ ಬಿ.ಆರ್. ಯೋಗೀಶ್ ಕನ್ಯಾಡಿ ಮಾತನಾಡಿ ‘ಈ ಸ್ವಯಂ ಸೇವಾ ಸಂಸ್ಥೆ ದಕ್ಷಿಣ ಕನ್ನಡ ಜಿಲ್ಲೆಯ ಬೆಳ್ತಂಗಡಿ ತಾಲ್ಲೂಕಿನ ಬಡಕೃಷಿಕರ, ಕೃಷಿಕೂಲಿ ಕಾರ್ಮಿಕರ ಅಭಿವೃದ್ಧಿಗೆ 8 ವರ್ಷಗಳ ಕಾಲ ಸತತವಾಗಿ ಅನುದಾನ, ಸಹಕಾರ ಹಾಗೂ ಮಾರ್ಗದರ್ಶನದ ಮೂಲಕ ಪ್ರಯತ್ನಿಸಲಾಗಿತ್ತು. ಆನಂತರ ವಿಸ್ತಾರಗೊಳ್ಳುತ್ತಾ ರಾಜ್ಯದ 22 ಜಿಲ್ಲೆ, ಕೇರಳ ರಾಜ್ಯದ ಒಂದು ಜಿಲ್ಲೆಯಲ್ಲಿ ವಿಸ್ತರಿಸಲ್ಪಟ್ಟಿದೆ. ಪ್ರಸ್ತುತ ವರ್ಷ ರಾಜ್ಯದ 3 ಜಿಲ್ಲೆಗಳಾದ ಚಿಕ್ಕಬಳ್ಳಾಪುರ, ಕೋಲಾರ ಮತ್ತು ರಾಮನಗರ ಜಿಲ್ಲೆಗಳಿಗೆ ವಿಸ್ತಾರಗೊಳ್ಳುತ್ತಿದೆ. ಜಿಲ್ಲೆಯಲ್ಲೇ ಪ್ರಥಮಬಾರಿಗೆ ಶಿಡ್ಲಘಟ್ಟದಲ್ಲಿ ಶ್ರೀಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಪ್ರಾರಂಭವಾಗುತ್ತಿದೆ’ ಎಂದು ಹೇಳಿದರು.
‘ಮುಂದಿನ ದಿನಗಳಲ್ಲಿ ಶಿಡ್ಲಘಟ್ಟ ತಾಲ್ಲೂಕಿನಲ್ಲಿ 2000 ದಿಂದ 2500 ಪ್ರಗತಿಬಂಧು, ಸ್ವಸಹಾಯ ಸಂಘಗಳ ರಚನೆಯ ಗುರಿಯಿರಿಸಿಕೊಂಡಿದ್ದು ಸದಸ್ಯರಿಗೆ ಆರ್ಥಿಕ, ಸಾಮಾಜಿಕ, ಬೌದ್ಧಿಕ ಅಭಿವೃದ್ಧಿಯ ದಿಸೆಯಲ್ಲಿ ತರಬೇತಿ ಪ್ರವಾಸಗಳನ್ನು ಕೈಗೊಳ್ಳುವುದು, ಪುರುಷರಿಗಾಗಿ ಶ್ರಮವಿನಿಮಯವನ್ನು ಒಳಗೊಂಡ ಪ್ರಗತಿಬಂಧು ಎಂಬ ವಿಶೇಷ ಸ್ವಸಹಾಯಸಂಘಗಳನ್ನು ರಚಿಸಲಾಗುತ್ತದೆ. ಮಹಿಳೆಯರಿಗೆ ಸ್ವಸಹಾಯ ಸಂಘದ ಜೊತೆಯಲ್ಲಿ ಕೌಟುಂಬಿಕ ಸಾಮರಸ್ಯ, ಶಿಕ್ಷಣ, ಸಂಸ್ಕೃತಿ ಸಂಸ್ಕಾರ, ಶುಚಿತ್ವ, ಆರೋಗ್ಯ, ಕಾನೂನು, ಪೌಷ್ಠಿಕ ಆಹಾರ ತಯಾರಿ, ಹಬ್ಬ ಹರಿದಿನಗಳ ಮಹತ್ವದ ಬಗ್ಗೆ ತಿಳಿಸುವ ಉದ್ದೇಶದಿಂದ ಜ್ಞಾನವಿಕಾಸ ಎಂಬ ಮಹಿಳಾ ಕಾರ್ಯಕ್ರಮವನ್ನು ಆರಂಭಿಸಲಾಗುವುದು.
ಆರೋಗ್ಯ ಹಾಗೂ ಶುಚಿತ್ವದ ದೃಷ್ಠಿಯಿಂದ ಶೌಚಾಲಯದ ರಚನೆಗೆ, ಅಡುಗೆ ಅನಿಲದ ಸಮಸ್ಯೆ ನೀಗಿಸಲು ಗೋಬರ್ ಗ್ಯಾಸ್, ವಿದ್ಯುತ್ ಅಭಾವದ ಸಮಸ್ಯೆಗೆ ಸೋಲಾರ್ ಅಳವಡಿಕೆಗೆ ಕ್ಷೇತ್ರದಿಂದ ಅನುದಾನ ನೀಡಿ ಪ್ರೋತ್ಸಾಹಿಸಲಾಗುವುದು. ಕೃಷಿ ಉಪಕರಣ, ಹೊಸ ಕೃಷಿ ಮಾಡುವವರಿಗೆ ಪ್ರೋತ್ಸಾಹಧನ ನೀಡಲಾಗುವುದು. ಸ್ವಸಹಾಯ ಸಂಘದ ಸದಸ್ಯರ ಮಕ್ಕಳಿಗೆ ಉದ್ಯೋಗ ಪೂರಕ ಶಿಕ್ಷಣಕ್ಕಾಗಿ ಶಿಷ್ಯವೇತನ, ಬಡವರಿಗೆ ಮಾಸಾಶನ ಒದಗಿಸಲಾಗುವುದು. ಮದ್ಯವರ್ಜನ ಶಿಬಿರವನ್ನು ಆಯೋಜಿಸಿ ಪಾನಮುಕ್ತರನ್ನಾಗಿಸುವ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗುವುದು. ಉದ್ಯೋಗ ಸೃಷ್ಠಿ, ಕುಡಿಯುವ ನೀರಿನ ಶುದ್ಧಗಂಗಾ ಯೋಜನೆ ಮಾಡಲಾಗುವುದು’ ಎಂದು ಹೇಳಿದರು.
ಉಪತಹಶಿಲ್ದಾರ್ ಕೃಷ್ಣಪ್ಪ ನಾಯಕ್, ಶಿವಕುಮಾರಗೌಡ, ಸರ್ಕಾರಿ ನೌಕರರ ಸಂಘದ ಅಧ್ಯಕ್ಷ ಗುರುರಾಜರಾವ್, ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ರಾಧಾಕೃಷ್ಣ, ಕಂದಾಯ ನಿರೀಕ್ಷಕ ಸುಬ್ರಮಣಿ, ಅನಂತಕೃಷ್ಣ, ಸುರೇಂದ್ರಗೌಡ, ಲೋಕೇಶ್‌ಗೌಡ ಮತ್ತಿತರರು ಈ ಸಂದರ್ಭದಲ್ಲಿ ಹಾಜರಿದ್ದರು.

