ಸಮಾಜದ ತಪ್ಪು ಒಪ್ಪುಗಳನ್ನು ಪ್ರಚುರಪಡಿಸುವ ಪತ್ರಕರ್ತರ ಸಮಸ್ಯೆಗಳನ್ನು ಚರ್ಚಿಸುವ ದಿನವನ್ನಾಗಿ ಪತ್ರಿಕಾ ದಿನಾಚರಣೆಯನ್ನು ಆಚರಿಸುವಂತೆ ಶಾಸಕ ಎಂ.ರಾಜಣ್ಣ ತಿಳಿಸಿದರು.
ಪಟ್ಟಣದ ನಗರೇಶ್ವರ ಕಲ್ಯಾಣ ಮಂಟಪದಲ್ಲಿ ಮಂಗಳವಾರ ತಾಲ್ಲೂಕು ಕಾರ್ಯನಿರತ ಪತ್ರಕರ್ತ ಸಂಘದ ವತಿಯಿಂದ ನಡೆದ ಪತ್ರಿಕಾ ದಿನಾಚರಣೆಯನ್ನು ಉದ್ಘಾಟಿಸಿ ಅವರು ಮಾತನಾಡಿದರು.
ತಂತ್ರಜ್ಞಾನ ಪ್ರಗತಿಯಾದಂತೆ ಪತ್ರಕರ್ತರ ಕಾರ್ಯಶೈಲಿಯೂ ಬದಲಾಗಿದೆ ಹಾಗೂ ಸವಾಲುಗಳೂ ಹೆಚ್ಚಿವೆ. ಜನಸಾಮಾನ್ಯರ ಕಷ್ಟ, ನೋವು, ತೊಂದರೆಗಳಿಗೆ ಪತ್ರಕರ್ತರು ಧ್ವನಿಯಾಗಬೇಕು. ಜನಪ್ರತಿನಿಧಿಗಳ ಹಾಗೂ ಅಧಿಕಾರಿಗಳ ತಪ್ಪುಗಳನ್ನು ತೋರಿಸಿ ತಿದ್ದುವ ಕೆಲಸದ ಜೊತೆಯಲ್ಲಿ ಸಾಮಾಜಿಕ ಕಳಕಳಿ ಮತ್ತು ಎಲೆಮರೆ ಕಾಯಿಯಂಥಹ ಪ್ರತಿಭೆಗಳು ಹಾಗೂ ಉತ್ತಮ ಕಾರ್ಯಗಳ ಬಗ್ಗೆಯೂ ಬೆಳಕು ಚೆಲ್ಲಬೇಕು. ಪತ್ರಕರ್ತರು ವಸ್ತುನಿಷ್ಠ ಪತ್ರಿಕೋದ್ಯಮವನ್ನು ಅನುಸರಿಸಿ ಮಾದರಿಯಾಗಬೇಕು ಎಂದು ಹೇಳಿದರು.
ಕಾರ್ಯನಿರತ ಪತ್ರಕರ್ತ ಸಂಘದ ಜಿಲ್ಲಾಧ್ಯಕ್ಷ ಎಂ.ಜಯರಾಮ್ ಮಾತನಾಡಿ, ದೃಶ್ಯ ಮಾಧ್ಯಮದ ಹೆಚ್ಚಳದಿಂದಾಗಿ ಸುದ್ಧಿಯ ವೇಗ ಹೆಚ್ಚಿದ್ದು ಪತ್ರಕರ್ತರಿಗೆ ಸವಾಲಾಗಿ ಪರಿಣಮಿಸಿದೆ. ಸುದ್ಧಿಯನ್ನು ಪುನರ್ಪರಿಶೀಲಿಸಲು ಅತ್ಯಂತ ಕಡಿಮೆ ಸಮಯವಿರುವುದರಿಂದ ಅಚಾತುರ್ಯವಾಗದಂತೆ ಪತ್ರಕರ್ತರು ಸದಾ ಜಾಗರೂಕರಾಗಿರಬೇಕು. ಸ್ವಹಿತಕ್ಕಿಂತ ಸಮಾಜಮುಖಿಗಳಾಗಿ ದುಡಿಯುವ ಉತ್ತಮ ಪತ್ರಕರ್ತರಿಗೆ ಗೌರವ ಸದಾ ಇರುತ್ತದೆ. ಜಿಲ್ಲಾ ಸಂಘದ ವತಿಯಿಂದ ಜೀವವಿಮಾ ಮಾಡಿಸಲಾಗಿದೆ. ಕಾರ್ಯನಿರತ ಪತ್ರಕರ್ತರು ನಿಧನರಾದರೆ ಜಿಲ್ಲಾ ಸಂಘದಿಂದ 50 ಸಾವಿರ ರೂಗಳನ್ನು ನೀಡುತ್ತೇವೆ. ಗ್ರಾಮೀಣ ಪತ್ರಕರ್ತರು ನಿಜವಾಗಿಯೂ ಸಂಕಷ್ಟದಲ್ಲಿದ್ದಾರೆ. ಸರ್ಕಾರ ಕಾರ್ಯನಿರತ ಪತ್ರಕರ್ತರಿಗೆ ನೀಡುವ ಎಲ್ಲಾ ಸೌಲಭ್ಯಗಳನ್ನೂ ತಲುಪಿಸಲು ಜಿಲ್ಲಾ ಸಂಘ ಶ್ರಮಿಸಲಿದೆ ಎಂದು ನುಡಿದರು.
ಈ ಸಂದರ್ಭದಲ್ಲಿ ಶಾಲಾ ಮಕ್ಕಳಿಗೆ ವೇಷಭೂಷಣ ಸ್ಪರ್ಧೆ ಮತ್ತು ಕಾಲೇಜು ವಿದ್ಯಾರ್ಥಿಗಳಿಗೆ ಪ್ರಬಂಧ ಸ್ಪರ್ಧೆಯನ್ನು ಆಯೋಜಿಸಲಾಗಿತ್ತು. ಜಾನಪದ ಕಲಾವಿದರಿಂದ ಗೀತಗಾಯನವನ್ನು ಆಯೋಜಿಸಲಾಗಿತ್ತು.
ಕಾರ್ಯನಿರತ ಪತ್ರಕರ್ತರ ಸಂಘದ ರಾಷ್ಟ್ರೀಯ ಸಮಿತಿ ಸದಸ್ಯ ರಾಧಾಕೃಷ್ಣ, ರಾಜ್ಯ ಸಮಿತಿ ಸದಸ್ಯ ಸೋ.ಸು. ನಾಗೇಂದ್ರನಾಥ್, ತಾಲ್ಲೂಕು ಅಧ್ಯಕ್ಷ ನಾಗರಾಜ್, ಜಿಲ್ಲಾ ಪಂಚಾಯಿತಿ ಸದಸ್ಯ ಎಸ್.ಎಂ.ನಾರಾಯಣಸ್ವಾಮಿ, ಬಿ.ಜೆ.ಪಿ ತಾಲ್ಲೂಕು ಅಧ್ಯಕ್ಷ ಸುರೇಂದ್ರಗೌಡ, ಡಿ.ಸಿ.ಸಿ ಬ್ಯಾಂಕ್ ನಿರ್ದೇಶಕ ಶಿವಾರೆಡ್ಡಿ, ಪುರಸಭಾ ಅಧ್ಯಕ್ಷೆ ಮುಷ್ಠರಿ ತನ್ವೀರ್, ರೈತ ಮುಖಂಡರಾದ ಮಳ್ಳೂರು ಹರೀಶ್, ಭಕ್ತರಹಳ್ಳಿ ಬೈರೇಗೌಡ, ಕಾರ್ಯನಿರತ ಪತ್ರಕರ್ತರ ಸಂಘದ ಜಿಲ್ಲಾ ಪ್ರಧಾನ ಕಾರ್ಯದರ್ಶಿ ವೀರಶೇಖರ್, ಖಜಾಂಚಿ ಕೃಷ್ಣಪ್ಪ ಮತ್ತಿತರರು ಹಾಜರಿದ್ದರು.
ಪತ್ರಕರ್ತರ ಸಮಸ್ಯೆಗಳನ್ನು ಚರ್ಚಿಸುವ ದಿನವನ್ನಾಗಿ ಪತ್ರಿಕಾ ದಿನಾಚರಣೆಯನ್ನು ಆಚರಿಸಿ – ಶಾಸಕ ಎಂ.ರಾಜಣ್ಣ
ರಾಜ್ಯ ರೇಷ್ಮೆ ಸಂಶೋಧನೆ ಮಂಡಳಿಯ ಸದಸ್ಯರಾಗಿ ಹಿತ್ತಲಹಳ್ಳಿಯ ಎಚ್.ಕೆ.ಸುರೇಶ್ ಆಯ್ಕೆ
ತಾಲ್ಲೂಕಿನ ಹಿತ್ತಲಹಳ್ಳಿಯ ಎಚ್.ಕೆ.ಸುರೇಶ್ ಅವರು ರಾಜ್ಯ ರೇಷ್ಮೆ ಸಂಶೋಧನೆ ಮತ್ತು ಅಭಿವೃದ್ಧಿ ಸಂಸ್ಥೆಯ ವಿಸ್ತರಣೆ ಮತ್ತು ತರಬೇತಿ ವಿಭಾಗದ ಸಂಶೋಧನಾ ಮಂಡಳಿಯ ಸದಸ್ಯರಾಗಿ ಮೂರು ವರ್ಷದ ಅವಧಿಗೆ ಆಯ್ಕೆಯಾಗಿರುವುದಾಗಿ ರೇಷ್ಮೆ ಅಭಿವೃದ್ಧಿ ಆಯುಕ್ತ ಜಿ.ಸತೀಶ್ ತಿಳಿಸಿದ್ದಾರೆ.
ಬೆಸ್ಕಾಂ ಇಲಾಖೆ ವಿರುದ್ಧ ಪ್ರತಿಭಟನೆ
ತಾಲ್ಲೂಕಿನ ರೈತರಿಗೆ ಸಮರ್ಪಕವಾಗಿ ವಿದ್ಯುತ್ ಪೂರೈಕೆ ಮಾಡುವಲ್ಲಿ ಬೆಸ್ಕಾಂ ಇಲಾಖೆ ವಿಫಲವಾಗಿದೆ ಎಂದು ಆರೋಪಿಸಿ ಬಿಜೆಪಿ ರೈತ ಮೋರ್ಚಾ ಕಾರ್ಯಕರ್ತರು ಬೆಸ್ಕಾಂ ಇಲಾಖೆಯ ಕಚೇರಿಗೆ ಸೋಮವಾರ ಮುತ್ತಿಗೆ ಹಾಕಿ ಪ್ರತಿಭಟನೆ ನಡೆಸಿದರು.
ಪಟ್ಟಣದ ಕೆ.ಎಸ್.ಆರ್.ಟಿ.ಸಿ. ಬಸ್ ನಿಲ್ದಾಣದಿಂದ ಪ್ರತಿಭಟನಾ ಮೆರವಣಿಗೆ ನಡೆಸಿದ ಕಾರ್ಯಕರ್ತರು, ಟಿ.ಬಿ.ರಸ್ತೆಯುದ್ದಕ್ಕೂ ರಾಜ್ಯ ಸರ್ಕಾರದ ವಿರುದ್ಧ ಘೋಷಣೆಗಳನ್ನು ಕೂಗುತ್ತಾ, ಮೆರವಣಿಗೆ ನಡೆಸಿದ ನಂತರ ಬೆಸ್ಕಾಂ ಇಲಾಖೆಯ ಕಚೇರಿಗೆ ಮುತ್ತಿಗೆ ಹಾಕಲು ಯತ್ನಿಸಿದಾಗ ಬಾಗಿಲಲ್ಲೆ ತಡೆದ ಪೋಲಿಸರ ವಿರುದ್ಧವೂ ಘೋಷಣೆಗಳನ್ನು ಕೂಗಿದರು.
ಅನಿಯಮಿತ ಲೋಡ್ ಶೆಡ್ಡಿಂಗ್ ನಿಲ್ಲಿಸಬೇಕು. ರೈತರ ಪಂಪ್ ಸೆಟ್‌ಗಳನ್ನು ಸಕ್ರಮಗೊಳಿಸಬೇಕು, ನಿರಂತರವಾಗಿ ೮ ಗಂಟೆಗಳ ಕಾಲ 3 ಫೇಸ್ ವಿದ್ಯುತ್ ಪೂರೈಕೆ ಮಾಡಬೇಕು. ಸುಟ್ಟುಹೋದ ಟ್ರಾನ್ಸ್‌ಫಾರ್ಮರ್‌ಗಳನ್ನು ತಕ್ಷಣ ಬದಲಿಸಬೇಕು. ರೈತರ ಪಂಪ್‌ಸೆಟ್‌ಗಳಿಗೆ ಶೀಘ್ರ ವಿದ್ಯುತ್ ಸಂಪರ್ಕ ಕಲ್ಪಿಸಬೇಕು. ಹಳೆಯ ತಂತಿಗಳನ್ನು ಮತ್ತು ಕಂಬಗಳನ್ನು ಬದಲಿಸಿ ವಿದ್ಯುತ್ ನಷ್ಟ ತಪ್ಪಿಸಿ ರೈತರ ಪಂಪ್‌ಸೆಟ್ ಉಳಿಸಬೇಕು. ಲೈನ್‌ಮನ್‌ಗಳ ಕೊರತೆ ನೀಗಿಸಬೇಕು ಎಂದು ಪ್ರತಿಭಟನಾಕಾರರು ಒತ್ತಾಯಿಸಿದರು.
ಇಂಧನ ಮಂತ್ರಿ ಡಿ.ಕೆ.ಶಿವಕುಮಾರ್ ಅವರು ಅಧಿಕಾರ ವಹಿಸಿಕೊಂಡ ಮೇಲೆ ಲೋಕಸಭಾ ಚುನಾವಣೆಯಲ್ಲಿ ಮತಗಳಿಕೆಗಾಗಿ ವಿದ್ಯುತ್ ಲೋಡ್ ಶೆಡ್ಡಿಂಗ್ ಮಾಡುವುದಿಲ್ಲವೆಂದು ಆಶ್ವಾಸನೆ ನೀಡಿದ್ದರು, ರಾಜ್ಯದಲ್ಲಿ ಬಿಜೆಪಿ ಸರ್ಕಾರದ ಆಡಳಿತ ನಡೆಸಿದಾಗ ರೈತರಿಗೆ ಸಮಸ್ಯೆಯಾಗದಂತೆ ನೋಡಿಕೊಂಡಿದ್ದರು, ರಾಜ್ಯದಲ್ಲಿ ಆಡಳಿತ ನಡೆಸುತ್ತಿರುವ ಕಾಂಗ್ರೆಸ್ ಸರ್ಕಾರ ವಿಫಲವಾಗಿದೆ ಎಂದರು.
ಬೆಸ್ಕಾಂ ಇಲಾಖೆ ರೈತರ ಪಂಪ್ ಸೆಟ್‌ಗಳಿಗೆ ಸಮರ್ಪಕವಾಗಿ ವಿದ್ಯುತ್ ಪೂರೈಕೆ ಮಾಡದಿದ್ದರೆ ಮುಂದಿನ ದಿನಗಳಲ್ಲಿ ರಾಜ್ಯಾದ್ಯಂತ ಉಗ್ರವಾದ ಹೋರಾಟ ಮಾಡಲಾಗುತ್ತದೆ ಎಂದು ಎಚ್ಚರಿಕೆ ನೀಡಿ, ಎಇಇ ಅನ್ಸರ್‌ಪಾಷಾ, ಅವರಿಗೆ ಮನವಿ ಪತ್ರವನ್ನು ಸಲ್ಲಿಸಿದರು.
ಮನವಿಯನ್ನು ಸ್ವೀಕರಿಸಿ ಮಾತನಾಡಿದ ಎಇಇ ಅನ್ಸರ್‌ಪಾಷಾ, ತಾಲ್ಲೂಕಿನಲ್ಲಿ ೦೮ ವಿದ್ಯುತ್ ಸ್ಟೇಷನ್‌ಗಳಿದ್ದು, ದಿನೇ ದಿನೇ ಕೊಳವೆಬಾವಿಗಳು ಕೊರೆಯುವಂತಹ ರೈತರ ಸಂಖ್ಯೆ ಹೆಚ್ಚಾಗುತ್ತಿದ್ದು, ರೈತರು ಕೊರೆದ ಕೊಳವೆಬಾವಿಗಳನ್ನು ೫೦ ರೂಪಾಯಿಗಳನ್ನು ನೀಡಿ ರಿಜಿಸ್ಟರ್ ಮಾಡಿಸಿಕೊಳ್ಳದೆ ಇರುವುದು ವಿದ್ಯುತ್ ಕೊರತೆ ಉಂಟಾಗಲು ಕಾರಣವಾಗಿದೆ. ರೈತರು ಇಲಾಖೆಯಲ್ಲಿ ನೊಂದಾವಣಿ ಮಾಡಿಕೊಂಡರೆ ಸರ್ಕಾರಕ್ಕೆ ಬೇಡಿಕೆ ಸಲ್ಲಿಸಲು ಅನುಕೂಲವಾಗುತ್ತದೆ. ಮನೆಗಳಿಗೆ ಮೀಟರುಗಳನ್ನು ಅಳವಡಿಸಿಕೊಳ್ಳದೆ, ನೇರವಾಗಿ ವಿದ್ಯುತ್ ತಂತಿಗಳಿಂದ ವಿದ್ಯುತ್ ಸಂಪರ್ಕ ಪಡೆದುಕೊಳ್ಳುತ್ತಿದ್ದು, ಕಡಿವಾಣ ಹಾಕಬೇಕಾಗಿದೆ ಎಂದರು.
ಬಿಜೆಪಿ ಮುಖಂಡರಾದ ಸುರೇಂದ್ರಗೌಡ, ಸಿ.ವಿ.ಲೋಕೇಶ್‌ಗೌಡ, ಶಿವಕುಮಾರಗೌಡ, ಕೆಂಪರೆಡ್ಡಿ, ರಾಘವೇಂದ್ರ, ದಾಮೋದರ್, ಬಾಲಮುರಳೀಕೃಷ್ಣ, ಕೆಂಪೇಗೌಡ, ರವಿಪ್ರಕಾಶ್ ಚನ್ನಕೇಶವರೆಡ್ಡಿ, ನಾರಾಯಣಸ್ವಾಮಿ, ನಾಗನರಸಿಂಹ, ರವಿಚಂದ್ರ, ನರೇಶ್, ಮಂಜುಳಮ್ಮ, ಸುಜಾತಮ್ಮ, ಶಿವಮ್ಮ, ಟಿ.ರತ್ನಮ್ಮ, ಅಶ್ವಥ್, ಮಧುಸೂದನ್, ರಾಮಚಂದ್ರಪ್ಪ, ಅಶ್ವಕ್ ಅಹ್ಮದ್ ಮುಂತಾದವರು ಹಾಜರಿದ್ದರು.
ನರಸಿಂಹಪ್ಪರವರ ಪಾರಿವಾಳ ಪ್ರೇಮ

‘ಈ ಪಾರಿವಾಳವನ್ನು ಇಂಗ್ಲೀಷ್ ಕ್ಯಾರಿಯರ್ ಎನ್ನುತ್ತಾರೆ. ಇಂಗ್ಲೆಂಡಿನಲ್ಲಿ ಬಹಳ ಹಿಂದೆ ಪರ್ಶಿಯ ಮತ್ತು ಪೌಟರ್ ಎಂಬ ಎರಡು ವಿಧದ ಪಾರಿವಾಳಗಳ ಸಂಕುರದಿಂದ ಹುಟ್ಟಿದ್ದು ಈ ಪ್ರಭೇಧ. ಅದರ ಕೊಕ್ಕೇ ವಿಚಿತ್ರವಾಗಿದೆ. ಪ್ರಸಿದ್ಧ ಜೀವವಿಜ್ಞಾನಿ ಚಾರ್ಲ್ಸ್ ಡಾರ್ವಿನ್ ತನ್ನ ಪುಸ್ತಕ ’ದ ವೇರಿಯೇಷನ್ ಆಫ್ ಅನಿಮಲ್ಸ್ ಅಂಡ್ ಪ್ಲಾಂಟ್ಸ್ ಅಂಡರ್ ಡೊಮೆಸ್ಟಿಕೇಷನ್’ ಎಂಬ ಪುಸ್ತಕದಲ್ಲಿ ಸಾಕು ಪ್ರಾಣಿಗಳಲ್ಲಾಗುವ ಜೀವವಿಕಾಸದ ಬಗ್ಗೆ ಬರೆಯುವಾಗ ಇಂಗ್ಲೀಷ್ ಕ್ಯಾರಿಯರ್ ಹುಟ್ಟಿನ ಬಗ್ಗೆಯೂ ವಿವರಿಸಿದ್ದಾರೆ’ ಎಂದು ತಮ್ಮ ಕೈಯಲ್ಲಿ ಬೆಚ್ಚಗೆ ಕುಳಿತಿರುವ ವಿಶೇಷವಾದ ಪಾರಿವಾಳದ ಬಗ್ಗೆ ಅತ್ಯಂತ ಆಸ್ತೆಯಿಂದ ವಿವರಣೆ ಕೊಡಲು ಪ್ರಾರಂಭಿಸಿದರು.
ವೃತ್ತಿಯಲ್ಲಿ ಸರ್ಕಾರಿ ಶಾಲೆಯ ಶಿಕ್ಷಕರಾಗಿ ’ಒಡಿಗೆರೆ ಮಾಸ್ತರ್’ ಎಂದೇ ಹೆಸರುವಾಸಿಯಾಗಿರುವ ಕೆ.ನರಸಿಂಹಪ್ಪ ಪ್ರವೃತ್ತಿಯಲ್ಲಿ ನಿಸರ್ಗಪ್ರಿಯರು. ಬಾಗೇಪಲ್ಲಿ ತಾಲ್ಲೂಕಿನ ಪೋಲನಾಯಕನಪಲ್ಲಿಯ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯ ಶಿಕ್ಷಕರಾದ ಇವರ ಬಳಿ ಸುಮಾರು ಎಂಟು ವಿಧಧ 60 ಪಾರಿವಾಳಗಳಿವೆ. ವಿವಿಧ ಜಾತಿಯ ಕುರಿಗಳಿವೆ. ಕೋಳಿಗಳು, ಮೊಲಗಳನ್ನೂ ಸಾಕಿದ್ದಾರೆ. ಜೂಲುಪಾಳ್ಯ ಪಂಚಾಯಿತಿಯ ಒಡಿಗೆರೆ ಗ್ರಾಮದಲ್ಲಿ ಇವರ ಮನೆ ಹಾಗೂ ತೋಟ ಈ ಎಲ್ಲಾ ಜೀವಿಗಳ ಆಶ್ರಯತಾಣವಾಗಿದೆ.

’ಬಡಂಕಾ, ಬ್ಯೂಟಿ ಹೋಮರ್, ರೇಸ್ ಹೋಮರ್, ಲಕ್ವಾ ಪಾರಿವಾಳ ಮುಂತಾದ ಹಲವಾರು ವೈವಿಧ್ಯಮಯ ಪಾರಿವಾಳಗಳಿವೆ. ಒಂದೊಂದು ಪಾರಿವಾಳಕ್ಕೂ ಒಂದೊಂದು ವಿಶೇಷತೆಯಿದೆ. ಆಯಾ ಜಾತಿಯಲ್ಲೂ ವಿವಿಧ ಬಣ್ಣಗಳಿವೆ. ಬಹಳ ಹಿಂದೆ ಇಂಗ್ಲೆಂಡಿನಲ್ಲಿ ಪಾರಿವಾಳ ಸಾಕುವವರ ಪ್ರಯತ್ನದಿಂದ ಅಭಿವೃದ್ಧಿಯಾದ ತಳಿ ಇಂಗ್ಲೀಷ್ ಕ್ಯಾರಿಯರ್. ಇದು ಸಂದೇಶ ರವಾನೆಗೆ ಹೆಚ್ಚಾಗಿ ಆಗ ಬಳಸಲಾಗುತ್ತಿತ್ತು. ಆದರೆ ಈಗ ಕೇವಲ ಅಲಂಕಾರಿಕ ಸಾಕುವುದಕ್ಕೆ ಸೀಮಿತವಾಗಿದೆ. ವೈವಿಧ್ಯಮಯ ತಳಿಗಳ ಸಂತತಿಗಳನ್ನು ಮುಂದುವರೆಸಲು ಅದೇ ಜಾತಿ ಹಾಗೂ ಬಣ್ಣದ ಪಾರಿವಾಳಗಳನ್ನು ಜೋಡಿ ಮಾಡಬೇಕು. ಕೆಲ ಬಾರಿ ನನ್ನಲ್ಲಿ ಗಂಡು ಅಥವಾ ಹೆಣ್ಣಿನ ಕೊರತೆಯಿದ್ದರೆ, ಎಷ್ಟೇ ದೂರವಾದರೂ ಅದನ್ನು ಸಾಕುವವರ ಬಳಿ ಹೋಗಿ ತರುತ್ತೇನೆ. ಸಣ್ಣ ವಯಸ್ಸಿನಿಂದಲೂ ನನಗೆ ಪಕ್ಷಿ ಪ್ರಾಣಿಗಳ ಮೇಲೆ ಒಲವು. ಪ್ರೀತಿಯಿಂದ ನಾವು ಸಾಕದಿದ್ದಲ್ಲಿ ಯಾವುದೇ ಪ್ರಾಣಿ ನಮ್ಮೊಂದಿಗೆ ಬಾಳುವುದಿಲ್ಲ’ ಎಂದು ಒಡಿಗೆರೆ ಮಾಸ್ತರ್ ನರಸಿಂಹಪ್ಪ ಹೇಳುತ್ತಾರೆ.
’ಎಲ್ಲರೂ ನಿವೃತ್ತಿಯಾದ ಮೇಲೆ ಏನಪ್ಪಾ ಮಾಡುವುದು ಅಂದುಕೊಳ್ಳುತ್ತಾರೆ. ಆದರೆ ನಾನಂತೂ ಇನ್ನಷ್ಟು ಪ್ರಾಣಿಗಳನ್ನು ಸಾಕುವ ಯೋಜನೆ ಹಾಕಿಕೊಂಡಿದ್ದೇನೆ. ಈ ಜೀವಿಗಳೊಂದಿಗೆ ಹೆಚ್ಚು ಕಾಲ ಕಳೆಯಬಹುದೆಂದು ಖುಷಿಪಡುತ್ತೇನೆ’
ಶಿಡ್ಲಘಟ್ಟದಲ್ಲಿ ನಾಗರಪಂಚಮಿ ಆಚರಣೆ
ಶಿಡ್ಲಘಟ್ಟದಲ್ಲಿ ಶುಕ್ರವಾರ ನಾಗರಪಂಚಮಿಯ ಪ್ರಯುಕ್ತ ಮಹಿಳೆಯರು ನಾಗರಕಲ್ಲುಗಳಿಗೆ ಹಾಲೆರೆದು ಪೂಜೆ ಸಲ್ಲಿಸಿದರು.
ಚನ್ನಹಳ್ಳಿ ಗ್ರಾಮದಲ್ಲಿ ನೂತನ ಹಾಲು ಉತ್ಪಾದಕರ ಸಹಕಾರ ಸಂಘ ಉದ್ಘಾಟನೆ
ಶಿಡ್ಲಘಟ್ಟ ತಾಲ್ಲೂಕಿನ ಚನ್ನಹಳ್ಳಿ ಗ್ರಾಮದಲ್ಲಿ ನೂತನ ಹಾಲು ಉತ್ಪಾದಕರ ಸಹಕಾರ ಸಂಘವನ್ನು ಶುಕ್ರವಾರ ಉದ್ಘಾಟಿಸಲಾಯಿತು. ಕೆ.ಎಂ.ಎಫ್ ನಿರ್ದೇಶಕ ಬಂಕ್ ಮುನಿಯಪ್ಪ, ಉಪವ್ಯವಸ್ಥಾಪಕರಾದ ಡಾ.ಕೆ.ಜಿ.ಈಶ್ವರಯ್ಯ, ಗೋಪಾಲರಾವ್, ವಿಸ್ತರಣಾಧಿಕಾರಿಗಳಾದ ಕೆ.ಎನ್.ಬಿ.ರೆಡ್ಡಿ. ಉಮೇಶ್‌ರೆಡ್ಡಿ, ಶ್ರೀನಿವಾಸ್, ಅಮರೇಶ್, ತಮ್ಮರೆಡ್ಡಿ, ಗ್ರಾಮಸ್ಥರಾದ ಕ್ಯಾತಪ್ಪ, ನಾರಾಯಣಸ್ವಾಮಿ, ರವಿ, ವಕೀಲರಾದ ವೆಂಕಟೇಶ್, ವೇಣುಗೋಪಾಲ್, ನಾಗರಾಜ್, ಸಂಘದ ಅಧ್ಯಕ್ಷ ಸಂತೋಷ್ ಹಾಜರಿದ್ದರು.
ಹೋಬಳಿ ಮಟ್ಟದ ಕರಾಟೆ ಸ್ಪರ್ಧೆ
Hobli level karate competitions, Sidlaghatta
ತಾಲ್ಲೂಕಿನ ಹೋಬಳಿ ಮಟ್ಟದ ಕರಾಟೆ ಸ್ಪರ್ಧೆಯಲ್ಲಿ ಜಂಗಮಕೋಟೆ ಕ್ರಾಸ್‌ನ ಜ್ಞಾನಜ್ಯೋತಿ ಶಾಲೆ ಮತ್ತು ನಡಿಪಿನಾಯಕನಹಳ್ಳಿಯ ನವೋದಯ ಶಾಲೆಯ ವಿದ್ಯಾರ್ಥಿಗಳು ವಿಜೇತರಾಗಿದ್ದಾರೆ.
ಕುಮಿತೆ 30–35 ಕೆಜಿ ವಿಭಾಗದಲ್ಲಿ ಹರ್ಷಿತ್(ಪ್ರಥಮ), ವಂದನಾ(ದ್ವಿತೀಯ), 20–25 ಕೆಜಿ ವಿಭಾಗದಲ್ಲಿ ರಾಮ್‌ಕುಮಾರ್(ಪ್ರಥಮ), ಧನುಷ್(ದ್ವಿತೀಯ), 31–36 ಕೆಜಿ ವಿಭಾಗದಲ್ಲಿ ಹೇಮಂತ್(ಪ್ರಥಮ), ಮಧುಯಾದವ್(ದ್ವಿತೀಯ) ಸ್ಥಾನ ಪಡೆದಿದ್ದಾರೆ ಎಂದು ತೀರ್ಪುಗಾರರಾಗಿದ್ದ ಜಂಗಮಕೋಟೆ ಕೋಡೋ ಕರಾಟೆ ಕ್ಲಬ್ ಶಿಕ್ಷಕ ಎಸ್.ಮಹಮ್ಮದ್ ಮತ್ತು ಎಸ್.ನೂರುಲ್ಲಾ ತಿಳಿಸಿದ್ದಾರೆ.
ಮಹಿಳೆಯರು ಹಾಗು ಶಾಲಾಮಕ್ಕಳ ಅತ್ಯಾಚಾರ ವಿರೋಧಿಸಿ ನಡೆದ ಬಂದ್‌ಗೆ ಉತ್ತಮ ಪ್ರತಿಕ್ರಿಯೆ
ಮಹಿಳೆಯರು ಹಾಗು ಶಾಲಾಮಕ್ಕಳ ಮೇಲೆ ನಡೆಯುತ್ತಿರುವ ಅತ್ಯಾಚಾರ ಪ್ರಕರಣಗಳನ್ನು ವಿರೋಧಿಸಿ ನಡೆದ ಬಂದ್‌ಗೆ ಶಿಡ್ಲಘಟ್ಟ ತಾಲ್ಲೂಕಿನಾದ್ಯಂತ ಗುರುವಾರ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗಿದ್ದು ಅಂಗಡಿ, ಮುಗ್ಗಟ್ಟು, ಹೋಟೆಲ್‌ಗಳು ಮುಚ್ಚಿದ್ದು ಜನ ಜೀವನ ಅಸ್ತವ್ಯಸ್ಥವಾಗಿತ್ತು.

ಬಸ್ ಸಂಚಾರವಿಲ್ಲದೆ ಸಂಚಾರ ವ್ಯವಸ್ಥೆ ಸಂಪೂರ್ಣವಾಗಿ ಸ್ತಬ್ಧಗೊಂಡಿತ್ತು. ಪಟ್ಟಣದ ಪ್ರಮುಖ ಬೀದಿಗಳಾದ ಪ್ರವಾಸಿ ಮಂದಿರ ರಸ್ತೆ, ಅಶೋಕ ರಸ್ತೆ ಸೇರಿದಂತೆ ಇನ್ನಿತರೆ ಜನನಿಬಿಡ ರಸ್ತೆಗಳಲ್ಲಿ ಜನ ಸಂಚಾರವಿಲ್ಲದೆ ಬಿಕೋ ಎನ್ನುತ್ತಿದ್ದವು.
ಪ್ರಸಿದ್ಧ ಸರ್ಕಾರಿ ರೇಷ್ಮೆ ಗೂಡಿನ ಮಾರುಕಟ್ಟೆಯಲ್ಲಿ ಮಾತ್ರ ಹರಾಜು ಪ್ರಕ್ರಿಯೆ ಸೇರಿದಂತೆ ವಿವಿಧ ಚಟುವಟಿಕೆಗಳು ಸುಗಮವಾಗಿ ನಡೆದವು.
ಮಾರುಕಟ್ಟೆಗೆ ಎಂದಿನಂತೆ ೧,೧೦೦ ಲಾಟುಗಳಷ್ಟು ರೇಷ್ಮೆಗೂಡು ಆಗಮಿಸಿದ್ದು ಸಮಯಕ್ಕೆ ಸರಿಯಾಗಿ ಹರಾಜು, ತೂಕ ಹಾಕುವುದು, ರೈತರಿಗೆ ಹಣ ಸಂದಾಯ ಸೇರಿದಂತೆ ಮಾರುಕಟ್ಟೆಯಲ್ಲಿ ದಿನವೂ ನಡೆಯುವ ಎಲ್ಲಾ ಪ್ರಕ್ರಿಯೆಗಳು ಗುರುವಾರ ಸುಗಮವಾಗಿ ನಡೆದವು.
ವಿವಿಧ ಸಂಘಟನೆಗಳ ಕಾರ್ಯಕರ್ತರು ಪಟ್ಟಣದ ಪ್ರಮುಖ ರಸ್ತೆಗಳಲ್ಲಿ ಬೈಕ್ ರ್‍ಯಾಲಿ ನಡೆಸಿದರು. ಆ ನಂತರ ಪಟ್ಟಣದ ಬಸ್ ನಿಲ್ದಾಣದ ಬಳಿ ಮಾನವ ಸರಪಳಿ ನಿರ್ಮಿಸಿ ಮಾತನಾಡಿದ ಪ್ರತಿಭಟನಾಕಾರರು ರಾಜ್ಯದಾದ್ಯಂತ ಮಹಿಳೆಯರ ಹಾಗು ಶಾಲಾ ಬಾಲಕಿಯರ ಮೇಲೆ ಅತ್ಯಾಚಾರ ನಡೆಯುತ್ತಿದ್ದರೂ ರಾಜ್ಯ ಸರ್ಕಾರ ಕಣ್ಮುಚ್ಚಿ ಕುಳಿತಿದ್ದು ಸದನದಲ್ಲಿ ಮುಖ್ಯಮಂತ್ರಿ ನಿದ್ದೆ ಮಾಡುತ್ತಿದ್ದಾರೆ. ಮಹಿಳೆಯರಿಗೆ ಸೂಕ್ತ ರಕ್ಷಣೆ ಒದಗಿಸಬೇಕು ಹಾಗು ಅತ್ಯಾಚಾರಿ ಆರೋಪಿಗಳನ್ನು ಕಠಿಣ ಶಿಕ್ಷೆಗೆ ಗುರಿಪಡಿಸಲು ಸರ್ಕಾರ ಮುಂದಾಗಬೇಕು ಎಂದು ಒತ್ತಾಯಿಸಿದರು.
ಸಂಕಷ್ಟದಲ್ಲಿ ರೇಷ್ಮೆ ಕೃಷಿಕರು – ಶಾಸಕ ಎಂ.ರಾಜಣ್ಣ
ತಾಲ್ಲೂಕಿನಲ್ಲಿ ರೇಷ್ಮೆ ಕೃಷಿಕರು ಸಂಕಷ್ಟದಲ್ಲಿದ್ದಾರೆ. ಅತ್ಯಂತ ಕಡಿಮೆ ನೀರಿನಲ್ಲಿ ಬೆಳೆ ತೆಗೆಯಬೇಕಾದ ಪರಿಸ್ಥಿತಿಯಿದೆ ಎಂದು ಶಾಸಕ ಎಂ.ರಾಜಣ್ಣ ತಿಳಿಸಿದರು.
ತಾಲ್ಲೂಕಿನ ಶೀಗೆಹಳ್ಳಿ ಗ್ರಾಮದಲ್ಲಿ ರೇಷ್ಮೆ ಇಲಾಖೆ ಮತ್ತು ಜಿಲ್ಲಾ ಪಂಚಾಯತಿ ವತಿಯಿಂದ ಬುಧವಾರ ನಡೆದ ರೇಷ್ಮೆ ಕೃಷಿ ದ್ವಿತಳಿ ಬೆಳೆ ಕ್ಷೇತ್ರೋತ್ಸವ ಕಾರ್ಯಕ್ರಮವನ್ನು ಉದ್ಘಾಟಿಸಿ ಅವರು ಮಾತನಾಡಿದರು.
ವಿವಿಧ ತಾಂತ್ರಿಕತೆಗಳ ಜ್ಞಾನವನ್ನು ಪಡೆದು ಉತೃಷ್ಟವಾದ ಗುಣಮಟ್ಟದ ರೇಷ್ಮೆ ಬೆಳೆ ಬೆಳೆಯುವ ಅನಿವಾರ್ಯತೆಯಿದೆ. ಸರ್ಕಾರ ಅನುದಾನಗಳನ್ನು ಹಾಗೂ ವಿವಿಧ ಸೌಲಭ್ಯಗಳನ್ನು ಒದಗಿಸಬೇಕಿದೆ. ವಿಜ್ಞಾನಿಗಳು ಹೆಚ್ಚಿನ ಸಂಶೋಧನೆಗಳನ್ನು ನಡೆಸಿ ಭಾರತ ಚೀನಾ ರೇಷ್ಮೆಗೆ ಪೈಪೋಟಿ ನೀಡುವಂತೆ, ನಮ್ಮ ರೈತರು ಅಂತಾರಾಷ್ಟ್ರೀಯ ಗುಣಮಟ್ಟದ ರೇಷ್ಮೆಯನ್ನು ಉತ್ಪಾದಿಸಲು ಬೇಕಾದ ತಳಿಗಳನ್ನು ಅಭಿವೃದ್ಧಿಪಡಿಸಬೇಕು. ಕೃಷಿಯನ್ನೇ ನಂಬಿ, ಅದರಲ್ಲೂ ರೇಷ್ಮೆ ಕೃಷಿಯ ಮೇಲೆ ಅವಲಂಬಿತ ಲಕ್ಷಾಂತರ ಮಂದಿಯ ಬದುಕು ಹಸನಾಗಲು ಸಾಕಷ್ಟು ಕಾರ್ಯಕ್ರಮಗಳು ಹಾಗೂ ಯೋಜನೆಗಳನ್ನು ಹಮ್ಮಿಕೊಳ್ಳಬೇಕಾಗಿದೆ. ರೇಷ್ಮೆ ಹುಳು ಸಾಕಾಣಿಕಾ ಮನೆಗಳ ಸಂಖ್ಯೆ ಹೆಚ್ಚಿಸಿ ಅದಕ್ಕಾಗಿ ನೀಡುವ ಸಹಾಯಧನವನ್ನೂ ಹೆಚ್ಚಿಸಬೇಕು ಎಂದು ಹೇಳಿದರು.
ರೇಷ್ಮೆ ಕೃಷಿ ಅಭಿವೃದ್ಧಿ ಆಯುಕ್ತ ಜಿ.ಸತೀಶ್ ಮಾತನಾಡಿ, ರಾಜ್ಯದಲ್ಲಿ ರೇಷ್ಮೆ ಕೃಷಿಯನ್ನು ಮಾಡುತ್ತಿರುವ 85 ಸಾವಿರ ಮಂದಿಯಲ್ಲಿ ಕೋಲಾರ ಮತ್ತು ಚಿಕ್ಕಬಳ್ಳಾಪುರ ಜಿಲ್ಲೆಗಳಲ್ಲೇ 66 ಸಾವಿರ ಮಂದಿಯಿದ್ದಾರೆ. ರಾಜ್ಯ ಮತ್ತು ಕೇಂದ್ರ ಸರ್ಕಾರದಿಂದ 180 ಕೋಟಿ ಬರುತ್ತಿದೆ. ಅದು ಸಾಲದಾಗಿದ್ದು, ಇನ್ನೂ ಹೆಚ್ಚಿನ ಅನುದಾನದ ಅಗತ್ಯವಿದೆ ಎಂದು ಹೇಳಿದರು.
ದ್ವಿತಳಿ ರೇಷ್ಮೆ ಗೂಡನ್ನು ಉತೃಷ್ಟವಾಗಿ ಬೆಳೆದಿರುವ ಶೀಗೆಹಳ್ಳಿ ನಾರಾಯಣಸ್ವಾಮಿ ಅವರ ರೇಷ್ಮೆ ಗೂಡುಗಳು, ಹುಳುಗಳಿರುವ ಚಂದ್ರಂಕಿಯನ್ನು ಪ್ರದರ್ಶಸಲಾಗಿತ್ತು.
ಉತ್ತಮ ರೇಷ್ಮೆ ಬೆಳೆ ಬೆಳೆಯುತ್ತಿರುವ ರೈತರಾದ ಮುನಿಯಮ್ಮ, ನಾರಾಯಣಸ್ವಾಮಿ, ಕೋಗಿಲಪ್ಪ, ವೆಂಕಟೇಶಪ್ಪ ಮತ್ತು ರೀಲರುಗಳಾದ ಮೆಹಬೂಬ್‌ಖಾನ್, ರಾಮಚಂದ್ರಪ್ಪ ಅವರನ್ನು ಈ ಸಂದರ್ಭದಲ್ಲಿ ಸನ್ಮಾನಿಸಲಾಯಿತು.
ತಲಘಟ್ಟಪುರ ರೇಷ್ಮೆ ಸಂಶೋಧನಾ ಕೇಂದ್ರದ ವಿಜ್ಞಾನಿಗಳಾದ ಡಾ.ಸುಕುಮಾರ್, ಡಾ.ತಿಮ್ಮರೆಡ್ಡಿ, ಡಾ.ಎನ್.ಆರ್.ಪ್ರಸಾದ್, ಡಾ.ಹೇಮಾನಂದರೆಡ್ಡಿ, ಡಾ.ಸತೀಶ್‌ವರ್ಮ, ಡಾ.ಫಣಿರಾಜ್ ಹಿಪ್ಪುನೇರಳೆ ತೋಟದ ನಿರ್ವಹಣೆ ಮತ್ತು ರೇಷ್ಮೆ ಬೆಳೆಯ ಸಂರಕ್ಷಣೆ ಕುರಿತಂತೆ ಮಾಹಿತಿ ನೀಡಿದರು.
ಜಿಲ್ಲಾ ಪಂಚಾಯತಿ ಸದಸ್ಯರಾದ ಎಸ್.ಎಂ.ನಾರಾಯಣಸ್ವಾಮಿ, ಶಿವಲೀಲಾ ರಾಜಣ್ಣ, ಕೆ.ಎಂ.ಎಫ್. ನಿರ್ದೇಶಕ ಬಂಕ್ ಮುನಿಯಪ್ಪ, ಸೂರ್ಯನಾರಾಯಣಗೌಡ, ಸಹಕಾರ ಸಂಘದ ಶಿವಣ್ಣ, ಕೇಂದ್ರ ರೇಷ್ಮೆ ಮಂಡಳಿ ಸದಸ್ಯರಾದ ಆರ್.ಕೆ.ರಾಮಕೃಷ್ಣಪ್ಪ, ಯಲುವಳ್ಳಿ ರಮೇಶ್, ತಾಲ್ಲೂಕು ಪಂಚಾಯಿತಿ ಅಧ್ಯಕ್ಷೆ ಆಂಜನಮ್ಮ, ಸದಸ್ಯೆ ಪಿ.ನೇತ್ರ, ರೇಷ್ಮೆ ಉಪನಿರ್ದೇಶಕ ಬಿ.ಆರ್.ನಾಗಭೂಷಣ, ಜಂಟಿ ನಿರ್ದೇಶಕರಾದ ಪ್ರಭಾಕರ್, ರಾಜಣ್ಣ, ಉಪನಿರ್ದೇಶಕ ಎಂ.ನರಸಿಂಹಮೂರ್ತಿ, ಸಹಾಯಕ ನಿರ್ದೇಶಕ ಚಂದ್ರಪ್ಪ ಮತ್ತಿತರರು ಈ ಸಂದರ್ಭದಲ್ಲಿ ಹಾಜರಿದ್ದರು.
ಶಾಲೆಗೆ ತರಲು ಮಕ್ಕಳ ಮನೆಗಳ ಮುಂದೆ ಧರಣಿ – Education Quest, Sidlaghatta
Education quest from school children of Anemadugu Govt School promoting admission to schools.
ತಾಲ್ಲೂಕಿನ ಆನೆಮಡುಗು ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯ ವಿದ್ಯಾರ್ಥಿಗಳು ಮತ್ತು ಶಿಕ್ಷಕರು ಶಾಲೆಯಿಂದ ಹೊರಗುಳಿದ ಮಕ್ಕಳನ್ನು ಶಾಲೆಗೆ ತರಲು ಅವರ ಮನೆಗಳ ಮುಂದೆ ಧರಣಿ ನಡೆಸಿದರು.
ಶಾಲೆಯ ಎಂಟು ಮಕ್ಕಳು ಧೀರ್ಘ ಗೈರು ಹಾಜರಾಗಿದ್ದುದರಿಂದ ಒಂದರಿಂದ ಎಂಟನೇ ತರಗತಿಯ 200 ಮಕ್ಕಳು ಗ್ರಾಮದಲ್ಲೆ ಜಾಥಾ ನಡೆಸಿ, ಘೋಷಣೆಗಳನ್ನು ಕೂಗುತ್ತಾ ಗೂರುಹಾಜರಾದ ಮಕ್ಕಳ ಮನೆಯ ಮುಂದೆ ಧರಣಿ ನಡೆಸಿದರು.
‘ದಾಖಲಾತಿ ಆಂಧೋಲನಕ್ಕೆ ಜಯವಾಗಲಿ’, ‘ಬಾ ಬಾ ಶಾಲೆಗೆ’, ‘ಕಳಿಸಿ ಕಳಿಸಿ ಶಾಲೆಗೆ ಕಳಿಸಿ’, ‘ಹೆಣ್ಣೊಂದು ಕಲಿತರೆ ಶಾಲೆಯೊಂದು ತೆರೆದಂತೆ’ ಎಂಬ ಘೋಷಣೆಗಳನ್ನು ಕೂಗಿದರು.
ಶಾಲೆಗೆ ಮಕ್ಕಳು ಬರುವವರೆಗೂ ಧರಣಿ ನಡೆಸಿ, ಗೈರು ಹಾಜರಾಗಿದ್ದು, ಮನೆಗೆಲಸ ಮಾಡಿಕೊಂಡಿದ್ದ ಎಂಟು ಮಕ್ಕಳನ್ನು ಶಾಲೆಗೆ ಕರೆದುಕೊಂಡು ಹೋದರು.
ಮುಖ್ಯ ಶಿಕ್ಷಕ ಕೆ.ವಿ.ಪ್ರಕಾಶ್‌ಬಾಬು, ಶಿಕ್ಷಕರಾದ ನಾರಾಯಣಸ್ವಾಮಿ, ವೆಂಕಟರೆಡ್ಡಿ, ಲಕ್ಷ್ಮೀನಾರಾಯಣ, ಹೇಮಲತಾ ಈ ಸಂದರ್ಭದಲ್ಲಿ ಹಾಜರಿದ್ದರು.

