16.1 C
Sidlaghatta
Friday, December 26, 2025
Home Blog Page 1034

ಮಕ್ಕಳು ತಮ್ಮ ಅನುಭವಗಳನ್ನು ಬರೆದಿಡಬೇಕು – ಕನ್ನಡ ಲೇಖಕಿ ಪಿ.ಆರ್‌.ಮೀರಾ

0

ತಾಲ್ಲೂಕಿನ ವರದನಾಯಕನಹಳ್ಳಿ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಗೆ ಬುಧವಾರ ಭಾರತ ಮೂಲದ ಅಮೇರಿಕೆಯ ನಿವಾಸಿ ಕನ್ನಡ ಲೇಖಕಿ ಪಿ.ಆರ್‌.ಮೀರಾ ಭೇಟಿ ನೀಡಿ ಶಾಲೆಯ ಗ್ರಂಥಾಲಯಕ್ಕೆ ಪುಸ್ತಕಗಳನ್ನು ನೀಡಿದರು.

ಶಾಲೆಯ ಆವರಣದಲ್ಲಿ ಭಾರತ ಮೂಲದ ಅಮೇರಿಕೆಯ ನಿವಾಸಿ ಕನ್ನಡ ಲೇಖಕಿ ಪಿ.ಆರ್‌.ಮೀರಾ ಸಂಪಿಗೆ ಸಸಿಯನ್ನು ನೆಟ್ಟರು.
ಶಾಲೆಯ ಆವರಣದಲ್ಲಿ ಭಾರತ ಮೂಲದ ಅಮೇರಿಕೆಯ ನಿವಾಸಿ ಕನ್ನಡ ಲೇಖಕಿ ಪಿ.ಆರ್‌.ಮೀರಾ ಸಂಪಿಗೆ ಸಸಿಯನ್ನು ನೆಟ್ಟರು.
ಈ ಸಂದರ್ಭದಲ್ಲಿ ಶಾಲೆಯ ಆವರಣದಲ್ಲಿ ಸಂಪಿಗೆ ಸಸಿಯೊಂದನ್ನು ನೆಟ್ಟು, ಶಾಲೆಯ ಚಟುವಟಿಕೆಗಳನ್ನು ವೀಕ್ಷಿಸಿ, ‘ಮಕ್ಕಳು ಪ್ರಪಂಚವನ್ನು ಪುಸ್ತಕದ ಮೂಲಕ ನೋಡಬೇಕು. ಅಮೆರಿಕೆಯ ಇತಿಹಾಸವನ್ನು ಸಾರುವ ಲಾರಾ ಇಂಗಲ್ಸ್‌ ವೈಲ್ಡರ್‌ ಎಂಬ ಬಾಲಕಿಯ ಅನುಭವಗಾಥೆಯಿಂದ ನಾವು ಸಾಕಷ್ಟು ಕಲಿಯಬಹುದಾಗಿದೆ. ಮಕ್ಕಳು ಈ ಪುಸ್ತಕಗಳನ್ನು ಓದಿ ತಮ್ಮ ಅನುಭವಗಳನ್ನು ಬರೆಯಬೇಕು. ಮೂರು ವರ್ಷದ ಹಿಂದೆ ಈ ಶಾಲೆಗೆ ಭೇಟಿ ನೀಡಿದ್ದಾಗ ನೆಟ್ಟ ನೆಲ್ಲಿಕಾಯಿ ಸಸಿ ಇಂದು ಎತ್ತರವಾಗಿ ಬೆಳೆದಿದೆ. ಅದರಂತೆಯೇ ಮಕ್ಕಳೂ ಜ್ಞಾನಾರ್ಜನೆ ಹೊಂದಿ ಎತ್ತರವಾಗಿ ಬೆಳೆಯಬೇಕು. ಚೆನ್ನಾಗಿ ಓದಿ ನಿಮಗೆ ಆಸಕ್ತಿಯಿರುವ ಕ್ಷೇತ್ರವನ್ನು ಆಯ್ಕೆ ಮಾಡಿಕೊಳ್ಳಿ’ ಎಂದು ಹೇಳಿದರು.
ಶಾಲಾ ವಿದ್ಯಾರ್ಥಿಗಳು ತಯಾರಿಸಿರುವ ಪ್ಲಾಸ್ಟಿಕ್‌ ಹೂ ಹಾರಗಳು, ದ್ರವ ಸಾಬೂನು, ಚಿತ್ರಗಳು, ಕರಕುಶಲ ವಸ್ತುಗಳು ಮುಂತಾದವುಗಳನ್ನು ಪ್ರದರ್ಶಿಸಲಾಗಿತ್ತು. ಶಿಕ್ಷಕರಾದ ಎಚ್‌.ವಿ.ವೆಂಕಟರೆಡ್ಡಿ, ನಾಗಭೂಷಣ್‌, ರಾಮಕೃಷ್ಣ, ಗಂಗಶಿವಪ್ಪ ಈ ಸಂದರ್ಭದಲ್ಲಿ ಹಾಜರಿದ್ದರು.

ಸಡಗರ, ಸಂಭ್ರಮದೊಂದಿಗೆ ರಂಜಾನ್ ಹಬ್ಬದ ಆಚರಣೆ

0

ಪಟ್ಟಣದಲ್ಲಿ ಮಂಗಳವಾರ ಮುಸ್ಲೀಮರು ಸಡಗರ, ಸಂಭ್ರಮದೊಂದಿಗೆ ರಂಜಾನ್ ಹಬ್ಬವನ್ನು ಸಡಗರ, ಸಂಭ್ರಮದೊಂದಿಗೆ ಆಚರಿಸಿದರು. ಪ್ರಮುಖ ಬೀದಿಯಲ್ಲಿ ಮೆರವಣಿಗೆಯೊಂದಿಗೆ ಸಾಗಿದ ಮುಸ್ಲಿಂ ಸಮುದಾಯದ ಮುಖಂಡರು ಹಾಗೂ ಬಂಧುಗಳು ಬೈಪಾಸ್‌ ರಸ್ತೆಯಲ್ಲಿರುವ ಈದ್ಗಾ ಮೈದಾನದಲ್ಲಿ ವಿಶೇಷ ಪ್ರಾರ್ಥನೆ ಸಲ್ಲಿಸಿ ಪರಸ್ಪರ ಶುಭಾಶಯ ಹಂಚಿಕೊಂಡರು. ತಮ್ಮ ಮನೆಗಳಲ್ಲಿ ವಿಶೇಷ ಹಬ್ಬದೂಟ ಆಚರಿಸಿದರು. ಕ್ಷೇತ್ರದ ಶಾಸಕ ಎಂ.ರಾಜಣ್ಣ ಈದ್ಗಾ ಮೈದಾನಕ್ಕೆ ತೆರಳಿ ತಾಲ್ಲೂಕಿನ ಎಲ್ಲಾ ಮುಸ್ಲಿಂ ಬಾಂಧವರಿಗೆ ಶುಭಾಶಯವನ್ನು ಕೋರಿದರು. ಕೆಲವರು ತಮ್ಮ ಹಿರಿಯರ ಸಮಾಧಿಗೆ ಹೂಗಳಿಂದ ಅಲಂಕರಿಸಿ, ಅತ್ತರ್‌ ಹಾಕಿ, ಊದುಬತ್ತಿ ಬೆಳಗಿ ಪೂಜೆ ಸಲ್ಲಿಸಿದರು. ಬಡವರಿಗೆ ದಾನವನ್ನು ನೀಡಿದರು.
ಬೆಳಿಗ್ಗೆಯಿಂದ ಸಂಜೆಯವರೆಗೆ ಪರಸ್ಪರ ಅಪ್ಪಿಕೊಳ್ಳುತ್ತ ಶುಭಾಶಯ ವಿನಿಮಯ ಮಾಡಿಕೊಳ್ಳುತ್ತಿದ್ದ ದೃಶ್ಯ ಇಡೀ ದಿನ ನಡೆದೇ ಇತ್ತು. ಮಕ್ಕಳು, ಮಹಿಳೆಯರು, ಹಿರಿಯರಾದಿಯಾಗಿ ಎಲ್ಲರೂ ಹೊಸ ಉಡುಗೆಗಳನ್ನು ತೊಟ್ಟು ಸಿಹಿಯನ್ನು ಸೇವಿಸಿ ಸಂಭ್ರಮಿಸಿದರು. ಮುಸ್ಲೀಮರು ತಮ್ಮ ಬಂಧು ಬಾಂಧವರು, ಸ್ನೇಹಿತರನ್ನು ಆದರದಿಂದ ಮನೆಗೆ ಬರಮಾಡಿಕೊಂಡು ಭೋಜನ ಮಾಡಿಸಿದರು. ರಂಜಾನ್ ಹಬ್ಬದ ಹಿನ್ನೆಲೆಯಲ್ಲಿ ಪಟ್ಟಣದಲ್ಲಿ ನೀರವ ವಾತಾವರಣವಿತ್ತು. ಬಹುತೇಕ ಅಂಗಡಿ-ಮುಂಗಟ್ಟುಗಳು ಮುಚ್ಚಲ್ಪಟ್ಟಿದ್ದವು, ವ್ಯಾಪಾರ ವಹಿವಾಟು ಮಂದವಾಗಿತ್ತು. ಪಟ್ಟಣದ ಬೀದಿಗಳಲ್ಲಿ ಎಂದಿನಂತೆ ವಾಹನ ಸಂಚಾರ ಅಷ್ಟೊಂದು ಕಂಡುಬರಲಿಲ್ಲ. ಈದ್ಗಾ ಮೈದಾನದ ಬಳಿ ವಿವಿಧ ಅಂಗಡಿ ಮುಂಗಟ್ಟುಗಳು ತಾತ್ಕಾಲಿಕವಾಗಿ ತೆರೆದಿದ್ದು, ತಿನಿಸುಗಳು, ಆಟಿಕೆಗಳು, ಹೂಗಳು, ಪೂಜಾ ಸಾಮಾನುಗಳು ಮುಂತಾದವುಗಳನ್ನು ಮಾರಾಟ ಮಾಡುತ್ತಿದ್ದರು. ವಿವಿಧ ಮಸೀದಿಗಳ ಮೌಲ್ವಿಗಳು ಈ ಸಂದರ್ಭದಲ್ಲಿ ಪ್ರಾರ್ಥನೆ ಸಲ್ಲಿಸಿದವರಿಗೆ ಹಿತನುಡಿಗಳನ್ನು ಹೇಳಿದರು.
‘ರಂಜಾನ್ ಉಪವಾಸ ಮುಸ್ಲಿಮನೆನಿಸಿಕೊಳ್ಳಬೇಕಾದರೆ ಪಾಲಿಸಬೇಕಾದ ಐದು ಕರ್ತವ್ಯಗಳ್ಲಲಿ ಒಂದು. ಉಪವಾಸವನ್ನು ಅರಬಿಕ್ ಭಾಷೆಯ್ಲಲಿ ‘ಸೌಮ್’ ಎಂದರೆ, ಪರ್ಷಿಯನ್ ಮತ್ತು ಉರ್ದು ಭಾಷೆಯ್ಲಲಿ ‘ರೋಜಾ’ ಎಂದು ಕರೆಯಲಾಗುತ್ತದೆ. ಇಸ್ಲಾಮ್ ಧರ್ಮದ ಅನುಯಾಯಿಗಳು ಕಡ್ಡಾಯವಾಗಿ ವರ್ಷದ ಒಂಭತ್ತನೆಯ ತಿಂಗಳಾದ ರಂಜಾನ್ ತಿಂಗಳು ಪೂರ್ತಿ ಹಗಲು ಉಪವಾಸವನ್ನು ಆಚರಿಸಬೇಕಾಗುತ್ತದೆ. ಈ ತಿಂಗಳ್ಲಲಿ ಉಪವಾಸ, ದಾನ ಧರ್ಮ ಮಾಡುವುದರಿಂದ ಅರಿಶಡ್ವರ್ಗಗಳೇ ಮುಂತಾದ ಆಂತರ್ಯದ ಕಲ್ಮಶಗಳನ್ನು ಸುಟ್ಟು ಹೃದಯವನ್ನು ಪವಿತ್ರಗೊಳಿಸಲಾಗುತ್ತದೆ.
ಈ ಆಚರಣೆಯನ್ನು ನಿಯಮ, ಶಿಸ್ತುಗಳಿಗೆ ಬದ್ಧವಾಗಿಸಿ ಸರಳವಾಗಿ ಆಚರಿಸುವಂತೆ ಮುಸ್ಲಿಮರಿಗೆ ಪ್ರವಾದಿಯವರು ಕಡ್ಡಾಯಗೊಳಿಸಿದರು. ದಾನವನ್ನು ಕೂಡ ಉಳ್ಳವರು ಕ್ರಮಬದ್ಧವಾಗಿ ಮತ್ತು ನಿಯಮಬದ್ಧವಾಗಿ, ಬಡಬಗ್ಗರಿಗೆ ಇಂತಿಷ್ಟು ಪಾಲು ತಮ್ಮ ಧನಕನಕಗಳಿಂದ ನೀಡಬೇಕೆಂದು ನಿಯಮವನ್ನು ರೂಢಿಯನ್ನು ತಂದರು’ ಎಂದು ಈ ಸಂದರ್ಭದಲ್ಲಿ ಹಿರಿಯ ಮೌಲ್ವಿ ಮಹಮ್ಮದ್‌ ಅಷ್‌ಸ್ವಾಖ್‌ ಅಹಮದ್‌ ರಜ್ವಿ ತಿಳಿಸಿದರು.
ಮೌಲ್ವಿ ಮಹಮ್ಮದ್‌ ಅಸ್ಲಂ, ಸದರ್‌ ರಫೀಕ್‌ ಸಾಬ್‌, ಅಬ್ದುಲ್‌ ಸಲಾಂ, ಮುಖಂಡರಾದ ಬಂಕ್‌ಮುನಿಯಪ್ಪ, ಸೂರ್ಯನಾರಾಯಣಗೌಡ, ಅಫ್ಸರ್‌ಪಾಷ, ರಹಮತ್ತುಲ್ಲ, ಓ.ಟಿ.ಮುನಿಕೃಷ್ಣಪ್ಪ, ಮಹಬೂಬ್‌, ಸದರ್‌ ರಫೀಕ್‌ ಸಾಬ್‌, ಅಬ್ದುಲ್‌ ಸಲಾಂ ಮತ್ತಿತರರು ಈ ಸಂದರ್ಭದಲ್ಲಿ ಹಾಜರಿದ್ದರು.

ಜುಲೈ 31 ರಂದು ಬಂದ್‌

0

ಮಹಿಳೆಯರು ಹಾಗೂ ಶಾಲಾ ಮಕ್ಕಳ ಮೇಲೆ ನಡೆಯುತ್ತಿರುವ ಅತ್ಯಾಚಾರ ಪ್ರಕರಣಗಳು ಹಾಗೂ ದೌರ್ಜನ್ಯಗಳನ್ನು ಖಂಡಿಸಿ ಜುಲೈ 31 ರಂದು ಬಂದ್‌ಗೆ ಕರೆ ನೀಡಿದ್ದು, ಸಾರ್ವಜನಿಕರು, ಸಂಘ ಸಂಸ್ಥೆಗಳು ಸಹಕಾರ ನೀಡಬೇಕು ಎಂದು ಸಿ.ಐ.ಟಿ.ಯು.ಜಿಲ್ಲಾ ಪ್ರಧಾನಕಾರ್ಯದರ್ಶಿ ಲಕ್ಷ್ಮೀದೇವಮ್ಮ ಮನವಿ ಮಾಡಿದ್ದಾರೆ.
ಪಟ್ಟಣದ ಪ್ರವಾಸಿ ಮಂದಿರಲ್ಲಿ ಪೂರ್ವಭಾವಿ ಸಭೆಯಲ್ಲಿ ಮಾತನಾಡಿದ ಅವರು ಇತ್ತಿಚೆಗೆ ರಾಜ್ಯದಲ್ಲಿ ಮಹಿಳೆಯರು ಹಾಗೂ ಶಾಲಾ ಮಕ್ಕಳ ಮೇಲೆ ನಡೆಯುತ್ತಿರುವ ಅತ್ಯಾಚಾರ ಪ್ರಕರಣಗಳನ್ನು ಹತ್ತಿಕ್ಕುವಲ್ಲಿ ರಾಜ್ಯ ಸರ್ಕಾರ ವಿಫಲವಾಗಿದೆ, ದಕ್ಷ ಆಡಳಿತವನ್ನು ನೀಡುವ ಭರವಸೆಯನ್ನು ನೀಡಿದ್ದ ಮುಖ್ಯಮಂತ್ರಿ ಸಿದ್ಧರಾಮಯ್ಯ ಅತ್ಯಾಚಾರದ ಬಗ್ಗೆ ಮಾಧ್ಯಮಗಳು ಪ್ರಶ್ನೆ ಮಾಡಿದರೆ ಹಾರಿಕೆಯ ಉತ್ತರಗಳನ್ನು ನೀಡುತ್ತಿದ್ದಾರೆ, ಚರ್ಚೆ ನಡೆಯುವ ಸಂಧರ್ಭದಲ್ಲಿ ಸದನದಲ್ಲಿ ನಿದ್ದೆ ಮಾಡುತ್ತಿದ್ದಾರೆ, ಇವರ ಆಡಳಿತ ವೈಖರಿಗೆ ಪೋಲಿಸ್ ಇಲಾಖೆ ಕೂಡಾ ಮಹಿಳೆಯರು ಹಾಗೂ ಮಕ್ಕಳಿಗೆ ರಕ್ಷಣೆ ನೀಡುವಲ್ಲಿ ವಿಫಲವಾಗಿದೆ ಎಂದರು.
ಜುಲೈ 31 ರಂದು ಬಂದ್‌ಗೆ ಕರೆ ನೀಡಿದ್ದು, ಸಾರಿಗೆ ವ್ಯವಸ್ಥೆ, ಅಂಗಡಿ ಮುಂಗಟ್ಟುಗಳನ್ನು ಬಂದ್ ಮಾಡಿ ನಾಗರಿಕರು ಸಹಕಾರ ನೀಡಬೇಕು ಎಂದಿದ್ದಾರೆ.
ಸಿ.ಪಿ.ಐ.ಎಂ.ಜಿಲ್ಲಾ ಕಾರ್ಯದರ್ಶಿ ಎಂ.ಪಿ.ಮುನಿವೆಂಕಟಪ್ಪ, ಜಿಲ್ಲಾ ಪಂಚಾಯತಿ ಸದಸ್ಯೆ ಸಾವಿತ್ರಮ್ಮ, ಡಿ.ವೈ.ಎಫ್.ಐ.ಸಂಘಟನೆಯ ಫಯಾಜ್‌ಅಹ್ಮದ್, ತಾಲ್ಲೂಕು ಸಂಚಾಲಕ ಸದಾನಂದ, ಅಪ್ಪು, ವಿಸ್ಡಂ ನಾಗರಾಜ್‌, ಮಕ್ಸೂದ್‌ ಮುಂತಾದವರು ಹಾಜರಿದ್ದರು.

ವಿಶೇಷ ದಾಖಲಾತಿ ಆಂದೋಲನ ಜಾಥಾ

0

ಶಾಲೆಬಿಟ್ಟ ಮಕ್ಕಳನ್ನು ಶಾಲೆಗೆ ಸೇರಿಸುವ ಶಿಕ್ಷಣ ಇಲಾಖೆಯ ಕಾರ್ಯಕ್ರಮದ ಅಂಗವಾಗಿ ಪಟ್ಟಣದ ಸರ್ಕಾರಿ ಪ್ರೌಢಶಾಲೆಯ ವಿದ್ಯಾರ್ಥಿಗಳು ಸೋಮವಾರ ಮೆರವಣಿಗೆಯ ಮೂಲಕ ಜನರಲ್ಲಿ ಅರಿವು ಮೂಡಿಸಿದರು.
‘ಮಕ್ಕಳನ್ನು ಶಾಲೆಗೆ ಕಳುಹಿಸಿ’, ‘ಬಾಲ ಕಾರ್ಮಿಕ ಪದ್ಧತಿಗೆ ಧಿಕ್ಕಾರ’, ‘ಮಕ್ಕಳು ಶಿಕ್ಷಣ ವಂಚಿತರಾಗಬಾರದು’ ಎಂಬ ಘೋಷಣೆಗಳನ್ನು ಕೂಗುತ್ತಾ ಪ್ರಮುಖ ಬೀದಿಗಳಲ್ಲಿ ವಿದ್ಯಾರ್ಥಿಗಳು ಮೆರವಣಿಗೆ ನಡೆಸಿದರು.
‘ಆರರಿಂದ ಹದಿನಾಲ್ಕು ವರ್ಷದ ಮಕ್ಕಳು ಶಾಲೆಯಲ್ಲಿರಬೇಕು. ಯಾವುದೇ ರೀತಿಯ ದುಡಿಮೆ ಹಾಗೂ ಜೀತಕ್ಕೆ ಅವರನ್ನು ಕಳುಹಿಸಬಾರದು. ಅದು ಕಾನೂನು ರೀತಿಯಲ್ಲಿ ಅಪರಾಧ ಕೂಡ. ಆಡುವ ವಯಸ್ಸಿನಲ್ಲಿ ಆಡಬೇಕು. ಓದುವ ವಯಸ್ಸಿನಲ್ಲಿ ಓದಬೇಕು. ಆಡುತ್ತಾ ಕಲಿಯಬೇಕಿರುವ ಮಕ್ಕಳನ್ನು ಕೆಲಸಕ್ಕೆ ಹಾಕುವುದು ಅಮಾನುಷವಾದದ್ದು. ಸಾರ್ವಜನಿಕರು ಈ ರೀತಿಯಲ್ಲಿ ದುಡಿಯುತ್ತಿರುವ ಮಕ್ಕಳನ್ನು ಕಂಡಾಗ ಅವರ ಪೋಷಕರ ಮನವೊಲಿಸಿ ಶಾಲೆಗೆ ಕಳುಹಿಸಬೇಕು. ಈಗಾಗಲೇ ಮನೆಮನೆಗೆ ಹೋಗಿ ಎಂಟು ಮಕ್ಕಳನ್ನು ಶಾಲೆಗೆ ಕರೆತಂದಿದ್ದೇವೆ. ಸಮುದಾಯದ ಸಹಕಾರವಿದ್ದರೆ ಮಾತ್ರ ಈ ಕಾರ್ಯಕ್ರಮ ಯಶಸ್ವಿಯಾಗಲು ಸಾಧ್ಯ’ ಎಂದು ಶಿಕ್ಷಕ ಸರ್ದಾರ್‌ ತಿಳಿಸಿದರು.
ಬೂದಾಳ ಗೇಟ್‌ನ ಗರುಡಾದ್ರಿ ಪಬ್ಲಿಕ್‌ ಶಾಲೆಯ ವಿದ್ಯಾರ್ಥಿಗಳು ಬ್ಯಾಂಡ್‌ಸೆಟ್‌ನೊಂದಿಗೆ ವಿಶೇಷ ದಾಖಲಾತಿ ಆಂದೋಲನ ಜಾಥಾ ನಡೆಸಿದರು.

ಮನವಿ ಸಲ್ಲಿಸಿದ ಮಾನವ ಹಕ್ಕುಗಳ ಜನ ಜಾಗೃತಿ ಸಮಿತಿಯ ಕಾರ್ಯಕರ್ತರು

0

ರಾಜ್ಯದಲ್ಲಿ ಇತ್ತೀಚೆಗೆ ಶಾಲಾ ಬಾಲಕಿಯರು ಹಾಗೂ ಮಹಿಳೆಯರ ಮೇಲೆ ನಡೆಯುತ್ತಿರುವ ಅತ್ಯಾಚಾರ ಪ್ರಕರಣಗಳಲ್ಲಿ ಬಂಧಿಸಿರುವ ಆರೋಪಿಗಳನ್ನು ಕಠಿಣವಾದ ಶಿಕ್ಷೆಗೆ ಗುರಿಪಡಿಸಬೇಕು ಎಂದು ಮಾನವ ಹಕ್ಕುಗಳ ಜನ ಜಾಗೃತಿ ಸಮಿತಿಯ ಕಾರ್ಯಕರ್ತರು ಸೋಮವಾರ ತಹಶೀಲ್ದಾರರ ಮುಖಾಂತರ ರಾಜ್ಯಪಾಲರಿಗೆ ಮನವಿ ಸಲ್ಲಿಸಿದರು.
ಪಟ್ಟಣದ ತಾಲ್ಲೂಕು ಮಾನವ ಹಕ್ಕುಗಳ ಜನ ಜಾಗೃತಿ ಸಮಿತಿಯ ಮಹಿಳಾ ಅಧ್ಯಕ್ಷೆ ಯಾಸ್ಮೀನ್‌ತಾಜ್ ಮಾತನಾಡಿ ಇತ್ತಿಚೆಗೆ ರಾಜ್ಯದಲ್ಲಿ ಸೇರಿದಂತೆ ದೇಶದಲ್ಲಿ ಆಗುತ್ತಿರುವ ಅತ್ಯಾಚಾರ ಪ್ರಕರಣಗಳನ್ನು ಮಟ್ಟಹಾಕಲು ಸರ್ಕಾರಗಳು ವಿಫಲವಾಗಿವೆ, ಹೆಣ್ಣು ಮಕ್ಕಳು ಹಾಗೂ ಮಹಿಳೆಯರ ರಕ್ಷಣೆಗಾಗಿ ವಿಶೇಷವಾದ ಕಾಯಿದೆಯನ್ನು ರೂಪಿಸಿ, ಸುಭದ್ರವಾದ ರಾಷ್ಟ್ರನಿರ್ಮಾಣಕ್ಕೆ ಸರ್ಕಾರಗಳು ಮುಂದಾಗಬೇಕು ಎಂದರು.
ತಾಲ್ಲೂಕು ಘಟಕದ ಪದಾಧಿಕಾರಿಗಳು ವೇಣುಗೋಪಾಲಸ್ವಾಮಿ ದೇವಾಲಯದಿಂದ ಮೆರವಣಿಗೆ ನಡೆಸಿ ತಾಲ್ಲೂಕು ಕಚೇರಿಯ ಮುಂದೆ ಅತ್ಯಾಚಾರ ಪ್ರಕರಣಗಳ ಆರೋಪಿಗಳ ವಿರುದ್ಧ ಘೋಷಣೆಗಳನ್ನು ಕೂಗಿ ತಹಶೀಲ್ದಾರರ ಮುಖಾಂತರ ಮನವಿಯನ್ನು ರಾಜ್ಯಪಾಲರಿಗೆ ಸಲ್ಲಿಸಿದರು.
ಮಾನವ ಹಕ್ಕುಗಳ ಜನ ಜಾಗೃತಿ ಸಮಿತಿಯ ಅಧ್ಯಕ್ಷ ಎಚ್.ಶಂಕರ್, ಉಪಾಧ್ಯಕ್ಷ ಎಂ.ಮಂಜುನಾಥ್, ನಗರದ ಅಧ್ಯಕ್ಷ ಕೃಷ್ಣಮೂರ್ತಿ, ರಾಮಾಂಜಿನಪ್ಪ, ಕೆ.ಶ್ರೀನಾಥ್, ದೇವರಾಜು, ಎಲ್.ಮಧುಸೂದನ್, ವೆಂಕಟೇಶ್, ಜೆ.ಜೆ.ಹರೀಶ್, ಕಿಟ್ಟಿ, ಮುರಳಿ, ಅಣ್ಣಪ್ಪ, ಗೌಸ್, ಪ್ರಭಾಕರ್, ಮುನಿಕೃಷ್ಣ, ಮತ್ತಿತರರು ಹಾಜರಿದ್ದರು.

ನೆನಪಿನಂಗಳಕ್ಕೆ ಜಾರಿದ ಶಿಡ್ಲಘಟ್ಟದ ಮೊಟ್ಟಮೊದಲ ಚಿತ್ರಮಂದಿರ

0

ಬೆಳ್ಳಿಪರದೆಯ ಮೇಲೆ ಕಾಣುವ ಕನಸಿನ ಲೋಕದಲ್ಲಿ ವಿಹರಿಸಿ ಬರುವುದೇ ಒಂದು ಕಾಲದ ಪ್ರಮುಖ ಮನರಂಜನೆಯಾಗಿತ್ತು. ಆದ್ಯತೆಗಳು ಬದಲಾಗುತ್ತಿದ್ದಂತೆ ಜನರ ಮನರಂಜನಾ ಮೂಲವಾಗಿದ್ದ ಚಿತ್ರಮಂದಿರಗಳು ತೆರೆಮರೆಗೆ ಸರಿಯುತ್ತಿವೆ. ಸಿಂಗಲ್ ಸ್ಕ್ರೀನ್ ಚಿತ್ರಮಂದಿರಗಳು ಮಾಲೀಕರಿಗೆ ಸರಿಯಾದ ಆದಾಯ ತರದ ಹಿನ್ನಲೆಯಲ್ಲಿ ನಗರಗಳಲ್ಲಿ ಒಂದೊಂದೇ ಚಿತ್ರಮಂದಿರಗಳು ಬಾಗಿಲು ಮುಚ್ಚುತ್ತಿವೆ. ತಾಲ್ಲೂಕು ಕೇಂದ್ರಗಳಲ್ಲೂ ಚಿತ್ರಮಂದಿರ ಮುಚ್ಚುತ್ತಿರುವುದು ಕಾಲದ ವಿಪರ್ಯಾಸವಾಗಿದೆ.
ಶಿಡ್ಲಘಟ್ಟದ ಮೊಟ್ಟಮೊದಲ ಚಿತ್ರಮಂದಿರವಾಗಿದ್ದ ವಿಜಯಲಕ್ಷ್ಮಿ ಚಿತ್ರಮಂದಿರ ತನ್ನ ಆಟ ಮುಗಿಸಿದೆ. ಸುಮಾರು ಆರೂವರೆ ದಶಕಗಳ ಕಾಲ ತಾಲ್ಲೂಕಿನ ಜನರನ್ನು ಕನಸಿನ ಲೋಕದಲ್ಲಿ ನೆಚ್ಚಿನ ತಾರೆಯರೊಂದಿಗೆ ವಿಹರಿಸುವಂತೆ ಮಾಡಿದ್ದ ಚಿತ್ರಮಂದಿರ ಇತಿಹಾಸಕ್ಕೆ ಸೇರಿದೆ. ತಾಲ್ಲೂಕಿನ ಮೇಲೂರು, ಮಳ್ಳೂರು, ದಿಬ್ಬೂರಹಳ್ಳಿ ಮತ್ತು ಎಚ್‌.ಕ್ರಾಸ್‌ನಲ್ಲಿದ್ದ ಚಿತ್ರಮಂದಿರಗಳು ಈಗಾಗಲೇ ಇತಿಹಾಸ ಸೇರಿವೆ. ಟೀವಿ, ಕೇಬಲ್‌ ನೆಟ್‌ವರ್ಕ್‌, ಸೆಟಲೈಟ್‌ ಚಾನಲ್‌, ಡಿವಿಡಿ, ಮೊಬೈಲ್‌, ಇಂಟರ್‌ನೆಟ್‌ ಮುಂತಾದ ತಾಂತ್ರಿಕ ಪ್ರಗತಿಯಿಂದಾಗಿ ಈಗ ಮನೆಯಲ್ಲೇ ಕುಳಿತು, ಅಂಗೈನಲ್ಲೇ ಚಿತ್ರವನ್ನು ವೀಕ್ಷಿಸುವಂತಾಗಿದೆ. ಬದಲಾದ ಜನರ ಅಭಿರುಚಿ ಹಾಗೂ ಸಿಕ್ಕ ಅನುಕೂಲಗಳು ಚಿತ್ರಮಂದಿರದ ಅವಸಾನಕ್ಕೆ ಕಾರಣವೆನ್ನುತ್ತಾರೆ ಹಿರಿಯರು.
ಶಿಡ್ಲಘಟ್ಟದಲ್ಲಿ ಇರುವುದು ಮೂರೇ ಚಿತ್ರಮಂದಿರಗಳು. ವಿಜಯಲಕ್ಷ್ಮಿ, ಮಯೂರ ಮತ್ತು ವೆಂಕಟೇಶ್ವರ. ಪಟ್ಟಣದ ಮೊಟ್ಟ ಮೊದಲ ಚಿತ್ರಮಂದಿರ ಎಂಬ ಹೆಗ್ಗಳಿಕೆ ಹೊಂದಿದ್ದ ವಿಜಯಲಕ್ಷ್ಮಿ ಚಿತ್ರಮಂದಿರದ ಮೊದಲ ಹೆಸರು ‘ಶಂಕರ್‌ ಟಾಕೀಸ್‌’. ದೇಶಕ್ಕೆ ಸ್ವಾತಂತ್ರ್ಯ ಬಂದ ಸುಮಾರಿನಲ್ಲಿ ಎಂ.ಎಸ್‌. ಶಂಕರಪ್ಪ ಅದನ್ನು ಕಟ್ಟಿಸಿ ತಮ್ಮ ಹೆಸರನ್ನೇ ಇಟ್ಟಿದ್ದರು. ಅವರ ನಂತರ ಗೌಡನಹಳ್ಳಿ ಸೊಣ್ಣಪ್ಪ, ಸೀತಾರಾಮಯ್ಯ, ಆರ್‌.ಆರ್‌. ರಾಜಣ್ಣ, ದೊಡ್ಡಬಳ್ಳಾಪುರದ ವಿಶ್ವನಾಥ್‌ ಮುಂತಾದವರ ಕೈ ಬದಲಾಯಿಸಿತು. ಬದಲಾದ ಕಾಲಮಾನಕ್ಕೆ ತಕ್ಕಂತೆ ಚಿತ್ರಮಂದಿರವೂ ಬದಲಾಗುತ್ತಾ ಶಂಕರ್‌ ಟಾಕೀಸ್‌ ಎಂಬ ಹೆಸರು ಕೂಡ ಎಪ್ಪತ್ತರ ದಶಕದಲ್ಲಿ ಸೀತಾರಾಮಯ್ಯ ಅವರ ಮಾಲೀಕತ್ವದಲ್ಲಿ ವಿಜಯಲಕ್ಷ್ಮಿ ಚಿತ್ರಮಂದಿರ ಎಂಬ ಹೆಸರಾಯಿತು. ಚಿತ್ರಮಂದಿರದಿಂದಾಗಿ ಹತ್ತಿರದ ವೃತ್ತವನ್ನು ವಿಜಯಲಕ್ಷ್ಮಿ ವೃತ್ತವೆಂದು ಕರೆದರೆ, ಆ ರಸ್ತೆಯನ್ನು ವಿಜಯಲಕ್ಷ್ಮಿ ಟಾಕೀಸ್‌ ರಸ್ತೆಯೆಂದೇ ಕರೆಯುವರು.
ಮಯೂರ ಚಿತ್ರಮಂದಿರದ ಮಾಲೀಕರಾದ 85 ವರ್ಷದ ಎನ್‌.ವೆಂಕಟನಾರಾಯಣಯ್ಯ ಅವರು ತಮ್ಮ ಚಿತ್ರಮಂದಿರ ಕಟ್ಟುವ ಮುನ್ನ ಕೆಲ ಕಾಲ ವಿಜಯಲಕ್ಷ್ಮಿ ಚಿತ್ರಮಂದಿರದ ಮಾಲೀಕರಾಗಿದ್ದರು. ತಮ್ಮ ಕಾಲದಲ್ಲಿ ಲವಕುಶ, ಅಡವಿರಾಮುಡು, ವೇಟಗಾಡು, ಆರಾಧನಾ ಮುಂತಾದ ಚಿತ್ರಗಳು 50ಕ್ಕೂ ಹೆಚ್ಚು ದಿನಗಳು ಪ್ರದರ್ಶನಗೊಂಡಿದ್ದವು. ಜನರು ಎತ್ತಿನ ಗಾಡಿಗಳನ್ನು ಮಾಡಿಕೊಂಡು ಹಳ್ಳಿಗಳಿಂದೆಲ್ಲಾ ಬರುತ್ತಿದ್ದರು ಎಂದು ನೆನಪಿಸಿಕೊಳ್ಳುತ್ತಾರೆ.
‘ನಾನು ಆರು ವರ್ಷದ ಬಾಲಕನಿದ್ದಾಗ ವಿಜಯಲಕ್ಷ್ಮಿ ಚಿತ್ರಮಂದಿರದಲ್ಲಿ ಭಕ್ತ ಸಿರಿಯಾಳ ಚಿತ್ರವನ್ನು ಚಿತ್ರಮಂದಿರ ಭರ್ತಿಯಾಗಿದ್ದರಿಂದ ಪರದೆಯ ಮುಂದಿನ ಕಟ್ಟೆಯ ಮೇಲೆ ಕುಳಿತು ನೋಡಿದ್ದೆ. ಚಿತ್ರ ಪ್ರಾರಂಭವಾಗುವ ಮುನ್ನ ದೇವರ ಸ್ತೋತ್ರದ ಹಿನ್ನೆಲೆಯಲ್ಲಿ ನಿಧಾನವಾಗಿ ಮೇಲಕ್ಕೇರುವ ಪರದೆ ಇನ್ನೂ ನನ್ನ ಕಣ್ಣಮುಂದಿದೆ’ ಎಂದು ಶಿಕ್ಷಕ ನಾಗಭೂಷಣ್‌ ನೆನಪಿಸಿಕೊಂಡರೆ, ‘ನಾವು ಓದುತ್ತಿದ್ದ ಶಾಲೆಯ ಎಲ್ಲಾ ವಿದ್ಯಾರ್ಥಿಗಳನ್ನು ಕರೆದುಕೊಂಡು ಬಂದು ವಿಜಯಲಕ್ಷ್ಮಿ ಚಿತ್ರಮಂದಿರದಲ್ಲಿ ಮಕ್ಕಳರಾಜ್ಯ ಚಿತ್ರವನ್ನು ತೋರಿಸಿದ್ದರು. ಒಂದೊಂದು ಕುರ್ಚಿಯಲ್ಲಿ ಮೂವರು ಕುಳಿತು ನೋಡಿದ್ದೆವು’ ಎಂದು ಅಬ್ಲೂಡಿನ ಆರ್‌.ದೇವರಾಜ್‌ ನೆನಪಿಸಿಕೊಳ್ಳುತ್ತಾರೆ.
‘ರೈಲಿನಲ್ಲಿ ಚಿಂತಾಮಣಿ ಕಡೆಯಿಂದ ಬಂದಾಗ ಶಂಕರ್‌ ಟಾಕೀಸ್‌ ಕಂಡೊಡನೆ ನಮಗೆ ಶಿಡ್ಲಘಟ್ಟ ತಲುಪಿದೆವೆಂದು ತಿಳಿಯುತ್ತಿದ್ದೆವು. ಆಗಿನ ಹಿರಿಯರು ಶಂಕರ್‌ ಟಾಕೀಸ್‌ ಮುಂದಿದ್ದ ಚಂದ್ರಭವನ್‌ ಹೋಟೆಲಿನಲ್ಲಿ ಮಸಾಲೆ ದೋಸೆ ತಿಂದು ಪಿಚ್ಚರ್‌ ನೋಡಿ ಬರುತ್ತಿದ್ದರು. ನಾಲ್ಕಾಣೆಗೆ ಮುಂದಿನ ಬೆಂಚುಗಳು, ಐವತ್ತು ಪೈಸೆಗೆ ಹಿಂದಿನ ಸೀಟುಗಳು. ಅದಕ್ಕೂ ಹಿಂದೆ ಮಹಿಳೆಯರಿಗಾಗಿಯೇ ಮೀಸಲಿದ್ದ ಸ್ಥಳವಿತ್ತು. ಅದರ ಹಿಂದೆ ಎರಡು ಮೂರು ಖುರ್ಚಿಗಳಿದ್ದ ಬಾಲ್ಕನಿ ಬಾಕ್ಸ್‌ಗಳಿದ್ದವು. ಆಗೆಲ್ಲಾ ಜನ ಒರಟು. ಕ್ಯೂ ನಿಲ್ಲುತ್ತಿರಲಿಲ್ಲ. ಎಲ್ಲೆಂದರಲ್ಲಿ ಉಗಿಯುತ್ತಿದ್ದರು. ಶಂಕರ್‌ ಟಾಕೀಸ್‌ ಮ್ಯಾನೇಜರಾಗಿದ್ದ ಸಂಜೀವಪ್ಪ ಎಲ್ಲರನ್ನೂ ಸುಧಾರಿಸುತ್ತಿದ್ದರು. ಅವರು ಅತ್ಯಂತ ನಿಷ್ಠುರ ಹಾಗೂ ಧಾರಾಳ ವ್ಯಕ್ತಿತ್ವವುಳ್ಳವರಾಗಿದ್ದರು’ ಎಂದು ಹೇಳುತ್ತಾರೆ ಕುಚ್ಚಣ್ಣನವರ ಮುರಳೀಧರ್‌.
’ಈ ಚಿತ್ರಮಂದಿರದಲ್ಲಿ ಎಲ್ಲಾ ಭಾಷೆಗಳ ಚಿತ್ರಗಳನ್ನೂ ಪ್ರದರ್ಶಿಸುತ್ತಿದ್ದರು. 60 ರ ದಶಕದಲ್ಲಿ ಮಲ್ಲಿಮದುವೆ, ಸಾಕುಮಗಳು, ಕನ್ಯಾರತ್ನ ಕನ್ನಡ ಚಿತ್ರಗಳು, ಹರ್ಕ್ಯುಲಸ್‌ ಅನ್‌ಚೈನ್ಡ್‌ ಎಂಬ ಆಂಗ್ಲ ಚಿತ್ರ, ರಾಜ್‌ಕಪೂರ್‌, ಧಾರಾಸಿಂಗ್‌, ದಿಲೀಪ್‌ಕುಮಾರ್‌, ಮನೋಜ್‌ಕುಮಾರ್‌ ಅವರ ಹಿಂದಿ ಚಿತ್ರಗಳು, ಎಂ.ಜಿ.ಆರ್‌, ಶಿವಾಜಿಗಣೇಶನ್‌ ರ ತಮಿಳು, ಎನ್‌.ಟಿ.ಆರ್‌, ನಾಗೇಶ್ವರರಾವ್‌ ಅವರ ತೆಲುಗು ಎಲ್ಲವೂ ಮನಸ್ಸಿನಲ್ಲಿ ಹಸಿರಾಗಿವೆ. ಹಬ್ಬಗಳಿಗಾಗಿ ಹೊಸ ಚಿತ್ರಗಳು ಪ್ರದರ್ಶಿಸುತ್ತಿದ್ದರು. ಶಿವರಾತ್ರಿಯಂದು ಮಧ್ಯರಾತ್ರಿಯ ವಿಶೇಷ ಪ್ರದರ್ಶನವನ್ನು ನೋಡಿಕೊಂಡು ನಾವು ಜಾಗರಣೆ ಮುಗಿಸುತ್ತಿದ್ದೆವು. ಶಾಲಾ ವಿದ್ಯಾರ್ಥಿಗಳಿಗಾಗಿ ಮಧ್ಯಾನ್ಹದ ವೇಳೆ ಹಲವಾರು ಡಾಕ್ಯುಮೆಂಟರಿಗಳನ್ನು ತೋರಿಸುತ್ತಿದ್ದರು. ಸಂಜೆ ‘ನಮೋ ವೆಂಕಟೇಶ’ ಹಾಡು ಕೇಳಿಸಿದೊಡನೆ ಶಾಲೆಯ ಬೆಲ್‌ ಹೊಡೆದಂತೆ ಇನ್ನು ಅರ್ಧ ಗಂಟೆಯಲ್ಲಿ ಫಸ್ಟ್‌ ಶೋ ಪ್ರಾರಂಭವಾಗುತ್ತದೆಂಬುದು ಎಲ್ಲರಿಗೂ ತಿಳಿಯುತ್ತಿತ್ತು’ ಎಂದು ಅವರು ತಮ್ಮ ನೆನಪಿನ ರೀಲನ್ನು ಬಿಚ್ಚಿಟ್ಟರು.

– ಡಿ.ಜಿ.ಮಲ್ಲಿಕಾರ್ಜುನ

ಲಾಭದಾಯಕ ಹಾಗೂ ರಾಸಾಯನ ಮುಕ್ತ ಸಾವಯವ ಕೃಷಿ ವಿಧಾನ

0

ತಾಲ್ಲೂಕಿನಲ್ಲಿ ಹಲವಾರು ರೈತರು ಸಾವಯವ ಕೃಷಿಯತ್ತ ಆಕರ್ಷಿತರಾಗಿದ್ದಾರೆ. ಕೆಲವರು ರಾಸಾಯನಿಕವನ್ನು ಕ್ರಮೇಣ ನಿಧಾನ ಮಾಡುತ್ತಾ ಸಾವಯವ ಪದ್ಧತಿಯತ್ತ ಸಾಗುತ್ತಿದ್ದಾರೆ. ಆದರೆ ಸಹಜಕೃಷಿ ಹರಿಕಾರನೆಂದೇ ಪ್ರಸಿದ್ಧಿ ಪಡೆದ ಜಪಾನಿನ ಮಸನೊಬು ಫುಕುವೊಕ ತೋರಿಸಿಕೊಟ್ಟ ಸಹಜ ಕೃಷಿ ಪದ್ಧತಿಯನ್ನು ಅಳವಡಿಸಿಕೊಂಡಿರುವವರು ವಿರಳ. ಆದರೆ ತಾಲ್ಲೂಕಿನ ಬೋದಗೂರಿನ ವೆಂಕಟಸ್ವಾಮಿರೆಡ್ಡಿ ಸದ್ದಿಲ್ಲದೇ ಹನ್ನೆರಡು ವರ್ಷಗಳಿಂದ ತಮ್ಮ ಐದು ಎಕರೆ ಜಮೀನಿನಲ್ಲಿ ಸಹಜ ಕೃಷಿಯನ್ನು ಮಾಡುತ್ತಿದ್ದಾರೆ.
ಸಾಗುವಳಿ ಮಾಡದೇ ಕೃಷಿ ಕಾಯಕ ಕೈಗೊಳ್ಳುವುದು. ರಸಗೊಬ್ಬರಗಳ ಬಳಕೆ ಮಾಡದಿರುವುದು. ಕಳೆ ತೆಗೆಯದಿರುವುದು ಹಾಗೂ ಕೀಟನಾಶಕ ಸಿಂಪಡಿಸದೇ ಇರುವುದು ಸಹಜ ಕೃಷಿಯ ಮೂಲ ಪಾಠ. ಈ ಪದ್ಧತಿಯನ್ನು ಅಳವಡಿಸಿಕೊಂಡು ಹಲವಾರು ಬೆಳೆಗಳನ್ನು ಬೆಳೆಯುವುದರ ಜೊತೆಗೆ ಸಾವಯವ ಪದ್ಧತಿಯಿಂದಲೂ ಕೆಲವು ಬೆಳೆಗಳನ್ನು ರೈತ ವೆಂಕಟಸ್ವಾಮಿರೆಡ್ಡಿ ಬೆಳೆಯುತ್ತಿದ್ದಾರೆ. ಜೇನುಸಾಕಣೆ, ಸೀಮೆಹಸುಗಳು, ಕುರಿಗಳು, ಕೋಳಿಗಳನ್ನೂ ಸಾಕಿರುವ ಇವರು ಕೃಷಿ ತ್ಯಾಜ್ಯಗಳಿಂದ ಗೋಬರ್ ಗ್ಯಾಸ್ ಅನಿಲ, ರಸಸಾರ ತೊಟ್ಟಿ ಹಾಗೂ ಕಾಂಪೋಸ್ಟ್‌ಗಳನ್ನೂ ನಿರ್ಮಿಸಿಕೊಂಡಿದ್ದಾರೆ. ದನಗಳಿಗೆ ಆಹಾರವಾಗಿ ಅಜೋಲ ಬೆಳೆಸಿದ್ದಾರೆ.
ಅರಿಶಿನ, ಈರುಳ್ಳಿ, ಬೆಳ್ಳುಳ್ಳಿ, ಧನಿಯಾ, ಅರಿವೆ ಸೊಪ್ಪು, ದಂಟಿನಸೊಪ್ಪು, ಕೊತ್ತಂಬರಿಸೊಪ್ಪು, ಪಾಲಕ್, ಸಬಾಕ್ಷಿಸೊಪ್ಪು, ಕರಿಬೇವು, ರಾಗಿ, ಮುಸುಕಿನ ಜೋಳ, ಸಾಸಿವೆ, ಅವರೆ, ಬದನೇಕಾಯಿ, ಬೆಂಡೇಕಾಯಿ, ನಿಂಬೆಹಣ್ಣು, ಹುಣಸೆಹಣ್ಣು, ಅರಳು, ಹೊಂಗೆಬೀಜ, ಬೇವು, ಮೆಣಸಿನಕಾಯಿ, ನುಗ್ಗೇಕಾಯಿ, ಸಪೋಟಾ, ತೆಂಗು, ಮಾವು, ಗೋಡಂಬಿ, ಸಿಹಿಗುಂಬಳ, ಸೋರೇಕಾಯಿ, ಜೇನು, ಹಿಪ್ಪುನೇರಳೆ, ಹಾಲು, ಹಲಸು, ಗೆಣಸು, ಚಪ್ಪರದವರೆ, ಕಾಕಿಜೋಳ, ಪುದೀನ, ಶುಂಠಿ, ಅಂಟವಾಳ, ವೆಲ್‌ವೆಟ್ ಬೀನ್ಸ್ ಹಾಗೂ ಅಗಸೆ ಇವರ ಕಳೆದ ವರ್ಷದ ಕೃಷಿ ಉತ್ಪನ್ನಗಳು.
ಸಪೋಟ, ತೆಂಗು, ಮಾವು ಮುಂತಾದ ತೋಟಗಾರಿಕಾ ಬೆಳೆಗಳ ನಡುವೆ ಒಂದೂವರೆ ಎಕರೆ ಪ್ರದೇಶದಲ್ಲಿ ಅರಿಶಿನವನ್ನು ಸಾವಯವ ಪದ್ಧತಿಯಲ್ಲಿ ಬೆಳೆದು ಉತ್ತಮ ಗುಣಮಟ್ಟದ ಸುಮಾರು ೨೦ ಕ್ವಿಂಟಾಲಿನಷ್ಟು ಇಳುವರಿಯನ್ನು ಪಡೆದಿದ್ದಾರೆ.
‘ಅರಿಶಿನ ೯ ರಿಂದ ೧೦ ತಿಂಗಳ ಬೆಳೆ. ಮೇ ತಿಂಗಳ ಭರಣಿ ಮಳೆಯ ಸಮಯದಲ್ಲಿ ಸಾಮಾನ್ಯವಾಗಿ ಇದರ ನಾಟಿ ಕಾರ್ಯ ಮಾಡಲಾಗುತ್ತದೆ. ನಾವಿದನ್ನು ಮಿಶ್ರ ಬೆಳೆಯಾಗಿ ಬೆಳೆದಿರುವುದರಿಂದ ಬೆಳೆಯಷ್ಟೂ ಲಾಭದಾಯಕವಾಗಿದೆ. ನಮ್ಮ ಭೂಮಿಯನ್ನು ೧೨ ವರ್ಷಗಳಿಂದ ರಾಸಾಯನಿಕ ಮುಕ್ತವಾಗಿರಿಸಿರುವುದರಿಂದ ಸಂಪೂರ್ಣ ಸಾವಯವ ಪದ್ಧತಿಯಿಂದ ಅರಿಶಿನವನ್ನು ಬೆಳೆದಿದ್ದೇನೆ. ಕೊಟ್ಟಿಗೆ ಗೊಬ್ಬರ, ಬೇವಿನ ಹಿಂಡಿಯ ಜೊತೆಗೆ ಡ್ರಿಪ್ ಮೂಲಕ ರಸಸಾರವನ್ನು ಹರಿಸಿರುವುದರಿಂದ ಬೆಳೆ ತುಂಬ ಚೆನ್ನಾಗಿ ಬಂದಿದೆ.’
‘ಅರಿಶಿನದ ಕುಯಿಲಾದ ನಂತರ ಬೇರು ಕಾಂಡ ಗೆಡ್ಡೆಗಳನ್ನೆಲ್ಲಾ ಬೇರ್ಪಡಿಸಿ ರಾಶಿಹಾಕಿ ಅದರ ಮೇಲೆ ಎಲೆಗಳನ್ನು ಹೊದಿಸಿ ಗೆಡ್ಡೆಗಳು ಶಾಖಕ್ಕೆ ಬೆವರುವಂತೆ ಮಾಡಿ ಅನಂತರ ಸಂಸ್ಕರಿಸಬೇಕು. ಬಣ್ಣಗಳ ತಯಾರಿಕೆ ಹಾಗೂ ಔಷಧೀಯ ಬಳಕೆಯಿರುವುದರಿಂದ ಇದಕ್ಕೆ ಬಹುವಾಗಿ ಬೇಡಿಕೆಯಿದೆ. ಸಂಪೂರ್ಣ ಸಾವಯವದಲ್ಲಿ ಬೆಳೆದಿರುವುದರಿಂದ ಹಾಗೂ ರಾಸಾಯನಿಕ ಬೆರೆಯದಿರುವುದರಿಂದ ಈ ಅರಿಶಿನದ ಗುಣಮಟ್ಟ ಹೆಚ್ಚಿನದ್ದು. ರೈತರು ಸಾವಯವದಲ್ಲಿ ಅರಿಶಿನ ಬೆಳೆಯಲು ಮುಂದಾದಲ್ಲಿ ನಾನು ಗೆಡ್ಡೆಗಳನ್ನು ಕೊಡುತ್ತೇನೆ’ ಎನ್ನುತ್ತಾರೆ ರೈತ ವೆಂಕಟಸ್ವಾಮಿರೆಡ್ಡಿ.
‘ಕೃಷಿಯ ಅಂತಿಮ ಉದೇಶ ಬೆಳೆ ಬೆಳೆಯುವುದಲ್ಲ. ಬದಲಾಗಿ ಮನುಷ್ಯನ ಸರ್ವತೋಮುಖ ಬೆಳವಣಿಗೆಗೆ ಅಡಿಪಾಯ ಹಾಕುವುದು ಎಂದು ಹೇಳಿದ ಫುಕುವೊಕ ಅವರ ಮಾತುಗಳು ಎಲ್ಲ ರೈತರಿಗೂ ಪ್ರೇರಣೆಯಾಗಬೇಕು. ಪ್ರಕೃತಿಯ ಭಾಗವಾದ ಕಲ್ಲು, ಮಣ್ಣು, ನೀರು ಗಾಳಿ, ಅಗ್ನಿ, ಆಕಾಶ, ಪ್ರಾಣಿ, ಸಸ್ಯ, ಬ್ಯಾಕ್ಟೀರಿಯಾ, ಎರೆಹುಳು ಎಲ್ಲವೂ ಅವಯವಗಳೇ ಆಗಿವೆ. ಈ ಅವಯವಗಳನ್ನು ಬಳಸುವ ಹಾಗೂ ಹೆಚ್ಚಿಸುವ ಕೃಷಿ ವಿಧಾನವೇ ಸಾವಯವ’ ಎಂದು ಅವರು ತಿಳಿಸಿದರು.

ರಾಜ್‌ – ಅಕ್ಕಿಕಾಳಿನ ಮೇಲೊಂದು ಹೆಸರು

0

‘ಅನ್ನ ಪರಬ್ರಹ್ಮ’ ಎನ್ನುತ್ತಾರೆ. ಕಾರಣ ಎಲ್ಲರೂ ಮಾಡುವುದು ಹೊಟ್ಟೆಗಾಗಿ. ಜೀವ ಚೈತನ್ಯರೂಪಿಯಾಗಿರಲು ಅನ್ನ ಅಥವಾ ಅಕ್ಕಿ ಬೇಕು. ವಿವಿಧ ಕಾಯಕಗಳನ್ನು ಕೈಗೊಂಡು ಜನರು ಅನ್ನದ ಮೂಲವಾದ ಅಕ್ಕಿಯನ್ನು ಸಂಪಾದಿಸಿದರೆ, ಇಲ್ಲೊಬ್ಬರು ಅಕ್ಕಿಯಿಂದಲೇ ಅಕ್ಕಿಯನ್ನು ಸಂಪಾದಿಸಲು ಹೊರಟಿದ್ದಾರೆ.
ಶಿಡ್ಲಘಟ್ಟದಲ್ಲಿ ರಾಜ್‌ ಎಂಬ ಯುವಕ ಅಕ್ಕಿಯ ಮೇಲೆ ಹೆಸರು ಬರೆದುಕೊಡುತ್ತಾ ತನ್ನ ಅನ್ನವನ್ನು ಅಥವಾ ಅಕ್ಕಿಯನ್ನು ಸಂಪಾದಿಸುತ್ತಿದ್ದಾನೆ. ಸಣ್ಣ ಆಕಾರದ ಅಕ್ಕಿಯ ಮೇಲೆ ಸೂಕ್ಷ್ಮವಾಗಿ ಹೆಸರನ್ನು ಎರಡೂ ಬದಿಯಲ್ಲಿ ಬರೆದುಕೊಡುವ ಈತ ಅದನ್ನು ದ್ರವವಿರುವ ಪುಟ್ಟ ಗಾಜಿನ ಕೊಳವೆಯಲ್ಲಿ ಹಾಕಿ ಅದನ್ನು ಕೀ ಬಂಚ್ ಮಾಡಿಕೊಡುತ್ತಾನೆ. ದ್ರವವಿರುವ ಕಾರಣ ಅಕ್ಕಿಕಾಳು ಕೊಂಚ ದಪ್ಪವಾಗಿ ಕಾಣುವುದರಿಂದ ನಮ್ಮ ಹೆಸರನ್ನು ಸ್ಪಷ್ಟವಾಗಿ ಓದಬಹುದು.
ಆಂಧ್ರದ ಅಲೆಮಾರಿ ಕುಟುಂಬದ ಸದಸ್ಯನಾದ ಈತ ಊರೂರು ಸುತ್ತುತ್ತಾ, ಸಂತೆ, ಜಾತ್ರೆ, ಪರಿಷೆ ಇರುವೆಡೆ, ಜನಸಂದಣಿ ಹೆಚ್ಚಿರುವಲ್ಲಿ ತನ್ನ ಕಲೆಯಿಂದ ಬದುಕನ್ನು ಕಂಡುಕೊಳ್ಳುತ್ತಿದ್ದಾನೆ. ಓದಿರುವುದು ಎರಡನೇ ತರಗತಿಯಾದರೂ ಸ್ಪಷ್ಟವಾಗಿ ಇಂಗ್ಲೀಷ್‌ ಅಕ್ಷರಗಳನ್ನು ಅಕ್ಕಿಕಾಳಿನ ಮೇಲೆ ಮೂಡಿಸಬಲ್ಲಷ್ಟು ಅಕ್ಷರಜ್ಞಾನವನ್ನು ಹೊಂದಿದ್ದಾನೆ. ಕನ್ನಡ ಅಕ್ಷರವನ್ನೂ ಸಹ ಬರೆಯಬಲ್ಲನಾದರೂ ಅದಕ್ಕೆ ಸ್ವಲ್ಪ ಸಮಯ ಬೇಕಾಗುತ್ತದೆ, ಜನಜಂಗುಳಿಯ ಮಧ್ಯೆ ಬರೆಯಲು ಕಷ್ಟವೆನ್ನುತ್ತಾನೆ. ಭೂತಕನ್ನಡಿಯಲ್ಲಿ ನೋಡಬೇಕಾದ ಅಕ್ಷರಗಳನ್ನು, ಬರಿಗಣ್ಣಿನಲ್ಲೇ ನೋಡುತ್ತಾ ಅಕ್ಕಿಯ ಮೇಲೆ ಅಕ್ಷರ ರಚಿಸುವುದು ಈತನ ಹೆಚ್ಚುಗಾರಿಕೆ.
’ನಮ್ಮ ಮೂಲ ಆಂಧ್ರದ ಮಹಬೂಬ್‌ನಗರ ಜಿಲ್ಲೆ. ಅಲೆಮಾರಿಗಳಾದ ನಾವು ಅಲ್ಲಲ್ಲಿ ಟೆಂಟ್‌ ಹಾಕಿಕೊಂಡು ವಿವಿಧ ಕಸುಬುಗಳನ್ನು ಮಾಡುತ್ತಾ ಅಪರೂಪಕ್ಕೊಮ್ಮೆ ಊರಿನ ಕಡೆ ಹೋಗಿ ಬರುತ್ತೇವೆ. ನಾನು ಹುಟ್ಟಿದ್ದು ಕರ್ನಾಟಕದಲ್ಲಿ. ಕರ್ನಾಟಕದ ಭಾಗಶಃ ಎಲ್ಲಾ ಊರುಗಳನ್ನೂ ಸುತ್ತಿದ್ದೇನೆ. ಕಳೆದ ಒಂದು ವರ್ಷದಿಂದ ಅಕ್ಕಿಕಾಳಿನ ಮೇಲೆ ಹೆಸರು ಬರೆಯುತ್ತಾ ಜೀವನೋಪಾಯ ಮಾಡುತ್ತಿದ್ದೇನೆ. ನಮ್ಮ ಕುಟುಂಬದವರು ಸಧ್ಯ ಚಿಂತಾಮಣಿಯ ಬಳಿ ಟೆಂಟ್‌ ಹಾಕಿದ್ದಾರೆ’ ಎಂದು ಅಕ್ಕಿಯ ಮೇಲೆ ಅಕ್ಕರೆಯ ಹೆಸರು ಮೂಡಿಸುವ ರಾಜ್‌ ಹೇಳುತ್ತಾರೆ.

ಕಿಡಿಗೇಡಿಗಳ ದುಶ್ಕೃತ್ಯದಿಂದ ರೈತನಿಗೆ ನಷ್ಟ

0

ತಾಲ್ಲೂಕಿನ ಜಂಗಮಕೋಟೆಯ ರೈತ ಗುಡಿಯಪ್ಪ ಅವರ ಹಿಪ್ಪುನೇರಳೆ ತೋಟಕ್ಕೆ ಬುಧವಾರ ಕಿಡಿಗೇಡಿಗಳು ಔಷಧಿ ಸಿಂಪಸಿದ್ದು, ಆ ಸೊಪ್ಪನ್ನು ತಿಂದ ರೇಷ್ಮೆ ಹುಳುಗಳು ಸತ್ತು ಸುಮಾರು ಒಂದು ಲಕ್ಷ ರೂಗಳಷ್ಟು ನಷ್ಟ ಸಂಭವಿಸಿದೆ.
ನಾನ್ನೂರು ಮೊಟ್ಟೆಯನ್ನು ಮೇಯಿಸಿದ್ದು, ನಾಲ್ಕು ಜ್ವರ ದಾಟಿ ನಾಲ್ಕು ದಿನಗಳಾಗಿದ್ದ ರೇಷ್ಮೆ ಹುಳುಗಳು ಎಲ್ಲವೂ ವಿಷವಾದ ಸೊಪ್ಪನ್ನು ತಿಂದು ಸತ್ತಿವೆ. ಕೈಗೆ ಬಂದಿದ್ದ ಬೆಳೆಯು ನೆಲಕಚ್ಚಿದ್ದರಿಂದಾಗಿ ರೈತರು ಕಂಗಾಲಾಗಿದ್ದಾರೆ. ರೇಷ್ಮೆ ಇಲಾಖೆಯ ಸಹನಿರ್ದೇಶಕ ಚಂದ್ರಪ್ಪ, ವಿಸ್ತರಣಾಧಿಕಾರಿ ತಿಮ್ಮರಾಜು ಗುರುವಾರ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲಿಸಿದರು.

ದೇಶದ ಪ್ರಗತಿಗೆ ಮೂಲ ಶಿಕ್ಷಣ

0

ಸ್ವಾತಂತ್ರ್ಯಾನಂತರ ಶಿಕ್ಷಣದಿಂದ ಕಾನೂನು ಅರಿವು ಉಂಟಾಗಿದ್ದು ಈಗ ಹಲವಾರು ಸೌಲಭ್ಯಗಳು ದೊರಕುವಂತಾಗಿದೆ ಎಂದು ತಾಲ್ಲೂಕು ವಕೀಲರ ಸಂಘದ ಅಧ್ಯಕ್ಷ ಎಂ.ಪಾಪಿರೆಡ್ಡಿ ತಿಳಿಸಿದರು.
ತಾಲ್ಲೂಕಿನ ವರದನಾಯಕನಹಳ್ಳಿಯ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಗುರುವಾರ ನಡೆದ ಕಾನೂನು ಅರಿವು ನೆರವು ಕಾರ್ಯಕ್ರಮವನ್ನು ಸಸಿ ನೆಡುವ ಮೂಲಕ ಉದ್ಘಾಟಿಸಿ ಅವರು ಮಾತನಾಡಿದರು.
ದೇಶದ ಪ್ರಗತಿಗೆ ಮೂಲ ಶಿಕ್ಷಣ. ಪ್ರತಿಯೊಬ್ಬರೂ ಶಿಕ್ಷಿತರಾದಾಗ ಮಾತ್ರ ತಿಳುವಳಿಕೆ, ಸಾಮಾಜಿಕ ಕಳಕಳಿ, ದೇಶದ ಬಗ್ಗೆ ಗೌರವ, ಅಭಿಮಾನ, ಪರಿಸರ ಪ್ರೇಮ ಮೂಡುತ್ತದೆ. ಈ ನಿಟ್ಟಿನಲ್ಲಿ ಶಿಕ್ಷಕರ ಪಾತ್ರ ಮುಖ್ಯವಾದದ್ದು ಎಂದು ಹೇಳಿದರು.
ಈ ಸಂದರ್ಭದಲ್ಲಿ ಜನನ ಮತ್ತು ಮರಣ ಪ್ರಮಾಣ ಪತ್ರಗಳ ಪ್ರಾಮುಖ್ಯತೆಯನ್ನು ಸಂದರ್ಭಸಹಿತವಾಗಿ ವಿವರಿಸಿದರು. ಶಾಲೆಯ ಮುಖ್ಯ ಶಿಕ್ಷಕ ಎಚ್‌.ವಿ.ವೆಂಕಟರೆಡ್ಡಿ ಮಾತನಾಡಿ, ‘ಕಾನೂನು, ಜಗಳ, ರಾಜಿ ಮುಂತಾದ ಸಂಗತಿಗಳು ಶಾಲಾ ಹಂತದಿಂದಲೇ ಪ್ರಾರಂಭವಾಗುತ್ತವೆ. ಶಾಲಾ ಹಂತದಲ್ಲೇ ಮಕ್ಕಳ ಮಾನಸಿಕ ಪರಿವರ್ತನೆ ಸಕಾರಾತ್ಮಕವಾಗಿ ರೂಪಿಸುವುದರಿಂದ ಮುಂದೆ ಜೀವನದಲ್ಲಿ ಅವರು ಉತ್ತಮರಾಗಲು ಸಾಧ್ಯ’ ಎಂದು ನುಡಿದರು. ವಕೀಲೆ ನೌತಾಜ್‌ ಮಹಿಳಾ ಮತ್ತು ಮಕ್ಕಳ ಕಳ್ಳಸಾಗಾಣಿಕೆ ಕುರಿತು ಮಾತನಾಡಿದರೆ, ವಕೀಲ ಸಿ.ಭಾಸ್ಕರ್‌ ಕಡ್ಡಾಯ ಶಿಕ್ಷಣ ಕಾಯ್ದೆ ಕುರಿತು ಮಾತನಾಡಿದರು. ಸರ್ಕಾರಿ ವಕೀಲೆ ಎಸ್‌.ಕುಮುದಿನಿ, ಶಿಕ್ಷಕರಾದ ನಾಗಭೂಷಣ್‌, ರಾಮಕೃಷ್ಣ, ಗಂಗಶಿವಪ್ಪ ಮತ್ತಿತರರು ಈ ಸಂದರ್ಭದಲ್ಲಿ ಹಾಜರಿದ್ದರು.

error: Content is protected !!