ಪಟ್ಟಣದ ವಾಸವಿ ರಸ್ತೆಯಲ್ಲಿರುವ ಗಂಗಮ್ಮ ದೇವಾಲಯದಲ್ಲಿ ಬುಧವಾರ ವಿಶೇಷ ಪೂಜೆಯನ್ನು ಆಯೋಜಿಸಲಾಗಿತ್ತು. ದೇವಸ್ಥಾನ ಹಾಗೂ ಗಂಗಮ್ಮ ದೇವಿಯನ್ನು ವಿಶೇಷವಾಗಿ ಅಲಂಕರಿಸಲಾಗಿತ್ತು.
ಗಂಗಮ್ಮ ದೇವಿಯ ಉತ್ಸವ ಮೂರ್ತಿಯನ್ನು ಮುತ್ತಿನಪಲ್ಲಕ್ಕಿಯಲ್ಲಿಟ್ಟು ಅಲಂಕರಿಸಿ ಪ್ರಮುಖ ಬೀದಿಗಳಲ್ಲಿ ಮೆರವಣಿಗೆ ಮಾಡಲಾಯಿತು. ಮನೆಯ ಮುಂದೆ ಬಂದ ದೇವಿಗೆ ಮಹಿಳೆಯರು ದೀಪ ಬೆಳಗಿ ಪೂಜೆ ಸಲ್ಲಿಸಿದರು. ಭಕ್ತರಿಗೆ ಮಹಾಮಂಗಳಾರತಿಯ ನಂತರ ಪ್ರಸಾದವನ್ನು ವಿನಿಯೋಗಿಸಲಾಯಿತು. ಶಾಂತಿ, ನೆಮ್ಮದಿ, ಮಳೆ, ಬೆಳೆಗಾಗಿ ಗಂಗಮ್ಮ ದೇವಿಯ ಪೂಜೆಯನ್ನು ಹಾಗೂ ಮೆರವಣಿಗೆಯನ್ನು ಮಾಡುತ್ತಿರುವುದಾಗಿ ಭಕ್ತರು ತಿಳಿಸಿದರು.
ಶಿಡ್ಲಘಟ್ಟದಲ್ಲಿ ಗಂಗಮ್ಮ ದೇವಿಯ ಉತ್ಸವ
ಶಿಡ್ಲಘಟ್ಟದ ದೇವಿ ಜಾತ್ರೆ ಮಹೋತ್ಸವ
ಶಿಡ್ಲಘಟ್ಟ ಪಟ್ಟಣದ ಸಿದ್ಧಾರ್ಥ ನಗರದ ಜನರು ದೇವಿ ಜಾತ್ರೆಯನ್ನು ಮಂಗಳವಾರ ಶ್ರದ್ಧಾಭಕ್ತಿಯಿಂದ ಆಚರಿಸಿದರು. ಗಂಗಮ್ಮ, ಎಲ್ಲಮ್ಮ, ಪೂಜಮ್ಮ, ನಾಗಲಮುದ್ದಮ್ಮ ದೇವಿಗಳ ದೇವಸ್ಥಾನಕ್ಕೆ ಮಹಿಳೆಯರು ವಿಶೇಷವಾಗಿ ಅಲಂಕರಿಸಿರುವ ತಂಬಿಟ್ಟು ದೀಪಗಳನ್ನು ತಲೆಯ ಮೇಲಿಟ್ಟುಕೊಂಡು ಮೆರವಣಿಗೆ ಮೂಲಕ ತೆರಳಿ ಪೂಜೆ ಸಲ್ಲಿಸಿದರು. ಹೆಣ್ಣು ಮಕ್ಕಳ ಮೆರವಣಿಗೆಯ ಮುಂದೆ ತಮಟೆ ವಾದ್ಯಗಳೊಂದಿಗೆ ಮಕ್ಕಳು ಕುಣಿಯುತ್ತಾ ಸಾಗಿದರು. ದೀಪಗಳನ್ನು ಹೊತ್ತ ಮಹಿಳೆಯರು ಅಮ್ಮನಕೆರೆಗೂ ತೆರಳಿ ದೀಪ ಬೆಳಗಿ ಮಳೆ ಬೆಳೆ ಆಗಲೆಂದು ಪ್ರಾರ್ಥಿಸಿದರು. ಮೆರವಣಿಗೆಯಲ್ಲಿ ಸಾಗುವಾಗ ಮಹಿಳೆಯರು ವಿವಿಧ ಜನಪದ ಭಕ್ತಿಗೀತೆಗಳನ್ನು ಹಾಡಿದರು.
ಜಿಲ್ಲಾ ಸಹಕಾರ ಕೇಂದ್ರ ಬ್ಯಾಂಕ್ ಶಾಖೆಯಲ್ಲಿ ಆರ್.ಟಿ.ಜಿ.ಎಸ್ ಸೇವೆಯ ಉದ್ಘಾಟನೆ
ಪಟ್ಟಣದ ಕೋಲಾರ ಚಿಕ್ಕಬಳ್ಳಾಪುರ ಜಿಲ್ಲಾ ಸಹಕಾರ ಕೇಂದ್ರ ಬ್ಯಾಂಕ್ ಶಾಖೆಯಲ್ಲಿ ಮಂಗಳವಾರ ಆರ್.ಟಿ.ಜಿ.ಎಸ್ ಸೇವೆಯ ಉದ್ಘಾಟನೆಯನ್ನು ಮಾಡಲಾಯಿತು.
ಆನ್‌ಲೈನ್ ಸೇವೆಯ ಉದ್ಘಾಟನೆಯನ್ನು ಮಾಡಿದ ಶಾಸಕ ಎಂ.ರಾಜಣ್ಣ ಮಾತನಾಡಿ, ‘ರಾಷ್ಟ್ರೀಕೃತ ಬ್ಯಾಂಕುಗಳ ನೀಡುವ ಎಲ್ಲಾ ಸೇವೆಗಳನ್ನೂ ಈಗ ಜಿಲ್ಲಾ ಸಹಕಾರ ಕೇಂದ್ರ ಬ್ಯಾಂಕ್‌ನಲ್ಲೂ ಒದಗಿಸಲಾಗುತ್ತಿದೆ. ಎಲ್ಲಾ ಹಾಲು ಉತ್ಪಾದಕರ ಸಹಕಾರ ಸಂಘಗಳು, ರೈತರು ಹೊಸ ಸೇವೆಗಳನ್ನು ಸದ್ಭಳಕೆ ಮಾಡಿಕೊಳ್ಳಬೇಕು. ಬ್ಯಾಂಕ್ ಅಭಿವೃದ್ಧಿಯಾಗಬೇಕಾದರೆ ತೆಗೆದುಕೊಂಡ ಸಾಲವನ್ನು ಸಕಾಲದಲ್ಲಿ ಮರುಪಾವತಿ ಮಾಡಬೇಕು.ಶೀಘ್ರ ಹಣ ವರ್ಗಾವಣೆ, ಸಮಯದ ಉಳಿತಾಯ ಹಾಗೂ ಕಡಿಮೆ ಬಡ್ಡಿ ಹಣ ಮುಂತಾದ ಸೇವೆಗಳನ್ನು ಬಳಸಿಕೊಂಡು ಸಹಕಾರಿ ಕ್ಷೇತ್ರವನ್ನು ಬಲಗೊಳಿಸಬೇಕು’ ಎಂದು ಹೇಳಿದರು.
‘ಇದುವರೆಗೂ ಸಹಕಾರಿ ಬ್ಯಾಂಕುಗಳಿಗೆ ಈ ಸಂದರ್ಭದಲ್ಲಿ ರಾಷ್ಟ್ರೀಕೃತ ಬ್ಯಾಂಕುಗಳಂತೆ ಐ.ಎಫ್.ಎಸ್.ಸಿ ಕೋಡ್ ಇರಲಿಲ್ಲ. ಈಗ ಪ್ರಪ್ರಥಮವಾಗಿ ಈ ಕೋಡ್ ಪಡೆದ ಹೆಗ್ಗಳಿಕೆ ಕೋಲಾರ ಚಿಕ್ಕಬಳ್ಳಾಪುರ ಜಿಲ್ಲಾ ಸಹಕಾರ ಕೇಂದ್ರ ಬ್ಯಾಂಕ್‌ಗೆ ಸಲ್ಲುತ್ತದೆ. ಇದರಿಂದ ವರ್ತಕರಿಗೆ, ರೈತರಿಗೆ ಸಾಕಷ್ಟು ಅನುಕೂಲವಾಗುತ್ತದೆ. ಸ್ವಸಹಾಯ ಗುಂಪುಗಳು ಸಾಲ ಹಿಂತಿರುಗಿಸುವಲ್ಲಿ ಪ್ರಥಮರಾಗಿದ್ದು ಮಾದರಿಯಾಗಿದ್ದಾರೆ’ ಎಂದು ಅವರು ಹೇಳಿದರು.
ಕೋಲಾರ ಚಿಕ್ಕಬಳ್ಳಾಪುರ ಜಿಲ್ಲಾ ಸಹಕಾರ ಕೇಂದ್ರ ಬ್ಯಾಂಕ್ ನಿರ್ದೇಶಕರಾದ ಪಿ.ವಿ.ನಾಗರಾಜ್, ಶಿವಾರೆಡ್ಡಿ, ಕೆ.ಎಂ.ಎಫ್ ನಿರ್ದೇಶಕ ಬಂಕ್ ಮುನಿಯಪ್ಪ, ಬ್ಯಾಂಕ್ ವ್ಯವಸ್ಥಾಪಕ ಲಿಂಗರಾಜು, ಎಸ್.ಎಫ್.ಸಿ.ಎಸ್ ಕಾರ್ಯನಿರ್ವಾಹಣಾಧಿಕಾರಿ ನಾಗರಾಜ್ ಮತ್ತಿತರರು ಈ ಸಂದರ್ಭದಲ್ಲಿ ಹಾಜರಿದ್ದರು.
ಊರಲ್ಲೊಂದು ಊಸುರವಳ್ಳಿ
ಶಿಡ್ಲಘಟ್ಟ ತಾಲ್ಲೂಕಿನ ಬಶೆಟ್ಟಹಳ್ಳಿ ಬಳಿ ಕಂಡು ಬಂದ ಊಸುರವಳ್ಳಿ ಒಂದು ರೆಂಬೆಯಿಂದ ಮತ್ತೊಂದಕ್ಕೆ ದಾಟುತ್ತಿತ್ತು.
ಮಹಿಳೆಯರು ಹಾಗೂ ಹೆಣ್ಣು ಮಕ್ಕಳ ಮೇಲೆ ನಡೆಯುತ್ತಿರುವ ಅತ್ಯಾಚಾರ ಪ್ರಕರಣಗಳನ್ನು ಖಂಡಿಸಿ ವಿದ್ಯಾರ್ಥಿಗಳ ಪ್ರತಿಭಟನಾ ಮೆರವಣಿಗೆ
ಮಹಿಳೆಯರು ಹಾಗೂ ಹೆಣ್ಣು ಮಕ್ಕಳ ಮೇಲೆ ನಡೆಯುತ್ತಿರುವ ಅತ್ಯಾಚಾರ ಪ್ರಕರಣಗಳನ್ನು ಖಂಡಿಸಿ, ಸರ್ಕಾರ ಪಾತಕಿಗಳನ್ನು ಗಲ್ಲಿಗೇರಿಸಬೇಕೆಂದು ಒತ್ತಾಯಿಸಿ ಎಸ್.ಎಫ್.ಐ ನೇತೃತ್ವದಲ್ಲಿ ಸಾವಿರಾರು ಮಂದಿ ವಿದ್ಯಾರ್ಥಿಗಳು ಸೋಮವಾರ ಪಟ್ಟಣದಲ್ಲಿ ಪ್ರತಿಭಟನಾ ಮೆರವಣಿಗೆಯನ್ನು ನಡೆಸಿದರು.
ಪಟ್ಟಣದ ಪ್ರವಾಸಿ ಮಂದಿರದಿಂದ ಎಲ್ಲಾ ಶಾಲಾ ಕಾಲೇಜುಗಳ ವಿದ್ಯಾರ್ಥಿಗಳು ಪ್ರಮುಖ ಬೀದಿಗಳಲ್ಲಿ ಮೆರವಣಿಗೆ ಮಾಡಿ ಸರ್ಕಾರದ ವಿರುದ್ಧ ಘೋಷಣೆಗಳನ್ನು ಕೂಗಿದರು. ಅತ್ಯಾಚಾರ ಆರೋಪಿಗಳಿಗೆ ಉಗ್ರ ಶಿಕ್ಷೆ ವಿಧಿಸದೆ ಸರ್ಕಾರ ಕಣ್ಣು ಮುಚ್ಚಿ ಕುಳಿತಿದೆ. ಮಹಿಳೆಯರಿಗೆ ಮತ್ತು ವಿದ್ಯಾರ್ಥಿನಿಯರಿಗೆ ದೇಶದಲ್ಲಿ ಭಯದ ವಾತಾವರಣ ನಿರ್ಮಾಣವಾಗಿದೆ. ತಾಲ್ಲೂಕಿನ ಮಳಮಾಚನಹಳ್ಳಿಯಲ್ಲಿ ಭಾನುವಾರ ಒಂದು ವರ್ಷದ ಬಾಲಕಿಯನ್ನು ಲೈಂಗಿಕ ಶೋಷಣೆಗೆ ಒಳಪಡಿಸಲಾಗಿದೆ. ಆ ಆರೋಪಿಯನ್ನು ಬಂಧಿಸಿದ್ದು ಉಗ್ರವಾಗಿ ಶಿಕ್ಷಿಸಬೇಕು. ಎಲ್ಲೆಡೆ ಅತ್ಯಾಚಾರ ಪ್ರಕರಣಗಳು ಕಂಡುಬರುತ್ತಿರುವುದಕ್ಕೆ ರಾಜ್ಯ ಹಾಗೂ ಕೇಂದ್ರ ಸರ್ಕಾರದ ವೈಫಲ್ಯವೇ ಕಾರಣ. ರಾಜ್ಯದಲ್ಲಿ ಹಲವಾರು ವಿದ್ಯಾರ್ಥಿನಿಯರ ಮೇಲೆ ಅತ್ಯಾಚಾರ ಪ್ರಕರಣಗಳು ನಡೆದಿದ್ದು ಸರ್ಕಾರ ಕ್ರಮ ಕೈಗೊಳ್ಳುವಲ್ಲಿ ವಿಫಲವಾಗಿದೆ ಎಂದು ಆರೋಪಿಸಿದರು.
ಜಿಲ್ಲಾ ಪಂಚಾಯಿತಿ ಸದಸ್ಯೆ ಸಾವಿತ್ರಮ್ಮ, ಡಿ.ವೈ.ಎಫ್.ಐ ರಾಜ್ಯ ಸಮಿತಿ ಸದಸ್ಯ ಮುನೀಂದ್ರ, ಎಸ್.ಎಫ್.ಐ ಜಿಲ್ಲಾ ಅಧ್ಯಕ್ಷ ರಾಜಶೇಖರ, ಮುಜಾಯಿದ್‌ಪಾಷ, ಶಿವು, ವೆಂಕಟೇಶ್, ಮಲ್ಲಿಕಾ, ಮಂಜುಳಾ, ಮಂಜುಶ್ರೀ, ನಂದಿನಿ, ಶ್ವೇತಾ, ಲಕ್ಷ್ಮಿ, ಮುನಿಲಕ್ಷ್ಮಮ್ಮ ಮತ್ತಿತರರು ಹಾಜರಿದ್ದರು.
ಪೊಲೀಸ್ ಇಲಾಖೆಯಿಂದ ಮಹಿಳಾ ಮತ್ತು ಮಕ್ಕಳ ಮೇಲೆ ನಡೆಯುವ ದೌರ್ಜನ್ಯಗಳ ಬಗ್ಗೆ ಅರಿವು ಮೂಡಿಸುವ ಕಾರ್ಯಕ್ರಮ
ಶಿಡ್ಲಘಟ್ಟದ ಬೋವಿ ಕಾಲೋನಿಯ ದೇವಾಲಯದಲ್ಲಿ ಭಾನುವಾರ ಪೊಲೀಸ್ ಇಲಾಖೆಯಿಂದ ಮಹಿಳಾ ಮತ್ತು ಮಕ್ಕಳ ಮೇಲೆ ನಡೆಯುವ ದೌರ್ಜನ್ಯಗಳ ಬಗ್ಗೆ ಅರಿವು ಮೂಡಿಸುವ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿತ್ತು.
ಅಪಾಯವನ್ನು ಆಹ್ವಾನಿಸುತ್ತಿರುವ ತೆರೆದ ಕೊಳವೆ ಬಾವಿ
ಶಿಡ್ಲಘಟ್ಟ ತಾಲ್ಲೂಕಿನ ಬಶೆಟ್ಟಹಳ್ಳಿ ಗೇಟ್ ಬಳಿ ಶಿಡ್ಲಘಟ್ಟ ಮುಖ್ಯ ರಸ್ತೆಯ ಬದಿಯಲ್ಲೇ ತೆರೆದ ಕೊಳವೆ ಬಾವಿಯು ಅಪಾಯವನ್ನು ಆಹ್ವಾನಿಸುತ್ತಿದೆ.
ಕೋಚಿಮುಲ್‌ನ ನಿರ್ದೇಶಕರಿಗೆ ಅಭಿನಂದನಾ ಸಮಾರಂಭ
ಹಾಲು ಉತ್ಪಾದಕರ ಸಹಕಾರ ಸಂಘಗಳಲ್ಲಿ ಯಾವುದೇ ರಾಜಕೀಯಕ್ಕೆ ಅವಕಾಶ ನೀಡದಂತೆ ಕಾರ್ಯದರ್ಶಿಗಳು ಎಚ್ಚರವಹಿಸಬೇಕು ಎಂದು ಕೋಚಿಮುಲ್ ನಿರ್ದೇಶಕ ಬಂಕ್ ಮುನಿಯಪ್ಪ ಹೇಳಿದರು.
ತಾಲ್ಲೂಕಿನ ಬೆಳ್ಳೂಟಿ ಗೇಟ್‌ನ ಬಳಿಯಿರುವ ಗುಟ್ಟಾಂಜನೇಯಸ್ವಾಮಿ ಕಲ್ಯಾಣ ಮಂಟಪದಲ್ಲಿ ಶನಿವಾರ ತಾಲ್ಲೂಕಿನ ಹಾಲು ಉತ್ಪಾದಕರ ಸಹಕಾರ ಸಂಘಗಳ ನೇತೃತ್ವದಲ್ಲಿ ಏರ್ಪಡಿಸಲಾಗಿದ್ದ ಅಭಿನಂದನಾ ಸಮಾರಂಭದಲ್ಲಿ ಅಭಿನಂದನೆ ಸ್ವೀಕರಿಸಿ ಅವರು ಮಾತನಾಡಿದರು. ಹಾಲು ಉತ್ಪಾದಕರ ಸಹಕಾರ ಸಂಘಗಳು ಅಭಿವೃದ್ಧಿಯಾಗಬೇಕಾದರೆ ಅಲ್ಲಿ ಕೆಲಸ ಮಾಡುವಂತಹ ಸಿಬ್ಬಂದಿ ಪ್ರಾಮಾಣಿಕತೆಯಿಂದ ಕರ್ತವ್ಯ ನಿರ್ವಹಿಸುವುದರೊಂದಿಗೆ ಹಾಲಿನ ಗುಣಮಟ್ಟ ಕಾಪಾಡಬೇಕು. ರೇಷ್ಮೆ ಮತ್ತು ಹೈನುಗಾರಿಕೆಗೆ ಹೆಸರುವಾಸಿಯಾಗಿರುವ ಬಯಲು ಸೀಮೆಯ ಕೋಲಾರ-–ಚಿಕ್ಕಬಳ್ಳಾಪುರ ಜಿಲ್ಲೆಗಳಲ್ಲಿ ಈಗಾಗಲೇ ನೀರಿನ ಕೊರತೆಯಿಂದಾಗಿ ರೇಷ್ಮೆ ಬೆಳೆಯು ಕುಸಿಯುತ್ತಿದ್ದು ಉಳಿದಿರುವ ಏಕೈಕ ದಾರಿ ಹೈನುಗಾರಿಕೆಯಾದ್ದರಿಂದ ಈ ಉದ್ಯಮವನ್ನು ಎಲ್ಲರ ಸಹಕಾರದಿಂದ ಉಳಿಸಿಕೊಂಡು ಹೋಗಬೇಕಾದಂತಹ ಜವಾಬ್ದಾರಿ ಪ್ರತಿಯೊಬ್ಬರಿಗೂ ಇದೆ. ಕಳೆದ ಎರಡು ದಶಕಗಳಿಂದ ವಿವಿಧ ಸಹಕಾರಿ ಕ್ಷೇತ್ರದಲ್ಲಿ ಸೇವೆ ಸಲ್ಲಿಸಿ ಅನುಭವ ಹೊಂದಿದ್ದು ಕೋಚಿಮುಲ್‌ನ ನಿರ್ದೇಶಕನಾಗಿ ನನ್ನ ಅಧಿಕಾರಾವಧಿಯಲ್ಲಿ ಹಾಲು ಉತ್ಪಾದಕರ ಸಹಕಾರ ಸಂಘಗಳಲ್ಲಿ ಯಾವುದೇ ರಾಜಕೀಯ ಬೆರೆಸದೇ ಹಾಲು ಉತ್ಪಾದನೆ ಹಾಗು ಗುಣಮಟ್ಟ ಕಾಪಾಡಲು ಶ್ರಮಿಸುತ್ತೇನೆ ಎಂದರು.
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಶಾಸಕ ಎಂ.ರಾಜಣ್ಣ ಮಾತನಾಡಿ ಸ್ಪರ್ಧಾತ್ಮಕ ಯುಗದಲ್ಲಿ ನಾವು ಬೇರೆ ರಾಷ್ಟ್ರದೊಂದಿಗೆ ಸ್ಪರ್ಧೆ ಮಾಡಬೇಕಾದರೆ ಉತ್ಪಾದನೆಯ ಜೊತೆ ಗುಣಮಟ್ಟವನ್ನು ಕಾಪಾಡಿಕೊಳ್ಳಬೇಕಾಗುತ್ತದೆ. ಹಾಗಾಗಿ ಹಾಲಿ ಉತ್ಪಾದನೆಯ ಜೊತೆಗೆ ಗುಣಮಟ್ಟ ಕಾಪಾಡಲು ಹಾಲು ಉತ್ಪಾದಕರ ಸಹಕಾರ ಸಂಘಗಳ ಅಧ್ಯಕ್ಷರೂ ಸೇರಿದಂತೆ ಕಾರ್ಯದರ್ಶಿಗಳು ಕರ್ತವ್ಯ ನಿರ್ವಹಿಸಬೇಕು. ಬಯಲುಸೀಮೆ ಭಾಗವಾದ ಕೋಲಾರ ಚಿಕ್ಕಬಳ್ಳಾಪುರ ಜಿಲ್ಲೆಗಳಲ್ಲಿ ಕುಡಿಯುವ ನೀರಿಗೂ ಹಾಹಾಕಾರ ಶುರುವಾಗಿದ್ದು ನೀರಾವರಿ ಯೋಜನೆಗಾಗಿ ಈ ಭಾಗದ ಎಲ್ಲಾ ಶಾಸಕರು ಸರ್ಕಾರದ ಮೇಲೆ ಒತ್ತಡ ತರಲು ಸಿದ್ದವಾಗಿದ್ದು ಈ ಬಗ್ಗೆ ಯಾರೂ ಸಂಶಯಪಡಬಾರದು ಎಂದರು.
ಈಗಾಗಲೇ ಜಿಲ್ಲಾ ಕೇಂದ್ರ ಚಿಕ್ಕಬಳ್ಳಾಪುರದಲ್ಲಿ ಮೆಗಾ ಡೈರಿಯನ್ನು ಸ್ಥಾಪನೆ ಮಾಡಲಾಗುತ್ತಿದ್ದು, ಶಿಡ್ಲಘಟ್ಟ ತಾಲ್ಲೂಕಿನಲ್ಲಿ ಹಾಲಿನಪುಡಿ ತಯಾರಿಸುವ ಘಟಕ ನಿರ್ಮಿಸಲು ಕೋಚಿಮುಲ್ ಮಂಡಳಿ ಮುಂದೆ ಬಂದರೆ ಅದಕ್ಕೆ ಅಗತ್ಯವಿರುವ ಜಾಗ ಒದಗಿಸಿಕೊಡುವುದರೊಂದಿಗೆ ತಾಲ್ಲೂಕಿನ ನಿರುದ್ಯೋಗಿ ವಿದ್ಯಾವಂತ ಯುವಕರಿಗೆ ಉದ್ಯೋಗ ಕಲ್ಪಿಸಿಕೊಟ್ಟಂತಾಗುತ್ತದೆ ಎಂದು ಹೇಳಿದರು.
ಈ ಸಂದರ್ಭದಲ್ಲಿ ಇತ್ತೀಚೆಗೆ ಮೃತಪಟ್ಟ ರಾಸುಗಳ ವಿಮೆಯ ಚೆಕ್ಕುಗಳನ್ನು ಫಲಾನುಭವಿಗಳಿಗೆ ವಿತರಣೆ ಮಾಡಲಾಯಿತು. ಚಿಕ್ಕಬಳ್ಳಾಪುರದ ಕೋಚಿಮುಲ್ ನಿರ್ದೇಶಕ ಕೆ.ವಿ.ನಾಗರಾಜ್, ಚಿಂತಾಮಣಿಯ ನಿರ್ದೇಶಕ ಊಲವಾಡಿ ಅಶ್ವಥ್ಥನಾರಾಯಣಬಾಬು, ಡಿಸಿಸಿ ಬ್ಯಾಂಕ್ ನಿರ್ದೇಶಕರಾದ ಪಿ.ವಿ.ನಾಗರಾಜ್, ಶಿವಾರೆಡ್ಡಿ, ಪುರಸಭೆ ಸದಸ್ಯರಾದ ಅಪ್ಸರ್‌ಪಾಷ, ಎಸ್.ರಾಘವೇಂದ್ರ, ನಂದುಕಿಶನ್, ಕೆ.ಎಂ.ವೆಂಕಟೇಶ್, ಆರ್.ಎ.ಉಮೇಶ್, ಗೋವಿಂದರಾಜು ಮುನಿವೆಂಕಟಸ್ವಾಮಿ, ಒಕ್ಕೂಟದ ಉಪವ್ಯವಸ್ಥಾಪಕ ಈಶ್ವರಯ್ಯ ಮತ್ತಿತರರು ಹಾಜರಿದ್ದರು.
ಶಿಲೇಮಾಕನಹಳ್ಳಿ ಗ್ರಾಮದ ತೋಟವೊಂದರಲ್ಲಿ ಪ್ಯಾರಾಚೂಟ್ ಮಾದರಿಯ ವಸ್ತು ಪತ್ತೆ
ತಾಲ್ಲೂಕಿನ ಶಿಲೇಮಾಕನಹಳ್ಳಿ ಗ್ರಾಮದ ತೋಟವೊಂದರಲ್ಲಿ ಬಿದ್ದಿದ್ದ ಪ್ಯಾರಾಚೂಟ್ ಮಾದರಿಯ ವಸ್ತುವೊಂದು ಶುಕ್ರವಾರ ಕೆಲಕಾಲ ಗ್ರಾಮಸ್ಥರಲ್ಲಿ ಗಾಬರಿಯನ್ನುಂಟು ಮಾಡಿತ್ತು.
ಗಾಳಿಯಲ್ಲಿ ತೇಲಿ ಬಂದ ಪ್ಯಾರಾಚೂಟ್ ಮಾದರಿಯ ವಸ್ತುವೊಂದು ತಾಲ್ಲೂಕಿನ ಹಂಡಿಗನಾಳ ಗ್ರಾಮ ಪಂಚಾಯಿತಿಯ ಶಿಲೇಮಾಕನಹಳ್ಳಿ ಗ್ರಾಮದ ಬಳಿಯ ತೋಟವೊಂದರಲ್ಲಿ ಬಂದು ಬಿದ್ದಿದ್ದು ಗ್ರಾಮದ ಕೆಲವರು ಹತ್ತಿರ ಹೋಗಿ ನೋಡಿದಾಗ ಅಲ್ಲಿದ್ದ ಬಾಕ್ಸೊಂದರ ಮೇಲೆ ಬಾಂಬ್ ಎಂದು ಬರೆದಿದ್ದನ್ನು ಕಂಡ ಗ್ರಾಮಸ್ಥರು ಕೂಡಲೇ ಗ್ರಾಮಾಂತರ ಪೋಲೀಸ್ ಠಾಣೆಗೆ ವಿಷಯ ಮುಟ್ಟಿಸಿದ್ದಾರೆ.
ಸ್ಥಳಕ್ಕೆ ಪೋಲೀಸ್ ಪೇದೆಯೊಬ್ಬರು ಹೋಗಿ ಪರಿಶೀಲನೆ ನಡೆಸಿ ಸ್ಥಳದಲ್ಲಿ ಪ್ಯಾರಾಚೂಟ್ ಮಾದರಿಯ ವಸ್ತುವೊಂದಿದ್ದು ಕೆಲ ಎಲೆಕ್ಟ್ರಾನಿಕ್ ವಸ್ತುಗಳನ್ನು ಬಳಸಿದ್ದ ಥರ್ಮಾಕೋಲ್ ಬಾಕ್ಸ್ ಇತ್ತಾದರೂ ಯಾವುದೇ ಬಾಂಬ್ ಇಲ್ಲವೆಂದು ಪೋಲೀಸರು ಖಚಿತಪಡಿಸಿದ ಮೇಲೆ ಗ್ರಾಮಸ್ಥರಲ್ಲಿದ್ದ ಗಾಬರಿ ದೂರವಾಯಿತು.
ಹೆಣ್ಣುಮಕ್ಕಳ ಹಾಗು ಮಹಿಳೆಯರ ಮೇಲೆ ಹೆಚ್ಚುತ್ತಿರುವ ಆತ್ಯಾಚಾರ ಖಂಡಿಸಿ ವಿದ್ಯಾರ್ಥಿಗಳ ಪ್ರತಿಭಟನೆ
ರಾಜ್ಯದಲ್ಲಿ ಇತ್ತೀಚೆಗೆ ಹೆಣ್ಣುಮಕ್ಕಳ ಹಾಗು ಮಹಿಳೆಯರ ಮೇಲೆ ಹೆಚ್ಚುತ್ತಿರುವ ಅತ್ಯಾಚಾರ ಪ್ರಕರಣಗಳನ್ನು ಖಂಡಿಸಿ ಎಸ್‌ಎಫ್‌ಐ ನೇತೃತ್ವದಲ್ಲಿ ವಿದ್ಯಾರ್ಥಿಗಳು ಶುಕ್ರವಾರ ಪ್ರತಿಭಟನಾ ಮೆರವಣಿಗೆ ನಡೆಸಿ ತಹಸೀಲ್ದಾರರ ಮುಖಾಂತರ ರಾಜ್ಯಪಾಲರಿಗೆ ಮನವಿ ಸಲ್ಲಿಸಿದರು.
ಪಟ್ಟಣದ ಪದವಿ ಪೂರ್ವ ಕಾಲೇಜಿನ ಆವರಣದಿಂದ ಪ್ರತಿಭಟನಾ ಮೆರವಣಿಗೆ ನಡೆಸಿದ ವಿದ್ಯಾರ್ಥಿಗಳು ಕೇಂದ್ರ ಮತ್ತು ರಾಜ್ಯ ಸರ್ಕಾರದ ವಿರುದ್ಧ ಘೋಷಣೆಗಳನ್ನು ಕೂಗುತ್ತಾ ಮೆರವಣಿಗೆ ನಡೆಸಿದರು.
ರಾಜ್ಯದಲ್ಲಿ ಇತ್ತೀಚೆಗೆ ಮಹಿಳೆಯರೂ ಸೇರಿದಂತೆ ಶಾಲಾ ಹೆಣ್ಣು ಮಕ್ಕಳ ಮೇಲೆ ನಡೆಯುತ್ತಿರುವ ಅತ್ಯಾಚಾರ ಪ್ರಕರಣಗಳಿಂದ ಹೆಣ್ಣುಮಕ್ಕಳಿಗೆ ಸೂಕ್ತ ಭದ್ರತೆ ಕಲ್ಪಿಸುವಲ್ಲಿ ರಾಜ್ಯ ಹಾಗೂ ಕೇಂದ್ರ ಸರ್ಕಾರ ಸಂಪೂರ್ಣವಾಗಿ ವಿಫಲವಾಗಿವೆ. ಕಳೆದ ನಾಲ್ಕು ವರ್ಷಗಳಿಂದ ಸುಮಾರು ೨,೯೬೪ ಅತ್ಯಾಚಾರ ಪ್ರಕರಣಗಳು ರಾಜ್ಯಾದ್ಯಂತ ನಡೆದಿದ್ದರೂ ಸಹ ಕ್ರಮ ಜರುಗಿಸಲು ಸರ್ಕಾರಗಳು ವಿಫಲವಾಗಿವೆ.
ದೇಶಕ್ಕೆ ಸ್ವಾತಂತ್ರ್ಯ ಬಂದು ೬೭ ವರ್ಷಗಳೆ ಕಳೆದರೂ ಇಂದಿಗೂ ಹೆಣ್ಣು ಮಕ್ಕಳು ಭಯಭೀತರಾಗಿ ಜೀವಿಸಬೇಕಾದಂತಹ ವಾತಾವರಣ ನಿರ್ಮಾಣವಾಗಿದೆ. ರಾಜ್ಯದಲ್ಲಿ ಆಡಳಿತ ನಡೆಸುತ್ತಿರುವ ಸರ್ಕಾರದ ಪ್ರತಿನಿಧಿಗಳು ಜನರಿಗೆ ಉಪಯೋಗವಿಲ್ಲದ ಯೋಜನೆಗಳಿಗಾಗಿ ಕೋಟ್ಯಾಂತರ ರೂಪಾಯಿಗಳನ್ನು ಮೀಸಲಿಡುತ್ತಾರೆ ಆದರೆ ರಾಜ್ಯದಲ್ಲಿ ಹೆಣ್ಣು ಮಕ್ಕಳ ಭದ್ರತೆಗಾಗಿ ಪ್ರತ್ಯೇಕವಾದ ಕಾಯ್ದೆಯನ್ನು ಜಾರಿಗೆ ತರಲು ಇವರಿಂದ ಸಾದ್ಯವಾಗಿಲ್ಲ ಎಂದು ದೂರಿದರು.
ಮಹಿಳೆಯರು ಹಾಗು ಹೆಣ್ಣುಮಕ್ಕಳಿಗೆ ಸೂಕ್ತ ಭದ್ರತೆ ಒದಗಿಸದ ಮುಖ್ಯಮಂತ್ರಿ ಹಾಗು ಗೃಹಸಚಿವರು ಈ ಕೂಡಲೇ ರಾಜೀನಾಮೆ ನೀಡಬೇಕು. ಇದೇ ಪರಿಸ್ಥಿತಿ ಮುಂದುವರೆದರೆ ರಾಜ್ಯಾದ್ಯಂತ ಎಸ್.ಎಫ್.ಐ. ಸಂಘಟನೆಯ ಮುಖಾಂತರ ಬಂದ್ ಕರೆ ನೀಡಿ ಉಗ್ರವಾದ ಪ್ರತಿಭಟನೆಗೆ ಮುಂದಾಗುತ್ತೇವೆ ಎಂದು ಎಸ್.ಎಫ್.ಐ. ರಾಜ್ಯ ಮುಖಂಡ ಕುಂದಲಗುರ್ಕಿ ಮುನೀಂದ್ರ ಎಚ್ಚರಿಕೆ ನೀಡಿದರು.
ಎಸ್.ರಾಜಶೇಖರ್, ಮುಜಾಯಿದ್‌ಪಾಷಾ, ಗುರುಮೂರ್ತಿ, ಅಂಬರೀಶ್, ಮನೋಹರ್, ಮಂಜುಶ್ರೀ, ಮಮತಾ, ಸೌಜನ್ಯ, ಲಾವಣ್ಯ, ನಂದಿನಿ, ಹರ್ಷಿತಾ, ಮುಬಾರಕ್, ಕಾವ್ಯಶ್ರೀ, ರೂಪಶ್ರೀ, ವೀಣಾ, ಜ್ಯೋತಿ, ಅಶ್ವಿನಿ, ಮತ್ತಿತರರು ಪ್ರತಿಭಟನೆಯಲ್ಲಿ ಭಾಗವಹಿಸಿದ್ದರು.

