ತಾಲ್ಲೂಕಿನ ದಿಬ್ಬೂರಹಳ್ಳಿ ಪಂಚಾಯಿತಿಯಲ್ಲಿ ಶುಕ್ರವಾರ ಅವಿಶ್ವಾಸ ಮಂಡನೆಯ ವೀಕ್ಷಣೆಗೆಂದು ಆಗಮಿಸಿದ್ದ ಉಪವಿಭಾಗಾಧಿಕಾರಿ ಶಾಂತಲಾ, ಅವಿಶ್ವಾಸ ಮಂಡಿಸುವ ಸದಸ್ಯರ ಗೈರುಹಾಜರಿಯಿಂದ ನೋಟೀಸನ್ನು ರದ್ದುಗೊಳಿಸಿ ವಾಪಸ್ ಹೋಗುವಂತಾಯಿತು.
ತಾಲ್ಲೂಕಿನ ದಿಬ್ಬೂರಹಳ್ಳಿ ಪಂಚಾಯಿತಿಯಲ್ಲಿ ಒಟ್ಟು 19 ಮಂದಿ ಸದಸ್ಯರಿದ್ದು, 12 ಮಂದಿ ಜೆಡಿಎಸ್ ಬೆಂಬಲಿತ ಹಾಗೂ 7 ಕಾಂಗ್ರೆಸ್ ಬೆಂಬಲಿಗರಿದ್ದರು. ಜೆಡಿಎಸ್ ಬೆಂಬಲಿತ ಡಾ.ಧನಂಜಯರೆಡ್ಡಿ ಅಧ್ಯಕ್ಷರಾಗಿದ್ದರು. ಅವರ ಅಧ್ಯಕ್ಷ ಅವಧಿ ಇನ್ನೂ 11 ತಿಂಗಳಿತ್ತು. ಆದರೆ ಕಳೆದ ವಾರ 13 ಮಂದಿ ಸದಸ್ಯರು ಉಪವಿಭಾಗಾಧಿಕಾರಿ ಅವರ ಕಚೇರಿಯಲ್ಲಿ ಅವಿಶ್ವಾಸವನ್ನು ಮಂಡಿಸಿದ್ದರು. ಆ ಕಾರಣದಿಂದ ದಿನಾಂಕವನ್ನು ನಿಗದಿಗೊಳಿಸಿ ಪಂಚಾಯತಿಗೆ ಆಗಮಿಸಿದ ಉಪವಿಭಾಗಾಧಿಕಾರಿ ಅವರು ಕೇವಲ ಇಬ್ಬರು ಗ್ರಾಮ ಪಂಚಾಯತಿ ಸದಸ್ಯರು ಹಾಜರಿದ್ದುದರಿಂದ ರದ್ದುಗೊಳಿಸಿ ಹಿಂತಿರುಗಿದರು. ರಾಜಕೀಯ ಗಂಭೀರತೆಯಿಂದಾಗಿ ಒಂದೆಡೆ ಸಾರ್ವಜನಿಕರು ಕುತೂಹಲಗೊಂಡು ನೋಡುತ್ತಿದ್ದರೆ, ಮತ್ತೊಂದೆಡೆ ಅಹಿತಕರ ಘಟನೆ ನಡೆಯದಂತೆ ಮುಂಜಾಗ್ರತೆಯಿಂದ ಪೊಲೀಸ್ ಬಂದೋಬಸ್ತ್ ಕೂಡ ಏರ್ಪಡಿಸಲಾಗಿತ್ತು.
’ಪಕ್ಷಾತೀತವಾದ, ಜಾತ್ಯಾತೀತವಾದ ಹಾಗೂ ಭ್ರಷ್ಟಾಚಾರ ರಹಿತ ಆಡಳಿತವನ್ನು ನಡೆಸುತ್ತಿದ್ದೇನೆ. ಎಲ್ಲಾ ಸದಸ್ಯರಿಗೂ ಪಕ್ಷ ಬೇಧವಿಲ್ಲದೆ ಸಮಾನ ಹಕ್ಕು ಇರುವ ಪಂಚಾಯತಿ ನಮ್ಮದು. ಅವಿಶ್ವಾಸ ನಿಲುವಳಿ ಮಂಡನೆ ತಿರಸ್ಕೃತಗೊಂಡಿದೆ. ಈ ಜಯ ನಮ್ಮ ನೈತಿಕತೆಯನ್ನು ಹೆಚ್ಚಿಸಿದೆ’ ಎಂದು ಗ್ರಾಮ ಪಂಚಾಯತಿ ಅಧ್ಯಕ್ಷ ಡಾ.ಧನಂಜಯರೆಡ್ಡಿ ತಿಳಿಸಿದರು.
ಡಿಸಿಸಿ ಬ್ಯಾಂಕ್ ನಿರ್ದೇಶಕ ಶಿವಾರೆಡ್ಡಿ, ಮಾಜಿ ನಿರ್ದೇಶಕ ರಾಮಲಿಂಗಾರೆಡ್ಡಿ, ಶಿವಣ್ಣ, ಚೌಡಪ್ಪ, ಅಶ್ವತ್ಥರೆಡ್ಡಿ, ಶ್ರೀನಿವಾಸರೆಡ್ಡಿ, ಉಪವಿಭಾಗಾಧಿಕಾರಿಕಚೇರಿಯ ಅಧಿಕಾರಿಗಳಾದ ರಾಥೋಡ್, ನಾಗರಾಜ್ ಮತ್ತಿತರರು ಈ ಸಂದರ್ಭದಲ್ಲಿ ಹಾಜರಿದ್ದರು.
ದಿಬ್ಬೂರಹಳ್ಳಿ ಪಂಚಾಯಿತಿಯಲ್ಲಿ ಅವಿಶ್ವಾಸ ನಿಲುವಳಿ ಮಂಡನೆ ತಿರಸ್ಕೃತ
ರೇಷ್ಮೆ ಇಲಾಖೆಯ ವತಿಯಿಂದ ರೈತರಿಗೆ ಕಾರ್ಯಾಗಾರ
ತಾಲ್ಲೂಕಿನ ಬೆಳ್ಳೂಟಿ ಗ್ರಾಮದ ಗುಟ್ಟಾಂಜನೇಯಸ್ವಾಮಿ ಕಲ್ಯಾಣಮಂಟಪದಲ್ಲಿ ಬುಧವಾರ ರೇಷ್ಮೆ ಇಲಾಖೆಯ ವತಿಯಿಂದ ರೈತರಿಗೆ ಜಲ ಜಾಗೃತಿ ಹಾಗೂ ವಿವಿಧ ಯೋಜನೆಗಳ ಕುರಿತಂತೆ ಮಾಹಿತಿ ನೀಡುವ ಕಾರ್ಯಾಗಾರವನ್ನು ಆಯೋಜಿಸಲಾಗಿತ್ತು.
ಈ ಸಂದರ್ಭದಲ್ಲಿ ರೇಷ್ಮೆ ಸಂಶೋಧನಾ ಕೇಂದ್ರದ ವಿಜ್ಞಾನಿ ಅನಂತರಾಮು ಪ್ರಾತ್ಯಕ್ಷಿಕೆಗಳ ಮೂಲಕ ಕಡಿಮೆ ನೀರಿನಲ್ಲಿ ತಾಲ್ಲೂಕಿನ ವಾಣಿಜ್ಯ ಬೆಳೆಯಾದ ಹಿಪ್ಪುನೇರಳೆ ಬೇಸಾಯವನ್ನು ಬೆಳೆಯುವ ಬಗ್ಗೆ ಮಾಹಿತಿ ನೀಡಿದರು.
ರೇಷ್ಮೆ ಇಲಾಖೆಯ ಉಪನಿರ್ದೇಶಕ ನಾಗಭೂಷಣ್ ಮತ್ತು ಸಹಾಯಕ ನಿರ್ದೇಶಕ ಚಂದ್ರಪ್ಪ ರೇಷ್ಮೆ ಇಲಾಖೆಯ ವಾರ್ಷಿಕ ಯೋಜನೆಗಳು, ಜಿಲ್ಲಾ ಪಂಚಾಯಿತಿ ಮತ್ತು ತಾಲ್ಲೂಕು ಪಂಚಾಯಿತಿಯಿಂದ ಸಿಗುವ ಸಹಾಯಧನ ಮುಂತಾದವುಗಳನ್ನು ರೈತರಿಗೆ ವಿವರಿಸಿ ವಾರ್ಷಿಕ ಯೋಜನಾ ಪುಸ್ತಕವನ್ನು ಬಿಡುಗಡೆ ಮಾಡಿದರು.
ರೈತಮುಖಂಡರಾದ ಎಸ್.ಎಂ.ನಾರಾಯಣಸ್ವಾಮಿ, ಆಂಜನೇಯರೆಡ್ಡಿ, ಯಲುವಳ್ಳಿ ಸೊಣ್ಣೇಗೌಡ, ಮಳ್ಳೂರು ಹರೀಶ್, ಭಕ್ತರಹಳ್ಳಿ ಬೈರೇಗೌಡ, ಶ್ರೀನಿವಾಸ್, ಲಕ್ಷ್ಮಯ್ಯ, ನಾರಾಯಣಸ್ವಾಮಿ, ಲಕ್ಷ್ಮೀನಾರಾಯಣ ರೆಡ್ಡಿ, ಛಲಪತಿ, ಮುನಿನಂಜಪ್ಪ, ಕೃಷ್ಣಪ್ಪ, ಅಬ್ಲೂಡು ದೇವರಾಜ್ ಮತ್ತಿತರರು ಈ ಸಂದರ್ಭದಲ್ಲಿ ಹಾಜರಿದ್ದರು.
ಜೆ.ವೆಂಕಟಾಪುರ ಗ್ರಾಮದಲ್ಲಿ ಬರಡು ರಾಸುಗಳಿಗೆ ಉಚಿತ ಚಿಕಿತ್ಸೆ
ತಾಲ್ಲೂಕಿನ ಜೆ.ವೆಂಕಟಾಪುರ ಗ್ರಾಮದಲ್ಲಿ ಶುಕ್ರವಾರ ಪಶುಪಾಲನಾ ಮತ್ತು ಪಶುವೈದ್ಯ ಇಲಾಖೆಯ ತಜ್ಞರಿಂದ ಬರಡು ರಾಸುಗಳಿಗೆ ಉಚಿತವಾಗಿ ಚಿಕಿತ್ಸೆ ನೀಡಲಾಯಿತು.
ಪಶುಪಾಲನಾ ಮತ್ತು ಪಶುವೈದ್ಯ ಇಲಾಖೆಯ ಗೈನಕಾಲಜಿಸ್ಟ್ ಡಾ.ಚಂದ್ರಶೇಖರ್ ಬುಗ್ಗಿ ಅವರ ನೇತೃತ್ವದಲ್ಲಿ ಜೆ.ವೆಂಕಟಾಪುರ ಹಾಗೂ ಸುತ್ತಮುತ್ತಲಿನ ಗ್ರಾಮಗಳ ಸುಮಾರು 155 ಬರಡು ರಾಸುಗಳಿಗೆ ಚಿಕಿತ್ಸೆ ನೀಡಲಾಯಿತು. ಹೈನುಗಾರಿಕೆಯ ಬಗ್ಗೆ, ಅವುಗಳ ರೋಗಲಕ್ಷಣಗಳು ಹಾಗೂ ಪಾಲನೆ ಪೋಷಣೆಯ ಬಗ್ಗೆ ಗ್ರಾಮಸ್ಥರಿಗೆ ಡಾ.ಚಂದ್ರಶೇಖರ್ ಬುಗ್ಗಿ ತಿಳುವಳಿಕೆ ನೀಡಿದರು.
ರಾಸುಗಳ ಪ್ರಸೂತಿ ಹಾಗೂ ಗರ್ಭಕೋಶ ಖಾಯಿಲೆ ಕುರಿತಂತೆ ಅಮೇರಿಕೆಯಿಂದ ಉನ್ನತ ಶಿಕ್ಷಣಕ್ಕಾಗಿ ಆಗಮಿಸಿದ್ದ ಡಾ.ಶೈ ಅವರು ಗ್ರಾಮಸ್ಥರು ಹಾಗೂ ತಜ್ಞರಿಂದ ವಿವಿಧ ಮಾಹಿತಿ ಪಡೆದರು.
ಕೋಚಿಮುಲ್ ಉಪವ್ಯವಸ್ಥಾಪಕ ಡಾ.ಈಶ್ವರಯ್ಯ, ಪಶುಪಾಲನಾ ಮತ್ತು ಪಶುವೈದ್ಯ ಇಲಾಖೆಯ ಉಪನಿರ್ದೇಶಕ ಡಾ.ಬಿ.ಎನ್.ಶಿವರಾಮ್, ಸಹಾಯಕ ನಿರ್ದೇಶಕ ಡಾ.ಮುನಿನಾರಾಯಣರೆಡ್ಡಿ, ಡಾ.ಆಂಜಿನಪ್ಪ, ಡಾ.ರವಿಚಂದ್ರ, ಡಾ.ರಾಮಕೃಷ್ಣರೆಡ್ಡಿ, ವಿಸ್ತರಣಾಧಿಕಾರಿಗಳಾದ ಕೆ.ಎನ್.ಬಿ.ರೆಡ್ಡಿ, ತಮ್ಮಣ್ಣ, ಸಿದ್ದೇಶ ಮತ್ತಿತರರು ಈ ಸಂದರ್ಭದಲ್ಲಿ ಹಾಜರಿದ್ದರು.
ನೀರು ಬರುವವರೆಗೂ ಹೋರಾಟ ಮಾಡೋಣ – ಸ್ವಾತಂತ್ರ್ಯ ಹೋರಾಟಗಾರ ಎಚ್.ಎಸ್.ದೊರೆಸ್ವಾಮಿ
‘ಜೈಲಿಗೆ ಹೋಗಲು ತಯಾರಿರುವ ಹತ್ತು ಸಾವಿರ ಸತ್ಯಾಗ್ರಹಿಗಳನ್ನು ತಯಾರು ಮಾಡಿ, ನಾನೂ ಜೊತೆಗೂಡುತ್ತೇನೆ. ಸರ್ಕಾರದ ಮೇಲೆ ಒತ್ತಡ ತರೋಣ. ಬಯಲುಸೀಮೆಗೆ ನೀರು ಬರುವವರೆಗೂ ಹೋರಾಟ ಮಾಡೋಣ’ ಎಂದು ಸ್ವಾತಂತ್ರ್ಯ ಹೋರಾಟಗಾರ ಎಚ್.ಎಸ್.ದೊರೆಸ್ವಾಮಿ ಹೇಳಿದರು.
ತಾಲ್ಲೂಕಿನ ಬೆಳ್ಳೂಟಿ ಗ್ರಾಮದ ಆಂಜನೇಯಸ್ವಾಮಿ ಕಲ್ಯಾಣಮಂಟಪದಲ್ಲಿ ಬುಧವಾರ ಶಾಶ್ವತ ನೀರಾವರಿ ಹೋರಾಟ ಸಮಿತಿ ವತಿಯಿಂದ ರೈತರ ಜಲ ಜಾಗೃತಿ ಸಭೆಗೆ ಆಗಮಿಸಿದ್ದ ಅವರು ಮಾತನಾಡಿದರು.
ಶಾಸನ ಸಭೆಯಲ್ಲಿ ಯಾವೊಬ್ಬ ಶಾಸಕರೂ ನೀರಿನ ಕುರಿತಂತೆ ಚಕಾರವೆತ್ತದಿರುವುದು ದುರದೃಷ್ಟಕರ. ಬಯಲು ಸೀಮೆಯಲ್ಲಿ ನೀರಿನ ಸಮಸ್ಯೆ ದೊಡ್ಡದಿದೆ. ಜನರಿಂದ ಆಯ್ಕೆಯಾದವರು ಜನರ ಅತ್ಯಗತ್ಯ ನೀರಿನ ಕುರಿತಂತೆ ಉಪೇಕ್ಷೆ ಮಾಡಬಾರದು. ಅದು ಸರ್ಕಾರಕ್ಕೂ ಮತ್ತು ಆಯ್ಕೆಯಾದ ಶಾಸಕರಿಗೂ ಶೋಭೆಯಲ್ಲ. ಚುನಾವಣೆಗೆ ಮುಂಚೆ ಆಶ್ವಾಸನೆ ನೀಡಿದ್ದವರು ನಂತರ ಅದರ ಬಗ್ಗೆ ಚಿಂತನೆ ಮಾಡಿಲ್ಲ. ಚುನಾವಣೆ ಸಂದರ್ಭದಲ್ಲಿ ಶಂಕುಸ್ಥಾಪನೆ ಮಾಡಿರುವ ಎತ್ತಿನಹೊಳೆ ಯೋಜನೆ ಇನ್ನೂ ಪ್ರಾರಂಭವಾಗಿಲ್ಲ. ನಮ್ಮ ಜಿಲ್ಲೆಗಳು ಕೆರೆಗಳಿಂದ ಕೂಡಿದ್ದು, ನಮ್ಮ ಹೋರಾಟದ ಉದ್ದೇಶ ಕೆರೆಗಳನ್ನು ತುಂಬಿಸುವ ನೀರನ್ನು ತರಿಸುವುದಾಗಿದೆ. ಶಾಶ್ವತ ನೀರಾವರಿ ಹೋರಾಟ ಸಮಿತಿ ಜನಜಾಗೃತಿ ಮೂಡಿಸಿ ಹತ್ತು ಸಾವಿರ ಮಂದಿ ಸತ್ಯಾಗ್ರಹಿಗಳ ಮೂಲಕ ಸರ್ಕಾರಕ್ಕೆ ಹದಿನೈದು ದಿನಗಳೊಳಗೆ ತ್ವರಿತ ಗತಿಯಲ್ಲಿ ಕೆಲಸ ಮಾಡುವಂತೆ ಒತ್ತಾಯಿಸೋಣ ಎಂದು ಹೇಳಿದರು.
ಶಾಶ್ವತ ನೀರಾವರಿ ಹೋರಾಟ ಸಮಿತಿ ಅಧ್ಯಕ್ಷ ಆಂಜನೇಯರೆಡ್ಡಿ, ಕಾರ್ಯದರ್ಶಿ ಯಲುವಳ್ಳಿ ಸೊಣ್ಣೇಗೌಡ, ಪ್ರಧಾನ ಕಾರ್ಯದರ್ಶಿ ಎಸ್.ಎಂ.ನಾರಾಯಣಸ್ವಾಮಿ, ಉಪಾಧ್ಯಕ್ಷರಾದ ಮಳ್ಳೂರು ಹರೀಶ್, ಭಕ್ತರಹಳ್ಳಿ ಬೈರೇಗೌಡ, ಸದಸ್ಯರಾದ ಮಂಚನಬಲೆ ಶ್ರೀನಿವಾಸ್, ಲಕ್ಷ್ಮಯ್ಯ, ಶ್ರೀನಿವಾಸ್, ನಾರಾಯಣಸ್ವಾಮಿ, ಲಕ್ಷ್ಮೀನಾರಾಯಣ ರೆಡ್ಡಿ, ಛಲಪತಿ, ಸುಶ್ಮಾ ಶ್ರೀನಿವಾಸ್, ಕೆಂಪರೆಡ್ಡಿ, ಮುನಿನಂಜಪ್ಪ, ಕೃಷ್ಣಪ್ಪ, ಅಬ್ಲೂಡು ದೇವರಾಜ್ ಮತ್ತಿತರರು ಈ ಸಂದರ್ಭದಲ್ಲಿ ಹಾಜರಿದ್ದರು.
ಅಂಚೆಚೀಟಿಗಳೊಂದಿಗೆ ಸೈಕಲ್ ಜಾಥಾ
ತಾಲ್ಲೂಕಿನ ಮೇಲೂರು ಗ್ರಾಮದ ಗ್ರಾಮಾಂತರ ಅಂಚೆ ಚೀಟಿ ಸಂಗ್ರಹಕಾರರ ಸಂಘದ ವತಿಯಿಂದ ಅಂಚೆ ಚೀಟಿ ಸಂಗ್ರಹಕಾರ ಎಂ.ಆರ್.ಪ್ರಭಾಕರ್ ಎರಡು ದಿನಗಳ ಕಾಲ ಸೈಕಲ್ ಜಾಥಾ ಕೈಗೊಂಡು ಹಲವು ಸರ್ಕಾರಿ ಶಾಲೆಗಳಲ್ಲಿ ಅಂಚೆ ಚೀಟಿ ಪ್ರದರ್ಶನವನ್ನು ನಡೆಸಿದ್ದಾರೆ.
ಹೊಸಕೋಟೆ ತಾಲ್ಲೂಕಿನ ಉಪ್ಪಾರಹಳ್ಳಿ, ಚೌಳುತೋಟ, ಸೋಂಪುರ, ಕೈವಾರ, ಶಿಡ್ಲಘಟ್ಟ, ಮೇಲೂರು ಹಾಗೂ ವಿಜಯಪುರದ ಬಳಿಯ ಮಾಚನಹಳ್ಳಿಗಳಲ್ಲಿನ ಸರ್ಕಾರಿ ಶಾಲೆಗಳಲ್ಲಿ ಸುಮಾರು 60 ವಿಷಯಗಳಿಗೆ ಸಂಬಂಧಿಸಿದಂತೆ ಅಂಚೆಚೀಟಿಗಳನ್ನು ಪ್ರದರ್ಶಿಸಿದ್ದಾರೆ.
ತಮ್ಮ ಸೈಕಲ್‌ಗೆ ಅಂಚೆ ಚೀಟಿಗಳ ಸಂಗ್ರಹವಿರುವ ಎರಡು ಬ್ಯಾಗ್‌ಗಳನ್ನು ನೇತುಹಾಕಿಕೊಂಡು, ಸೈಕಲ್ ಬಾರ್ ಕೆಳಗೆ ವಿವಿಧ ಅಂಚೆಚೀಟಿಗಳೊಂದಿಗೆ ವಿಶ್ವಶಾಂತಿ ಸಂದೇಶ ವಾಹಕವನ್ನು ಪ್ರದರ್ಶಸುತ್ತಾ 64 ವರ್ಷವಾದರೂ ಯುವಕನಂತೆ ಸೈಕಲಾ ಜಾಥಾ ನಡೆಸಿದ್ದಾರೆ. ಪರಿಸರ ಉಳಿಸಿ ಎಂದು ಭಾಷಣ ಮಾಡುವವರ ನಡುವೆ ಎಲೆಮರೆ ಕಾಯಿಯಂತೆ ಯಾವುದೇ ಮಾಲಿನ್ಯ ಹೊಗೆ ಉಗುಳದ ಸೈಕಲ್ ತುಳಿಯುತ್ತಾ ಪರಿಸರ ಜಾಗೃತಿಯನ್ನು ನಡೆಸಿದ್ದಾರೆ.
ಭಾರತದರ್ಶನ, ಸಂಸ್ಕೃತಿ, ತಂತ್ರಜ್ಞಾನ, ಕೃಷಿ, ಹಕ್ಕಿಗಳು, ಕೀಟಗಳು, ಚಿಟ್ಟೆಗಳು, ಸರ್.ಎಂ.ವಿಶ್ವೇಶ್ವರಯ್ಯ, ಸ್ವಾತಂತ್ರ್ಯ ಹೋರಾಟಗಾರರು, ಕ್ರೀಡೆಗಳು, ಜಲಚರಗಳು, ವಿಮಾನ, ಸೌರವಿದ್ಯುತ್ ಹೀಗೆ ವೈವಿದ್ಯಮಯ ವಿಷಯಗಳಿಗೆ ಸಂಬಂಧಿಸಿದಂತೆ ಅಂಚೆ ಚೀಟಿಗಳ ಮೂಲಕ ಭಾರತದರ್ಶನ, ಸನಾತನಧರ್ಮ, ಸಂಸ್ಕೃತಿ, ಪರಂಪರೆ, ವಿಶ್ವಶಾಂತಿ, ಸ್ನೇಹಸೌಹಾರ್ಧ ಹಾಗೂ ಪರಿಸರ ಸಂದೇಶಗಳನ್ನು ಮಕ್ಕಳಿಗೆ ವಿವರಿಸುತ್ತಾರೆ.
ಹೊಸಕೋಟೆ ತಾಲ್ಲೂಕಿನ ವಿವಿಧ ಸರ್ಕಾರಿ ಶಾಲೆಗಳಲ್ಲಿ ಪ್ರದರ್ಶನ ನೀಡಿ ಕೈವಾರದ ಮೂಲಕ ಶಿಡ್ಲಘಟ್ಟ ತಲುಪಿದ ಅಂಚೆ ಚೀಟಿ ಸಂಗ್ರಹಕಾರ ಎಂ.ಆರ್.ಪ್ರಭಾಕರ್ ’ಪ್ರಜಾವಾಣಿ’ಯೊಂದಿಗೆ ಮಾತನಾಡಿದರು.
‘ಸೈಕಲ್ ಪರಿಸರ ಸಂರಕ್ಷಕ ವಾಹನ. ಆದ್ದರಿಂದ ಸೈಕಲ್ ಜಾಥಾ ಆಗಾಗ ನಡೆಸುತ್ತೇನೆ. ಅಂಚೆ ಚೀಟಿಗಳನ್ನು ಸರ್ಕಾರಿ ಶಾಲೆಗಳಲ್ಲಿ ಪ್ರದರ್ಶಸಿ ಗ್ರಾಮಾಂತರ ಮಕ್ಕಳಿಗೆ ಈ ಹವ್ಯಾಸವನ್ನು ಪರಿಚಯಿಸುತ್ತೇನೆ. ಹವ್ಯಾಸದೊಂದಿಗೆ ಅಂಚೆ ಚೀಟಿಯ ಮೂಲಕ ಹಲವಾರು ಸಂದೇಶ ಹಾಗೂ ಹೊಸ ವಿಷಯಗಳನ್ನು ತಿಳಿಸುತ್ತಾ ಸಾಗುತ್ತೇನೆ. ಮಕ್ಕಳ ಮನಸ್ಸು ಸೂಕ್ಷ್ಮವಾದದ್ದು. ಹೊಸ ಸಂಗತಿಗಳನ್ನು ಬೇಗ ಜೀರ್ಣಿಸಿಕೊಳ್ಳುತ್ತಾರೆ. ಆದರೆ ಅವರಿಗೆ ಯಾವ ವಿಷಯವನ್ನು ಕಲಿಸುತ್ತೇವೆಂಬುದು ದೊಡ್ಡವರ ವಿವೇಚನೆಗೆ ಸೇರಿದ್ದು. ನಾನು ಹೋದೆಡೆಯೆಲ್ಲಾ ಜನರು ಪ್ರೀತಿಯಿಂದ ಬರಮಾಡಿಕೊಂಡಿದ್ದಾರೆ. ಮಕ್ಕಳು ಕುತೂಹಲಗೊಂಡು ಹಲವು ಪ್ರಶ್ನೆಗಳನ್ನು ಕೇಳುತ್ತಾರೆ. ಯಾವುದೇ ಖರ್ಚಿಲ್ಲದೆ, ಆದಾಯದ ಅಗತ್ಯವಿಲ್ಲದೇ ನನ್ನಲ್ಲಿನ ಅಂಚೆಚೀಟಿಗಳ ಸಂಗ್ರಹದ ಮೂಲಕ ನಮ್ಮ ಸಂಸ್ಕೃತಿ, ಪರಿಸರ ಮತ್ತು ವಿಶ್ವಶಾಂತಿಯ ಪರಿಚಾರಕನಾಗಿದ್ದೇನೆ’ ಎಂದು ಹೇಳಿದರು.
ತಾಲ್ಲೂಕು ಕನ್ನಡ ಸಾಹಿತ್ಯ ಪರಿಷತ್ ವತಿಯಿಂದ ಮನೆ ಮನೆ ಕವಿಗೋಷ್ಠಿ ಕಾರ್ಯಕ್ರಮ
ಗಡಿ ನಾಡು ಪ್ರದೇಶಗಳಲ್ಲಿ ಕನ್ನಡ ಸಂಸ್ಕೃತಿ, ಸಾಹಿತ್ಯವನ್ನು ಉಳಿಸಿ ಬೆಳೆಸುವ ನಿಟ್ಟಿನಲ್ಲಿ ಕನ್ನಡ ಸಾಹಿತ್ಯ ಪರಿಷತ್ ಕೆಲಸ ಮಾಡಬೆಕಾಗಿದೆ ಎಂದು ಕ.ಸಾ.ಪ ಜಿಲ್ಲಾಧ್ಯಕ್ಷ ಹನುಮಂತರಾವ್ ತಿಳಿಸಿದರು.
ಪಟ್ಟಣದ ಸರಸ್ವತಿ ಕಾನ್ವೆಂಟ್ ಶಾಲೆಯ ಕಾರ್ಯದರ್ಶಿ ಎನ್.ಶ್ರೀಕಾಂತ್ ಅವರ ಕೆ.ಎಲ್.ಎನ್. ಮಾತೃಶ್ರೀ ನಿಲಯದಲ್ಲಿ ತಾಲ್ಲೂಕು ಕನ್ನಡ ಸಾಹಿತ್ಯ ಪರಿಷತ್ ವತಿಯಿಂದ ಈಚೆಗೆ ಏರ್ಪಡಿಸಿದ್ದ ಮನೆಮನೆ ಕವಿಗೋಷ್ಠಿ ಕಾರ್ಯಕ್ರಮಲ್ಲಿ ಅವರು ಮಾತನಾಡಿದರು.
ತಾಲ್ಲೂಕಿನಲ್ಲಿ ಮನೆ ಮನೆ ಕವಿಗೋಷ್ಠಿಗಳನ್ನು ಮಾಡುವ ಮೂಲಕ ಕವಿಗಳು ತಮ್ಮ ಸ್ವರಚಿತ ಕವನಗಳನ್ನು ವಾಚಿಸಿ ಕನ್ನಡದ ಕಂಪು ಹರಡಬೇಕು ಎಂದು ಹೇಳಿದರು.
ಕನ್ನಡ ಸಾಹಿತ್ಯ ಪರಿಷತ್ ಶತಮಾನೋತ್ಸವ ಆಚರಿಸುವ ಸಂದರ್ಭದಲ್ಲಿ ನೂರು ಕಾರ್ಯಕ್ರಮಗಳ ಗುರಿಯನ್ನು ಹೊಂದಬೇಕಾಗಿದೆ. ಸಾಹಿತ್ಯದ ಬೆಳವಣಿಗೆಗೆ ವಿವಿಧ ಸಾಹಿತ್ಯಾತ್ಮಕ ಚಟುವಟಿಕೆಗಳನ್ನು ಹಾಕಿಕೊಳ್ಳುವ ಮೂಲಕ ಕನ್ನಡವನ್ನು ಪಸರಿಸಬೇಕು ಎಂದು ನುಡಿದರು.
ಈ ಸಂದರ್ಭದಲ್ಲಿ ನಿಕಟ ಪೂರ್ವ ಕ.ಸಾ.ಪ ತಾಲ್ಲೂಕು ಅಧ್ಯಕ್ಷ ವಿ.ಕೃಷ್ಣ ಅವರು ತಾಲ್ಲೂಕು ಕನ್ನಡ ಸಾಹಿತ್ಯ ಪರಿಷತ್‌ನ ನೂತನ ಅಧ್ಯಕ್ಷ ಕೃ.ನಾ.ಶ್ರೀನಿವಾಸ್ ಅವರಿಗೆ ಅಧಿಕಾರ ಹಸ್ತಾಂತರ ಮಾಡಿದರು.
ಮನೆಮನೆ ಕವಿಗೋೋಷ್ಠಿಯಲ್ಲಿ ಸಾಹಿತ್ಯ ಸಕ್ಕರೆ ಹಾಗೂ ಕಾವ್ಯ ದಾರಾಯಿ ಬಿರದುಗಳನ್ನು ಪಡೆದಿರುವ ದೇವರ ಮಳ್ಳೂರು ಚನ್ನಕೃಷ್ಣ ಕಾಡದಿರು ತಾಯಿದೇವರಂತೆ ಕವಿತೆಯನ್ನು ವಾಚಿಸಿದರು, ಮಾಲತಿ, ಟಿ.ವಿಜಯಕುಮಾರ್, ಜಿ.ಎನ್.ಶಾಮಸುಂದರ್, ಎಸ್.ವಿ.ನಾಗರಾಜ್‌ರಾವ್, ಅನಂತಕೃಷ್ಣ, ಟಿ.ನಾರಾಯಣಸ್ವಾಮಿ, ಎನ್.ಶ್ರೀಕಾಂತ್, ಡಾ.ವಿ.ಎಸ್.ಕೃಷ್ಣಮೂರ್ತಿ, ಅನಂತಲಕ್ಷ್ಮೀ, ಸರಸ್ವತಿ ಕಾನ್ವೆಂಟ್ ಅಧ್ಯಕ್ಷ ವೆಂಕಟಸುಬ್ಬಾರಾವ್, ಚಿಕ್ಕವೆಂಕಟರಾಯಪ್ಪ ಮತ್ತಿತರರು ಸ್ವರಚಿತ ಕವಿತೆಗಳನ್ನು ವಾಚಿಸಿದರು.
ವಿದ್ಯಾರ್ಥಿ ವಿರೋಧಿ ಧೋರಣೆ ಅನುಸರಿಸುತ್ತಿರುವ ಅಧಿಕಾರಿಗಳ ವಿರುದ್ಧ ಕಾಲೇಜು ವಿದ್ಯಾರ್ಥಿಗಳಿಂದ ಶವಯಾತ್ರೆ
ಎಸ್.ಎಫ್.ಐ ಮತ್ತು ಡಿ.ವೈ.ಎಫ್.ಐ ನೇತೃತ್ವದಲ್ಲಿ ಕಾಲೇಜು ವಿದ್ಯಾರ್ಥಿಗಳು ಬುಧವಾರ ಕ್ಷೇತ್ರ ಶಿಕ್ಷಣಾಧಿಕಾರಿ ಹಾಗೂ ಜಿಲ್ಲಾ ಉಪನಿರ್ದೇಶಕರ ಪ್ರತಿಕೃತಿಗಳ ಶವಯಾತ್ರೆಯನ್ನು ನಡೆಸಿದರು.
ಪಟ್ಟಣದ ಪ್ರವಾಸಿ ಮಂದಿರದಿಂದ ಪ್ರಮುಖ ರಸ್ತೆಗಳಲ್ಲಿ ಶವಯಾತ್ರೆಯನ್ನು ನಡೆಸಿ ವಿದ್ಯಾರ್ಥಿ ವಿರೋಧಿ ಧೋರಣೆ ಅನುಸರಿಸುತ್ತಿರುವ ಅಧಿಕಾರಿಗಳ ವಿರುದ್ಧ ಘೋಷಣೆಗಳನ್ನು ಕೂಗಿದರು. ಕೋಟೆ ವೃತ್ತದಲ್ಲಿರುವ ಕ್ಷೇತ್ರ ಶಿಕ್ಷಣಾಧಿಕಾರಿಗಳ ಕಚೇರಿಯ ಮುಂದೆ ಪ್ರತಿಕೃತಿಗಳನ್ನು ಸುಟ್ಟು ಪ್ರತಿಭಟಿಸಿದರು.
ತಾಲ್ಲೂಕಿನ ಕೆಲವು ಖಾಸಗಿ ಶಿಕ್ಷಣ ಸಂಸ್ಥೆಗಳು ಮಿತಿ ಮೀರಿದ ಶುಲ್ಕ ವಸೂಲಿ ಮಾಡಿ ಬಡವರ ರಕ್ತ ಹೀರುತ್ತಿರುವ ಸಂಗತಿಯನ್ನು ಈಗಾಗಲೇ ಮೇ ತಿಂಗಳಿನಿಂದ ಇಲ್ಲಿಯವರೆಗೂ ಕ್ಷೇತ್ರ ಶಿಕ್ಷಣಾಧಿಕಾರಿ ರಘುನಾಥರೆಡ್ಡಿ ಮತ್ತು ಸಾರ್ವಜನಿಕ ಶಿಕ್ಷಣ ಇಲಾಖೆಯ ಉಪನಿರ್ದೇಶಕ ಅಜಿತ್‌ಪ್ರಸಾದ್ ಅವರಿಗೆ ಮನವಿಯನ್ನು ಕೊಟ್ಟಿದ್ದರೂ ಯಾವುದೇ ಕ್ರಮವನ್ನು ಕೈಗೊಂಡಿಲ್ಲ. ಶಿಕ್ಷಣ ಶುಲ್ಕ ನೀತಿಯನ್ನು ಸರಿಪಡಿಸಲಾಗದ ಅಧಿಕಾರಿಗಳ ವೈಫಲ್ಯವನ್ನು ಖಂಡಿಸಿ ಅಧಿಕಾರಿಗಳ ವಿರುದ್ಧ ವಿನೂತನವಾಗಿ ಶವಯಾತ್ರೆ ನಡೆಸುವ ಮೂಲಕ ಪ್ರತಿಭಟಿಸುತ್ತಿದ್ದೇವೆ ಎಂದು ಪ್ರತಿಭಟನಾಕಾರರು ತಿಳಿಸಿದರು.
ಡಿ.ವೈ.ಎಫ್.ಐ ರಾಜ್ಯ ಸಮಿತಿ ಸದಸ್ಯ ಕುಂದಲಗುರ್ಕಿ ಮುನೀಂದ್ರ, ತಾಲ್ಲೂಕು ಅಧ್ಯಕ್ಷ ಸದಾನಂದ, ಕಾರ್ಯದರ್ಶಿ ವಾಸು, ಬಾಬು, ಮಂಜುನಾಥ, ಶಶಿ, ಪ್ರದೀಪ್, ಎಸ್.ಎಫ್.ಐ ಮುಖಂಡರಾದ ಮುಜಾಯಿದ್ ಪಾಷ, ಗುರುಮೂರ್ತಿ, ಆರೀಫ್‌ಪಾಷ, ರಾಜು, ಮಂಜುಶ್ರೀ, ನಂದಿನಿ, ಲತಾ, ಅರ್ಚನಾ, ಸೌಜನ್ಯ ಮತ್ತಿತರರು ಈ ಸಂದರ್ಭದಲ್ಲಿ ಹಾಜರಿದ್ದರು.
ಸರ್ಕಾರಿ ಪದವಿ ಪೂರ್ವ ಕಾಲೇಜಿಗೆ ಸೂಕ್ತ ಭದ್ರತೆ ಹಾಗೂ ಮೂಲಭೂತ ಸೌಲಭ್ಯಗಳನ್ನು ಒದಗಿಸುವಂತೆ ಒತ್ತಾಯಿಸಿ ಪ್ರತಿಭಟನೆ
ಸರ್ಕಾರಿ ಪದವಿ ಪೂರ್ವ ಕಾಲೇಜಿಗೆ ಸೂಕ್ತ ಭದ್ರತೆ ಹಾಗೂ ಮೂಲಭೂತ ಸೌಲಭ್ಯಗಳನ್ನು ಒದಗಿಸುವಂತೆ ಒತ್ತಾಯಿಸಿ ಎಸ್.ಎಫ್.ಐ ಮತ್ತು ಡಿ.ವೈ.ಎಫ್.ಐ ನೇತೃತ್ವದಲ್ಲಿ ಕಾಲೇಜು ವಿದ್ಯಾರ್ಥಿಗಳು ಸೋಮವಾರ ಪ್ರತಿಭಟಿಸಿದರು.
ಸರ್ಕಾರಿ ಪದವಿ ಪೂರ್ವ ಕಾಲೇಜಿಗೆ ಗ್ರಾಮಾಂತರ ಪ್ರದೇಶಗಳಿಂದ ಸಾವಿರಾರು ವಿದ್ಯಾರ್ಥಿಗಳು ವಿದ್ಯಾಭ್ಯಾಸಕ್ಕಾಗಿ ಆಗಮಿಸುತ್ತಾರೆ. ಆದರೆ ಕಾಲೇಜಿನಲ್ಲಿ ಮೂಲಭೂತ ಸೌಲಭ್ಯಗಳೇ ಇಲ್ಲ. ಶೌಚಾಲಯ, ನೀರಿನ ವ್ಯವಸ್ಥೆ ಇಲ್ಲ. ಕಾಲೇಜಿಗೆ ಕಾಂಪೌಡ್ ಇಲ್ಲದಿರುವುದರಿಂದ ಪ್ರತಿ ದಿನ ಸಂಜೆ ಆರು ಗಂಟೆಯ ನಂತರ ಕಿಡಿಗೇಡಿಗಳು ಬಂದು ಅನೈತಿಕ ಚಟುವಟಿಕೆಗಳನ್ನು ನಡೆಸುತ್ತಾರೆ. ಕಾಲೇಜಿನ ಸಮಯದಲ್ಲಿ ಕೆಲ ಕಿಡಿಗೇಡಿಗಳು ಬೈಕುಗಳಲ್ಲಿ ಬಂದು ಜೋರಾಗಿ ಶಬ್ದ ಮಾಡುತ್ತಾ ವಿದ್ಯಾರ್ಥಿನಿಯರನ್ನು ಚುಡಾಯಿಸುತ್ತಾರೆ. ರಾತ್ರಿ ವೇಳೆ ಕಾಲೇಜಿನಲ್ಲಿ ಮದ್ಯಪಾನ, ಧೂಮಪಾನ, ಪಾನ್‌ಪರಾಗ್ ಮುಂತಾದವುಗಳನ್ನು ಬಳಸಿ ಗಲೀಜು ಮಾಡುತ್ತಾರೆ. ಬೆಳಿಗ್ಗೆ ಕಾಲೇಜಿಗೆ ಬಂದರೆ ಕೆಟ್ಟ ವಾಸನೆ ಗಲೀಜಿನ ದರ್ಶನವಾಗುತ್ತದೆ. ಇತ್ತೀಚೆಗಷ್ಟೇ ಕೆಲ ಕಿಡಿಗೇಡಿಗಳು ಮೆಟ್ಟಿಲಿನ ಗ್ರಿಲ್‌ಗಳನ್ನು ಕತ್ತರಿಸಿಹಾಕಿದ್ದರು. ಕಿಟಕಿ ಗಾಜುಗಳನ್ನು ಮುರಿದು, ಶೌಚಾಲಯದಲ್ಲಿ ಸಿಂಕುಗಳನ್ನು ಮುರಿದು, ಕಂಪ್ಯೂಟರ್ ಕೊಠಡಿ ಬಾಗಿಲನ್ನು ಸುಟ್ಟು ಹೋಗಿದ್ದಾರೆ. ಗೋಡೆ ಮೇಲೆ ಅಶ್ಲೀಲ ಬರಹಗಳನ್ನು ಬರೆದಿದ್ದಾರೆ. ಈ ಸಮಸ್ಯೆಗಳನ್ನು ಬಗೆಹರಿಸದಿದ್ದಲ್ಲಿ ವಿದ್ಯಾರ್ಥಿಗಳು ಉಗ್ರ ಹೋರಾಟ ಕೈಗೊಳ್ಳುವುದಾಗಿ ಎಚ್ಚರಿಸಿದರು.
ಕಳೆದ ವರ್ಷ ವಿದ್ಯಾರ್ಥಿಗಳು ಪ್ರತಿಭಟನೆ ನಡೆಸಿ ಕಾಲೇಜಿನ ಅಭಿವೃದ್ಧಿ ಸಮಿತಿ ಅಧ್ಯಕ್ಷರೂ ಆಗಿರುವ ಶಾಸಕ ಎಂ.ರಾಜಣ್ಣ ಅವರಿಗೆ ಮನವಿ ಪತ್ರ ಕೊಟ್ಟು ಕಾಂಪೌಡ್ ನಿರ್ಮಿಸಬೇಕು, ವಾಚ್‌ಮನ್ ನೇಮಕ ಮಾಡಬೇಕೆಂದು ಕೋರಿದ್ದೆವು. ಆದರೆ ಒಂದು ವರ್ಷ ಕಳೆದರೂ, ಕಾಲೇಜಿನ ಆಸ್ತಪಾಸ್ತಿ ನಷ್ಟವಾದರೂ ಯಾವುದೇ ಕ್ರಮ ಕೈಗೊಂಡಿಲ್ಲ ಎಂದು ದೂರಿದರು.
ಸ್ಥಳಕ್ಕೆ ಆಗಮಿಸಿದ ಶಾಸಕ ಎಂ.ರಾಜಣ್ಣ ಅವರಿಗೆ ವಿದ್ಯಾರ್ಥಿಗಳು ಸಮಸ್ಯೆಗಳನ್ನು ವಿವರಿಸಿ ಮನವಿ ಪತ್ರವನ್ನು ಸಲ್ಲಿಸಿದರು. ಈ ಸಂದರ್ಭದಲ್ಲಿ ಮಾತನಾಡಿದ ಶಾಸಕ ಎಂ.ರಾಜಣ್ಣ ನೀರಿನ ಸಮಸ್ಯೆಯನ್ನು ತಕ್ಷಣವೇ ಬಗೆಹರಿಸಲಾಗುವುದು. ಸಂಪ್ ಸರಿಪಡಿಸಿ ನೀರಿನ ವ್ಯವಸ್ಥೆಯನ್ನು ಮಾಡಲಾಗುವುದು. ಕ್ರೀಡಾಂಗಣದ ಅಭಿವೃದ್ಧಿಗಾಗಿ ಮೀಸಲಿರುವ ಒಂದೂಕಾಲು ಕೋಟಿ ಹಣದಲ್ಲೇ ಕಾಂಪೌಂಡ್ ನಿರ್ಮಿಸಲಾಗುತ್ತದೆ. ಅದನ್ನು ಮೊದಲು ನಿರ್ಮಿಸಲು ಸೂಚಿಸುತ್ತೇನೆ. ಪೊಲೀಸರಿಗೆ ಬೆಳಿಗ್ಗೆ ಮತ್ತು ಸಂಜೆ ಬೀಟ್ ನಡೆಸಲು ತಿಳಿಸುವುದಾಗಿ ಹೇಳಿದರು.
ಡಿ.ವೈ.ಎಫ್.ಐ ರಾಜ್ಯ ಸಮಿತಿ ಸದಸ್ಯ ಕುಂದಲಗುರ್ಕಿ ಮುನೀಂದ್ರ, ಎಸ್.ಎಫ್.ಐ ಮುಖಂಡರಾದ ಮುಜಾಯಿದ್ ಪಾಷ, ಗುರುಮೂರ್ತಿ, ಆರೀಫ್‌ಪಾಷ, ತನ್ವೀರ್‌ಪಾಷ, ವೆಂಕಟೇಶ, ಭವ್ಯ, ಮಂಜುಶ್ರೀ, ನಂದಿನಿ, ಮಮತಾ, ಲಲಿತಾ, ಪುರಸಭಾ ಸದಸ್ಯ ಅಫ್ಸರ್‌ಪಾಷ, ಜಮೀರ್ ಅಹ್ಮದ್, ರಹಮತ್ತುಲ್ಲ ಮತ್ತಿತರರು ಈ ಸಂದರ್ಭದಲ್ಲಿ ಹಾಜರಿದ್ದರು.
ಇದ್ಲೂಡು ಗ್ರಾಮದಲ್ಲಿ ಒಂಭತ್ತು ವರ್ಷಗಳ ನಂತರ ಊರಜಾತ್ರೆ
ಪಟ್ಟಣದ ಹೊರವಲಯದ ಇದ್ಲೂಡು ಗ್ರಾಮದಲ್ಲಿ ಒಂಭತ್ತು ವರ್ಷಗಳ ನಂತರ ಊರಜಾತ್ರೆಯನ್ನು ವಿಜೃಂಭಣೆಯಿಂದ ಆಚರಿಸಿದರು. ಸೋಮವಾರದಿಂದ ಗುರುವಾರದವರೆಗೂ ನಾಲ್ಕು ದಿನಗಳ ಕಾಲ ನಡೆಯುವ ಊರ ಜಾತ್ರಗೆ ಗ್ರಾಮದ ಚನ್ನಕೇಶವಸ್ವಾಮಿ ದೇವಾಲಯ ಸೇರಿದಂತೆ ಎಲ್ಲಾ ದೇವಾಲಯಗಳಲ್ಲೂ ವಿಶೇಷ ಅಲಂಕಾರವನ್ನು ಮಾಡಲಾಗಿತ್ತು. ಮಹಿಳೆಯರು ದೀಪಗಳನ್ನು ವೈವಿಧ್ಯಮಯವಾಗಿ ಅಲಂಕರಿಸಿಕೊಂಡು ತಲೆಯ ಮೇಲಿಟ್ಟುಕೊಂಡು ಮೆರವಣಿಗೆಯಲ್ಲಿ ಸಾಗಿ ವಿವಿಧ ದೇಗುಲಗಳಲ್ಲಿ ಪ್ರದಕ್ಷಿಣೆ ಹಾಕಿ ಪೂಜೆ ಸಲ್ಲಿಸಿದರು.
ಡೋಲು, ತಮಟೆ ಹಾಗೂ ನಾದಸ್ವರ ವಾದನಗಳು ಮೆರವಣಿಗೆಯಲ್ಲಿ ಸಾಗಿದವು. ಗಂಗಮ್ಮ, ಸಪ್ಲಮ್ಮ ಮುಂತಾದ ದೇವರುಗಳನ್ನೂ ಮೆರವಣಿಗೆ ಮಾಡಲಾಯಿತು.
‘ಗ್ರಾಮಕ್ಕೆ ಒಳ್ಳೆಯದಾಗಲಿ, ಮಳೆ ಬೆಳೆ ಚೆನ್ನಾಗಿ ಆಗಲೆಂದು ಊರ ಜಾತ್ರೆಯನ್ನು ಆಚರಿಸಲಾಗುತ್ತದೆ. ಈ ಸಂದರ್ಭದಲ್ಲಿ ಹೆಣ್ಣುಮಕ್ಕಳೆಲ್ಲಾ ತವರಿಗೆ ಬರುತ್ತಾರೆ. ಪೂಜೆಯಲ್ಲಿ ಪಾಲ್ಗೊಳ್ಳುತ್ತಾರೆ. ಒಂದೊಂದು ದಿನ ಒಂದೊಂದು ದೇವರಿಗೆ ವಿಶೇಷ ಪೂಜೆ ನಡೆಸಲಾಗುತ್ತದೆ. ಈಗ ಗ್ರಾಮವು ಪಟ್ಟಣಕ್ಕೆ ಸೇರಿಕೊಂಡಿರುವುದರಿಂದ ಊರಿಗೆ ಒಳ್ಳೆಯದಾಗಲೆಂಬ ಉದ್ದೇಶದಿಂದ ಒಂಭತ್ತು ವರ್ಷಗಳಿಂದ ನಿಲ್ಲಿಸಿದ್ದ ಊರಜಾತ್ರೆಯನ್ನು ಈ ಬಾರಿ ಮಾಡಿದೆವು’ ಎಂದು ಚನ್ನಕೇಶವಸ್ವಾಮಿ ಭಕ್ತ ಯುವಕ ಸಂಘದವರು ತಿಳಿಸಿದರು.
ತಾಲ್ಲೂಕು ಪಂಚಾಯಿತಿ ಅಧ್ಯಕ್ಷ ಉಪಾಧ್ಯಕ್ಷ ಚುನಾವಣೆ
ತಾಲ್ಲೂಕು ಪಂಚಾಯಿತಿ ಅಧ್ಯಕ್ಷರಾಗಿ ಆಂಜಿನಮ್ಮ ಮತ್ತು ಉಪಾಧ್ಯಕ್ಷರಾಗಿ ಡಿ.ಎಸ್.ಎನ್.ರಾಜು ಸೋಮವಾರ ಅವಿರೋಧವಾಗಿ ಆಯ್ಕೆಯಾದರು. ಅಧ್ಯಕ್ಷ ಸ್ಥಾನಕ್ಕೆ ಸಾಮಾನ್ಯ ಮಹಿಳೆ ಹಾಗೂ ಉಪಾಧ್ಯಕ್ಷ ಸ್ಥಾನಕ್ಕೆ ಸಾಮಾನ್ಯ ಎಂಬ ಮೀಸಲಾತಿ ನಿಗದಿಪಡಿಸಲಾಗಿತ್ತು. ಒಟ್ಟು 16 ತಾಲ್ಲೂಕು ಪಂಚಾಯಿತಿ ಸದಸ್ಯರಿದ್ದು, ಹನ್ನೊಂದು ಮಂದಿ ಕಾಂಗ್ರೆಸ್ ಮತ್ತು ಐವರು ಜೆಡಿಎಸ್ ಸದಸ್ಯರಿರುವುದರಿಂದ ಅಧ್ಯಕ್ಷ ಹಾಗೂ ಉಪಾಧ್ಯಕ್ಷ ಸ್ಥಾನ ಕಾಂಗ್ರೆಸ್ ಪಾಲಾಗುವುದು ಖಚಿತವಾಗಿದ್ದರೂ ಆಕಾಂಕ್ಷಿಗಳು ಹಲವರು ಇದ್ದುದರಿಂದ ಯಾರಾಗುವರೆಂಬ ಕಾತರ ಮೂಡಿತ್ತು. ಕೆ.ಪಿ.ಸಿ.ಸಿ ಉಪಾಧ್ಯಕ್ಷ ವಿ.ಮುನಿಯಪ್ಪ ಯಾರನ್ನು ಬೆಂಬಲಿಸುವರೋ ಎಂಬ ಕುತೂಹಲ ಕೂಡ ಇತ್ತು.
ಈ ಹಿಂದೆ ತಾಲ್ಲೂಕು ಪಂಚಾಯಿತಿ ಅಧ್ಯಕ್ಷೆ ಹಾಗೂ ಉಪಾಧ್ಯಕ್ಷೆ ಆಗಿದ್ದ ಸರಸ್ವತಮ್ಮ ತಮ್ಮಣ್ಣ ಅವರ ಹೆಸರು ಹೆಚ್ಚಾಗಿ ಕೇಳಿಬಂದರೂ, ಕೊನೆಯ ಕ್ಷಣದಲ್ಲಿ ಕೆ.ಪಿ.ಸಿ.ಸಿ ಉಪಾಧ್ಯಕ್ಷ ವಿ.ಮುನಿಯಪ್ಪ ಅವರ ತೀರ್ಮಾನದಿಂದಾಗಿ ಬಸವಾಪಟ್ಟಣದ ಆಂಜಿನಮ್ಮ ಅವರಿಗೆ ಅಧ್ಯಕ್ಷ ಸ್ಥಾನ ಒಲಿಯಿತು. ಕಾಂಗ್ರೆಸ್ ಪಕ್ಷದ ಹಿರಿಯ ರಾಜಕಾರಣಿ ಮತ್ತು ದಿಬ್ಬೂರಹಳ್ಳಿ ಕ್ಷೇತ್ರದ ಪ್ರಭಾವಿ ವ್ಯಕ್ತಿಯಾಗಿರುವ ಡಿ.ಎಸ್.ಎನ್.ರಾಜು ಅವರು ಅವಿರೋಧವಾಗಿ ಆಯ್ಕೆಯಾದರು.
ಈ ಸಂದರ್ಭದಲ್ಲಿ ಕಾಂಗ್ರೆಸ್ ಕಾರ್ಯಕರ್ತರು ತಾಲ್ಲೂಕು ಪಂಚಾಯಿತಿ ಹಾಗೂ ಕಾಂಗ್ರೆಸ್ ಭವನದ ಮುಂದೆ ಪಟಾಕಿ ಸಿಡಿಸಿ, ಸಿಹಿ ಹಂಚಿ ಸಂಭ್ರಮಾಚರಣೆ ನಡೆಸಿದರು. ಕಾಂಗ್ರೆಸ್ ಭವನದಲ್ಲಿ ಕೆ.ಪಿ.ಸಿ.ಸಿ ಉಪಾಧ್ಯಕ್ಷ ವಿ.ಮುನಿಯಪ್ಪ ಸುದ್ಧಿಗಾರರೊಂದಿಗೆ ಮಾತನಾಡಿ, ‘ತಾಲ್ಲೂಕು ಪಂಚಾಯಿತಿ ಸದಸ್ಯರ ಒಗ್ಗಟ್ಟಿನಿಂದಾಗಿಯೇ ಇಂದು ಅವಿರೋಧ ಆಯ್ಕೆ ನಡೆದಿದೆ. ಅವರಿಗೆ ಕಾಂಗ್ರೆಸ್ ಪಕ್ಷದ ವತಿಯಿಂದ ಅಭಿನಂದನೆಗಳು. ಅವರು ಒಗ್ಗಟ್ಟಾಗಿ ತಾಲ್ಲೂಕಿನ ಅಭಿವೃದ್ಧಿಗೆ ಶ್ರಮಿಸಬೇಕು’ ಎಂದು ಹೇಳಿದರು.
ಚುನಾವಣಾ ಪ್ರಕ್ರಿಯೆಯಲ್ಲಿ ಉಪವಿಭಾಗಾಧಿಕಾರಿ ಕೆ.ಟಿ.ಶಾಂತಲಾ, ತಹಶೀಲ್ದಾರ್ ಜಿ.ಎ.ನಾರಾಯಣಸ್ವಾಮಿ, ತಾಲ್ಲೂಕು ಪಂಚಾಯಿತಿ ಕಾರ್ಯನಿರ್ವಾಹಣಾಧಿಕಾರಿ ಉಮೇಶ್, ಚುನಾವಣಾ ಸಹಾಯಕ ರಾಥೋಡ್, ನಾಗರಾಜ್ ಮತ್ತಿತರರು ಹಾಜರಿದ್ದರು.

