‘ನನ್ನ ಹೆಸರು ತಿಳಿದುಕೊಂಡು ಏನು ಮಾಡುತ್ತೀರಿ ಸಾಬ್? ನನ್ನ ಹೆಸರು ಸಂಪತಿ, ಆದರೆ ಹೆಸರಲ್ಲಿರುವ ಸಂಪತ್ತು ಬದುಕಲ್ಲಿ ಇಲ್ಲವಾಗಿದೆ’ ಎಂದು ಒಂದೇ ಮಾತಿನಲ್ಲಿ ತನ್ನ ಜೀವನದ ವ್ಯಂಗ್ಯವನ್ನು ಮಾರ್ಮಿಕವಾಗಿ ತಿಳಿಸಿಬಿಟ್ಟರು.
ರಾಜಾಸ್ಥಾನದಿಂದ ವಲಸೆ ಹಕ್ಕಿಗಳಂತೆ ಬಂದಿರುವ ಕೆಲ ಜನರು ತಾಲ್ಲೂಕಿನಲ್ಲಿ ಜಾತ್ರೆ, ಸಂತೆ, ಧಾರ್ಮಿಕ ಆಚರಣೆ ಮುಂತಾದವು ನಡೆವಾಗ ರಸ್ತೆ ಬದಿಯಲ್ಲಿ ಬಟ್ಟೆ ಹಾಸಿ ಮಣಿಗಳನ್ನು ಸುರಿದುಕೊಂಡು ಕುಳಿತುಬಿಡುತ್ತಾರೆ. ಇಂಗ್ಲೀಷ್ ಅಕ್ಷರಗಳು, ಚಿಟ್ಟೆ, ಆನೆ, ಹಕ್ಕಿ ಮುಂತಾದ ಆಕಾರಗಳು ಚಾಕಾಕಾರದ ಪ್ಲಾಸ್ಟಿಕ್ ಮಣಿಗಳಂತೆ ಇರುವ ಇವುಗಳನ್ನು ಪ್ಲಾಸ್ಟಿಕ್ ದಾರದಲ್ಲಿ ಚಂದವಾಗಿ ಜೋಡಿಸಿ ಬೇಕಾದ ಹೆಸರನ್ನು ಮಾಡಿಕೊಡುತ್ತಾರೆ. ಹೆಚ್ಚಾಗಿ ಮಕ್ಕಳು ಮುಂಗೈಗೆ ತಮ್ಮ ಹೆಸರಿರುವ ಮಣಿಗಳನ್ನು ಹಾಕಿಸಿಕೊಂಡರೆ, ಕೀ ಚೈನ್‌ಗೂ ಕೆಲವರು ಹಾಕಿಸಿಕೊಳ್ಳುತ್ತಾರೆ.
ಸರಿಯಾಗಿ ಬಟ್ಟೆಗಳೂ ಹಾಕಿಕೊಳ್ಳದ ತಮ್ಮ ಪುಟಾಣಿ ಮಕ್ಕಳನ್ನು ಸಂಭಾಳಿಸುತ್ತಾ, ಇತ್ತ ತಮ್ಮ ಗ್ರಾಹಕರಾಗಿ ಬಂದ ಮಕ್ಕಳಿಗೂ ಅವರಿಗಿಷ್ಟವಾದ ಹೆಸರನ್ನು ಹಾಕಿಕೊಡುತ್ತಾ ಹಣ ಸಂಪಾದಿಸುತ್ತಾರೆ. ಓದಲು ಬರೆಯಲು ಬರದಿದ್ದರೂ ಬರೆದು ಕೊಟ್ಟ ಅಕ್ಷರಗಳನ್ನು ಚಿಹ್ನೆಗಳೆಂದು ಭಾವಿಸಿ ತಮ್ಮ ಮುಂದಿನ ರಾಶಿಯಲ್ಲಿ ಚಕಚಕನೆ ಹೆಕ್ಕಿ ಪುಟ್ಟ ಮರದ ಮಣೆಗೆ ಹೆಣಿಗೆ ಹಾಕಿ ಮುಂಗೈ ಮಣಿಕಟ್ಟಿಗೆ ಸರಿಹೊಂದುವಂತೆ ಬ್ಯಾಂಡನ್ನು ರೂಪಿಸುವ ಅವರ ಕಲೆ ಮೆಚ್ಚುವಂಥದ್ದು. ಭಾಷೆ ಬರದಿದ್ದರೂ ತಾಲ್ಲೂಕಿನಲ್ಲಿ ಎಲ್ಲೆಲ್ಲಿ ಜಾತ್ರೆ, ಸಂತೆ, ಧಾರ್ಮಿಕ ಕಾರ್ಯಗಳು ನಡೆಯುತ್ತವೆಂಬ ಮಾಹಿತಿ ತಿಳಿದುಕೊಳ್ಳುವ ಅವರ ಜಾಣ್ಮೆ ತಲೆದೂಗುವಂಥದ್ದು. ಹೋದೆಡೆ ಪುಟ್ಟ ಡೇರಾ ಹಾಕಿಕೊಂಡು ತಮ್ಮ ಆಹಾರ ತಯಾರಿಸಿಕೊಂಡು ಸಾಂಘಿಕವಾಗಿ ಕಷ್ಟ ಸುಖ ಹಂಚಿಕೊಂಡು ಬದುಕುವ ಅವರ ಗುಣ ಅನುಕರಣೀಯ.
‘ನಾವು ರಾಜಾಸ್ಥಾನದಿಂದ ಹಲವಾರು ಮಂದಿ ಬಂದಿದ್ದೇವೆ. ಬದುಕಲು ಸಣ್ಣಪುಟ್ಟ ಕೆಲಸಗಳನ್ನು ಮಾಡುತ್ತಾ ಬೇರೆ ಬೇರೆ ಕಡೆ ಹರಡಿಕೊಂಡಿದ್ದೇವೆ. ದೆಹಲಿಯಿಂದ ಪ್ಲಾಸ್ಟಿಕ್ ಮಣಿಗಳನ್ನು ತರಿಸಿಕೊಂಡು ಕೀಚೈನ್, ಮಣಿಕಟ್ಟಿಗೆ ಕಟ್ಟುವ ಬ್ಯಾಂಡ್ ತಯಾರಿಸುತ್ತೇವೆ. ನಮ್ಮ ಅಲೆಮಾರಿತನದ ಬದುಕಿನಿಂದ ಜೀವನ ಮಾಡಲು ಸಾಧ್ಯವಾಗಿದೆ ಅಷ್ಟೆ. ಮಕ್ಕಳಿಗೆ ವಿದ್ಯಾಭ್ಯಾಸ ಮಾಡಿಸಲು ಕಷ್ಟ. ನಮ್ಮ ಊರಿಗೆ ಹೋದಾಗ ಅಲ್ಲಿ ಶಾಲೆಗೆ ಸೇರಿಸಬೇಕಷ್ಟೆ. ಇಲ್ಲಿನ ಆಹಾರ ನಮ್ಮ ದೇಹಕ್ಕೆ ಸರಿಹೋಗದು. ಹಾಗಾಗಿ ನಮ್ಮ ಆಹಾರವನ್ನು ನಾವೇ ತಯಾರಿಸಿಕೊಳ್ಳುತ್ತೇವೆ’ ಎಂದು ತಮ್ಮ ಅಲೆಮಾರಿ ಬದುಕಿನ ಕಷ್ಟವನ್ನು ಸಂಪತಿ ವಿವರಿಸಿದರು.
ವಲಸೆ ಮಹಿಳೆಯ ಹೋರಾಟದ ಬದುಕು
ಶಿಕ್ಷಕರ ಬೀಳ್ಕೊಡುಗೆ ಕಾರ್ಯಕ್ರಮ
ತಾಲ್ಲೂಕಿನ ಕನ್ನಮಂಗಲದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ೧೭ ವರ್ಷ ಕಾರ್ಯ ನಿರ್ವಹಿಸಿದ ಶಿಕ್ಷಕ ಎಚ್.ಬಿ. ಮಂಜುನಾಥ್, ೬ ವರ್ಷ ಕಾರ್ಯ ನಿರ್ವಹಿಸಿದ ವಿದ್ಯಾಲಕ್ಷ್ಮಿ ಹಾಗೂ ಅಂಗನವಾಡಿ ಸಹಾಯಕಿಯಾಗಿ ೨೨ ವರ್ಷ ಕಾರ್ಯ ನಿರ್ವಹಿಸಿದ ಆಂಜನಮ್ಮ ಅವರಿಗೆ ಶನಿವಾರ ಬೀಳ್ಕೊಡುಗೆ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿತ್ತು. ಶಾಲೆಯ ವತಿಯಿಂದ ಅವರನ್ನು ಸನ್ಮಾನಿಸಲಾಯಿತು. ಮಕ್ಕಳು ಶಿಕ್ಷಕರ ಕುರಿತು ಬರೆದ ಲೇಖನಗಳ ಸಂಕಲನವನ್ನು ಶಿಕ್ಷಕರಿಗೆ ನೀಡಿದರು. ಶಿಕ್ಷಕರಿಗೆ ನೆನಪಿನ ಕಾಣಿಕೆಯಾಗಿ ಗಿಡವೊಂದನ್ನು ನೀಡಿದರು.
ಮುಖ್ಯ ಶಿಕ್ಷಕ ಎಚ್. ಮುನಿಯಪ್ಪ, ಸಹಶಿಕ್ಷಕರಾದ ಎಂ.ದೇವರಾಜ್, ಎಚ್.ಬಿ. ಮಂಜುನಾಥ್, ಕೆ.ಶಿವಶಂಕರ್, ಜೆ. ಶ್ರೀನಿವಾಸ್, ಎಸ್. ಕಲಾಧರ, ಟಿ.ಜೆ.ಸುನೀತ, ವಿದ್ಯಾಲಕ್ಷ್ಮಿ, ಕೆ. ಛಾಯಾದೇವಿ, ಎನ್.ಪದ್ಮಾವತಿ, ಎಸ್.ಡಿ.ಎಂ.ಸಿ. ಉಪಾಧ್ಯಕ್ಷ ನಾಗರಾಜ್, ಸ್ನೇಹ ಯುವಕರ ಸಂಘದ ವಸಂತಕುಮಾರ್, ವಾಸುದೇವ್ ಸಿ.ಮುನಿರಾಜ್ ಮುಂತಾದವರು ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು.
ತಾಲ್ಲೂಕಿನ ದೇವರಮಳ್ಳೂರು ಚನ್ನಕೃಷ್ನ ಅವರಿಗೆ ಕಾವ್ಯಧರಾಯಿ ಪ್ರಶಸ್ತಿ
ಶಿಡ್ಲಘಟ್ಟ ತಾಲ್ಲೂಕಿನ ದೇವರಮಳ್ಳೂರು ಚನ್ನಕೃಷ್ನ ಅವರಿಗೆ ಬೆಂಗಳೂರಿನ ಸಮಾನ ಮನಸ್ಕರ ಕಲೆ, ಸಾಹಿತ್ಯ, ಸಂಗೀತ, ಕ್ರೀಡೆ ಮತ್ತು ಸಮಾಜ ಸ್ಪಂದನ ಸೇವಾ ಒಕ್ಕೂಟದ ವತಿಯಿಂದ ಸುವರ್ಣ ನಾಡೋತ್ಸವದ ಅಂಗವಾಗಿ ಆಯೋಜಿಸಿದ್ದ ಕವಿಗೋಷ್ಠಿಯಲ್ಲಿ ಕಾವ್ಯಧರಾಯಿ ಪ್ರಶಸ್ತಿಯನ್ನು ನೀಡಿ ಗೌರವಿಸಲಾಯಿತು. ಅರಳುಮಲ್ಲಿಗೆ ಪಾರ್ಥಸಾರಥಿ, ಕೋಡಿಪಾ:್ಯ ಕೃಷ್ಣಪ್ಪ, ಕೃಷ್ಣಾ, ಡಾ.ಆಂಜಿನಪ್ಪ ಹಾಜರಿದ್ದರು.
ಮೇಲೂರಿನ ಗಂಗಾದೇವಿ ದ್ರಾಕ್ಷಿ ಬೆಳೆಗಾರರ ರೈತ ಕೂಟಕ್ಕೆ ಅತ್ಯುತ್ತಮ ರೈತ ಕೂಟ ಪ್ರಶಸ್ತಿ
ಶಿಡ್ಲಘಟ್ಟ ತಾಲ್ಲೂಕಿನ ಮೇಲೂರಿನ ಗಂಗಾದೇವಿ ದ್ರಾಕ್ಷಿ ಬೆಳೆಗಾರರ ರೈತ ಕೂಟಕ್ಕೆ ಅತ್ಯುತ್ತಮ ರೈತ ಕೂಟ ಪ್ರಶಸ್ತಿಯನ್ನು ಬೆಂಗಳೂರಿನ ಬೆಲ್ ಹೋಟೆಲ್‌ನಲ್ಲಿ ನಡೆದ ಕಾರ್ಯಕ್ರಮದಲ್ಲಿ ನಬಾರ್ಡ್ ಬ್ಯಾಂಕಿನ ಮುಖ್ಯ ಮಹಾಪ್ರಬಂಧಕ ಜಿ.ಆರ್.ಚಿಂತಾಲ, ಕೆನರಾ ಬ್ಯಾಂಕಿನ ಉಪಮಹಾ ಪ್ರಬಂಧಕ ಎಂ.ಎಂ.ಚಿನ್ನಿವಾರ್, ಸಿಂಡಿಕೇಟ್ ಬ್ಯಾಂಕಿನ ಸುಧೀರ್ ಕುಮಾರ್ ನೀಡಿದರು. ಗಂಗಾದೇವಿ ದ್ರಾಕ್ಷಿ ಬೆಳೆಗಾರರ ರೈತ ಕೂಟದ ಕಾರ್ಯದರ್ಶಿ ಸಿ.ಎಸ್.ನಾಗೇಂದ್ರ ಪ್ರಸಾದ್, ರೈತಕೂಟಗಳ ಒಕ್ಕೂಟದ ಅಧ್ಯಕ್ಷ ಎಚ್.ಜಿ.ಗೋಪಾಲಗೌಡ ಪ್ರಶಸ್ತಿಯನ್ನು ಸ್ವೀಕರಿಸಿದರು.
ಎಚ್.ಕ್ರಾಸ್‌ನಲ್ಲಿ ನೂತನ ನಂದಿನಿ ಹಾಲಿನ ಮಳಿಗೆ ಉದ್ಘಾಟನೆ
ಶಿಡ್ಲಘಟ್ಟ ತಾಲ್ಲೂಕಿನ ಎಚ್.ಕ್ರಾಸ್‌ನಲ್ಲಿ ಶನಿವಾರ ಶಾಸಕ ಎಂ.ರಾಜಣ್ಣ ನೂತನ ನಂದಿನಿ ಹಾಲಿನ ಮಳಿಗೆಯನ್ನು ಉದ್ಘಾಟಿಸಿದರು. ಕೋಚಿಮುಲ್ ನಿರ್ದೇಶಕ ಬಂಕ್ ಮುನಿಯಪ್ಪ, ಮಾರುಕಟ್ಟೆ ಮೇಲ್ವಿಚಾರಕರು ವಿಜಯ್‌ಕುಮಾರ್, ಸಹಾಯಕ ವ್ಯವಸ್ಥಾಪಕರು ಸೋಮಶೇಖರ್ ಹಾಜರಿದ್ದರು.
ಆರ್ಯ ವೈಶ್ಯ ಮಹಿಳಾ ಮಂಡಳಿ ವತಿಯಿಂದ ಗುರುಪೂರ್ಣಿಮಾ ಪೂಜೆ
ಪಟ್ಟಣದ ಆರ್ಯ ವೈಶ್ಯ ಮಹಿಳಾ ಮಂಡಳಿ ವತಿಯಿಂದ ಶನಿವಾರ ಗುರುಪೂರ್ಣಿಮಾ ಪೂಜಾ ಕಾರ್ಯಕ್ರಮವನ್ನು 51 ಸಾಯಿಬಾಬಾ ಮೂರ್ತಿಗಳ ಪ್ರತಿಷ್ಠಾಪನೆಯೊಂದಿಗೆ ವಿಶಿಷ್ಠವಾಗಿ ಆಚರಿಸಲಾಯಿತು.
ವಾಸವಿ ರಸ್ತೆಯ ಕಾಶೀನಾಥ್ ಅವರ ಮನೆಯಲ್ಲಿ ಗುರುಪೂರ್ಣಿಮಾ ಪೂಜೆಯನ್ನು ಆಯೋಜಿಸಿದ್ದು, ಬೆಳಿಗ್ಗೆ ಕಾಕಡಾರತಿ, ಮಧ್ಯಾಹ್ನದಾರತಿ, ಸಾಯಂಕಾಲದ ಧೂಪಾರತಿ ಹಾಗೂ ಶೇಜಾರತಿಯನ್ನು ನಡೆಸಲಾಗುತ್ತಿದೆ. ಮಹಿಳೆಯರು ಸಾಯಿಬಾಬಾ ವಚನಾಮೃತದ ಗೀತೆಗಳನ್ನು, ಬಾಬಾ ಸ್ತುತಿ ಪದ್ಯಗಳನ್ನು ಹಾಡಿದರು.
‘ಆಷಾಡಮಾಸದ ಹುಣ್ಣಿಮೆಯಂದು ಪ್ರತಿ ವರ್ಷ ಗುರುಪೂರ್ಣಿಮೆಯನ್ನು ಆಚರಿಸುತ್ತಾ ಬರುತ್ತಿದ್ದೇವೆ. ಕಳೆದ ಐದು ವರ್ಷಗಳಿಂದ ಮಹಿಳಾ ಮಂಡಳಿಯ ಸದಸ್ಯೆಯರು ಒಂದೊಂದು ವರ್ಷ ಒಬ್ಬೊಬ್ಬರ ಮನೆಯಲ್ಲಿ ಪೂಜೆಯನ್ನು ಆಯೋಜಿಸುತ್ತಿದ್ದೇವೆ. ಎಲ್ಲರಿಗೂ ಆ ಸದ್ಗುರು ಒಳ್ಳೆಯದನ್ನು ಮಾಡಲಿ ಎಂಬ ಉದ್ದೇಶದಿಂದ ಆಚರಿಸುವ ಈ ಪೂಜೆಗೆ ಎಲ್ಲರೂ ತಮ್ಮ ಮನೆಗಳಿಂದ ವಿವಿಧ ಪ್ರಸಾದಗಳನ್ನು ತಂದು ನೈವೇದ್ಯ ಮಾಡಿ ಹಂಚುತ್ತೇವೆ. ಜ್ಞಾನ, ಭಕ್ತಿ ಹಾಗೂ ಆರೋಗ್ಯವನ್ನು ಕರುಣಿಸಿದ ಶಿರಡಿ ಸಾಯಿಬಾಬಾ ಅವರ 51 ಮೂರ್ತಿಗಳನ್ನಿಟ್ಟು ಪೂಜೆ ಸಲ್ಲಿಸುತ್ತಿದ್ದೇವೆ’ ಎಂದು ಆರ್ಯ ವೈಶ್ಯ ಮಹಿಳಾ ಮಂಡಳಿ ಅಧ್ಯಕ್ಷೆ ಗಜಲಕ್ಷ್ಮಿ ತಿಳಿಸಿದರು.
ಆರ್ಯ ವೈಶ್ಯ ಮಹಿಳಾ ಮಂಡಳಿಯ ಸತ್ಯಲಕ್ಷ್ಮಿ, ರೂಪಾ, ಜಯಶ್ರೀ, ಸರಳಾ, ಪ್ರತಿಮಾ ಮತ್ತಿತರರು ಹಾಜರಿದ್ದರು.
ಸಾಯಿನಾಥ ಜ್ಞಾನಮಂದಿರದಲ್ಲಿ ಗುರುಪೂರ್ಣಿಮಾ ಕಾರ್ಯಕ್ರಮ
ತಾಲ್ಲೂಕಿನ ಮಳ್ಳೂರು ಗ್ರಾಮದ ಹೊರವಲಯದ ಸಾಯಿನಾಥ ಜ್ಞಾನಮಂದಿರದಲ್ಲಿ ಶನಿವಾರ ಗುರುಪೂರ್ಣಿಮಾ ಕಾರ್ಯಕ್ರಮವನ್ನು ಆಯೋಜಿಸಲಾಗಿತ್ತು.
ಗುರುಪೂರ್ಣಿಮಾ ಪ್ರಯುಕ್ತ ಮೂರು ದಿನಗಳಿಂದ ರಾಮಕೋಟಿ ಅಖಂಡ ಭಜನೆಯನ್ನು ಏರ್ಪಡಿಸಲಾಗಿತ್ತು. ಮಳ್ಳೂರು, ಸೊಣ್ಣೇನಹಳ್ಳಿ, ಅಪ್ಪೇಗೌಡನಹಳ್ಳಿ, ಸೀಗೆಹಳ್ಳಿ, ಮೇಲೂರು, ಕೊಮ್ಮಸಂದ್ರ, ಹಿತ್ತಲಹಳ್ಳಿ, ಬೆಳ್ಳೂಟಿ, ಆನೂರು, ಬೋದಗೂರು, ಮುತ್ತೂರು, ಕಾಕಚೊಕ್ಕಂಡಹಳ್ಳಿ, ವೀರಾಪುರ, ಹೊಸಹುಡ್ಯ, ಗಂಗನಹಳ್ಳಿ, ಗಿಡ್ನಹಳ್ಳಿ ಸೇರಿದಂತೆ 35 ಗ್ರಾಮದ ಭಕ್ತರಿಂದ ಸರದಿಯಂತೆ ಹಗಲೂ ರಾತ್ರಿ ರಾಮಕೋಟಿ ಭಜನೆ ನಡೆಯಿತು. ಹತ್ತು ದಿನಗಳ ಕಾಲ ದಿನಕ್ಕೊಂದು ಗ್ರಾಮದಲ್ಲಿ ಭಜನೆ ಕಾರ್ಯಕ್ರಮವನ್ನು ನಡೆಸಲಾಗಿತ್ತು.
ಶನಿವಾರ ಗುರುಪೂರ್ಣಿಮಾ ಅಂಗವಾಗಿ ಕಾಕಡಾರತಿ, ಪಂಚಾಮೃತಾಭಿಷೇಕ, ಸತ್ಯನಾರಾಯಣಸ್ವಾಮಿ ಪೂಜೆ, ಸಾಯಿ ಹೋಮ, ದತ್ತಾತ್ರೇಯ ಹೋಮ, ಶ್ರೀರಾಮ ತಾರಕ ಹೋಮ, ಮಹಾಮಂಗಳಾರತಿ, ಮಹಾಪ್ರಸಾದ ವಿನಿಯೋಗ ನಡೆಸಲಾಯಿತು. ಸಾವಿರಾರು ಸಂಖ್ಯೆಯಲ್ಲಿ ತಾಲ್ಲೂಕು ಹಾಗೂ ಸುತ್ತಮುತ್ತಲಿನ ತಾಲ್ಲೂಕುಗಳಿಂದ ಭಕ್ತರು ಆಗಮಿಸಿ ಪೂಜೆಯಲ್ಲಿ ಪಾಲ್ಗೊಂಡರು.
ತಾಲ್ಲೂಕಿನ ಮೂವ್ವತ್ತೈದು ಶಾಲೆ ಹಾಗೂ ಕಾಲೇಜುಗಳ ಪ್ರತಿಭಾವಂತ ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರವನ್ನು ರಾಮಕೃಷ್ಣ ವಿವೇಕಾನಂದ ಮಠದ ಪೂರ್ಣಾನಂದ ಸ್ವಾಮಿಗಳು ಮಾಡಿದರು. ವಿವಿಧ ಶಾಲೆಗಳ ಮಕ್ಕಳಿಗೆ ನೋಟ್ ಪುಸ್ತಕಗಳನ್ನು ಈ ಸಂದರ್ಭದಲ್ಲಿ ವಿತರಿಸಲಾಯಿತು. ಭಜನೆ ನಡೆಸಿದ ಗ್ರಾಮಸ್ಥರಿಗೆ ಪ್ರಶಸ್ತಿ ಪತ್ರಗಳನ್ನು ನೀಡಿದರು. ತಾಲ್ಲೂಕಿನ ಹಿರಿಯ ಕಲಾವಿದರಾದ ಪಿಟೀಲು ವಿದ್ವಾನ್ ಹೊಸಪೇಟೆ ನಾರಾಯಣಾಚಾರ್, ಮೃದಂಗ ವಿದ್ವಾನ್ ವೆಂಕಟರಮಣಪ್ಪ ಅವರನ್ನು ಸನ್ಮಾನಿಸಲಾಯಿತು.
‘ಸಾಯಿನಾಥ ಜ್ಞಾನ ಮಂದಿರದಲ್ಲಿ ಹಲವಾರು ವರ್ಷಗಳಿಂದ ಗುರುಪೂರ್ಣಿಮಾ ಪೂಜಾ ಕಾರ್ಯಕ್ರಮವನ್ನು ಶ್ರದ್ಧಾ ಭಕ್ತಿಯಿಂದ ಆಚರಿಸುತ್ತಿದ್ದೇವೆ. ತಾಲ್ಲೂಕಿನ ಪ್ರತಿಭಾವಂತ ಮಕ್ಕಳನ್ನು ಈ ಸಂದರ್ಭದಲ್ಲಿ ಗೌರವಿಸಿ ಪ್ರೋತ್ಸಾಹಿಸಲಾಗುತ್ತಿದೆ. ಈ ವಿಶಿಷ್ಠ ದಿನ ಹೋಮ ಹವನಗಳನ್ನು ನಡೆಸಿ ವಿಶೇಷ ಪೂಜೆ ನಡೆಸುವುದರಿಂದ ಹೆಚ್ಚೆಚ್ಚು ಭಕ್ತರು ಆಗಮಿಸುತ್ತಾರೆ. ಎಲ್ಲರಿಗೂ ಪ್ರಸಾದವನ್ನು ವಿನಿಯೋಗಿಸುತ್ತಿದ್ದೇವೆ’ ಎಂದು ದೇವಾಲಯದ ಸಂಚಾಲಕ ನಾರಾಯಣಸ್ವಾಮಿ ತಿಳಿಸಿದರು.
ಸಾಯಿನಾಥ ಜ್ಞಾನ ಮಂದಿರದ ಸಂಸ್ಥಾಪಕ ಎಂ ವೆಂಕಟೇಶ್, ನೈರುತ್ಯ ರೇಲ್ವೆ ವಿಭಾಗೀಯ ಕಾರ್ಮಿಕ ಅಧಿಕಾರಿ ಟಿ.ಶಿವಣ್ಣ, ಡಿ.ಸಿ.ಪಿ ಕಚೇರಿಯ ಸಂಚಾರಿ ವಿಭಾಗದ ಮುಖ್ಯಸ್ಥೆ ಆರ್.ಮಂಜುಳ, ಮಳ್ಳೂರು ಗ್ರಾಮ ಪಂಚಾಯಿತಿ ಮಾಜಿ ಅಧ್ಯಕ್ಷ ರಾಮರೆಡ್ಡಿ, ಹಿರಿಯ ಜಾನಪದ ಕಲಾವಿದ ಎಂ.ಆರ್.ಲಕ್ಷೀಪತಿ, ಗೋವಿಂದಪ್ಪ, ಮುಂತಾದವರು ಈ ಸಂದರ್ಭದಲ್ಲಿ ಹಾಜರಿದ್ದರು.
ವಿಶ್ವ ಜನಸಂಖ್ಯಾ ದಿನಾಚರಣೆಯ ಅಂಗವಾಗಿ ಶಾಲಾ ವಿದ್ಯಾರ್ಥಿಗಳಿಂದ ಜನಸಂಖ್ಯಾ ಜಾಗೃತಿ ಜಾಥಾ
ಪಟ್ಟಣದ ಸಾರ್ವಜನಿಕ ಸರ್ಕಾರಿ ಆಸ್ಪತ್ರೆ ಆವರಣದಲ್ಲಿ ಶುಕ್ರವಾರ ವಿಶ್ವ ಜನಸಂಖ್ಯಾ ದಿನಾಚರಣೆಯನ್ನು ‘ಯೋಜಿತ ಪರಿವಾರ –ಸುಖ ಸಂತೋಷ ಅಪಾರ’ ಎಂಬ ಘೋಷಣೆಯೊಂದಿಗೆ ಆಚರಿಸಲಾಯಿತು. ಪಟ್ಟಣದ ಪ್ರಮುಖ ಬೀದಿಗಳಲ್ಲಿ ಶಾಲಾ ವಿದ್ಯಾರ್ಥಿಗಳು ಜನಸಂಖ್ಯಾ ಜಾಗೃತಿ ಜಾಥಾ ನಡೆಸಿದರು.
‘ಜನಸಂಖ್ಯೆಯ ಹೆಚ್ಚಳದಿಂದ ಸರ್ಕಾರ ರೂಪಿಸುವ ವಿವಿಧ ಯೋಜನೆಗಳು ಎಲ್ಲರನ್ನೂ ತಲುಪಲಾಗುತ್ತಿಲ್ಲ. ಭೂಮಿಯು ಇರುವಷ್ಟೇ ಇರುತ್ತದೆ. ವಿಸ್ತರಿಸಲಾಗದು. ಆದರೆ ಹೆಚ್ಚುವ ಜನಸಂಖ್ಯೆಯ ಭಾರ ಹಾಗೂ ಒತ್ತಡ ಭೂಮಿಯ ಮೇಲೆ ಬೀಳುವುದರಿಂದ ಆಹಾರದ ಕೊರತೆ ಉಂಟಾಗುತ್ತದೆ. ವೈದ್ಯಕೀಯ ತಂತ್ರಜ್ಞಾನ ಸಾಕಷ್ಟು ಅಭಿವೃದ್ಧಿ ಆಗಿರುವುದರಿಂದ ಮಕ್ಕಳಾಗದಂತೆ ಶಸ್ತ್ರಚಿಕಿತ್ಸೆಯನ್ನು ಸುಲಭವಾಗಿ ಮಾಡಿಸಿಕೊಳ್ಳಬಹುದಾಗಿದೆ. ಕೆಲವು ಮಹಿಳೆಯರು ಮನೆಯಲ್ಲೂ ಹಾಗೂ ಹೊರಗೂ ದುಡಿಯುವುದಿದ್ದಲ್ಲಿ ಪುರುಷರು ಶಸ್ತ್ರಚಿಕಿತ್ಸೆಗೆ ಒಳಗಾಗಬಹುದು’ ಎಂದು ತಾಲ್ಲೂಕು ಆರೋಗ್ಯಾಧಿಕಾರಿ ಡಾ.ಅನಿಲ್‌ಕುಮಾರ್ ಸರ್ಕಾರಿ ಆಸ್ಪತ್ರೆ ಆವರಣದಲ್ಲಿ ನಡೆದ ಕಾರ್ಯಕ್ರಮದಲ್ಲಿ ಮಾತನಾಡಿದರು.
‘ಅಂತರ್ಜಲ ಕುಸಿದು, ಕೊಳವೆ ಬಾವಿಗಳನ್ನು ಕೊರೆಸಿ ಕೊರೆಸಿ ರೈತರು ಹಾಳಾಗಿದ್ದಾರೆ. ಭೂಮಿಯಲ್ಲಿ ಬೆಳೆ ತೆಗೆಯುವುದೇ ಕಷ್ಟಕರ ಪರಿಸ್ಥಿತಿಯಲ್ಲಿ ಹೆಚ್ಚುವ ಜನಸಂಖ್ಯೆಗೆ ಆಹಾರ ಒದಗಿಸುವುದು ಕಷ್ಟಕರ. ಈ ಬಗ್ಗೆ ಜನರೇ ಜಾಗೃತರಾಗಬೇಕು. ಪ್ರತಿಯೊಬ್ಬರೂ ಈ ವಿಷಯವನ್ನು ಗಂಭೀರವಾಗಿ ಪರಿಗಣಿಸಬೇಕು’ ಎಂದು ಈ ಸಂದರ್ಭದಲ್ಲಿ ಜಿಲ್ಲಾ ಪಂಚಾಯಿತಿ ಸದಸ್ಯ ಎಸ್.ಎಂ.ನಾರಾಯಣಸ್ವಾಮಿ ಅಭಿಪ್ರಾಯಪಟ್ಟರು.
ತಹಶೀಲ್ದಾರ್ ಜಿ.ಎ.ನಾರಾಯಣಸ್ವಾಮಿ, ತಾಲ್ಲೂಕು ಪಂಚಾಯಿತಿ ಅಧ್ಯಕ್ಷ ಜಿ.ನರಸಿಂಹಮೂರ್ತಿ, ಜಿಲ್ಲಾ ಪಂಚಾಯಿತಿ ಸದಸ್ಯೆ ಶಿವಲೀಲಾ ರಾಜಣ್ಣ, ಪಿ.ಎಲ್.ಡಿ. ಬ್ಯಾಂಕ್ ಅಧ್ಯಕ್ಷ ಎ.ರಾಮಚಂದ್ರಪ್ಪ, ಸರ್ಕಾರಿ ನೌಕರರ ಸಂಘದ ಅಧ್ಯಕ್ಷ ಎನ್.ಕೆ.ಗುರುರಾಜರಾವ್, ಆರೋಗ್ಯ ಶಿಕ್ಷಣಾಧಿಕಾರಿ ಕಿರಣ್ ಕುಮಾರ್ ಮತ್ತಿತರರು ಈ ಸಂದರ್ಭದಲ್ಲಿ ಹಾಜರಿದ್ದರು.
ಮನೆಯೊಂದರಲ್ಲಿ ಕಂಡ ವಿಷಕಾರಿಯಲ್ಲದ ಹಸಿರುಹಾವು ಸುರಕ್ಷಿತವಾಗಿ ಕಾಡಿಗೆ
ತಾಲ್ಲೂಕಿನ ಕೊತ್ತನೂರು ಗ್ರಾಮದಲ್ಲಿ ಮನೆಯೊಂದರ ಹಿತ್ತಲಿನ ಬಾಳೆಗಿಡದಲ್ಲಿ ಬುಧವಾರ ಕಂಡು ಬಂದ ಹಸಿರುಹಾವನ್ನು ಅದೇ ಗ್ರಾಮದ ಸ್ನೇಕ್ ನಾಗರಾಜ್ ರಕ್ಷಿಸಿ ಸುರಕ್ಷಿತ ಸ್ಥಳದಲ್ಲಿ ಬಿಟ್ಟಿದ್ದಾರೆ.

ಗ್ರೀನ್ ವೈನ್ ಸ್ನೇಕ್ ಎಂದು ಕರೆಯುವ ಅಚ್ಚ ಹಸಿರು ಬಣ್ಣದ ಹಸಿರಾವು ನೋಡಲು ಸುಂದರವಾದ ಹಾವು. ಹಸಿರು ಬಣ್ಣದ ಮರಗಿಡಗಳ ಕಾಂಡಗಳಲ್ಲಿರುವ ಅದನ್ನು ಗುರುತಿಸುವುದು ಕಷ್ಟ. ಅದನ್ನು ಕಡ್ಡಿಯೊಂದರ ಮೇಲೆ ಸ್ನೇಕ್ ನಾಗರಾಜ್ ಹತ್ತಿಸಿದಾಗ ಸಾಧುವಂತೆ ಕಂಡ ಹಾವು, ಅದರ ಫೋಟೋ ತೆಗೆಯಲು ಹೋದೊಡನೆ ಲೆನ್ಸ್‌ನಲ್ಲಿ ಕಂಡ ತನ್ನ ಪ್ರತಿಬಿಂಬವನ್ನು ಕಂಡು ಭುಸುಗುಡತೊಡಗಿತು. ಅದರ ಆ ಪ್ರತಿಕ್ರಿಯೆಯಿಂದ ಉತ್ತಮ ಚಿತ್ರ ದಾಖಲಾಯಿತು.
‘ನಾಗರಹಾವನ್ನು ಕಂಡಲ್ಲಿ ಮಾತ್ರ ಜನರು ನನ್ನನ್ನು ಕರೆಯುತ್ತಾರೆ. ಉಳಿದ ಯಾವುದೇ ಹಾವನ್ನು ಕಂಡರೂ ತಾವೇ ಕೋಲೆತ್ತಿ ಕೊಂದು ಬಿಡುತ್ತಾರೆ. ಈ ರೀತಿಯ ವಿಷವಿಲ್ಲದ ಹಾವನ್ನು ಕಂಡರೆ ಕರೆಯುವವರು ಅಪರೂಪ. ಯಾವ ಹಾವಾದರೂ ಸರಿ ಅಕಸ್ಮಾತಾಗಿ ಮನುಷ್ಯರ ವಾಸಸ್ಥಾನದ ಬಳಿ ಬರುತ್ತವೆಯಷ್ಟೆ. ಅವನ್ನು ಸುರಕ್ಷಿತವಾಗಿ ಅವುಗಳ ವಾಸಸ್ಥಾನದಲ್ಲಿ ಬಿಡಬೇಕು. ಅವೂ ಕೂಡ ನಮ್ಮಂತೆಯೇ ಜೀವಿಗಳು’ ಎನ್ನುತ್ತಾರೆ ಸ್ನೇಕ್ ನಾಗರಾಜ್.
’ಹಸಿರು ಹಾವು ವಿಷಕಾರಿ ಅಲ್ಲ. ಆದರೂ ಅದು ಭುಸುಗುಡುತ್ತದೆ ಮತ್ತು ಕಚ್ಚುತ್ತದೆ. ಇದರ ಆಹಾರವಾದ ಕಪ್ಪೆ, ಹಲ್ಲಿ ಮುಂತಾದವನ್ನು ಕೊಲ್ಲಲು ಇದರಲ್ಲಿ ಸ್ವಲ್ಪ ಮಟ್ಟದ ವಿಷ ಇರುತ್ತದೆ. ಇದು ಮನುಷ್ಯರಿಗೆ ಕಚ್ಚಿದಲ್ಲಿ ಊತ ಕಾಣಿಸಿಕೊಳ್ಳುತ್ತದೆ. ಯಾವುದೇ ಅಪಾಯವಿಲ್ಲ’ ಎಂದು ಅವರು ಹೇಳಿದರು.
ಸರ್ಮಸ್ತ್ ಹುಸೇನಿ ಷಾವಾಲಿ ಮಸೀದಿಯಲ್ಲಿ ರಮ್‌ಜಾನ್ ‘ರೋಜಾ’ ಆಚರಣೆ
ಹಿಂದುಗಳ ದೀಪಾವಳಿ ಹಬ್ಬದಂತೆ ಮುಸ್ಲೀಮರಿಗೆ ರಮ್‌ಜಾನ್ ಸಂತೋಷದ ದೊಡ್ಡ ಹಬ್ಬ. ಹಿಜರಿ ಶಕೆಯ ಒಂಬತ್ತನೆಯ ತಿಂಗಳು ರಮ್‌ಜಾನ್ ಆಗಿದೆ. ಈ ತಿಂಗಳಿನಲ್ಲಿ ‘ರೋಜಾ’ (ಉಪವಾಸ ವೃತ) ಆಚರಿಸುವುದರಿಂದ ಪಾಪಗಳು ಸುಟ್ಟು ಬೂದಿಯಾಗುತ್ತವೆಂಬ ನಂಬಿಕೆಯಿದೆ.
ಪಟ್ಟಣದ ಸರ್ಮಸ್ತ್ ಹುಸೇನಿ ಷಾವಾಲಿ ಮಸೀದಿಯಲ್ಲಿ ರೋಜಾ ಕೈಗೊಂಡವರಿಗೆಲ್ಲಾ ಸಂಜೆ ರೋಜಾ ಬಿಡುವ ಸಮಯದಲ್ಲಿ ಬಾಳೆ ಹಣ್ಣು, ಖರ್ಜೂರ, ಸಮೋಸಗಳನ್ನು ಮಸೀದಿಯ ವತಿಯಿಂದ ನೀಡಲಾಗುತ್ತಿದೆ.
ಇಡೀ ತಿಂಗಳು ರೋಜಾ ಇರುವುದು ಇಸ್ಲಾಂ ಧರ್ಮದ ವೈಶಿಷ್ಟ್ಯ. ದುಃಖದಿಂದ ಪಾರಾಗಲು ಅಲ್ಲಾಹನ ಪ್ರೇಮ ಸಂಪಾದಿಸಲು ರೋಜಾ ಪವಿತ್ರಮಾರ್ಗವೆಂದು ಮುಸ್ಲಿಂ ಬಾಂಧವರು ನಂಬುತ್ತಾರೆ.
‘ಪ್ರತಿದಿನ ಬೆಳಿಗ್ಗೆ ‘ಫಜ್ರ’ ನಮಾಜಿನ ವೇಳೆಗಿಂತ ಮೊದಲು ಹಿತ-ಮಿತ ಆಹಾರ ಸೇವಿಸಿ ‘ಸಹರಿ’ (ರೋಜಾ ಆರಂಭಿಸುವುದು) ಮಾಡುತ್ತಾರೆ. ಇದಕ್ಕೆ ಅನೇಕ ನಿಯತ್ (ವಿಧಿ, ನಿಯಮ) ಇದ್ದು ಅದರಲ್ಲಿ ಒಂದು ಹೀಗಿದೆ “ನವಾಯಿತನ್ ಆರ್ ಮೊಗದಮ್ ಸೌಮ ರಮಧಾನ್ ಮನ ಫರ್ದುಲ್ಲಾ ಹಿತಾಲಾ” ಎಂದು ಮನಸ್ಸಿನಲ್ಲಿಯೇ ಹೇಳಿಕೊಳ್ಳಬೇಕು. ಅಂದರೆ ರೋಜಾ ಸ್ವೀಕೃತಿಯಾಗುತ್ತದೆ. ಅನಂತರ ಇಡೀ ದಿನ ಆಹಾರ ನೀರು ಸ್ವೀಕರಿಸದೆ, ಸೂರ್ಯಾಸ್ತವಾದ ನಂತರ ಮಗರಿಬ್ ನಮಾಜಿನ ವೇಳೆಗೆ ಹಲ್ಲುಜ್ಜಿ ಬಾಯಿ ತೊಳೆದುಕೊಂಡು ಮನೆಯಲ್ಲಿ ಅಥವಾ ಮಸೀದೆಯಲ್ಲಿ ಕುಳಿತು ‘ರೋಜಾ’ ಬಿಡಬೇಕು.
“ಅಲ್ಲಾಹೂಮಾ ಲಕಾಸಂತೋ ವ ಬಿಕಾಮಂತೊ ವ ಅಲಾಯಿಕಾ ತವಕ್ಕಿಲ್ ತೋ ವ ಅಲಾರಿಸ್‌ತಿಕಾ ಆಪ್ತರತೋ ವತ್ ಖಬ್ಬಲ್ ಮಿನ್ನಿ” (ಅಲ್ಲಾಹ, ನಾನು ನಿನ್ನ ಸಲುವಾಗಿ ಉಪವಾಸ ವೃತ ಕೈಗೊಂಡಿದ್ದೆನು ಮತ್ತು ನಿನ್ನ ಆಜ್ಞೆಯ ಮೇರೆಗೆ ನಾನು ಉಪವಾಸ ವೃತ ಬಿಡುತ್ತೇನೆ) ಎಂದು ಹೇಳಿ ಖರ್ಜೂರ ಅಥವಾ ಬಾಳೆಯ ಹಣ್ಣು (ಅಥವಾ ಸ್ವಲ್ಪ ಆಹಾರ) ಸೇವಿಸಿ ರೋಜಾ ಬಿಡುತ್ತಾರೆ. ‘ಆಜಾನ್’ (ಪ್ರಾರ್ಥನೆಯ ಕರೆ) ಆದೊಡನೆ ಮಸೀದೆಯಲ್ಲಿ ಜಮಾ ಅತ್‌ನೊಂದಿಗೆ ‘ಮಗರಿಬ್’ ನಮಾಜು ಮಾಡಿ ಮನೆಗೆ ಮರಳುತ್ತಾರೆ’ ಎಂದು ಹಫೀಜುಲ್ಲಾ ತಿಳಿಸಿದರು.

