19.1 C
Sidlaghatta
Friday, December 26, 2025
Home Blog Page 1038

ರಸ್ತೆ ಬದಿಯ ವ್ಯಾಪಾರ, ಅಪಘಾತಕ್ಕೆ ಆಹ್ವಾನ

0

ಸುಸಜ್ಜಿತ ಸಂತೆ ಮೈದಾನ ಹಾಗೂ ಮಳಿಗೆಗಳಿದ್ದರೂ ತಾಲ್ಲೂಕಿನ ಹೊಸಪೇಟೆ ಗೇಟ್‌ ಬಳಿ ರಸ್ತೆಯ ಬದಿಯಲ್ಲೇ ಸಂತೆ ವ್ಯಾಪಾರ ನಡೆಸುತ್ತಿದ್ದು ಅಪಘಾತಕ್ಕೆ ಕಾರಣವಾಗಿದೆ.
ತಾಲ್ಲೂಕಿನ ಹೊಸಪೇಟೆ ಗ್ರಾಮ ಪಂಚಾಯಿತಿಗೆ ಸೇರಿರುವ ಜಂಗಮಕೋಟೆ ಕ್ರಾಸ್‌ ಅತಿ ಹೆಚ್ಚು ವ್ಯಾಪಾರ ನಡೆಯುವ ಕೇಂದ್ರವಾಗಿದೆ. ಪ್ರತಿ ಮಂಗಳವಾರ ನಡೆಯುವ ಇಲ್ಲಿನ ಸಂತೆಯಿಂದ ಪಂಚಾಯಿತಿಗೆ ವಾರ್ಷಿಕವಾಗಿ ಒಂದೂವರೆ ಲಕ್ಷ ರೂಗಳಷ್ಟು ಆದಾಯವಿದೆ. ಜಂಗಮಕೋಟೆ ಕ್ರಾಸ್‌ನಲ್ಲಿ ನಾಲ್ಕು ರಸ್ತೆಗಳ ಕೂಡುವ ಸ್ಥಳ ಹಾಗೂ ಜನಜಂಗುಳಿ ಹೆಚ್ಚೆಂದು ಸಾರ್ವಜನಿಕರಿಗೆ ತೊಂದರೆಯಾಗಬಾರದೆಂದು ರಸ್ತೆ ಬದಿಯಲ್ಲಿ ಸಂತೆ ನಡೆಯುತ್ತಿದ್ದುದನ್ನು ಬದಲಿಸಿ ಹೊಸಪೇಟೆ ಗೇಟ್‌ ಬಳಿ ಪಂಚಾಯಿತಿ ಸ್ಥಳದಲ್ಲಿ ಸುಮಾರು 19 ಲಕ್ಷ ರೂಗಳ ವೆಚ್ಚದಲ್ಲಿ ಸುಸಜ್ಜಿತ ಸಂತೆ ಮೈದಾನ, ಶೆಡ್ ಹಾಗೂ ಪ್ಲಾಟ್‌ಫಾರಂಗಳನ್ನು ನಿರ್ಮಿಸಲಾಗಿತ್ತು. ನೆರಳು, ಕುಡಿಯುವ ನೀರು, ಶೌಚಾಯಲ ವ್ಯವಸ್ಥೆ ಎಲ್ಲವನ್ನೂ ಕಲ್ಪಿಸಿದ್ದರೂ ಮಳಿಗೆಗಳ ಮುಂದೆ ರಸ್ತೆಬದಿಯಲ್ಲೇ ಜನರು ವ್ಯಾಪಾರಕ್ಕೆ ಅಂಗಡಿಗಳನ್ನು ತೆರೆದಿರುವುದರಿಂದ ಅಪಘಾತಕ್ಕೆ ಕಾರಣವಾಗುತ್ತಿದೆ ಎಂದು ಸಾರ್ವಜನಿಕರು ದೂರುತ್ತಾರೆ.
ರಸ್ತೆ ಬದಿಯಲ್ಲಿ ಕೆಲವರು ಅಂಗಡಿ ಇಡುವುದರಿಂದಾಗಿ ಸಂತೆಯ ದಿನ ಟೆಂಪೊ, ಟ್ರಾಕ್ಟರ್‌ ಮುಂತಾದ ವಾಹನಗಳಲ್ಲಿ ತರಕಾರಿ ಮೊದಲಾದ ವಸ್ತುಗಳನ್ನು ಮಾರಾಟಕ್ಕೆ ತರುವವರು ಸಂತೆ ಮೈದಾನದೊಳಕ್ಕೆ ಹೋಗಲಾಗುವುದಿಲ್ಲ. ವಾಹನ ಸಂಚಾರ ಹೆಚ್ಚಾಗಿರುವ ಕೋಲಾರ ಚಿಕ್ಕಬಳ್ಳಾಪುರ ರಸ್ತೆಯಿದಾಗಿದ್ದು, ರಸ್ತೆಯಲ್ಲೇ ವಾಹನಗಳನ್ನು ನಿಲ್ಲಿಸುವುದರಿಂದ ಒಂದೆಡೆ ವಾಹನ ಸಂಚಾರಕ್ಕೆ ಅಡಚಣೆಯುಂಟಾದರೆ, ತರಕಾರಿ ಮುಂತಾದವುಗಳನ್ನು ತಂದವರು ಸಂತೆ ಮಳಿಗೆಯವರೆಗೂ ರಸ್ತೆಯಿಂದ ಸಾಗಿಸಬೇಕಾದ ಅನಿವಾರ್ಯತೆ ಎದುರಿಸುವಂತಾಗುತ್ತದೆ.
‘ಸಂತೆ ನಡೆಯುವ ಸ್ಥಳ ಬದಲಿಸಿರುವುದಿಂದ ಜನರಿಗೆ ಗೊತ್ತಾಗಲೆಂದು ಮಿಠಾಯಿ ಮತ್ತು ಪ್ಲಾಸ್ಟಿಕ್‌ ಅಂಗಡಿಗಳನ್ನು ರಸ್ತೆ ಬದಿ ಇಡಲು ಅನುಮತಿ ಕೊಟ್ಟಿದ್ದೇವೆ. ಆದರೆ ಬೇರೆ ಎಲ್ಲಾ ವ್ಯಾಪಾರಸ್ಥರೂ ಸಂತೆಯ ಒಳಗೇ ವ್ಯಾಪಾರ ಮಾಡಬೇಕೆಂದು ತಿಳಿಸಿದ್ದೇವೆ’ ಎಂದು ಪಂಚಾಯಿತಿ ಅಭಿವೃದ್ಧಿ ಅಧಿಕಾರಿ ಪೂರ್ಣಿಮಾ ತಿಳಿಸಿದರು.
ವಿಪರೀತವಾದ ವಾಹನ ಸಂಚಾರವಿರುವ ಕೋಲಾರ ಚಿಕ್ಕಬಳ್ಳಾಪುರ ರಸ್ತೆಯ ಬದಿಯಲ್ಲೇ ಎಲ್ಲಾ ರೀತಿಯ ಸಂತೆಯ ಅಂಗಡಿಗಳೂ ಮಂಗಳವಾರದಂದು ಸ್ಥಾಪಿತವಾಗುತ್ತವೆ. ಜನರು ರಸ್ತೆಯ ಬದಿಯಲ್ಲೇ ನಿಂತು ವ್ಯಾಪಾರ ಮಾಡುತ್ತಿರುತ್ತಾರೆ. ವೇಗವಾಗಿ ಹೋಗುವ ವಾಹನಗಳಿಂದ ಅನಾಹುತವಾಗುವುದರಿಂದ ಅಧಿಕಾರಿಗಳು ರಸ್ತೆ ಬದಿಯ ವ್ಯಾಪಾರಕ್ಕೆ ಕಡಿವಾಣ ಹಾಕಬೇಕು. ಪಂಚಾಯಿತಿಯಿಂದ ನಿರ್ಮಿಸಲ್ಪಟ್ಟ ಮಳಿಗೆಯಲ್ಲೇ ವ್ಯಾಪಾರ ಮಾಡುವಂತೆ ನಿರ್ಬಂಧಿಸಬೇಕು. ಇದರಿಂದ ರಸ್ತೆಯ ಧೂಳು, ಅಪಘಾತ ಹಾಗೂ ವ್ಯಾಪಾರ ಮಾಡುವ ಜನರಿಗೆ ಸುರಕ್ಷೆಯೂ ಇರುವಂತಾಗುತ್ತದೆ ಎನ್ನುತ್ತಾರೆ ಸಾರ್ವಜನಿಕರು.

ಶ್ರೀ ವಾಸವಿ ವಿದ್ಯಾ ಸಂಸ್ಥೆ ಆವರಣದಲ್ಲಿ ವಿಶ್ವ ಪರಿಸರ ದಿನಾಚರಣೆ ಆಚರಣೆ

0

ಶಿಡ್ಲಘಟ್ಟದ ಶ್ರೀ ವಾಸವಿ ವಿದ್ಯಾ ಸಂಸ್ಥೆ ಆವರಣದಲ್ಲಿ ವಿಶ್ವ ಪರಿಸರ ದಿನಾಚರಣೆಯ ಕಾರ್ಯಕ್ರಮವನ್ನು ಬುಧವಾರ ಹಮ್ಮಿಕೊಳ್ಳಲಾಗಿತ್ತು. ಗಿಡ ನೆಡುವುದರ ಮೂಲಕ ಪ್ರಾರಂಭವಾದ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಗಳು ಹಾಗೂ ಆಡಳಿತ ಮಂಡಳಿಯ ಅಧ್ಯಕ್ಷರಾದ ಶ್ರೀ ನಾಗೇಂದ್ರಪ್ಪ ಪರಿಸರ ಕುರಿತಾದ ಮಾಹಿತಿಯನ್ನು ಮಕ್ಕಳಿಗೆ ತಿಳಿಸಿಕೊಟ್ಟರು. ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಪ್ರ.ಮು.ಶಿ ವೆಂಕಟರಮಣಪ್ಪ ಪರಿಸರದ ಅವಶ್ಯಕತೆ, ಮಾಲಿನ್ಯದ ದುಷ್ಪರಿಣಾಮಗಳು, ಓಜೋನ್ ಪದರದ ಸದ್ಯದ ಪರಿಸ್ಥಿತಿಯನ್ನು ವಿವರವಾಗಿ ಮಕ್ಕಳಿಗೆ ತಿಳಿಸಿದರು. ಶಿಕ್ಷಕರಾದ ಅಮರನಾಥ್ ಮತ್ತು ನಾಗರಾಜ್ ರವರು ಮಕ್ಕಳಿಗೆ ಪರಿಸರ ಸಂರಕ್ಷಣೆಯ ಕುರಿತು ಪ್ರತಿಜ್ಞಾವಿಧಿ ಬೋಧಿಸಿದರು.

ಸೋಮೇಶ್ವರಸ್ವಾಮಿ ಕ್ರಿಕೆಟ್‌ ಕ್ಲಬ್ ಟೆನ್ನಿಸ್‌ಬಾಲ್‌ ಕ್ರಿಕೆಟ್‌ ಟೂರ್ನಮೆಂಟ್‌ನಲ್ಲಿ ಕೋಲಾರ ಕ್ರಿಕೆಟ್‌ ಅಸೋಸಿಯೇಷನ್‌ ತಂಡಕ್ಕೆ ವಿಜಯ

0

ಶಿಡ್ಲಘಟ್ಟ ತಾಲ್ಲೂಕಿನ ಯಣ್ಣಂಗೂರು ಗೇಟ್‌ ಬಳಿ ಸೋಮೇಶ್ವರಸ್ವಾಮಿ ಕ್ರಿಕೆಟ್‌ ಕ್ಲಬ್‌ ಸೋಮವಾರ ಆಯೋಜಿಸಿದ್ದ ಟೆನ್ನಿಸ್‌ಬಾಲ್‌ ಕ್ರಿಕೆಟ್‌ ಟೂರ್ನಮೆಂಟ್‌ನಲ್ಲಿ ಕೋಲಾರ ಕ್ರಿಕೆಟ್‌ ಅಸೋಸಿಯೇಷನ್‌ ತಂಡ ವಿಜೇತರಾಗಿ 12 ಸಾವಿರ ರೂ ನಗದು ಮತ್ತು ಟ್ರೋಫಿಯನ್ನು ಪಡೆದರೆ, ದ್ವಿತೀಯರಾದ ಯಣ್ಣಂಗೂರು ತಂಡದವರು 6 ಸಾವಿರ ರೂ ನಗದು ಮತ್ತು ಟ್ರೋಫಿಯನ್ನು ತಮ್ಮದಾಗಿಸಿಕೊಂಡರು.

ಹೊಸಪೇಟೆ ಗ್ರಾಮ ಪಂಚಾಯಿತಿ ಹಾಗೂ ರೆಡ್‌ಕ್ರಾಸ್‌ ಸಂಸ್ಥೆಯ ವತಿಯಿಂದ ರಕ್ತದಾನ ಶಿಬಿರ

0

ಶಿಡ್ಲಘಟ್ಟ ತಾಲ್ಲೂಕಿನ ಹೊಸಪೇಟೆ ಗ್ರಾಮ ಪಂಚಾಯಿತಿ ಹಾಗೂ ರೆಡ್‌ಕ್ರಾಸ್‌ ಸಂಸ್ಥೆಯ ವತಿಯಿಂದ ಮಂಗಳವಾರ ಆಯೋಜಿಸಿದ್ದ ರಕ್ತದಾನ ಶಿಬಿರದಲ್ಲಿ ನೂರು ಯೂನಿಟ್‌ ಸಂಗ್ರಹವಾಯಿತು.

ರೇಷ್ಮೆ ಉದ್ದಿಮೆಯ ಅಭಿವೃದ್ಧಿಗಾಗಿ ಬಜೆಟ್ ಪೂರ್ವ ಸಲಹೆ ಸ್ವೀಕಾರ ಸಭೆ

0

ಶಿಡ್ಲಘಟ್ಟದ ರೇಷ್ಮೆ ಗೂಡಿನ ಮಾರುಕಟ್ಟೆಯಲ್ಲಿ ಮಂಗಳವಾರ ಬಜೆಟ್ ಪೂರ್ವ ಸಲಹೆ ಸ್ವೀಕಾರ ಸಭೆಯನ್ನು ರೇಷ್ಮೆ ಕೃಷಿ ಹಿತರಕ್ಷಣಾ ವೇದಿಕೆಯ ವತಿಯಿಂದ ಆಯೋಜಿಸಲಾಗಿತ್ತು.
ರೇಷ್ಮೆ ಬೆಳೆಗಾರರು, ಚಾಕಿ ಸಾಕಾಣಿಕೆದಾರರು, ರೇಷ್ಮೆ ನೂಲು ಬಿಚ್ಚಾಣಿಕೆದಾರರು, ಮೊಟ್ಟೆ ತಯಾರಕರು ಸೇರಿದ ಸಭೆಯಲ್ಲಿ ರೇಷ್ಮೆ ಉದ್ಯಮದಲ್ಲಿ ತೊಡಗಿರುವವರಿಗೆ ಪೂರಕವಾಗಿ ಸರ್ಕಾರದ ಬಜೆಟ್‌ ಜುಲೈ 10 ರಂದು ಮೂಡಿಬರಲು ಸಲಹೆ ಸೂಚನೆಗಳನ್ನು ನೀಡಲಾಯಿತು. ಮುಂಬರುವ ಬಜೆಟ್‌ನಲ್ಲಿ ರೇಷ್ಮೆಕೃಷಿ ಅಭಿವೃದ್ಧಿಗೆ ವಿಶೇಷ ಸೌಲಭ್ಯವನ್ನು ನೀಡುವ ವಿಚಾರ ಕುರಿತು ತಮ್ಮ ಅಭಿಪ್ರಾಯಗಳನ್ನು ವ್ಯಕ್ತಪಡಿಸಿದರು.
ಸರ್ಕಾರವು ಮಂಡಿಸುವ ಆಯವ್ಯಯದಲ್ಲಿ ರೇಷ್ಮೆ ಕೃಷಿಕರ ಪರವಾಗಿ ಅಭಿವೃದ್ಧಿಪೂರಕ ಕ್ರಮಗಳನ್ನು ಕೈಗೊಳ್ಳಲು ವಿಶೇಷ ಯೋಜನೆಯನ್ನು ರೂಪಿಸಿ ಸಂಕಷ್ಟದಲ್ಲಿರುವ ರೇಷ್ಮೆ ಕೃಷಿಕರನ್ನು ಉಳಿಸಲು ಸೂಕ್ತ ಕ್ರಮಗಳನ್ನು ಕೈಗೆತ್ತಿಕೊಂಡು ಹೆಚ್ಚಿನ ಅನುದಾನವನ್ನು ಮೀಸಲಿಡಬೇಕು. ನೂಲು ಬಿಚ್ಚಾಣಿಕೆದಾರರು ಖಾಸಗಿ ವರ್ತಕರಿಂದ ಶೋಷಣೆಗೆ ಒಳಗಾಗುವುದನ್ನು ತಪ್ಪಿಸಲು ಮತ್ತು ರೇಷ್ಮೆಗೂಡಿನ ದರದಲ್ಲಿ ಸ್ಥಿರತೆಯನ್ನು ಕಾಪಾಡಲು ಕರ್ನಾಟಕ ರೇಷ್ಮೆ ಮಾರಾಟ ಮಂಡಳಿ (KSMB)ಗೆ ಕೂಡಲೇ 50 ಕೋಟಿ ಹಣವನ್ನು ಬಿಡುಗಡೆ ಮಾಡಿ, ಆ ಸಂಸ್ಥೆಯನ್ನು ಪುನಃಶ್ಚೇತನಗೊಳಿಸುವುದು. ರೇಷ್ಮೆಹುಳು ಸಾಕಾಣಿಕೆ ಮನೆಗೆ ನೀಡುತ್ತಿದ್ದ ಸಹಾಯ ಧನವನ್ನು ಕಡಿತಗೊಳಿಸಿದ್ದು, ಈ ಹಿಂದಿನಂತೆ ಮುಂದುವರೆಸುವುದು.
ಹನಿನೀರಾವರಿಗೆ ಕೊಡುತ್ತಿದ್ದ ಸಹಾಯ ಧನದ ಸೌಲಭ್ಯವನ್ನು ಕಡಿತಗೊಳಿಸಿದ್ದು, ಯಥಾಸ್ಥಿತಿ ಮುಂದುವರೆಸುವುದು. 2003-–04ನೇ ಸಾಲಿನ ಬಜೆಟ್‌ನಲ್ಲಿ ಮಿಶ್ರತಳಿ ಗೂಡಿಗೆ ಪ್ರೋತ್ಸಾಹ ಧನವಾಗಿ ಕೊಡಲು ತೀರ್ಮಾನಿಸಿದ್ದ ೩೦ ರೂ. ಗಳನ್ನು ಇದುವರೆವಿಗೂ ಅನುಷ್ಠಾನಗೊಳಿಸಿಲ್ಲವಾದ್ದರಿಂದ ವಿತರಣೆಗೆ ಕೂಡಲೇ ಕ್ರಮ ಕೈಗೊಳ್ಳುವುದು. ಹಿಂದಿನ ಬಜೆಟ್‌ನಲ್ಲಿ ಘೋಷಣೆ ಮಾಡಿರುವ 20 ಶೀತಲ ಗೃಹ ನಿರ್ಮಾಣವನ್ನು ಇದುವರೆವಿಗೂ ಅನುಷ್ಠಾನಗೊಳಿಸಿಲ್ಲವಾಗಿದ್ದು, ಈ ಕೂಡಲೇ ಅನುಷ್ಠಾನಗೊಳಿಸತಕ್ಕದ್ದು. ರೇಷ್ಮೆ ನೂಲು ಬಿಚ್ಚಾಣಿಕೆದಾರರಿಗೆ ಕಳೆದ ಸಾಲಿನ ಬಜೆಟ್‌ನಲ್ಲಿ ಘೋಷಿಸಿರುವ ೧ ಲಕ್ಷ ರೂ.ಗಳ ಕಡಿಮೆ ಬಡ್ಡಿಯ ಸಾಲ ಯೋಜನೆಯು ಇದುವರೆವಿಗೂ ಜಾರಿಯಾಗಿಲ್ಲವಾದ್ದರಿಂದ ನೂಲು ಬಿಚ್ಚಾಣಿಕೆದಾರರನ್ನು ಉಳಿಸಲು ಕೂಡಲೇ ಅನುಷ್ಠಾನಗೊಳಿಸುವುದು. ರೇಷ್ಮೆಗೂಡು ಮಾರುಕಟ್ಟೆಗಳ ಅಭಿವೃದ್ಧಿಗೆ ಪೂರಕ ಕ್ರಮಗಳನ್ನು ಕೈಗೊಂಡು ಹೆಚ್ಚಿನ ಅನುದಾನವನ್ನು ಬಿಡುಗಡೆ ಮಾಡುವುದು. ಸಣ್ಣ-ಸಣ್ಣ ನೂಲು ಬಿಚ್ಚಾಣಿಕೆದಾರರಿಗೆ ಅನುಕೂಲವಾಗುವಂತೆ 2 ಬೇಸಿನ್‌ಗಳ ಸಣ್ಣ ನೂಲು ಬಿಚ್ಚಾಣಿಕೆ ಘಟಕಗಳನ್ನು ಅಳವಡಿಸಿಕೊಳ್ಳಲು ಸಹಾಯಧನ ಒದಗಿಸುವುದು. ರೇಷ್ಮೆ ಕೃಷಿಗೆ ಸೌಲಭ್ಯ ನೀಡುವಿಕೆಯಲ್ಲಿನ ಜಾತಿ ಆಧಾರಿತ ಸಹಾಯಧನ ವಿತರಣೆಯ ನೀತಿಯನ್ನು ಕೈಬಿಟ್ಟು, ರೇಷ್ಮೆ ಕೃಷಿಕರನ್ನು ಒಂದೇ ಎಂದು ಪರಿಗಣಿಸಿ ಸೌಲಭ್ಯ ವಿತರಿಸುವುದು. ಬಯಲುಸೀಮೆ ಭಾಗದ ಜಿಲ್ಲೆಗಳಲ್ಲಿ ಕೊಳವೆ ಬಾವಿಗಳಿಂದ ಅತಿ ಕಡಿಮೆ ನೀರು ಲಭ್ಯವಿರುವುದರಿಂದ, ನೀರನ್ನು ಶೇಖರಿಸಿ ತೋಟಗಳಿಗೆ ಹನಿ ನೀರಾವರಿ ಅಳವಡಿಸಿಕೊಳ್ಳಲು ನೀರಿನ ತೊಟ್ಟಿಗಳಿಗೆ ಸಹಾಯ ಧನ ನೀಡುವುದು. ರೇಷ್ಮೆ ಮೇಲಿನ ಆಮದು ಸುಂಕವನ್ನು ಶೇಕಡಾ 15 ರಿಂದ ಈ ಹಿಂದಿನಂತೆ 31.5ಕ್ಕೆ ಏರಿಸಲು ಕೇಂದ್ರ ಸರ್ಕಾರಕ್ಕೆ ಕೂಡಲೇ ಪತ್ರ ಬರೆದು, ರೇಷ್ಮೆ ಕೃಷಿಯನ್ನು ಉಳಿಸಲು ಕ್ರಮ ಕೈಗೊಳ್ಳುವುದು ಎಂಬ ವಿಷಯಗಳನ್ನು ಬಜೆಟ್‌ನಲ್ಲಿ ಸೇರಿಸಲು ರೈತರು ಚರ್ಚಿಸಿದರು. ತಮ್ಮ ಬೇಡಿಕೆಗಳ ಪಟ್ಟಿಯನ್ನು ರೇಷ್ಮೆಕೃಷಿ ಅಭಿವೃದ್ಧಿ ಆಯುಕ್ತರು ಮತ್ತು ಉಪನಿರ್ದೇಶಕರ ಮೂಲಕ ಮುಖ್ಯಮಂತ್ರಿಗಳಿಗೆ ಕಳುಹಿಸಿಕೊಡಲು ಸಭೆಯಲ್ಲಿ ಒಮ್ಮತವಾಗಿ ತೀರ್ಮಾನಿಸಲಾಯಿತು.
ರೈತ ಮುಖಂಡರಾದ ಎಸ್.ಎಂ.ನಾರಾಯಣಸ್ವಾಮಿ, ಭಕ್ತರಹಳ್ಳಿ ಬೈರೇಗೌಡ, ಯಲುವಳ್ಳಿ ಸೊಣ್ಣೇಗೌಡ, ಮಳ್ಳೂರು ಹರೀಶ್, ಕೆಂಪರೆಡ್ಡಿ, ಶ್ರೀರಾಮಣ್ಣ, ರೀಲರುಗಳಾದ ಅನ್ವರ್, ರಾಮಕೃಷ್ಣ ಮತ್ತಿತರರು ಈ ಸಂದರ್ಭದಲ್ಲಿ ಹಾಜರಿದ್ದರು.

ಬಡ್ತಿ ಪಡೆದು ವರ್ಗಾವಣೆಗೊಂಡ ಪೊಲೀಸ್‌ ಸಿಬ್ಬಂದಿಗೆ ಸನ್ಮಾನ ಹಾಗೂ ಬೀಳ್ಕೊಡುಗೆ

0

ನಮ್ಮ ಠಾಣೆಗೆ 40 ಪೇದೆಗಳ ಅಗತ್ಯವಿದ್ದು ಕೇವಲ 20 ಮಂದಿ ಇರುವುದರಿಂದ ಅವರಿಗೆ ಕೆಲಸದ ಒತ್ತಡ ಹೆಚ್ಚಿರುತ್ತದೆ. ಹಾಗಾಗಿ ಪೇದೆಗಳಿಗೆ ರಜೆಗಳನ್ನು ನೀಡಲಾಗದೆ ಅವರಿಂದ ಹೆಚ್ಚು ಕೆಲಸ ಮಾಡಿಸಬೇಕಾಗಿದೆ ಎಂದು ಪುರಠಾಣೆ ಸಬ್‌ಇನ್ಸ್‌ಪೆಕ್ಟರ್‌ ಪುರುಷೋತ್ತಮ್‌ ತಿಳಿಸಿದರು.
ಪುರಠಾಣೆಯಲ್ಲಿ ಭಾನುವಾರ ಬಡ್ತಿ ಪಡೆದು ವರ್ಗಾವಣೆಗೊಂಡ ನಾಲ್ವರು ಪೊಲೀಸ್‌ ಸಿಬ್ಬಂದಿಯ ಬೀಳ್ಕೊಡುಗೆ ಸಮಾರಂಭದಲ್ಲಿ ಅವರು ಮಾತನಾಡಿದರು. ಠಾಣೆಯಲ್ಲಿ ಇದ್ದ ಒಬ್ಬ ಮಹಿಳಾ ಸಿಬ್ಬಂದಿಯ ವರ್ಗಾವಣೆಯಿಂದಾಗಿ ಅವರ ಕೊರತೆಯುಂಟಾಗಿದೆ. ಎಲ್ಲಿದ್ದರೂ ಉತ್ತಮವಾಗಿ ಕಾರ್ಯವನ್ನು ನಿರ್ವಹಿಸಿ ಇಲಾಖೆಗೆ ಒಳ್ಳೆಯ ಹೆಸರನ್ನು ತರಬೇಕೆಂದು ಹೇಳಿದರು.
ಮುಖ್ಯಪೇದೆಯಿಂದ ಎ.ಎಸ್‌.ಐ ಆಗಿ ಬಡ್ತಿಹೊಂದಿದ ನಾರಾಯಣಪ್ಪ, ಪೇದೆಯಿಂದ ಮುಖ್ಯಪೇದೆಯಾಗಿ ಬಡ್ತಿಹೊಂದಿದ ನಾಗರಾಜ್‌ ಮತ್ತು ಶ್ರೀನಿವಾಸ್‌ ಹಾಗೂ ವರ್ಗಾವಣೆಗೊಂಡ ಮುಖ್ಯಪೇದೆ ಚಂದ್ರಕಲಾ ಅವರನ್ನು ಸನ್ಮಾನಿಸಿ ಬೀಳ್ಕೊಡಲಾಯಿತು.
ಈ ಸಂದರ್ಭದಲ್ಲಿ ಪುರಠಾಣೆ ಪೊಲೀಸ್‌ ಸಿಬ್ಬಂದಿ ಹಾಜರಿದ್ದರು

ಚೀಮಂಗಲ ಸರ್ಕಾರಿ ಪ್ರೌಢಶಾಲೆ ವತಿಯಿಂದ ವರ್ಲಿ ಚಿತ್ರಕಲಾ ಶಿಕ್ಷಕ ನಾಗರಾಜ್ ಅವರಿಗೆ ಸನ್ಮಾನ

0

ಒಂದಿಷ್ಟು ತ್ರಿಭುಜಗಳು, ಕೆಲವು ವೃತ್ತಗಳು. ಹಾಗೆಯೇ ಕೆಲವು ರೇಖೆಗಳು..ಇವಿಷ್ಟನ್ನು ಒಂದು ಹದದಲ್ಲಿ ಬೆರೆಸಿದಾಗ ಕಣ್ಣ ಮುಂದೆ ಕೆಲವು ಜನರು ನಿಮ್ಮ ಮುಂದೆ ತಮ್ಮ ದಿನ ನಿತ್ಯದ ಚಟುವಟಿಕೆಗಳಲ್ಲಿ ತೊಡಗುವುದು ಕಂಡುಬರುತ್ತದೆ. ರೈತ ನೆಲವನ್ನು ಉಳುತ್ತಾನೆ. ಮಕ್ಕಳು ಆಟವಾಡುತ್ತಿರುತ್ತಾರೆ. ಒಂದೆಡೆ ಗುಡಿಸಲಿನ ಮುಂದೆ ರಾಗಿ ಬೀಸುತ್ತಿದ್ದರೆ, ಮತ್ತೊಂದೆಡೆ ಹೊಲ ಉಳುತ್ತಿರುತ್ತಾರೆ. ಇಷ್ಟೆಲ್ಲ ಬಿಡಿಬಿಡಿಯಾಗಿ ನೋಡುವ ಹೊತ್ತಿಗೆ ನಮ್ಮ ಮುಂದೆ ಸುಂದರ ದೃಶ್ಯ ಕಾವ್ಯ ಪ್ರಕಟವಾಗುತ್ತದೆ. ಗ್ರಾಮೀಣ ಜೀವನ ಕಣ್ಣ ಮುಂದೆ ಮೂಡಿ ಬರುತ್ತದೆ. ಸರಳವೂ ಮನಮೋಹಕವೂ ಆದ ಈ ಚಿತ್ತಾರಗಳ ಹೆಸರು ವರ್ಲಿ ಚಿತ್ರಗಳು!!
ತಾಲ್ಲೂಕಿನ ಚೀಮಂಗಲ ಸರ್ಕಾರಿ ಪ್ರೌಢಶಾಲೆಯ ಮೇಲೆ ಈ ಚಿತ್ರಗಳು ರಾರಾಜಿಸುತ್ತಿವೆ. ಸರ್ಕಾರಿ ಶಾಲೆಗಳು ನಿಯಯಪಾಲನೆಗಾಗಿ ಕೆಟ್ಟದಾಗಿ ಬಿಡಿಸಿದ ಚಿತ್ರಗಳಿಂದ ವಿಕಾರವಾಗಿ ಕಾಣುತ್ತದೆಂಬ ಮಾತುಗಳು ಕೇಳಿ ಬರುತ್ತಿರುತ್ತವೆ. ಅಂತಹುದರಲ್ಲಿ ಕಲಾಪ್ರಕಾರವನ್ನು ಶಾಲಾ ಗೋಡೆಗಳ ಮೇಲೆ ಬಿಂಬಿಸುವುದರೊಂದಿಗೆ ಅತ್ತ ಶಾಲೆಗೂ ಅಂದ, ಇತ್ತ ವಿದ್ಯಾರ್ಥಿಗಳಿಗೂ ಕಲೆಯ ಬಗ್ಗೆ ಅವಗಾಹನೆ ಮೂಡಿಸುತ್ತಿದ್ದಾರೆ ಶಿಕ್ಷಕರು. ಈ ಕಲೆಯನ್ನು ಚಿತ್ರಿಸಿದವರೂ ಶಿಕ್ಷಕರೇ ಆಗಿರುವುದು ವಿಶೇಷವಾಗಿದೆ. ಚಿಕ್ಕಬಳ್ಳಾಪುರ ತಾಲ್ಲೂಕು ಗಿಡ್ನಹಳ್ಳಿಯ ಸರ್ಕಾರಿ ಪ್ರೌಢಶಾಲೆಯಲ್ಲಿ ಚಿತ್ರಕಲಾ ಶಿಕ್ಷಕ ನಾಗರಾಜ್‌ ಅವರು ಈ ಚಿತ್ರಗಳನ್ನು ಬಿಡಿಸಿದ್ದಾರೆ. ಹಣವನ್ನು ಬಯಸದೆ ಕೇವಲ ತಮ್ಮ ಸ್ನೇಹಿತರಾದ ಚೀಮಂಗಲದ ಶಿಕ್ಷಕರ ಒತ್ತಾಸೆಯಿಂದ ಈ ಚಿತ್ರಗಳನ್ನು ಬಿಡಿಸಿದ ಅವರನ್ನು ಶಾಲೆಯವರು ಗೌರವಿಸಿದ್ದಾರೆ.
ವರ್ಲಿ ಚಿತ್ರಗಳು ಹೆಸರೇ ಸೂಚಿಸುವಂತೆ ಮಹಾರಾಷ್ಟ್ರದವರ್ಲಿ ಬುಡಕಟ್ಟು ಜನಾಂಗದವರು ತಮ್ಮ ಗುಡಿಸಲುಗಳ ಮೇಲೆ ಬಿಡಿಸುವ ಚಿತ್ರಗಳು. ಸಾಂಪ್ರದಾಯಿಕ ರೀತಿಯಲ್ಲಿ ಅವರು ಸೆಗಣಿ, ಕೆಮ್ಮಣ್ಣಿನ ಹಿನ್ನೆಲೆಗೆ ಅಕ್ಕಿಯ ಹಿಟ್ಟಿನಲ್ಲಿ ಅದ್ದಿದ ಕುಂಚದಿಂದ ಇವುಗಳನ್ನು ಬಿಡಿಸುತ್ತಾರೆ. ಈ ಜನರು ಬಹಳ ಸರಳವಾದ ಜೀವನವನ್ನು ನಡೆಸುತ್ತಾರೆ. ಅವರು ಪ್ರಕೃತಿಯ ಆರಾಧಕರು. ಅವರ ಚಿತ್ರಗಳಲ್ಲಿನ ತ್ರಿಕೋನಗಳಿಗೆ ಬೆಟ್ಟ ಗುಡ್ಡಗಳೇ ಪ್ರೇರಣೆ. ವೃತ್ತಗಳು ಸೂರ್ಯ ಚಂದ್ರನಿಂದ ಪ್ರಭಾವಿತವಾದ ಆಕೃತಿಗಳು. ಸಾಮಾನ್ಯವಾಗಿ ಕೃಷಿ ಇವರ ಪ್ರಮುಖ ಉದ್ಯೋಗ. ಅವರ ಚಿತ್ರಗಳಲ್ಲಿ ಕೃಷಿಯ ಹಲವು ಹಂತಗಳಾದ ಬಿತ್ತುವಿಕೆ, ಫಸಲಿನ ಕೊಯಿಲು ಇತ್ಯಾದಿಗಳನ್ನು ಹೇರಳವಾಗಿ ಕಾಣಬಹುದು. ಬೇಟೆ,ಹಬ್ಬದ ಆಚರಣೆಗಳು, ಪ್ರಕೃತಿ, ನೃತ್ಯ, ವಿನೋದ ಮುಂತಾದ ಚಿತ್ತಾರಗಳೂ ಕಾಣಬರುತ್ತವೆ.
ಸಾಂಪ್ರದಾಯಿಕ ರೀತಿಯ ಈ ಚಿತ್ರಗಳು ಆಧುನಿಕ ರೂಪ ತಾಳುತ್ತಿವೆ. ಸೆಗಣಿ ಅಥವಾ ಕೆಮ್ಮಣ್ಣಿನ ಹಿನ್ನೆಲೆಗೆ ಬದಲಾಗಿ ಆ ಬಣ್ಣದ ಪೈಂಟುಗಳು ಬಳಕೆಯಾಗುತ್ತಿವೆ. ಅಕ್ಕಿಯ ಹಿಟ್ಟಿಗೆ ಬದಲಾಗಿ ಬಿಳಿಯ ಅಕ್ರಲಿಕ್ ವರ್ಣಗಳ ಬಳಕೆಯಾಗುತ್ತಿದೆ. ಮನೆಯ ಒಳಾಂಗಣ ಮತ್ತು ಹೊರಾಂಗಣ ಅಲಂಕಾರದಲ್ಲಿ, ವಸ್ತ್ರಗಳ ಮೇಲೆ,ಕಾಫಿ ಕಪ್ ಗಳ ಮೇಲೆ, ಪೆನ್ ಸ್ಟಾಂಡ್ ಗಳ ಮೇಲೆ ಹೀಗೆ ವರ್ಲಿಯ ವ್ಯಾಪ್ತಿ ವಿಸ್ತಾರವಾಗುತ್ತಾ ಸಾಗಿದೆ.
’ನಮ್ಮ ಶಾಲೆಯನ್ನು ಈ ಅಪರೂಪದ ಕಲೆಯಿಂದ ಅಲಂಕರಿಸಬೇಕು. ಮಕ್ಕಳಿಗೂ ಇಂಥಹ ಕಲೆಯ ಬಗ್ಗೆ ತಿಳುವಳಿಕೆ ನೀಡಬೇಕು. ಮಕ್ಕಳು ಕಲೆಯ ಬಗ್ಗೆ ಅಭಿರುಚಿಯನ್ನು ಬೆಳೆಸಿಕೊಳ್ಳಲಿ ಎಂಬ ಆಸೆಯಿಂದ ನಾವು ಚಿತ್ರಕಲಾ ಶಿಕ್ಷಕ ನಾಗರಾಜ್‌ ಅವರನ್ನು ಕೇಳಿದೆವು. ಈ ಚಿತ್ರಗಳನ್ನು ಬಿಡಿಸಲು ಸಾಕಷ್ಟು ಸಮಯ ಹಾಗೂ ಶಾರೀರಿಕ ದಣಿವಾಗುತ್ತದೆ. ಆದರೂ ಯಾವ ಫಲಾಪೇಕ್ಷೆಯಿಲ್ಲದೆ ಅವರು ಚಿತ್ರಗಳನ್ನು ಬಿಡಿಸಿಕೊಟ್ಟಿದ್ದಾರೆ. ಅವರನ್ನು ಶಾಲಾ ವತಿಯಿಂದ ಸನ್ಮಾನಿಸಿದೆವು’ ಎಂದು ಚೀಮಂಗಲ ಸರ್ಕಾರಿ ಪ್ರೌಢಶಾಲೆಯ ಮುಖ್ಯಶಿಕ್ಷಕ ಎಸ್‌.ಶಿವಶಂಕರ್‌ ತಿಳಿಸಿದರು.

ಮನೆಯಲ್ಲಿ ಅವಿತಿದ್ದ ನಾಗರಹಾವನ್ನು ಹಿಡಿದು ಸುರಕ್ಷಿತವಾಗಿ ಕಾಡು ಸೇರಿಸಿದ ಸ್ನೇಕ್‌ ನಾಗರಾಜ್

0

ತಾಲ್ಲೂಕಿನ ತುಮ್ಮನಹಳ್ಳಿ ಗ್ರಾಮದ ಹರಿಜನ ಕಾಲೋನಿಯ ಗಂಗಲಪ್ಪ ಎಂಬುವರ ಮನೆಯಲ್ಲಿ ಸೇರಿಕೊಂಡಿದ್ದ ಭಾರೀಗಾತ್ರದ ನಾಗರಹಾವನ್ನು ಶುಕ್ರವಾರ ಕೊತ್ತನೂರಿನ ಸ್ನೇಕ್‌ ನಾಗರಾಜ್‌ ಹೊರತೆಗೆದು ಸುರಕ್ಷಿತವಾಗಿ ಕಾಡಿನಲ್ಲಿ ಬಿಟ್ಟರು.
ಸುಮಾರು ಹದಿನೈದು ದಿನಗಳ ಹಿಂದಷ್ಟೆ ಹರಿಜನ ಕಾಲೋನಿಯ ವಾಸಿ ಮಹೇಶ್‌(16) ಹಾವು ಕಡಿದು ಮೃತಪಟ್ಟಿದ್ದರಿಂದ ನಾಗರಹಾವು ಮನೆಯೊಳಗೆ ಸೇರಿಕೊಂಡಾಗ ಎಲ್ಲರೂ ಗಾಬರಿ ಬಿದ್ದು ಓಡಿದೆವು. ಕೊತ್ತನೂರಿನ ಸ್ನೇಕ್‌ ನಾಗರಾಜ್‌ ಬಂದು ಹಾವನ್ನು ಮನೆಯಿಂದ ಹೊರಕ್ಕೆ ತೆಗೆದುಕೊಂಡು ಬಂದರು. ನಮ್ಮ ಕಾಲೋನಿಯ ಪಕ್ಕದಲ್ಲೇ ಕಾಲುವೆಯೊಂದಿದ್ದು ಕಲುಷಿತ ಹಾಗೂ ತ್ಯಾಜ್ಯದಿಂದ ತುಂಬಿಹೋಗಿದೆ. ಅದರ ಪಕ್ಕದಲ್ಲೇ ಗಿಡಗಂಟೆಗಳು ಬೆಳೆದಿದ್ದು ಹಾವುಗಳು ಸೇರಿಕೊಳ್ಳುತ್ತವೆ. ಪಂಚಾಯಿತಿ ಅಧಿಕಾರಿಗಳಿಗೆ ಎಷ್ಟು ಬಾರಿ ಹೇಳಿದರೂ ಕ್ರಮ ಕೈಗೊಳ್ಳುತ್ತಿಲ್ಲ ಎಂದು ಗಂಗುಲಪ್ಪ ದೂರಿದರು.

ಚೀಮಂಗಲದಲ್ಲಿ ಬರಡು ರಾಸು ಚಿಕಿತ್ಸಾ ಶಿಬಿರ

0

ಪಶುಪಾಲನಾ ಮತ್ತು ಪಶುವೈದ್ಯ ಸೇವಾ ಇಲಾಖೆ, ಕೋಲಾರ ಚಿಕ್ಕಬಳ್ಳಾಪುರ ಹಾಲು ಒಕ್ಕೂಟ ಹಾಗೂ ಚೀಮಂಗಲ ಹಾಲು ಉತ್ಪಾದಕರ ಸಹಕಾರ ಸಂಘದ ಸಹಯೋಗದಲ್ಲಿ ಗುರುವಾರ ಚೀಮಂಗಲ ಹಾಲು ಉತ್ಪಾದಕರ ಸಹಕಾರ ಸಂಘದ ಆವರಣದಲ್ಲಿ ಬರಡು ರಾಸು ಚಿಕಿತ್ಸಾ ಶಿಬಿರ ಹಾಗೂ ಆರೋಗ್ಯ ತಪಾಸಣಾ ಶಿಬಿರವನ್ನು ಆಯೋಜಿಸಲಾಗಿತ್ತು.
ಈ ಶಿಬಿರದಲ್ಲಿ ಚೀಮಂಗಲ ಹಾಗೂ ಸುತ್ತಮುತ್ತಲ ಗ್ರಾಮಗಳ ಸುಮಾರು 77 ರಾಸುಗಳಿಗೆ ಕೆಚ್ಚಲು ಬಾವು, ಜ್ವರ, ಬಂಜೆ ರಾಸುಗಳಿಗೆ ಚಿಕಿತ್ಸೆ ನೀಡಲಾಯಿತು. ಈ ಸಂದರ್ಭದಲ್ಲಿ ಜಂತು ನಿವಾರಕ ಔಷಧಿ ಮತ್ತು ಮಾತ್ರೆಗಳನ್ನು ವಿತರಿಸಲಾಯಿತು.
ಕೋಲಾರ ಚಿಕ್ಕಬಳ್ಳಾಪುರ ಹಾಲು ಒಕ್ಕೂಟದ ಉಪವ್ಯವಸ್ಥಾಪಕ ಡಾ.ಕೆ.ಜಿ.ಈಶ್ವರಯ್ಯ, ವಿಸ್ತರಣಾಧಿಕಾರಿ ಶ್ರೀನಿವಾಸ್‌, ಪಶುಪಾಲನಾ ಮತ್ತು ಪಶುವೈದ್ಯ ಸೇವಾ ಇಲಾಖೆಯ ಸಹಾಯಕ ನಿರ್ದೇಶಕ ಡಾ.ಮುನಿನಾರಾಯಣರೆಡ್ಡಿ, ಪಶುವೈದ್ಯಾಧಿಕಾರಿಗಳಾದ ಡಾ.ರಮೇಶ್‌, ಡಾ.ಪ್ರಶಾಂತ್‌, ಡಾ.ರವಿಚಂದ್ರ, ಪಶುವೈದ್ಯ ಸಹಾಯಕರಾದ ಎಂ.ಮುನಿಯಪ್ಪ, ಸೀನಪ್ಪ, ರವೀಂದ್ರ ಮತ್ತಿತರರು ಈ ಸಂದರ್ಭದಲ್ಲಿ ಹಾಜರಿದ್ದರು.

ತಾಲ್ಲೂಕು ಪಂಚಾಯಿತಿ ಹಂಗಾಮಿ ಅಧ್ಯಕ್ಷರಾಗಿ ಗಂಜಿಗುಂಟೆ ನರಸಿಂಹಮೂರ್ತಿ ಆಯ್ಕೆ

0

ತಾಲ್ಲೂಕು ಪಂಚಾಯಿತಿ ಹಂಗಾಮಿ ಅಧ್ಯಕ್ಷರಾಗಿ ತಾಲ್ಲೂಕು ಪಂಚಾಯಿತಿ ಸದಸ್ಯ ಹಾಗೂ ಸಾಮಾಜಿಕ ನ್ಯಾಯ ಸಮಿತಿಯ ಸದಸ್ಯ ಗಂಜಿಗುಂಟೆ ನರಸಿಂಹಮೂರ್ತಿ ಬುಧವಾರ ಅವಿರೋಧವಾಗಿ ಆಯ್ಕೆಯಾಗಿದ್ದಾರೆ.
ತಾಲ್ಲೂಕಿನ ಗಂಜಿಗುಂಟೆ ತಾಲ್ಲೂಕು ಪಂಚಾಯಿತಿ ಕ್ಷೇತ್ರದಿಂದ ಕಾಂಗ್ರೆಸ್ ಪಕ್ಷದಿಂದ ಆಯ್ಕೆಯಾಗಿದ್ದ ಅವರು ತಾಲ್ಲೂಕು ಪಂಚಾಯಿತಿ ಅಧ್ಯಕ್ಷರಾಗಿದ್ದ ಯರ್ರಬಚ್ಚಪ್ಪ ಅವರ ಅವಧಿ ಮುಕ್ತಾಯವಾದ ಹಿನ್ನೆಲೆಯಲ್ಲಿ ಹಂಗಾಮಿ ಅಧ್ಯಕ್ಷರಾಗಿ ಅಧಿಕಾರ ಸ್ವೀಕಾರ ಮಾಡಿದ್ದಾರೆ.
ಹಂಗಾಮಿ ಅಧ್ಯಕ್ಷರಾಗಿರುವವರೆಗೂ ತಾಲ್ಲೂಕು ಪಂಚಾಯಿತಿಯ ವ್ಯಾಪ್ತಿಯಲ್ಲಿ ಪ್ರಾಮಾಣಿಕ ಸೇವೆಯನ್ನು ಮಾಡುವ ಮುಖಾಂತರ ಎಲ್ಲಾ ವರ್ಗದ ಜನತೆಗೆ ಸಾಮಾಜಿಕ ನ್ಯಾಯವನ್ನು ಒದಗಿಸುವುದಾಗಿ ಅವರು ಈ ಸಂದರ್ಭದಲ್ಲಿ ತಿಳಿಸಿದರು.
ಸದಸ್ಯರಾದ ರಾಜಣ್ಣ, ವೇಣುಗೋಪಾಲ್, ವೆಂಕಟೇಶ್, ಮುಖಂಡರಾದ ಬಶೆಟ್ಟಿಹಳ್ಳಿ ದ್ಯಾವಪ್ಪ, ಟಿ.ಎ.ಚಲಪತಿ, ನರಸಿಂಹಪ್ಪ ಮುಂತಾದವರು ಹಾಜರಿದ್ದರು.

error: Content is protected !!