19.1 C
Sidlaghatta
Friday, December 26, 2025
Home Blog Page 1039

ಜಯಂತಿ ಗ್ರಾಮದಲ್ಲಿ ಹೈಟೆನ್ಶನ್ ವಿದ್ಯುತ್‌ ತಂತಿಗಳನ್ನು ತೆರವುಗೊಳಿಸಲು ರೈತರ ಒತ್ತಾಯ

0

ತಾಲ್ಲೂಕಿನ ಜಯಂತಿ ಗ್ರಾಮದಲ್ಲಿ ಕೆಲ ಮನೆಗಳ ಮೇಲೆ ಹಾದು ಹೋಗಿರುವ ಹೈಟೆನ್ಶನ್ ವಿದ್ಯುತ್‌ ತಂತಿಗಳಿಂದ ಅವಘಡಗಳು ಸಂಭವಿಸುವ ಸಾಧ್ಯತೆಯಿದ್ದು ತಕ್ಷಣ ಅವುಗಳನ್ನು ತೆರವುಗೊಳಿಸಬೇಕೆಂದು ರೈತ ಸಂಘ ಹಾಗೂ ಹಸಿರುಸೇನೆ ಸದಸ್ಯರು ಬುಧವಾರ ಒತ್ತಾಯಿಸಿ ಬೆಸ್ಕಾಂ ಕಾರ್ಯನಿರ್ವಾಹಣಾಧಿಕಾರಿ ಅವರಿಗೆ ಮನವಿಯನ್ನು ಸಲ್ಲಿಸಿದರು.
ಹನ್ನೊಂದು ಕಿಲೋ ವ್ಯಾಟ್‌ ಹೈಟೆನ್ಶನ್ ವಿದ್ಯುತ್‌ ತಂತಿಗಳು ಮನೆಗಳ ಮೇಲೆ ಹಾದು ಹೋಗಿರುವುದರಿಂದ ಇಲ್ಲಿ ವಾಸಿಸುವವರು ಭಯದಿಂದ ಬದುಕುವಂತಾಗಿದೆ. ಹಿಂದೆ ಹನ್ನೆರಡು ವರ್ಷದ ಬಾಲಕ ವಿದ್ಯುತ್‌ ತಂತಿ ತಗುಲಿ ಪ್ರಾಣಾಪಾಯದಿಂದ ಪಾರಾದ ಘಟನೆ ನಡೆದಿದೆ. ಈ ಬಗ್ಗೆ ಹಲವಾರು ಬಾರಿ ಗ್ರಾಮಸ್ಥರು ಮನವಿ ಸಲ್ಲಿಸಿದ್ದರೂ ಅಧಿಕಾರಿಗಳು ಕ್ರಮ ಕೈಗೊಂಡಿಲ್ಲ. ಈ ಬಗ್ಗೆ ಅಧಿಕಾರಿಗಳು ಕ್ರಮ ಕೈಗೊಳ್ಳದಿದ್ದಲ್ಲಿ ರೈತರು ಬೆಸ್ಕಾ ಕಚೇರಿಯ ಮುಂದೆ ಪ್ರತಿಭಟಿಸುವುದಾಗಿ ಎಚ್ಚರಿಸಿದರು.
ಬೆಸ್ಕಾಂ ಕಾರ್ಯನಿರ್ವಾಹಣಾಧಿಕಾರಿ ಅನ್ಸರ್‌ ಪಾಷ ಅವರನ್ನು ಸ್ಥಳಕ್ಕೆ ಕರೆಸಿ ಅಲ್ಲಿನ ಸಮಸ್ಯೆಯನ್ನು ವಿವರಿಸಿ ಗ್ರಾಮಸ್ಥರಿಗೆ ಆಗುತ್ತಿರುವ ತೊಂದರೆಯನ್ನು ತಿಳಿಸಿದರು.
ಸ್ಥಳ ಪರಿಶೀಲನೆ ನಡೆಸಿದ ಬೆಸ್ಕಾಂ ಕಾರ್ಯನಿರ್ವಾಹಣಾಧಿಕಾರಿ ಅನ್ಸರ್‌ ಪಾಷ ರೈತರಿಂದ ಮನವಿಯನ್ನು ಸ್ವೀಕರಿಸಿ ಶೀಘ್ರವೇ ಕಂಬಗಳನ್ನು ಬದಲಾಯಿಸಿ ಹೈಟೆನ್ಶನ್ ವಿದ್ಯುತ್‌ ತಂತಿಗಳು ಮನೆಗಳಿಂದ ದೂರ ಹಾಕಿಸುವುದಾಗಿ ಭರವಸೆ ನೀಡಿದರು.
ರೈತ ಸಂಘ ಹಾಗೂ ಹಸಿರುಸೇನೆ ತಾಲ್ಲೂಕು ಅಧ್ಯಕ್ಷ ಭಕ್ತರಹಳ್ಳಿ ಬೈರೇಗೌಡ, ಮುನಿನಂಜಪ್ಪ, ಕೃಷ್ಣಪ್ಪ, ಯಲುವಳ್ಳಿ ಸೊಣ್ಣೇಗೌಡ, ಮಂಜುನಾಥ, ಮಳಮಾಚನಹಳ್ಳಿ ದೇವರಾಜ ಮತ್ತಿತರರು ಈ ಸಂದರ್ಭದಲ್ಲಿ ಹಾಜರಿದ್ದರು.

ಆಸಕ್ತ ಜನರ ಶ್ರಮದಿಂದ ಪುನಶ್ಚೇತನ ಪಡೆದ ಸಂತೆಮೈದಾನದ ಆಂಜನೇಯಸ್ವಾಮಿ ದೇವಾಲಯ

0

ಪುರಸಭೆ ಮತ್ತು ತಾಲ್ಲೂಕು ಆಡಳಿತ ಮಾಡಬೇಕಿದ್ದ ಕೆಲಸವನ್ನು ಕೆಲವು ಆಸಕ್ತ ಜನರೇ ನಿಂತು ನಿರ್ವಹಿಸಿರುವ ಉದಾಹರಣೆಯು ಅಪರೂಪ. ಕಸ ತ್ಯಾಜ್ಯ ಹಾಗೂ ಹಂದಿಗಳ ಆಶ್ರಯ ತಾಣವಾಗಿದ್ದ ಪಟ್ಟಣದ ಸಂತೆಮೈದಾನದಲ್ಲಿರುವ ಆಂಜನೇಯಸ್ವಾಮಿ ದೇವಾಲಯವನ್ನು ಕೆಲವು ಆಸಕ್ತರು ಸೇರಿಕೊಂಡು ಸಭ್ಯ ಸ್ಥಳವನ್ನಾಗಿಸಿದ್ದಾರೆ.
ಪಟ್ಟಣದಿಂದ ಚಿಂತಾಮಣಿಗೆ ಸಂಪರ್ಕ ಕಲ್ಪಿಸುವ ಮಾರ್ಗದ ಎಡಭಾಗದಲ್ಲಿ ರಾಜಕಾಲುವೆ ಹತ್ತಿರವಿರುವ ಈ ದೇವಾಲಯದ ಮುಂಭಾಗದಲ್ಲಿ ಕೆಸರು, ಕಲ್ಮಶ ಸೇರಿಕೊಂಡು ಹಂದಿಗಳ ಆಹಾರ ಮತ್ತು ಪೋಷಣೆಯ ಕೇಂದ್ರವಾಗಿ ಪರಿಣಮಿಸಿತ್ತು. ಕೆಲಭಕ್ತರು ಮತ್ತು ಅಯ್ಯಪ್ಪಸ್ವಾಮಿ ಭಜನೆ ಮಂಡಳಿ ಸದಸ್ಯರು ಸೇರಿಕೊಂಡು ದೇವಾಲಯಕ್ಕೆ ಸುಣ್ಣ ಬಣ್ಣ, ಮುಂದೆ ನೆರಳಿಗಾಗಿ ಶೀಟ್‌ ಹೊದಿಕೆ, ನೀರಿನ ವ್ಯವಸ್ಥೆ ಹಾಗೂ ಶುಚಿತ್ವವನ್ನು ಕಾಪಾಡಿದ್ದಾರೆ.
ಪಟ್ಟಣದ ನೈರುತ್ಯಕ್ಕಿರುವ ಅಮ್ಮನಕೆರೆಯನ್ನು ಶಿಡ್ಲಘಟ್ಟದ ನಿರ್ಮಾತೃ ಕೆಂಪೇಗೌಡನ ಮಡದಿ ಹಲಸೂರಮ್ಮ ಮತ್ತು ಆಗ್ನೇಯಕ್ಕಿರುವ ಗೌಡನಕೆರೆಯನ್ನು ಆಕೆಯ ಮಗ ಶಿವನೇಗೌಡನು ಕಟ್ಟಿಸಿದರೆಂದು ಪ್ರತೀತಿಯಿದೆ. ಈ ಕೆರೆಯನ್ನು ನಿರ್ಮಿಸಿದ ಶಿವನೇಗೌಡನೇ ಈ ಆಂಜನೇಯಸ್ವಾಮಿ ದೇವಾಲಯವನ್ನು ನಿರ್ಮಿಸಿರುವುದಾಗಿ ಹಿರಿಯರು ಹೇಳುತ್ತಾರೆ. ಬಾಲಾಂಜನೇಯಸ್ವರೂಪಿಯಾಗಿ ಆಗ್ನೇಯ ದಿಕ್ಕಿಗೆ ದೃಷ್ಟಿಯಿಟ್ಟಂತಿರುವುದು ಇಲ್ಲಿನ ವಿಗ್ರಹದ ವಿಶೇಷವಾಗಿದೆ.
ಈ ದೇವಾಲಯದ ಪಕ್ಕದಲ್ಲಿರುವ ಸಂತೆ ಮೈದಾನವು ಹಿಂದೆ ಉದ್ಯಾನವನವಾಗಿತ್ತು. ಅದಕ್ಕಾಗಿಯೇ ಇದನ್ನು ಗಾರ್ಡನ್‌ ರಸ್ತೆಯೆಂದೇ ಈಗಲೂ ಕರೆಯಲಾಗುತ್ತದೆ. ರೇಡಿಯೋದಲ್ಲಿ ಪ್ರಸಾರವಾಗುವ ಪ್ರದೇಶ ಸಮಾಚಾರವನ್ನು ಧ್ವನಿವರ್ಧಕದ ಮೂಲಕ ಇಲ್ಲಿ ಬಿತ್ತರಿಸಲಾಗುತ್ತಿತ್ತು. ವಾಯವಿಹಾರಾರ್ಥವಾಗಿ ಬಂದವರು ವಾರ್ತೆಗಳನ್ನು ಆಲಿಸುತ್ತಾ ಪಾರ್ಕ್‌ನಲ್ಲಿ ಅಡ್ಡಾಡಿ ದೇವಾಲಯದಲ್ಲಿ ಪೂಜೆ ಸಲ್ಲಿಸಿ ಅದರ ಮುಂದಿನ ಮೆಟ್ಟಿಲ ಮೇಲೆ ಕುಳಿತುಕೊಳ್ಳುತ್ತಿದ್ದುದಾಗಿ ಹಿರಿಯರು ನೆನೆಸಿಕೊಳ್ಳುತ್ತಾರೆ. ಆಗ ದೇವಾಲಯದ ಮುಂಭಾಗದಲ್ಲಿ ಕಲ್ಯಾಣಿ ಇತ್ತು, ಕೆರೆ ತುಂಬಿದಾಗ ಹೆಚ್ಚಾದ ನೀರು ಮೆಟ್ಟಿಲವರೆಗೂ ಬರುತ್ತಿದ್ದುದಾಗಿ ಜ್ಞಾಪಿಸಿಕೊಳ್ಳುತ್ತಾರೆ.
ದುರಂತವೆಂದರೆ ಆಗ ಕಲ್ಯಾಣಿಯಾಗಿದ್ದ ಜಾಗ ನಂತರ ಕೆಸರಿನ ಹೊಂಡವಾಯಿತು. ಊರಿನ ಚರಂಡಿಗಳ ತ್ಯಾಜ್ಯ ನೀರೆಲ್ಲಾ ದೇವಸ್ಥಾನದ ಪಕ್ಕದಲ್ಲೇ ಹರಿಯುವಂತೆ ಮಾಡಿದ್ದರಿಂದ ತ್ಯಾಜ್ಯದ ನೀರು ಹರಿದು ಬಂದು ಇಲ್ಲಿ ನಿಲ್ಲುವಂತಾಯಿತು. ಹಿಂದೆ ಕಲ್ಯಾಣಿಯಿದ್ದ ಸ್ಥಳ ಕೆಸರಿನ ಹೊಂಡವಾಗಿ ಹಂದಿಗಳ ತಾಣವಾಯಿತು. ಯಾವುದೇ ಪಟ್ಟಣ ಪ್ರವೇಶಿಸುತ್ತಿದ್ದಂತೆಯೇ ಆಹ್ಲಾದಕರ ವಾತಾವರಣ ಸ್ವಾಗತಿಸುವಂತಿರಬೇಕು. ಆದರೆ ಹಂದಿಗಳಿಂದ ಕೆಸರು ಹೊಂಡಗಳಿಂದ ಸ್ವಾಗತಿಸುವಂತಹ ಸ್ಥಿತಿಯಲ್ಲಿ ನಮ್ಮ ಪುರಸಭೆಯವರು ವಾತಾವರಣ ನಿರ್ಮಾಣ ಮಾಡಿದೆಯೆಂದು ಸಾರ್ವಜನಿಕರು ಗೇಲಿಮಾಡುವಂತಾಯಿತು.
‘ಕೆಲ ತಲೆಮಾರುಗಳಿಂದ ನಾವು ಈ ಆಂಜನೇಯಸ್ವಾಮಿ ದೇವಾಲಯದಲ್ಲಿ ಪೂಜೆ ಮಾಡುತ್ತಿದ್ದೇವೆ. ಹಿಂದೆ ಶ್ರೀರಾಮನವಮಿ ಮತ್ತು ಹನುಮಜ್ಜಯಂತಿಯನ್ನು ವಿಶೇಷವಾಗಿ ಆಚರಿಸಲಾಗುತ್ತಿತ್ತು. ಗಣಪತಿ ಹಬ್ಬದ ನಂತರ ಎಲ್ಲಾ ಗಣಪತಿಗಳನ್ನೂ ಇಲ್ಲಿನ ಕಲ್ಯಾಣಿಯಲ್ಲೇ ಬಿಡುತ್ತಿದ್ದರು. ಸಂತೆ ನಡೆಯುವುದು ಪ್ರಾರಂಭವಾದ ಮೇಲೆ ಇಲ್ಲಿ ಗಲೀಜು ಹೆಚ್ಚಾಯಿತು. ಊರಿನ ತ್ಯಾಜ್ಯದ ನೀರು ಹರಿಯಲು ದೇವಾಲಯದ ಪಕ್ಕ ಚರಂಡಿ ಮಾಡಿದ್ದರಿಂದ ಆ ನೀರು ಬಂದು ದೇವಸ್ಥಾನದ ಮುಂದೆ ಸಂಗ್ರಹವಾಗತೊಡಗಿತು. ಕೆಟ್ಟ ವಾಸನೆ ಮತ್ತು ಹಂದಿಗಳ ತಾಣವೆಂದು ಜನರು ಬರುವುದು ಕಡಿಮೆಯಾಯಿತು. ಇತ್ತೀಚೆಗೆ ಸ್ಥಳೀಯ ಭಕ್ತರು ಮತ್ತು ಅಯ್ಯಪ್ಪಸ್ವಾಮಿ ಭಜನೆ ಮಂಡಳಿಯ ರಮೇಶ್‌ ಮತ್ತು ತಂಡದವರು ಸೇರಿ ತಹಶೀಲ್ದಾರ್‌ ಅವರಿಗೆ ತಿಳಿಸಿ ದೇವಾಲಯಕ್ಕೆ ಸುಣ್ಣ, ನೀರು ಮತ್ತು ಹೊದಿಕೆಯನ್ನು ನಿರ್ಮಿಸಿಕೊಟ್ಟಿದ್ದಾರೆ’ ಎಂದು ಅರ್ಚಕ ಸತ್ಯನಾರಾಯಣರಾವ್‌ ಹೇಳುತ್ತಾರೆ.
‘ವಾರಕ್ಕೊಮ್ಮೆ ನಡೆಯುವ ಸಂತೆಯ್ಲಲಿ ಉಳಿಯುವ ತ್ಯಾಜ್ಯವನ್ನು ದೇವಾಲಯದ ಸನಿಹದಲ್ಲಿ ಸುರಿಯುವುದರಿಂದ ಹಂದಿಗಳ ಕಾಟ ಹೆಚ್ಚಾಗಿದೆ. ಅತ್ಯಂತ ಪುರಾತನವಾದ ಈ ದೇವಾಲಯವನ್ನು ಮತ್ತು ಅದರ ಸುತ್ತಮುತ್ತಲಿನ ವಾತಾವರಣವನ್ನು ನಿರ್ಮಲವಾಗಿರುವಂತೆ ನೋಡಿಕೊಳ್ಳಬೇಕು. ದೇವಸ್ಥಾನಕ್ಕೆ ವಿದ್ಯುತ್‌ ದೀಪ, ಕಾಂಪೌಂಡ್‌ ಮತ್ತು ಸಂತೆ ಗೇಟಿನಿಂದ ರಸ್ತೆಯನ್ನು ನಿರ್ಮಾಣ ಮಾಡಿದಲ್ಲಿ ದೇವಾಲಯವು ತನ್ನ ಗತ ವೈಭವಕ್ಕೆ ಹಿಂದಿರುಗುತ್ತದೆ’ ಎಂದು ಅವರು ಹೇಳಿದರು.

ಚೀಮಂಗಲ ಸರ್ಕಾರಿ ಪ್ರೌಢಶಾಲೆಯಲ್ಲಿ ಭಾರತರತ್ನ ಸಿ.ಎನ್‌.ಆರ್‌. ರಾವ್‌ ಅವರ ಜನ್ಮದಿನಾಚರಣೆ

0

ತಾಲ್ಲೂಕಿನ ಚೀಮಂಗಲ ಸರ್ಕಾರಿ ಪ್ರೌಢಶಾಲೆಯಲ್ಲಿ ಸೋಮವಾರ ಭಾರತರತ್ನ ಸಿ.ಎನ್‌.ಆರ್‌. ರಾವ್‌ ಅವರ 80ನೇ ವರ್ಷದ ಹುಟ್ಟುಹಬ್ಬವನ್ನು ಆಚರಿಸಲಾಯಿತು.
ಶಾಲಾ ಮಟ್ಟದಲ್ಲಿ ವಿಜ್ಞಾನ ಸಂಘದ ವತಿಯಿಂದ ಲಿಖಿತ ಹಾಗೂ ಮೌಖಿಕ ಕ್ವಿಜ್‌ ಮತ್ತು ಸಿ.ಎನ್‌.ಆರ್‌. ರಾವ್‌ ಅವರ ಕುರಿತಂತೆ ಪ್ರಬಂಧ ಸ್ಪರ್ಧೆಯನ್ನು ಆಯೋಜಿಸಲಾಗಿತ್ತು. ವಿಜ್ಞಾನಕ್ಕೆ ಸಂಬಂಧಿಸಿದಂತೆ ವಿವಿಧ ವಿಷಯಗಳನ್ನು ನೀಡಿ ವಿದ್ಯಾರ್ಥಿಗಳಿಂದ ಭಾಷಣವನ್ನು ಏರ್ಪಡಿಸಿದ್ದರು.
ಮುಖ್ಯಶಿಕ್ಷಕ ಶಿವಶಂಕರ್‌, ಶಿಕ್ಷಕರಾದ ದೊಡ್ಡನಾಯಕ್‌, ವಿಟ್ಟಲ್‌, ನವೀನ್‌ಕುಮಾರ್‌, ಶ್ರೀನಿವಾಸ್‌, ಸವಿತಾ, ಭವ್ಯಾ, ಸೌಭಾಗ್ಯ ಈ ಸಂದರ್ಭದಲ್ಲಿ ಹಾಜರಿದ್ದರು.

ವರದನಾಯಕನಹಳ್ಳಿ ಸರ್ಕಾರಿ ಶಾಲೆಯ ವಿದ್ಯಾರ್ಥಿಗಳಿಗೆ ನೋಟ್‌ ಪುಸ್ತಕ ಮತ್ತು ಲೇಖನ ಸಾಮಗ್ರಿಗಳ ವಿತರಣೆ

0

ತಾಲ್ಲೂಕಿನ ಘಟಮಾರನಹಳ್ಳಿಯ ವಾಗ್ದೇವಿ ಶೈಕ್ಷಣಿಕ ಮತ್ತು ಗ್ರಾಮಾಭಿವೃದ್ಧಿ ಸಂಘದ ವತಿಯಿಂದ ತಾಲ್ಲೂಕಿನ ವರದನಾಯಕನಹಳ್ಳಿ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯ ವಿದ್ಯಾರ್ಥಿಗಳಿಗೆ ನೋಟ್‌ ಪುಸ್ತಕ ಮತ್ತು ಲೇಖನ ಸಾಮಗ್ರಿಗಳನ್ನು ಸೋಮವಾರ ವಿತರಿಸಲಾಯಿತು.
ಮಕ್ಕಳಿಗೆ ನೋಟ್‌ ಪುಸ್ತಕ ಮತ್ತು ಲೇಖನ ಸಾಮಗ್ರಿಗಳನ್ನು ವಿತರಿಸಿ ಮಾತನಾಡಿದ ನಿವೃತ್ತ ಪ್ರೊ.ಆರ್‌.ವೇಣುಗೋಪಾಲ್‌, ‘ಲಂಡನ್ನಿನಲ್ಲಿ ನೆಲೆಸಿರುವ ಭಾರತಿ ಎನ್ನುವವರು ತಮ್ಮ ತಾಲ್ಲೂಕಿನ ಗ್ರಾಮೀಣ ಮಕ್ಕಳ ವಿದ್ಯಾಭ್ಯಾಸಕ್ಕೆ ನೆರವಾಗುವ ಉದ್ದೇಶದಿಂದ ಈ ಕೊಡುಗೆ ನೀಡುತ್ತಿದ್ದಾರೆ. ಮಕ್ಕಳು ಚೆನ್ನಾಗಿ ವ್ಯಾಸಂಗ ಮಾಡಬೇಕು. ಮುಂದೆ ಬೆಳೆದು ಇತರರಿಗೂ ಸಹಾಯ ಮಾಡಬೇಕು’ ಎಂದು ಹೇಳಿದರು.
ನಿವೃತ್ತ ಉಪಕುಲಪತಿ ಪ್ರೊ.ನಾರಾಯಣರೆಡ್ಡಿ, ಹರಳಹಳ್ಳಿಯ ಮುನೇಗೌಡರು, ಸೊಣ್ಣೇಗೌಡರು, ಶಿಕ್ಷಕರು ಈ ಸಂದರ್ಭದಲ್ಲಿ ಹಾಜರಿದ್ದರು.

ಸರ್ಕಾರಿ ಸಾರ್ವಜನಿಕ ಆಸ್ಪತ್ರೆಯಲ್ಲಿ ರಕ್ತದಾನ ಶಿಬಿರ

0

ಡೆಂಗ್ಯೂ ಪೀಡಿತ ಬಡವರಿಗೆ, ಗರ್ಭಿಣಿಯರು ಹಾಗೂ ಅಪಘಾತಕ್ಕೊಳಗಾದವರಿಗೆ ದಾನಿಗಳಿಂದ ಸಂಗ್ರಹಿಸಿದ ರಕ್ತವು ಜಿಲ್ಲೆಯಾದ್ಯಂತ ಬಳಕೆಯಾಗುತ್ತಿದೆ ಎಂದು ಹೆಚ್ಚುವರಿ ಸಿವಿಲ್‌ ನ್ಯಾಯಾಧೀಶರಾದ ವಿಜಯದೇವರಾಜ ಅರಸ್‌ ತಿಳಿಸಿದರು.
ಪಟ್ಟಣದ ಸರ್ಕಾರಿ ಸಾರ್ವಜನಿಕ ಆಸ್ಪತ್ರೆಯಲ್ಲಿ ಶುಕ್ರವಾರ ಭಾರತೀಯ ರೆಡ್‌ಕ್ರಾಸ್‌ ಸೊಸೈಟಿ, ತಾಲ್ಲೂಕು ಕಾನೂನು ಸೇವಾ ಸಮಿತಿ ಮತ್ತು ಪೊಲೀಸ್‌ ಇಲಾಖೆಯ ವತಿಯಿಂದ ನಡೆಸಿದ ರಕ್ತದಾನ ಶಿಬಿರದಲ್ಲಿ ರಕ್ತವನ್ನು ದಾನ ಮಾಡಿದ ನಂತರ ಅವರು ಮಾತನಾಡಿದರು.
ರಕ್ತದಾನದಿಂದ ಹಲವರ ಪ್ರಾಣ ರಕ್ಷಿಸಬಹುದಾಗಿದೆ. ರಕ್ತದಾನ ಮಾಡುವುದು ಪ್ರತೀ ಆರೋಗ್ಯವಂತ ವ್ಯಕ್ತಿಯ ಆದ್ಯ ಕರ್ತವ್ಯಗಳಲ್ಲೊಂದು. ರಕ್ತದಾನದಿಂದ ದಾನಿಗಳ ಆರೋಗ್ಯವೂ ವೃದ್ಧಿಸುತ್ತದೆ. ಜಿಲ್ಲಾ ಕೇಂದ್ರದಲ್ಲಿ ಸುಸಜ್ಜಿತ ರಕ್ತ ಸಂಗ್ರಹಣೆಯ ಕೇಂದ್ರವಿದ್ದು ನಾವು ದಾನ ಮಾಡಿದ ರಕ್ತ ಜಿಲ್ಲೆಯ ಜನರಿಗೇ ಅನುಕೂಲವಾಗುತ್ತದೆ. ಯುವಕರು ರಕ್ತದಾನವನ್ನು ಸಮಾಜ ಸೇವೆ ಎಂಬಂತೆ ಮಾಡಬೇಕು ಎಂದು ಹೇಳಿದರು.
ರಕ್ತದಾನ ಮಾಡಿದ ಸುಮಾರು 60 ಮಂದಿ ದಾನಿಗಳಿಗೆ ಶ್ಲಾಘನಾ ಪತ್ರವನ್ನು ವಿತರಿಸಲಾಯಿತು. ರೆಡ್‌ಕ್ರಾಸ್‌ ಸಂಸ್ಥೆಯಿಂದ ರಕ್ತದಾನ ಶಿಬಿರವನ್ನು ಆಯೋಜಿಸಲು ಸಹಕರಿಸಿದ ವಿವಿಧ ಸಂಘ ಇಲಾಖೆಗಳಿಗೂ ಶ್ಲಾಘನಾ ಪತ್ರವನ್ನು ನೀಡಲಾಯಿತು.
ಪ್ರಧಾನ ಸಿವಿಲ್‌ ನ್ಯಾಯಾಧೀಶರಾದ ಎಸ್‌.ಮಹೇಶ್‌, ಹೆಚ್ಚುವರಿ ಸಿವಿಲ್‌ ನ್ಯಾಯಾಧೀಶರಾದ ವಿಜಯದೇವರಾಜ ಅರಸ್‌, ತಹಶೀಲ್ದಾರ್‌ ಜಿ.ಎ.ನಾರಾಯಣಸ್ವಾಮಿ, ತಾಲ್ಲೂಕು ವಕೀಲರ ಸಂಘದ ಅಧ್ಯಕ್ಷ ಎಂ.ಪಾಪಿರೆಡ್ಡಿ. ವಕೀಲರಾದ ಬೈರಾರೆಡ್ಡಿ, ಈ.ನಾರಾಯಣಪ್ಪ, ಸರ್ಕಾರಿ ವಕೀಲ ಈ.ಡಿ.ಶ್ರೀನಿವಾಸ್‌, ತಾಲ್ಲೂಕು ಆರೋಗ್ಯ ಅಧಿಕಾರಿ ಡಾ.ಅನಿಲ್‌ಕುಮಾರ್‌, ಭಾರತೀಯ ರೆಡ್‌ಕ್ರಾಸ್‌ ಸೊಸೈಟಿ ತಾಲ್ಲೂಕು ಕಾರ್ಯದರ್ಶಿ ಎನ್‌.ಕೆ.ಗುರುರಾಜರಾವ್‌, ನಾಗರಾಜ್‌, ನರ್ಸಿಂಗ್ ಸೂಪರಿಂಡೆಂಟ್‌ ಶಮೀವುಲ್ಲಾ, ಕೃಷ್ಣಮೂರ್ತಿ, ಅಕ್ಕಲರೆಡ್ಡಿ ಮತ್ತಿತರರು ಈ ಸಂದರ್ಭದಲ್ಲಿ ಹಾಜರಿದ್ದರು.

ಪದಕಗಳನ್ನು ಪಡೆದ ದಿವ್ಯಭಾರತ್‌ ಕರಾಟೆ ಡೊ ವಿದ್ಯಾರ್ಥಿಗಳು

0

ಪಟ್ಟಣದ ದಿವ್ಯಭಾರತ್‌ ಕರಾಟೆ ಡೊ ವಿದ್ಯಾರ್ಥಿಗಳು ಗುರುವಾರ ವಿಜಯಪುರದಲ್ಲಿ ನಡೆದ ಗೋಜು ರಿಯೊ ಸೇವಾ ಕಾಯ್‌ ಅಂತರ ಶಾಲಾ ಕರಾಟೆ ಚಾಂಪಿಯನ್‌ಶಿಪ್‌ನಲ್ಲಿ ಪದಕಗಳನ್ನು ಪಡೆದಿದ್ದಾರೆ.
ವೈಟ್‌ಬೆಲ್ಟ್‌ ಕತಾ ಸ್ಪರ್ಧೆಯಲ್ಲಿ ಹೇಮಂತ್‌(ಪ್ರಥಮ), ಗ್ರೀನ್‌ಬೆಲ್ಟ್‌ ಕತಾ ಸ್ಪರ್ಧೆಯಲ್ಲಿ ಜಯಸಿಂಹ(ದ್ವಿತೀಯ), 15 ರಿಂದ 20 ಕೆಜಿ ಕುಮಿತೆ ಸ್ಪರ್ಧೆಯಲ್ಲಿ ಜಗದೀಶ್‌(ಪ್ರಥಮ), ಹೇಮಂತ್‌(ದ್ವಿತೀಯ), 20 ರಿಂದ 25 ಕೆಜಿ ಕುಮಿತೆ ಸ್ಪರ್ಧೆಯಲ್ಲಿ ಜಯಸಿಂಹ(ಪ್ರಥಮ), ಚೇತನ್‌(ದ್ವಿತೀಯ), ಜಗನ್‌ ಮತ್ತು ಹರ್ಷಿತ್‌ (ತೃತೀಯ), 25 ರಿಂದ 30 ಕೆಜಿ ಕುಮಿತೆ ಸ್ಪರ್ಧೆಯಲ್ಲಿ ಪುನೀತ್‌(ಪ್ರಥಮ), ನಂದೀಶ್‌ ಮತ್ತು ಹರ್ಷನ್‌ (ದ್ವಿತೀಯ), 30 ರಿಂದ 35 ಕೆಜಿ ಕುಮಿತೆ ಸ್ಪರ್ಧೆಯಲ್ಲಿ ಓಂ ದೇಶಮುದ್ರೆ(ಪ್ರಥಮ), 35 ರಿಂದ 40 ಕೆಜಿ ಕುಮಿತೆ ಸ್ಪರ್ಧೆಯಲ್ಲಿ ನವೀನ್‌(ದ್ವಿತೀಯ), 40 ರಿಂದ 45 ಕೆಜಿ ಕುಮಿತೆ ಸ್ಪರ್ಧೆಯಲ್ಲಿ ಪ್ರದೀಪ್‌(ಪ್ರಥಮ), ಜಸ್ವಂತ್‌ರೆಡ್ಡಿ ಮತ್ತು ನರಸಿಂಹ ಸಮಾಧಾನಕರ ಬಹುಮಾನ ಪಡೆದಿದ್ದಾರೆಂದು ದಿವ್ಯಭಾರತ್‌ ಕರಾಟೆ ಡೊ ಶಿಕ್ಷಕ ಅರುಣ್‌ಕುಮಾರ್‌ ತಿಳಿಸಿದ್ದಾರೆ.
ಗೋಜು ರಿಯೊ ಕರಾಟೆ ಡೊ ಸೇವಕೈ ಇಂಡಿಯಾ ಸಂಸ್ಥೆಯ ಮುಖ್ಯ ಶಿಕ್ಷಕ ಸಂದೀಪ್‌ ಎಸ್‌.ಸಾಲ್ವಿ ಮತ್ತು ರಾಜ್ಯ ಸಂಸ್ಥೆಯ ಶಿಕ್ಷಕ ಎಂ.ಡಿ.ಜಬೀವುಲ್ಲಾ ಪ್ರಶಸ್ತಿಗಳನ್ನು ವಿಜೇತರಿಗೆ ವಿತರಿಸಿದರು.

ನಿಂದನೆ, ಅಪಮಾನಗಳು ಬಂದರೂ ತತ್ವಗಳನ್ನು ಬಿಡಬಾರದು – ಪ್ರಧಾನ ಸಿವಿಲ್ ನ್ಯಾಯಾಧೀಶ ಎಸ್.ಮಹೇಶ್

0

ದುಷ್ಟ ವ್ಯಕ್ತಿಗಳನ್ನು ಸಮಾಜ ಸಹಿಸಿಕೊಳ್ಳುತ್ತದೆ. ಆದರೆ ಪ್ರಾಮಾಣಿಕರನ್ನು ಸಹಿಸುವುದಿಲ್ಲ. ಸೋಲು, ನಿಂದನೆ, ಅಪಮಾನಗಳು ಬಂದರೂ ತತ್ವಗಳನ್ನು ಬಿಡದೇ ತಾಳ್ಮೆಯಿಂದ ಇರಬೇಕು ಎಂದು ಪ್ರಧಾನ ಸಿವಿಲ್ ನ್ಯಾಯಾಧೀಶರಾದ ಎಸ್.ಮಹೇಶ್ ತಿಳಿಸಿದರು.
ಪಟ್ಟಣದ ಸರ್ಕಾರಿ ಪದವಿ ಪೂರ್ವ ಕಾಲೇಜಿನಲ್ಲಿ ಬುಧವಾರ ಕಾನೂನು ಅರಿವು ನೆರವು ಕಾರ್ಯಕ್ರಮದಡಿಯಲ್ಲಿ ತಾಲ್ಲೂಕು ಮಟ್ಟದಲ್ಲಿ ಪ್ರೌಢಶಾಲಾ ವಿದ್ಯಾರ್ಥಿಗಳಿಗೆ ‘ಮೂಲಭೂತ ಕರ್ತವ್ಯ’ಗಳ ಬಗ್ಗೆ ಏರ್ಪಡಿಸಿದ್ದ ಪ್ರಬಂಧ ಸ್ಪರ್ಧೆಯ ಪ್ರಶಸ್ತಿ ಪತ್ರ ವಿತರಣಾ ಸಮಾರಂಭದಲ್ಲಿ ಅವರು ಮಾತನಾಡಿದರು.
‘ಏನೇ ಆಗಲಿ ಒಳ್ಳೆಯದನ್ನೇ ಮಾಡಿ, ಮಾಡುತ್ತಲೇ ಇರಿ’ ಎಂಬ ಶೀರ್ಷಿಕೆಯ ನೈತಿಕ ಮೌಲ್ಯಗಳ ಒಂದು ಪುಟ ಮಾಹಿತಿಯನ್ನು ವಿದ್ಯಾರ್ಥಿಗಳಿಗೆ ವಿತರಿಸಿದರು. ವಿದ್ಯಾರ್ಥಿಗಳು ಬರೆದ ಪ್ರಬಂಧಗಳನ್ನು ಅವಲೋಕಿಸಿದಾಗ ಅವರ ಬೌದ್ಧಿಕ ಪ್ರೌಢಿಮೆ ಕಂಡು ಅಚ್ಚರಿಯಾಗುತ್ತದೆ. ವೃದ್ಧ ತಂದೆ ತಾಯಿಯರನ್ನು ರಕ್ಷಿಸುವುದು, ನೀರು, ವಿದ್ಯುತ್‌ ಸದ್ಭಳಕೆ ಮುಂತಾದ ಅಂಶಗಳು ಮೂಲ ಕರ್ತವ್ಯಗಳಾಗಬೇಕು ಎಂದು ಮಕ್ಕಳು ಆಲೋಚಿಸಿರುವುದು ಮೆಚ್ಚುವ ಸಂಗತಿ ಎಂದು ಹೇಳಿದರು.
ಸಂಪನ್ಮೂಲ ಭಾಷಣಕಾರರಾದ ವಕೀಲೆ ನೌತಾಜ್‌ ಮಾಹಿತಿ ಹಕ್ಕು ಅಧಿನಿಯಮದ ಬಗ್ಗೆ ವಕೀಲ ಎಂ.ಬಿ.ಲೋಕೇಶ್‌ ಸಕಾಲದ ಬಗ್ಗೆ ವಿವರಿಸಿದರು.
ಪ್ರಬಂಧ ಸ್ಪರ್ಧೆ ವಿಜೇತರಾದ ಎಸ್‌.ಎಂ.ನಿವೇದಿತ, ಸಾದಲಿ ಪ್ರೌಢಶಾಲೆ, ಬಿ.ಎನ್‌.ಪವಿತ್ರ, ಬಿ.ಎಂ.ವಿ.ಭಕ್ತರಹಳ್ಳಿ ಪ್ರೌಢಶಾಲೆ, ಮೇಘನಾ, ವಾಸವಿ ಪ್ರೌಢಶಾಲೆ, ಚೈತ್ರ, ಸಾದಲಿ ಪ್ರೌಢಶಾಲೆ ಮತ್ತು ತೇಜಸ್‌, ಮಳ್ಳೂರು ಸ್ವಾಮಿ ವಿವೇಕಾನಂದ ಪ್ರೌಢಶಾಲೆ ಅವರಿಗೆ ಪ್ರಶಸ್ತಿಪತ್ರವನ್ನು ನೀಡಿದರು.
ತಹಶೀಲ್ದಾರ್‌ ಜಿ.ಎ.ನಾರಾಯಣಸ್ವಾಮಿ, ತಾಲ್ಲೂಕು ವಕೀಲರ ಸಂಘದ ಅಧ್ಯಕ್ಷ ಎಂ.ಪಾಪಿರೆಡ್ಡಿ, ಸರ್ಕಾರಿ ವಕೀಲ ಈ.ಡಿ.ಶ್ರೀನಿವಾಸ್‌, ಕ್ಷೇತ್ರ ಶಿಕ್ಷಣಾಧಿಕಾರಿ ರಘುನಾಥರೆಡ್ಡಿ ಮತ್ತಿತರರು ಈ ಸಂದರ್ಭದಲ್ಲಿ ಹಾಜರಿದ್ದರು.

ತೊಟ್ಲಗಾನಹಳ್ಳಿ ಗ್ರಾಮದಲ್ಲಿ ನಡೆದ ಟೆನ್ನಿಸ್‌ ಬಾಲ್‌ ಕ್ರಿಕೆಟ್‌ ಟೂರ್‍ನಮೆಂಟ್‌ ನಲ್ಲಿ ವಿಜೇತರಾದ ಎಚ್‌.ಕ್ರಾಸ್‌ ತಂಡ

0

ತಾಲ್ಲೂಕಿನ ಭಕ್ತರಹಳ್ಳಿ ಗ್ರಾಮ ಪಂಚಾಯಿತಿಯ ತೊಟ್ಲಗಾನಹಳ್ಳಿ ಗ್ರಾಮದಲ್ಲಿ ಡಾ.ರಾಜ್‌ಕುಮಾರ್‌ ಅಭಿಮಾನಿಗಳ ಸಂಘದ ವತಿಯಿಂದ ಅದೇ ಗ್ರಾಮದ ಶಾಲಾ ಶಿಕ್ಷಕರಾಗಿದ್ದ ಮೇಲೂರಿನ ದಿ.ಧರ್ಮಪ್ರಕಾಶ್‌ ಅವರ ಜ್ಞಾಪಕಾರ್ಥ ಟೆನ್ನಿಸ್‌ ಬಾಲ್‌ ಕ್ರಿಕೆಟ್‌ ಟೂರ್‍ನಮೆಂಟ್‌ ಮೂರು ದಿನಗಳ ಕಾಲ ಆಯೋಜಿಸಲಾಗಿತ್ತು.
ಸೋಮವಾರ ಮುಕ್ತಾಯಗೊಂಡ ಕ್ರಿಕೆಟ್‌ ಟೂರ್‍ನಮೆಂಟ್‌ನಲ್ಲಿ ಪ್ರಥಮ ಬಹುಮಾನ 10 ಸಾವಿರ ರೂಪಾಯಿ ಮತ್ತು ಟ್ರೋಫಿಯನ್ನು ಎಚ್‌.ಕ್ರಾಸ್‌ ತಂಡ ಪಡೆದುಕೊಂಡಿತು. ದ್ವಿತೀಯ ಬಹುಮಾನ 5 ಸಾವಿರ ರೂಪಾಯಿ ಮತ್ತು ಟ್ರೋಫಿಯನ್ನು ತೊಟ್ಲಗಾನಹಳ್ಳಿ ಗ್ರಾಮದ ಡಾ.ರಾಜ್‌ಕುಮಾರ್‌ ತಂಡ ಪಡೆಯಿತು.
ಬಹುಮಾನ ವಿತರಣಾ ಸಮಾರಂಭದಲ್ಲಿ ಭಕ್ತರಹಳ್ಳಿ ಗ್ರಾಮ ಪಂಚಾಯಿತಿ ಅಧ್ಯಕ್ಷ ಗೋಪಾಲಗೌಡ, ಲೋಕೇಶ್‌ ಗೌಡ, ಮಂಜುನಾಥ್‌, ರಮೇಶ್‌, ಕನಕರಾಜು, ಮುನಿರಾಜು ಮತ್ತಿತರರು ಹಾಜರಿದ್ದರು.

ಎಂ.ಶಶಿಧರ್ ಅವರಿಗೆ ನವದೆಹಲಿಯ ಗ್ಲೋಬಲ್ ಅಚೀರ್ವಸ್ ಫೌಂಡೇಶನ್ ವತಿಯಿಂದ ಇಂಡಿಯನ್ ಲೀಡರ್‍ಶಿಪ್ ಅವಾರ್ಡ್ ಫಾರ್ ಎಜುಕೇಶನ್ ಎಕ್ಸ್‍ಲೆನ್ಸ್ ಪ್ರಶಸ್ತಿ

0

ಶ್ರೀ ವೆಂಕಟೇಶ್ವರ ಎಂಜಿನಿಯರಿಂಗ್ ಕಾಲೇಜಿನ ಮುಖ್ಯ ವ್ಯವಸ್ಥಾಪಕ ನಿರ್ದೇಶಕ ಹಾಗೂ ಮಾಜಿ ಸಚಿವ ವಿ.ಮುನಿಯಪ್ಪನವರ ಪುತ್ರ ಎಂ.ಶಶಿಧರ್ ಅವರಿಗೆ ನವದೆಹಲಿಯ ಗ್ಲೋಬಲ್ ಅಚೀರ್ವಸ್ ಫೌಂಡೇಶನ್ ವತಿಯಿಂದ ಇಂಡಿಯನ್ ಲೀಡರ್‍ಶಿಪ್ ಅವಾರ್ಡ್ ಫಾರ್ ಎಜುಕೇಶನ್ ಎಕ್ಸ್‍ಲೆನ್ಸ್ ಪ್ರಶಸ್ತಿ ನೀಡಿ ಗೌರವಿಸಲಾಗಿದೆ.
ನವದೆಹಲಿಯಲ್ಲಿ ನಡೆದ ಸಮಾರಂಭದಲ್ಲಿ ಕೇಂದ್ರ ಆಹಾರ ಮತ್ತು ನಾಗರಿಕ ಸರಬರಾಜು ಮತ್ತು ಗ್ರಾಹಕರ ಭದ್ರತೆ ರಾಜ್ಯ ಸಚಿವ ರಾವ್‍ಸಾಹೇ ಪಾಟೀಲ್ ಧನ್ವಿ ,ಜೋಗೇಂಧ್ರ ಸಿಂಗ್ ಐ.ಪಿ.ಎಸ್ ನಿವೃತ್ತ ಫಾರ್ಮರ್ ಸಿ.ಬಿ.ಐ ಡೈರೇಕ್ಟರ್,ಅಂಬಾಸಿಡರ್ ಡಾ.ಬಿ.ಬಿ.ಸೋನಿ ಫಾರ್ಮರ್ ಡಿಪ್ಲೇಮೆಟ್ ಇಂಡಿಯನ್ ಫಾರಿನ್ ಸರ್ವಿಸಸ್,ಅನೀಸ್ ದುರಾನಿ ಕಾರ್ಯದರ್ಶಿ ಎ.ಐ.ಸಿ.ಸಿ,ಪದ್ಮಶ್ರೀ ಪ್ರಶಸ್ತಿ ಪುರಸ್ಕøತ ಜಸಪಾಲ್ ರಾನಾ,ಡಾ.ಸಿ.ಆರ್.ಪಾರ್ಥಸಾರಥಿ ವ್ಯವಸ್ಥಾಪಕ ನಿರ್ದೇಶಕ ಸಾರಥಿ ಜಿಯೋಟೆಕ್ ಎಂಜಿನಿಯರಿಂಗ್ ಸರ್ವಿಸಸ್ ಪೈ.ಲಿಮಿಟೆಡೆ,ಬಾಲಿವುಡ್ ಫಿಲ್ಮ್ ಡೈರೆಕ್ಡರ್ ದೀಪಕ್ ತನ್ವರ್ ಮತ್ತಿತರರು ಉಪಸ್ಥಿತರಿದ್ದರು.

ತಲದುಮ್ಮನಹಳ್ಳಿಯಲ್ಲಿ ಕೆನರಾ ರೈತ ಸಂಪರ್ಕ ಅಭಿಯಾನ ಹಾಗೂ ಆರ್ಥಿಕ ಸಾಕ್ಷರತಾ ಕಾರ್ಯಕ್ರಮ

0

ದೇಶದಲ್ಲಿ ಇನ್ನೂ ಸಾಕಷ್ಟು ಮಂದಿ ಬ್ಯಾಂಕ್ ಸಂಪರ್ಕಕ್ಕೆ ಬಾರದವರು ಇದ್ದಾರೆ. ಪ್ರತಿಯೊಬ್ಬರನ್ನು ಕೂಡ ಬ್ಯಾಂಕ್‌ನ ಜಾಲಕ್ಕೆ ತರುವುದು ಸರ್ಕಾರದ ಹಾಗೂ ಬ್ಯಾಂಕಿಂಗ್ ಕ್ಷೇತ್ರದ ಉದ್ದೇಶವಾಗಿದ್ದು ಪ್ರತಿ ಕುಟುಂಬದ ಪ್ರತಿಯೊಬ್ಬರು ಕೂಡ ತಮ್ಮ ಸೇವಾ ವ್ಯಾಪ್ತಿಯ ಬ್ಯಾಂಕ್‌ನಲ್ಲಿ ಕಡ್ಡಾಯವಾಗಿ ಖಾತೆಯನ್ನು ತೆರೆಯವುಂತೆ ಚಿಕ್ಕಬಳ್ಳಾಪುರ ಲೀಡ್ ಬ್ಯಾಂಕ್‌ನ ವ್ಯವಸ್ಥಾಪಕ ಪಿ.ಎಸ್.ಪಾವಟಿ ಮನವಿ ಮಾಡಿದರು.
ಶಿಡ್ಲಘಟ್ಟದ ಕೆನರಾ ಬ್ಯಾಂಕ್ ಶಾಖೆ, ಟಿಪ್ಪು ವೆಲ್‌ಫೇರ್ ಸಂಸ್ಥೆ ಹಾಗೂ ಚಿಕ್ಕಬಳ್ಳಾಪುರದ ಅಮೂಲ್ಯ ಆರ್ಥಿಕ ಸಾಕ್ಷರತಾ ಕೇಂದ್ರದ ಸಹಯೋಗದಲ್ಲಿ ಶುಕ್ರವಾರ ತಾಲ್ಲೂಕಿನ ತಲದುಮ್ಮನಹಳ್ಳಿಯಲ್ಲಿ ಹಮ್ಮಿಕೊಂಡಿದ್ದ ಕೆನರಾ ರೈತ ಸಂಪರ್ಕ ಅಭಿಯಾನ ಹಾಗೂ ಆರ್ಥಿಕ ಸಾಕ್ಷರತಾ ಅರಿವು ಕಾರ್ಯಕ್ರಮವನ್ನುದ್ದೇಶಿಸಿ ಅವರು ಮಾತನಾಡಿದರು.
ಮುಂದಿನ ದಿನಗಳಲ್ಲಿ ಸರ್ಕಾರದಿಂದ ಸಿಗುವ ಸವಲತ್ತುಗಳು, ಸಬ್ಸಿಡಿಗಳನ್ನು ನೇರವಾಗಿ ಫಲಾನುಭವಿಯ ಖಾತೆಗೆ ಜಮಾ ಮಾಡುವುದರಿಂದ ಬ್ಯಾಂಕ್ ಖಾತೆ ಹೊಂದಿರಲೇಬೇಕು. ಖಾತೆ ಇಲ್ಲದಿದ್ದರೆ ಸವಲತ್ತಿನಿಂದ ವಂಚಿತರಾಗುತ್ತಾರೆ ಎಂದು ಹೇಳಿದರು.
ದೇಶದ ಉದ್ದಗಲಕ್ಕೂ ಸುಮಾರು ೬ ಲಕ್ಷ ಹಳ್ಳಿಗಳಿದ್ದು ಪ್ರತಿ ಹಳ್ಳಿಗೂ ತೆರಳಿ ಬ್ಯಾಂಕ್‌ನ ಸವಲತ್ತುಗಳ ಬಗ್ಗೆ ವಿವರಿಸಿ, ಪ್ರತಿಯೊಬ್ಬರಿಗೂ ವೈಯಕ್ತಿಕ ಬ್ಯಾಂಕ್ ಖಾತೆಯ ಅಗತ್ಯತೆ, ಅನಿವಾರ್ಯತೆ ಕುರಿತು ಮಾಹಿತಿ ನೀಡುವ ಜತೆಗೆ ಆರ್ಥಿಕ ಸಾಕ್ಷರತೆಯನ್ನು ನೀಡುವ ಕೆಲಸ ಬ್ಯಾಂಕ್‌ನಿಂದ ನಡೆಯುತ್ತಿದೆ. ಅದಕ್ಕಾಗಿ ಬ್ಯಾಂಕ್ ಜೂನ್ ೧ರಿಂದ ಸೆಪ್ಟೆಂಬರ್‌೩೦ರವರೆಗೂ ೪ ತಿಂಗಳ ಕಾಲ ಕೆನರಾ ರೈತ ಸಂಪರ್ಕ ಅಭಿಯಾನ ವಿಶಿಷ್ಟ ಕಾರ್ಯಕ್ರಮವೊಂದನ್ನು ರೂಪಿಸಿದ್ದು ನಾವು ನಮ್ಮ ವ್ಯಾಪ್ತಿಯಲ್ಲಿನ ಎಲ್ಲ ಹಳ್ಳಿಗಳಿಗೂ ತೆರಳಿ ಕಾರ್ಯಕ್ರಮದ ಉದ್ದೇಶವನ್ನು ರೈತರು ಹಾಗೂ ಮಹಿಳಾ ಸ್ವಸಹಾಯ ಸಂಘಗಳ ಸದಸ್ಯರಿಗೆ ಮನವರಿಕೆ ಮಾಡಿಕೊಡುತ್ತಿದ್ದೇವೆ ಎಂದು ವಿವರಿಸಿದರು.
ಶೂನ್ಯ ಮೊತ್ತದ ಖಾತೆ ತೆರೆಯುವುದು ಸೇರಿದಂತೆ ಬ್ಯಾಂಕ್‌ನಿಂದ ಎಲ್ಲ ವರ್ಗಗಳ ಜನರಿಗೂ ಸಿಗಬಹುದಾದ ಸೌಲಭ್ಯಗಳ ಬಗ್ಗೆ ಅವರು ಮಾಹಿತಿ ನೀಡಿ ಸದುಪಯೋಗಪಡಿಸಿಕೊಳ್ಳುವಂತೆ ಮನವಿ ಮಾಡಿದರು.
ಕೆನರಾ ಬ್ಯಾಂಕ್‌ನ ಶಿಡ್ಲಘಟ್ಟ ಶಾಖೆಯ ವ್ಯವಸ್ಥಾಪಕ ಗಿರೀಶ್, ಅಮೂಲ್ಯ ಆರ್ಥಿಕ ಸಾಕ್ಷರತಾ ಕೇಂದ್ರದ ಬಲಂಕರ್, ಟಿಪ್ಪು ವೆಲ್‌ಫೇರ್ ಸಂಸ್ಥೆಯ ಮುಸ್ತಾಕ್ ಅಹ್ಮದ್, ಮಮತ, ಕೆನರಾ ಬ್ಯಾಂಕ್‌ನ ಶಿವು, ಅಶೋಕ್, ಗ್ರಾಮದ ಮುಖಂಡರಾದ ರಾಮಚಂದ್ರಪ್ಪ, ಶಂಕರಪ್ಪ, ಬಚ್ಚೇಗೌಡ, ರವಿಕುಮಾರ್ ಮತ್ತಿತರರು ಈ ಸಂದರ್ಭದಲ್ಲಿ ಹಾಜರಿದ್ದರು. ತಲದುಮ್ಮನಹಳ್ಳಿ ಹಾಗೂ ಸುತ್ತ ಮುತ್ತಲ ಗ್ರಾಮಗಳ ರೈತರು, ಮಹಿಳಾ ಸ್ವ ಸಹಾಯ ಸಂಘಗಳ ಸದಸ್ಯರು ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು.

error: Content is protected !!