20.1 C
Sidlaghatta
Thursday, December 25, 2025
Home Blog Page 1040

ಗ್ರಾಮೀಣ ಪ್ರದೇಶದ ಅಂಗವಿಕಲ ಯುವಕ ಯುವತಿಯರಿಗೆ ತರಬೇತಿ ಕಾರ್ಯಕ್ರಮ

0

ತಾಲ್ಲೂಕಿನ ನಾಗಮಂಗಲ ಗ್ರಾಮ ಪಂಚಾಯಿತಿ ಹಾಗೂ ಎ.ಪಿ.ಡಿ ಸಂಸ್ಥೆಯ ವತಿಯಿಂದ ಹಾಲು ಉತ್ಪಾದಕರ ಸಹಕಾರ ಸಂಘದ ಕಚೇರಿ ಆವರಣದಲ್ಲಿ ಶನಿವಾರ ಗ್ರಾಮೀಣ ಪ್ರದೇಶದ ಅಂಗವಿಕಲ ಯುವಕ ಯುವತಿಯರಿಗೆ ತರಬೇತಿ ಮತ್ತು ಉದ್ಯೋಗ ಅವಕಾಶಗಳ ಬಗ್ಗೆ ಮಾಹಿತಿಯನ್ನು ನೀಡಲಾಯಿತು.
ದಿ ಅಸೋಸಿಯೇಷನ್‌ ಆಫ್‌ ಪೀಪಲ್‌ ವಿತ್‌ ಡಿಸೆಬಿಲಿಟಿ (ಎ.ಪಿ.ಡಿ) ಸಂಸ್ಥೆಯ ಮೂಲಕ 16 ರಿಂದ 30 ವರ್ಷದ ಅಂಗವಿಕಲರಿಗೆ ಇರುವ ಸೌಲಭ್ಯಗಳು, ತರಬೇತಿಗಳು ಮತ್ತು ಉದ್ಯೋಗ ಅವಕಾಶಗಳ ಕುರಿತು ಮಾಹಿತಿಯನ್ನು ತಿಳಿಸಲಾಯಿತು. ಉದ್ಯೋಗಾಕಾಂಕ್ಷಿಗಳಾದ ಅಂಗವಿಕಲರಿಗೆ ಶೈಕ್ಷಣಿಕ ವಿದ್ಯಾಭ್ಯಾಸದೊಂದಿಗೆ ವಿವಿಧ ಕೌಶಲ್ಯಗಳನ್ನು ಪಡೆಯುವ ಬಗ್ಗೆಯೂ ವಿವರಿಸಲಾಯಿತು.
ಕೈಗಾರಿಕಾ ತರಬೇತಿ, ಮಾಹಿತಿ ತಂತ್ರಜ್ಞಾನ ತರಬೇತಿ, ಕಚೇರಿ ನಿರ್ವಹಣೆ ತರಬೇತಿ, ಟೈಲರಿಂಗ್‌ ಮತ್ತು ಎಂಬ್ರಾಯಿಡರಿ ತರಬೇತಿ, ತೋಟಗಾರಿಕಾ ತರಬೇತಿ, ದೈಹಿಕ ವ್ಯಾಯಾಮ ತರಬೇತಿ ಮುಂತಾದವುಗಳನ್ನು ಪಡೆದುಕೊಳ್ಳುವುದಲ್ಲದೆ ಉದ್ಯೋಗವಕಾಶಗಳು ಮತ್ತು ಸರ್ಕಾರಿ ಸೌಲಭ್ಯಗಳ ಬಗ್ಗೆಯೂ ತಿಳಿಸಿಕೊಡಲಾಯಿತು.
ಈ ಸಂದರ್ಭದಲ್ಲಿ ಮಾತನಾಡಿದ ಎ.ಪಿ.ಡಿ ಸಂಸ್ಥೆಯ ಉದ್ಯೋಗ ಮತ್ತು ತರಬೇತಿ ವಿಭಾಗದ ಅಧಿಕಾರಿ ಮುನಿರೆಡ್ಡಿ, ‘ಇತ್ತೀಚಿನ ದಿನಗಳಲ್ಲಿ ಸಾಕಷ್ಟು ಉದ್ಯೋಗವಕಾಶಗಳಿವೆ. ಆದರೆ ಅವುಗಳನ್ನು ಹೊಂದಲು ಪೂರ್ವ ತಯಾರಿಯ ಅವಶ್ಯಕತೆ ಇರುತ್ತದೆ. ಉದ್ಯೋಗವನ್ನು ಪಡೆಯುವಲ್ಲಿ ಆಂಗ್ಲಭಾಷೆ ಹಾಗೂ ಕಂಪ್ಯೂಟರ್‌ ಜ್ಞಾನವು ಮುಖ್ಯವಾಗಿದೆ. ಕೌಶಲ್ಯಗಳನ್ನು ತರಬೇತಿಗಳ ಮೂಲಕ ಗಳಿಸಿಕೊಂಡು ಕೈಗಾರಿಕೆಗಳು, ಕಾಲ್‌ ಸೆಂಟರ್‌, ಗಾರ್ಮೆಂಟ್‌, ಮಾರ್ಕೆಟಿಂಗ್‌ ಮುಂತಾದ ಕಡೆ ಅವಕಾಶಗಳನ್ನು ಗಿಟ್ಟಿಸಿಕೊಳ್ಳಬಹುದಾಗಿದೆ. ಅಂಗವೈಕಲ್ಯತೆಯು ಮನಸ್ಸನ್ನು ಕಾಡದಂತೆ ಆತ್ಮಸ್ಥೈರ್ಯದಿಂದ ಮಾದರಿ ಬದುಕನ್ನು ನಡೆಸಿ‘ ಎಂದು ಹೇಳಿದರು.
ಗ್ರಾಮ ಪಂಚಾಯಿತಿ ಅಧ್ಯಕ್ಷೆ ರೂಪ ಶಿವಕುಮಾರ್‌, ಉಪಾಧ್ಯಕ್ಷ ಎನ್‌.ಡಿ.ನಾರಾಯಣಪ್ಪ, ಕಾರ್ಯದರ್ಶಿ ಗೋಪಿ, ಅಂಗನವಾಡಿ ಕಾರ್ಯಕರ್ತೆ ಎಸ್‌.ಭವ್ಯ, ಕನಕರತ್ನ, ದೇವರಾಜ್‌, ಎ.ಪಿ.ಡಿ ಸಂಸ್ಥೆಯ ಸವಿತಾ, ಕಮಲಾ, ಮಂಜುಳಾ ಮತ್ತಿತರರು ಈ ಸಂದರ್ಭದಲ್ಲಿ ಹಾಜರಿದ್ದರು.

ಮೊಬೈಲ್ ಕರೆ ಮೂಲಕ ಅಡುಗೆ ಗ್ಯಾಸ್ ಬುಕಿಂಗ್ ಸೇವೆ

0

ಶಿಡ್ಲಘಟ್ಟದ ನಾಗರೀಕರು ಇನ್ನು ಮುಂದೆ ಅಡುಗೆ ಗ್ಯಾಸ್ ಅನ್ನು Indane ಅವರ 24/7 IVRS ಸೇವೆಯ ಮೂಲಕ ಬುಕ್ ಮಾಡಬಹುದು.
ನೀವು Indane ರ ಪಡಿತರ ಗ್ಯಾಸ್ ಪಡೆಯುತ್ತಿದ್ದಲ್ಲಿ, ನಿಮ್ಮ ಮೊಬೈಲ್ ಮೂಲಕ 8970024365 ಗೆ ಕರೆ ಮಾಡಿ ರೀಫಿಲ್ ಬುಕ್ ಮಾಡಬಹುದು. ನಿಮ್ಮ ಮೊಬೈಲ್ ಸಂಖ್ಯೆಯನ್ನು ಈ ಸೇವೆಗೆ ಸೊಂದಾಯಿಕೊಳ್ಳುವ ಹಾಗೂ ರೀಫಿಲ್ ಬುಕಿಂಗ್ ಮಾಡುವ ಪ್ರಕ್ರಿಯೆಯ ಮಾಹಿತಿಯನ್ನು ಕರಪತ್ರದಲ್ಲಿ ಸೂಚಿಸಲಾಗಿದೆ.
gas

ಕವರ್ ಪೇಜ್ ಕಲಾವಿದ ಅಜಿತ್ ಕೌಂಡಿನ್ಯ

0

ಕಲೆಯು ನಾನಾ ವಿಧದಲ್ಲಿ ಅಭಿವ್ಯಕ್ತವಾಗುತ್ತದೆ. ಕಾಲಾಂತರಗಳಲ್ಲಿ ‘ಕಲೆ’ಯನ್ನು ಕುರಿತ ತಿಳುವಳಿಕೆ, ವ್ಯಾಖ್ಯಾನಗಳು ಬದಲಾಗುತ್ತಲೇ ಬಂದಂತೆ. ಅವುಗಳನ್ನು ರಚಿಸುವ ವಿಧಾನ-,ತಂತ್ರ- ಹಾಗೂ ಉದ್ದೇಶಗಳೂ ಬದಲಾಗುತ್ತಲೇ ಇವೆ. ಮುದ್ರಣ ಕ್ಷೇತ್ರದಲ್ಲಿ ತಾಂತ್ರಿಕತೆ ಮಿಳಿತಗೊಂಡಂತೆ, ಪುಸ್ತಕಗಳ ಮುಖಪುಟ ವಿನ್ಯಾಸವೂ ಒಂದು ಕಲಾ ಪ್ರಕಾರವಾಗಿ ರೂಪುಗೊಂಡಿದೆ.
ಮುಖಪುಟ ವಿನ್ಯಾಸವೆಂಬುದನ್ನು ಒಂದು ಪರಿಪೂರ್ಣ ಕಲೆಯೆಂದು ಹಲವು ವಿಮರ್ಶಕರು ಒಪ್ಪದಿದ್ದರೂ ಅದನ್ನೊಂದು ಕಲೆಯೆಂಬಂತೆ, ಚಿತ್ರಕಲೆಯಂತೆಯೇ ಇದೂ ಕೂಡ ಕಲಾಕೃತಿಯೆಂಬಂತೆ ಒಪ್ಪುವ ಹೆಚ್ಚಿನವರು ನಮ್ಮ ನಡುವಿದ್ದಾರೆ. ಮುಖಪುಟ ಕಲೆಯಲ್ಲಿ ಹೇರಳವಾದ ಪ್ರಯೋಗಗಳು ನಡೆಯುತ್ತಿವೆ. ಇರುವ ತಂತ್ರಜ್ಞಾನವನ್ನು ಸೂಕ್ತವಾಗಿ, ಸಮರ್ಪಕವಾಗಿ ಬಳಕೆ ಮಾಡಿಕೊಳ್ಳುವ ಪರಿಪಾಟ ಹೆಚ್ಚಿದೆ.
ಮುಖಪುಟ ವಿನ್ಯಾಸಗಳ ಮೂಲಕ ತನ್ನ ಸೃಜನಶೀಲತೆಯನ್ನು ಅಭಿವ್ಯಕ್ತಿಸುವ ಹವ್ಯಾಸವನ್ನು ರೂಪಿಸಿಕೊಂಡಿದ್ದಾರೆ ಚಿಕ್ಕಬಳ್ಳಾಪುರ ಜಿಲ್ಲೆ ಶಿಡ್ಲಘಟ್ಟದ ಹೌಸಿಂಗ್ ಬೋರ್ಡ್ನ ನಿವಾಸಿ ಅಜಿತ್ ಕೌಂಡಿನ್ಯ. ವನಸುಮ ಪ್ರಕಾಶನ, ಪ್ರಗತಿ ಗ್ರಾಫಿಕ್ಸ್, ಟೋಟಲ್ ಕನ್ನಡ, ಕನ್ನಡ ಸಾಹಿತ್ಯ ಸೇವಾ ಸದನ, ಗೋಮಿನಿ, ತುಂತುರು ಮುಂತಾದ ಪ್ರಕಾಶಕರ ಸುಮಾರು ಅರವತ್ತಕ್ಕೂ ಹೆಚ್ಚು ಪುಸ್ತಕಗಳಿಗೆ ಅವರು ಮುಖಪುಟ ವಿನ್ಯಾಸ ಮಾಡಿದ್ದಾರೆ. ಕೆಲವಾರು ಮಾಹಿತಿ ಕೈಪಿಡಿ, ಆಹ್ವಾನ ಪತ್ರಿಕೆ, ಲಾಂಚನ ಮುಂತಾದವುಗಳನ್ನು ಕೂಡ ರೂಪಿಸಿದ್ದಾರೆ.
ಎಂಜಿನಿರಿಂಗ್ ಪದವೀಧರರಾದ ಅಜಿತ್ಗೆ ಅಧ್ಯಾಪಕ ವೃತ್ತಿ ಅಚ್ಚುಮೆಚ್ಚು. ನಾಲ್ಕು ವರ್ಷ ಅಧ್ಯಾಪಕ ವೃತ್ತಿಯನ್ನು ಕೈಗೊಂಡಿದ್ದ ಅವರು ಈಗ ಎಂ.ಟೆಕ್ ಓದುತ್ತಿದ್ದಾರೆ. ಬಿಡುವಿನ ವೇಳೆಯಲ್ಲಿ ಕಂಪ್ಯೂಟರ್ನಲ್ಲಿ ಚಿತ್ರಕಲೆ ಹಾಗೂ ಮುಖಪುಟ ವಿನ್ಯಾಸಗಳನ್ನು ರಚಿಸುತ್ತಾರೆ.
’ನಾವೊಂದು ಸಮಾನ ಮನಸ್ಕರ ತಂಡ ಕಟ್ಟಿದ್ದು, ಲ್ಯಾಂಪ್ಸ್ ಎಂದು ಹೆಸರಿಸಿದ್ದೇವೆ. ಪ್ರವಾಸ ನಮ್ಮ ಪ್ರಮುಖ ಉದ್ದೇಶ. ನಮ್ಮ ತಂಡಕ್ಕೆ ಲೋಗೋ(ಲಾಂಚನ) ರಚಿಸಿಕೊಡಲು ಅಜಿತ್ರನ್ನು ಕೇಳಿದೆವು. ಅತ್ಯಂತ ಕಡಿಮೆ ಅವಧಿಯಲ್ಲಿ ಅದ್ಭುತವಾಗಿ ಹಾಗೂ ವಿನೂತನವಾಗಿ ಲೋಗೋ ರಚಿಸಿಕೊಟ್ಟಿದ್ದಾರೆ. ನಮ್ಮ ಉದ್ದೇಶವನ್ನು ಸಮರ್ಥವಾಗಿ ಅದರಲ್ಲಿ ಧ್ವನಿಸಿದ್ದಾರೆ’ ಎನ್ನುತ್ತಾರೆ ದೇಶನಾರಾಯಣ ರಮೇಶ್ಬಾಬು.
’ಮೊದಲಿಂದಲೂ ನನಗೆ ಚಿತ್ರಕಲೆಯಲ್ಲಿ ಒಲವಿತ್ತು. ಕಂಪ್ಯೂಟರ್ ಮತ್ತು ಅಂತರ್ಜಾಲ ಬಂದನಂತರ ಕಲಾವಿದರಿಗೆ ಹೊಸ ಸಾಧ್ಯತೆಗಳು ಸಿಕ್ಕಿವೆ. ಮುಖಪುಟ ವಿನ್ಯಾಸ ಮಾಡುವುದು –ಕೂಡ ಅತ್ಯಂತ ಸೃಜನಶೀಲತೆಯಿಂದ ಕೂಡಿರುತ್ತದೆ ಎಂಬುದನ್ನು ಮುಖಪುಟ ಕಲಾವಿದ ಅಪಾರ ಅವರಿಂದ ಕಂಡುಕೊಂಡೆ. ಅವರ ಪ್ರೇರಣೆಯಿಂದ ನಾನೂ ಪ್ರಯತ್ನಿಸಿದೆ. ಮುಖಪುಟ ರಚಿಸುವಾಗ ಹಲವಾರು ಸವಾಲುಗಳಿರುತ್ತವೆ. ಆಕರ್ಷಣೆ ಮತ್ತು ಅಭಿವ್ಯಕ್ತಿ ನಡುವೆ ಜಗ್ಗಾಟವಂತೂ ಇದ್ದೇ ಇದೆ. ಓದುಗ ಖರೀದಿಸಲು ಆಕರ್ಷಕವಾಗಿರುವಂತೆಯೇ ಪುಸ್ತಕದ ಆಶಯವನ್ನೂ ಅದು ಬಿಂಬಿಸಬೇಕು. ಆರ್ಥಿಕವಾಗಿ ಈ ಕಲೆಯ ಮೇಲೆ ಅವಲಂಭಿಸಿಲ್ಲ. ಇದು ಕೇವಲ ಹವ್ಯಾಸವಾಗಷ್ಟೇ ಇರುವುದರಿಂದ ನನಗೆ ಸಾಕಷ್ಟು ನೆಮ್ಮದಿ ಹಾಗೂ ಸಂತಸ ಸಿಗುತ್ತಿದೆ’ ಎನ್ನುತ್ತಾರೆ ಅಜಿತ್ ಕೌಂಡಿನ್ಯ.
’ಪ್ರಸಿದ್ಧ ತೆಲುಗು ಸಿನಿಮಾ ನಿರ್ದೇಶಕ ಹಾಗೂ ಚಿತ್ರಕಾರ ಬಾಪು ಅವರ ಚಿತ್ರವನ್ನು ಬಳಸಿ ಸಂತೇಕಲ್ಲಹಳ್ಳಿಯ ಲಕ್ಷ್ಮೀನರಸಿಂಹ ಶಾಸ್ತ್ರಿಗಳ ಪುಸ್ತಕದ ಮುಖಪುಟ ರೂಪಿಸಿದ್ದೆ. ಬಾಪು ಅದನ್ನು ಮೆಚ್ಚಿ ಒಳ್ಳೆಯ ಮಾತುಗಳನ್ನಾಡಿದರು. ನನ್ನ ವಿದ್ಯಾರ್ಥಿನಿಯೊಬ್ಬರು ರಚಿಸಿದ್ದ ಚಿತ್ರಕಲೆ ಬಳಸಿ ’ಅಜ್ಜಿ ಹೇಳಿದ ಕಥೆಗಳು’ ಪುಸ್ತಕಕ್ಕೆ ಮುಖಪುಟ ರಚಿಸಿದ್ದೆ. ಆ ಪುಸ್ತಕಗಳನ್ನು ಪಡೆದು ಅದರಲ್ಲಿ ತನ್ನ ಹೆಸರನ್ನು ಕಂಡು ನನ್ನ ವಿದ್ಯಾರ್ಥಿನಿ ಸಂತಸಪಟ್ಟಿದ್ದರು. ಅನಂತ್ನಾಗ್ ಬರೆದ ’ನನ್ನ ತಮ್ಮ ಶಂಕರ’, ಡಾ.ಕೃಷ್ಣಾನಂದ ಕಾಮತರ ಪುಸ್ತಕಗಳು ಮುಂತಾದವುಗಳ ಬಗ್ಗೆ ಬಂದ ಪ್ರಶಂಸೆಗಳು ನನ್ನ ಕ್ರಿಯಾಶೀಲತೆಯನ್ನು ಹೆಚ್ಚಿಸಿವೆ. ಓದು, ಕ್ಯಾಮೆರಾ ಮತ್ತು ತಿರುಗಾಟ ಇದಕ್ಕೆ ಪೂರಕವಾಗಿದೆ’ ಎಂದು ಅವರು ಹೇಳಿದರು.

ವಿಶಿಷ್ಟ ಕೃಷಿ ಪ್ರಯೋಗದ ರೂವಾರಿ ಹಿತ್ತಲಹಳ್ಳಿಯ ಎಚ್.ಜಿ.ಗೋಪಾಲಗೌಡ

0

ಹವಾಮಾನ ಮತ್ತು ಪರಿಸರಕ್ಕೆ ಅನುಗುಣವಾಗಿ ಕೃಷಿ ಚಟುವಟಿಕೆ ಕೈಗೊಳ್ಳಬೇಕು. ವಿಜ್ಞಾನಿಗಳ ಹಾಗೆ ಚಿಂತನೆ ನಡೆಸಿ, ಉತ್ತಮ ಬೆಳೆ ಬೆಳೆಯಬೇಕು ಎಂದು ಮೇಲಿಂದ ಮೇಲೆ ರೈತರಿಗೆ ಸಲಹೆ ನೀಡಲಾಗುತ್ತದೆ. ಕೆಲ ಸಂದರ್ಭಗಳಲ್ಲಿ ಸರ್ಕಾರದಿಂದ ಪ್ರೋತ್ಸಾಹ ಕೂಡ ನೀಡಲಾಗುತ್ತದೆ. ಆದರೆ ಇದ್ಯಾವುದರ ಮೇಲೆಯೂ ಅವಲಂಬಿತರಾಗದೇ ತಾಲ್ಲೂಕಿನ ರೈತರೊಬ್ಬರು ವಿಶಿಷ್ಟ ರೀತಿಯ ಪ್ರಯೋಗ ಕೈಗೊಂಡಿದ್ದಾರೆ.
ನಮ್ಮ ತಾಲ್ಲೂಕಿನ ಹಿತ್ತಲಹಳ್ಳಿಯ ಕೃಷಿಕ ಎಚ್.ಜಿ.ಗೋಪಾಲಗೌಡ ಅವರು ಕೇವಲ ಮಳೆಯನ್ನೇ ನಂಬಿ ತಮ್ಮ ಮೂರೂವರೆ ಎಕರೆ ಜಮೀನಿನಲ್ಲಿ ಮಿಶ್ರ ಬೆಳೆ ಬೆಳೆದು ಯಶಸ್ವಿಯಾಗಿದ್ದಾರೆ. ಮಾವು, ರಾಗಿ, ಕಡಲೆಕಾಯಿ, ಹಿಪ್ಪುನೇರಳೆ, ಅವರೆ, ಬೆಂಡೆ, ಹಲಸಂದೆ, ಸಾಸಿವೆ, ತೊಗರಿ, ಚೆಂಡುಹೂ ಮತ್ತು ಬದುಗಳಲ್ಲಿ ಸಿಲ್ವರ್ ಗಿಡಗಳನ್ನು ಬೆಳೆದಿದ್ದಾರೆ. ಗುಂಡಿಗಳಲ್ಲಿ ಕೃಷಿ ತ್ಯಾಜ್ಯವನ್ನು ತುಂಬಿ, ಸಾವಯವ ಗೊಬ್ಬರ ಬಳಸಿ ಬೆಳೆ ಬೆಳೆಯುತ್ತಿದ್ದಾರೆ.
“ಐದು ವರ್ಷಗಳ ಹಿಂದೆ ಈ ಜಮೀನಿನಲ್ಲಿ ನೀಲಗಿರಿ ಮರಗಳಿದ್ದವು. ಅದರಿಂದ ಕಡಿಮೆಆದಾಯ ಬರುತ್ತಿತ್ತು. ಹೀಗಾಗಿ ಎರಡು ವರ್ಷಗಳ ಹಿಂದೆ ಮಿಶ್ರ ಬೆಳೆಯ ಪ್ರಯೋಗ ಕೈಗೊಂಡೆ. ಮೊದಲ ವರ್ಷ ಉತ್ತಮ ಫಲ ಸಿಗಲಿಲ್ಲ. ಆದರೆ ಕಳೆದ ವರ್ಷ 40 ಕ್ವಿಂಟಾಲ್ ರಾಗಿ, ನಾಲ್ಕು ರೇಷ್ಮೆ ಬೆಳೆಗಾಗುವಷ್ಟು ಹಿಪ್ಪುನೇರಳೆಸೊಪ್ಪು, 2 ಚೀಲ ಕಡಲೆಕಾಯಿ, ಒಂದು ಚೀಲ ಅವರೆಕಾಯಿ, 2 ತಿಂಗಳ ಕಾಲ ಮನೆ ಬಳಕೆಗಾಗುವಷ್ಟು ತರಕಾರಿ ಬೆಳೆದೆ. ಜಮೀನಿನ ಫಲವತ್ತತೆಗೆ ರೇಷ್ಮೆ ತ್ಯಾಜ್ಯ, ಕುರಿ ತ್ಯಾಜ್ಯ, ಸಗಣಿ, ಗಂಜಲ, ಬಯೋಗ್ಯಾಸ್ ಸ್ಲರಿ ಬಳಕೆ ಮಾಡಿರುವೆ. ಆದಷ್ಟೂ ಸಾಗುವಳಿ ವೆಚ್ಚ ಕಡಿಮೆ ಮಾಡುವುದರಿಂದ ಆದಾಯ ಹೆಚ್ಚುತ್ತದೆ” ಎಂದು ಗೋಪಾಲಗೌಡ ತಮ್ಮ ಅನುಭವ ಹಂಚಿಕೊಳ್ಳುತ್ತಾರೆ.
“ಜಮೀನಿನ ಸುತ್ತ 3 ಅಡಿ ಆಳ ಮತ್ತು ಅಗಲದ ಗುಣಿ ಮಾಡಿರುವುದರಿಂದ ದನಗಳ ಕಾಟವಿಲ್ಲ ಮತ್ತು ಮಳೆ ನೀರು ಇಂಗುತ್ತದೆ. ನಮ್ಮ ಜಮೀನಿನಲ್ಲಿ ಬಿದ್ದ ಮಳೆನೀರು ಒಂದು ತೊಟ್ಟೂ ಪೋಲಾಗದಂತೆ ಜಮೀನಿನ ಏರು ತಗ್ಗನ್ನು ಅನುಸರಿಸಿ ಮಧ್ಯೆ ಮಧ್ಯೆ ಗುಣಿ ಮಾಡಿದ್ದೇವೆ. ಇದರಿಂದಾಗಿ ಜಮೀನಿನ ಪಕ್ಕದಲ್ಲೇ ನೀಲಗಿರಿ ತೋಪಿದ್ದರೂ ಜಮೀನಿಗೆ ತೊಂದರೆಯಾಗಿಲ್ಲ. ಇದಲ್ಲದೆ ಜಮೀನಿನ ಒಂದು ಭಾಗದಲ್ಲಿ 25 ಮೀಟರ್ ಉದ್ದ ಅಗಲ ಮತ್ತು 4 ಮೀಟರ್ ಆಳದ ಕೃಷಿಹೊಂಡ ನಿರ್ಮಿಸಿದ್ದೇವೆ. ಪಕ್ಕದಲ್ಲಿ ಕಾಲುವೆಯಿದ್ದು ಮಳೆ ನೀರು ಹರಿದು ಹೋಗುವಾಗ ಹೊಂಡದಲ್ಲಿ ಬಂದು ಇಂಗುತ್ತದೆ” ಎಂದು ಅವರು ನೀರಿನ ಸದ್ಭಕೆಯ ತಂತ್ರವನ್ನು ವಿವರಿಸುತ್ತಾರೆ.
“ಗೋಪಾಲಗೌಡರು ಕಡಿಮೆ ನೀರು ಬಳಸಿ ಸಾವಯವ ಪದ್ಧತಿಯಲ್ಲಿ ಉತ್ತಮ ಹಿಪ್ಪುನೇರಳೆ ಸೊಪ್ಪನ್ನು ಬೆಳೆಯುತ್ತಾರೆ. ಗುಣಮಟ್ಟದ ರೇಷ್ಮೆ ಗೂಡನ್ನೂ ಬೆಳೆಯುತ್ತಾರೆ. ಮಿಶ್ರ ಬೆಳೆ, ರಾಂಬುಲೆಟ್ ಕುರಿ ಸಾಕಣೆ, ಕಡಿಮೆ ವೆಚ್ಚ ಮಾಡಿ ಹೆಚ್ಚು ಇಳುವರಿ ಪಡೆಯುವ ಇವರ ಮಾದರಿ ವಿಧಾನ ಹಾಗೂ ಸಾಧನೆ ಗುರುತಿಸಿ ರಾಜ್ಯ ಸರ್ಕಾರ ಕಳೆದ ವರ್ಷ ಕೃಷಿ ಪಂಡಿತ ಪ್ರಶಸ್ತಿ ನೀಡಿ ಗೌರವಿಸಿದೆ. ಚೀನಾ ಮತ್ತು ಹಾಂಕಾಂಗ್ ದೇಶಗಳು ಮತ್ತು ವಿವಿಧ ರಾಜ್ಯಗಳಿಗೆ ಭೇಟಿ ನೀಡಿ ಅಲ್ಲಿನ ಕೃಷಿ ಪದ್ಧತಿಯನ್ನು ಅಧ್ಯಯನ ಮಾಡಿದ್ದಾರೆ. ಸಿರಿ ರೈತಕೂಟದ ಅಧ್ಯಕ್ಶರಾಗಿ ಇತರ ರೈತರಿಗೆ ಮಾರ್ಗದರ್ಶನ ಮಾಡುತ್ತಿದ್ದಾರೆ. ಇಂಥಹ ರೈತರಿರುವುದು ಜಿಲ್ಲೆಗೇ ಹೆಮ್ಮೆ” ಎಂದು ಜಿಲ್ಲಾ ತೋಟಗಾರಿಕಾ ಇಲಾಖೆ ಉಪನಿರ್ದೇಶಕ ಶಿವರಾಂ ಮೆಚ್ಚುಗೆ ವ್ಯಕ್ತಪಡಿಸುತ್ತಾರೆ.

ಎ.ಎಂ.ಮುನೇಗೌಡರ 'ಗ್ರಾಮೋದ್ಧಾರವಾಗುವುದೆಂದು' ಪುಸ್ತಕದ ಡಿಜಿಟಲ್ ಆವೃತ್ತಿ

0

ಈ ಹಿಂದೆ ನಿಮಗೆ ಆನೂರು ಎ.ಎಂ.ಮುನೇಗೌಡರ ಪರಿಚಯ ಮಾಡಿಸಿದ್ದೇವೆ (ಲೇಖನ ಇಲ್ಲಿ ಓದಬಹುದು). ಅವರು ಬರೆದು ಪ್ರಕಟಿಸಿದ ಪುಸ್ತಕಗಳಲ್ಲೊಂದಾದ ‘ಗ್ರಾಮೋದ್ಧಾರವಾಗುವುದೆಂದು’ ಪುಸ್ತಕದ ಬಗ್ಗೆ ನಾವು ಲೇಖನದಲ್ಲಿ ತಿಳಿಸಿಕೊಟ್ಟಿರುತ್ತೇವೆ. ಕಾಲಮಾನದ ಸೀಮಿತವನ್ನು ದಾಟಿ ಎಲ್ಲಾ ಕಾಲಕ್ಕೂ ಮಾರ್ಗದರ್ಶಕವಾಗಬಲ್ಲ ಈ ಪುಸ್ತಕದ ಡಿಜಿಟಲ್ ಆವೃತ್ತಿಯನ್ನು ನಿಮಗಾಗಿ ಅರ್ಪಿಸುತ್ತಿದ್ದೇವೆ. ಓದಿ ನಿಮ್ಮ ಅನಿಸಿಕೆಗಳನ್ನು ಹಂಚಿಕೊಳ್ಳಿ.
ಗ್ರಾಮೋದ್ಧಾರವಾಗುವುದೆಂದು ಪುಸ್ತಕ ಇಲ್ಲಿ ಓದಬಹುದು

ಮೇಲೂರಿನ 'ಹಸಿರು' ಪಂಚಾಯಿತಿ ಕಚೇರಿ

0

‘ಆಡಳಿತದ ಕೇಂದ್ರ ಸ್ಥಾನ ಇಡೀ ಕ್ಷೇತ್ರವನ್ನೇ ಪ್ರತಿನಿಧಿಸುತ್ತದೆ’ ಎಂಬ ಮಾತಿಗೆ ಪೂರಕವಾಗಿ ಮಾದರಿಯಾಗಿದೆ ತಾಲ್ಲೂಕಿನ ಮೇಲೂರು ಪಂಚಾಯಿತಿ ಕಚೇರಿ.
ಹಸಿರು ಗಿಡಮರಗಳು, ಹೂವರಳಿ ನಿಂತಿರುವ ಹೂಗಿಡಗಳು, ಒಪ್ಪವಾಗಿ ಕತ್ತರಿಸಿ ಆಕಾರವನ್ನು ನೀಡಲಾಗಿರುವ ಬೇಲಿ ಗಿಡಗಳು, ಮೆತ್ತನೆಯ ಹುಲ್ಲುಹಾಸು, ಇವುಗಳೆಲ್ಲದರ ನಡುವೆ ಕೆಂಪು ಬಣ್ಣದ ಕಟ್ಟಡ ಆಕರ್ಷಕವಾಗಿ ಕಾಣಿಸುತ್ತದೆ. ಆವರಣದಲ್ಲಿನ ಹಸಿರು ವಾತಾವರಣ ಮತ್ತು ಸೌರ ವಿದ್ಯುತ್ ದೀಪಗಳು ಪರಿಸರ ಪ್ರೇಮವನ್ನು ವ್ಯಕ್ತಪಡಿಸುತ್ತವೆ.
ಗ್ರಾಮ ಪಂಚಾಯಿತಿ ಕಚೇರಿ, ಗ್ರಾಮ ಲೆಕ್ಕಾಧಿಕಾರಿಗಳ ಕಚೇರಿ, ಅಂಗನವಾಡಿ ಮತ್ತು ಗ್ರಂಥಾಲಯ ಒಂದೇ ಆವರಣದೊಳಗೆ ಗಿಡಮರಗಳ ನಡುವೆ ಇವೆ. ಪಂಚಾಯಿತಿ ಕಚೇರಿಯೊಳಗೆ ಗಣಕ ಕೊಠಡಿ, ಅಧಿಕಾರಿಗಳು ಮತ್ತು ಅಧ್ಯಕ್ಷರ ಕೊಠಡಿ ಹಾಗೂ ಸಭೆ ನಡೆಸುವ ವಿಶಾಲ ಕೊಠಡಿಯಿದೆ.
‘ಎಚ್.ಎಂ.ಕೃಷ್ಣಮೂರ್ತಿ ಅವರು ಪ್ರಧಾನರಾಗಿದ್ದ ಕಾಲದಲ್ಲಿ ಡಿಸೆಂಬರ್ ೧೯೯೦ ರಲ್ಲಿ ಪಂಚಾಯಿತಿ ಕಟ್ಟಡದ ಶಂಕುಸ್ಥಾಪನೆಯನ್ನು ಮಾಡಿ ಕಟ್ಟಡವನ್ನು ಕಟ್ಟಲಾಗಿತ್ತು. ಹಿಂದೆ ಹತ್ತಿರದ್ಲಲಿ ಕುಂಟೆ ಇದುದರಿಂದಾಗಿ ಕಟ್ಟಡ ಬಿರುಕು ಬಿಟ್ಟು ಶಿಥಿಲವಾಗತೊಡಗಿತ್ತು. ೨೦೦೯ರಲ್ಲಿ ನಾನು ಗ್ರಾಮ ಪಂಚಾಯಿತಿ ಅಧ್ಯಕ್ಷನಾದ ಅವಧಿಯಲ್ಲಿ ನವೀಕರಣವನ್ನು ಮಾಡಲಾಯಿತು. ಗ್ರಾಮದ ರಾಜ್‌ಕುಮಾರ್ ಸಂಘದ ಸದಸ್ಯರು ಕಟ್ಟಡಕ್ಕೆ ಟೆರ್ರಾಕೋಟ ಬಣ್ಣವೇ ಇರಬೇಕು ಎಂದು ಕಟ್ಟಡದ ಅಂದ ಚಂದಕ್ಕಾಗಿ ಬಣ್ಣಗಳ ಆಯ್ಕೆಯನ್ನು ಮಾಡಿದರು. ಹಸಿರು ಪರಿಸರವನ್ನು ನಿರ್ಮಿಸಲು ಪಂಚಾಯಿತಿ ಸದಸ್ಯರು ಮತ್ತು ಗ್ರಾಮಸ್ಥರು ನೆರವಾದರು. ಪಂಚಾಯಿತಿಗೆ ನಿಶ್ಚಿತ ವರಮಾನವಿದ್ದರೆ ಮಾತ್ರ ಇವೆಲ್ಲವುಗಳ ನಿರ್ವಹಣೆ ಸಾಧ್ಯವೆಂದು ಐದು ಅಂಗಡಿಗಳನ್ನು ಕಟ್ಟಿದೆವು. ಈಗ ಅದರಿಂದ ತಿಂಗಳಿಗೆ ರೂ.೭,೫೦೦ ಬಾಡಿಗೆ ಬರುತ್ತಿದೆ. ರುದ್ರಭೂಮಿಯಲ್ಲಿ ಅರ್ಧ ಎಕರೆಯಷ್ಟು ಮುಳ್ಳು ಹಾಗೂ ಕಳ್ಳಿಗಿಡ ಆವರಿಸಿತ್ತು. ಅವನ್ನು ಸ್ವಚ್ಛಗೊಳಿಸಿ ೪೦ ಸಸಿಗಳನ್ನು ನೆಡಿಸಿದ್ದೆವು. ಈಗ ಅವು ಮರಗಳಾಗಿವೆ. ಅಲ್ಲಿ ಕೈಕಾಲು ತೊಳೆಯಲು ನೀರಿನ ಸಿಸ್ಟರ್ನ್ ಕೂಡ ಇರಿಸಿದ್ದೇವೆ. ನಮ್ಮ ಪಂಚಾಯಿತಿಯಲ್ಲಿ ಕಸ ವಿಲೇವಾರಿಗೆಂದೇ ಟಿಲ್ಲರನ್ನು ಹೊಂದ್ದಿದೇವೆ’ ಎಂದು ಮಾಜಿ ಗ್ರಾಮ ಪಂಚಾಯಿತಿ ಅಧ್ಯಕ್ಷ ಹಾಗೂ ಹಾಲಿ ಸದಸ್ಯ ಕೆ.ಮಂಜುನಾಥ್ ತಿಳಿಸಿದರು.

ಶಿಡ್ಲಘಟ್ಟ ತಾಲ್ಲೂಕಿನ ಮೇಲೂರಿನಲ್ಲಿ ಹಸುರಿನ ಮರಗಿಡಗಳ ನಡುವೆ ಟೆರ್ರಾಕೋಟಾ ಕೆಂಪು ಬಣ್ಣದ ಆಕರ್ಷಕ ಗ್ರಾಮ ಪಂಚಾಯಿತಿಯ ಕಟ್ಟಡದ ಪಕ್ಷಿನೋಟ
ಶಿಡ್ಲಘಟ್ಟ ತಾಲ್ಲೂಕಿನ ಮೇಲೂರಿನಲ್ಲಿ ಹಸುರಿನ ಮರಗಿಡಗಳ ನಡುವೆ ಟೆರ್ರಾಕೋಟಾ ಕೆಂಪು ಬಣ್ಣದ ಆಕರ್ಷಕ ಗ್ರಾಮ ಪಂಚಾಯಿತಿಯ ಕಟ್ಟಡದ ಪಕ್ಷಿನೋಟ

ಗ್ರಾಮ ಪಂಚಾಯಿತಿ ಕಟ್ಟಡದ ಆವರಣದಲ್ಲಿರುವ ಹಸಿರು ಉದ್ಯಾನವನ ಮತ್ತು ಹೂಗಿಡಗಳು.
ಗ್ರಾಮ ಪಂಚಾಯಿತಿ ಕಟ್ಟಡದ ಆವರಣದಲ್ಲಿರುವ ಹಸಿರು ಉದ್ಯಾನವನ ಮತ್ತು ಹೂಗಿಡಗಳು.

ಗ್ರಾಮ ಪಂಚಾಯಿತಿ ಕಟ್ಟಡ ದ್ವಾರಪಾಲಕರಂತೆ ನಿಂತಿರುವ ಆಕರ್ಷಕ ಗಿಡಗಳು.
ಗ್ರಾಮ ಪಂಚಾಯಿತಿ ಕಟ್ಟಡ ದ್ವಾರಪಾಲಕರಂತೆ ನಿಂತಿರುವ ಆಕರ್ಷಕ ಗಿಡಗಳು.
ಹಿಂದಿನ ಗ್ರಾಮ ಪಂಚಾಯಿತಿ ಅಧ್ಯಕ್ಷ ಆರ್.ಎ.ಉಮೇಶ್ ಅವರ ಅವಧಿಯಲ್ಲಿ ಪ್ಲಾಸ್ಟಿಕ್ ರಹಿತ ಪಂಚಾಯಿತಿಯನ್ನಾಗಿಸುವ ನಿಟ್ಟಿನಲ್ಲಿ ಪ್ಲಾಸ್ಟಿಕ್ ನಿಷೇಧಿಸಿದೆವು. ವಿದ್ಯುತ್ ಉಳಿತಾಯ ಮಾಡಲು ಮೊದಲಿದ್ದ ಟ್ಯೂಬ್‌ಲೈಟುಗಳ ಬದಲಿಗೆ ಈಗ ಸಿಎಫ್ಎಲ್ ಬಲ್ಬ್‌ಗಳನ್ನು ಅಳವಡಿಸುತ್ತಿದ್ದೇವೆ. ಮೇಲೂರಿನ ಆಸ್ಪತ್ರೆ ಆವರಣದಲ್ಲಿರುವ ಸ್ಥಳದಲ್ಲಿ ಗಿಡಗಳನ್ನು ನೆಡಲು ಯೋಜನೆ ಹಮ್ಮಿಕೊಂಡಿದ್ದೇವೆ. ನಮ್ಮ ಗ್ರಾಮದಿಂದ ಚೌಡಸಂದ್ರದವರೆಗೂ ರಸ್ತೆಬದಿ ತಂಪಾದ ನೆರಳು ನೀಡುವ ಮರಗಳಿವೆ. ಅದೇ ಮಾದರಿಯಲ್ಲಿ ಗಂಗನಹಳ್ಳಿಗೆ ಹೋಗುವ ರಸ್ತೆಯ ಎರಡು ಬದಿಗಳಲ್ಲಿ ಗಿಡ ನೆಡುವ ಕಾರ್ಯಕ್ರಮವನ್ನೂ ರೂಪಿಸಿದ್ದೇವೆ’ ಎಂದು ಗ್ರಾಮ ಪಂಚಾಯಿತಿ ಮಾಜಿ ಅಧ್ಯಕ್ಷ ಕೆ.ಎಸ್.ಮಂಜುನಾಥ್ ಹೇಳಿದರು.

ತಾಲ್ಲೂಕಿನಲ್ಲಿ ಬಿದ್ದ ಆಲಿಕಲ್ಲಿನ ಮಳೆಯಿಂದಾಗಿ ಸುಮಾರು ಐದು ಕೋಟಿ ರೂ ಬೆಳೆ ನಷ್ಟ

0

ತಾಲ್ಲೂಕಿನಲ್ಲಿ ಕಳೆದ ಒಂದು ವಾರದಿಂದ ಬಿದ್ದ ಆಲಿಕಲ್ಲಿನ ಮಳೆಯಿಂದಾಗಿ ಸುಮಾರು ಐದು ಕೋಟಿ ರೂಗಳಷ್ಟು ಬೆಳೆ ನಷ್ಟವಾಗಿದೆ ಎಂದು ಅಂದಾಜಿಸಲಾಗಿದೆ.
ತಾಲ್ಲೂಕಿನ ಆನೂರು, ಕೊತ್ತನೂರು, ಮಳಮಾಚನಹಳ್ಳಿ ಮತ್ತು ತುಮ್ಮನಹಳ್ಳಿ ಪಂಚಾಯಿತಿ ವ್ಯಾಪ್ತಿಯಲ್ಲಿ ಆಲಿಕಲ್ಲಿನ ಮಳೆ ಹಾಗೂ ಬಿರುಗಾಳಿಯಿಂದಾಗಿ ಸುಮಾರು ಎರಡೂವರೆ ಕೋಟಿ ರೂಗಳಿಗೂ ಹೆಚ್ಚಿನ ಬೆಳೆ ನಷ್ಟವುಂಟಾಗಿದೆ.
ತಾಲ್ಲುಕಿನ ಹುಜಗೂರು, ತುಮ್ಮನಹಳ್ಳಿ, ಆನೂರು, ಗೊರಮಡುಗು, ಬಸವಾಪಟ್ಟಣ ಮುಂತಾದ ಗ್ರಾಮಗಳಲ್ಲಿ ದ್ರಾಕ್ಷಿ, ಟೊಮೇಟೊ, ಬೀನ್ಸ್‌, ಹಿಪ್ಪುನೇರಳೆಸೊಪ್ಪು, ಸೌತೆಕಾಯಿ, ದಾಳಿಂಬೆ, ಸೀಬೆ, ಮಾವು, ಗೋಡಂಬಿ ಸೇರಿದಂತೆ ಹಲವಾರು ಬೆಳೆಗಳು ನಾಶವಾಗಿವೆ.
‘ಆರು ಎಕರೆ ದ್ರಾಕ್ಷಿ ಮತ್ತು ಮೂರು ಎಕರೆ ದಾಳಿಂಬೆ ನಿನ್ನೆ ಸಂಜೆ ಏಳುಗಂಟೆಗೆ ಬಿದ್ದ ಆಲಿಕಲ್ಲಿನ ಮಳೆಯಿಂದಾಗಿ ಸಂಪೂರ್ಣವಾಗಿ ನಾಶವಾಗಿದೆ. ದ್ರಾಕ್ಷಿ ಉತ್ತಮ ಫಸಲು ಬಿಟ್ಟಿದ್ದು ಇನ್ನು ಒಂದೂವರೆ ತಿಂಗಳಿಗೆ ಕಟಾವು ಮಾಡುವ ಹಂತದಲ್ಲಿತ್ತು. ಇದರಲ್ಲಿ ಸುಮಾರು 25 ಲಕ್ಷ ರೂ ನಷ್ಟವುಂಟಾಗಿದೆ. ದಾಳಿಂಬೆ ನಮ್ಮಲ್ಲಿ ಬೆಳೆಯುವುದೇ ಕಷ್ಟ ಅಂಥದ್ದನ್ನು ಬೆಳೆದರೂ ಪ್ರಕೃತಿ ನಮಗೆ ಸಹಕರಿಸದೇ ಅಪಾರ ನಷ್ಟವುಂಟಾಗಿದೆ’ ಎನ್ನುತ್ತಾರೆ ಹುಜಗೂರು ರಾಮಣ್ಣ.
ಹುಜಗೂರಿನ ರಾಮಣ್ಣ ಅವರ ಆರು ಎಕರೆ ದ್ರಾಕ್ಷಿ, ಮೂರು ಎಕರೆ ದಾಳಿಂಬೆ ತೋಟ, ಮುನಿನಾರಾಯಣಪ್ಪ ಅವರ ಒಂದೂವರೆ ಎಕರೆ ದ್ರಾಕ್ಷಿ, ಬೆಂಗಳೂರು ಬ್ಲೂ ಎರಡು ಎಕರೆ, ಮಾವು ಎರಡು ಎಕರೆ, ಕೃಷ್ಣಾರೆಡ್ಡಿ ಅವರ ಎರಡು ಎಕರೆ ಸೌತೆಕಾಯಿ, ಎಚ್‌.ಎಂ.ಕೃಷ್ಣಾರೆಡ್ಡಿ ಅವರ ಎರಡು ಎಕರೆ ಹಿಪ್ಪುನೇರಳೆ, ತುಮ್ಮನಹಳ್ಳಿಯ ನಾರಾಯಣಸ್ವಾಮಿ ಅವರ ಮೂರು ಎಕರೆ ದ್ರಾಕ್ಷಿ ಹಾಗೂ ಪ್ಲಾಸ್ಟಿಕ್‌ ಪೇಪರ್‌ ಹೊದಿಕೆಯ ಶೆಡ್‌, ಗೊರಮಡುಗು ಕೆಂಪರೆಡ್ಡಿ ಅವರ ಒಂದೂವರೆ ಎಕರೆ ದ್ರಾಕ್ಷಿ, ನಾಗೇಶ್‌ ಎರಡು ಎಕರೆ ದ್ರಾಕ್ಷಿ, ಮಂಜುನಾಥ್‌ ಅವರ ಮೂರು ಎಕರೆ ಟೊಮೆಟೋ, ಜಿ.ಆರ್‌.ರಾಜಣ್ಣ ಅವರ ಐದು ಎಕರೆ ಬಾಳೆ ತೋಟ, ಸೀಗೆಹಳ್ಳಿಯ ಈರಣ್ಣ ಅವರ ಏಳು ಎಕರೆ ಹಿಪ್ಪುನೇರಳೆ ಸೊಪ್ಪಿನ ತೋಟ, ಆನೂರು ಗ್ರಾಮದ ಸುರೇಶ್‌ ಅವರ ಒಂದೂವರೆ ಎಕರೆ ರಿಂಗ್‌ ಬೀನ್ಸ್‌, ಹೀರೇಕಾಯಿ ಸೇರಿದಂತೆ ಹಲವಾರು ಬೆಳೆಗಳು ಸಂಪೂರ್ಣ ನಾಶವಾಗಿವೆ.
ತಾಲ್ಲೂಕಿನ ಮಳಮಾಚನಹಳ್ಳಿ ಗ್ರಾಮ ಪಂಚಾಯಿತಿ ವತಿಯಿಂದ ಬಸವಾಪಟ್ಟಣ ಗ್ರಾಮದಲ್ಲಿ ಶುದ್ಧ ನೀರಿನ ಘಟಕದ ಕಬ್ಬಿಣದ ಶೀಟ್‌ಗಳಿಂದ ನಿರ್ಮಿಸಿದ್ದ ಶೆಡ್‌ ಗಾಳಿಗೆ ಹಾರಿಹೋಗಿ ಸುಮಾರು ಇಪ್ಪತ್ತು ಅಡಿಗಳ ದೂರದಲ್ಲಿ ಬಿದ್ದಿದ್ದು ಶನಿವಾರದ ಬಿರುಗಾಳಿಯ ತೀವ್ರತೆ ಮತ್ತು ಪರಿಣಾಮವನ್ನು ಪ್ರತಿಬಿಂಬಿಸುತ್ತಿತ್ತು.
ತಾಲ್ಲೂಕಿನ ಗಂಗನಹಳ್ಳಿ, ಮುತ್ತೂರು, ಮಳ್ಳೂರು, ಕಾಚಹಳ್ಳಿ, ಮಳಮಾಚನಹಳ್ಳಿಯಲ್ಲಿ ಸುಮಾರು 60 ಎಕರೆ ದ್ರಾಕ್ಷಿ ಬೆಳೆ ನೆಲಕಚ್ಚಿದ್ದು, 500 ಟನ್‌ ದ್ರಾಕ್ಷಿ ಹಾಳಾಗಿದೆ. ಇದರ ಮೊತ್ತವೇ ಒಂದೂವರೆ ಕೋಟಿ ರೂಗಳಾಗುತ್ತವೆ. ತಾಲ್ಲೂಕಿನ ಮಳ್ಳೂರು, ಮುತ್ತೂರು, ಗಂಗನಹಳ್ಳಿ, ಮೇಲೂರು, ಮುಗಿಲಡಿಪಿ ಗ್ರಾಮದ ವ್ಯಾಪ್ತಿಯಲ್ಲಿ 350 ರಿಂದ 400 ಎಕರೆ ಹಿಪ್ಪುನೇರಳೆ ತೋಟವು ನಾಶವಾಗಿದೆ. ಬಿರುಗಾಳಿ ಮತ್ತು ಆಲಿಕಲ್ಲಿನ ಮಳೆಯಿಂದಾಗಿ ಹಿಪ್ಪುನೇರಳೆ ಸೊಪ್ಪು ಜರಡಿಯಂತಾಗಿದ್ದು, ಈ ಸೊಪ್ಪನ್ನು ರೇಷ್ಮೆ ಹುಳುಗಳಿಗೆ ಬಳಸಲಾಗುವುದಿಲ್ಲವೆಂದು ರೈತರು ಕಂಗಾಲಾಗಿದ್ದಾರೆ. ಇದಲ್ಲದೆ ತರಕಾರಿ, ಬಾಳೆ, ಟೊಮೇಟೋ, ಮಾವು,ತೆಂಗು ಮತ್ತು ದಾಳಿಂಬೆ ಬೆಳೆಗಳೂ ನಾಶವಾಗಿವೆ.
ಮೇಲೂರಿನ ಸೂರ್ಯನಾರಾಯಣಪ್ಪ ಅವರ ಹಿಪ್ಪುನೇರಳೆ ತೋಟ, ನಾಗರಾಜ್‌ ಅವರ ದ್ರಾಕ್ಷಿ ತೋಟ, ಟಿ.ಎನ್‌.ಮಂಜುನಾಥ್‌ ಅವರ ಪರಂಗಿ, ದ್ರಾಕ್ಷಿ, ದಾಳಿಂಬೆ ತೋಟ, ಶ್ರೀನಿವಾಸ್‌ಅವರ ಟೊಮೆಟೋ ಮತ್ತು ದ್ರಾಕ್ಷಿ ತೋಟ, ಮುಗಿಲಡಿಪಿ ರಾಮಯ್ಯ ಅವರ ದ್ರಾಕ್ಷಿ ತೋಟ, ಮುತ್ತೂರಿನ ರಾಮಕೃಷ್ಣಪ್ಪ ಅವರ ಬಾಳೆ ತೋಟ, ನಾರಾಯಣಸ್ವಾಮಿ ಅವರ ದ್ರಾಕ್ಷಿ ತೋಟಗಳಿಗೆ ಶಾಸಕರೊಂದಿಗೆ ಅಧಿಕಾರಿಗಳ ತಂಡ ಭೇಟಿ ನೀಡಿ ನಷ್ಟದ ಸಮೀಕ್ಷೆ ನಡೆಸಿದರು.
‘ತಾಲ್ಲೂಕಿನಾದ್ಯಂತ ರೈತರು ಪ್ರಕೃತಿ ವಿಕೋಪದಿಂದಾಗಿ ಅಪಾರ ನಷ್ಟವನ್ನು ಅನುಭವಿಸಿದ್ದಾರೆ. ಎಲ್ಲವನ್ನೂ ಸಮಗ್ರವಾಗಿ ಸಮೀಕ್ಷೆ ನಡೆಸಿ ಸರ್ಕಾರಕ್ಕೆ ವರದಿಯನ್ನು ಸಲ್ಲಿಸಲಾಗುವುದು’ ಎಂದು ಸಹಾಯಕ ನಿರ್ದೇಶಕ ಚಂದ್ರಪ್ಪ ತಿಳಿಸಿದ್ದಾರೆ.
ಬೆಳೆ ನಷ್ಟವಲ್ಲದೆ ತಾಲ್ಲೂಕಿನ ಹಲವೆಡೆ ಹುಳು ಸಾಕುವ ಮನೆಗಳ ಮೇಲೆ ಹೊದಿಸಿದ್ದ ಶೀಟುಗಳು ಹಾರಿಹೋಗಿದ್ದು ಅಪಾರ ನಷ್ಟವನ್ನು ತಂದಿದೆ. ತಾಲ್ಲೂಕಿನ ಚಿಕ್ಕದಾಸಾರ್‍ಲಹಳ್ಳಿ, ಮುತ್ತೂರು ಗ್ರಾಮಗಳಲ್ಲಿ ಹುಳುಮನೆಗಳಿಗೆ ನಷ್ಟವಾಗಿದ್ದರೆ, ಮುಗಿಲಡಿಪಿ ಗ್ರಾಮದಲ್ಲಿ ಮುನೇಗೌಡ, ನಾರಾಯಣಸ್ವಾಮಿ ಎಂಬುವರ ವಾಸದ ಮನೆಯ ಮೇಲಿನ ಶೀಟುಗಳು ಮುರಿದು, ಮನೆಯಲ್ಲಿನ ದಿನಬಳಕೆ ವಸ್ತುಗಳು ಹಾಳಾಗಿವೆ. ತಾಲ್ಲೂಕಿನ ಚೌಡಸಂದ್ರ ಮತ್ತು ಮೇಲೂರು ನಡುವೆ ರಸ್ತೆಯ ಪಕ್ಕದಲ್ಲಿದ್ದ ಮರಗಳು ಬುಡ ಸಮೇತ ರಸ್ತೆಗೆ ಬಿದ್ದಿದ್ದನ್ನು ಸಾರ್ವಜನಿಕರೇ ಜೆಸಿಬಿ ಬಳಸಿ ಅವುಗಳನ್ನು ತೆರವುಗೊಳಿಸಿ ವಾಹನ ಸಂಚಾರ ಸುಗಮಗೊಳಿಸಿದ್ದಾರೆ. ಈ ಸಂದರ್ಭದಲ್ಲಿ ಸುಮಾರು ಒಂದು ಗಂಟೆ ಕಾಲ ಬೆಂಗಳೂರಿಗೆ ಸಂಚರಿಸುವ ವಾಹನಗಳ ಸಂಚಾರ ಸ್ಥಗಿತಗೊಂಡಿತ್ತು.
‘ಅಧಿಕಾರಿಗಳು ತಾಲ್ಲೂಕಿನಲ್ಲಿ ಅಕಾಲಿಕ ಬಿರುಗಾಳಿ ಸಮೇತದ ಆಲಿಕಲ್ಲಿನ ಮಳೆಯಿಂದಾದ ಸಮಗ್ರ ನಷ್ಟದ ವರದಿಯನ್ನು ತಯಾರಿಸಿದ ನಂತರ ಕೃಷಿ ಸಚಿವರು, ತೋಟಗಾರಿಕಾ ಸಚಿವರು ಮತ್ತು ಮುಖ್ಯಮಂತ್ರಿಗಳ ಬಳಿ ನಿಯೋಗದೊಂದಿಗೆ ತೆರಳಿ ನಷ್ಟ ಪರಿಹಾರಕ್ಕಾಗಿ ಒತ್ತಾಯಿಸುತ್ತೇನೆ. ನೀರೇ ಅಮೃತದ ಸಮಾನವಾಗಿರುವ ನಮ್ಮ ಭಾಗದ ರೈತರು ಅಪಾರ ಶ್ರಮದಿಂದ ಬೆಳೆದ ಫಲ ನೆಲಕಚ್ಚುವುದರಿಂದ ಅವರೆಲ್ಲ ಕಂಗಾಲಾಗಿದ್ದಾರೆ’ ಎಂದು ಶಾಸಕ ಎಂ.ರಾಜಣ್ಣ ಹೇಳಿದರು.
ಆಲಿಕಲ್ಲಿನಿಂದ ದ್ರಾಕ್ಷಿ ಬೆಳೆ ಹಾಳು
ಬಿರುಗಾಳಿ, ಆಲಿಕಲ್ಲು ಮಳೆಯಾದಾಗ ಕೊಯ್ಲಿನ ಹಂತದ ದ್ರಾಕ್ಷಿ ಬೆಳೆ ಬಳ್ಳಿಯಲ್ಲೇ ಒಡೆಯುತ್ತದೆ. ಒಡೆದ ದ್ರಾಕ್ಷಿಯಿಂದಾಗಿ ಇಡೀ ದ್ರಾಕ್ಷಿ ಗೊಂಚಲೇ ಕೊಳೆಯುತ್ತದೆ ಮತ್ತು ಮಾರುಕಟ್ಟೆಯಲ್ಲಿ ಧಾರಣಿ ಕಳೆದುಕೊಳ್ಳುತ್ತದೆ. ಹಾಗಾಗಿ ಬಹುತೇಕ ಸಂದರ್ಭದಲ್ಲಿ ದ್ರಾಕ್ಷಿ ಮಾರಾಟಕ್ಕೂ ಯೋಗ್ಯವಾಗದೇ ತಿಪ್ಪೆಗೆ ಹಾಕಬೇಕಾಗುತ್ತದೆ. ಅದನ್ನು ಒಣ ದ್ರಾಕ್ಷಿ ಮಾಡಲೂ ಸಾಧ್ಯವಾಗುವುದಿಲ್ಲ. ಇದರ ಪರಿಣಾಮ ರೈತರಿಗೆ ದ್ರಾಕ್ಷಿ ಬೆಳೆ ಕೈಗೆ ಬಂದ ತುತ್ತು ಬಾಯಿಗೆ ಬಾರದಂತಾಗಿದೆ. ದ್ರಾಕ್ಷಿ ತುಂಬ ನಿರ್ವಹಣೆ ಅಗತ್ಯವಿರುವ ಬೆಳೆ. ಲಕ್ಷಾಂತರ ರೂ. ಸಾಲ ಮಾಡಿ ಬೆಳೆದಿರುವ ದ್ರಾಕ್ಷಿ ಬೆಳೆ ಪ್ರಕೃತಿ ವೈಪರೀತ್ಯದಿಂದಾಗಿ ನಷ್ಟ ತಂದೊಡ್ಡಿದೆ. ಸರ್ಕಾರ ರೈತರ ಕೈ ಹಿಡಯಲೇಬೇಕು ಎಂದು ಹುಜಗೂರು ಗ್ರಾಮದ ದ್ರಾಕ್ಷಿ ಬೆಳೆಗಾರ ಮುನಿನಾರಾಯಣಪ್ಪ ಆಗ್ರಹಿಸಿದ್ದಾರೆ.
ಜರಡಿಯಂತಾದ ಹಿಪ್ಪುನೇರಳೆ ಸೊಪ್ಪು
ಜಿಲ್ಲೆಯ ಪ್ರಮುಖ ವಾಣಿಜ್ಯ ಬೆಳೆಯಾದ ರೇಷ್ಮೆಗೆ ಅತ್ಯಗತ್ಯವಾದ ಹಿಪ್ಪುನೇರಳೆ ಸೊಪ್ಪು ಬಿರುಗಾಳಿ, ಆಲಿಕಲ್ಲು ಮಳೆಯಾದಾಗ ಜರಡಿಯ ರೀತಿ ಆಗಿಬಿಡುತ್ತದೆ. ಕೆಲವೆಡೆಯಂತೂ ನೆಲಕ್ಕೆ ಸೊಪ್ಪುಗಳು ನೆಲಕ್ಕೆ ಮಲಗಿಬಿಟ್ಟಿವೆ. ಈ ಸೊಪ್ಪನ್ನು ರೇಷ್ಮೆ ಹುಳುಗಳಿಗೆ ಬಳಸಲಾಗುವುದಿಲ್ಲವೆಂದು ರೈತರು ಕಂಗಾಲಾಗಿದ್ದಾರೆ. ಈ ರೀತಿಯ ಸೊಪ್ಪನ್ನು ಆಹಾರವಾಗಿ ಜಾನುವಾರುಗಳಿಗೂ ರೈತರು ಬಳಸದಿರುವುದರಿಂದ ಅಪಾರ ನಷ್ಟವುಂಟಾಗಿದೆ ಎಂದು ಸುಮಾರು ಏಳು ಎಕರೆ ಹಿಪ್ಪುನೇರಳೆ ಸೊಪ್ಪಿನ ನಷ್ಟವನ್ನು ಹೊಂದಿದ ಸೀಗೆಹಳ್ಳಿಯ ಈರಣ್ಣ ನೋವಿನಿಂದ ಹೇಳಿದರು.
ಮುಖ್ಯಮಂತ್ರಿಗಳಿಗೆ ಮನವಿ
ಬಿರುಗಾಳಿ ಮತ್ತು ಆಲಿಕಲ್ಲಿನ ಮಳೆಯಿಂದಾಗಿ ತಾಲ್ಲೂಕಿನಲ್ಲಿ ಕೋಟ್ಯಾಂತರ ರೂಗಳ ಬೆಳೆ ನಷ್ಟವಾಗಿರುವುದರಿಂದ ಮುಖ್ಯಮಂತ್ರಿಗಳು ಪರಿಹಾರಕ್ಕಾಗಿ ವಿಶೇಷ ಪ್ಯಾಕೇಜ್‌ ಘೋಷಿಸಬೇಕೆಂದು ರೈತ ಸಂಘ ಹಾಗೂ ಹಸಿರುಸೇನೆ ಸದಸ್ಯರು ಮಂಗಳವಾರ ತಹಶೀಲ್ದಾರ್‌ ಜಿ.ಎ.ನಾರಾಯಣಸ್ವಾಮಿ ಅವರ ಮೂಲಕ ಮುಖ್ಯಮಂತ್ರಿಗಳಿಗೆ ಮನವಿಯನ್ನು ಸಲ್ಲಿಸಿದರು.
ತಾಲ್ಲೂಕಿನ ರೈತರು ಸತತ ಬರಗಾಲವನ್ನು ಎದುರಿಸುತ್ತಾ ಬಂದಿದ್ದಾರೆ. 1500 ಅಡಿ ಕೊರೆದರೂ ನೀರು ಸಿಗುತ್ತಿಲ್ಲ. ಸಿಕ್ಕರೂ ವಿಷಪೂರಿತವಾಗಿರುತ್ತದೆ. ಆದರೂ ರೈತರು ಹನಿಹನಿ ನೀರನ್ನೂ ಬಳಸಿ ಶ್ರಮದಿಂದ ಬೆಳೆ ಬೆಳೆದರೆ ಪ್ರಕೃತಿಯು ಸಹಕರಿಸದೇ ಶಾಪವಾಗಿ ಪರಿಣಮಿಸಿ ಬಿರುಗಾಳಿ ಮತ್ತು ಆಲಿಕಲ್ಲಿನ ಮಳೆಯ ಮೂಲಕ ಕೋಟ್ಯಾಂತರ ರೂಗಳ ಬೆಳೆ ಸಂಪೂರ್ಣವಾಗಿ ನಾಶವಾಗಿದೆ. ರೈತರು ಬೆಳೆದಿದ್ದ ರೇಷ್ಮೆ, ದ್ರಾಕ್ಷಿ, ತರಕಾರಿ ಹಾಗೂ ಮನೆಗಳು ಉರುಳಿದ್ದು ರೈತರು ಪರದಾಡುವಂತಾಗಿದೆ. ಮುಖ್ಯಮಂತ್ರಿಗಳು ರೈತರ ಕಷ್ಟಕ್ಕೆ ಸ್ಪಂದಿಸಿ ಮಹಾರಾಷ್ಟ್ರ ಮಾದರಿಯಲ್ಲಿ ವಿಶೇಷ ಪ್ಯಾಕೇಜ್‌ ಘೋಷಿಸಿ ರೈತರಿಗೆ ನೆರವಾಗುವಂತೆ ಕೋರಿದ್ದಾರೆ.
ಮನವಿ ಸ್ವೀಕರಿಸಿ ಮಾತನಾಡಿದ ತಹಶೀಲ್ದಾರ್‌ ಜಿ.ಎ.ನಾರಾಯಣಸ್ವಾಮಿ, ‘ರೇಷ್ಮೆ, ಕೃಷಿ ಹಾಗೂ ತೋಟಗಾರಿಕಾ ಇಲಾಖೆಯ ಅಧಿಕಾರಿಗಳು ತಾಲ್ಲೂಕಿನಾದ್ಯಂತ ನಾಶವಾದ ಬೆಳೆಗಳ ಬಗ್ಗೆ ವರದಿಯನ್ನು ತರಿಸಿಕೊಂಡು ಸರ್ಕಾರಕ್ಕೆ ಸಲ್ಲಿಸಲಾಗುತ್ತದೆ. ನನ್ನ ಮಿತಿಯಲ್ಲಿನ ಪರಿಹಾರದ ಹಣವನ್ನು ತಕ್ಷಣವೇ ನೀಡುತ್ತೇನೆ’ ಎಂದು ಹೇಳಿದರು.
ರೈತಮುಖಂಡರಾದ ಎಸ್‌.ಎಂ.ನಾರಾಯಣಸ್ವಾಮಿ, ಭಕ್ತರಹಳ್ಳಿ ಬೈರೇಗೌಡ, ಮುನಿನಂಜಪ್ಪ, ಮಂಜುನಾಥ್‌, ಆರ್‌.ದೇವರಾಜ್‌, ತ್ಯಾಗರಾಜ್‌, ರಾಮಚಂದ್ರ, ರವಿ, ಮುನಿರಾಜು, ಮುನಿವೆಂಕಟರಾಯಪ್ಪ ಮತ್ತಿತರರು ಈ ಸಂದರ್ಭದಲ್ಲಿ ಹಾಜರಿದ್ದರು.

ವಿಶ್ವ ಹಾಲು ದಿನಾಚರಣೆಯ ಅಂಗವಾಗಿ ಸರ್ಕಾರಿ ಆಸ್ಪತ್ರೆಯಲ್ಲಿ ರೋಗಿಗಳಿಗೆ ಕೆ.ಎಂ.ಎಫ್‌ನ ಗುಡ್‌ ಲೈಫ್ ಹಾಲು ವಿತರಣೆ

0

ಕೋಲಾರ ಚಿಕ್ಕಬಳ್ಳಾಪುರ ಜಿಲ್ಲಾ ಸಹಕಾರಿ ಹಾಲು ಒಕ್ಕೂಟದ ವತಿಯಿಂದ ಸೋಮವಾರ ವಿಶ್ವ ಹಾಲು ದಿನಾಚರಣೆಯ ಅಂಗವಾಗಿ ಸರ್ಕಾರಿ ಆಸ್ಪತ್ರೆಯಲ್ಲಿ ರೋಗಿಗಳಿಗೆ ಕೆ.ಎಂ.ಎಫ್‌ನ ಗುಡ್‌ ಲೈಫ್‌ ಹಾಲನ್ನು ವಿತರಿಸಿದರು.
ಸಾರ್ವಜನಿಕ ಆಸ್ಪತ್ರೆಯಲ್ಲಿ ಒಳರೋಗಿಗಳಾಗಿ ದಾಖಲಾಗಿರುವ ರೋಗಿಗಳಿಗೆ ಕೋಚಿಮುಲ್ ನೂತನ ನಿರ್ದೇಶಕ ಬಂಕ್‌ಮುನಿಯಪ್ಪ ಹಾಲಿನ ಪಾಕೆಟ್‌ಗಳನ್ನು ವಿತರಣೆ ಮಾಡಿ, ಶೀಘ್ರವಾಗಿ ಗುಣಮುಖರಾಗುವಂತೆ ಹಾರೈಸಿದರು. ರೈತರು ಉತ್ಪಾದನೆ ಮಾಡುತ್ತಿರುವ ಗುಣಮಟ್ಟದ ಹಾಲನ್ನು ನಮ್ಮ ಡೈರಿಯ ಮುಖಾಂತರ ಮಾರಾಟ ಮಾಡುತ್ತಿದ್ದು, ಜನತೆ ಇಂತಹ ಗುಣಮಟ್ಟದ ಹಾಲನ್ನು ಖರೀದಿ ಮಾಡುವ ಮುಖಾಂತರ ಸಹಕಾರಿ ಕ್ಷೇತ್ರವನ್ನು ಅಭಿವೃದ್ಧಿ ಪಡಿಸಬೇಕು. ವಿಶ್ವ ಹಾಲು ದಿನಾಚರಣೆಯ ಪ್ರಯುಕ್ತ ಏಳು ದಿನಗಳ ಕಾಲ ಹಾಲಿನ ಉತ್ಪನ್ನಗಳ ಸಿಹಿತಿಂಡಿಗಳನ್ನು ಶೇ ೧೦ ರಷ್ಟು ರಿಯಾಯಿತಿ ದರದಲ್ಲಿ ಮಾರಾಟ ಮಾಡಲಾಗುತ್ತದೆ ಎಂದರು.
ಉಪವ್ಯವಸ್ಥಾಪಕ ಗೋಪಾಲರಾವ್, ಸಾರ್ವಜನಿಕ ಆಸ್ಪತ್ರೆಯ ಡಾ.ಅಮರೇಶ್‌ ಗದ್ದಿ, ವಿವಿದೋದ್ಧೇಶ ಸಹಕಾರ ಸಂಘಗಳ ಕಾರ್ಯದರ್ಶಿ ಕೆ.ವಿ.ರೆಡ್ಡಿ, ಓ.ಟಿ.ಮುನಿಕೃಷ್ಣಪ್ಪ, ಶ್ರೀನಿವಾಸ್‌, ರಮೇಶ್‌, ಮಂಜುನಾಥ್‌ ಈ ಸಂದರ್ಭದಲ್ಲಿ ಹಾಜರಿದ್ದರು.

ಸಾರ್ವಜನಿಕರ ಸೇವೆಗಾಗಿ ವಿವಿಧ ಕಛೇರಿಗಳ ಟೆಲಿಫೋನ್ /ಮೊಬೈಲ್ ಸಂಖ್ಯೆಗಳು

0

[table id=4 /]

ಜಂಗಮಕೋಟೆಯ ಕೆ.ಎನ್.ನಾರಾಯಣಸ್ವಾಮಿ

0

ತಾಲ್ಲೂಕಿನ ಜಂಗಮಕೋಟೆಯವರಾದ ಇವರು ಗಾರುಡಿಗೊಂಬೆ ಕುಣಿತ ಕಲೆಯಲ್ಲಿ ಅಸಾಧಾರಣವಾದ ಪರಿಣತಿ ಪಡೆದು ಸಾಧನೆ ಮಾಡಿದ್ದಾರೆ. ಪ್ರಮುಖವಾಗಿ ಗಾರುಡಿಗೊಂಬೆಯನ್ನು ತಯಾರಿಸುವುದರಲ್ಲಿ ಹಾಗೂ ಕೀಲುಕುದುರೆಗಳನ್ನು ಕುಣಿಸುವುದರಲ್ಲಿ ಇವರು ಪ್ರಖ್ಯಾತರು. ಗೌರಿ ಮತ್ತು ಗಣೇಶನ ವಿಗ್ರಹಗಳು, ಕೀಲುಕುದುರೆ, ಗಾರುಡಿಗೊಂಬೆ, ಜಿರಾಫೆ, ನವಿಲು ಮುಂತಾದ ಆಕೃತಿಗಳನ್ನು ಮಣ್ಣಿನಲ್ಲಿ ಅಥವಾ ಬಿದಿರಿನಲ್ಲಿ ಹಾಗೂ ಸರಿಹೊಂದಬಹುದಾದ ಇನ್ನಾವುದೇ ವಸ್ತುಗಳಿಂದ ತಯಾರಿಸಿ ಆ ಆಕೃತಿಗಳಿಗೆ ರೂಪಕೊಟ್ಟು ಅವುಗಳಿಗೆ ಜೀವತುಂಬಿ ಕುಣಿಸುವುದು ಇವರಿಗೆ ವಂಶಪಾರಂಪರ್ಯವಾಗಿ ಬಂದ ಕಲೆ.
ಇವರು ಕಲೆಗಾಗಿ ಸತತವಾಗಿ ಶ್ರಮಪಟ್ಟು ತಂದೆ ಮುನಿಯಪ್ಪ ಅವರಿಂದ ತರಬೇತಿ ಪಡೆದು ಇತರರಿಗೂ ಕಲಿಸಿ ಜಾನಪದ ಕಲೆಯನ್ನು ಜೀವಂತವಾಗಿ ಇರಿಸಿದ್ದಾರೆ. ನಾಟಕ ಮತ್ತು ಯಕ್ಷಗಾನಗಳ ಕಿರೀಟಗಳನ್ನು ಪಾತ್ರಗಳಿಗೆ ತಕ್ಕಂತೆ ವಿನೂತನ ರೀತಿಯಲ್ಲಿ ತಯಾರಿಸಿ ರಂಗಭೂಮಿಗೂ ಸಹ ತಮ್ಮ ಸೇವೆಯನ್ನು ವಿಸ್ತಿರಿಸಿದ್ದಾರೆ. ಜಿಲ್ಲೆಯ ನಾನಾ ಕಡೆ ರಥೋತ್ಸವ ಪಲ್ಲಕ್ಕಿ ಉತ್ಸವಗಳಾದಾಗ ಅಲ್ಲಿಗೆ ಹೋಗಿ ವಿವಿಧ ರೀತಿಯಲ್ಲಿ ಮುತ್ತಿನ ಪಲ್ಲಕ್ಕಿಗಳನ್ನು ನಿರ್ಮಿಸಿಕೊಡುತ್ತಾರೆ.
ತಾಲ್ಲೂಕಿನ ಜಂಗಮಕೋಟೆ, ಕೋಲಾರ ತಾಲ್ಲೂಕಿನ ವೇಮಗಲ್, ಬೆಂಗಳೂರು, ತಿರುಪತಿಗಳಲ್ಲಿ ತರಬೇತಿ ನೀಡಿ ತಂಡಗಳನ್ನು ರಚಿಸಿದ್ದಾರೆ. ಮಂಡ್ಯದಲ್ಲಿರುವ ಜಾನಪದಲೋಕಕ್ಕೆ ತಮ್ಮ ಸಂಗ್ರಹದಲ್ಲಿನ ಹಲವು ಅಮೂಲ್ಯವಾದ ಜಾನಪದ ಗೊಂಬೆಗಳನ್ನು. ಅಮೂಲ್ಯ ಕಲಾಕೃತಿಗಳನ್ನು ಕೊಡುಗೆಯಾಗಿ ನೀಡಿದ್ದಾರೆ.
ಬೃಹತ್‌ಗಾತ್ರದ ಹತ್ತರಿಂದ ಹನ್ನೆರಡು ಅಡಿ ಎತ್ತರದ ಗಾರುಡಿಗೊಂಬೆಗಳು ಮಣ್ಣು ಮತ್ತು ಬಿದಿರು ಸೇರಿಸಿ ಹಗುರವಾಗಿ ನಿರ್ಮಿಸುವ ಕಲೆಯನ್ನು ಕಲಿತಿರುವ ರಾಜ್ಯದ ಕೆಲವೇ ಮಂದಿಯಲ್ಲಿ ನಾರಾಯಣಸ್ವಾಮಿ ಒಬ್ಬರು.

error: Content is protected !!